ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೬

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೬

ಅಗಸ್ತ್ಯರೆಂಬ ಅನುಪಮರು

ಅಗಸ್ತ್ಯರು ಋಷಿಶ್ರೇಷ್ಠರು. ಸಪ್ತರ್ಷಿಗಳಲ್ಲಿ ಒಬ್ಬರು. ವಿಶಿಷ್ಟವಾದ ಅದೆಷ್ಟೋ ಲೋಕಾನುಗ್ರಹಗಳನ್ನು ಮಾಡಿದವರು.

ಮಿತ್ರಾವರುಣರ ಪುತ್ರರಾದ ಅಗಸ್ತ್ಯರು ಲೋಪಾಮುದ್ರೆಯ ಕೈಹಿಡಿದವರು. ಈ ಲೋಪಾಮುದ್ರೆಯೇ ಲೋಕದ ಒಳಿತಿಗಾಗಿ ಧಾರೆಯಾಗಿ ಹರಿದವಳು, ಜೀವನದಿಯಾದವಳು. ಅವಳೇ ಕಾವೇರಿ. ಲೋಪಾಮುದ್ರೆಯ ಜನ್ಮಕ್ಕೂ, ಅವಳು ಕಾವೇರಿಯಾಗಿ ಪ್ರವಹಿಸುವುದಕ್ಕೂ ಕಾರಣರು ಅವರು.

ಸಮುದ್ರದಂತಹ ಸಮುದ್ರವನ್ನೇ ಆಪೋಷನ ತೆಗೆದುಕೊಂಡವರು ಅವರು. ಕಾಲಕೇಯರೆಂಬ ಅಸುರರು ಲೋಕಕಂಟಕರಾಗಿದ್ದರು. ಅವರಿಗಿತ್ತು ಸೂರ್ಯನ ಭಯ. ಹಾಗಾಗಿ ಹಗಲು ಸಮುದ್ರದಲ್ಲಿ ಅವರು ಮುಳುಗಿರುತ್ತಿದ್ದರು. ರಾತ್ರಿ ಮೇಲೆದ್ದು ಲೋಕವನ್ನು ಪೀಡಿಸುತ್ತಿದ್ದರು. ಅವರ ಸಂಹಾರಕ್ಕೆ ನೆರವೀಯಲು ಸಮುದ್ರವನ್ನೇ ಕುಡಿದು ಖಾಲಿ ಮಾಡಿದ್ದವರು ಅಗಸ್ತ್ಯರು.

ಆದಿತ್ಯಹೃದಯದ ಕೊಡುಗೆ ಅಗಸ್ತ್ಯರ ಅನುಪಮ ಕಾರ್ಯ. ರಾಮ-ರಾವಣರ ಸಮರ ತಾರಕಕ್ಕೇರಿದ್ದ ಸಮಯವದು. ರಾವಣಸಂಹಾರದ ಕುರಿತು ಯೋಚನೆಯಲ್ಲಿದ್ದ ರಾಮನ ಸನ್ನಿಧಿಗೆ ಬಂದುನಿಂತವರು ಅಗಸ್ತ್ಯರು. ಆದಿತ್ಯಹೃದಯವನ್ನು ಉಪದೇಶಿಸಿದರು. ಅದನ್ನು ಅನುಸಂಧಾನ ಮಾಡಿದ ಶ್ರೀರಾಮ ರಾವಣನನ್ನು ಸಂಹಾರ ಮಾಡಿದ. ಇಂದು ಜಗತ್ತಿನ ಉಪಯುಕ್ತ ಉಪಾಸನಾಸಾಹಿತ್ಯವಾಗಿದೆ ಆದಿತ್ಯಹೃದಯ.

ಸಾಕ್ಷಾತ್ ಹಯಗ್ರೀವನನ್ನೇ ಗುರುವಾಗಿಸಿಕೊಂಡವರು, ಅಗಸ್ತ್ಯಸಂಹಿತೆ ಮತ್ತಿತರ ಕೃತಿಗಳ ಮೂಲಕ ಖಗೋಳ, ನಾಡಿ, ವಿಜ್ಞಾನದ ಅಸಂಖ್ಯ ವಿಷಯಗಳನ್ನು ತೆರೆದಿಟ್ಟವರು, ವಾತಾಪಿಯನ್ನು ಸಂಹರಿಸಿದವರು, ತಾಟಕಿಗೆ ಶಾಪವಿತ್ತವರು, ಇಂದ್ರದ್ಯುಮ್ನನನ್ನು ಶಪಿಸಿದವರು, ರಾಮನಿಗೆ ವನವಾಸದಲ್ಲಿ ಸಿಕ್ಕವರು, ಅಶ್ವಮೇಧ ಮಾಡುವಂತೆ ಸಲಹೆಯಿತ್ತವರು.... ಹೀಗೆ ಸಾಗುತ್ತದೆ ಅಗಸ್ತ್ಯರ ಮಹಿಮೆ.

ಅಂತವರು ಪೂಜಿಸಿದ್ದ ವರದೇಶನ ಸನ್ನಿಧಿಯಲ್ಲಿ ನಿಂತರು ಶ್ರೀಶಂಕರರು.

{ಮುಂದಿನ ಹೆಜ್ಜೆ
ನಾಳೆಯ ಓದು...}

ಜಗದೀಶಶರ್ಮಾ ಸಂಪ
ಹಿಂದಿನ ಹೆಜ್ಜೆಗಳಿಗಾಗಿ:
www.srisamsthana.org