ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೧

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೧

ಹೆಜ್ಜೆ ೧
ಅದು ಪುಣ್ಯನದೀ ಅಘನಾಶಿನೀ ತೀರ. ಅಂದು ಆ ನದೀ ಮತ್ತೊಮ್ಮೆ ಪವಿತ್ರವಾಗಿತ್ತು. ಯಾಕೆಂದರೆ ಆ ಮಹಾತ್ಮರ ಪಾದಸ್ಪರ್ಶವಾಗಿತ್ತು ಅದರ ಜಲಕ್ಕೆ. ಶ್ರೀಶಂಕರಾಚಾರ್ಯರು ಅಘನಾಶಿನಿಯನ್ನು ಅಂದು ದಾಟಿದ್ದರು. ಜೀವಲೋಕವನ್ನು ದಾಟಿಸಲೆಂದು ಬಂದವರು ಅವರು. ಕೈಲಾಸದೆತ್ತರದಿಂದ ಭರತಭೂಮಿಗೆ ಇಳಿದವರು. ಬೆಳ್ಳಿಬೆಟ್ಟದೊಡೆಯನ ಸಂತರೂಪ, ಆ ಶಂಕರನ ಈ ಶಂಕರಸ್ವರೂಪ.
ಕೈಲಾಸದಿಂದಿಳಿದವರು ಇಂದು ಭೂಕೈಲಾಸಕ್ಕೆ ಬಂದಿದ್ದರು. ತನ್ನ ಆತ್ಮಲಿಂಗ ನೋಡಲು ತಾನೇ ಬಂದ ಅಚ್ಚರಿ. ಶ್ರೀಶಂಕರರ ಜ್ಞಾನಯಾತ್ರೆಯದು. ವಿಜಯಯಾತ್ರೆಯೂ ಹೌದು. ಜ್ಞಾನದ ವಿಜಯಯಾತ್ರೆ. ಜ್ಞಾನವೇ ಮೈವೆತ್ತು ಮಾಡುತ್ತಿದ್ದ ಬೆಳಕಿನ ಯಾತ್ರೆ.
ಅಂತಹ ಯಾತ್ರೆಯೊಂದರ ಆವಶ್ಯಕತೆ ಅನಿವಾರ್ಯವಾದ ಕಾಲಘಟ್ಟವದು. ಯಾಕೆಂದರೆ ಅಂದು ಬೆಳಕಿಗೆ ಮೋಡ ಮುಸುಕಿತ್ತು, ತತ್ತ್ವ ಮಸುಕಾಗಿತ್ತು.
ಧರ್ಮವಿತ್ತು; ಮರ್ಮವಿರಲಿಲ್ಲ. ಕರ್ಮವಿತ್ತು; ಕೌಶಲವಿರಲಿಲ್ಲ. ಆಚಾರವಿತ್ತು; ವಿಚಾರವಿರಲಿಲ್ಲ. ಸಂಪ್ರದಾಯವಿತ್ತು; ಸಂಪ್ರಜ್ಞಾನವಿರಲಿಲ್ಲ.
ಸನಾತನಧರ್ಮದ ಕವಲುಗಳ ಭಿನ್ನ ಭಿನ್ನ ನಿಲುವುಗಳು ಪರಾಕಾಷ್ಠೆಯನ್ನು ತಲುಪಿದ್ದವು. ಮತಗಳು ಪಥಗಳಾಗಿ ಉಳಿಯದೆ, ಅವುಗಳ ಏಕಸೂತ್ರತೆಯನ್ನು ಅರ್ಥ ಮಾಡಿಕೊಳ್ಳದೆ, ಅವೆಲ್ಲವೂ ಸಾರುವ ಸನಾತನಸತ್ಯವಾದ ಅದ್ವೈತವನ್ನು ಮರೆತಿದ್ದವು.
ಇಂತಹ ಸಂದರ್ಭದಲ್ಲಿ ಶ್ರೀಶಂಕರರು ಅವತರಿಸಿ ಬಂದರು. ಬ್ರಹ್ಮಸೂತ್ರ - ಉಪನಿಷತ್ - ಭಗವದ್ಗೀತೆಗಳಿಗೆ ಭಾಷ್ಯ ಬರೆದರು. ಮತಗಳ ಪ್ರತಿಪಾದಕರೊಂದಿಗೆ ಸಂವಾದ ನಡೆಸಿದರು, ವಾದ ನಡೆಸಿದರು. ಸತ್ಯಸಿದ್ಧಾಂತವನ್ನು ಮತ್ತೊಮ್ಮೆ ಅನಾವರಣಗೊಳಿಸಲು ವಿಜಯಯಾತ್ರೆ ಆರಂಭಿಸಿದರು.
ಅದೇ ಯಾತ್ರೆಯಲ್ಲಿಯೇ ಶ್ರೀಕ್ಷೇತ್ರಗೋಕರ್ಣಕ್ಕೆ ಅವರ ಪದಸ್ಪರ್ಶವಾಗಿದ್ದು.
ಜಗದೀಶಶರ್ಮಾ ಸಂಪ
www.srisamsthana.org