ಸಂಗೀತದಲ್ಲಿ `ರಾಮನ್ ಪರಿಣಾಮ'

ಸಂಗೀತದಲ್ಲಿ `ರಾಮನ್ ಪರಿಣಾಮ'

ಬರಹ

ರೈಧುನ್ನಲ್ಲಿ ಮಧುರವಾದ ವೀಣೆಯ ನಾದ ತೇಲಿ ಬರುತ್ತಿತ್ತು. ಕಲ್ಯಾಣಿ ರಾಗದ ಆಲಾಪನೆ ಮನಮೋಹಕವಾಗಿ ನನ್ನ ಕಿವಿಗಳಿಗೆ ಜೇನನ್ನು ಸುರಿಸುತ್ತಿತ್ತು. ಪಿಚ್ಚುಮಣಿ ಅಯ್ಯರ್ ವೀಣೆ ಕೇಳುತ್ತಲೇ ನನ್ನ ವೀಣೆಯ ಕಡೆ ಒಮ್ಮೆ ಕಣ್ಣು ಹಾಯಿಸಿದೆ. ಈಗ್ಗೆ ಒಂದು 15 ವರ್ಷಗಳ ಕೆಳಗೆಲ್ಲಾ ಆಸೆಯಿಂದ ನುಡಿಸುತ್ತಿದ್ದ ವೀಣೆ ಮುಸುಕು ಹಾಕಿ ನಿಶ್ಚಲವಾಗಿ ಕೂತಿತ್ತು. ಸ್ಕೂಲ್ ಕೆಲಸಗಳ ನಡುವೆ ಬಿಡುವು ಆಗದೇ ನುಡಿಸುವುದೇ ಬಿಟ್ಟು ಹೋಗಿತ್ತು. ಈಗ ನುಡಿಸಲು ಹೋದರೆ ಒಂದು ಗೀತೆ ಕೂಡ ನುಡಿಸಲು ಸಾಧ್ಯವಾಗುತ್ತದೋ ಇಲ್ಲವೋ ಎಂಬ ಅನುಮಾನ ಬಂತು. ಪರೀಕ್ಷಿಸಿಕೊಳ್ಳಲು ಧೈರ್ಯವಾಗದೇ ಸುಮ್ಮನೆ ಕುಳಿತೆ. ವೀಣೆಯನ್ನು ನೋಡುತ್ತಾ ಕುಳಿತಿದ್ದಾಗ ಪಿಚ್ಚುಮಣಿ ಅಯ್ಯರ್ ಅವರು ತಾರ ಸ್ಥಾಯಿಯಲ್ಲಿ ಆಲಾಪನೆ ಮಾಡುತ್ತಿದ್ದರು. ತಾರಸ್ಥಾಯಿಗೆ ಹೋದ ಹಾಗೂ ನಮ್ಮ ಎರಡು ಕೈಗಳ ನಡುವಿನ ಅಂತರ ಕಡಿಮೆ ಆಗುವುದನ್ನೂ ಕೆಳಗಿನ ಸ್ಥಾಯಿಗೆ ಬರುವಾಗ ಅಂತರ ಹೆಚ್ಚುವುದನ್ನೂ ನೆನೆಯುತ್ತಾ ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರ ನೆನಪಾಯಿತು. ಅವರೇ ತಾನೆ ಸಂಗೀತ ವಾದ್ಯಗಳಲ್ಲಿ ಉಂಟಾಗುವ ನಾದದ ಬಗ್ಗೆ ಪ್ರಯೋಗಗಳನ್ನು ನಡೆಸಿ ಸಂಗೀತದಲ್ಲಿ ವಿಜ್ಞಾನವನ್ನು ನುಸುಳಿಸಿದವರು! ಅವರು ತಮ್ಮ ಗಮನವನ್ನು ಮೊದಲು ಕೇಂದ್ರೀಕರಿಸಿದ್ದು ಪಿಟಿಲಿನ ಕಡೆಗೆ. ಅವರ ಗಮನ ಹೀಗೆ ಕಂಪನ ತರಂಗಗಳ ಮತ್ತು ಧ್ವನಿ ವಿಜ್ಞಾನದ ಕಡೆ ತಿರುಗಲು ಎರಡು ಕಾರಣಗಳು. ಮೊದಲನೆಯದು ಅವರ ಚಿಕ್ಕ ವಯಸ್ಸಿನಲ್ಲೇ ಜೆರ್ಮನ್ ವಿಜ್ಞಾನಿ ಹೆಲ್ಮ್ಹೋಲ್ಟ್ಸ್ (Scientist Helmholtz) ಅವರು ಧ್ವನಿ ವಿಜ್ಞಾನದಲ್ಲಿ (acoustics) ಮಾಡಿದ ಪ್ರಯೋಗಗಳ ಬಗ್ಗೆ ಓದಿದ್ದು. ಮತ್ತೊಂದು ಅವರ ತಂದೆ ಶ್ರೀಯುತ ಚಂದ್ರಶೇಖರ ಅಯ್ಯರ್ ಅವರು ಅತ್ಯದ್ಭುತವಾಗಿ ವಯೋಲಿನ್ ನುಡಿಸುತ್ತಿದ್ದುದು.

ರಾಮನ್ ಅವರು, ಬಡವರು ಸಾಧುಗಳು ಉಪಯೋಗಿಸುತ್ತಿದ್ದ ಏಕ್ತಾರಾ ನೋಡಿ ಅದರಂತೆ ತಾನೊಂದು ಏಕ್ತಾರಾ ಸ್ವಂತಕ್ಕೆ ತಯಾರಿಸಿಟ್ಟುಕೊಂಡು ಅದರಲ್ಲಿ ವಿವಿಧ ಪ್ರಯೋಗಗಳನ್ನು ಮಾಡಿದರು. ಇದರಿಂದ ಗುರುತಿಸಲಾಗುವ ಪ್ರತಿಕಂಪನಗಳ (Remarkable resonances) ಬಗ್ಗೆ ಅಧ್ಯನನ ಪ್ರಾರಂಭಿಸಿದರು.
ಮೊದಲು ಅವರು ಕೈಗೆತ್ತಿಕೊಂಡದ್ದು ವಯೋಲಿನ್. ಭೌತಶಾಸ್ತ್ರದ ಪ್ರಕಾರ ಪಿಟಿಲಿನಲ್ಲಿ ಮೂರು ಮುಖ್ಯ ಅಂಗಗಳು. ಅವು ತಂತಿ, ತಂತಿಯನ್ನು ಪೆಟ್ಟಿಗೆಗೆ ಸೇರಿಸುವ ಸೇತುವೆ ಹಾಗೂ ನಾದ ಹುಟ್ಟಿಸುವ ಪೆಟ್ಟಿಗೆ. ಈ ಪೆಟ್ಟಿಗೆ ತಂತಿಯ ಕಂಪನದಿಂದ ಉಂಟಾಗುವ ನಾದವನ್ನು ಹೀರಿಕೊಂಡು ತಾನು ಕಂಪಿಸಿ ನಾದವನ್ನು ಹೊರಸೂಸುತ್ತದೆ. ಇಲ್ಲಿ ಇಂಗ್ಲಾಂಡಿನ ಪ್ರಸಿದ್ದ ವಿಜ್ಞಾನಿ ರೇಲಿಗ್ (scientist Lord Rayleigh) ಕಂಡುಹಿಡಿದ ಒಂದು ವಿಚಾರವೂ ಕಂಡುಬರುತ್ತದೆ. ಅವರು frequency (ಒಂದು ನಿರ್ಧಿಷ್ಟ ಕಾಲದಲ್ಲಾಗುವ ಕಂಪನದ ಆವರ್ತ ಸಂಖ್ಯೆ) 256Hz ಇರುವ ಒಂದು ಟ್ಯೂನಿಂಗ್ ಫೋರ್ಕನ್ನು ತೆಗೆದುಕೊಂಡು ಅದನ್ನು ಪ್ರತಿನಾದ ಹೊರಡಿಸುವ 512Hz ಆವರ್ತ ಸಂಖ್ಯೆ ಇರುವ ಪೆಟ್ಟಿಗೆಯ (Resonance-box) ಮೇಲಿಟ್ಟಾಗ 256Hzನ ನಾದ ಸ್ವಲ್ಪ ಅಥವಾ ಕೇಳಿಸಲೇ ಇಲ್ಲವೇನೋ ಅನ್ನುವಷ್ಟು ಕಡಿಮೆಯಾಗಿ 