ಸಂಕ್ರಮಣದ ನಿರೀಕ್ಷೆ
ತನುಶುದ್ಧಿ ಮನಶುದ್ಧಿ ಮನೆಶುದ್ಧಿಗಿದು ಕಾಲ
ಸತ್ಪಥದಿ ಸಾಗುವ ಸತ್ ಕ್ರಾಂತಿಯ ಕಾಲ|
ಶುಭಹರಸಿ ತಿಲಬೆಲ್ಲ ಕೊಡುಕೊಳುವ ಕಾಲ
ಸಮರಸತೆ ಸಾರುವುದೆ ಸಂಕ್ರಾಂತಿ ಮೂಢ||
ಈ ಜೀವನವೇ ಹಾಗೆ. ಬದಲಾವಣೆಯನ್ನು ನಿರೀಕ್ಷಿಸುತ್ತಲೇ ಇರುತ್ತದೆ. ಈಗ ಇರುವ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ಹೋಗಲು ಎಲ್ಲರೂ ತವಕಿಸುತ್ತಲೇ ಇರುತ್ತಾರೆ. ಜಗತ್ತನ್ನು ಬೆಳಗುವ ಸೂರ್ಯ ತನ್ನ ಉತ್ತರ ದಿಕ್ಕಿನ ಚಲನೆಯನ್ನು ಪ್ರಾರಂಭಿಸುವ, ಮಕರ ರಾಶಿಗೆ ಪ್ರವೇಶಿಸುವ ಕಾಲವನ್ನು ಮಕರ ಸಂಕ್ರಮಣ ಎನ್ನುತ್ತಾರೆ. ಇದನ್ನೇ ಸಂಕ್ರಾಂತಿ ಎಂದು ಆಚರಿಸುತ್ತಾರೆ. ಉತ್ತರಾಯಣ ಪುಣ್ಯಕಾಲವೆಂದು ಹೇಳುವ ಈ ಸಮಯದಲ್ಲಿ ಚಳಿಗಾಲ ಮುಗಿದು ವಸಂತ ತನ್ನ ಇರುವನ್ನು ಪ್ರಕಟಿಸುವ ಸಮಯವಾಗಿದ್ದು, ಶುಭಕಾರ್ಯಗಳಿಗೆ ಪ್ರಶಸ್ತವೆಂದು ಹೇಳುತ್ತಾರೆ. ಇದು ಬದಲಾವಣೆಯ ಸಮಯ, ಬದಲಾವಣೆಗಳನ್ನು ನಿರೀಕ್ಷಿಸುವ ಸಮಯ.
'ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡು' ಎಂಬ ಪ್ರಸಿದ್ಧ ಆಡುನುಡಿಯಿದೆ. ಎಳ್ಳು-ಬೆಲ್ಲ, ಸಕ್ಕರೆ ಅಚ್ಚು, ಕಬ್ಬು, ಹಣ್ಣುಗಳನ್ನು ಬೀರುವ ವಿಶೇಷ ಮತ್ತು ಆನಂದಕರ ಸಂಪ್ರದಾಯ ಎಲ್ಲರಿಗೂ ಮುದ ಕೊಡುತ್ತದೆ. ಬಂಧು-ಮಿತ್ರರುಗಳನ್ನು ಭೇಟಿ ಮಾಡಿ ಪರಸ್ಪರ ಸಂತೋಷ ವಿನಿಮಯ ಮಾಡಿಕೊಳ್ಳಲು ಈ ಆಚರಣೆ ಸಹಕಾರಿಯಾಗಿದೆ. ಹಳ್ಳಿಗಳಲ್ಲಂತೂ ದನ-ಕರುಗಳಿಗೆ ಸಿಂಗರಿಸಿ ಮೆರವಣಿಗೆ ಮಾಡುತ್ತಾರೆ, ಕಿಚ್ಚು ಹಾಯಿಸುತ್ತಾರೆ, ಕೋಲಾಟವಾಡುತ್ತಾರೆ. ಜಾನಪದ ಕಲೆಗಳಿಗೆ ಜೀವಂತಿಕೆ ಈ ಸಂದರ್ಭದಲ್ಲಿ ಬರುತ್ತದೆ. ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಗಳಲ್ಲಿ ಈ ಸಂಕ್ರಾಂತಿಯನ್ನು ಆಚರಿಸುತ್ತಾರೆ.
