ಶ್ರೀ ಸತ್ಯನಾರಾಯಣ ದೇವರ ಕಥೆ (ಅಧ್ಯಾಯ ೩)

ಶ್ರೀ ಸತ್ಯನಾರಾಯಣ ದೇವರ ಕಥೆ (ಅಧ್ಯಾಯ ೩)

ತರುವಾಯ ಸೂತಪುರಾಣಿಕನು ಶೋತೃಗಳಾದ ಋಷಿಶ್ರೇಷ್ಠರನ್ನು ಕುರಿತು ಶ್ರೀ ಸತ್ಯನಾರಾಯಣನ ಅತುಲ ಪ್ರಭಾವದ ಬಗೆಯನ್ನು ವ್ಯಕ್ತಪಡಿಸಲು ಒಂದು ಕಥೆಯನ್ನು ಹೇಳುವೆನು ಕೇಳಿರಿ ಎಂದು ಪ್ರಸ್ತಾಪಿಸಿ ಹೇಳಲು ಆರಂಭಿಸಿದನು. ಪೂರ್ವಕಾಲದಲ್ಲಿ ನಮ್ಮ ಆರ್ಯವರ್ತದೊಳಗೆ ಒಂದು ವಿಸ್ತೃತವಾದ ರಾಜ್ಯವನ್ನು ಉಲ್ಕಾಮುಖನೆಂಬ ಅರಸನು ಆಳುತ್ತಿದ್ದನು. ಆತನು 'ಜಿತೇಂದ್ರಿಯದ ಸತ್ಯವಾದಿ'. ಜಿತೇಂದ್ರಿಯನು ಇಂದ್ರಿಯವನ್ನು ಗೆದ್ದವನು. ಮನಸ್ಸನ್ನು ಅಂಕೆಯಲ್ಲಿ ಇರಿಸಿದವನು ಮತ್ತು ಸತ್ಯವಾದಿಯೂ ಆಗಿದ್ದನು. ಧರ್ಮನಿರತವಾದ ಅರಸನು ಪ್ರತಿ ನಿತ್ಯವೂ ತಪ್ಪದೇ ದೇವಸ್ಥಾನಗಳಿಗೆ ಹೋಗುವನು. ದೇವರ ದರ್ಶನ ಪಡೆಯುವನು, ದೀನ ಯಾಚಕರಿಗೂ, ಬ್ರಾಹ್ಮಣರಿಗೂ ದಾನ ಮಾಡಿ ಅವರನ್ನು ಸಂತೋಷಗೊಳಿಸುವನು. ಅದೇ ಈಶ್ವರ ಪೂಜೆ ಎಂದು ನಂಬುವನು. 'ಪ್ರಮಗ್ಧ' ಎಂಬ ಸುಶೀಲವತಿಯಾದ ಸಾಧ್ವಿಯು ಆತನ ಧರ್ಮಪತ್ನಿಯು. ಪತಿಪತ್ನಿಯರೀರ್ವರೂ ಆಗಿನ ಕಾಲಕ್ಕೆ ಆದರ್ಶಪ್ರಾಯರಾಗಿದ್ದರು. 'ರಾಜಕಾಲಸ್ಯ ಕಾರಣಂ' ಎಂಬಂತೆ ಇಂತಹ ರಾಜನ ಆಳ್ವಿಕೆಯಲ್ಲಿ ಪ್ರಜೆಗಳೆಲ್ಲರೂ ಸುಖಿಯಾಗಿದ್ದರು. ಅರಸ ಅರಸಿಯರೀರ್ವರೂ ಹಲವು ಬಗೆಯ ವ್ರತಗಳನ್ನು ಆಚರಿಸುವರು.