512Hz ಆವರ್ತ ಸಂಖ್ಯೆ ಇರುವ ಪೆಟ್ಟಿಗೆಯ ಧ್ವನಿ ಜೋರಾಗಿ ಕೇಳಿಸಿತು. ಪ್ರತಿನಾದದ ಪೆಟ್ಟಿಗೆ ನಾದ ಎಬ್ಬಿಸುವುದಿಲ್ಲ ಎಂದು ರೇಲಿಗ್ ತಿಳಿದಿದ್ದರು. ಆದರೆ ಅದು ಹೀಗೆ ನಾದ ಹೊರಡಿಸಿದ್ದು ರೇಲಿಗ್‍ರವರರ ಹೊಸ ಅನ್ವೇಷಣೆಯಾಗಿತ್ತು. ಇದು ರಾಮನ್ ಅವರ ಗಮನ ಸೆಳೆಯಿತು. ಇದರಿಂದ ಸ್ಪೂರ್ತಿಗೊಂಡ ರಾಮನ್ ಅವರು ತನ್ನ ಸ್ವಂತ ನಾದಕ್ಕಿಂತ ಹೆಚ್ಚು frequency ಹೊರಸೂಸುವ ಬೇರೆ ಯಾವುದಾದರೂ ಉಪಕರಣದ ಉದಾಹರಣೆ ಇದೆಯೇ ಎಂದು ಪ್ರಯೋಗ ಮಾಡಿದರು. ಒಂದು ತೆಳುವಾದ ತಂತಿಯನ್ನುಒಂದು ಹಲಗೆಗೆ ಸಿಕ್ಕಿಸಿ ಅದನ್ನು ಒಂದು ಫ್ರೇಂಗೆ ಬಿಗಿದು ಕಟ್ಟಿದರು. ಈ ತಂತಿಯನ್ನು ಒಮ್ಮೆ ಮೀಟಿದಾಗ ರೇಲಿಗ್‍ರವರ ಪ್ರಯೋಗದಲ್ಲಾದಂತೆ ಅದರ frequencyಯ ಎರಡುಪಟ್ಟು ನಾದ ಹೊಮ್ಮಿಸಿತು. ಆ ತಂತಿಯ ಉದ್ದವನ್ನು ಹೆಚ್ಚು ಮಾಡಿದಾಗ frequency ಕಡಿಮೆಯಾಗುತ್ತಿತ್ತು. ಕಡಿಮೆ ಮಾಡಿದಂತೆಲ್ಲಾ frequency ಹೆಚ್ಚಾಗುತ್ತಿತ್ತು. ಜೊತೆಗೆ ತಂತಿಯ ದಪ್ಪ ಹೆಚ್ಚಾದಷ್ಟು frequency ಕಡಿಮೆಯಾಗುತ್ತಿತ್ತು. ತಂತಿ ಹೆಚ್ಚು ತೆಳ್ಳಗಿದ್ದಷ್ಟೂ frequency ಹೆಚ್ಚಿರುತ್ತಿತ್ತು.ಅಂದರೆ ತಂತಿಯ ಉದ್ದ ಮತ್ತು frequency ವಿಲೋಮ ಅನುಪಾತದಲ್ಲಿದೆ. ಹಾಗೆಯೇ ತಂತಿಯ ದಪ್ಪ ಹಾಗೂ frequency ಸಹಾ ವಿಲೋಮ ಅನುಪಾತದಲ್ಲೇ ಇದೆ. ಆದರೆ ತಂತಿಯ ಬಿಗಿತ ಹೆಚ್ಚಾದಷ್ಟೂ frequency ಹೆಚ್ಚಾಗುತ್ತದೆ. ಅಂದರೆ ಅವು ಅನುಲೋಮ ಅನುಪಾತ. ಈಗ ಅದನ್ನು ಒಂದು ಸೂತ್ರದ ಮೂಲಕ ಕಂಡುಹಿಡಿಯುತ್ತೇವೆ. ಉದಾಹರಣೆಗೆ ಪಿಟಿಲಿನ ನಾಲ್ಕು ತಂತಿಗಳ frequency ಅಂದಾಜಿನಲ್ಲಿ 196Hz, 294Hz, 