ಹಿಂದೆ ಮನೆಗಳಿಗೆ ಸುಣ್ಣ-ಬಣ್ಣ ಹಚ್ಚಿ, ನೆಲಕ್ಕೆ ಸಗಣಿಯಿಂದ ಸಾರಿಸಿ, ಗೋಡೆಗಳಿಗೆ ಬಣ್ಣ ಬಣ್ಣದ ಚಿತ್ತಾರಗಳನ್ನು ಬಿಡಿಸುವ, ಮನೆಯ ಮುಂದೆ ಆಕರ್ಷಕ ರಂಗವಲ್ಲಿ ಹಾಕುತ್ತಿದ್ದ ಕಾಲವೊಂದಿತ್ತು. ಈಗ ಕಾಲ ಬದಲಾಗಿದೆ. ಈಗಲೂ ಮನೆಗಳನ್ನು ತೊಳೆದು, ಸಾರಿಸಿ ಅಕರ್ಷಕವಾಗಿ ಮತ್ತು ಶುಭ್ರವಾಗಿಸಿ ರಂಗೋಲಿ ಹಾಕುತ್ತಾರೆ. ಮನೆಮಂದಿಯೆಲ್ಲಾ ಅಭ್ಯಂಜನ ಮಾಡಿ ಹೊಸ ಬಟ್ಟೆ ಧರಿಸಿ ದೇವರ ಪೂಜೆ ಮಾಡಿ ಎಳ್ಳು-ಬೆಲ್ಲ ಹಂಚುತ್ತಾರೆ, ಸವಿಯುತ್ತಾರೆ, ಸಂಭ್ರಮಿಸುತ್ತಾರೆ. ತನು ಶುದ್ಧಿ, ಮನೆ ಶುದ್ಧಿಯೊಂದಿಗೆ ಮನಸ್ಸೂ ಶುದ್ಧವಾಗಲಿ ಎಂಬುದೇ 'ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡು' ಎಂಬ ನುಡಿಯ ಹಿಂದಿರುವ ಸದುದ್ದೇಶ.
ಈ ಸಂಕ್ರಾಂತಿಯ ಶುಭಪರ್ವದಲ್ಲಿ ಒಳ್ಳೆಯ ಬದಲಾವಣೆಗಳನ್ನು ನಿರೀಕ್ಷಿಸುತ್ತೇವೆ. ದೇಶ ಇಂದು ನಿಜವಾಗಿಯೂ ಪರ್ವಕಾಲದಲ್ಲಿದೆ. ಬದಲಾವಣೆಯ ಗಾಳಿ ಬೀಸಲು ಪ್ರಾರಂಭವಾಗಬೇಕಾದರೆ ಇದಕ್ಕೆ ನಮ್ಮ ಯೋಗದಾನವೂ ಅತ್ಯಗತ್ಯವಾಗಿದೆ. ದೇಶದಲ್ಲಿ ಬದಲಾವಣೆ ಆಗಬೇಕೆಂದರೆ ಅದು ರಾಜ್ಯಗಳಲ್ಲಿ ಮೊದಲು ಆಗಬೇಕು. ರಾಜ್ಯದಲ್ಲಿ ಆಗಬೇಕೆಂದರೆ ನಗರ, ಪಟ್ಟಣ, ಗ್ರಾಮಗಳಲ್ಲಿ ಬದಲಾವಣೆ ಬರಬೇಕು. ಈ ಬದಲಾವಣೆ ಬರಬೇಕಾದರೆ ಮೊದಲು ನಾವುಗಳು ಬದಲಾಗಬೇಕು. ಈ ಸಂಕ್ರಾಂತಿಯ ಸಮಯದಲ್ಲಿ ಸಜ್ಜನಶಕ್ತಿ ಎಚ್ಚರಗೊಳ್ಳಲಿ, ಸಾಮಾನ್ಯ ಜನತೆಯ ಈ ನಿರೀಕ್ಷೆಗಳು ಸಾಕಾರಗೊಳ್ಳಲಿ ಎಂದು ಆಶಿಸೋಣ.
