ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದ ಕಥೆಗಳು 4. ಸೊತ್ತಿನ ಬೆಲೆ ಅರಿತವರು ಅತಿ ವಿರಳ

ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದ ಕಥೆಗಳು 4. ಸೊತ್ತಿನ ಬೆಲೆ ಅರಿತವರು ಅತಿ ವಿರಳ

ಒಬ್ಬ ಶ್ರೀಮಂತ ತನ್ನ ಆಳಿಗೆ ಒಂದು ವಜ್ರ ಕೊಟ್ಟು, "ಸಂತೆಗೆ ಈ ವಜ್ರ ತೆಗೆದುಕೊಂಡು ಹೋಗು. ಯಾರುಯಾರು ಎಷ್ಟು ಬೆಲೆ ಕಟ್ಟುತ್ತಾರೆ ಎಂದು ವಿಚಾರಿಸು. ಮೊದಲು ಬದನೆಕಾಯಿ ಮಾರುವವನ ಹತ್ತಿರ ಹೋಗಿ ಕೇಳು” ಎಂದನು.

ಆಳು ಬದನೆಕಾಯಿ ಮಾರುವವನ ಹತ್ತಿರ ಹೋದ. ಅವನು ವಜ್ರವನ್ನು ತನ್ನ ಕೈಯಲ್ಲಿ ತೆಗೆದುಕೊಂಡು ನೋಡಿ, “ಇದಕ್ಕೆ ನಾನು ಒಂಭತ್ತು ಸೇರು ಬದನೆಕಾಯಿಯನ್ನು ಕೊಡುತ್ತೇನೆ” ಎಂದ. ಆಳು “ಇನ್ನೂ ಸ್ವಲ್ಪ ಜಾಸ್ತಿ, ಹತ್ತು ಸೇರನ್ನು ಕೊಡುವೆಯಾ?" ಎಂದು ಕೇಳಿದ. “ಇಲ್ಲಿ ಬೇರೆ ಅಂಗಡಿಯವರು ಎಷ್ಟು ಕೊಡುತ್ತಾರೋ ನಾನು ಅದಕ್ಕಿಂತ ಹೆಚ್ಚು ಹೇಳಿದ್ದೇನೆ”ಎಂದ. ಆಳು ನಕ್ಕ.

ಅನಂತರ, ಯಜಮಾನನ ಬಳಿ ಬಂದ ಆಳು ಹೇಳಿದ: “ಮಹಾಶಯ, ಅವನು ಒಂಭತ್ತು ಸೇರು ಬದನೆಕಾಯಿ ಕೊಡುತ್ತೇನೆ. ಅದಕ್ಕಿಂತ ಜಾಸ್ತಿ ಕೊಡಲಾಗೋದಿಲ್ಲ. ನಾನು ಈಗಾಗಲೇ ಹೇಳಿರುವುದೇ ಜಾಸ್ತಿ ಎಂದ." ಇದನ್ನು ಕೇಳಿದ ಯಜಮಾನ ನಕ್ಕು, ಅವನು ಬರೀ ಬದನೆಕಾಯಿ ವ್ಯಾಪಾರ ಮಾಡುತ್ತಾನೆ. ಅವನಿಗೆ ವಜ್ರದ ಬೆಲೆ ಏನು ಗೊತ್ತು? ಈಗ ನೀನು ಬಟ್ಟೆ ವ್ಯಾಪಾರಿಯ ಬಳಿಗೆ ವಜ್ರ ತೆಗೆದುಕೊಂಡು ಹೋಗು. ಇವನು ಬದನೆಕಾಯಿ ವ್ಯಾಪಾರಿಗಿಂತ ಹೆಚ್ಚು ಶ್ರೀಮಂತ” ಎಂದನು.

