ಷ. ಷೆಟ್ಟರ್ ಕಾಮರೂಪಿಯವರನ್ನು ಕುರಿತು...
ಇದೇ ಭಾನುವಾರ ೨೮ ಜುಲೈ ಎಂ.ಎಸ್.ಪ್ರಭಾಕರರ ಸಮಗ್ರ ಸಾಹಿತ್ಯ ಕೃತಿ ಬಿಡುಗಡೆಯಾಯಿತು. ಈ ಸಂದರ್ಭದಲ್ಲಿ ಪುಸ್ತಕ ಬಿಡುಗಡೆ ಮಾಡಿದ ಷೆಟ್ಟರರು ತಮ್ಮ ನಿಡುಗಾಲದ ಗೆಳೆಯನ ಜೊತೆ ಒಡನಾಡಿನದ ನೆನಪುಗಳನ್ನು ಹಂಚಿಕೊಂಡಿದ್ದು ಹೀಗೆ:
"ಸ್ನೇಹಿತರೆ, ಸಭಿಕರೆ ಸಹೃದಯರೇ ಈ ಪುಸ್ತಕ ಬಿಡುಗಡೆ ಮಾಡ್ಲಿಕ್ಕೆ ನನಗೆ ಎಷ್ಟೊಂದು ಸಂತೋಷವಾಗಿದೆ ಅಂದರೆ ಇದು ಔಪಚಾರಿಕವಾಗಿ ಹೇಳೋ ಮಾತಲ್ಲ. ಇದಕ್ಕೆ ವಿಶೇಷ ಉತ್ಸಾಹ ಬರಲಿಕ್ಕೆ ಕಾರಣ ಏನಂತಂದರೆ ಈ ಪುಸ್ತಕಗಳಲ್ಲಿನ ಎಲ್ಲ ಲೇಖನಗಳನ್ನ ನಾನು ಮೊದಲನೇ ಬಾರಿಗೆ ಓದ್ತಾ ಇದೀನಿ. ಸುಮಾರು ೫೦ ವರ್ಷದ ಹಿಂದೆ ೧೯೬೧ರಲ್ಲಿ ಇರತಕ್ಕಂಥ ಧಾರವಾಡ ಮತ್ತು ಕರ್ನಾಟಕ ಕಾಲೇಜು ನೆನಪಿಗೆ ರ್ತಾ ಇದೆ. ನಾವು ಕರ್ನಾಟಕ ಕಾಲೇಜನ್ನ ಮುಟ್ಟಿದಾಗ ನಾವು ಅಂದಾಗ ಸ್ವಾಮೀಜಿಗಳು ಹೇಳಕೊಂಡ ಹಾಗೆ ಬಹುವಚನದಲ್ಲಿ ಹೇಳ್ತಾ ಇಲ್ಲ. ನನ್ನ ಜೊತೆಗೆ ರಾಜೀವ ತಾರನಾಥ ಇನ್ನೂ ಅನೇಕ ಸ್ನೇಹಿತರು ಧಾರವಾಡ ಮುಟ್ಟಿದಿವಿ. ಅದಾಗಲೇ ಪ್ರಭಾಕರ ಇಲ್ಲಿದ್ದು ಒಂದು ವರ್ಷ ಆಗಿತ್ತು. ಕೂಡಲೇ ನಾವು ಸ್ನೇಹಿತರಾಗ್ಲಿಕ್ಕೆ ಕಾರಣ ಅಂತಂತ ಹೇಳಿದರೆ ನಾವೆಲ್ಲರೂ ಇದ್ದದ್ದು ಮಾಳಮಡ್ಡಿ ಅನ್ನೋ ಒಂದು ಏರಿಯಾದಲ್ಲಿ. ನೀವು ರೈಲ್ವೇ ಸ್ಟೇಷನ್ ಇಳಿದು ಮುಂದಕ್ಕೆ ಬಂದಾಗ ಎಮ್ಮಿ ಕೆರೆ ಅನ್ನೋದು ಅಲ್ಲಿ ಒಂದು ಬಹಳ ದೊಡ್ಡ ಘಟ್ಟ ಅಲ್ಲಿ ಧಾರವಾಡದಲ್ಲಿ. ಆ ಎಮ್ಮಿ ಕೆರೆಯ ಪಕ್ಕದೊಳಗೆ ರಾಜೀವ ತಾರನಾಥ ಇರ್ತಿದ್ದ ಒಂದು ಸಣ್ಣ ಮನೆಮಾಡಿ. ಕೆಳಗಡೆಗೆ ಮಹಿಷಿ ಮನೆ ಅಂತಂಥ ಇದೆ. ಕೆರೆಗೆ ಸಮೀಪ ಮಹಿಷಿ ಮನೆ ಎದುರಗಡೆಗೆ ನಾನಿರ್ತಿದ್ದೆ. ಈ ಎಮ್ಮಿ ಕೆರೆ ಮೇಲೆ ಸ್ಟೇಷನ್‌ಗೆ ಹತ್ತಿರದಲ್ಲಿ ಪ್ರಭಾಕರ ಇರ್ತಿದ್ದರು. ಈ ಪ್ರಭಾಕರ ಮನೆಯ ಹಿಂಭಾಗದೊಳಗೆ ರಾಘವೇಂದ್ರರಾವ್ ಇರ್ತಾ ಇದ್ದ. ಅದು ಗೋಪಾಳಪುರ ಅಂತ. ರಾಘವೇಂದ್ರ ರಾವ್ ಎದುರುಗಡೆಗೆ ನೀಲಾಚಂದಾವರಕರ್ ಇರ್ತಿದ್ದರು. ನಮಗೆ ಆ ಕಡೆ ದೂರದೊಳಗೆ ಗಿರೀಶ್ ಕಾರ್ನಾಡರು ಇರ್ತಿದ್ದರು. ನಮ್ಮ ಸುತ್ತಮುತ್ತಲೊಳಗೆ ಬಸವರಾಜ ರಾಜಗುರು ಇನ್ನುಳಿದವರು ಇರ್ತಿದ್ದರು. ಇದನ್ನೆಲ್ಲ ಯಾತಕ್ಕೆ ಹೇಳ್ತಾ ಇದ್ದೀನಂದರೆ ಇಂಥವರ ಜೊತೆಗೆ ನಾನೂ ಒಬ್ಬ ದೊಡ್ಡ ಮನುಷ್ಯ ಅಂತ ಹೇಳಿ ಕೊಳ್ಳಲಿಕ್ಕೆ.
ಇಲ್ಲಿ ಒಂದು ಚಟ ನಮಗೆ ಕಲಿಸಿದ್ದು ಅಂತ ಹೇಳಿದರೆ ಯಾತಕ್ಕೆ ಜ್ಞಾಪಕ ಬರ್ತಾ ಇದೆಅಂತಂದರೆ ಈ ಓದೋ ಚಟಾನಾ ಯಾರು ಕಲಿಸಿದ್ದು ನನಗೆ ಅಥವ ನಮಗೆಲ್ಲರಿಗೂ ಅಂದರೆ ಹೇಗೆ ಅದನ್ನ ಹಂಚಿಕೊಳ್ತಾಇದ್ವಿ ಅಂದರೆ ಅದಕ್ಕೆ ಕಾರಣ ಪ್ರಭಾಕರ. ನಮಗೆಲ್ಲ ಆವಾಗ ೧೧೦, ೧೨೨ ಅಥವ ೧೨೩ ರೂಪಾಯಿನೋ ಸಂಬಳ ಬರ‍್ತಾ ಇತ್ತು. ಕಾಲೇಜು ಲೆಕ್ಚರರ‍್ಸ್ ಆಗಿದ್ದಿವಿ. ಅಲ್ಲಿ ಶಿವಲಿಂಗಯ್ಯನವರದು ಒಂದು ಸಾಹಿತ್ಯದ ಅಂಗಡಿ ಇತ್ತು. ಅವರು ಪುಸ್ತಕಗಳನ್ನ ಉದ್ರಿ ಕೊಡ್ತಾ ಇದ್ದರು. ಅಲ್ಲೊಂದೆ ಕಡೆ ಸಾಮನ್ಯವಾಗಿ ಎಲ್ಲರಿಗೂ ಪುಸ್ತಕಗಳು ಅದರಲ್ಲೂ ಇಂಗ್ಲೀಷ್ ಪುಸ್ತಕಗಳು ಸಿಗ್ತಾ ಇದ್ದಿದ್ದು. ಆ ಶಿವಲಿಂಗಯ್ಯನವರಿಗೆ ಗೊತ್ತು ನಮ್ಮಲ್ಲಿ ಅಷ್ಟು ಹಣ ಇಲ್ಲ ಅಂತ ಹೇಳಿಬಿಟ್ಟು ಅವರು ಉದ್ರಿ ಕೊಡ್ತಾ ಇದ್ದರು ನಮಗೆ ಪುಸ್ತಕಗಳನ್ನ. ಪ್ರತಿ ಶನಿವಾರ ಅಥವ ಭಾನುವಾರ ನಾವೂ ಈ ಪ್ರಭಾಕರ ಎಲ್ಲ ಶಿವಲಿಂಗಯ್ಯನವರ ಅಂಗಡಿಗೆ ಹೋಗ್ತಾ ಇದ್ವಿ. ಇವರು ಪುಸ್ತಕಗಳನ್ನ ತೊಗೊಳ್ಳೋದು ನೋಡಿ ನಾನೂ ಪುಸ್ತಕ ತೊಗೋಳ್ಳಿಕ್ಕೆ ಶುರುಮಾಡಿದೆ. ಆಗ ಪೆಂಗ್ವಿನ್ ಪೆಲಿಕಾನ್ ಎಲ್ಲ ೧ ರೂಪಾಯಿ ನಾಕಾಣಿ ಒಂದು ರೂಪಾಯಿ ಹತ್ತಾಣಿ ಇರ್ತಿತ್ತು. ಅಷ್ಟು ದುಡ್ಡು ಇರ್ತಾ ಇರಲಿಲ್ಲ ನಮ್ಮ ಹತ್ತಿರ ಅವರು ಉದ್ರಿ ಕೊಡ್ತಾ ಇದ್ದರು ಸಂಬಳ ಬಂದ ಮೇಲೆ ಹೋಗಿ ಕೊಡ್ತಾ ಇದ್ವಿ. ಈ ಓದೋ ಚಟ ಅವರಲ್ಲಿ ಇರೋದನ್ನ ನೋಡಿ ನಾನು ಅವರನ್ನ ಮೊದಲು ಮೆಚ್ಚಿದ್ದು. ಅದು ಹೇಗೆ ಅಂತಂಥ ಹೇಳಿದರೆ ಒಂದು ಬಯಲು ಜಾಗದೊಳಗೆ ಎಮ್ಮೆ ಅಥವ ಆಕಳನ್ನ ಬಿಟ್ಟರೆ ಅದು ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಎಲ್ಲಿ ಹಸಿರು ಇರುತ್ತೋ ಅದನ್ನೆಲ್ಲ ಮೇಯೋ ಹಾಗೆ ಇವರು ಸಿಕ್ಕ ಪುಸ್ತಕಗಳನ್ನೆಲ್ಲ ತಕ್ಕೊಂಡು ಓದ್ತಾ ಇರ್ತಿದ್ದರು. ಅವರ ಪುಸ್ತಕ ಭಂಡಾರ ಆಗಲೇ ಬಹಳ ದೊಡ್ಡದಾಗಿತ್ತು. ಬಹುಶಃ ಈಗ ಅವರಲ್ಲಿರುವಷ್ಟು ಪುಸ್ತಕಗಳು, ಬಿಟ್ಟಷ್ಟು ಪುಸ್ತಕಗಳು, ಕೊಟ್ಟಷ್ಟು ಪುಸ್ತಕಗಳು