ಶ್ರೀ ಸತ್ಯನಾರಾಯಣ ದೇವರ ಕಥೆ (ಅಧ್ಯಾಯ ೨)
ಸೂತಪುರಾಣಿಕನು ಋಷಿಗಳನ್ನು ಕುರಿತು 'ಎಲೈ ಋಷಿಗಳಿರಾ! ಇನ್ನೂ ಈ ವ್ರತವನ್ನು ಪೂರ್ವದಲ್ಲಿ ಅದಾರು ಮಾಡಿದ್ದಾರೆಂಬುವುದನ್ನು ಹೇಳುತ್ತೇನೆ ಕೇಳಿರಿ. ಕಾಶಿಪಟ್ಟಣದಲ್ಲಿ ತೀರ ದರಿದ್ರನಾದ ಬ್ರಾಹ್ಮಣ ಇರುತ್ತಿದ್ದನು. ಬಡತನದ ಮೂಲಕ ಆತ ಯಾವಾಗಲೂ ಹಸಿವೆ, ನೀರಡಿಕೆಗಳಿಂದ ಪೀಡಿತನಾಗಿದ್ದನು. ಅದಕ್ಕಾಗಿ ದಿನವೂ ಭಿಕ್ಷೆಗಾಗಿ ಭೂಮಿಯ ಮೇಲೆ ಸಂಚರಿಸುತಿದ್ದನು. 'ಭಗವಾನ್ ಬ್ರಾಹ್ಮಣ ಪ್ರಿಯ' ಭಗವಂತನು ಬ್ರಾಹ್ಮಣರ ಮೇಲೆ ಪ್ರೀತಿಯುಳ್ಳವನು. ಆದ್ದರಿಂದ ಬ್ರಾಹ್ಮಣನ ಕಷ್ಟಮಯ ಸ್ಥಿತಿಯು ಆತನಿಗೆ ಸಹಿಸದಾಯಿತು.
ಕೂಡಲೇ ಆತನು ಮುದಿಯನ ವೇಷದಿಂದ ಆ ದರಿದ್ರ ಬ್ರಾಹ್ಮಣನ ಬಳಿಗೆ ಬಂದನು. ಮತ್ತು ಅವನನ್ನು ಕುರಿತು ಒಳ್ಳೆಯ ಆದರದಿಂದ 'ಎಲೈ ಬ್ರಾಹ್ಮಣನೆ! ನೀನು ನಿತ್ಯವೂ ದುಃಖಿತನಾಗಿ ಭೂಮಿಯ ಮೇಲೆ ಅದೇನು ಕಾರಣ ಸಂಚರಿಸುತ್ತಿರುವಿ? ಅದನ್ನು ಕೇಳಲು ನಾನು ಬಯಸುವೆ. ಅದೇನು ಹೇಳು?' ಎಂದು ಕೇಳಿದನು.
ಅದಕ್ಕೆ ಕಂಗಾಲಾದ ಬ್ರಾಹ್ಮಣನು 'ಬ್ರಾಹ್ಮಣೋತಿ ದ್ರ ದ್ರೋಹ' ನಾನು ಬ್ರಾಹ್ಮಣನಿದ್ದೂ ತುಂಬಾ ಬಡವನಾಗಿರುವೆ. ಭಿಕ್ಷೆ ಬೇಡಿ ಹೊಟ್ಟೆ ಹೊರೆದುಕೊಳ್ಳುವ ನಿಮಿತ್ತ ಯಾವಾಗಲೂ ಭೂಮಿಯ ಮೇಲೆ ತಿರುಗಾಡುತ್ತಿರುವೆ. ಈ ನನ್ನ ದಾರಿದ್ರ್ಯವು ದೂರಾಗಲು ಉಪಾಯವೇನಾದರೂ ತಿಳಿದಿದ್ದರೆ ಅದನ್ನು ತಿಳಿಸುವ ಕೃಪೆಯಾಗಬೇಕೆಂದು ಕೇಳಿದನು. ಬ್ರಾಹ್ಮಣನ ದೀನವಾಣಿಯನ್ನು ಕೇಳಿ ವೇಷಧಾರಿಯಾದ ಭಗವಂತನು 'ಎಲೈ ಬ್ರಾಹ್ಮಣನೇ, ಸತ್ಯನಾರಾಯಣೋ ವಿಷ್ಣುವಾಂಚಿತ ಫಲ ಪ್ರಧದಂ' ನಿಜವಾಗಿ ಸತ್ಯನಾರಾಯಣನೂ ವಿಷ್ಣುವೂ ಆತನೇ ಭಕ್ತರ ಪೂಜಕರ ಬಯಕೆಯನ್ನು ಪೂರೈಸುವನು. ಆದ್ದರಿಂದ ಆ ಸತ್ಯನಾರಾಯಣನನ್ನು ನೀನು ಭಕ್ತಿಪೂರ್ವಕವಾಗಿ ಪೂಜಿಸು. ಇದೊಂದು ಮೇಲಾದ ವ್ರತವು. ಈ ವ್ರತಾಚರಣೆಯಿಂದ ಮಾನವನ ಎಲ್ಲಾ ಬಗೆಯ ದುಃಖಗಳಿಂದ ಕೂಡಲೇ ಮುಕ್ತನಾಗುವನು. ಎಂದು ನುಡಿದು ಆ ವ್ರತದ ವಿಧಿ ವಿಧಾನಗಳನ್ನು ದರಿದ್ರನಾದ ಬ್ರಾಹ್ಮಣನಿಗೆ ತಿಳಿಸಿ ಆ ವೃದ್ಧ ಬ್ರಾಹ್ಮಣನ ರೂಪವನ್ನು ಕಳೆದು ಸತ್ಯನಾರಾಯಣನು ಅಲ್ಲಿಯೇ ಅಂತರ್ಧಾನನಾದನು.
ಆಗ ಬ್ರಾಹ್ಮಣನು ಆಶ್ಚರ್ಯಚಕಿತನಾಗಿ ಆ ಮುಡಿ ಹಾರುವನ ಹೇಳಿಕೆಯಲ್ಲಿ ಪೂರ್ಣ ವಿಶ್ವಾಸವುಳ್ಳವನಾದನು. ಆತನ ಹೇಳಿಕೆಯಂತೆ ನಾನು ಶ್ರೀ ಸತ್ಯನಾರಾಯಣ ವ್ರತವನ್ನು ಮಾಡಿಯೇ ತೀರುವೆನು ಎಂದು ಮನಸ್ಸಿನಲ್ಲಿ ನಿಶ್ಚಯಿಸಿದನು. ಬಡತನದಿಂದ ಪಾರಾಗಿ ಸುಖವುಂಟಾಗುವ ಕರ್ಮದ ಚಿಂತನೆಯಿಂದ 'ಕರ್ತಾಗಧಾಂ ನಲಬ್ಧಾ'. ಆತನಿಗೆ ರಾತ್ರಿಯಲ್ಲಿ ನಿದ್ರೆ ಬರಲಿಲ್ಲ. ಬೆಳಗಾಗುವ ಮಾರ್ಗವನ್ನು ಕಾಣುತ್ತಲೇ ರಾತ್ರಿಯನ್ನು ಕಳೆದನು. ಮರುದಿನ ಬೆಳಗಾಯಿತು. ಅದನ್ನೇ ನಿರೀಕ್ಷಿಸುತ್ತಿದ್ದ ಬ್ರಾಹ್ಮಣನು ಕೂಡಲೇ ಹಾಸಿಗೆಯಿಂದ ಮೇಲೆದ್ದನು. ಆ ಹೊತ್ತು ತಾನು ಸತ್ಯನಾರಾಯಣನ ವ್ರತವನ್ನು ಮಾಡುವೆನೆಂದು ನಿಶ್ಚಯಿಸಿದನು. ಹಾಗೆಂದು ಸಂಕಲ್ಪ ಮಾಡಿಕೊಂಡನು. ಪ್ರಾತಃವಿಧಿಗಳನ್ನು ಮುಗಿಸಿ ಭಿಕ್ಷೆಗಾಗಿ ಹೊರಟನು. 'ಭಾವೇನ ದೇವಂ' ಎಂಬಂತೆ ದೇವನು ಭಾವನೆಗೆ ತಕ್ಕಂತೆ ಅಂದು ಆ ಬ್ರಾಹ್ಮಣನಿಗೆ ದೈವವಶಾತ್ ಪ್ರತಿನಿತ್ಯಕ್ಕಿಂತಲೂ ಹೆಚ್ಚಿನ ಭಿಕ್ಷೆಯು ದೊರಕಿತು. ಆಗ ಆತನು ಸಂತುಷ್ಟಚಿತ್ತನಾಗಿ ಆ ಹಣವನ್ನು ವೆಚ್ಚಿಸಿ ಬಂಧುಬಾಂಧವರೊಡನೆ ಕೂಡಿಕೊಂಡು ಶ್ರೀ ಸತ್ಯನಾರಾಯಣ ವ್ರತವನ್ನು ನೆರವೇರಿಸಿದನು.
