ಶ್ರೀ ರಾಮ ನವಮಿಯ ಶುಭದಿನ...

ಶ್ರೀ ರಾಮ ನವಮಿಯ ಶುಭದಿನ...

*ರಾಮನೆಂದರೆ* ಶಾಂತಿ,ನೆಮ್ಮದಿ, ಸೌಖ್ಯ.*ರಾ--ಬೆಳಕು,ಮ--ಒಳಗೆ*,ನಮ್ಮೊಳಗಿನ ದೈವಿಕ ಬೆಳಕೇ *ಶ್ರೀ ರಾಮ*.

ಶ್ರೀ ರಾಮ ನವಮಿಯನ್ನು ಭಾರತದಾದ್ಯಂತ ಬಹಳ ವಿಜೃಂಭಣೆ, ಸಡಗರದಿಂದ ಆಚರಿಸುತ್ತಾರೆ. ಶ್ರೀರಾಮ ಭಗವಾನ್ ಮಹಾವಿಷ್ಣುವಿನ ೭ನೇ ಅವತಾರವೆಂದು ಪುರಾಣದ ಮೂಲಕ ತಿಳಿದು ಬರುವ ಅಂಶವಾಗಿದೆ. ಬುವಿಯಲ್ಲಿ ದುಷ್ಟ ಶಕ್ತಿಗಳ ಧಮನಕ್ಕಾಗಿ, ಸುರರ ಅಪೇಕ್ಷೆಯಂತೆ ಶ್ರೀ ರಾಮನ ಅವತಾರವಾಯಿತೆಂದು ತಿಳಿದು ಬರುವ ಅಂಶ.

ಅಯೋಧ್ಯೆಯ ಚಕ್ರವರ್ತಿ ದಶರಥನಿಗೆ ಮೂವರು ಪತ್ನಿಯರಿಂದಲೂ ಸಹಜವಾಗಿ ಸಂತಾನ ಆಗದಿದ್ದಾಗ, ಕುಲಗುರುಗಳ ಸಲಹೆಯಂತೆ, *ಪುತ್ರ ಕಾಮೇಷ್ಠಿ* ಯಾಗ ಮಾಡಿ ಪಡೆದ, ನಾಲ್ವರು ಮಕ್ಕಳಲ್ಲಿ ಹಿರಿಯವನೇ ಶ್ರೀರಾಮಚಂದ್ರ. ಚೈತ್ರಮಾಸದ ನವಮಿ ದಿನ ಜನನವಾದ ಕಾರಣ ಅದೇ ದಿನವನ್ನು *ರಾಮನವಮಿ* ಎಂದು ಆಚರಿಸಲಾಗುತ್ತದೆ.

ದುಷ್ಟ ಶಕ್ತಿ ಗಳ ಹನನ,ಭೂಮಿಯಲ್ಲಿ ದೈವೀಕಶಕ್ತಿಗಳ ನೆಲೆಗಾಗಿ ಪ್ರಾರ್ಥನೆ, ಭಜನೆ,ಶ್ರೀ ರಾಮತಾರಕ ಮಂತ್ರ ಜಪ, ರಾಮಾಯಣ ಪಾರಾಯಣ, ಕೀರ್ತನೆ, ಸೀತಾರಾಮ ಕಲ್ಯಾಣೋತ್ಸವ ಇತ್ಯಾದಿ ಉತ್ಸವಗಳಲ್ಲಿ ಒಳಗೊಂಡಿದೆ. ಇಡೀ ದಿನ ಹಾಲು, ಹಣ್ಣು ಮಾತ್ರ ಸೇವಿಸಿ ನಿರಾಹಾರ, ಉಪವಾಸ ಕೈಗೊಳ್ಳುವವರೂ ಇದ್ದಾರೆ. ಅಖಂಡ ಭಜನೆ ವಿಶೇಷ.

ರಾಮನೆಂದರೆ ಎಲ್ಲರ *ಆತ್ಮ* ಸೀತೆಯೆಂದರೆ *ಮನಸ್ಸು* .ಮನಸ್ಸು ಆತ್ಮಗಳ ಸಮ್ಮಿಲನವೇ ಸಂಯಮ.ಇದು ಸಿಗುವುದು ಶ್ರೀರಾಮ ತಾರಕ ಮಂತ್ರದಿಂದ.

