ಶ್…! ಇಲ್ಯಾರೋ ಇದ್ದಾರೆ !!

ಗುರುರಾಜ ಕೋಡ್ಕಣಿ ಬರೆದ ಈ ಹಾರರ್ ಕಥೆಗಳ ಸಂಕಲನದ ಬೆನ್ನುಡಿಯಲ್ಲಿ ಒಂದು ವಿಶೇಷ ಸೂಚನೆ ಇದೆ. “ಒಬ್ಬರೇ ಇರುವಾಗ ಓದದಿರಿ...!! ಓದಿದರೆ ನಾವು ಜವಾಬ್ದಾರರಲ್ಲ...!!” ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಪ್ರಶಾಂತ್ ಭಟ್. ಇವರು ಬರೆದ ಕೆಲವು ಸಾಲುಗಳು…
“ಹಾರರ್ ಕತೆಗಳೆಂದರೆ ನಮಗೆಲ್ಲರಿಗೂ ಕೇಳಲು, ಓದಲು ಭಯ. ಆದರೂ ಕೇಳಲು ಓದಲು ಕಾತರ. ಯಾಕೆಂದರೆ ಅವು ಕೊಡುವ ರೋಮಾಂಚನದ ಎದುರು ಅವು ಹುಟ್ಟಿಸುವ ಭಯ ಗೌಣ. ಗುರುರಾಜರು ಇಲ್ಲಿ ಪುಟ್ಟ ಪುಟ್ಟ ಕತೆಗಳ ಮೂಲಕ ಭಯ ಹುಟ್ಟಿಸುತ್ತಾರೆ. ಇವನ್ನು ಓದಿ ಮಧ್ಯರಾತ್ರಿ ಎಚ್ಚರವಾದರೆ ನೀರು ಕುಡಿಯ ಹೋಗಲೂ, ಒಬ್ಬನೇ ರಾತ್ರಿ ನಡೆದು ಹೋಗಲೂ ಭಯಪಡುವ ಪರಿಸ್ಥಿತಿಯಾಗಿದೆ. ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿದ ಈ ಕಥೆಗಳು ಇದೀಗ ಸಂಕಲನವಾಗಿದೆ.”
ಲೇಖಕರಾದ ಗುರುರಾಜ ಕೋಡ್ಕಣಿಯವರು ಈ ಕಥಾಸಂಕಲನಕ್ಕೆ ಬರೆದ ಮಾತುಗಳು ಹೀಗಿವೆ “ಅತ್ಯಂತ ಕಡಿಮೆ ಶಬ್ದಗಳನ್ನು ಬಳಸಿ ಬರೆಯುವ ಕಥಾಪ್ರಕಾರಕ್ಕೆ ಇಂಗ್ಲೀಷಿನಲ್ಲ ‘ಫ್ಲಾಶ್ ಫಿಕ್ಷನ್’ ಎಂದು ಹೆಸರು. ಬರೆದ ನಾಲ್ಕೇ ನಾಲ್ಕು ಸಾಲುಗಳಲ್ಲಿ ಪರಿಣಾಮಕಾರಿಯಾದ ಕತೆಯನ್ನು ಹೇಳಿ ಓದುಗನಲ್ಲೊಂದು ಚಂದದ ಭಾವವನ್ನು ಮೀಟಿ, ನೆನಪಿನಲ್ಲುಳಿದು ಹೋಗುವ ಈ ಕಥಾ ಪ್ರಕಾರ ಸಾಹಿತ್ಯದ ನನ್ನಿಷ್ಟದ ಪ್ರಕಾರಗಳಲ್ಲೊಂದು. ಕನ್ನಡದಲ್ಲಿ ಈ ಬಗೆಯ ಕತೆಗಳ ರಚನೆ ಆರಂಭವಾದ ಕಾಲಮಾನದ ಮಾಹಿತಿಯಿಲ್ಲವಾದರೂ ’ನ್ಯಾನೋ ಕತೆಗಳು’ಎನ್ನುವ ಹೆಸರಿನಿಂದ ಅವು ನಮಗೆ ಹೆಚ್ಚು ಚಿರಪರಿಚಿತ. ನಮ್ಮಲ್ಲಿ ಅನೇಕ ಬರಹಗಾರರು ನ್ಯಾನೋ ಕತೆಗಳನ್ನು ರಚಿಸುವಲ್ಲಿ ಸಿದ್ಧಹಸ್ತರು. ವಾತ್ಸಲ್ಯ, ಪ್ರೀತಿ, ಕರುಣೆ ವ್ಯಂಗ್ಯ, ನಿರಾಸೆಯಂತಹ ಭಾವಗಳನ್ನು ವಸ್ತುವಾಗಿ ಬಳಸಿಕೊಂಡು ನ್ಯಾನೋ ಕತೆಗಳನ್ನು ರಚಿಸಿದವರೇ ಹೆಚ್ಚು. ಆದರೆ ವೈಯಕ್ತಿಕವಾಗಿ ನನಗೆ ಸುಲಭಕ್ಕೆ ಈ ಶಾಂತಭಾವಗಳು ಒಗ್ಗದ್ದರಿಂದ ಮತ್ತು ಹಾರರ್ ನನ್ನಿಷ್ಟದ ವಿಷಯವಾಗಿರುವುದರಿಂದ ನಾನು ಭಯವನ್ನೇ ನನ್ನ ಕತೆಗಳಿಗೆ ಮೂಲವಸ್ತುವನ್ನಾಗಿ ಬಳಸಿಕೊಂಡೆ. ಅದೊಮ್ಮೆ ಸುಮ್ಮನೇ ತಮಾಷೆಗೆಂದು ಸಾಮಾಜಿಕ ಜಾಲತಾಣದಲ್ಲಿ ಸಣ್ಣದ್ದೊಂದು ಮೂರು ಸಾಲಿನ ಹಾರರ್ ಕತೆಯೊಂದನ್ನು ಬರೆದಾಗ ಸ್ನೇಹಿತರು ಚೆನ್ನಾಗಿದೆಯೆಂದು ಹೊಗಳಿ ಬೆನ್ನುತಟ್ಟಿದ್ದೇ ನನಗೆ ಸಾಕಾಗಿತ್ತು.ಒಂದರ ನಂತರ ಇನ್ನೊಂದು, ಇನ್ನೊಂದರ ನಂತರ ಮತ್ತೊಂದು ಎನ್ನುತ್ತ ಸಾಲು ಸಾಲಾಗಿ ಕತೆಗಳನ್ನು ಬರೆಯುತ್ತ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದರೆ, ಅದಕ್ಕೊಂದು ಓದುವ ವರ್ಗವೇ ಸೃಷ್ಟಿಯಾಗಿ ಹೋಗಿದೆಯೆನ್ನುವುದು ನನಗೆ ತೀರ ಇತ್ತೀಚಿನವರೆಗೂ ಅರಿವಾಗಿರಲಿಲ್ಲ. ದಿನಕ್ಕೊಂದು ಕತೆಯೆನ್ನುವಂತೆ ಬರೆದು ನನ್ನ ಫೇಸ್‍ಬುಕ್ಕಿನ ಗೋಡೆಯ ಮೇಲೆ ಹಾಕುತ್ತಿದ್ದ ನಾನು ಅಪರೂಪಕ್ಕೊಮ್ಮೆ ಬರೆಯದೇ ಹೋದಾಗ ಎಷ್ಟೋ ಸ್ನೇಹಿತರು ‘ಇವತ್ತು ಕತೆ ಇಲ್ಲವಾ’ಎಂದು ಮೊಬೈಲಿಗೆ, ಇನ್‍ಬಾಕ್ಸಿಗೆ ಸಂದೇಶ ಕಳುಹಿಸುತ್ತಿದ್ದರು. ಕೆಲವು