ಒಂದು ದಿನ ಅದೇ ಬುದ್ಧಿಯಿಂದ ಶ್ರೀ ಸತ್ಯನಾರಾಯಣ ವ್ರತವನ್ನು ಆಚರಿಸುವೆವೆಂದು ಸಂಕಲ್ಪಿಸಿದರು. ಬದ್ರಶೀಲಂ ಎಂಬ ನದೀ ತೀರಕ್ಕೆ ಬಂದಿಳಿದರು. ಪೂಜೆಯ ಸಾಮಗ್ರಿಗಳೆಲ್ಲವನ್ನೂ ಮುಂದಾಗಿಯೇ ಸಜ್ಜುಗೊಳಿಸಲಾಗಿತ್ತು. ಆದ್ದರಿಂದ ಅವರು ಶ್ರೀ ಸತ್ಯನಾರಾಯಣ ಪೂಜೆಯನ್ನು ಆರಂಭಿಸಿದರು. ಅಷ್ಟರಲ್ಲಿ ಒಬ್ಬ ಸಾಧುವು ಹೊಳೆಯ ಮಾರ್ಗವಾಗಿ ಬಂದಿಳಿದನು. ಅವನು ತನ್ನ ಹಾದಿಯಲ್ಲಿ ಬಹಳಷ್ಟು ಪದಾರ್ಥಗಳನ್ನು ತುಂಬಿಕೊಂಡು ವ್ಯಾಪಾರ ಮಾಡಲು ಮುಂದೆ ಹೊರಟಿದ್ದನು. ಅಲ್ಲಿಯೇ ನದಿ ದಂಡೆಯಲ್ಲಿ ವ್ರತವನ್ನು ಮಾಡುತ್ತಾ ಕುಳಿತ ರಾಜನನ್ನು ನೋಡಿದನು. ಈ ಪ್ರಕಾರವು ಎನೆಂಬುವುದನ್ನು ತಿಳಿದುಕೊಳ್ಳಲು ಕುತೂಹಲ ಉಂಟಾಯಿತು. ಅದಕ್ಕಾಗಿ ನಾವೆಯನ್ನು ಅಲ್ಲಿಯೇ ನಿಲ್ಲಿಸಿದನು. ತಾನು ರಾಜನು ಮಾಡುತಲಿದ್ದ ಕರ್ಮದತ್ತ ನೋಡಿದನು. ತನ್ನ ಕರ್ಮದಲ್ಲಿ ನಿರತನಾದ ಅರಸನನ್ನು ಕಂಡು ಆ ವ್ಯಾಪಾರಿಯು 'ಅರಸನೇ! ನಿಮಗೆ ನನ್ನ ನಮಸ್ಕಾರವು. ತಾವು ಇದೀಗ ಇಷ್ಟೊಂದು ಭಕ್ತಿಯುತವಾದ ಮನಸ್ಸಿನಿಂದ ಮಾಡುತ್ತಲಿರುವ ಕರ್ಮ ಅದಾವುದು? ಅದಾವ ಫಲವನ್ನು ಹೊಂದಲು ಈ ಕರ್ಮವನ್ನು ಮಾಡುತ್ತಲಿರುವಿರಿ? ಎಂಬುದನ್ನು ಕೇಳಲು ನಾನು ಬಯಸುವೆ. ಅದೆಲ್ಲವನ್ನೂ ಪ್ರಕಟಗೊಳಿಸುವ ಕೃಪೆಯಾಗಬೇಕೆಂದು ಕೇಳಿದನು. ವ್ಯಾಪಾರಿಯಾದ ಅವನ ನುಡಿಗಳನ್ನು ಕೇಳಿ ಅರಸನು 'ಪೂಜನಂ ಕ್ರಿಯತೇ ಸಾದ್ಯವೋ ವಿಷ್ಣೊರ ತೂಲತೇಜಸಹ' ಎಲೈ ಸಾಧುವೇ! ಈಗ ನಾನು ವ್ರತಸ್ಥನಾಗಿ ಮಹಾ ತೇಜಸ್ವಿಯಾದ ವಿಷ್ಣುವನ್ನು ಶ್ರೀಮನ್ನಾರಾಯಣನನ್ನು ಪೂಜಿಸುತಲಿರುವೆ. ಈ ವ್ರತದ ಫಲವಾಗಿ ಮಾನವನು ಧನ ಧಾನ್ಯ ಸಂತಾನಗಳ ನಿಧಿಯನ್ನು ಹೊಂದುವನು. ಬಹಳ ಹೇಳುವುದೇನು? ಮಾನವನ ಮನೋರಥಗಳೆಲ್ಲವೂ ಕೈಗೂಡುವುವು. ಇದು ನಿಶ್ಚಿತ ಎಂದು ಸಾಧುವಿಗೆ ವ್ರತದ ಪ್ರಭಾವವನ್ನು ವಿವರಿಸಿದನು.