440Hz ಮತ್ತು 659Hz. ಹೀಗಾಗಿ ಈ ವಾದ್ಯದಲ್ಲಿ ನುಡಿಸುವ ಮಧ್ಯಮ ಸ್ಥಾಯಿಯೊಂದಿಗೆ ತಾರಸ್ಥಾಯಿ, ಮಂದ್ರಸ್ಥಾಯಿ ಹಾಗೂ ಅನುಮಂದ್ರ ಸ್ಥಾಯಿಯವರೆಗೂ ಹೋಗಬಹುದು. ಇದು ವಾದ್ಯಗಳ ವೈಶಿಷ್ಟ್ಯ. ಭೌತ ಶಾಸ್ತ್ರದ ಪ್ರಯೋಗ ಮಾಡುವಾಗ ಆಯಾ ಸಂದರ್ಭಕ್ಕೆ ಸೂಕ್ತವಾದ ಪರಿಮಾಣಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಮತ್ತು ಅವುಗಳ ಮೇಲೆ ನಮ್ಮ ಹತೋಟಿ ಸಾಧಿಸಬೇಕು. ಪಿಟಿಲಿನ ಮೇಲೇ ಕಮಾನನ್ನು ಉಜ್ಜುವಾಗ ಅದನ್ನು ಉಜ್ಜಬೇಕಾದ ತಂತಿ, ಅಲ್ಲಿ ಉಪಯೋಗಿಸಬೇಕಾದ ಬಲ ಹಾಗೂ ಮತ್ತೊಂದು ಕೈಯಿನ ಬೆರಳು ಸರಿಯಾದ ಸ್ವರದ ಮೇಲೆ ಸಂಚರಿಸುವುದು ಎಲ್ಲದರ ಅರಿವು ಸಂಪೂರ್ಣವಾಗಿದ್ದಾಗ ಮಾತ್ರ ಒಬ್ಬ ಪಿಟಿಲು ವಾದಕ ಅದರಲ್ಲಿ ಪ್ರಾವೀಣ್ಯತೆಯನ್ನು ಸಾಧಿಸಬಹುದು. ರಾಮನ್ ಅವರು ತನ್ನ ಪ್ರಯೋಗಶಾಲೆಯಲ್ಲಿದ್ದ ಮತ್ತೆ ಕೆಲವು ಸೈಕಲ್ ಅಂಗಡಿಯಿಂದ ತಂದ ಬೇಡದ ವಸ್ತುಗಳಿಂದ ಒಂದು ಪಿಟಿಲನ್ನು ನುಡಿಸುವ ಯಂತ್ರವನ್ನು ಕಂಡುಹಿಡಿದರು. ತಮಾಶೆಯೆಂದರೆ ಅದರಲ್ಲಿ ಕಮಾನು ಸ್ಥಿರವಾಗಿತ್ತು. ಅದರ ಮೇಲೆ ಪಿಟಿಲನ್ನು ಓಡಾಡಿಸಿ ನುಡಿಸಬೇಕಿತ್ತು! ಸಧ್ಯ ಇವತ್ತಿನ ಪರಿಸ್ಥಿತಿ ಹಾಗಿಲ್ಲ! ರಾಮನ್ ಅವರು ಕಮಾನು ಹಾಕುವಾಗಿನ ಬಲದ ಪ್ರಮಾಣದ ಬಗ್ಗೆ ಮತ್ತು ತಂತಿಯ ಮೇಲೆ ಒತ್ತಿದಾಗ ಆ ಭಾಗಕ್ಕೂ ಮತ್ತು ಕಮಾನು ಹಾಕುವ ಜಾಗಕ್ಕೂ ಇರುವ ಉದ್ದದ ಅಳತೆ ಎಲ್ಲವನ್ನೂ ಅಳತೆಗೋಲಾಗಿ ಇಟ್ಟುಕೊಂಡು ಒಂದು ಆವರ್ತ ಸಂಖ್ಯೆ ಪ್ರತಿಕ್ರಿಯಿಸುವ ಪರಿಮಾಣ ರೇಖೆ (frequency response curve) ಗಮನಿಸಿದರು. ಇದನ್ನು ನಾವು ರಾಮನ್ ಕರ್ವ್ ಎಂದು ಹೇಳುತ್ತೇವೆ.