ಗೆಳೆಯರಂತೂ, ಇತ್ತೀಚೆಗೆ ನೀನು ಕತೆ ಬರೆಯುವುದನ್ನು ನಿಲ್ಲಿಸಿಯೇ ಬಿಟ್ಟಿದ್ದೀಯಾ, ಸಕತ್ ಸೋಮಾರಿಯಾಗಿದ್ದಿಯಾ’ ಎಂದು ಹಿತವಾಗಿ ಗದರಿ ಪುನ: ಬರೆಯುವಂತೆ ಒತ್ತಾಯಿಸಿದ್ದೂ ಉಂಟು. ಆಗೆಲ್ಲ ಮೈ ಕೊಡವಿ ತಲೆಗೊಂದಷ್ಟು, ಲ್ಯಾಪ್‍ಟಾಪಿನ ಕೀಬೋರ್ಡಿಗೊಂದಷ್ಟು ಕೆಲಸ ಕೊಟ್ಟು ಹೊಸಹೊಸ ಕತೆಗಳನ್ನು ರಚಿಸಿದ್ದಿದೆ. ಹಾಗೆ ರಚಿಸುತ್ತ ರಚಿಸುತ್ತ ಅದ್ಯಾವಾಗ ಕತೆಗಳು ನೂರರ ಹೊಸ್ತಿಲಿಗೆ ಬಂದು ನಿಂತವೋ ನನಗೆ ತಿಳಿಯದು. ನನಗರಿವಾಗುವ ಸಮಯಕ್ಕೆ ಕತೆಗಳು ಪುಸ್ತಕ ರೂಪದಲ್ಲಿ ಹೊರಬರಲು ತಯಾರಾಗಿ ನಿಂತಿವೆ.
ಈ ಹೊತ್ತಿಗೆ ನಾನು ಸ್ಮರಿಸಬೇಕಾದ ಹೆಸರುಗಳು ಸಾಕಷ್ಟಿವೆ. ಹಾಗೆ ನೆನಪಿಸಿಕೊಳ್ಳಬೇಕಾದ ಹೆಸರುಗಳ ಪೈಕಿ ಮೊದಲನೇಯ ಹೆಸರು ಎ.ಆರ್ ಮಣಿಕಾಂತರದ್ದು. ಸೃಜನಶೀಲವಾಗಿ ಕಾಣುವ ಯಾವುದೇ ಬರಹವನ್ನಾದರೂ ತಕ್ಷಣಕ್ಕೆ ಗುರುತಿಸುವ ಉದಯವಾಣಿಯ ಜೋಶ್ ಪುರವಣಿಯ ಸಂಪಾದಕ ಪರಿಚಯವೇ ಇರದ ನನ್ನ ಫೇಸ್ಬುಕ್ ಗೋಡೆಗೆ ಬಂದು ನನ್ನ ಸಣ್ಣಕತೆಗಳನ್ನು ಕೇಳಿ ಪಡೆದು, ಉದಯವಾಣಿಯ ಮಂಗಳವಾರದ ಸಾಪ್ತಾಹಿಕದಲ್ಲಿ ಥ್ರಿಲ್ಲರ್ ಕತೆಗಳೆನ್ನುವ ಮುಕ್ತ ಅಂಕಣವನ್ನೇ ಆರಂಭಿಸಿಬಿಟ್ಟಿದ್ದು ಹೊಸತನವನ್ನು ಪ್ರೋತ್ಸಾಹಿಸಬೇಕೆನ್ನುವ ಅವರ ಮನಸ್ಥಿತಿಗೆ ಹಿಡಿದ ಕೈಗನ್ನಡಿಯೆಂದರೆ ತಪ್ಪಾಗಲಿಕ್ಕಿಲ್ಲ. ಅಪರೂಪಕ್ಕೊಮ್ಮೆ ತೀರ ಹೊತ್ತಲ್ಲದ ಹೊತ್ತಲ್ಲಿ, ತಲೆಯಲ್ಲಿ ಹೊಸದೊಂದು ಹೊಳಹು ಸಿಕ್ಕು, ಮೂರ್ನಾಲ್ಕು ಕತೆಗಳನ್ನು ಅವಸರವಸರವಾಗಿ ಮೊಬೈಲಿನ ಸಣ್ಣ ಕೀ ಪ್ಯಾಡಿನಲ್ಲೇ ಟೈಪಿಸಿ ಅಲ್ಲಿಂದಲೇ ಅವರಿಗೆ ಸಂದೇಶ ರೂಪದಲ್ಲಿ ಕಳಿಸಿರುವ ಕತೆಗಳನ್ನು ಸಹ ಅವರು ಪ್ರಕಟಣೆಗೆ ಪರಿಗಣಿಸಿದ್ದರೆಂದರೆ ಅವರ ಪ್ರೋತ್ಸಾಹದ ಮಟ್ಟವನ್ನು ನೀವು ಊಹಿಸಬಹುದು.