ಶ್ರೇಷ್ಟ ಕರ್ಮ
ಇಂದು ಶ್ರೇಷ್ಠ ಕರ್ಮದ ಬಗ್ಗೆ ತಿಳಿದುಕೊಳ್ಳೋಣ. ಮೊದಲಿಗೆ ಕರ್ಮ ಎಂದರೆ ಕೆಲಸ. ನಮ್ಮ ಸುತ್ತಮುತ್ತ ಜಗತ್ತು, ವಸ್ತು ಮತ್ತು ಪ್ರಾಣಿಗಳನ್ನು ನೋಡಿ. ಸೂರ್ಯ, ಚಂದ್ರ, ಗ್ರಹ, ನಕ್ಷತ್ರ ಎಲ್ಲಾ ಚಲಿಸುತ್ತವೆ. ಚಲನೆಯೂ ಕೂಡ ಕೆಲಸವೇ. ಚಲನೆಯು ದೇಶ ಮತ್ತು ಕಾಲಕ್ಕೆ ಒಳಪಟ್ಟಿದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋದರೆ ದೇಶ ಚಲನೆ, ಸ್ಥಾನಾಂತರ ಚಲನೆ ಎನ್ನುತ್ತೇವೆ. ಹಾಗೆ ಪ್ರತಿ ಪ್ರಾಣಿ, ವಸ್ತು, ಪ್ರತಿ ಕ್ಷಣ ರೂಪ, ಬಣ್ಣದಲ್ಲಿ ಬದಲಾಗುತ್ತದೆ. ಇದಕ್ಕೆ ಕಾಲಿಕ ಚಲನೆಯನ್ನುತ್ತೇವೆ.
ಈ ಚಲನೆ ಅಂದರೆ ಕೆಲಸ. ಚಲನೆ ಇರುವುದರಿಂದ ನಿಸರ್ಗದಲ್ಲಿ ಹೊಸತು ಹೊಸತು ಕಾಣಬರುತ್ತದೆ. ಹಾಗೆ ನಮ್ಮ ದೇಹದಲ್ಲೂ ಕೆಲಸ ನಿರಂತರವಾಗಿ ಸಾಗಿದೆ. ಹೃದಯ, ಶ್ವಾಸಕೋಶ ನೂರು ವರ್ಷ ಕೆಲಸ ಮಾಡುತ್ತವೆ. ಹಾಗಾಗಿ ಕೆಲಸ ಇಲ್ಲದೆ ಜೀವನ ಇಲ್ಲ. ದೈಹಿಕವಾಗಿ ಕೆಲಸ ಮಾಡುತ್ತೇವೆ. ಮಾನಸಿಕವಾಗಿ ಕೆಲಸ ಮಾಡುತ್ತೇವೆ. ಬೌದ್ಧಿಕವಾಗಿ ಕೆಲಸ ಮಾಡುತ್ತೇವೆ. ಭಾವನಾತ್ಮಕವಾಗಿ ಕೆಲಸ ಮಾಡುತ್ತೇವೆ. ಹಾಗೆ ನೋಡುವುದು, ಕೇಳುವುದು, ರುಚಿಸುವುದು, ವಾಸನೆ ಗ್ರಹಿಸುವುದು, ಸ್ಪರ್ಶಿಸುವುದು, ನಡೆಯುವುದು, ಹಿಡಿಯುವುದು ಎಲ್ಲಾ ಕೆಲಸವೆ. ಹಾಗಾದರೆ ಶ್ರೇಷ್ಠ ಕೆಲಸ ಯಾವುದು? ನಾವೆಲ್ಲ ತಿಳಿದುಕೊಂಡಿರುವುದು ಎಸಿ ಕೊಠಡಿಯಲ್ಲಿ ಕುಳಿತು, ಹೆಚ್ಚು ಸಂಬಳ ಬರುವುದು. ತಿರುಗಾಡಲು ವಾಹನ, ಸೇವಕರು ಇರುವ ಕೆಲಸ ಶ್ರೇಷ್ಠ ಕೆಲಸ ಎಂದು ಭಾವಿಸಿದ್ದೇವೆ. ಈ ಭಾವನೆ ನಮ್ಮ ಜೀವನ ಹಾಳು ಮಾಡುತ್ತದೆ.
