ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೪

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೪

ಸನ್ನಿಧಿಗಳ ಅನುಸಂಧಾನ
ಕೋಟಿತೀರ್ಥಕ್ಕೆ ಬರುವ ಮುನ್ನ ಶ್ರೀಶಂಕರರು ಅಲ್ಲಿರುವ ಅನೇಕ ದೇವತಾಸಾನ್ನಿಧ್ಯಗಳನ್ನು ಪೂಜಿಸಿದ್ದರು.
ಮೊದಲು ಅವರು ಪೂಜಿಸಿದ್ದು ಆಸೆಗಳನ್ನು ಈಡೇರಿಸುವ ಕಾಮೇಶ್ವರನನ್ನು.
ಅನಂತರ ಅಘನಾಶಿನಿಯಲ್ಲಿ ತೀರ್ಥಸ್ನಾನ ಮಾಡಿದ್ದರು. ಅವರೊಂದಿಗೆ ಅವರೊಂದಿಗಿದ್ದ ಅವರ ಶಿಷ್ಯರೂ ಅಘನಾಶಿನಿಯ ಪಾವಿತ್ರ್ಯವನ್ನು ಅನುಭವಿಸಿದ್ದರು.
ಮುಂದೆ ಅವರು ಅರ್ಚಿಸಿದ್ದು ಮಹಾಕಾಲಿಯನ್ನು. ವಿಶ್ವವನ್ನೇ ಮೋಹನಗೊಳಿಸುವ ಆ ಮಹಾದೇವಿಯನ್ನು ಸ್ತೋತ್ರಗಳಿಂದ ಸ್ತುತಿಸಿದ್ದರು.
ಮತ್ತೆ ಅವರು ಉಪಾಸಿಸಿದ್ದು ಗಣಪತಿಯನ್ನು. ದ್ವಿಭುಜನಾಗಿ ನಿಂತವನನ್ನು. ಜನರ ಆಸೆಗಳನ್ನು ಈಡೇರಿಸುವವನನ್ನು. ವಿಘ್ನಗಳ ಒಡೆಯನನ್ನು. ವರದಾಯಕನನ್ನು. ಶಾಂತಮೂರ್ತಿಯನ್ನು. ಭಕ್ತಾಭೀಷ್ಟದಾಯಕನನ್ನು. ದಿವ್ಯಲಿಂಗವನ್ನು ಗೋಕರ್ಣದಲ್ಲಿ ಪ್ರತಿಷ್ಠಾಪಿಸಿದವನನ್ನು. ಆ ಮಹತ್ಕಾರ್ಯಕ್ಕಾಗಿ ದೇವತೆಗಳಿಂದ ಸ್ತುತಿಸಲ್ಪಟ್ಟವನನ್ನು. ಅಂತಹ ಮಹಾಗಣಪತಿಯನ್ನು ನಮಿಸಿದ್ದರು, ಸ್ತುತಿಸಿದ್ದರು, ಅವನ ಪ್ರಸನ್ನತೆಯನ್ನು ಅನುಭವಿಸಿದ್ದರು.
ಮುಂದೆ ಅವರು ದರ್ಶನ ಮಾಡಿದ್ದು ಆದಿಗೋಕರ್ಣಲಿಂಗವನ್ನು. ಈ ಲಿಂಗ ಪ್ರಾಚೀನದಲ್ಲೇ ಪ್ರಾಚೀನ. ಶಿವನ ಪಾತಾಲಸ್ಪರ್ಶಿ ಸನ್ನಿಧಿಯಿದು.
ಶಿವನೊಡನೆ ಬುವಿಗಿಳಿದ ಗೌರಿಯ ಆರಾಧನೆ ಮಾಡಿದ್ದರು ಅನಂತರ. ತಾಮ್ರಗೌರಿಯೆಂದು ಹೆಸರಾದ ದೇವಿಯನ್ನು ಸ್ತುತಿಸಿದ್ದರು ಅವರು.
ಮತ್ತವರು ಬಂದಿದ್ದು ವೆಂಕಟೇಶ್ವರನ ಸನ್ನಿಧಾನಕ್ಕೆ. ದೇವತೆಗಳಿಂದ ವಂದಿತನೂ ಪೂಜಿತನೂ ಆದ ಆ ಮಹಾಬಾಹುವನ್ನು ಕಂಡು ನಮಿಸಿದ್ದರು ಶ್ರೀಶಂಕರರು.
ಈಗ ಕೋಟಿತೀರ್ಥದ ಮೆಟ್ಟಿಲಲ್ಲಿ ನಿಂತಿದ್ದರು.
{ಮುಂದಿನ ಹೆಜ್ಜೆ
ನಾಳೆಯ ಓದು...}
ಜಗದೀಶಶರ್ಮಾ ಸಂಪ
www.srisamsthana.org