ನಮ್ಮಲ್ಲಿ ಯಾರಲ್ಲೂ ಇಲ್ಲ. ಆ ಸಂಗ್ರಹದ ಚಟ ಬಿಡದಿದ್ದಕ್ಕೇನೆ ನಮಗೆಲ್ಲ ಈಗ ಒಂದು ದೊಡ್ಡ ಪ್ರಶ್ನೆಯಾಗಿದೆ ಈಗ ಈ ಪುಸ್ತಕಗಳನ್ನೆಲ್ಲ ಏನು ಮಾಡಬೇಕು? ಅಂತೇಳಿ. ಈ ಪ್ರಶ್ನೆ ಯಾಕೆ ಬರ್ತದೆ ಅಂದರೆ ಈಗ ನಮ್ಮ ಮಕ್ಕಳೆಲ್ಲ ಇವುಗಳಲ್ಲಿ ಆಸಕ್ತಿ ಉಳಿಸಿಕೊಂಡಿಲ್ಲ ಅವರೆಲ್ಲ ಬೇರೆ ಕ್ಷೇತ್ರಗಳಲ್ಲಿ ಇದಾರೆ. ಗ್ರಂಥಾಲಯಗಳಿಗೆ ಕೊಡಬೇಕು ಅಂತಂದರೆ ಈಗ ಗ್ರಂಥಾಲಯಗಳನ್ನೆ ಮುಚ್ಚಿಬಿಡ್ತಾರೆ. ಏನು ಮಾಡಬೇಕು ಈ ಪುಸ್ತಕಗಳನ್ನ? ಅವರೇನು ಮಾಡಿದರೋ ಗೊತ್ತಿಲ್ಲ. ಅವರಲ್ಲಿ ಅದ್ಭುತವಾದಂಥ ಸೌತ್‌ಆಫ್ರಿಕನ್ ಕಲೆಕ್ಷನ್ ಇದೆ. ನನ್ನ ಪುಸ್ತಕಗಳಲ್ಲೂ ಕೂಡ ಎರಡು ಮೂರು ಪ್ರಭಾಕರನ ಹೆಸರಿರೋ ಪುಸ್ತಕಗಳಿದಾವೆ. ಅವರಿಂದ ಯಾವಾಗ ತೊಗೊಂಡಿದ್ದನೋ ಅಥವ ಕದ್ದು ಕೊಂಡಿದ್ದನೋ ಗೊತ್ತಿಲ್ಲ. ಇದನ್ನ ಯಾತಕ್ಕೆ ತಮ್ಮ ಮುಂದೆ ಹೇಳ್ತಾ ಇದ್ದೀನಂದರೆ ಪ್ರಭಾಕರನಿಗೆ ಆವಾಗ ಓದುವ ಚಟದಷ್ಟು ಬೇರೆ ಯಾವ ಚಟಗಳಿದ್ದವೋ ನನಗೆ ಗೊತ್ತಿಲ್ಲ. ಅವರು ಹೇಳ್ತಾರೆ ನಾನು ಬೆಂಗಳೂರಿನಲ್ಲಿದ್ದಾಗ ಅನೇಕ ಕ್ಷಣಿಕ ಚಟಗಳು ಇದ್ದವು ಅಂತ ಹೇಳಿ. ಅವರು ಸಿಗರೇಟು ಸೇದೋದಾಗಲಿ, ಕುಡಿಯೋದಾಗಲಿ ಅತಿರೇಕಕ್ಕೆ ಹೋಗಿದ್ದನ್ನ ನಾನು ನೋಡಿಲ್ಲ. ಇದ್ದರೂ ಕೂಡ ದೊಡ್ಡ ತಪ್ಪೇನೂ ಇಲ್ಲ. ಅವರ ತಾಯಿ ಜೊತೆಗೆ ಅವರು ಇರಬೇಕಾದಾಗ ಅವರ ಮನೆ ತೆರೆದ ಮನೆ ಹಾಗೇನೇ ಇತ್ತು. ನಾವೆಲ್ಲ ಸಾಮಾನ್ಯವಾಗಿ ವಾರದಲ್ಲಿ ಒಂದು ಸಾರಿನಾದರೂ ಆ ತಾಯಿ ಮಾಡೋ ತಿಂಡಿ ತಿನ್ನೋದಕ್ಕೆ ಹೋಗ್ತಾ ಇದ್ವಿ. ಬಹಳ ರುಚಿಕರವಾಗಿ ತಿಂಡಿ ಮಾಡ್ತಾ ಇದ್ದರು.