ಅಂದು ಮಾಡಿದ ವ್ರತದ ಪ್ರಭಾವದಿಂದ ಆ ಬ್ರಾಹ್ಮಣನು 'ಸರ್ವದುಃಖ ವಿಮುಕ್ತ'. ಎಲ್ಲಾ ದುಃಖಗಳಿಂದ ವಿಮುಕ್ತನಾದನು ಮತ್ತು 'ಸರ್ವ ಸಂಪತ್ ಮಯವಿತ' ಎಲ್ಲಾ ಸುಖ ಸಂಪತ್ತುಗಳನ್ನು ಹೊಂದಿದನು. ವ್ರತದ ಪ್ರಭಾವವನ್ನು ಮನಗಂಡ ಆ ಬ್ರಾಹ್ಮಣನು ಆ ದಿನದಿಂದ ಪ್ರತೀ ತಿಂಗಳಲ್ಲೂ ಉಪಾಯದಿಂದ ಮಹತ್ಫಲವನ್ನು ಕೊಡುವ ಆ ಉತ್ತಮ ವ್ರತವನ್ನು ತಪ್ಪದೇ ಮಾಡತೊಡಗಿದನು. ಆತನ ಸಂಚಿತ ಪಾಪಗಳೆಲ್ಲವೂ ಸುಟ್ಟುಹೋದವು. ಕೊನೆಗೆ ಆತನು ದುರ್ಲಭವಾದ ಮೋಕ್ಷವನ್ನು ಹೊಂದಿದನು. ಹಾಗೆಂದು ಭಗವಂತನು ನಾರದರಿಗೆ ಹೇಳಿ, ನಾರದ ಭೂಲೋಕದ ಜನರ ದುಃಖದ ನಿವೃತ್ತಿಗೆ ಸುಖ ಪ್ರಾಪ್ತಿಗೆ ಈ ಸತ್ಯನಾರಾಯಣ ವ್ರತವೇ ಉತ್ತಮ ಉಪಾಯವೆಂದು ಹೇಳಿದನು.' ಎಂದು ಸೂತಪುರಾಣಿಕನು ನುಡಿದನು.
ಆಗ ಆ ಋಷಿಗಳು ಆ ಬ್ರಾಹ್ಮಣನ ಮುಖದಿಂದ ಈ ವ್ರತದ ಪ್ರಭಾವವನ್ನು ಮತ್ತು ಯಾರು ಕೇಳಿದು? ಈ ವ್ರತವು ಭೂಮಿಯ ಮೇಲೆ ಹೇಗೆ ಪ್ರಸಿದ್ದಿ ಹೊಂದಿತು ಎಂಬ ಸಂಗತಿಗಳನ್ನು ಕೇಳಿ ತಿಳಿದುಕೊಳ್ಳಲು ನಮ್ಮಲ್ಲಿ ಭಕ್ತಿ ಉಂಟಾಗಿದೆ. ಅದಕ್ಕೆ ಎಲ್ಲಾ ಸಂಗತಿಗಳನ್ನು ವಿಸ್ತರಿಸಿ ಹೇಳಬೇಕೆಂದು ನುಡಿದರು. ಋಷಿಗಳ ಪ್ರಶ್ನೆಯನ್ನು ಕೇಳಿ ಸೂತಪುರಾಣಿಕನು 'ಋಷಿಗಳಿರಾ! ಈ ವ್ರತವನ್ನು ಭೂಮಿಯಲ್ಲಿ ಯಾರು ಮಾಡಿದ್ದಾರೆಂಬುದನ್ನು ಹೇಳುತ್ತೇನೆ ಕೇಳಿರಿ!'
