ಶ್! ಇಲ್ಲಿ ವಿಗ್ರಹಗಳು ಮಾತನಾಡುತ್ತವೆ !

ಶ್! ಇಲ್ಲಿ ವಿಗ್ರಹಗಳು ಮಾತನಾಡುತ್ತವೆ !

ಭಾರತ ಒಂದು ವಿವಿಧತೆಗಳುಳ್ಳ ಅದ್ಭುತವಾದ ದೇಶ. ಈ ದೇಶಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಈ ದೇಶದಲ್ಲಿರುವ ಪ್ರತಿಯೊಂದು ವಸ್ತುಗಳೂ ಇತಿಹಾಸದ ಕಥೆಯನ್ನು ಹೇಳುವಷ್ಟು ಸಕ್ಷಮವಾಗಿವೆ. ಕೆಲವೇ ಕೆಲವು ಶತಮಾನಗಳ ಹಿಂದೆ ಈ ದೇಶವು ಹಿಂದೂ ರಾಷ್ಟ್ರವಾಗಿತ್ತು. ಸಾವಿರಾರು ದೇವಾಲಯಗಳಿದ್ದವು. ನಂತರ ಪರಕೀಯರ ಆಕ್ರಮಣಗಳಿಗೆ ತುತ್ತಾಗಿ ನಾವು ಹಲವಾರು ದೇವಸ್ಥಾನಗಳನ್ನು ಕಳೆದುಕೊಂಡೆವು. ಬ್ರಿಟೀಷ್ ಆಡಳಿತದಲ್ಲೂ ಹಲವಾರು ದೇವಸ್ಥಾನಗಳು ನಾಶವಾದವು. ಹಳೆಯ ಪ್ರತಿಯೊಂದು ದೇವಾಲಯವೂ ನಿಸ್ಮಯ ಮತ್ತು ನಿಗೂಢ ಕಥೆಗಳನ್ನು ಹೇಳುತ್ತವೆ. ಪ್ರತಿಯೊಂದು ದೇವಸ್ಥಾನದಲ್ಲೂ ನಿಗೂಢತೆ ಇದೆ. ಈ ಕಾರಣದಿಂದಲೇ ದೇವಸ್ಥಾನದ ಆವರಣಕ್ಕೆ ತಲುಪಿದೊಡನೆಯೇ ನಮ್ಮಲ್ಲಿ ಒಂದು ರೀತಿಯ ಶಕ್ತಿ ಹೊಕ್ಕಿದಂತಾಗುತ್ತದೆ. ಅಷ್ಟೊಂದು ಪಾಸಿಟಿವ್ ಎನರ್ಜಿಗಳನ್ನು ನಮ್ಮ ದೇವಸ್ಥಾನಗಳು ಹೊಂದಿವೆ. 

ವಿಜ್ಞಾನ ಎಷ್ಟೇ ಮುಂದುವರೆದರೂ ಕೆಲವೊಂದು ನಿಗೂಢತೆಗಳನ್ನು ಇನ್ನೂ ಬೇಧಿಸಲಾಗಿಲ್ಲ. ಹಲವಾರು ಮೂಢ ನಂಬಿಕೆಗಳಿಗೆ ಅವುಗಳು ಸುಳ್ಳು ಎಂದು ನಿರೂಪಿಸುವ ಸಾಕ್ಷ್ಯವನ್ನು ನೀಡಲು ವಿಜ್ಞಾನಿಗಳಿಗೆ ಇನ್ನೂ ಆಗಿಲ್ಲ. ಇಂತಹ ಒಂದು ನಿಗೂಢ ಮತ್ತು ಅಪರೂಪದ ದೇವಸ್ಥಾನದ ಪರಿಚಯ ನಿಮಗಿಂದು ನಾನು ಮಾಡಲು ಹೊರಟಿರುವೆ. ಈ ದೇವಸ್ಥಾನ ಇರುವುದು ಬಿಹಾರ ರಾಜ್ಯದ ಬಕ್ಸರ್ ಎಂಬ ಜಿಲ್ಲೆಯಲ್ಲಿ. ಈ ದೇವಸ್ಥಾನದ ಹೆಸರು ದೇವಿ ರಾಜರಾಜೇಶ್ವರಿ ತ್ರಿಪುರ ಸುಂದರಿ ದೇವಾಲಯ. 