ರಾಮನ್ ಅವರು ಪಿಟಿಲಿನ ಮೇಲೆ ಮಾಡಿದ ಅಧ್ಯಯನ ಎಷ್ಟು ವಿಸ್ತಾರವಾಗಿತ್ತೆಂದರೆ 158 ಪುಟಗಳ ಒಂದು ಪುಸ್ತಕವನ್ನೇ ಅದರ ಮೇಲೆ ಬರೆದಿದ್ದಾರೆ. ಆ ಪುಸ್ತಕದ ಹೆಸರೇನು ಗೊತ್ತಾ?
“On the mechanical Theory of Vibrations of Musical Instruments of the Violin Family with experimental verification of the Results-part 1”
ತುಂಬಾ ಚಿಕ್ಕದಾಗಿದೆ ಅಲ್ವಾ? ಆದರೆ ಅದರ ಎರಡನೇ ಭಾಗ ಬರಲೇ ಇಲ್ಲವಂತೆ. ಅವರು ತನ್ನ ಎಷ್ಟೋ ಲೇಖನಗಳಿಗೆ ಭಾಗ 1 ಎಂದು ಹಾಕಿರುತ್ತಾರೆ ಆದರೆ ಅವು ಯಾವುದಕ್ಕೂ ಎರಡನೇ ಬಾಗ ಬರೆದೇ ಇಲ್ಲವಂತೆ. ಅದರ ಕಾರಣ ಎಂದರೆ ಅವರ ತಲೆಯಲ್ಲಿ ವಿವಿಧ ಯೋಜನೆಗಳು ಎಷ್ಟು ಜಾಸ್ತಿಯಿದ್ದವು ಎಂದರೆ ಎಲ್ಲ ವಿಷಯಗಳ ಮೊದಲನೇ ಭಾಗ ಬರೆಯುವುದರಲ್ಲಿ ಎರಡನೇ ಭಾಗ ಬರೆಯುತ್ತೇನೆ ಎಂದುಕೊಂಡದ್ದು ಆಗಲೇ ಇಲ್ಲವಂತೆ. ಹಾಗಾದರೆ ಅವರ ಅಧ್ಯಯನ ಎಷ್ಟು ವಿಸ್ತಾರವಾದದ್ದಾಗಿರಬೇಕು!