ರಾಜನ ಮಾತುಗಳಿಂದ ಆ ವ್ಯಾಪಾರಿಯ ಮನದಲ್ಲಿ ಕೂಡಲೇ ಭಕ್ತಿ ಭಾವನೆಯು ಉದಯಿಸಿತು. ರಾಜನನ್ನು ಕುರಿತು 'ಅರಸನೇ ಈ ವ್ರತವನ್ನು ಯಾವ ರೀತಿಯಾಗಿ ಆಚರಿಸಬೇಕೆಂದು ಸವಿಸ್ತಾರವಾಗಿ ಹೇಳು'. 'ಮಮಕ್ಷೇಮ ಸಂತತಿ ನಾಸ್ತಿ' ತನಗೂ ಸಂತತಿ ಇಲ್ಲ. ಈ ವ್ರತದಿಂದ ಸಂತತಿ ಉಂಟಾಗುವುದೆಂದು ನಿಶ್ಚಿತವಿದ್ದರೆ ನಾನಾದರೂ ಈ ವ್ರತವನ್ನು ಮಾಡುವೆನು ಎಂದು ಹೇಳಿದನು. ಮತ್ತು ರಾಜನ ಮುಖದಿಂದ ಕರಟದ ವಿಧಾನವನ್ನೆಲ್ಲ ಅರಿತುಕೊಂಡನು ಮತ್ತು ಸಂತೋಷ ಮನಸ್ಕನಾಗಿ ವ್ಯಾಪಾರವನ್ನು ಅಲ್ಲಿಯೇ ನಿಲ್ಲಿಸಿ ಮನೆಗೆ ಬಂದನು. ಮನೆಯಲ್ಲಿರುವ ಲೀಲಾವತಿ ಎಂಬ ತನ್ನ ಪ್ರಿಯ ಪತ್ನಿಯನ್ನು ಕುರಿತು ಸಂತತಿಯನ್ನು ಕೊಡುವಂತಹ ಆ ವ್ರತವನ್ನು ತಿಳಿಸಿ ಅರಸನಿಂದ ಅರಿತುಕೊಂಡ ವಿಧಾನಗಳನ್ನೆಲ್ಲಾ ಹೇಳಿ 'ಪ್ರಿಯೇ, ನನಗೆ ಸಂತತಿಯಾದ ನಂತರ ನಾನಾದರೂ ಈ ವ್ರತವನ್ನು ಮಾಡುವೆನೆಂದು ಹೇಳಿದನು. ವ್ಯಾಪಾರಿ ಬಣಜಿಗ ತನ್ನ ಹೆಂಡತಿಯೊಡನೆ ಇಂತೂ ಮಾಡಿದ ಮೇಲೆ ಕೆಲ ದಿನಗಳು ಕಳೆದವು. ಲೀಲಾವತಿಯು ಗಂಡನೊಡನೆ ಕೂಡಿಕೊಂಡು ಸಂತೋಷದಿಂದ ಇರಹತ್ತಿದಳು. ನಾನಾದರೂ ಈ ವ್ರತವನ್ನು ಮಾಡುವೆನೆಂದು ಸಂಕಲ್ಪಿಸಿದ ಮಾತ್ರಕ್ಕೆ ಶ್ರೀ ಸತ್ಯನಾರಾಯಣನು ಸುಪ್ರೀತನಾಗಿ ಮಕ್ಕಳ ಫಲವನ್ನು ನೀಡಲು ಉದ್ಯುಕ್ತನಾದನೆಂಬಂತೆ ಆತನ ಅನುಗ್ರಹದಿಂದ 'ಗರ್ಭಿಣಿ ಸಾ ಬೇತಸ್ಯ ಭಾರ್ಯ' ಲೀಲಾವತಿಯು ಗರ್ಭಿಣಿಯಾದಳು. ಸಾಧುವು ಹೆಂಡತಿಗೆ ಉಂಟಾಗುವ ಬಯಕೆಗಳನ್ನೆಲ್ಲಾ ಪೂರೈಸಿದನು. ಬಸಿರ್ವತಿಗೆ ಮಾಡಬೇಕಾದ ಶಿಷ್ಠಾಚಾರಗಳೆಲ್ಲಾ ಸಾಗಿದವು. ಈ ರೀತಿಯಾಗಿ ಲೀಲಾವತಿಯ ಗರ್ಭಕ್ಕೆ ಒಂಭತ್ತು ತಿಂಗಳು ತುಂಬಿದವು. ಹತ್ತನೆಯ ತಿಂಗಳು ಪ್ರಾಪ್ತವಾಯ್ತು. ಬಳಿಕ ಒಂದು ಶುಭ ದಿನದಲ್ಲಿ ಕೋಮಲತನವೂ ಸುಂದರವೂ ಆದ ಒಂದು ಕನ್ಯಾರತ್ನವು ಜನಿಸಿತು. ಆಗ ದಂಪತಿಗಳಿಗೆ ಆದ ಆನಂದವು ಹೇಳತೀರದು. ಗಂಡಾಗಲಿ, ಹೆಣ್ಣಾಗಲಿ ಹುಟ್ಟಿದ ಕೂಸಿನಿಂದ ತಮ್ಮ ಬಂಜೆತನ ದೂರವಾಯಿತೆಂದು ಅವರು ಒಳ್ಳೆಯ ಉಲ್ಲಸಿತರಾದರು. ಮಗುವಿಗೆ ಜಾತಕ ಕರ್ಮ, ನಾಮಕರಣಾದಿ ಸಂಸ್ಕಾರಗಳು ಮಾಡಲ್ಪಟ್ಟವು. ಕೂಸಿಗೆ ಕಲಾವತಿ ಎಂದು ಹೆಸರಿಟ್ಟರು.

ಶುಕ್ಲ ಪಕ್ಷದ ಚಂದ್ರನಂತೆ ಆ ಮಗಳು ಬೆಳೆಯುತ್ತಾ ದೊಡ್ದವಳಾಗ ಹತ್ತಿದಳು. ಬಳಿಕ ಒಂದು ದಿನ ಲೀಲಾವತಿಯು ತನ್ನ ಪತಿಯನ್ನು ಕುರಿತು 'ಸ್ವಾಮಿಯೇ ಶ್ರೀ ಸತ್ಯನಾರಾಯಣ ದೇವನ ಕೃಪೆಯಿಂದ ನಮಗೆ ಸಂತತಿ ಲಭಿಸಿತು. ಕೂಸು ಬೆಳೆಯಿತು. ಮಗಳು ದೊಡ್ಡವಳಾದಳು. ಆದರೆ ನೀವು ಹಿಂದಕ್ಕೆ ಹರಕೆ ಹೊತ್ತಂತೆ ಇದುವರೆಗೆ ಶ್ರೀ ಸತ್ಯನಾರಾಯಣ ವ್ರತವನ್ನು ಆಚರಿಸಲಿಲ್ಲವಲ್ಲಾ' ಎಂದು ಸಂಕಲ್ಪಿಸಿದ ಸ್ಮರಣೆಯನ್ನು ಇತ್ತಳು. ಅದಕ್ಕೆ ಪ್ರತ್ಯುತ್ತರವಾಗಿ ಆ ಬಣಜಿಗನು 'ಪ್ರಿಯೇ! ಅಹುದು. ನಾನು ಬೇಡಿಕೊಂಡ ಹರಕೆಯು ನನ್ನ ಸ್ಮರಣೆಯಲ್ಲಿದೆ. ಆದರೆ ಈಗ ಕಾರ್ಯಬಾಹುಲ್ಯದ ಮೂಲಕ ಆ ವ್ರತವನ್ನು ಆಚರಿಸಲು ಸಾಧ್ಯವಿಲ್ಲ. "ಹರಕೆಗೆ ಹನ್ನೆರಡು ವರ್ಷ" ಎಂದು ಗಾದೆಯುಂಟು. ನಮ್ಮ ಕಲಾವತಿಗೆ ವರನನ್ನು ಶೋಧಿಸಿ ಬೇಗನೆ ವಿವಾಹವನ್ನು ಮಾಡಬೇಕಾಗಿದೆ. ಅದೇ ಸಮಯಕ್ಕೆ ಹರಕೆಯನ್ನು ಮುಗಿಸಿದರಾಯ್ತು' ಎಂದು ಬಾರ್ಯಂ ಮಸ್ಲಾಸ್ಯ ಹೆಂಡತಿಯನ್ನು ಸಮಾಧಾನಗೊಳಿಸಿದನು. ಕಾರ್ಯ ನಿಮಿತ್ತ ಪರ ಊರಿಗೆ ಹೋದನು. ಕಲಾವತಿ ಕನ್ಯೆಯು ತಂದೆಯ ಮನೆಯಲ್ಲಿ ದಿನದಿನಕ್ಕೆ ಬೆಳೆಯಹತ್ತಿದಳು. ಒಂದು ದಿನ ಗೆಳತಿಯರೊಡನೆ ಆಡುವ ತನ್ನ ಮಗಳನ್ನು ನೋಡಿ ಲಗ್ನಕ್ಕೆ ತಕ್ಕವಳಾದುದನ್ನು ಮನಗಂಡನು. ಕೂಡಲೇ ತನ್ನ ಪುರೋಹಿತನನ್ನು ಕರೆದು ಮಗಳಿಗಾಗಿ ಕುಲಶೀಲ ರೂಪಗಳಿಂದ ಉತ್ತಮನಾದ ವರನನ್ನು ಗೊತ್ತುಪಡಿಸು ಎಂದು ಹೇಳಿ ಕಳುಹಿಸಿದನು. ಸಾಧುವಿನಿಂದ ಆಜ್ಞಾಪಿತನಾದ ಪುರೋಹಿತನು ತಿರುಗುತ್ತಾ ತಿರುಗುತ್ತಾ ಕಾಂಚನ ಎಂಬ ಪಟ್ಟಣಕ್ಕೆ ಹೋದನು.

ಅಲ್ಲಿ ಒಬ್ಬ ವಣಿಕ ಪುತ್ರನನ್ನು ವರನನ್ನಾಗಿ ಆರಿಸಿದನು. ಅವನನ್ನು ಕರೆತಂದು ಸಾಧುವಿಗೆ ತೋರಿಸಿದನು. ಕುಲೀನನೂ ಆದ ಚೆಲುವನೂ ಆದ ಎಲ್ಲ ಸದ್ಗುಣಗಳಿಂದ ಪೂರ್ಣನೂ ಆದ ವಣಿಕಪುತ್ರನನ್ನು ನೋಡಿ ಸಾಧುವು ಸಂತೋಷಭರಿತನಾದನು. ತನ್ನ ಜ್ಞಾತಿಗಳಿಂದ ಬಾಂಧವರಿಂದಲೂ ಕೂಡಿಕೊಂಡು ವಿಧಿಯುಕ್ತ ಮಾರ್ಗದಿಂದ ಮಗಳನ್ನು ವಣಿಕಪುತ್ರನಿಗೆ ಮಾಡುವೆ ಮಾಡಿಕೊಟ್ಟನು. ವಿವಾಹ ಸಮಾರಂಭವು ಬಣಜಿಗನ ಸಿರಿವಂತಿಕೆಗೆ ತಕ್ಕಂತೆ ಒಳ್ಳೆಯ ಸಡಗರದಿಂದ ನೆರವೇರಿತು. ಮದುವೆಗಾಗಿ ಅಪರಿಮಿತ ಧನವನ್ನು ವ್ಯಯಿಸಿದನು. ಆದರೆ ಮನೆಯಲ್ಲಿ ಭಾಗ್ಯವು ಹೆಚ್ಚಾಗುತ್ತಾ ಹೋದಂತೆ ಆ ಐಶ್ವರ್ಯದ ಮದದಲ್ಲಿ 'ದಶ್ವ ಸ್ತೇನಂ ವಿಸ್ಮಯೇ ಮೃತ ಮುಕ್ತಮಂ' ಮಗಳ ಲಗ್ನದ ಕಾಲಕ್ಕಾದರೂ ಆ ಸಾಧುವು ಶ್ರೀ ಸತ್ಯನಾರಾಯಣನ ವ್ರತವನ್ನು ಮರೆತುಬಿಟ್ಟನು. 'ತೇನ ರೂಪ್ಯೋಭ ಕ್ರಬಂ' ಆದ್ದರಿಂದ ಶ್ರೀ ಸತ್ಯನಾರಾಯಣನು ಸಿಟ್ಟಾದನು. ಮುಂದೆ ಕೆಲಕಾಲದ ನಂತರ ತನ್ನ ವ್ಯವಹಾರ ಕರ್ಮದಲ್ಲಿ ಕುಶಲನಾದ ಸಾಧುವು ಬ್ಯಾಪಾರ ಮಾದುವುದಕಾಗಿ ಅಳಿಯನ ಜತೆಗೂಡಿ ಸಿಂಧೂ ನದಿ ತೀರದಲ್ಲಿರುವ ರತ್ನಸಾರವೆಂಬ ಪಟ್ಟಣಕ್ಕೆ ಹೋದನು. ಅಲ್ಲಿ ಕೆಲವು ದಿನಗಳವರೆಗೆ ವ್ಯಾಪಾರ ಮಾಡಿದನು. ಅಲ್ಲಿ ಹೇರಳ ಹಣವನ್ನು ಸಂಪಾದಿಸಿಕೊಂಡು ಸಾಧುವು ಆತನ ಅಳಿಯನು ಇಬ್ಬರೂ ಅಲ್ಲಿಂದ ಹೊರಟರು.