ಆಳು ಪುನಃ ಹೊರಟು, ಬಟ್ಟೆ ವ್ಯಾಪಾರಿ ಹತ್ತಿರ ಹೋಗಿ, ವಜ್ರ ತೋರಿಸಿ, “ನೀನು ಇದನ್ನು ಕೊಳ್ಳುವೆಯಾ? ಇದಕ್ಕೆ ಎಷ್ಟು ಬೆಲೆ ಕೊಡುವೆ?” ಎಂದು ಪ್ರಶ್ನಿಸಿದ. ಬಟ್ಟೆ ವ್ಯಾಪಾರಿ ವಜ್ರವನ್ನು ತಿರುಗಿಸಿ ನೋಡಿ, “ಇದು ಚೆನ್ನಾಗಿದೆ. ಇದರಿಂದ ಒಳ್ಳೆಯ ಒಡವೆ ಮಾಡಿಸಬಹುದು. ನಾನು ಇದಕ್ಕೆ ಒಂಭೈನೂರು ರೂಪಾಯಿ ಕೊಡುತ್ತೇನೆ” ಎಂದ. “ಸಹೋದರಾ, ನೀನು ಸ್ವಲ್ಪ ಜಾಸ್ತಿ ಕೊಟ್ಟರೆ, ಒಂದು ಸಾವಿರ ರೂಪಾಯಿಗಳನ್ನಾದರೂ ಕೊಟ್ಟರೆ, ನಿನಗೇ ಇದನ್ನು ಮಾರುತ್ತೇನೆ” ಎಂದು ಆಳು ಒತ್ತಾಯಿಸಿದ. ಬಟ್ಟೆ ವ್ಯಾಪಾರಿ “ಸಹೋದರನೇ, ಅದಕ್ಕಿಂತ ಜಾಸ್ತಿ ಕೇಳಬೇಡ. ಪೇಟೆಧಾರಣೆಗಿಂತ ಹೆಚ್ಚಿನ ಬೆಲೆಯನ್ನೇ ನಾನು ಹೇಳಿರುವೆ. ಅದಕ್ಕಿಂತ ಒಂದು ರೂಪಾಯಿಯನ್ನೂ ಜಾಸ್ತಿ ಕೊಡಲಾರೆ. ಬೇಕಾದರೆ ತೆಗೆದುಕೋ, ಬೇಡವೆಂದಾದರೆ ಬಿಡು” ಎಂದು ಉತ್ತರಿಸಿದ.

ಆಳು ಪುನಃ ಧಣಿಯ ಬಳಿಗೆ ಬಂದು ಹೇಳಿದ: “ಬಟ್ಟೆ ವ್ಯಾಪಾರಿ ಒಂಭೈನೂರು ರೂಪಾಯಿಗಿಂತ ಒಂದು ಕಾಸನ್ನೂ ಜಾಸ್ತಿ ಕೊಡುವುದಿಲ್ಲವಂತೆ. ಅವನೂ ಪೇಟೆಧಾರಣೆಗಿಂತ ಹೆಚ್ಚು ಬೆಲೆ ಹೇಳಿದ್ದೇನೆ ಎಂದ." ಯಜಮಾನ ತಲೆದೂಗುತ್ತಾ, “ಈಗ ಇದನ್ನು ವಜ್ರದ ವ್ಯಾಪಾರಿಯ ಹತ್ತಿರ ತಗೊಂಡು ಹೋಗಿ ಕೇಳು, ಅವನು ಎಷ್ಟು ರೂಪಾಯಿ ಕೊಡುತ್ತಾನೆ ನೋಡೋಣ" ಎಂದ. ಮತ್ತೊಮ್ಮೆ ಆಳು ವಜ್ರದ ವ್ಯಾಪಾರಿಯ ಬಳಿಗೆ ಅದನ್ನು ತೆಗೆದುಕೊಂಡು ಹೋದ. ಆ ವ್ಯಾಪಾರಿ ವಜ್ರವನ್ನು ನೋಡಿದ ತಕ್ಷಣವೇ, “ಇದಕ್ಕೆ ಒಂದು ಲಕ್ಷ ರೂಪಾಯಿ ಕೊಡುತ್ತೇನೆ” ಎಂದ.

ಪ್ರತಿಯೊಬ್ಬನೂ ತನ್ನ ಯೋಗ್ಯತೆಗೆ ತಕ್ಕ ಬೆಲೆಯನ್ನು ಹೇಳುವನು. ಎಲ್ಲರಿಗೂ ಅಖಂಡ ಸಚ್ಚಿದಾನಂದ ಅರ್ಥವಾಗಬಲ್ಲದೇ? ಹನ್ನೆರಡು ಋಷಿಗಳು ಮಾತ್ರ ರಾಮಚಂದ್ರನನ್ನು ತಿಳಿದುಕೊಂಡರು. ಎಲ್ಲರೂ ಭಗವಂತನ ಅವತಾರವನ್ನು ತಿಳಿದುಕೊಳ್ಳಲಾರರು. ಕೆಲವರು ಅವನು ಸಾಧಾರಣ ಮನುಷ್ಯ ಎಂದು ಭಾವಿಸಿದರು. ಮತ್ತೆ ಕೆಲವರು ಅವನು ಒಳ್ಳೆಯ ಸಾಧು ಎಂದು ಭಾವಿಸಿದರು. ಎಲ್ಲೋ ಕೆಲವರು ಮಾತ್ರ ಅವನು ದೇವರ ಅವತಾರವೆಂದು ಕಂಡು ಹಿಡಿದರು.