೧. ಮಾತೃಭಾಷೆಯ ಅಭಿವೃದ್ಧಿ: ನಮ್ಮ ಮಾತೃಭಾಷೆಯ ಅಭಿವೃದ್ಧಿ ಆಗಬೇಕಾದರೆ ನಾವು ನಮ್ಮ ಮಾತೃಭಾಷೆಯನ್ನು ಬಳಸುವ ಮೂಲಕ ಉಳಿಸಬೇಕು ಅನಿವಾರ್ಯವಾದ ಸಂದರ್ಭ ಹೊರತುಪಡಿಸಿ ಉಳಿದಂತೆ ಮಾತೃಭಾಷೆಯಲ್ಲೇ ವ್ಯವಹರಿಸುವ ಮನಸ್ಸು ಮಾಡಬೇಕು.
೨. ಮಕ್ಕಳಿಗೆ ಉತ್ತಮ ರೀತಿಯ ಶಿಕ್ಷಣ: ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳು ಒತ್ತಡದಲ್ಲಿ ಕಲಿಯಬೇಕಿದೆ. ಸ್ಪರ್ಧಾತ್ಮಕ ರೀತಿಯಲ್ಲಿ ಯಾವುದೋ ಪದವಿ, ಪ್ರಮಾಣಪತ್ರಗಳನ್ನು ಕೊಡುವ ಮತ್ತು ಕೇವಲ ಹಣ ಮಾಡುವ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳು ಕೆಲಸ ಮಾಡುತ್ತಿವೆ. ನೈತಿಕ ಮೌಲ್ಯಗಳಿಗೆ ಅರ್ಥ ಉಳಿದಿಲ್ಲ. ವಿದ್ಯಾಭ್ಯಾಸ ಪೂರ್ಣಗೊಳಿಸಿದವನು ದೇಶಕ್ಕೆ ಸತ್ಪ್ರಜೆಯಾಗುತ್ತಾನೆಂಬ ಭರವಸೆ ಇಲ್ಲ. ಕನಿಷ್ಠ ಪಕ್ಷ ಮನೆಗಳಲ್ಲಾದರೂ ಉತ್ತಮ ಸಂಸ್ಕಾರ ಕಲಿಸಲು ಗಮನ ಕೊಡಬೇಕಿದೆ. ಮೊದಲು ಪೋಷಕರು ಸಂಸ್ಕಾರವಂತರಾಗಬೇಕಿದೆ. ಶಿಕ್ಷಣ ಪದ್ಧತಿಯ ಸುಧಾರಣೆಗೆ ಒತ್ತಡ ತರುವ ಕೆಲಸ ಮಾಡಬೇಕಿದೆ.
೩. ಭಯೋತ್ಪಾದನೆಯ ದಮನ: ನಾನಾ ರೀತಿಯ ಭಯೋತ್ಪಾದನೆಗಳು ಕಂಡುಬಂದರೂ ಪ್ರಮುಖವಾಗಿ ಮತಾಂಧರ ಭಯೋತ್ಪಾದನೆ ಇಂದು ಇಡೀ ವಿಶ್ವಕ್ಕೆ ಸವಾಲಾಗಿದೆ. ಬಾಂಬುಗಳನ್ನು ಸ್ಫೋಟಿಸುವ, ಗುಂಡಿನ ಸುರಿಮಳೆಗೈಯುವ ಮೂಲಕ ಅಮಾಯಕರ ಪ್ರಾಣಹರಣ ಮಾಡಲಾಗುತ್ತಿದೆ. ಪಾಕಿಸ್ತಾನದ ಪೆಶಾವರಿನಲ್ಲಿ ನಡೆದ ೨೩೫ ಎಳೆಯ ಮಕ್ಕಳ ದಾರುಣ ಹತ್ಯೆ, ನೈಜೀರಿಯಾದಲ್ಲಿ ನಡೆದ ೨೦೦೦ಕ್ಕೂ ಹೆಚ್ಚಿನವರ ನರಮೇಧಗಳು ಇತ್ತೀಚಿನ ಉದಾಹರಣೆಗಳು. ಫೇಸ್ ಬುಕ್, ಟ್ವಿಟರ್, ವಾಟ್ಸಪ್ಗಳಲ್ಲಿ ವಿಕೃತರು ಸಂಬಂಧವೇ ಇಲ್ಲದ ಅಮಾಯಕರನ್ನು ಭೀಕರ ರೀತಿಯಲ್ಲಿ ಚಿತ್ರಹಿಂಸೆ ನೀಡಿ ಸಾಯಿಸುವ ಮತ್ತು ಆ ಸಂದರ್ಭದಲ್ಲಿ ಅದನ್ನು ಸಂತಸದಿಂದ ವೀಕ್ಷಿಸುವ ಜನರ ಅನೇಕ ವಿಡಿಯೋಗಳು ಹರಿದಾಡುತ್ತಿವೆ, ಮನ ಕಲಕುತ್ತಿವೆ. ಮತಾಂಧರ ಅಟ್ಟಹಾಸ ಮತ್ತು ಅದನ್ನು ಬೆಂಬಲಿಸುವ ಅದೇ ಮನೋಭಾವದ ಜನರನ್ನು ಕಾಣುತ್ತಿರುವುದು ವಿಶ್ವದ ದೌರ್ಭಾಗ್ಯವೇ ಸರಿ. ನಮ್ಮ ದೇಶದಲ್ಲಿ ಜಾತ್ಯಾತೀತತೆಯ ಹೆಸರಿನಲ್ಲಿ ಮತ್ತು ಮತಗಳಿಕೆಯ ಸ್ವಾರ್ಥ ಕಾರಣಗಳಿಗಾಗಿ ಮತಾಂಧರನ್ನು ಓಲೈಸುವ ಕಾರ್ಯ ರಾಜಕಾರಣಿಗಳಿಂದ ಆಗುತ್ತಿರುವುದು ದುರ್ದೈವ. ಇದೂ ಅವರಿಗೆ ಶ್ರೀರಕ್ಷೆಯಾಗಿದೆ. ಮತಾಂಧತೆ, ನಕ್ಸಲ್ವಾದಗಳನ್ನು ಪರೋಕ್ಷವಾಗಿ ಬೆಂಬಲಿಸುವ ಪ್ರಗತಿಪರರೆಂದು ಹೇಳಿಕೊಳ್ಳುವ ಜನರು ಸಹ ಭಯೋತ್ಪಾದಕರಿಗೆ ಸಹಾಯ ನೀಡುವವರೇ ಆಗಿದ್ದಾರೆ. ನಿರಂತರ ಎಚ್ಚರಿಕೆ ಇಂದಿನ ಅಗತ್ಯ. ಸಾಮಾನ್ಯ ಜನರೂ ಸಹ ಜಾಗೃತರಾಗಿದ್ದು, ಸಂದೇಹದ ಸಂದರ್ಭಗಳಲ್ಲಿ ಸಂಬಂಧಿಸಿದ ಪೋಲಿಸ್ ಮತ್ತು ಇತರ ಅಧಿಕಾರಿಗಳಿಗೆ ಮಾಹಿತಿ ಕೊಡುವ ಕೆಲಸ ಮಾಡಬೇಕು. ಭಯೋತ್ಪಾದಕರು ಸಾಮ, ದಾನ, ಭೇದಗಳಿಗೆ ಜಗ್ಗುವವರಲ್ಲವೆಂಬುದು ಗೊತ್ತಾಗಿಹೋಗಿದೆ. ನಿರ್ದಾಕ್ಷಿಣ್ಯವಾಗಿ ದಂಡಪ್ರಯೋಗದಿಂದ ಹತ್ತಿಕ್ಕುವ ಕೆಲಸ ಆಗಬೇಕಿದೆ. ಬಂಧಿಸಲ್ಪಟ್ಟ ಭಯೋತ್ಪಾದಕರ ವಿಚಾರಣೆ ಕ್ಷಿಪ್ರಗತಿಯಲ್ಲಿ ನಡೆಯಬೇಕು. ಇಲ್ಲದಿದ್ದಲ್ಲಿ ಅವರನ್ನು ಬಿಡಿಸಲು ಮತ್ತಷ್ಟು ಹಿಂಸಾಚಾರಗಳಿಗೆ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರು ಉದ್ಯುಕ್ತರಾಗುತ್ತಾರೆ.