ಒಂದು ಕಥೆ. ಇದು ನಡೆದಿದ್ದು ಎಂದು ಹೇಳುತ್ತಾರೆ. ಒಂದು ಊರಿನಲ್ಲಿ ಒಬ್ಬ ಯಜಮಾನ ಇದ್ದನು. ಆತನಿಗೆ ಒಬ್ಬನೇ ಮುದ್ದಿನ ಮಗ ಇದ್ದನು. ಆತನಿಗೆ ಸುಮಾರು 15 ವರ್ಷ. ಬಹಳ ಹಿಂದಿನ ಕಾಲದಲ್ಲಿ 15ನೇ ವಯಸ್ಸಿಗೆ ಜವಾಬ್ದಾರಿ ಹೊರಿಸುತ್ತಿದ್ದರು. ಯಜಮಾನ ಇಪ್ಪತ್ತು ರೂಪಾಯಿ ನೀಡಿ, ಮಗನಿಗೆ ಹೇಳಿದ. "ನೋಡು ಮಗನೇ ಪಕ್ಕದ ಊರಿನಲ್ಲಿ ಸಂತೆ ಇದೆ. ಅಲ್ಲಿಗೆ ಒಳ್ಳೊಳ್ಳೆ ಮಾವಿನ ಹಣ್ಣು ಬಂದಿದೆ ಅಂತ ಎಲ್ಲ ಹೇಳುತ್ತಿದ್ದಾರೆ. ನೀನು ಹೋಗಿ ಚೆನ್ನಾಗಿರುವ ಮಾವಿನಹಣ್ಣು ತೆಗೆದುಕೊಂಡು ಬಾ" ಎಂದನು. ಮಗ ಸಂತೆಗೆ ಹೋದ. ಹೋದವನೇ ಒಮ್ಮೆ ಎಲ್ಲಾ ಕಡೆ ನೋಡಿ ಬರೋಣ ಎಂದು ಸಂತೇಲಿ ಹೊರಟ. ಆಗ ಆತನಿಗೆ ಒಂದು ದೃಶ್ಯ ಕಂಡಿತು. ಒಂದು ಗುಡಿಸಲು. ಅಲ್ಲಿ ಒಬ್ಬ ಮಹಿಳೆ. ಬಟ್ಟೆ ಹರಿದಿದೆ. ಎರಡು ಮಕ್ಕಳು ಅಳುತ್ತಾ ಇದ್ದವು. ಇದನ್ನ ನೋಡಿದ ಆತನಿಗೆ ಮರುಕ ಹುಟ್ಟಿತು. ತಕ್ಷಣ ಆ ಗುಡಿಸಿಲ ಬಳಿ ಹೋದನು. ಹೋಗಿ ಕೇಳಿದ ಯಾಕೆ ಮಕ್ಕಳು ಅಳುತ್ತವೆ ಎಂದು. ಆಕೆ ಮೊದಲೇ ಬಡತನದ ಬೇಗೆಯಲ್ಲಿ ಬೆಂದು ನೋವಾಗಿತ್ತು. ಆಕೆ ಹೇಳಿದಳು... ಅದು ನಿಮಗೆ ಯಾಕೆ ಎಂದಳು. ಆ ಯುವಕ ಹೇಳಿದ. ಮಕ್ಕಳು ಅಳುವುದನ್ನು ನೋಡಿ ನನಗೆ ದುಃಖ ಆಯಿತು, ಅದಕ್ಕೆ ಕೇಳಿದೆ ಎಂದನು. ಆಗ ಆ ತಾಯಿ ಹೇಳಿದಳು. ಅವರಿಗೆ ಮಾವಿನಹಣ್ಣು ಬೇಕಂತೆ. ಅದಕ್ಕೆ ಅಳುತ್ತಿದ್ದಾರೆ ಅಂದಳು. ಆಗ ಯುವಕ ಹೇಳಿದ ಕೊಡಿಸಬಹುದಲ್ಲ ಎಂದನು. ಆ ತಾಯಿ ಹೇಳಿದಳು. ಅನ್ನ ಮಾಡಲು, ಅಕ್ಕಿ ತರಲು ಹಣ ಇಲ್ಲ. ನೀರು ಸಂಗ್ರಹಿಸಲು, ಕೊಡ ತರಲು ಹಣ ಇಲ್ಲ. ಮನೆಯ ಯಜಮಾನ ಕಾಯಿಲೆಯಿಂದ ಮನೆಯಲ್ಲಿ ಮಲಗಿದ್ದಾನೆ. ಔಷದ ಕೊಡಿಸಲು ಹಣ ಇಲ್ಲ. ಇನ್ನೆಲ್ಲಿ ಮಾವಿನ ಹಣ್ಣು ಕೊಡಿಸೋದು ಎಂದಳು. ಇದನ್ನು ಕೇಳಿ ಆ ಯುವಕನಿಗೆ ಕನಿಕರ ಆಯ್ತು. ಈ ಮಕ್ಕಳನ್ನು ಕರೆದುಕೊಂಡು ನನ್ನ ಜೊತೆ ಬನ್ನಿ. ನಾನು ಮಾವಿನಹಣ್ಣು ಕೊಡಿಸುತ್ತೇನೆ ಎಂದನು. ಆ ತಾಯಿ ಮಕ್ಕಳನ್ನು ಕರೆದುಕೊಂಡು ಯುವಕನ ಜೊತೆ ಹೋದಳು. ಹತ್ತು ರೂ ಗಳಿಗೆ ಒಳ್ಳೊಳ್ಳೆ ಮಾವಿನಹಣ್ಣು ಆಯ್ಕೆ ಮಾಡಿ ತಾಯಿಗೆ ನೀಡಿ, ಆಕೆಯ ಜೊತೆ ಆಕೆಯ ಮನೆಗೆ ಬಂದನು. ಇನ್ನು ಉಳಿದಿದ್ದ ಹತ್ತು ರುಪಾಯಿ ಆಕೆಗೆ ನೀಡಿ, ಪತಿಗೆ ಔಷಧಿ ಉಪಚಾರ ಮಾಡಿಸುವಂತೆ ತಿಳಿಸಿ, ಊರಿಗೆ ಬರಿ ಕೈಯಲ್ಲಿ ಹೊರಟನು. ಇಲ್ಲಿ ತಂದೆ ಮಗನನ್ನು ಕಾಯುತ್ತಾ ಕುಳಿತಿದ್ದನು. ಒಳ್ಳೊಳ್ಳೆ ಮಾವಿನಹಣ್ಣು ತರುತ್ತಾನೆ. ಮನೆಯಲ್ಲಿ ಎಲ್ಲರೂ ಒಟ್ಟಾಗಿ ಕುಳಿತು, ತಿಂದು ಆನಂದ ಪಡಬಹುದೆಂದು ಕಾಯುತ್ತಿದ್ದನು. ಮಗ ಬರಿ ಕೈಯಲ್ಲಿ ಬರುವುದನ್ನು ನೋಡಿ ತಂದೆಗೆ ಸಿಟ್ಟು ಬಂದಿತ್ತು. ಈತ ಎಲ್ಲೋ ಹಣ ಕಳೆದುಕೊಂಡಿದ್ದಾನೆ. ಅದಕ್ಕೆ ಬರೀ ಕೈಯಲ್ಲಿ ಬಂದಿದ್ದಾನೆ ಎಂದು. ಎಲ್ಲಿ ಮಾವಿನಹಣ್ಣು? ಎಂದು ಸಿಟ್ಟಿನಿಂದ ತಂದೆ ಕೇಳಿದ. ಆಗ ಮಗ ನಗುತ್ತಾ ಹೇಳಿದ. ಹಣ್ಣು ತಂದಿದ್ದೇನೆ, ಮಾವಿನ ಹಣ್ಣಲ್ಲ, ಎರಡು ಅಮೃತ ಫಲ ತಂದಿದ್ದೀನಿ ಎಂದನು. ಒಂದು ನಿನಗೆ. ಮತ್ತೊಂದು ಅಮ್ಮನಿಗೆ. ಆಗ ತಂದೆ ಹೇಳಿದ ತೋರಿಸು, ಅದು ಹೇಗಿದೆ ?ಎಂದನು. ಆಗ ಮಗ ಹೇಳಿದ, ಅದು ಈಗ ತಿನ್ನುವ ಹಣ್ಣಲ್ಲ, ಸ್ವರ್ಗದಲ್ಲಿ, ಪ್ರತಿದಿನ ಸವಿಯುವ ಹಣ್ಣು ತಂದಿದ್ದೀನಿ. ಆಗ ತಂದೆಗೆ ಸಿಟ್ಟು ಹೆಚ್ಚಾಯಿತು. ಆಗ ನಡೆದ ಘಟನೆ ಹೇಳಿ, ಆ ಸಂತೋಷದ ಫಲ ನಿಮಗೆ ಎಂದನು. ಮುಂದೆ ಆತ ದೊಡ್ಡ ಸಂತನಾದ ಅಂತ ಹೇಳುತ್ತಾರೆ.
ಸಂತ ಅಂದರೆ ನಾವೆಲ್ಲ ತಿಳಿದುಕೊಂಡಂತೆ ಸನ್ಯಾಸಿ, ಮನೆ, ಮಠ ಬಿಟ್ಟವನು ಎಂದು ತಿಳಿಯುತ್ತೇವೆ. ಸಂತ ಎಂದರೆ ಯಾವುದೇ ಬಂಧನ ಇಲ್ಲದೆ, ವಿಶಾಲ ಮನಸ್ಸನ್ನು ಹೊಂದಿದವ. ಎದೆಯಲ್ಲಿ ಪ್ರೀತಿ ತುಂಬಿದವ. ಆತ ಜಗತ್ತಿನ ಪ್ರತಿಯೊಂದು ವಸ್ತು, ಪ್ರಾಣಿ, ಪ್ರತಿ ಮನುಷ್ಯರನ್ನು ಪ್ರೀತಿಸುವವ. ಇಂದಿನ ಸಂತರು ಒಂದು ಜಾತಿ, ಧರ್ಮ, ಭಾಷೆ, ಸ್ಥಳ, ರಾಜಕೀಯ, ಮೀಸಲಾತಿಗಾಗಿ ಬಂಧಿಸಲ್ಪಟ್ಟಿದ್ದಾರೆ. ಹಾಗಾದರೆ ಆ ಸಂತ ಎನ್ನುವ ಪದದ ಅರ್ಥ ಇವರಿಗೆ ಎಷ್ಟರಮಟ್ಟಿಗೆ ಅನ್ವಯಾಗುತ್ತದೆ. ನೀವು ಹೇಳಿ. ನೀವೇ ಊಹಿಸಿ.
