ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದ ಕಥೆಗಳು 3: ಭ್ರಮೆ ನಾಶವಾಗುವ ತನಕ

ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದ ಕಥೆಗಳು 3: ಭ್ರಮೆ ನಾಶವಾಗುವ ತನಕ

ಒಬ್ಬ ಗುರು ತನ್ನ ಶಿಷ್ಯನಿಗೆ ಹೇಳಿದ, “ಈ ಪ್ರಪಂಚ ಒಂದು ಭ್ರಮೆ, ನನ್ನ ಜೊತೆ ಬಂದು ಬಿಡು” ಎಂದು. “ಆದರೆ ಸ್ವಾಮಿ, ನನ್ನ ಮನೆಯವರು, ತಂದೆ, ತಾಯಿ, ಹೆಂಡತಿ ಇವರೆಲ್ಲ ನನ್ನನ್ನು ಅಷ್ಟು ಪ್ರೀತಿಸುತ್ತಾರೆ. ನಾನು ಅವರನ್ನು ಬಿಟ್ಟು ಬರುವುದು ಹೇಗೆ?” ಎಂದು ಶಿಷ್ಯ ಉತ್ತರಿಸಿದ.

ಅದಕ್ಕೆ ಗುರು, “ಇದೆಲ್ಲ ನಿನ್ನ ಮನೋಭ್ರಾಂತಿ. ನಾನು ನಿನಗೊಂದು ಉಪಾಯ ಹೇಳುತ್ತೇನೆ. ಅವರು ನಿಜವಾಗಿ ನಿನ್ನನ್ನು ಪ್ರೀತಿಸುತ್ತಾರೆಯೋ ಇಲ್ಲವೋ ಎಂಬುದು ಆಗ ಗೊತ್ತಾಗುತ್ತದೆ” ಎಂದು ಹೇಳಿ, ಶಿಷ್ಯನಿಗೆ ಒಂದು ಮಾತ್ರೆ ಕೊಟ್ಟರು. ಅದನ್ನು ಹೇಗೆ ಉಪಯೋಗಿಸಬೇಕೆಂದು ಹೇಳಿದರು, “ಈ ಗುಳಿಗೆ ಮನೆಯಲ್ಲಿ ನುಂಗು. ನೀನು ಸತ್ತಂತೆ ಕಾಣುವೆ. ಆದರೆ ನಿನಗೆ ಪ್ರಜ್ನೆ ಇರುತ್ತದೆ. ನೀನು ಎಲ್ಲವನ್ನೂ ನೋಡಲು ಮತ್ತು ಕೇಳಲು ಸಾಧ್ಯ. ಒಂದು ಗಂಟೆಯ ನಂತರ ನಾನು ನಿನ್ನ ಮನೆಗೆ ಬರುತ್ತೇನೆ. ಅನಂತರ ಕ್ರಮೇಣ ಒಂದು ಗಂಟೆಯಲ್ಲಿ  ನಿನಗೆ ಪ್ರಜ್ನೆ ಬರುತ್ತದೆ."

ಮನೆ ತಲಪಿದ ಶಿಷ್ಯ, ಗುರುಗಳು ಕೊಟ್ಟ ಗುಳಿಗೆ ನುಂಗಿದ. ತನ್ನ ಹಾಸಿಗೆಯಲ್ಲಿ ಸತ್ತಂತೆ ಬಿದ್ದ. ಮನೆಮಂದಿಯೆಲ್ಲ ಅಳಲು ಶುರು ಮಾಡಿದರು. ಅವನ ತಾಯಿ, ಹೆಂಡತಿ ಮತ್ತು ಇತರರು ಶವದ ಸುತ್ತಲೂ ಜಮಾಯಿಸಿ ಗೋಳೋ ಎಂದು ಅಳುತ್ತಿದ್ದರು.

ಆ ಸಮಯಕ್ಕೆ ಸರಿಯಾಗಿ ಒಬ್ಬ ಬ್ರಾಹ್ಮಣ ಮನೆಗೆ ಬಂದು, "ಯಾಕೆ ಎಲ್ಲರೂ ಅಳುತ್ತಿದ್ದೀರಿ?” ಎಂದು ಕೇಳಿದ. "ನಮ್ಮ ಮನೆಯ ಆಧಾರಸ್ತಂಭವಾಗಿದ್ದ ಹುಡುಗ ತೀರಿಕೊಂಡ" ಎಂದರು ಎಲ್ಲರೂ. ಬ್ರಾಹ್ಣಣ ಸತ್ತಂತೆ ಬಿದ್ದಿದ್ದವನ ನಾಡಿ ಪರೀಕ್ಷಿಸಿ, “ಅದು ಹೇಗೆ? ಅವನು ಸತ್ತಿಲ್ಲ. ನನ್ನ ಹತ್ತಿರ ಒಂದು ಔಷಧಿ ಇದೆ. ಅದರಿಂದ ಇವನನ್ನು ಬದುಕಿಸಲು ಸಾಧ್ಯ” ಎಂದ.