೪. ಮಾಧ್ಯಮಗಳ ನಿಯಂತ್ರಣ: ದೃಷ್ಯ ಮತ್ತು ಪತ್ರಿಕಾ ಮಾಧ್ಯಮಗಳು ಜನರ ಮೇಲೆ ಪ್ರಭಾವ ಬೀರುವಂತಹವು. ಆದರೆ ಇವುಗಳು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿವೆಯೆಂದು ಹೇಳುವುದು ಕಷ್ಟ. ಟಿವಿಗಳಲ್ಲಿ ಬರುತ್ತಿರುವ ಧಾರಾವಾಹಿಗಳು ವಿಕೃತ ಮನಸ್ಸುಗಳನ್ನು ವೈಭವೀಕರಿಸುತ್ತಿವೆ. ಋಣಾತ್ಮಕ ಸುದ್ದಿಗಳಿಗೆ ಬಣ್ಣ ಹಚ್ಚಿ ದಿನಗಟ್ಟಲೆ ಬಿತ್ತರಿಸಲಾಗುತ್ತಿದೆ. ಧನಾತ್ಮಕ ವಿಷಯಗಳು ನೂರಾರು ಇದ್ದರೂ ಅವುಗಳನ್ನು ಪ್ರಚುರಿಸುವ ಮತ್ತು ಇತರರನ್ನು ಪ್ರೇರಿಸುವ ಕಾರ್ಯದಲ್ಲಿ ಬಹಳ ಹಿಂದೆ ಇವೆ. ಪಟ್ಟಭದ್ರರ ಹಿಡಿತದಲ್ಲಿರುವ ಇವು ಬಿತ್ತರಿಸುವ ಸುದ್ದಿಗಳು ಮತ್ತು ವಿಮರ್ಶೆಗಳು ಪಟ್ಟಭದ್ರರ ಅನುಕೂಲಕ್ಕೆ ತಕ್ಕಂತೆ ಇರುತ್ತವೆಯೆಂದು ಅನ್ನಿಸುತ್ತಿದೆ. ಪಕ್ಷಪಾತರಹಿತ ಮತ್ತು ಧನಾತ್ಮಕ ಸಂಗತಿಗಳಿಗೆ ಒತ್ತು ಕೊಡುವ ಮಾಧ್ಯಮಗಳನ್ನು ಬೆಳೆಸಿ ಪ್ರೋತ್ಸಾಹಿಸಬೇಕಿದೆ.
೫. ಭ್ರಷ್ಠಾಚಾರಕ್ಕೆ ಕಡಿವಾಣ: ತನ್ನ ಜಮೀನಿನ ಖಾತೆ ಮಾಡಿಸಿಕೊಳ್ಳಲು ಲಂಚ ಕೊಡುವ ಸಲುವಾಗಿ ಅಸಹಾಯಕ ಮಹಿಳೆಯೊಬ್ಬಳು ತನ್ನ ಕಿಡ್ನಿಯನ್ನೇ ಮಾರಿದ ಪ್ರಸಂಗ ಇತ್ತೀಚೆಗೆ ಪತ್ರಿಕೆಯಲ್ಲಿ ವರದಿಯಾಗಿತ್ತು. ಎಂತಹ ಹೀನಸ್ಥಿತಿಗೆ ದೇಶ ಜಾರುತ್ತಿದೆ ಎಂಬುದಕ್ಕೆ ಇದು ಒಂದು ಪುಟ್ಟ ಉದಾಹರಣೆಯಾಗಿದೆ. ಭ್ರಷ್ಠಾಚಾರಿಗಳೇ ಆಡಳಿತದ ಚುಕ್ಕಾಣಿ ಹಿಡಿದರೆ ಹೀಗಾಗದೆ ಇನ್ನು ಬೇರೆ ಹೇಗಾಗಲು ಸಾಧ್ಯ? ಜನರು ಜಾಗೃತರಾಗಿ ಇಂತಹವರನ್ನು ಮಟ್ಟ ಹಾಕುವ ಕಾಲ ಎಂದು ಬಂದೀತು?