ಈ ದೇವಸ್ಥಾನ ಸುಮಾರು ನಾಲ್ಕು ಶತಮಾನಗಳಷ್ಟು ಹಿಂದಿನದ್ದೆಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಈ ದೇವಾಲಯದ ಮುಖ್ಯ ದೇವಿ ಲಲಿತಾ ತ್ರಿಪುರ ಸುಂದರಿ. ಉಳಿದಂತೆ ಭುವನೇಶ್ವರಿ, ಚಿನ್ನಮಸ್ತಾ, ಮಾತಂಗಿ, ಕಾಳಿ, ತಾರಾ, ಪೀತಾಂಬರ, ಧೂಮಾವತಿ ಮತ್ತು ಕಮಲಾ ಎನ್ನುವ ದೇವಿಗಳ ವಿಗ್ರಹಗಳೂ ಇವೆ. ಈ ದೇವಾಲಯದ ಒಂದು ನಿಗೂಢ ವಿಶೇಷತೆಯ ಕಾರಣ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಈ ಊರಿನ ಭಕ್ತಾದಿಗಳ ನಂಬಿಕೆಯಂತೆ ರಾಜರಾಜೇಶ್ವರಿ ತ್ರಿಪುರ ಸುಂದರಿ ಮಂದಿರದ ವಿಗ್ರಹಗಳು ರಾತ್ರಿಯ ಹೊತ್ತು ಪರಸ್ಪರ ಮಾತನಾಡುತ್ತವೆಯಂತೆ. ಇದನ್ನು ಕಣ್ಣಾರೆ ನೋಡಿದವರು ಯಾರೂ ಇಲ್ಲವಾದರೂ ರಾತ್ರಿಯ ಹೊತ್ತು ಈ ದೇವಸ್ಥಾನದ ಸುತ್ತ ಮುತ್ತ ದೇವಾಲಯದ ಒಳಗಿನಿಂದ ಮಾತುಗಳನ್ನಾಡುವುದು ಕೇಳಿಸುತ್ತವೆ. ಆದರೆ ದೇವಸ್ಥಾನದ ಬಾಗಿಲು ತೆರೆದು ನೋಡಿದರೆ ಒಳಗಡೆ ಯಾರೂ ಇರುವುದಿಲ್ಲ. 

ಈ ದೇವಾಲಯವನ್ನು ಭವಾನಿ ಮಿಶ್ರ ಎನ್ನುವ ತಾಂತ್ರಿಕನೊಬ್ಬ ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ. ಈ ದೇವಾಲಯದ ನಿರ್ಮಾಣಕ್ಕೆ ಅವರು ಬಹಳ ಶಕ್ತಿಯುಳ್ಳ ಸ್ಥಳವೇ ಬೇಕು ಎಂದು ಹುಡುಕಾಡಿ ಬಕ್ಸಾರ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಈ ದೇವಾಲಯದ ಪೂಜಾ ವಿಧಾನ ಇತರ ದೇವಸ್ಥಾನದಂತಿಲ್ಲ. ಇದೊಂದು ತಾಂತ್ರಿಕ ಹಾಗೂ ವೈದಿಕ ವಿಧಿಗಳ ಸಮ್ಮಿಶ್ರ ಪದ್ಧತಿಗಳನ್ನು ಪೂಜೆ ಪುನಸ್ಕಾರಗಳಲ್ಲಿ ಬಳಸಿಕೊಂಡ ದೇವಾಲಯವಾಗಿದೆ. ಬಹಳಷ್ಟು ತಂತ್ರ, ಮಂತ್ರಗಳ ಸಾಧಕರು ಈ ದೇವಾಲಯಕ್ಕೆ ಬಂದು ಇಲ್ಲಿ ನೆಲೆಸಿರುವ ವಿವಿಧ ದೇವಿಗಳನ್ನು ಆರಾಧಿಸಿ ತಮ್ಮ ತಾಂತ್ರಿಕ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಾರೆ. ಅವರಿಗೆ ಈ ದೇವಿಯರ ಮೇಲೆ ಅಪಾರವಾದ ವಿಶ್ವಾಸ. ಇತಿಹಾಸಕಾರರ ಪ್ರಕಾರ ಈ ದೇವಾಲಯದ ನಿರ್ಮಾಣವೇ ತಾಂತ್ರಿಕ ವಿದ್ಯೆಯ ಮೂಲಕ ಶಕ್ತಿ ಸಾಧನೆ ಮಾಡುವವರಿಗಾಗಿತ್ತು ಎಂದು ಅಭಿಪ್ರಾಯ ಪಡುತ್ತಾರೆ.