ಹಾಗೆ ಪ್ರೋತ್ಸಾಹಿಸಿ ಹೆಚ್ಚುಹೆಚ್ಚು ಕತೆಗಳನ್ನು ಬರೆಯುವ ಹುಮ್ಮಸ್ಸನ್ನು ನನ್ನಲ್ಲಿ ಹುಟ್ಟುಹಾಕಿದ ಮಣಿಕಾಂತರವರಿಗೆ ಖಂಡಿತವಾಗಿಯೂ ನಾನು ಆಭಾರಿ. ಪ್ರಕಟಣೆ ಕಂಡು ಒಂದೆರಡು ವರ್ಷಗಳ ಹೊತ್ತಿಗಾಗಲೇ ಔಟ್ ಆಫ್ ಪ್ರಿಂಟ್ ಆಗಿ ಹೋಗಿದ್ದ ಪುಸ್ತಕದ ಹೆಸರನ್ನು ನೆನಪಿಸಿ,’ ಹುಡುಕಿ ತಂದುಕೊಡಿ, ಇನ್ನಷ್ಟು ಕತೆಗಳನ್ನ ಸೇರಿಸಿ, ಕೊಂಚ ಇಂಟರೆಸ್ಟಿಂಗ್ ಆಗಿ ಬೇರೆ ಅವತಾರದಲ್ಲಿ ಪ್ರಕಟಿಸೋಣ’ ಎನ್ನುತ್ತ ಮುಂದೆ ಬಂದವರು ’ಅಂಕಿತ ಪುಸ್ತಕ’ದ ಕಂಬತ್ತಳ್ಳಿ ದಂಪತಿಗಳು. ಅವರಿಗೊಂದು ಧನ್ಯವನ್ನು ನಾನು ಹೇಳದಿದ್ದರೆ ಅದು ಅಕ್ಷಮ್ಯವಾದೀತು.
ಪುಸ್ತಕ ಹೊರತರುವ ಕಲ್ಪನೆಯೂ ಇರದಿದ್ದ ನನಗೆ ಪುಸ್ತಕದ ಪ್ರಕಟಣೆಯೆಂದಾಗ ಪುಸ್ತಕದ ಬಗ್ಗೆ ಅನುಭವಿ ಬರಹಗಾರರೊಬ್ಬರಿಂದ ನಾಲ್ಕು ಸಾಲುಗಳನ್ನು ಬರೆಯಿಸಬೇಕೆನ್ನಿಸಿತ್ತು.ಹಾಗೊಂದು ಯೋಚನೆ ಬರುತ್ತಿದ್ದಂತೆ ಮೊದಲು ನೆನಪಾದ ಹೆಸರೇ ಗುರುಸಮಾನರಾದ ಎಸ್.ಎನ್ ಸೇತುರಾಮ್‍ರದ್ದು. ಅವರು ಅನುಭವಿಯೂ ಹೌದು, ಅನುಭಾವಿಯೂ ಹೌದು.ಮನುಷ್ಯನ ಸೂಕ್ಷ್ಮ ಸಂವೇದನೆಗಳನ್ನು ವಿವರಿಸುವ, ಓದುಗನನ್ನು ಗಾಢವಾಗಿ ಆವರಿಸಿಕೊಳ್ಳುವ ಇವರ ’ನಾವಲ್ಲ’ಕಥಾ ಸಂಕಲನವನ್ನೋದಿದ ಮೇಲೆ ನನ್ನ ಪುಸ್ತಕಕ್ಕೆ ಮುನ್ನುಡಿಯನ್ನು ಬರೆಯಲು ಇವರು ಒಪ್ಪಿಯಾರೇ ಎನ್ನುವ ಅನುಮಾನ ನನ್ನನ್ನು ಕಾಡಿದಂತೂ ಹೌದು. ಹಿಂಜರಿಯುತ್ತಲೇ ’ಸರ್ ಹೀಗೊಂದು ಮುನ್ನುಡಿ ಆಗಬಹುದೇ ತಮ್ಮಿಂದ..’