ಆ ಕಾಲದೊಳಗೆ ಪ್ರಭಾಕರರು ಕನ್ನಡದಲ್ಲಿ ರೀಬಹುದು ಅಂತ ನನಗೆ ಗೊತ್ತಿರಲಿಲ್ಲ. ಯಾಕೆಂದರೆ ಆ ಲಕ್ಷಣಗಳನ್ನ ಅವರು ಯಾವತ್ತೂ ತೋರಿಸಿರಲಿಲ್ಲ. ಇಂಗ್ಲೀಷಿನಲ್ಲಿ ಅದ್ಭುತವಾಗಿ ಬರೀತಾ ಇದ್ದರು. ಅವರದೊಂದು ದಂತಕತೆ ಅಂತಂದರೆ ಅವರನ್ನ ಎಲ್ಲ ಸ್ನೇಹಿತರು ಮೂದಲಿಸ್ತಾ ಇದ್ದರು ಪಿ.ಹೆಚ್.ಡಿನ ನೀವು ಮುಗಿಸೋದೆ ಇಲ್ಲ ಅಂತ ಹೇಳಿಬಿಟ್ಟು. ದಿನದ ಏಳೆಂಟು ಗಂಟೆ ಓದೋದಕ್ಕೆ ಆಗ್ತಾ ಇತ್ತೆ ಹೊರತು ಬರಿಯೋದಿಕ್ಕೆ ಅವಕಾಶಾನೇ ಇಲ್ಲ ಅನ್ನೋ ಹಾಗೆ ಅವರು ವರ್ತನೆ ಮಾಡ್ತಾ ಇದ್ದರು. ಅವರಿಗೆ ಸಿಟ್ಟು ಬಂದು ಸುಮಾರು ಆರೇಳು ತಿಂಗಳಲ್ಲಿ ಆರ‍್ನ್‌ವೆಲ್ಡ್ ಮೇಲೆ ಅಂತ ಕಾಣುತ್ತೆ ಡೆಸರ‍್ಟೇಶನ್ ಬರೆದು ಪಿ.ಹೆಚ್.ಡಿ ತೊಗೊಂಡರು. ಪಿ.ಹೆಚ್.ಡಿ ತೊಗೋಳೋದೇನು ಅವರಿಗೆ ದೊಡ್ಡ ವಿಷಯ ಆಗಿರಲಿಲ್ಲ. ಒಂದೇ ಒಂದು ವರ್ಷದ ನಂತರ ಅವರು ಕಣ್ಮರೆಯಾಗಿಬಿಟ್ಟರು. ನಮಗೆ ಅವರು ಎಲ್ಲಿ ಹೋದರು ಏನು ಅಂತ ಹೇಳಿ ಬರೀ ಗಾಳಿ ವಾರ್ತೆಗಳು ಮಾತ್ರ ಬರ್ತಾ ಇದ್ದವು. ಎಮರ್ಜೆನ್ಸಿ ಒಳಗೆ ಬಹಳ ಕಷ್ಟಪಟ್ಟರು ಅಂತ ಹೇಳಿ ಬಹಳ ಅದ್ಭುತವಾದ ಕತೆಗಳನ್ನ ಕೇಳಿದ್ವಿ. ಎಲ್ಲಿದಾನೆ ಅಂತ ನಾನು ಕೇಳಿದಾಗಲೆಲ್ಲ ಮೊದಲು ಇಲ್ಲಿದ್ದರು ಅಂತ ಹೇಳ್ತಾ ಇದ್ದರೆ ಹೊರತು ಎಲ್ಲಿದಾನೆ ಅಂತ ಯಾರೂ ಹೇಳಲಿಲ್ಲ. ಪುನಃ ಅವರು ಒಂದೇ ಸಾರಿ ಬೆಂಗಳೂರಿನಲ್ಲಿ ಕಾಣಿಸಿಕೊಂಡಾಗ ಎಷ್ಟು ದಿವಸ ಹಿಂದೆ ನೋಡಿದ್ದೆವೋ ಅಷ್ಟು ಸಂತೋಷವಾಯಿತು. ಅಲ್ಲಿಂದ ಇಲ್ಲಿವರೆಗೂ ಈ ವ್ಯವಸಾಯ ಏನಿದೆ ಬರವಣಿಗೆಯ ವ್ಯವಸಾಯ ಅವರು ಅದನ್ನ ತಮ್ಮ ಜೀವನದುದ್ದಕ್ಕೂ ಬೆಳೆಸಿಕೊಂಡು ಬಂದಂತಹವರು.
ನಾವೆಲ್ಲರೂ ಲೇಖಕರೇ ನಮ್ಮನ್ನ ನಾವು ಮೋಸ ಮಾಡಿಕೊಂಡು ಬರೆಯೋದೇ ಹೆಚ್ಚು. ಈಗ ಆತ್ಮಕತೆ ಬರೆದಂತವರು ಈ ಆತ್ಮವನ್ನ ಮರೆಸಿ ಕತೆಯನ್ನ ಕತೆಯಾಗಿ ಹೆಣೆದುಕೊಡುವಂಥವರು. ಅಲ್ಲಿರತಕ್ಕಂತ ಸತ್ಯಾಂಶ ಸುಮಾರು ಐದ್ಹತ್ತು ಪರ್ಸೆಂಟ್ ಕೂಡ ಇರೋದಿಲ್ಲ. ಅದ್ಯಾಕೆ ಆತ್ಮಕತೆಗಳನ್ನ ಬರೀತಾರೆ ಇನ್ನೂ ನನಗೆ ಗೊತ್ತಾಗ್ತಿಲ್ಲ. ಈ ಅಭಿನಂದನಾ ಗ್ರಂಥಗಳಂತೂ ಇನ್ನೂ ಕೆಟ್ಟದಾಗಿರುತ್ತೆ. ಅದನ್ನ ಹೇಳಿ ಬರೆಸಿದಂಥವು. ಅಂದರೆ ಇದರಲ್ಲಿ ಪ್ರಾಮಾಣಿಕತೆ ಅನ್ನೋದು ಏನಿರುತ್ತೆ ಬಹಳ ಅಲ್ಪ ಪ್ರಮಾಣದಲ್ಲಿರುತ್ತೆ. ನಾವು ಬರೀತೀವಿ. ಸಂಶೋಧಕರು ಮಾಡಬೇಕಾದಾಗಲೂ ಕೂಡ ಸ್ವಲ್ಪ ಮೋಸ ಮಾಡ್ಕೋತೀವಿ. ಇನ್ನು ಸೃಜನಶೀಲ ಬರಹಗಾರರೆಂದರೆ ಸಾಕಷ್ಟು ಸ್ವಾತಂತ್ರ್ಯ ಇರುತ್ತೆ. ಹೇಗೆ ಬೇಕಾದರೂ ಬರೀಬಹುದು. ಆದರೆ ಈ ಪುಸ್ತಕವನ್ನ ಓದಿದಾಗ ಇವರ ಬಿಡಿ ಲೇಖನಗಳನ್ನ ನಾನು ಮೊದಲೇ ಓದಿದ್ದೆ. ಈ ಸಮಗ್ರವನ್ನ ಓದಿದಾಗ ನಿಮಗೂ ನನ್ನ ಹಾಗೆ ಅನ್ನಿಸಿದರೆ ನನಗೆ ಬಹಳ ಸಂತೋಷ ಆಗುತ್ತೆ. ಹಾಗೆ ಅನ್ನಿಸದೆ ಹೋದರೂ ದುಃಖಏನೂ ಆಗೋದಿಲ್ಲ. ಇದರಲ್ಲಿ ೮೦ ಭಾಗ ಪ್ರಾಮಾಣಿಕತೆ ಇದೆ, ಬದ್ಧತೆ ಇದೆ. ಬರೀಬೇಕಾದರೆ ಒಬ್ಬ ಕಲಾಕಾರ ಎಷ್ಟು ಸರಿಯಾಗಿ ಒಂದು ವಾಕ್ಯವನ್ನ ರಚಿಸಲಿಕ್ಕೆ ಸಾಧ್ಯವುಂಟೋ ಆ ರೀತಿ ರಚಿಸಿದಾರೆ. ಇದರರ್ಥ ಏನಂತಂದರೆ ಇಲ್ಲಿ ಬರುವ ಭಾಷೆ ಮತ್ತು ವಿಷಯ ಎರಡೂ ನನಗೆ ಅದ್ಭುತವಾಗಿ ಕಾಣಿಸ್ತವೆ. ಯಾರು ಕಡಿಮೆ ಬರೀತಾರೋ ಅವರು ಹೆಚ್ಚು ಚೆನ್ನಾಗಿ ಬರೀತಾರೆ ಅನ್ನೋದು ನನ್ನ ಅಭಿಪ್ರಾಯ. ಈ ನಮ್ಮ ಪ್ರಾಧ್ಯಾಪಕರ ಸಿ.ವಿ ಒಳಗೆ ನೋಡಿದರೆ ೧೬೦ ಪುಸ್ತಕಗಳನ್ನ ಬರೆದು ಪ್ರಕಟಿಸಿದಾರೆ ಅನ್ನೋಅದ್ಭುತ ಪ್ರಮಾಣದ ಸಂಖ್ಯೆಗಳನ್ನ ನೋಡಿದಾಗ ನನಗೆ ಅನುಮಾನಗಳೇ ಬರುತ್ತೆ. ಒಂದು ಸಂತೋಷದ ವಿಷಯ ಅಂತ ಅಂದರೆ ಪ್ರಭಾಕರ ಇಷ್ಟು ಮಾತ್ರ ಬರೆದಿದ್ದರಿಂದ ಇಷ್ಟು ಚೊಕ್ಕವಾಗಿ ಬರೀಲಿಕ್ಕೆ ಸಾಧ್ಯ ಆಯಿತು ಅಂತ ಅನ್ನಿಸ್ತದೆ. ಆದರೆ ಪ್ರಭಾಕರನ ಬರವಣಿಗೆ ಇನ್ನೂ ನಿಂತಿಲ್ಲ. ಬ್ಲಾಗ್ ಮೂಲಕ ಬರೀತಿದಾರೆ. ಅವರು ಯಾವಾಗಲೂ ಬರೀತಕ್ಕಂತವರು ಓದತಕ್ಕಂತವರು. ಅವರು ಎಷ್ಟು ದಿವಸ ಇರ್ತಾರೋ ಅಷ್ಟು ದಿನ ಓದ್ತಾರೆ ಬರೀತಾರೆ. ಈ ಸಮಗ್ರ ಅವರಿಗೆ ಇನ್ನಷ್ಟು ಪ್ರೋತ್ಸಾಹವನ್ನ ಕೊಟ್ಟು ಪ್ರಚೋದಿಸ್ತದೆ ಅಂತ ಅನ್ನಿಸ್ತದೆ. ಈ ಪುಸ್ತಕವನ್ನ ಬಿಡುಗಡೆ ಮಾಡೋ ಪುಣ್ಯ ಸಿಕ್ಕಿದ್ದಕ್ಕೆ ಮತ್ತು ಈ ಪುಣ್ಯವನ್ನ ನಿಮ್ಮ ಹಂಚಿಕೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ ಧನ್ಯವಾದಗಳು. "