ಅತೀ ಮನೋಹರನಾದ ಚಂದ್ರಕೇತು ರಾಜನ ರಾಜಧಾನಿಗೆ ವ್ಯಾಪಾರ ಮಾಡುವುದಕ್ಕಾಗಿ ಬಂದರು. ಅಲ್ಲಿರುವಾಗ ಆ ಬಣಜಿಗನಿಗೆ ಒಂದು ಸ್ವಪ್ನ ದೃಷಾಂತವಾಯಿತು. ಕನಸಿನಲ್ಲಿ ಅವನಿಗೆ ಶ್ರೀ ಸತ್ಯನಾರಾಯಣನು ಕಾಣಿಸಿಕೊಂಡನು ಮತ್ತು ಆ ದೇವನು ಸಾಧುವನ್ನು ಕುರಿತು 'ಎಲೈ ಸಾಧುವೇ! ನೀನು ವ್ರತ ಮಾಡುವ ಪ್ರತಿಜ್ಞೆಯನ್ನು ಮಾಡಿ ಈಗ ಭ್ರಷ್ಟ ಪ್ರತಿಜ್ಞಾನಾಗಿರುವೆ. ಅದಕ್ಕಾಗಿ ರಾಜಕಾಲಸ್ಯ ಜಾಸ್ಯ ಮಹಾದುಃಖ ಭವಿಷ್ಯತಿಃ. ಭಯಂಕರವಾಗಿಯೂ ಕಠಿಣವಾಗಿಯೂ ಇರುವ ಮಹಾ ದುಃಖವೂ ಉಂಟಾಗಲಿ.' ಎಂದು ಶಾಪವಿತ್ತನು. ಬಳಿಕ ಸಾಧುವು ಸ್ವಪ್ನದಿಂದ ಎಚ್ಚೆತ್ತು ಬಳಿಕ ಅವನ್ನು ನಂಬಲಾಗದೆ ಎಂದಿನಂತೆ ತನ್ನ ವ್ಯವಹಾರವನ್ನು ಸಾಗಿಸುತಲಿದ್ದನು. ಅನಂತರ ಕೆಲಕಾಲದ ಮೇಲೆ ಚಂದ್ರಕೇತು ರಾಜನಲ್ಲಿ ರಾಜಧಾನಿಯಲ್ಲಿ ಕಳವು ಸಂಭವಿಸಿತು. ಒಬ್ಬ ಕಳ್ಳನುರಾಜನ ದ್ರವ್ಯವನ್ನು ಕದ್ದು ಸಾಧು ಮತ್ತು ಸಾಧುವಿನ ಅಳಿಯನಿರುವಲ್ಲಿಗೆ ಓಡಿಬಂದನು. ಅಷ್ಟರಲ್ಲಿ ಆ ಕಳ್ಳನನ್ನು ಹಿಡಿಯುವುದಕ್ಕಾಗಿ ಆತನ ಹಿಂದಿನಿಂದಲೇ ರಾಜದೂತರು ಬೆನ್ನಟ್ಟಿ ಬಂದರು. ತನ್ನನ್ನು ಬೆನ್ನಟ್ಟಿದ ರಾಜದೂತರ ಸುಳಿವನ್ನು ಕಂಡು ಅಂಜಿ ಕಳ್ಳನು ತಾನು ತಂದ ರಾಜದ್ರವ್ಯವನ್ನು ಅಲ್ಲಿಯೇ ಬಿಟ್ಟು ಬಹು ಬೇಗನೆ ಅಡಗಿಕೊಂಡನು. ರಾಜದೂತರು ಸಾಧುವಿದ್ದ ಸ್ಥಳಕ್ಕೆ ಬರಲು ಅಲ್ಲಿ ರಾಜದ್ರವ್ಯವು ಕಾಣಿಸಿತು. ಆದ್ದರಿಂದ ಅವರೇ ಕಳ್ಳರೆಂದು ಭಾವಿಸಿ ಅವರಿಬ್ಬರನ್ನೂ ಹೆಡೆಮುರಿಬಿಗಿದು ಕಟ್ಟಿ ರಾಜನೆಡೆಗೆ ಒಯ್ದರು. ರಾಜದೂತರು ಅವರಿಬ್ಬರನ್ನೂ ನಿಲ್ಲಿಸಿ ಸಂತೋಷದಿಂದ ಇದೋ ಪ್ರಭುವೇ! ಇವೇ ಕಳುವಿನಿಂದ ಮಾಯವಾದ ದ್ರವ್ಯವು. ಇವರೇ ಈ ದ್ರವ್ಯವನ್ನು ಕದ್ದ ಕಳ್ಳರು. ಇವರಿಗೆ ಅದ್ಯಾವ ಶಿಕ್ಷೆಯನ್ನು ವಿಧಿಸಬೇಕು? ವಿಚಾರ ಮಾಡಿ ನಮಗೆ ಅಪ್ಪಣೆ ದಯಪಾಲಿಸಬೇಕೆಂದು ಕೇಳಿಕೊಂಡರು. ಅರಸನು ಅವರ ಬಗ್ಗೆ ವಿಚಾರವೇ ಮಾಡಲಿಲ್ಲ. ಹಾಗೆಯೇ ಆಜ್ಞಾಪಿಸಿದನು. ಆತನ ಆಜ್ಞೆಯಂತೆ ರಾಜದೂತರು ಆ ಬಣಜಿಗರನ್ನು ತೀರ ಕಠಿಣಮಾರ್ಗದಲ್ಲಿರುವ ಒಂದು ಸೆರೆಮನೆಯಲ್ಲಿ ಒಯ್ದು ಇಟ್ಟರು. ಸಾಧುವು ತಾವು ಕಳ್ಳರಲ್ಲವೆಂದು ರಾಜನಿಗೆ ಪರಿಪರಿಯಾಗಿ ಕೇಳಿಕೊಂಡನು. ಆದಾಗ್ಯೂ ಅರಣ್ಯರೋಧನವಾಯ್ತು. ರಾಜನು ತನ್ನ ದ್ರವ್ಯದೊಂದಿಗೆ ಅವರ ದ್ರವ್ಯವನ್ನೂ ತನ್ನ ಭಂಡಾರಕ್ಕೆ ಕಳುಹಿಸಿದನು.

