ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೧೪

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೧೪

ವಸಿಷ್ಠರೆಂಬ ಮೂರನೆಯ ಗುರು
 

ಗುರುಪರಂಪರೆಯ ಮೂರನೆಯ ಗುರು - ಮಹರ್ಷಿವಸಿಷ್ಠರು.
 
ವಸಿಷ್ಠರು ಬ್ರಹ್ಮನ ಮಾನಸಪುತ್ರರಲ್ಲಿ ಒಬ್ಬರು. ತನ್ನ ಸೃಷ್ಟಿಕಾರ್ಯಕ್ಕೆ ಸಹಕಾರಿಗಳಾಗಿ ಬ್ರಹ್ಮ ಉಪಬ್ರಹ್ಮರನ್ನು ಸೃಷ್ಟಿಸಿದ. ಅವರಿಗೆ ಪ್ರಜಾಪತಿಗಳೆಂದು ಹೆಸರು. ಅವರು ಒಂಬತ್ತು ಜನ. ಅವರಲ್ಲೊಬ್ಬರು ವಸಿಷ್ಠರು.
 
ಬೇರೆ ಬೇರೆ ಮನ್ವಂತರದಲ್ಲಿ ದೇವತೆಗಳ, ಜ್ಞಾನಿಗಳ ಅವತರಣ ಭಿನ್ನ-ಭಿನ್ನವಾಗಿ ಆಗುತ್ತದೆ. ವಸಿಷ್ಠರ ವೈವಸ್ವತಮನ್ವಂತರದ ಹುಟ್ಟಿಗೊಂದು ವೈಚಿತ್ರ್ಯವಿದೆ. ದೇವಸುಂದರಿ ಊರ್ವಶಿಯನ್ನೊಮ್ಮೆ ವರುಣ ಬಯಸಿದ. ಆದರೆ ಅವಳಾಗ ಮಿತ್ರನ ಅಧೀನಳಾಗಿದ್ದಳು. ಹಾಗಾಗಿ ವರುಣ ತನ್ನ ತೇಜಸ್ಸನ್ನು ಒಂದು ಕುಂಭದಲ್ಲಿಟ್ಟ. ಮಿತ್ರನೂ ತನ್ನ ತೇಜಸ್ಸನ್ನು ಅದರಲ್ಲೇ ಇಟ್ಟ. ಆ ಯುಗಳತೇಜಸ್ಸಿನಿಂದ ಹುಟ್ಟಿಬಂದ ತೇಜಸ್ವಿಗಳಿಬ್ಬರು. ಒಬ್ಬರು ಅಗಸ್ತ್ಯರು, ಇನ್ನೊಬ್ಬರು ವಸಿಷ್ಠರು.
 
ನಾರಾಯಣ - ಬ್ರಹ್ಮರಿಂದ ಗುರುತ್ವ ಹರಿದದ್ದು ವಸಿಷ್ಠರಿಗೆ. ಅವರಿಂದ ಕುಲಪರಂಪರೆಯಲ್ಲಿ ಆ ಗುರುತ್ವ ಮುಂದುವರಿಯಿತು. ಅದನ್ನು ಪಂಚಪೂರುಷೀ ಋಷಿಪರಂಪರೆ ಎನ್ನಲಾಗುತ್ತದೆ.
 
ವಸಿಷ್ಠರು ತಪಸ್ವಿಗಳು. ಕ್ಷಮಾವಂತರು. ಉದಾರರು. ದಯಾನ್ವಿತರು. ದೇವತೆಗಳ ಬಲವೃದ್ಧಿಗಾಗಿ ಸದಾ ಕಾರ್ಯಶೀಲರು.
 
ಸೃಷ್ಟಿಯ ಎರಡು ರಾಜವಂಶಗಳಾದ ಸೂರ್ಯವಂಶ ಮತ್ತು ಚಂದ್ರವಂಶಗಳಿಗೆ ಅವರು ಮಾರ್ಗದರ್ಶಕರು. ಸೂರ್ಯವಂಶಕ್ಕೆ ಪುರೋಹಿತರು ಕೂಡಾ. ಅಪಾರ ಶಿಷ್ಯವಾತ್ಸಲ್ಯ ಅವರಿಗೆ. ರಾಮನಿಗೆ ಪುರೋಹಿತರಾದವರು ಅವರು. ರಾಮನ ಜನನಕ್ಕೂ ಕಾರಣರಾದವರು.
 
ಗಾಯತ್ರೀಮಂತ್ರ ವಿದ್ಯೆಯ ಬೆನ್ನೆಲುಬು. ಅದನ್ನು ಕಂಡುಕೊಂಡವರು ವಿಶ್ವಾಮಿತ್ರರು. ವಿಶ್ವಾಮಿತ್ರರು ಬ್ರಹ್ಮರ್ಷಿಯಾಗಲು ಕಾರಣ ವಸಿಷ್ಠರೇ.
 
ವಸಿಷ್ಠರು ಬದುಕಿಗೆ ಬೇಕಾದ ಕಲ್ಪಸೂತ್ರ ಮತ್ತು ಧರ್ಮಸೂತ್ರಗಳನ್ನು ನೀಡಿದವರು.
 
ಯೋಗವಾಸಿಷ್ಠ ಅವರ ಅನುಪಮ ಕೃತಿ. ಆತ್ಮಸಾಧನೆಯ ಹಾದಿಯ ದಾರಿದೀಪ ಈ ಗ್ರಂಥ.

{ಮುಂದಿನ ಹೆಜ್ಜೆ
ನಾಳೆಯ ಓದು...}
 
ವಿದ್ವಾನ್ ಜಗದೀಶಶರ್ಮಾ ಸಂಪ
ಹಿಂದಿನ ಹೆಜ್ಜೆಗಳಿಗಾಗಿ:
www.srisamsthana.org