ಸಂಕಲ್ಪ
ಹೊಸ ವರ್ಷದ ಶುಭಾಶಯಗಳ ಸಂತಸದಲ್ಲಿ ಮಕ್ಕಳು ನಲಿಯುತ್ತಿದ್ದರು. ಹೀಗಿರುವಾಗ ಪುಸ್ತಕ ಹಿಡಿದು ಪಾಠ ಮಾಡಿದರೆ ಕೇಳುವ ಪರಿಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಆದ್ದರಿಂದ ಯೋಚನೆ ಮಾಡಿ. ಮಕ್ಕಳನ್ನೆಲ್ಲ ಕರೆದು "ಮಕ್ಕಳೇ ಇಂದು ನೀವೆಲ್ಲ ಸಂಭ್ರಮದಿಂದ ಇದ್ದೀರಿ, ಹಾಗಾದರೆ ನಾನು ನಿಮಗೊಂದು ಆಟ ಹೇಳಲೇ? ಎಂದಾಕ್ಷಣ ಓಡಿ ಬಂದು ನನ್ನ ಸುತ್ತುವರಿದರು. ಏನಾದರೂ ಆಟಿಕೆ ಸಿಗಬಹುದೆಂದು, ಆದರೆ ಅಂದಿನ ನನ್ನ ಆಟ ಬೇರೆಯಾಗಿತ್ತು.. ನಾನು ಹೇಳಿದೆ "ಮಕ್ಕಳೇ ನೀವೆಲ್ಲ ಎಷ್ಟು ಚಂದ ಮಾತನಾಡುತ್ತೀರಿ, ಈಗ ಹೊಸ ವರ್ಷದ ಬಗ್ಗೆ ನೀವೆಲ್ಲ ಏನಾದರೂ ಹೇಳಬೇಕು" ಎಂದೊಡನೆ ಮಕ್ಕಳೆಲ್ಲ ನಿಧಾನವಾಗಿ ಹಿಂದೆ ಸರಿದರು.. "ಏಕೆ? ಏನಾಯಿತು? ಎಲ್ಲರೂ ಸುಮ್ಮನಾದಿರಲ್ಲ?" ಎಂದದ್ದಕ್ಕೆ, ಕೆಲವರು "ಮಾತಾಜಿ ನನಗೆ ಏನು ಹೇಳಬೇಕೆಂದು ತಿಳಿದಿಲ್ಲ." ಇನ್ನೊಬ್ಬರು "ಮಾತಾಜಿ ನನಗೆ ಭಾಷಣ ಮಾಡಲು ಬರುವುದಿಲ್ಲ", ಹೀಗೆ ವಿಧ ವಿಧದ ಸಮರ್ಥನೆಗಳು. ಹೀಗಿರುವಾಗ ಒಂದು ಮಗು ಬಂದು ಹೇಳಿತು. "ಮಾತಾಜಿ ನನಗೆ ಭಾಷಣ ಮಾಡುವುದು ಇಷ್ಟ ನಾನು ಮಾತನಾಡುತ್ತೇನೆ" ಎಂದಿತು.. ಆಗ ಎಲ್ಲರೂ ಕೈ ಕಟ್ಟಿ ಕುಳಿತು ಕೇಳಲಾರಂಭಿಸಿದೆವು. ಭಾಷಣ ಶುರುವಾಯಿತು.
"ಮಕ್ಕಳೇ... ನೋಡಿ ನಾವೆಲ್ಲಾ ಹೊಸ ವರ್ಷದಲ್ಲಿದ್ದೀವಿ, ಎಲ್ಲರಿಗೂ ವಿಷ್ ಮಾಡಬೇಕು, ಥ್ಯಾಂಕ್ಸ್ ಕೊಡ್ಬೇಕು, ಸಿಹಿ ತಿನಿಸುಗಳನ್ನ ಕೊಡ್ಬೇಕು, ಹೀಗೆ celebrate ಮಾಡಬೇಕು ಆಯಿತಾ... ಓಕೆ ಫ್ರೆಂಡ್ಸ್." ಎಂದೊಡನೆ ನಾವೆಲ್ಲಾ ಚಪ್ಪಾಳೆ ತಟ್ಟಿದಾಕ್ಷಣ ಮಗು ಹೇಳಿತು. "ಇರಿ ಫ್ರೆಂಡ್ಸ್ ನಂದು ಭಾಷಣ ಇನ್ನು ಮುಗಿಲಿಲ್ಲ.. ನಾನು ನಿಮಗೆಲ್ಲ ಒಂದು ಮ್ಯಾಜಿಕ್ ಹೇಳಿಕೊಡ್ತೇನೆ ಓಕೆ ನ" ಎಂದಳು.. ಆಗ ಎಲ್ಲರೂ ಬಾಯಿ ಬಿಟ್ಟು ಕುಳಿತರು... "ನೋಡಿ ಫ್ರೆಂಡ್ಸ್ ನ್ಯೂ ಇಯರ್ ನ ನಾವು ದಿನಾ ಬೇಕಾದ್ರು ಆಚರಿಸಬಹುದು ಗೊತ್ತ ನಿಮಗೆ?" ಎಂದಳು. ಆಗ ಅಲ್ಲಿದ್ದ ಮಕ್ಕಳಲ್ಲಿ ಎಲ್ಲಿಲ್ಲದ ಸಂತೋಷ, ಹೌದಾ? ಅದು ಹೇಗೆ ಎಂದರು. ಆಗ ನನಗೂ ಕೂಡ ಕುತೂಹಲ. ಅದು ಹೇಗೆ ಎಂದು ನಾನು ಕೇಳಿದೆ. ಆಗ ಅವಳು ಹೇಳಿದಳು "ಅಯ್ಯೋ ಅದು ತುಂಬಾ ಸಿಂಪಲ್ ಮಾತಾಜಿ ನಾವು, ಯಾವಾಗಲು ನಗ್ಬೇಕು, ಟೆನ್ಶನ್ ಮಾಡ್ಕೊಬಾರದು, ಜಗಳ ಆಡಬಾರದು, ಮತ್ತೆ ನಮ್ಮ ವಸ್ತುಗಳನ್ನು ಫ್ರೆಂಡ್ಸ್ ಜೊತೆ ಶೇರ್ ಮಾಡಬೇಕು.