? ಎಂದಾಕ್ಷಣವೇ,’ಯಾಕಾಗಬಾರದು..’? ನನಗೂ ಇದೊಂದು ಹೊಸ ಪ್ರಯತ್ನ. ಬರೀತಿನಿ’ ಎಂದು ಒಪ್ಪಿಕೊಂಡರು ಗುರುಗಳು. ಇವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎನ್ನುವುದಕ್ಕಿಂತ ಗುರುಗಳಾದ ಎಸ್.ಎನ್ ಸೇತುರಾಮ್‍ರವರ ಆಶೀರ್ವಾದ ಈ ಶಿಷ್ಯನ ಮೇಲಿರಲಿ ಎಂದು ಕೇಳಿಕೊಳ್ಳುವುದು ಹೆಚ್ಚು ಸೂಕ್ತವಾದೀತು. ಉಳಿದಂತೆ ಕೇಳಿದ ತಕ್ಷಣವೇ ಬೆನ್ನುಡಿ ಬರೆದುಕೊಟ್ಟ’ ಕರ್ನಾಟಕದ ರೀಡಿಂಗ್ ಮೆಷಿನ್’ಎಂದೇ ಪ್ರಸಿದ್ಧರಾಗಿರುವ ಸ್ನೇಹಿತ ಪ್ರಶಾಂತ್ ಭಟ್ ಗೂ ನಾನು ಚಿರಋಣಿ.
ಇಲ್ಲಿ ನೂರಕ್ಕೂ ಮಿಕ್ಕಿ ಕತೆಗಳಿವೆ. ಎಲ್ಲವೂ ಕಲ್ಪನೆಗಳು. ಇಲ್ಲಿನ ಕತೆಗಳಲ್ಲಿ ನಾನು ಬದುಕಿನ ಯಾವುದೋ ಫಿಲಾಸಫಿಯನ್ನು ವಿವರಿಸುವ ಪ್ರಯತ್ನ ಮಾಡಿಲ್ಲ. ಬದುಕಿನ ಹಳವಂಡಗಳ ಚಿತ್ರಣದ ಹೆಣಗಾಟವೂ ಇದಲ್ಲ. ಇದು ಶುದ್ಧಾನುಶುದ್ಧ ಮನೋರಂಜನೆಯ ಔತಣ ಕೂಟ. ನಮ್ಮನ್ನು ಕಾಡುವ ದೈನಂದಿನ ಹಲವು ಜಂಜಡಗಳನ್ನು ತಾತ್ಕಾಲಿಕವಾಗಿ ಮರೆಸುವಂತೆ ಮಾಡುವ ಸಣ್ಣದ್ದೊಂದು ಮನೋರಂಜನೆಯನ್ನು ಬರಹ ರೂಪದಲ್ಲಿ ನೀಡುವ ಪ್ರಯತ್ನವೇ ಈ ಪುಸ್ತಕ. ರಾತ್ರಿಯ ಊಟ ಮುಗಿಸಿ, ಬೆಡ್‍ರೂಮಿನ ದೀಪದಡಿ ಕುಳಿತು ಪುಸ್ತಕದ ಬಾಗಿಲು ತೆರೆದರೆ ಭರಪೂರ ಮನೋರಂಜನೆಯಂತೂ ಗ್ಯಾರಂಟಿ. ಸುಮ್ಮನೇ ಓದಿಕೊಳ್ಳಿ. ಸಣ್ಣಗೆ ಚುರುಕು ಮುಟ್ಟಿಸುವ ಭಯದೊಂದಿಗೆ, ಥ್ರಿಲ್ ಪಡೆದುಕೊಳ್ಳುವ ಸಂತಸ ನಿಮ್ಮದಾಗಲಿ.”