೬. ಜಾತ್ಯಾತೀತತೆಯ ನೈಜ ಅನುಷ್ಠಾನ: ಹಿಂದುಳಿದಿರುವಿಕೆಗೆ ಜಾತಿ ಕಾರಣ ಎಂಬುದು ವೈಜ್ಞಾನಿಕವಾಗಿ ನಿಲ್ಲುವಂತಹುದಲ್ಲ. ಆದರೆ ಪ್ರತಿ ಹಂತದಲ್ಲಿ ಜಾತಿ ಲೆಕ್ಕಾಚಾರಗಳು ಮೇಲುಗೈ ಸಾಧಿಸುತ್ತಿವೆ. ಹಿಂದುಳಿದಿರುವುದಕ್ಕೆ ಅಥವ ಮುಂದುವರೆಯುವುದಕ್ಕೆ ಜೀವನಶೈಲಿ ಪ್ರಧಾನ ಕಾರಣವಾಗಿದೆಯೇ ಹೊರತು ಜಾತಿಯಲ್ಲ. ಆರ್ಥಿಕವಾಗಿ ಹಿಂದುಳಿದವರನ್ನು ಮುಂದೆ ತರುವ ಪ್ರಯತ್ನ ಒಳ್ಳೆಯದೇ. ಅದಕ್ಕೆ ಜಾತಿ ಲೆಕ್ಕಾಚಾರ ಸರ್ವಥಾ ಸಲ್ಲದು. ಇದು ಸಮಾಜವನ್ನು ವಿಘಟಿಸುವ ಕಾರ್ಯ. ಮಾಯಾವತಿ, ಮಲ್ಲಿಕಾರ್ಜುನ ಖರ್ಗೆ ಮುಂತಾದವರನ್ನು ದಲಿತರೆಂದು ಈಗಲೂ ಪರಿಗಣಿಸಬೇಕೆ? ಮುಲಾಯಂ ಸಿಂಗ್, ಲಾಲೂ ಪ್ರಸಾದ ಯಾದವ್, ಶರದ್ ಯಾದವ್ ಮುಂತಾದವರನ್ನು ಹಿಂದುಳಿದವರೆಂದು ಈಗಲೂ ತಿಳಿಯಬೇಕೇ? ಆರ್ಥಿಕವಾಗಿ, ಸಾಮಾಜಿಕವಾಗಿ ಒಂದು ಸದೃಢ ಹಂತ ತಲುಪಿದವರನ್ನು ಈ ಹಣೆಪಟ್ಟಿಗಳಿಂದ ಕಳಚುವ ಕೆಲಸ ಮೊದಲು ಆಗಬೇಕು. ಇದು ಮತಗಳಿಕೆಯ ಉದ್ದೇಶದಿಂದ ಜಾತಿ ಆಟವಾಡುವ ರಾಜಕಾರಣಿಗಳಿಂದ ಸಾಧ್ಯವಿಲ್ಲ. ಜನರು ಈ ದಿಸೆಯಲ್ಲಿ ಎಚ್ಚೆತ್ತು ಅವರಿಂದ ಈ ಕೆಲಸ ಮಾಡಿಸಬೇಕಿದೆ. ನೈಜ ಜಾತ್ಯಾತೀತತೆ ಜಾರಿಯಾಗಿ ಸಂವಿಧಾನದ ಆಶಯ ಪೂರ್ಣವಾಗಲೆಂದು ಆಶಿಸೋಣ. ಈಗ ರಾಜ್ಯ ಸರ್ಕಾರ ಮಾಡಲಿರುವ ಜಾತಿಗಣತಿ ಸಹ ಜಾತಿವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದೇ ಆಗಿದೆ.
