ಸಂಕ್ರಾಂತಿಯ ಸವಿಗೆ ಎರಡು ಗಝಲ್ ಗಳು

ಸಂಕ್ರಾಂತಿಯ ಸವಿಗೆ ಎರಡು ಗಝಲ್ ಗಳು

ಕವನ

೧.

ದಿನಕರ ಪಥವನು ಸನ್ಮಾರ್ಗದಲಿ ನಡೆಸುವನು ನೋಡಿದೆಯಾ ಮನುಜ

ಕನಿಕರ ತುಂಬಿ ಜೀವಿಗಳ ಹರಸುವನು ಕೇಳಿದೆಯಾ ಮನುಜ

 

ಉತ್ತರಾಯಣದ ಪರ್ವ ಕಾಲದೊಳು ಪುಣ್ಯ ಕಾರ್ಯಂಗಳ ಮಾಡಬೇಕಲ್ಲವೇ

ದಕ್ಷಿಣಾಯಣದ ಸರ್ವ ವ್ಯವಹಾರಗಳ ಮರೆತು ನಡೆದೆಯಾ ಮನುಜ

 

ಕಬ್ಬು ಡೊಂಕಾದರೂ ಸಿಹಿಯಾದ ರಸವ ನೀಡುವುದು ಸಹಜ

ಮಬ್ಬು ಕವಿದಂತೆ ಬದುಕಲಿ ಹೆಜ್ಜೆಗಳ ಊರಿದೆಯಾ ಮನುಜ

 

ಎಳ್ಳು ಬೆಲ್ಲ ಸೇವಿಸಿ ಒಳ್ಳೊಳ್ಳೆ ಮಾತುಗಳನಾಡಬೇಕಿಂದು

ಕಳ್ಳನಂತಾಗದೆ ಮಳ್ಳತನದಲಿ ಎಲ್ಲವನು ಗೆಲ್ಲುವೆನೆಂಬ ಹುಂಬತನದಿ ಮೆರೆದೆಯಾ ಮನುಜ

 

ಭೋಗಿಯ ಬೆಂಕಿಯಲಿ ಹಳೆಯದನು ಸುಟ್ಟು ಉರುಹಿ ಬಿಡು

ತ್ಯಾಗಿಯಾಗಿ ಆದರ್ಶ ಮಾನವೀಯ ಮೌಲ್ಯಗಳ ತೋರಿದೆಯಾ ಮನುಜ

 

ಪಶು ಸಂಪತ್ತು ಆರ್ಥಿಕ ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಿದೆ

ಕಸುವಿನ ತಾಕತ್ತು ರಟ್ಟೆಗಳಲಿ ಅಡಗಿದ್ದು ಸ್ಫೂರ್ತಿಯೆಂದು ಹೇಳಿದೆಯಾ ಮನುಜ

 

ರತ್ನಳ ತನುಮನದಲಿ ನವೋಲ್ಲಾಸ ಚೈತನ್ಯಗಳು ತುಂಬಿವೆ

ಹೊನ್ನ ಕಾಂತಿಯಲಿ ಕೈಯ ನೀಡಿ ಸಹಕರಿಸಿ ಮಿಂಚಿದೆಯಾ ಮನುಜ

 

-ರತ್ನಾಕೆ ಭಟ್ ತಲಂಜೇರಿ

***

೨.

ಪಥವನು ಬದಲಿಸಿ ಸೂರ್ಯ ರಶ್ಮಿಯ ತಂದ ಸಂಕ್ರಾಂತಿ

ಮನೆಮನಗಳಲಿ ನಲಿಯುತಿರೆ ಬಹಳ ಚಂದ ಸಂಕ್ರಾಂತಿ

 

ರಂಗವಲ್ಲಿಯ ಚಿತ್ತಾರ ಬಾಗಿಲ ಮುಂದೆ ಅಲಂಕಾರವು

ಅಂಗಳದಲ್ಲಿ ರಾಶಿಹಾಕಿದ ಪೈರಿನ ಅಂದ ಸಂಕ್ರಾಂತಿ

 

ಎಳ್ಳು ಬೆಲ್ಲದ ಜೊತೆಗೆ ಹುಗ್ಗಿಯ ಪಾಯಸ ನೀಡುತಲೆ ಸಾಗಿ

ಸಿಹಿಕಹಿಯ ಹಂಚುತ ಬಂತು ನೋಡು ಕಂದ ಸಂಕ್ರಾಂತಿ

 

ಸುಖದ ಶಾಂತಿ ಆರೋಗ್ಯ ಭಾಗ್ಯ ಲಭಿಸಿ ಜನವು ಬಾಳಲು

ಉಲ್ಲಾಸ ಉತ್ಸಾಹ ಸ್ನೇಹವರಿತು ಇಲ್ಲೆ ನಿಂದ ಸಂಕ್ರಾಂತಿ

 

ಮೊದಲ ಹಬ್ಬ ಜನರ ನಲಿವು ನೋಡಿ ಈಶ ಹರಸಿದ

ಉತ್ತರಾಯಣ ಪುಣ್ಯಕಾಲಕೆ ನಲಿದು ಬಂದ ಸಂಕ್ರಾಂತಿ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ವಿಜಯ ಕರ್ನಾಟಕ ಜಾಲ ತಾಣ

 

ಚಿತ್ರ್