ಆಗ ಸಾಧುವು ತಾನು ಶ್ರೀ ಸತ್ಯನಾರಾಯಣ ದೇವರ ಸಂಕಲ್ಪ ಮಾಡಿ ವ್ರತ ಮಾಡದೇ ಭ್ರಷ್ಟನಾದೆನಲ್ಲಾ? ದೇವನೇ ಕೋಪಿಸಿಕೊಂಡಮೇಲೆ ನಮ್ಮನ್ನು ಕಾಪಾಡುವವರಾರು? ಎಂದು ಪಶ್ಚಾತ್ತಾಪದಿಂದ ತಳಮಳಗೊಂಡನು. ಕಳವು ಮಾಡದೇ ಸಾಧುವು ಮತ್ತು ಆತನ ಅಳಿಯನು ಶಿಕ್ಷೆಗೊಳಗಾಗಬೇಕಾಯ್ತು.

ಇತ್ತ ಸಾಧುವಿನ ಹೆಂಡತಿ, ಮಗಳು ದುಃಖಪೂರಿತರಾದರು. ಮನೆಯೊಳಗಿನ ದ್ರವ್ಯವೆಲ್ಲವೂ ಕಳುವಾಗಿದ್ದರಿಂದ ಅವರು ಅನ್ನಾನ್ನಗತಿತರಾದರು. ಆದಿ ವ್ಯಾಧಿಗಳಿಂದ ಪೀಡೆಗೊಂಡರು. ಹಸಿವೆ ನೀರಡಿಕೆಗಳಿಂದ ಕಣಗಾಲ ಸ್ಥಿತಿಯನ್ನು ಹೊಂದಿದರು. ಆಹಾರಹೀನತೆಗಳಿಂದ ಅವರಿಬ್ಬರೂ ಭಿಕ್ಷಾವೃತ್ತಿಯನ್ನು ಅವಲಂಬಿಸಬೇಕಾಯ್ತು. ಕಲಾವತಿಯಂತಹ ಹರೆಯದವಳು ಮತ್ತು ಸಿರಿವಂತಿಕೆಯಲ್ಲಿ ಬೆಳೆದವಳು ಹೊಟ್ಟೆಯ ಕಿಚ್ಚನ್ನು ತಣಿಸಲು ಭಿಕ್ಷೆಗಾಗಿ ಮನೆಮನೆಗೆ ತಿರುಗಹತ್ತಿದಳು. ಇಂತೂ ಸಾಧುವಿನ ಹೆಂಡತಿಯೂ ಮಗಳೂ ಅಷ್ಟದರಿದ್ರರಾದರು. ಸಾಧುವೂ ಮತ್ತು ಅಳಿಯನೂ ಸೆರೆಮನೆವಾಸಿಗಳಾಗಿಯೂ ದುಃಖದಿಂದ ಕಾಲಕಳೆಯಹತ್ತಿದರು. ಇಂತಹ ಸಹಿಸಲಸಾಧ್ಯವಾದ ಅಪವಾದ ಆ ಸಿರಿವಂತಿಕೆಯ ಕುಟುಂಬಕ್ಕೆ ಒದಗಿತೆಂದು ಭಾವಿಸಿದನು.

ಒಂದು ದಿನ ಕಲಾವತಿಯು ಹಸಿವೆಯಿಂದ ಬಹಳ ಬಳಲಿ ಒಬ್ಬ ಬ್ರಾಹ್ಮಣನ ಮನೆಯ ಬಾಗಿಲಿಗೆ ಹೋದಳು. ಭಿಕ್ಷೆಯ ಬೇಡಿಕೆಗಾಗಿ ಕೂಗಬೇಕೆನ್ನುವಷ್ಟರಲ್ಲಿ ಬ್ರಾಹ್ಮಣನು ಮಾಡುತ್ತಿರುವ ಶ್ರೀ ಸತ್ಯನಾರಯಣನ ವ್ರತವು ಆಕೆಯ ಕಣ್ಣಿಗೆ ಬಿತ್ತು. ಕೂಡಲೇ ಭಕ್ತಿಯುತರಾಗಿ ಅಂತಃಕರಣ ಉಳ್ಳವರಾಗಿ 'ಉಪವಿಶ್ವ ಕಥಾಯಂ ರಾತ್ರೋ ಗೃಹಂ ಪ್ರತಿ' ಅಲ್ಲಿ ಸ್ವಲ್ಪ ಹೊತ್ತು ಕುಳಿತಳು. ದೈವೀ ಪ್ರಭಾವದಿಂದ ಕಥೆಯನ್ನು ಕೇಳಿದಳು. ಶ್ರೀ ಸತ್ಯನಾರಾಯಣನನ್ನು ಮನಸ್ಸಿನಲ್ಲಿ ಪ್ರಾರ್ಥಿಸಿದಳು. ಭಕ್ತಿಯಿಂದ ಪ್ರಸಾದವನ್ನು ಭಕ್ಷಿಸಿದಳು. ರಾತ್ರಿಯೂ ಬಹಳವಾದ ಪ್ರಯುಕ್ತ ಹೊರಟು ಮನೆಗೆ ಬಂದಳು. ಆಗ ಲೀಲಾವತಿಯು ಮಗಳನ್ನು ಕಂಡು 'ಮಗಳೇ! ಇಷ್ಟು ರಾತ್ರಿಯ ಹೊತ್ತಿಗೆ ನೀನು ಅದೆಲ್ಲಿ ಕುಳಿತಿದ್ದಿ? ನಿನ್ನ ಮನದ ಬಯಕೆಗಳೇನು?' ಎಂದು ಕೇಳಿದಳು. ಕಲಾವತಿಯು 'ತಾಯೀ! ನಾನು ಇದುವರೆಗೂ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಕುಳಿತಿದ್ದೆನು. ಅಲ್ಲಿ ಬ್ರಾಹ್ಮಣನು ಒಂದು ವ್ರತವನ್ನು ಮಾಡುತಲಿದ್ದನು. ಅದಕ್ಕೆ ಶ್ರೀ ಸತ್ಯನಾರಾಯಣವ್ರತವೆಂದು ಹೇಳುವರಂತೆ. ಅದು ಮನದ ಬಯಕೆಗಳನ್ನು ಪೂರ್ಣ ಮಾಡಲು ಸಮರ್ಥವಾದುದಂತೆ. ನಾನು ಆ ಪೂಜೆಯ ಕ್ರಮವನ್ನು ಕಣ್ತುಂಬ ನೋಡಿದೆ.' ಎಂದು ಹೇಳಿ ತನ್ನ ತಾಯಿಗೂ ತುಸು ಪ್ರಸಾದವನ್ನು ಕೊಟ್ಟಳು. ಈ ಸಂಗತಿಯನ್ನು ಕೇಳಿ ಲೀಲಾವತಿಗೆ ಒಳ್ಳೆಯ ಹರ್ಷವಾಯಿತು. ತನ್ನ ಪತಿಯು ಹರಕೆ ಹೊತ್ತ ವ್ರತವು ಇದೇ ಆಗಿರಬೇಕೆಂದು ಭಾವಿಸಿ ತಾವೂ ಅದನ್ನು ಕೈಗೊಂಡರು.

