ಸಂಕ್ರಾಂತಿ ಸಂಭ್ರಮಕ್ಕೆ ಎರಡು ಗೀತೆಗಳು
ಸಂಕ್ರಾಂತಿ ಮಕರ ಸಂಕ್ರಾಂತಿ ಬಂತು
ನಾಡಿನಗಲಕೆ ಜನರ ಪಾಲಿಗೆ ತಂತು//
ಪಥವ ಬದಲಿಸುತ ಬಂತೇ ಬಂತು
ಭಾಸ್ಕರನ ಹೊಂಗಿರಣ ಪ್ರಭೆಯ ಬೀರಿತು//
ರೈತ ಮಂದಿಯು ಪೈರ ಬೆಳೆಯುತ
ಮನೆಯ ಮುಂದೆ ರಾಶಿ ಹಾಕುತ/
ಸುಗ್ಗಿಯ ಮಾಡುತ ಹಿಗ್ಗಲಿ ಕುಣಿಯುತ
ಹುಗ್ಗಿಯ ಪಾಯಸ ಮಾಡುತ ಸವಿಯುತ//
ರಂಗು ರಂಗಿನ ರಂಗವಲ್ಲಿ ಬಿಡಿಸುತ
ಎಳ್ಳುಬೆಲ್ಲ ಮೆದ್ದು ಒಳ್ಳೆಯ ಮಾತನಾಡುತ/
ಸುಖ ಶಾಂತಿ ಆರೋಗ್ಯ ಬೇಡುತ
ಕಳೆ ಕೊಳೆಗಳ ಹೊರದೂಡಿ ಮೆರೆಯುತ//
ಸಕ್ಕರೆ ಅಚ್ಚು ಕಡಲೆ ಶೇಂಗ ಮೆಲ್ಲುತ
ಸಂಕ್ರಾಂತಿ ಸಂಭ್ರಮ ಆಚರಣೆ ಮಾಡುತ/
ಉತ್ತರಾಯಣದ ಪುಣ್ಯ ಕಾಲಕೆ ಕಾಲಿಡುತ
ಸಪ್ತಾಶ್ವ ರಥವೇರಿದ ರವಿಯ ಪೂಜೆ ಮಾಡುತ//
ರಾಸುಗಳ ಕೋಡಿಗೆ ಬಣ್ಣ ಬಳಿಯುತ
ಉರಿವ ಕೆಂಡದಿ ಓಡೋಡಿ ಹಾಯಿಸುತ/
ಬದಲಾವಣೆಯ ಹೊಸ ಗಾಳಿ ಬೀಸಿತು
ತನುಮನದಿ ನವಪುಷ್ಪವರಳಿತು//
***
ಜಾನಪದ ಶೈಲಿಗೀತೆ
ತವರಿಗೆ ಬಂದೀನಿ ಸಂಕ್ರಾಂತಿ ಹಬ್ಬಕೆ
ಗೆಳತಿಯರ ಜೊತೆಸೇರಿ ಜೋಕಾಲಿ/
ಜೀಕುತ ಖುಷಿಯನ್ನು ಹೊಂದೋಣ ಬನ್ನಿರೇ--/
ಆಲದ ಮರಕೆ ತೂಗು ಹಾಕೋಣ
ಸರದಿಯಲಿ ಉಯ್ಯಾಲೆ ಆಡೋಣ
ಸಂಭ್ರಮದಿ ಹಾಡೋಣ ಬನ್ನಿರೇ--/
ಲಂಗ ದಾವಣಿಯ ಧರಿಸಿಹೆವು ನಾವಿಂದು
ಮಾರುದ್ದ ಜಡೆಯ ಹೆಣೆದಿಹೆವು
ಮುಡಿಗೆ ಕಾಕಡವ ಮುಡಿಯೋಣ ಬನ್ನಿರೇ-/
ಊರ ತೋಪಿನಲಿ ಪ್ರಕೃತಿಯ ಚೆಲುವಿನಲಿ
ಒಟ್ಟಾಗಿ ಸೇರಿ ಸಂತಸವ ಹಂಚೋಣ
ಬಾಲ್ಯ ಕಾಲವ ನೆನಪು ಮಾಡೋಣ ಬನ್ನಿರೇ--/
ಜೋಕಾಲಿಯಲಿ ಗೆಳತಿ ನೀ ಮೊದಲು ಜೀಕುತ
ಆನಂದ ಹೊಂದಿ ನಲಿಯುತ
ಜೀವನದ ಕಹಿಗಳ ಮರೆಯೋಣ ಬನ್ನಿರೇ--/
ಉಯ್ಯಾಲೆಯ ಏರಿಳಿತ ಬದುಕಿನ ಆಟ
ತವರು ಮನೆಯು ಸುಖವಾಗಿರಲಿ
ನೆನೆಯೋಣ ದ್ಯಾವರ ಒಂದಾಗಿ ಬನ್ನಿರೇ--/
-ರತ್ನಾ ಕೆ. ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