ಮೊದಲು ದರಿದ್ರನಾಗಿದ್ದ ಬ್ರಾಹ್ಮಣನು ಒಂದು ದಿನ ತನ್ನ ಐಶ್ವರ್ಯಾನುಸಾರವಾಗಿ ಬಾಂಧವರಿಂದಲೂ ಆಪ್ತೇಷ್ಠರಿಂದಲೂ ಕೂಡಿಕೊಂಡು ಶ್ರೀ ಸತ್ಯನಾರಾಯಣ ಸ್ವಾಮಿಯ ವ್ರತವನ್ನು ಮಾಡತೊಡಗಿದನು. ಒಬ್ಬ ಕಟ್ಟಿಗೆ ಹೊರೆಯನ್ನು ಮಾರುವವನು ಆ ಬ್ರಾಹ್ಮಣನ ಮನೆಯ ಬಾಗಿಲಿಗೆ ಬಂದನು. ತಲೆಯ ಮೇಲಿನ ಹೊರೆಯನ್ನು ಮನೆಯ ಹೊರಗೋಡೆಗೆ ನಿಲ್ಲಿಸಿದನು. ನೀರಡಿಕೆಯಿಂದ ಪೀಡಿತನಾಗಿ ಆ ಬ್ರಾಹ್ಮಣನ ಮನೆಯ ಒಳಕ್ಕೆ ಹೋದನು. ಅಲ್ಲಿ ಆತನು ಮಾಡುತ್ತಿರುವ ಶ್ರೀ ಸತ್ಯನಾರಾಯಣ ವ್ರತವನ್ನು ನೋಡಿದನು. ಆಗ ಆತನಲ್ಲಿ ಭಕ್ತಿ ಅಂಕುರಿಸಿತು. ನಮಸ್ಕರಿಸಿದನು. ಪೂಜೆ ಮಾಡುತ್ತಿರುವ ಬ್ರಾಹ್ಮಣನನ್ನು ಕುರಿತು 'ಎಲೈ ಬ್ರಾಹ್ಮಣನೇ, ಕಿಮಿದಂ ಕ್ರಿಯೇ ತತ್ಪಯ, ನೀನು ಇದನ್ನೇನು ಮಾಡಲಾರಂಭಿಸಿರುವೆ? ಮತ್ತು ಇದನ್ನು ಮಾಡುವುದರಿಂದ ದೊರೆಯುವ ಫಲವನ್ನು ಇದನ್ನೆಲ್ಲಾ ನನ್ನ ಮುಂದೆ ಸವಿಸ್ತಾರವಾಗಿ ಹೇಳು' ಎಂದು ಬೇಡಿಕೊಂಡನು. ಕಟ್ಟಿಗೆ ಹೊರೆಯನ್ನು ಹೊರುವವನಲ್ಲಿ ಪೂಜೆಯ ಬಗ್ಗೆ ಉಂಟಾದ ಉತ್ಸುಕತೆಯನ್ನು ಕಂಡು ಬ್ರಾಹ್ಮಣನು 'ಎಲೈ ಕಾಷ್ಠ ಕೊತನೇ! ಎಲ್ಲರ ಮನೋರಥಗಳನ್ನು ಪೂರ್ಣಮಾಡಿಕೊಡುವಂತಹ ಶ್ರೀ ಸತ್ಯನಾರಾಯಣ ವ್ರತಾನ್ನು ನಾನು ಹೇಳುತಲಿರುವೆ. ಮೊದಲು ಅಷ್ಟ ದರಿದ್ರನಾದ ನನಗೆ ಈ ವ್ರತದ ಪ್ರಭಾವದಿಂದ ಈಗ ಧನ ಧಾನ್ಯ ಮುಂತಾದ ಸಿರಿಗಳೆಲ್ಲವೂ ದೊರಕಿದೆ ಎಂದನು. ನಂತರ ಕಟ್ಟಿಗೆ ಹೊರೆ ಮಾರುವವನು ಆ ಬ್ರಾಹ್ಮಣನ ಮುಖದಿಂದ ಆ ವ್ರತದ ವಿಧಿ ವಿಧಾನಗಳನ್ನು ತಿಳಿದುಕೊಂಡನು. ಸಂತೋಷದಿಂದ ಶ್ರೀ ಸತ್ಯನಾರಾಯಣನ ಪ್ರಸಾದವನ್ನು ತಿಂದನು. ನೀರು ಕುಡಿದನು. ಊಟ ಮಾಡಿ ತನ್ನ ಊರಿಗೆ ಹೊರಟು ಹೋದನು. ಅನಂತರ ಅವನು ಶುದ್ಧ ಮನಸ್ಸಿನಿಂದ ಶ್ರೀ ಸತ್ಯನಾರಾಯಣ ದೇವನನ್ನು ಸ್ಮರಿಸಿ 'ದೇವ ಸತ್ಯನಾರಾಯಣನೇ, ಈ ಊರಿನಲ್ಲಿ ಈ ಕಟ್ಟಿಗೆ ಹೊರೆಯನ್ನು ಮಾರಿಬಂದ ಹಣವನ್ನು ವೆಚ್ಚಮಾಡಿ ನಿನ್ನ ಸಂಬಂಧವಾದ ಶ್ರೀ ಸತ್ಯನಾರಾಯಣ ವ್ರತವನ್ನು ಆಚರಿಸುವೆನು.' ಎಂದು ಮನಮುಟ್ಟಿ ನಿರ್ಧರಿಸಿದನು.