ಸಾಕ್ರೆಟಿಸ್ ಒಬ್ಬ ತತ್ವಜ್ಞಾನಿ. ಸಂತ, ಮದುವೆಯಾಗಿದ್ದ. ಆದರೆ ಆತನ ಮನಸ್ಸು ವಿಶಾಲವಾಗಿತ್ತು. ಎದೆಯಲ್ಲಿ ಪ್ರೀತಿ ತುಂಬಿತ್ತು. ಆತನನ್ನು ಶಿಷ್ಯರು ಕೇಳುತ್ತಾರೆ. ಶ್ರೇಷ್ಠ ಕೆಲಸ ಎಂದರೆ ಯಾವುದು?. ಅದಕ್ಕೆ ಸಾಕ್ರೆಟಿಸ್ ಬಹಳ ಸುಂದರವಾಗಿ ಹೇಳುತ್ತಾನೆ. "ಯಾವ ಕೆಲಸ ತನಗೆ ಮತ್ತು ಸಮಾಜಕ್ಕೆ ಉಪಯುಕ್ತವೋ, ಯಾವ ಕೆಲಸ ತನಗೆ ಮತ್ತು ಸಮಾಜಕ್ಕೆ ಸಂತೋಷಕೊಡುತ್ತದೊ ಆ ಕೆಲಸ ಶ್ರೇಷ್ಠ ಕೆಲಸ" ಎಂದನು. ಈ ಅರ್ಥದಲ್ಲಿ ನೋಡಿದರೆ ನಾಶ ಮಾಡುವ, ಹಿಂಸೆ ಮಾಡುವ ಕೆಲಸ ಬಿಟ್ಟರೆ, ಉಳಿದ ಎಲ್ಲಾ ಕೆಲಸ ಶ್ರೇಷ್ಠ ಕೆಲಸವೇ. ಆ ಕೆಲಸ ಶ್ರೇಷ್ಠವಾಗಬೇಕಾದರೆ ಅದು ತನಗೆ ಮತ್ತು ಸಮಾಜಕ್ಕೆ ಸಂತೋಷ ಕೊಡಬೇಕು. ಕೆಲಸ ಸಂತೋಷ ಹೇಗೆ ಕೊಡುತ್ತದೆ ಎಂದರೆ. ಆ ಕೆಲಸದಲ್ಲಿ ಸೌಂದರ್ಯ, ಮಾಧುರ್ಯ ತುಂಬಬೇಕು. ಸೌಂದರ್ಯ, ಮಾಧುರ್ಯ ತುಂಬಬೇಕಾದರೆ ಆ ಕೆಲಸವನ್ನು ಪ್ರೀತಿಸಬೇಕು. ಎದೆಯಲ್ಲಿ ಪ್ರೀತಿ ಇರಬೇಕು. ಉದಾಹರಣೆಗೆ ವೈರಿ ಮನೆಗೆ ಬಂದಿದ್ದಾನೆ. ಆತನಿಗೆ ಅಡುಗೆ ಮಾಡು ಎಂದಾಗ, ಆ ವೈರಿ ಮನಸ್ಸನ್ನು ತುಂಬಿದಾಗ, ಪ್ರೀತಿ ಬರುವುದಿಲ್ಲ. ಆಗ ಅಡುಗೆಯಲ್ಲಿ ಉಪ್ಪು, ಖಾರ, ನೀರು ಯಾವುದಾದರೂ ವ್ಯತ್ಯಾಸ ಆಗಿಯೇ ಆಗುತ್ತದೆ. ಆದ್ದರಿಂದ ಊಟದಲ್ಲಿ ಮಧುರತೆ ಹಾಳಾಗುತ್ತದೆ.