ಆಗ 'every day is a new year' ಅಷ್ಟೇ ಎಂದು ಜೋರಾಗಿ ನಗುತ್ತಾ ನನ್ನ ಬಳಿ ಬಂದು "ನನ್ನ ಭಾಷಣ ಹೇಗಿತ್ತು ಮಾತಾಜಿ" ಎಂದು ಕೇಳಿದಳು.. ತುಂಬಾ ಚೆನ್ನಾಗಿತ್ತು ಮಗು ಇದನ್ನೆಲ್ಲಾ ನಿನಗೆ ಯಾರು ಹೇಳಿ ಕೊಟ್ಟರು ಎಂದು ಕೇಳಿದ್ದಕ್ಕೆ.. "ಅಮ್ಮ ಹೇಳಿಕೊಟ್ಟದ್ದು" ಎಂದಳು.. ಅದಕ್ಕೆ ಅಲ್ಲವೇ ನಮ್ಮ ಹಿರಿಯರು ಹೇಳುವುದು 'ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು' ಎಂದು.. ಮಕ್ಕಳಲ್ಲಿ ನಾವು ಸಕಾರಾತ್ಮಕ ವಿಚಾರಗಳನ್ನು ಹೆಚ್ಚಿಸುವುದರಿಂದ ಆಗುವ ಪರಿಣಾಮಗಳು ಯಾವಾಗಲೂ ಸಕಾರಾತ್ಮಕವಾಗೆ ಇರುತ್ತವೆ.. ಎಷ್ಟು ಪದವಿಗಳನ್ನು ಪಡೆದು, ಎಷ್ಟು ಜೀವನ ಕಂಡರೇನು? ಕೆಲವೊಂದು ವಿಚಾರಗಳಲ್ಲಿ ಮಕ್ಕಳಿಗಿರುವ ಬುದ್ಧಿ, ಯೋಚನೆ ನಮ್ಮಲ್ಲಿ ಬಾರದು.. ' ಸಂತೋಷದಿಂದ, ನಗುನಗುತ್ತಾ ಇದ್ದರೆ ದಿನವೂ ಹೊಸ ವರ್ಷವೆ 'ಸಾಲು ಚಿಕ್ಕದಾದರೂ ಹೊಗ್ಗಿ ನೋಡಿದರೆ ಎಂತಹ ಅರ್ಥಪೂರ್ಣ.. ದೊಡ್ಡ ದೊಡ್ಡ ಸಂಕಲ್ಪಗಳನ್ನು ಮಾಡಿ, ಅದನ್ನು ಅನುಸರಿಸಲಾಗದೆ ಮಧ್ಯದಲ್ಲೇ ಕೈ ಬಿಡುವ ಬದಲು, ಮನುಷ್ಯನ ಮನಸ್ಸನ್ನು, ಹಾಗು ಪರಿಸ್ಥಿತಿಯನ್ನು ಎರಡನ್ನು ಬದಲಾಯಿಸುವ ಶಕ್ತಿ ಇರುವ ಇಂತಹ ಸಣ್ಣ ಸಣ್ಣ ಸಂಕಲ್ಪಗಳನ್ನು, ಇಂದೇ ಶುರು ಮಾಡೋಣ.. ಧನ್ಯವಾದಗಳು.
-ರಮ್ಯಾ ಆರ್ ಭಟ್, ಕುಂದಾಪುರ,
ಚಿತ್ರಕೃಪೆ: ಇಂಟರ್ನೆಟ್ ತಾಣ