ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ – ಹೆಜ್ಜೆ ೧೩

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ – ಹೆಜ್ಜೆ ೧೩

ಬ್ರಹ್ಮನೆಂಬ ಎರಡನೇ ಗುರು
 
ಗುರುಪರಂಪರೆಯ ಎರಡನೆಯ ಗುರು ಬ್ರಹ್ಮ. ಸೃಷ್ಟಿಯ ಹೊಣೆಗಾರಿಕೆ ಹೊತ್ತವ. ರಜೋಮೂರ್ತಿ. ಬ್ರಹ್ಮ ಶಬ್ದಕ್ಕೆ ವೃದ್ಧಿ ಎಂದು ಅರ್ಥ. ಜಗತ್ತನ್ನು ವರ್ಧಿಸುವವನು ಅವನು. ಹಾಗಾಗಿ ಅವನಿಗೆ ಈ ಹೆಸರು.
 
ನಾಲ್ಕು ಮುಖಗಳು ಅವನಿಗೆ, ನಾಲ್ಕು ವೇದಗಳನ್ನು ನುಡಿಯುವಂತವು. ಎಲ್ಲ ವಿದ್ಯೆಗಳ ಮೂಲವಾದ ವೇದಕ್ಕೆ ಬ್ರಹ್ಮನೇ ದೇವತೆ. ವೇದಬ್ರಹ್ಮ ಎಂದೂ ಅವನಿಗೆ ಹೆಸರಿದೆ. ಇದು ಅವನ ಗುರುತ್ವ.
 
ಗಾಯತ್ರೀ ಮಂತ್ರ ಜ್ಞಾನವನ್ನು ನೀಡುವಂತದ್ದು. ಅದರ ಅಧಿದೇವತೆಯ ಒಂದು ರೂಪ ಸಾವಿತ್ರೀ. ಅವಳು ಬ್ರಹ್ಮನ ಪತ್ನೀ.
ವಿದ್ಯೆಗೆ ಅಧಿದೇವತೆ ಸರಸ್ವತೀ ಅವಳೂ ಬ್ರಹ್ಮನಪತ್ನಿಯೇ.
 
ಜ್ಞಾನದ ಲಾಂಛನ ಹಂಸ. ಅದು ಅವನ ವಾಹನ.
 
ಅವನ ಸಭೆಯಲ್ಲಿ ನಿತ್ಯವೂ ನಡೆಯುತ್ತದೆ ಜ್ಞಾನಸತ್ರ. ಅದರಲ್ಲಿ ಸದಾ ಭಾಗಿಗಳಾಗುತ್ತಾರೆ ಜ್ಞಾನಿಗಳಾದ ಋಷಿಗಳು. ಅವನ ಎದುರಿನಲ್ಲಿ ನಿಂತಿರುತ್ತವೆ ನಾಲ್ಕೂ ವೇದಗಳು.
 
ಅವನು ಜನಿಸಿದ್ದು ನಾಭಿಕಮಲದಲ್ಲಿ. ವಿಷ್ಣುವಿನ ನಾಭಿಕಮಲದಲ್ಲಿ. ಹಾಗಾಗಿ ನಾರಾಯಣನಿಂದ ಮುಂದುವರಿಯಿತು ಗುರುತ್ವ ಬ್ರಹ್ಮನೆಡೆಗೆ.
 
 
ವಿದ್ವಾನ್ ಜಗದೀಶಶರ್ಮಾ ಸಂಪ
 
ಹಿಂದಿನ ಹೆಜ್ಜೆಗಳಿಗಾಗಿ:
www.srisamsthana.org