ತಾವು ಕೈ ಹಿಡಿದಿರುವ ವ್ರತವು ಇದೇ ಆಗಿರಬೇಕೆಂದು ಕಲಾವತಿಯ ಲಗ್ನವಾದರೂ ಆಚರಿಸಪಡಲಿಲ್ಲವೆಂದು ಅವಳ ಸ್ಮರಣೆಗೆ ಬಂದಿತು. ದೈವೀಕೊಪದಿಂದ ತನ್ನ ಪತಿ ಹಾಗು ಅಳಿಯ ಶಿಕ್ಷೆ ಅನುಭವಿಸುತ್ತಲಿರುವರೆಂದು ತಮ್ಮ ಐಶ್ವರ್ಯವೆಲ್ಲಾ ನಾಶವಾಗಿ ಭಿಕ್ಷಾವೃತ್ತಿಗೆ ಇಳಿದೆವೆಂದು ನಿಶ್ಚಿತ ತಿಳುವಳಿಕೆಯು ಅವಳಲ್ಲಿ ಉಂಟಾಯಿತು. ಆದ್ದರಿಂದ ಅವಳು ತಳಮಳಗೊಂಡಳು. ಕೂಡಲೇ ಪೂಜೆಯ ಮತ್ತು ಪ್ರಸಾದದ ಸಾಮಗ್ರಿಗಳನ್ನು ತಂದಳು. ಒಳ್ಳೆಯ ಸಂತೋಷದಿಂದ ತಾನೂ ತನ್ನ ಭಾಂದವರಿಂದಲೂ ಜ್ಞಾತಿಯ ಜನರಿಂದಲೂ ಭಕ್ತಿಪೂರ್ವಕವಾಗಿ ಶ್ರೀ ಸತ್ಯನಾರಾಯಣನ ಪೂಜೆ ಮಾಡಿದಳು. ಅಲ್ಲಿ ಶ್ರೀ ಸತ್ಯನಾರಾಯಣನನ್ನು ಕುರಿತು 'ದೇವಾ! ನನ್ನ ಗಂಡನೂ ಮತ್ತು ಅಳಿಯನೂ ಬೇಗ ಬರಲಿ. ಅವರು ಮಾಡಿದ ಅಪರಾಧವನ್ನು ಕ್ಷಮಿಸು' ಎಂದು ಬೇಡಿಕೊಂಡಳು. ಸಾಧುವಿನ ಹೆಂಡತಿಯಾದ ಲೀಲಾವತಿಯೂ ಅಂತಃಕರಣದಿಂದ ಮಾಡಿದ ಪೂಜೆಯ ವ್ರತದಿಂದ ಶ್ರೀಮನ್ನ್ನಾರಾಯಣನು ಸಂತುಷ್ಟನಾದನು. ಆ ಕೂಡಲೇ ಚಂದ್ರಕೇತು ರಾಜನ ಸ್ವಪ್ನದಲ್ಲಿ ಹೋಗಿ 'ರಾಜನೇ! ನೀನು ಕಾರಾಗೃಹದಲ್ಲಿ ಇತ್ತ ಇಬ್ಬರು ಬಣಜಿಗರನ್ನು ಬೆಳಗಾದ ಕೂಡಲೇ ಮುಕ್ತಮಾಡು. ನೀನು ತೆಗೆದುಕೊಂಡ ಅವರ ದ್ರವ್ಯವನ್ನು ಅವರಿಗೇ ಕೊಡು. ಧನಲಾಭದಿಂದ ನೀನು ಹಾಗೆ ಮಾಡದೇ ಹೋದರೆ "ನಾಶಯಾಮಿ ಸ್ವರಾಜ್ಯ ಧನ ಪುತ್ರಕಂ' ರಾಜ್ಯ ಐಶ್ವರ್ಯ ಹಾಗು ಮಕ್ಕಳೊಂದಿಗೆ ನಿನ್ನನ್ನು ನಾಶಮಾಡಿಬಿಡುವೆ.' ಎಂದು ಹೇಳಿ ಅದೃಶ್ಯನಾದನು.