ವೀಣೆ ಮತ್ತು ತಂಬೂರಿಗಳ ಪರಿಚಯ ನಮಗೆಲ್ಲಾ ಇದ್ದೇ ಇದೆ. ರಾಮನ್ ಅವರು ತಂಬೂರಿಯ ಮಧುರ ಝೇಂಕಾರ ನಾದ ಮತ್ತು ವೀಣೆಯ ಹಿತವಾದ ಮಧುರ ನಾದದ ಕಾರಣ ಅವುಗಳ ತಂತಿಯನ್ನು ಬುರುಡೆಗೆ ಸೇರಿಸಿರುವ ಸೇತುವೆಯ ವಿಶಿಷ್ಟತೆಯೇ ಕಾರಣ ಎನ್ನುತಾರೆ. ಪಾಶ್ಚಿಮಾತ್ಯ ವಾದ್ಯಗಳ ಸೇತುವೆ ಚೂಪಾಗಿರುತ್ತವೆ ಆದರೆ ವೀಣೆ ಮತ್ತು ತಂಬೂರಿಯ ಸೇತುವೆಗಳು ಗುಂಡಾಗಿ ಅಗಲವಾಗಿ ಇರುತ್ತವೆ.
ರಾಮನ್ ಅವರು ನಮ್ಮ ಹಿಂದಿನ ತಲೆಮಾರಿನವರು ಹೊಂದಿದ್ದ ಸ್ವರಜ್ಞಾನದ ಬಗ್ಗೆ ಆಕರ್ಷಣೆಗೊಳಗಾಗಿದ್ದಾರೆ. ಧ್ವನಿ ವಿಜ್ಞಾನದಲ್ಲಿ ಗುರುತಿಸಬಹುದಾದ ಅವರ ನೀತಿನಿಯಮಗಳ ಬಗ್ಗೆ ಮೆಚ್ಚುಗೆ ರಾಮನ್ ಅವರದ್ದು. ಚರ್ಮವನ್ನು ಎಳೆದು ಕಟ್ಟಿ ನುಡಿಸುವ ತಾಳವಾದ್ಯಗಳನ್ನು ಅವನದ್ದ ವಾದ್ಯಗಳು ಎನ್ನುತ್ತೇವೆ. ಅವರ ದೃಷ್ಟಿಯಲ್ಲಿ ಪಾಶ್ಚಿಮಾತ್ಯರ ತಟ್ಟಿ ಬಾಜಿಸುವ ವಾದ್ಯಗಳೆಲ್ಲಾ ಮುಚ್ಚಿದ ರಂಗಮಂದಿರಗಳಲ್ಲಿ ಬಾಜಿಸಲು ಸಾಧ್ಯವಾಗುವುದಿಲ್ಲ ಏಕೆಂದರೆ ಅವುಗಳ ಶಬ್ದ ಕಿವಿಗಳನ್ನು ಕೊರೆದು ಹಾಕಿಬಿಡುತ್ತವೆ. ಅವೇನಿದ್ದರೂ ಬಯಲು ರಂಗಮಂದಿರದಲ್ಲೇ ಸರಿ. ಆದರೆ ಭಾರತೀಯ ಸಂಗೀತದ ತಾಳವಾದ್ಯಗಳು ಸಂಪೂರ್ಣವಾಗಿ ಬೇರೆಯದೇ ಆಗಿರುತ್ತವೆ. ಮೃದಂಗ, ತಬಲ, ಡಮರುಗ ಮುಂತಾದ ವಾದ್ಯಗಳು. ಹಾಡುಗಾರರೊಂದಿಗೆ ಪಕ್ಕವಾದ್ಯವಾಗಿ ಬಾರಿಸುತ್ತಿದ್ದರೆ ಕರ್ಣಾನಂದವಾಗಿರುತ್ತದೆ. ಈ ಕಾರಣಕ್ಕಾಗಿಯೇ ರಾಮನ್ ಅವರು ನಮ್ಮ ಈ ವಾದ್ಯಗಳನ್ನೆಲ್ಲಾ ಕಂಡುಹಿಡಿದ ನಮ್ಮ ಹಿರಿಯರನ್ನು ಮೆಚ್ಚಿಕೊಂಡಿದ್ದು.