ಅದೇ ಇನ್ನೊಂದು ಘಟನೆ. ಮಗ ದೂರದೂರಿನಲ್ಲಿ ಕೆಲಸದಲ್ಲಿದ್ದಾನೆ. ಬಹಳ ದಿನಗಳ ನಂತರ ಬರುತ್ತಿದ್ದಾನೆ. ತಾಯಿ ಪ್ರೀತಿಯಿಂದ ಮಗನಿಗಾಗಿ ಅಡುಗೆ ಮಾಡುತ್ತಿದ್ದಾಳೆ. ಪ್ರತಿ ಪದಾರ್ಥ ಹಾಕುವಾಗ, ಪ್ರೀತಿ ಹೃದಯದಿಂದ ಹಾಕುತ್ತಿದ್ದಾಳೆ. ಆಗ ಊಟದ ಮಾಧುರ್ಯದಲ್ಲಿ ವ್ಯತ್ಯಾಸ ಆಗುವುದಿಲ್ಲ. ಮಗನಿಗೆ ತಾಯಿ ಅಡುಗೆ ಅಷ್ಟು ಸವಿ ಸವಿ ಆಗಿರುತ್ತದೆ. ಅಷ್ಟು ಪ್ರೀತಿಯಿಂದ ಸವಿಯುತ್ತಾನೆ. ಎದೆಯಲ್ಲಿ ಪ್ರೀತಿ ಇದ್ದಾಗ, ಕೆಲಸದಲ್ಲಿ ಪ್ರೀತಿ ಇದ್ದಾಗ, ಕೆಲಸದಲ್ಲಿ ಸೌಂದರ್ಯ ಮಾಧುರ್ಯ ತುಂಬಲು ಸಾಧ್ಯ. ಕೆಲಸದಲ್ಲಿ ಸೌಂದರ್ಯ, ಮಾಧುರ್ಯ ತುಂಬುವುದಕ್ಕೆ ಕೌಶಲ ಎನ್ನುವರು. ಶಿಲ್ಪಿ, ಚಿತ್ರಕಾರ, ಇವರ ಚಿತ್ರ ಅದ್ಭುತವಾಗಿ ಮೂಡಿ ಬರಲು ಎದೆಯಲ್ಲಿರುವ ಪ್ರೀತಿ ಕಾರಣ. ಇಂಥ ಕೆಲಸಕ್ಕೆ ಶ್ರೇಷ್ಠ ಕೆಲಸ, ಶ್ರೇಷ್ಠ ಕರ್ಮ ಎನ್ನುತ್ತೇವೆ. ಬದುಕಿನಲ್ಲಿ ವಿಶ್ರಾಂತಿ ಅನ್ನುವುದೇ ಇಲ್ಲ. ಒಂದು ಕೆಲಸ ಬೇಸರವಾದರೆ ಮತ್ತೊಂದು ಸುಂದರ ಕೆಲಸ ಮಾಡುವುದೇ ವಿರಾಮ. ಜೀವನದ ಉದ್ದಕ್ಕೂ ಸುಂದರ ಕೆಲಸ ಮಾಡುತ್ತಿದ್ದರೆ ಅದು ಶ್ರೇಷ್ಠ ಕೆಲಸ. ಹೆಚ್ಚು ಗಳಿಸುವುದು, ವಾಹನ, ಆಳು... ಸಂತೋಷ ಕೊಡದಂತೆ ಇದ್ದಾಗ, ಅದು ಶ್ರೇಷ್ಠ ಕೆಲಸ ಆಗುವುದಿಲ್ಲ. ರತನ್ ಟಾಟಾ ಅವರು ಹೇಳುತ್ತಾರೆ. ಹಣ ಗಳಿಸಿ ಇಡುವುದು ಸಂಪತ್ತಲ್ಲ. ಸಂಪತ್ತು ಅಂದರೆ ನಿರ್ಮಾಣ ಮಾಡುವುದು ಎಂದರ್ಥ. ಮನೆಯಲ್ಲಿ 10 ಕ್ವಿಂಟಲ್ ಅಕ್ಕಿ ಇದ್ದರೆ, ಅದು ಸಂಪತ್ತು ಅಲ್ಲ. ಒಂದು ಭತ್ತ ಮಣ್ಣಿನಲ್ಲಿ ಹಾಕಿ, ಆ ಒಂದು ಭತ್ತದಿಂದ ನೂರು ಭತ್ತ ಬರುವಂತೆ ಸಸಿ ಬೆಳೆಯುತ್ತೇವೆ... ಅದು ಸಂಪತ್ತು. ಇದು ಶ್ರೇಷ್ಠ ಕರ್ಮ.... ಅಲ್ಲವೇ ?
-ಎಂ.ಪಿ. ಜ್ಞಾನೇಶ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