ರಾತ್ರಿಹೊತ್ತು ಈ ಮಂದಿರದ ವಿಗ್ರಹಗಳು ಮಾತನಾಡುವುದು ಬರೇ ಸುಳ್ಳು ಎನ್ನುತ್ತಾರೆ ಬುದ್ಧಿ ಜೀವಿಗಳು, ಕಲ್ಲಿನಲ್ಲಿ ಕೆತ್ತಿದ ವಿಗ್ರಹಗಳು ಪರಸ್ಪರ ಮಾತನಾಡಲು ಸಾಧ್ಯವೇ ಇಲ್ಲ ಎನ್ನುತ್ತಾರೆ. ಈ ವಿಷಯವನ್ನು ಪರೀಕ್ಷಿಸಲು ಒಮ್ಮೆ ವಿಜ್ಞಾನಿಗಳ ಮತ್ತು ಮಾಧ್ಯಮದವರ ತಂಡ ಬಕ್ಸಾರ್ ಗೆ ಆಗಮಿಸಿತ್ತು. ವಿಜ್ಞಾನಿಗಳಿಗೆ ಕಂಡು ಬಂದುದು ಏನೆಂದರೆ ಒಳಗಡೆ ಯಾರೂ ಇಲ್ಲದಿದ್ದರೂ ಈ ದೇವಸ್ಥಾನದ ಒಳಗಡೆಯಿಂದ ಶಬ್ಧಗಳು ಕೇಳಿಬರುತ್ತವೆ ಎಂದು. ರಾತ್ರಿ ಹೊತ್ತು ಹೊರಬರುವ ಧ್ವನಿ ತರಂಗಗಳನ್ನು ವಿಜ್ಞಾನಿಗಳೂ ಗಮನಿಸಿದರು. ಈ ಧ್ವನಿ ತರಂಗಗಳ ಮೂಲವನ್ನು ಹುಡುಕಾಡಲು ಹೊರಟ ವಿಜ್ಞಾನಿಗಳಿಗೆ ಯಾವುದೇ ಸುಳಿವು ಸಿಗಲಿಲ್ಲ. ಈ ಧ್ವನಿ ದೇವಸ್ಥಾನದ ಒಳಗಡೆಯಿಂದಲೇ ಬರುತ್ತಿದೆ ಎಂದು ತಿಳಿದು ಬಂದರೂ ಹೇಗೆ ಬರುತ್ತಿದೆ? ಯಾವ ವಿಗ್ರಹ ಮಾತನಾಡುತ್ತಿದೆ ಎಂದು ತಿಳಿದು ಬರಲಿಲ್ಲ. ಆ ಧ್ವನಿಯಲ್ಲಿ ಕೇಳಿಸಿದ ಭಾಷೆ ಯಾವುದು ಎಂದೂ ಅರ್ಥವಾಗಲಿಲ್ಲ. ಈ ಧ್ವನಿಗಳ ಮೂಲವನ್ನು ಪತ್ತೆ ಹಚ್ಚಲು ಅವರು ವಿಫಲರಾದರು ಮತ್ತು ಈ ಪವಾಡಕ್ಕೆ ಬೆರಗಾಗಿ ಹೋದರು. 

ಇಂದಿನ ೨೧ನೇ ಶತಮಾನದಲ್ಲೂ ನಮ್ಮ ದೇಶದಲ್ಲಿ ಬಗೆಹರಿಯದ ಸಾವಿರಾರು ನಿಗೂಢ ವಿದ್ಯಮಾನಗಳಿವೆ. ತ್ರಿಪುರ ಸುಂದರಿ ದೇವಸ್ಥಾನದಲ್ಲಿ ಈಗಲೂ ರಾತ್ರಿ ಹೊತ್ತು ವಿಗ್ರಹಗಳು ಮಾತನಾಡಿಕೊಳ್ಳುತ್ತವೆ ಎಂದು ಗ್ರಾಮಸ್ಥರು ನಂಬುತ್ತಾರೆ. ಈ ಕಾರಣಕ್ಕೆ ದೇವಸ್ಥಾನದ ಖ್ಯಾತಿ ಎಲ್ಲೆಡೆ ಹಬ್ಬಿದೆ. ಈ ಕಾರಣದಿಂದ ಈಗ ದೇವಸ್ಥಾನದ ಆವರಣದಲ್ಲಿ ಉದ್ದದ ದರ್ಶನ ಸಾಲುಗಳನ್ನು ಕಾಣಬಹುದು ಎನ್ನುತ್ತಾರೆ ಅಲ್ಲಿನ ಗ್ರಾಮಸ್ಥರಲ್ಲೊಬ್ಬರು. ಏನೇ ಆದರೂ ಮಾನವನ ಊಹೆಗೂ ನಿಲುಕದ ಹಲವಾರು ಸಂಗತಿಗಳು ಈಗಲೂ ಪ್ರಪಂಚದಲ್ಲಿವೆ ಎಂದು ನಂಬಲೇಬೇಕಾಗಿದೆ.

(ಹಿಂದಿಯಿಂದ ಅನುವಾದಿತ)

ಚಿತ್ರ ಕೃಪೆ: ಅಂತರ್ಜಾಲ ತಾಣ