ರಾಮರಕ್ಷಾಂ ಪಠೇತ್ಪ್ರಾಜ್ಞಃ ಪಾಪಘ್ನಂ ಸರರ್ವಕಾಮದಂ/

ಶಿರೋ ಮೇ  ರಾಘವಃ ಪಾತು ಫಾಲಂ ದಶರಥಾತ್ಮಜಃ//

ಶ್ರಿರಾಮರಾಮ ರಘುನಂದನ ರಾಮ ರಾಮ

ಶ್ರಿರಾಮ ರಾಮ ಭರತಾಗ್ರಜ ರಾಮ ರಾಮ/

ಶ್ರೀರಾಮ ರಾಮ ರಣಕರ್ಕಶ ರಾಮ ರಾಮ

ಶ್ರೀರಾಮ ರಾಮ ಶರಣಂ ಭವ ರಾಮಾ ರಾಮ//

 

ಶ್ರೀರಾಘವಂ ದಶರಥಾತ್ಮಜಮಪ್ರಮೇಯಂ

ಸೀತಾಪತಿಂ ರಘುಕುಲಾನ್ವಯರತ್ನದೀಪಂ/

ಅ(ಆ)ಜಾನುಬಾಹುಮರವಿಂದದಳಾಯತಾಕ್ಷಂ

ರಾಮಂ ನಿಶಾಚರವಿನಾಶಕರಂ ನಮಾಮಿ//

ನರರೂಪಿನಿಂದ ಬುವಿಯಲಿ ಅವತರಿಸಿದ ರಾಮಚಂದ್ರನು, ಮನುಷ್ಯನಾಗಿಯೇ ಕಷ್ಟ ಸುಖ, ನೋವು ನಲಿವುಗಳನ್ನು ಅನುಭವಿಸಿದನು. ತಾನು ದೇವರ ಪ್ರತಿರೂಪವೆಂದು ಎಲ್ಲೂ ತೋರ್ಪಡಿಸಿಲ್ಲ. ದುರ್ಜನರ ನಾಶ, ಸಜ್ಜನರ ಜೀವಿತಕ್ಕೆ ಅನುವು ಮಾಡಿಕೊಟ್ಟವನು.

ಧರ್ಮ ಕಾರ್ಯವನ್ನು ಮಾಡು, ಅಧರ್ಮವನ್ನು ಮಾಡದಿರು, ಒಳ್ಳೆಯವರಿಗೆ ನೋವು ಕೊಡದಿರು, ಸತ್ಯವನ್ನು ಪರಿಪಾಲಿಸು, ಗುರುಹಿರಿಯರನ್ನು ಗೌರವಿಸು, ನಿನ್ನ ಲಕ್ಷ್ಯ ಸದಾ ಉತ್ತಮ, ನೇರ ಗುರಿಯಾಗಿರಲಿ, ಶ್ರೇಷ್ಠ ತತ್ವವನ್ನು ಎತ್ತಿ ಹಿಡಿ, ಕ್ಷುದ್ರತನಕ್ಕೆ ಬೆಂಬಲಿಸದಿರು, ಕಿರಿಯರ ಮಾತಲ್ಲೂ ಹುರುಳಿದೆ ಅರಿ, ದುರ್ಜನರ ಸಂಗ ಬೇಡ, ಈ ರೀತಿ ಹತ್ತು ಹಲವು ತತ್ವಗಳನ್ನು ಸಾರಿದ, ಸ್ವಯಂ ಆಚರಿಸಿ ಲೋಕಮಾನ್ಯನಾದ ಶ್ರೀರಾಮಚಂದ್ರ ದೇವರ , ಜನ್ಮದಿನ ರಾಮನವಮಿಯನ್ನು ಒಳ್ಳೆಯ ಕೆಲಸಕಾರ್ಯಗಳ ಮೂಲಕ ಆಚರಿಸೋಣ.

ನಮ್ಮೆಲ್ಲರಿಗೂ ಬಂದ ಈ ಕೊರೊನಾ ಮಹಾಮಾರಿ ತೊಲಗಿ ಲೋಕಕ್ಕೆ ಕ್ಷೇಮ ಉಂಟಾಗಲೆಂದು, ಕಣ್ಣಿಗೆ ಕಾಣಿಸದ ಆ 

ಮಹಾನ್ ಶಕ್ತಿ ಯನ್ನು ಪ್ರಾರ್ಥಿಸಿಕೊಳ್ಳೋಣ. ಹುಟ್ಟಿದ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲೆಂದು ಪ್ರತಿಪಾದಿಸಿದ ಆ ಮಹಾನ್ ಚೇತನವನ್ನು ಕೊಂಡಾಡೋಣ.

ಜೈ ಶ್ರೀರಾಮ

ಸಂಗ್ರಹ:ರತ್ನಾ ಕೆ.ಭಟ್, ತಲಂಜೇರಿ.

ಆಕರ:ಸ್ತೋತ್ರ ಮಂಜರಿ.