ಇದನ್ನು ಕೇಳಿದ ಮನೆಮಂದಿಯ ಸಂತೋಷಕ್ಕೆ ಸಾಟಿಯೇ ಇಲ್ಲ. ತಮ್ಮ ಮನೆಗೆ ದೇವರೇ ಬಂದಂತೆ ಆಯಿತೆಂದು ಭಾವಿಸಿದರು. ಆಗ ಬ್ರಾಹ್ಮಣ ಹೇಳಿದ: “ಒಂದು ವಿಷಯ - ಚಲನೆಯಿಲ್ಲದೆ ಬಿದ್ದಿರುವವನು ಔಷಧಿ ಸೇವಿಸುವ ಮುಂಚೆ ಬೇರೆ ಯಾರಾದರೂ ಔಷಧಿ ಸೇವಿಸಬೇಕು. ಅನಂತರ, ರೋಗಿಗೆ ಔಷಧಿ ಕೊಡಬೇಕು. ಮೊದಲು ಔಷಧಿ ಸೇವಿಸುವ ವ್ಯಕ್ತಿ ಸಾಯೋದು ಖಂಡಿತ. ಹೀಗೆ ಔಷಧಿ ಸೇವಿಸಿದರೆ ಮಾತ್ರ ನಿಶ್ಚಲನಾಗಿ ಬಿದ್ದಿರುವವನು ಎದ್ದು ಬರುತ್ತಾನೆ. ಇಲ್ಲಿ ಅವನ ಹಲವಾರು ಬಂಧುಬಳಗದವರು ಇದ್ದೀರಿ. ಯಾರಾದರೂ ಮುಂದೆ ಬಂದು, ಈ ಔಷಧಿ ತಗೊಳ್ಳಿ. ರೋಗಿಯ ಹೆಂಡತಿ ಮತ್ತು ತಾಯಿ ಬಹಳ ಅಳುತ್ತಿದ್ದಾರೆ. ಅವರಲ್ಲೊಬ್ಬರು ಈ ಔಷಧಿ ನುಂಗೋದಕ್ಕೆ ಅನುಮಾನಿಸಲಿಕ್ಕಿಲ್ಲ”.

ತಕ್ಷಣವೇ ಆ ಕೋಣೆಯಲ್ಲಿ ಅಳು ನಿಂತಿತು. ಎಲ್ಲರೂ ಮೌನವಾಗಿ ಕಾದು ಕುಳಿತರು. ತಾಯಿ ಹೇಳಿದಳು, “ಇದು ದೊಡ್ಡ ಸಂಸಾರ. ನಾನು ಸತ್ತರೆ ಅನಂತರ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ?” ತಾಯಿ ಚಿಂತೆಯಲ್ಲಿ ಮುಳುಗಿದಳು. ಐದು ನಿಮಿಷ ಮುಂಚಿನ ವರೆಗೂ ಅಳುತ್ತಿದ್ದ ಮೂರನೇ ಹೆಂಡತಿ ತನ್ನ ಗ್ರಹಚಾರ ನಿಂದಿಸಿಕೊಳ್ಳುತ್ತಾ ಹೀಗೆಂದಳು: "ಎಲ್ಲರಂತೆ ಅವರೂ ಈ ಲೋಕ ಬಿಟ್ಟು ಹೋದರು. ಈಗ ನಾನೂ ಸತ್ತರೆ, ನಮ್ಮ ಮೂರು ಮಕ್ಕಳನ್ನು ನೋಡಿಕೊಳ್ಳೋರು ಯಾರು?"

ಇದೆಲ್ಲವನ್ನೂ ಶಿಷ್ಯ ಕೇಳಿದ ಮತ್ತು ನೋಡಿದ. ಅವನು ತಟ್ಟನೆ ಎದ್ದು ನಿಂತು ಹೇಳಿದ: "ಸ್ವಾಮಿಗಳೇ, ನಾವೀಗ ಹೋಗೋಣ. ನಾನು ನಿಮ್ಮನ್ನು ಅನುಸರಿಸುತ್ತೇನೆ.”