ಅದೇ ನಿರ್ಧಾರಮನದಿಂದಲೇ ಕಟ್ಟಿಗೆ ಹೊರೆಯನ್ನು ಹೊತ್ತುಕೊಂಡು ಹೊರಟನು. ತನ್ನ ಗ್ರಾಮದೊಳಗಿನ ಸಿರಿವಂತರು ವಾಸಿಸುವ ಓಣಿಗೆ ಹೋದನು. ಅಲ್ಲಿ ತನ್ನ ಹೊರೆಯನ್ನು ಮಾರುತ್ತಿರಲು 'ಕಾಷ್ಠಾ ಮೂಲ್ಯಯಂ ಚ ದ್ವಿಗುಣಂ ಪ್ರಾಪ್ತವಾನಸಿ' ಅಂದು ಆತನಿಗೆ ದಿನಕ್ಕಿಂತ ಎರಡು ಪಟ್ಟು ಹೆಚ್ಚು ಹಣವು ಸಿಕ್ಕಿತು. ಆದ್ದರಿಂದ ಆತನು ಶ್ರೀ ಸತ್ಯನಾರಾಯಣನ ಪ್ರಭಾವದಿಂದ ಸಂತುಷ್ಟನಾದನು. ಅಲ್ಲದೇ ಪ್ರಸಾದಕ್ಕೆ ಬೇಕಾಗುವ ಬಾಳೆಹಣ್ಣು, ತುಪ್ಪ, ಸಕ್ಕರೆ, ಹಾಲು ಮತ್ತು ಗೋಧಿಯ ಸಜ್ಜಿಗೆಯನ್ನು ಕೊಂಡು ಅವನ್ನೆಲ್ಲ 'ಸಪಾದ' ಸರಿಯಾದ ಪ್ರಮಾಣದಲ್ಲಿ ಕೂಡಿಸಿ ಪ್ರಸಾದವನ್ನು ಮಾಡಿದನು. ತನ್ನ ಬಂಧು ಬಾಂಧವ ಸಹಿತನಾಗಿ ಶ್ರೀ ಸತ್ಯನಾರಾಯಣ ದೇವರನ್ನು ಪೂಜಿಸಿ ನೈವೇದ್ಯವನ್ನು ಸಮರ್ಪಿಸಿದನು. ಭಕ್ತಿಯಿಂದ ಕಥೆ ಕೀರ್ತನೆಗಳನ್ನು ಶ್ರವಣ ಮಾಡಿ ವ್ರತವನ್ನು ಮುಗಿಸಿದನು. 'ತದ್ ವ್ರತಸ್ಯ ಪ್ರಭಾವೇಣ ಧನ ಪುತ್ರಾನ್ವಿತೋ ಭವತ್ ಲೋಕೇ ಸುಖಂ ಭೂಕ್ತ ಚಾಂತೇ ಸತ್ಯ ಪೂರಂ ಯಂತಿತ್ವ' ಆ ವ್ರತದ ಪ್ರಭಾವದಿಂದ ಮಕ್ಕಳನ್ನೂ ಧನವನ್ನೂ ಪಡೆದನು. ಇಹಲೋಕದಲ್ಲಿ ಸುಖವನ್ನುಂಡು ಕೊನೆಗೆ ಸತ್ಯಪುರವನ್ನು (ಮೋಕ್ಷವನ್ನು) ಹೊಂದಿದನು. ಇಂತು ಶ್ರೀ ಸ್ಕಂದ ಪುರಾಣದ ರೇಖಾಖಂಡದಲ್ಲಿ ಹೇಳಲಾದ ಶ್ರೀ ಸತ್ಯನಾರಾಯಣನ ಕಥೆಯಲ್ಲಿ ಎರಡನೆಯ ಅಧ್ಯಾಯವು ಇಲ್ಲಿಗೆ ಮುಗಿಯಿತು ಎಂದು ಸೂತನು ಹೇಳಿದನು.
(ಮುಂದುವರೆಯುವುದು...) ಸಂಗ್ರಹ