ಸಂಗೀತದ ಸಾಂತ್ವನ

ಮನ ಬೇಗುದಿಯಲ್ಲಿ ಮೀಯುತ್ತಿರುವಾಗ ಸಾಂತ್ವನಕ್ಕಾಗಿ ಹಾತೊರೆಯುತ್ತದೆ. ಮನಸ್ಸಿಗೆ ನಿರಾಳತೆಯ ಅವಶ್ಯಕತೆ ಕಾಡುತ್ತದೆ. ಮಾನವ ಸಂಬಂಧಗಳ ಇತಿ ಮಿತಿಯಲ್ಲಿ ಆಸರೆ ಸಿಕ್ಕುತ್ತದಾದರೂ ಅಲ್ಲಿ ಏನೋ ಒಂದು ಕೊರತೆ ಕಾಡುತ್ತದೆ. ಹೃದಯಕ್ಕೆ ಆಗ ಜತೆಯಾಗುವುದು ಸಂಗೀತವೇ. ಇಂಪಾದ, ಅರ್ಥಗರ್ಭಿತ ಹಾಡು ಮನಕ್ಕೆ ತಂಪೆರೆಯುತ್ತದೆ. ಸಂಗೀತ ಪ್ರಪಂಚದ ವೈವಿಧ್ಯತೆ ಬದುಕಿನ ಎಲ್ಲ ಸಂದರ್ಭಗಳಿಗೂ ಅನ್ವಯಿಸುವಂತಹ ಸಾಮರ್ಥ್ಯ ಹೊಂದಿದೆ. ನಮ್ಮ ಮನಸ್ಥಿತಿಗೆ ತಕ್ಕಂತ ಸಂಗೀತದ ಆಯ್ಕೆ ಸಾಧ್ಯವಿದೆ.
ಹಾಡಿನ ಭಾವ ನಮ್ಮ ಅಂತರಂಗಕ್ಕೆ ತಟ್ಟಿದಾಗ ಬಿಗಿಯಾದ ಮನಸ್ಸು ಸಡಿಲಗೊಳ್ಳುತ್ತದೆ. ನಮ್ಮ ಮತ್ತು ನಮಗೆ ಇಷ್ಟವಾದ ಸ್ವರ ತಂತಿಯ ಮಧ್ಯೆ ಯಾವ ನಿರೀಕ್ಷೆಗಳೂ ಇಲ್ಲದೆ ಒಂದು ನವಿರಾದ ಬೆಸುಗೆ ತಳುಕುಹಾಕಿಕೊಂಡು ಸುಂದರ ಅನುಭೂತಿ ನೀಡುತ್ತದೆ. ಹಾಡಿನ ರಾಗ ಸಂಯೋಜನೆಗಳು ಮನದಲ್ಲಿ ಸಮಾಧಾನದ ಅಲೆಗಳನ್ನು ಹುಟ್ಟುಹಾಕುತ್ತದೆ.
ಮಾಂತ್ರಿಕ ಶಕ್ತಿ: ಸಂಗೀತದ ಝಲಕು ಯಾವುದೇ ಇರಲಿ, ಅದು ಆಪ್ಯಾಯಮಾನವಾಗಿರುತ್ತದೆ. ಆದರೆ ನಮ್ಮ ಭಾವಕ್ಕೆ ಹೊಂದಿಕೆಯಾಗುವ ಹಾಡನ್ನು ಆಲಿಸಿದಾಗ, ಅದು ನೀಡುವ ಅನುಭವವೇ ಚೆನ್ನ. ಯಾವುದೋ ಒತ್ತಡ ಪರಿಸ್ಥಿತಿ ಇದ್ದಾಗ, ಜೀವನ ತತ್ವ ಸಾರುವ ಸಂಗೀತ ಇಷ್ಟವಾಗುತ್ತದೆ. ಹಾಡಿನ ಮೂಲಕ ಬದುಕಿನ ಸತ್ಯ ದರ್ಶನ ಇನ್ನೂ ಪರಿಣಾಮಕಾರಿ. ಮಾಧುರ್ಯದ ಜೊತೆಯಲ್ಲಿ ವಾಸ್ತವತೆಯನ್ನು ಬಿಂಬಿಸುವ ಸಂಗೀತದ ಮಾಂತ್ರಿಕತೆಗೆ ನಾವು ತಲೆಬಾಗಲೇಬೇಕು. ಎಷ್ಟೊ ಪುಸ್ತಕಗಳನ್ನು ಓದಿ ಪಡೆಯುವ ಜ್ಞಾನ, ಯಾವುದೋ ಒಂದು ಹಾಡಿನ ಎಳೆಯಿಂದ ನಮಗೆ ದೊರೆಯಬಹುದು. ಕಾಣದಿಹ ಕೈಯೊಂದು ಸೂತ್ರ ಹಿಡಿದಿದೆ ' ಎಂಬ ಹಾಡಿನ ಸಾಲು ಹೇಳುವ ಪಾಠ ನಮ್ಮ ಕಣ್ಣು ತೆರೆಸುತ್ತದೆ. 'ಹಾಗೆಯೇ ಏನಾಗಲೀ ಮುಂದೆ ಸಾಗು ನೀ' ಎಂಬ ತತ್ತ ಒಂದು ಹಾಡಿನ ತುಣುಕಿನಲ್ಲಿ ಅಡಗಿದೆ.
ಅಂತರಂಗವನ್ನು ತಿಳಿಗೊಳಿಸುವುದು: ಬದುಕಿನಲ್ಲಿ ಕೆಲವೊಮ್ಮೆ ನಾವು ಎಣಿಸಲಾರದಂತಹ ಸವಾಲು ನಮ್ಮ ಮುಂದೆ ಎದ್ದು ನಿಲ್ಲು ಇದೆ. ಅಂತಹ ಪರಿಸ್ಥಿತಿಯಿಂದ ಹೊರಬರಲು ನಮಗೆ ಸಂಗೀತ ಬಹಳವಾಗಿ ಆಸೆಯಾಗುತ್ತದೆ. ಈ ಸಾಲಿನಲ್ಲಿ ವಿಶೇಷವಾಗಿ ದಾಸ ಸಾಹಿತ್ಯದ ಸಂಗೀತ ಅದ್ಭುತ ಎನ್ನುವ ರೀತಿಯಲ್ಲಿ ನಮಗೆ ದಾರಿ ತೋರಿಸುತ್ತದೆ. ಕನಕದಾಸರ ಮತ್ತು ಪುರಂದರದಾಸರ ಪದಗಳು ಸಂಗೀತದ ರಸಗಂಗೆಯಲಲ್ಲಿ ತೇಲಿ ಬಂದು ನಮ್ಮನ್ನು ಬಡಿದೆಬ್ಬಿಸುತ್ತವೆ. ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ಎಂಬ ಕನಕದಾಸರ ಪದ ನಮಲ್ಲಿ ಭಕ್ತಿ ರಸ ತುಂಬುತ್ತ ನಮ್ಮ ಅಂತಃ ಕರಣವನ್ನು ತಿಳಿಗೊಳಿಸುತ್ತದೆ.
ಪುರಂದರದಾಸರ ‘ನಿನ್ಯಾಕೋ ನಿನ್ನ ಹಂಗ್ಯಾಕೋ', ಅಗೋಚರ ಶಕ್ತಿಯಲ್ಲಿ ನಮ್ಮ ಶರಾಣಗತಿಯಿಂದ ಮನದ ಪ್ರಶ್ನೆಗಳಿಗೆ ಉತ್ತರ ಸಿಗುವಂತೆ ಮಾಡುತ್ತದೆ. ಕೇಳಿದ ಹಾಡನ್ನು ಗುನುಗಿಸುತ್ತ, ನಮಗೆ ಅನಿಸಿದಂತೆ ಹಾಡುತ್ತಾ ಸಮಾಧಾನ ಪಡೆಯಬ ಹುದು. ಸಂಗೀತ ಒಂದು ಔಷಧಿಯಂತೆ ಕೆಲಸ ಮಾಡುತ್ತದೆ ಎಂಬುದು ವೈಜ್ಞಾನಿಕವಾಗಿ ಕೂಡ ಸಾಬೀತಾಗಿದೆ. ಇಂಪಾದ ಹಾಡುಗಳು ನಮ್ಮೊಳಗೆ ಸಕಾರಾತ್ಮಕ ರಾಸಾಯನಿಕಗಳನ್ನು ಉಂಟು ಮಾಡಿ ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಸಂಗೀತ ಎಂಬುದು ನಿತ್ಯ ನೂತನ ಮತ್ತು ನಿರಂತರ. ಅದರ ಜತೆ ನಮ್ಮ ಪಯಣ ಸದಾ ಆನಂದಮಯ..
-ವಿದ್ಯಾ ಶಂಕರ್ ಶರ್ಮ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