ಅನಂತರ ರಾಜನು ಮುಂಜಾವಿನಲ್ಲಿ ಎದ್ದು ಸೃಜನರಿಂದ ಕೂಡಿಕೊಂಡು ತನ್ನ ಸ್ವಪ್ನ ದೃಷ್ಟಾಂತವನೆಲ್ಲಾ ತಿಳಿಸಿದನು. ಅನಂತರ ಬಣಜಿಗರು ರಾಜನಿಗೆ ನಮಸ್ಕರಿಸಿ ತಮ್ಮ ಹಿಂದಿನ ವೃತ್ತಾಂತವನ್ನೆಲ್ಲ ತಿಳಿಸಿದರು. ಬಳಿಕ ರಾಜನು ಅವರಿಗೆ ಏನೋ ನಿಮ್ಮ ದುರ್ದೈವದಿಂದ ಇಂತಹ ದುಃಖವನ್ನು ಅನುಭವಿಸಬೇಕಾಯ್ತು. ಇನ್ನು ಮುಂದೆ ನಿಮಗೆ ಏನೂ ಭಯವಿಲ್ಲವೆಂದು ಹೇಳಿ ಅವರಿಬ್ಬರ ಸಂಕೋಲೆಯನ್ನು ಕಡಿಸಿದನು. ಕ್ಷ್ಹೌರಕರ್ಮವನ್ನು ಮಾಡಿಸಿದನು. ವಸ್ತ್ರಾಲಂಕಾರ ನೀಡಿದನು. ಅವರನ್ನು ಸಂತೋಷಗೊಳಿಸಿ ಒಳ್ಳೆಯ ಮಾತುಗಳಿಂದ ಸಮಾಧಾನಪದಿಸಿದನು. ತಾನು ತೆಗೆದುಕೊಂಡ ಅವರ ದ್ರವ್ಯದಲ್ಲಿ ಅಷ್ಟೇ ದ್ರವ್ಯವನ್ನು ಹೆಚ್ಚಾಗಿ ಹಾಕಿ 'ಸಾಧುವೇ! ಇನ್ನು ನೀನು ಮನೆಗೆ ಹೋಗು.' ಎಂದು ಆಜ್ಞಾಪಿಸಿದನು. ರಾಜನು ಹೀಗೆ ಹೇಳುತ್ತಾನೆಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಆದರೆ ಆ ದೈವೀ ಕ್ಷೋಭೆಗೆ ಯಾವುದು ತಾನೇ ಅಸಾಧ್ಯ?ಅದೆಷ್ಟು ತಾನೇ ಅವಕಾಶ?

'ಸುಖಾಸ್ಯಾ ನಂತರಂ ದುಃಖಂ ದುಃಖಾಸ್ಯಾನಂತರ ಸುಖಂ" ಅಂದರೆ, ಈ ಪ್ರಪಂಚದಲ್ಲಿ ಸುಖದ ಹಿಂದೆ ದುಃಖವೂ ದುಃಖದ ಹಿಂದೆ ಸುಖವೂ ಬರುವುದುಂಟು. ಸುಖ, ದುಃಖ, ಚಕ್ರದಂತೆ ಒಂದರ ಹಿಂದೆ ಒಂದು ಬರುವುವು. ಸಂಸಾರವು ಸುಖದುಃಖದ ಕಲಸುಮೆಲೋಗರವೆಂದು ಹೇಳುವುದುಂಟು. ಇದೆಲ್ಲವೂ ನಿಜವೇ. ಈವರೆಗೆ ದುಃಖಸಾಗರದಲ್ಲಿ ಮುಳುಗಿದ್ದ ಸಾಧುವಿನ ಕುಟುಂಬವು ಇನ್ನು ಮುಂದೆ ಸುಖವನ್ನು ಕಾಣುವ ಯೋಗ ಪರಮಾತ್ಮನ ಬಯಕೆಯಿಂದ ಒದಗಿಬಂತು.

ಅಲ್ಲಿ ಸಾಧುವು ರಾಜನಿಗೆ ನಮಸ್ಕರಿಸಿ 'ರಾಜನೇ! ನಿನ್ನ ಅನುಗ್ರಹದಿಂದ ನಾವು ಇನ್ನು ಹೋಗಿ ಬರುವೆವು.' ಎಂದು ಹೇಳಿದರು.ಊರಿಗೆ ತೆರಳಲು ಅವರೀರ್ವರೂ ಹೊರಟರು. ಮಾರ್ಗ ಕ್ರಮಿಸತೊಡಗಿತು. 'ಋಷಿಶಿಷ್ಯರೇ! ಆ ಸಾಧು ವೈಶ್ಯನ ಕಥೆಯು ಇಲ್ಲಿಗೇ ಮುಗಿಯಲಿಲ್ಲ. ಅದನ್ನೇ ಮುಂದುವರಿಸಿ ಹೇಳುವೆ ಕೇಳಿರಿ' ಎಂದು ಸೂತಪುರಾಣಿಕನು ಹೇಳಿದ್ದನ್ನೇ ಸ್ಕಂದ ಪುರಾಣದ ರೇಖಾ ಖಂಡದಲ್ಲಿ ಉಲ್ಲೇಖಿತವಾಗಿದ್ದ ಸಂಗತಿಗಳನ್ನೊಳಗೊಂಡ ಮೂರನೇ ಅಧ್ಯಾಯವು ಮುಗಿಯಿತು.

(ಮುಂದುವರೆಯುವುದು) ಸಂಗ್ರಹ