ಈ ವಾದ್ಯಗಳಲ್ಲಿರುವ ವೃತ್ತಾಕಾರದ ಸಮತಟ್ಟಾದ ಚರ್ಮ ಬೇರೆ ಬೇರೆ ವಾದ್ಯಗಳಲ್ಲಿ ಬೇರೆ ಬೇರೆ ಕಂಪನಗಳ ಮೋಡ್ಸ್ ಹೊಂದಿರುತ್ತವೆ. ಇವನ್ನು ಕಂಪನಗಳ ಸ್ವಾಭಾವಿಕ ಮೋಡ್ಸ್ ಎನ್ನುತ್ತೇವೆ. ಪಾಶ್ಚಾತ್ಯ ಡ್ರಂಗಳಲ್ಲಿ ಮೇಲಿನ ಚರ್ಮ ಸಮತಟ್ಟಾಗಿರುವುದರಿಂದ ಅವುಗಳ frequency ಸರಿಯಾದ ಅನುಪಾತದಲ್ಲಿ ಇಲ್ಲದ ಕಾರಣ ಅವು ಕಿವಿಗೆ ಹಿತವಾದ ಧ್ವನಿ ನೀಡುವುದಿಲ್ಲ. ಆದರೆ ಇವುಗಳಲ್ಲಿ ಇರುವಂತೆ ಮೇಲಿನ ಚರ್ಮ ಭಾರತೀಯ ತಾಳವಾದ್ಯಗಳಲ್ಲಿ ಇರುವುದಿಲ್ಲ. ಇವುಗಳ ದಪ್ಪ ಮತ್ತು ಸಾಂದ್ರತೆ ಸ್ವಲ್ಪ ವ್ಯತ್ಯಾಸವಾಗಿಯೇ ಇರುತ್ತವೆ. ಗಣಿತದ ವಿಶ್ಲೇಷಣೆಯ ಪ್ರಕಾರ ಎಲ್ಲಾಕಡೆಯೂ ಸಮವಲ್ಲದ ಸಾಂದ್ರತೆ ಇರುವುದರಿಂದ ಕಂಪನದ ಹೆಚ್ಚಿನ ಮೋಡ್ಸ್ ಸ್ವರಮೇಳಗಳು ಪರಸ್ಪರ ಹೊಂದಿಕೊಳ್ಳುತ್ತವೆ. ರಾಮನ್ ಉಬ್ಬು ತಗ್ಗುಗಳಿರುವ ರೇಖೆಗಳು ವೃತ್ತಗಳನ್ನು ಗುರುತಿಸುವುದಕ್ಕೆ ನುಣುಪಾದ ಚಾಕ್ ಪೌಡರ್ ಚರ್ಮದ ಮೇಲೆ ಹರಡಿ ಕಂಡುಹಿಡಿಯುವುದನ್ನು ತಿಳಿಸಿದರು. ಹೀಗೆ ತಂತಿವಾದ್ಯಗಳು ಮತ್ತು ಚರ್ಮ ವಾದ್ಯಗಳ ಮೇಲೆ ತನ್ನ ಪ್ರಯೋಗಗಳನ್ನು ನಡೆಸಿದ ಸರ್ ಸಿ.ವಿ.ರಾಮನ್ ಅವರು ಇವುಗಳನ್ನು 1917ರ ಹೊತ್ತಿಗೆ ಮುಗಿಸಿ ತನ್ನ ಗಮನವನ್ನು ಬೆಳಕಿನ ವಿಚಾರಗಳ ಕಡೆ ಕೇಂದ್ರೀಕರಿಸಲು ಪ್ರಾರಂಭಿಸಿದರು.
ಹೀಗೆ ವಿಜ್ಞಾನ ಮತ್ತು ಸಂಗೀತದ ಹಾಸುಹೊಕ್ಕಾಗಿರುವ ಸಂಬಂಧವನ್ನು ನಮಗೆ ತಿಳಿಸಿದ ಸರ್ ಸಿ.ವಿ.ರಾಮನ್ ಅವರ ಸಂಗೀತ ಮತ್ತು ವಿಜ್ಞಾನದ ಅಪಾರ ಜ್ಞಾನದ ಸವಿ ನಾವುಣ್ಣುವಂತಾಯಿತು.