೭. ಸ್ವಚ್ಛ ಭಾರತ ನಿರ್ಮಾಣ: ಇದು ಒಂದು ರಾಜಕೀಯ ಪಕ್ಷದ ಕಾರ್ಯಕ್ರಮವೆಂದು ಅಸಡ್ಡೆ ಮಾಡುವಂತಿಲ್ಲ. ನಿಜಕ್ಕೂ ಇದು ಒಂದು ಒಳ್ಳೆಯ ಕಾರ್ಯಕ್ರಮವಾಗಿದ್ದು ಎಲ್ಲರೂ ಕೈಜೋಡಿಸಿದಲ್ಲಿ ಉತ್ತಮ ಫಲಿತಾಂಶ ಸಿಕ್ಕೀತು. ನಮ್ಮ ನಮ್ಮ ಮನೆಯ ಪರಿಸರವನ್ನು ಚೊಕ್ಕಟವಾಗಿಟ್ಟುಕೊಂಡಲ್ಲಿ ಬೀದಿ ಸ್ವಚ್ಛವಿರುತ್ತದೆ, ಬೀದಿಗಳು ಸ್ವಚ್ಛವಿದ್ದಲ್ಲಿ ಗ್ರಾಮ, ಪಟ್ಟಣ, ನಗರಗಳು ಸ್ವಚ್ಛವಿರುತ್ತವೆ. ನಮ್ಮ ನಾಗರಿಕ ಪ್ರಜ್ಞೆ ಜಾಗೃತಗೊಂಡಲ್ಲಿ ಇದು ಕಠಿಣ ಸವಾಲೇನಲ್ಲ.
ಒಟ್ಟಾರೆಯಾಗಿ ಸಂಕ್ಷಿಪ್ತಗೊಳಿಸಬೇಕೆಂದರೆ, ಕುಟುಂಬ ಹಿತ, ಗ್ರಾಮಹಿತ, ನಗರಹಿತ, ರಾಜ್ಯಹಿತ, ರಾಷ್ಟ್ರಹಿತಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ನಮ್ಮ ಕರ್ತವ್ಯಗಳನ್ನು ನಿರ್ವಹಿಸುವ ಮನಸ್ಸು ನಮಗೆ ಬರಲಿ. ಇತರರು ಹೀಗೆ ಮಾಡುತ್ತಾರೋ ಇಲ್ಲವೋ, ನಾವೊಬ್ಬರು ಮಾಡಿಬಿಟ್ಟರೆ ಆಯಿತೇ ಎಂದುಕೊಂಡು ಹತ್ತರಲ್ಲಿ ಒಬ್ಬರಾಗದೆ ನಾವಾದರೂ ಹೀಗೆ ಮಾಡುವ ಮನಸ್ಸು ಮಾಡಿದಲ್ಲಿ ಅದು ಕೆಲವರಿಗಾದರೂ ಪ್ರಭಾವ ಬೀರದೇ ಇರುವುದಿಲ್ಲ. ಇದು ಕಡಿಮೆ ಸಾಧನೆಯಲ್ಲ. ಯಜುರ್ವೇದದ ಒಂದು ಮಂತ್ರ ಹೇಳುತ್ತದೆ: ಜೀವೇಮ ಶರದಃ ಶತಂ - ನೂರು ವರ್ಷಗಳ ಕಾಲ ಜೀವಿಸೋಣ; ಪಶ್ಶೇಮ ಶರದಃ ಶತಂ - ನೂರು ವರ್ಷಗಳ ಕಾಲ ಒಳ್ಳೆಯದನ್ನು ನೋಡೋಣ; ಶೃಣುಯಾಮ ಶರದಃ ಶತಂ - ನೂರು ವರ್ಷಗಳ ಕಾಲ ಒಳ್ಳೆಯದನ್ನು ಕೇಳೋಣ; ಪ್ರಬ್ರವಾಮ ಶರದಃ ಶತಂ - ನೂರು ವರ್ಷಗಳ ಕಾಲ ಒಳ್ಳೆಯ ಮಾತುಗಳನ್ನಾಡೋಣ; ಅದೀನಾ ಸ್ಯಾಮ ಶರದಃ ಶತಂ - ನೂರು ವರ್ಷಗಳ ಕಾಲ ಸ್ವತಂತ್ರವಾಗಿ, ಆತ್ಮಗೌರವದಿಂದ ಜೀವಿಸೋಣ; ಭೂಯಶ್ಚ ಶರದಃ ಶತಾತ್ - ಈ ರೀತಿಯಲ್ಲಿ ನೂರು ವರ್ಷಗಳಿಗೂ ಹೆಚ್ಚು ಕಾಲ ಜೀವಿಸಿರೋಣ. ಸಂಕ್ರಾಂತಿ ಸತ್ ಕ್ರಾಂತಿಗೆ, ಸಮ್ಯಕ್ ಕ್ರಾಂತಿಗೆ ನಾಂದಿಯಾಗಲಿ.
-ಕ.ವೆಂ.ನಾಗರಾಜ್.