ಸಂಗೀತ ಮತ್ತು ಮೆದುಳು-ನರ ವಿಜ್ಞಾನ ಇತ್ಯಾದಿ

ಸಂಗೀತ ಮತ್ತು ಮೆದುಳು-ನರ ವಿಜ್ಞಾನ ಇತ್ಯಾದಿ

ಸಂಗೀತ ಮತ್ತು ಮೆದುಳು-ನರ ವಿಜ್ಞಾನ ಇತ್ಯಾದಿ

ನಮಗಿಷ್ಟವಾದ ಸಂಗೀತವನ್ನು ಕೇಳುವಾಗ ನಮ್ಮಲ್ಲಿ ಉಂಟಾಗುವ ಅನುಭೂತಿ ಹಲವು ಬಗೆಯದು. ಇದಕ್ಕೆ ಪೀಠಿಕೆಯಾಗಿ ಇದೇ ಸಂಪದದಲ್ಲಿ ರಾಮಕುಮಾರ್ ರವರು ಬರೆದ ’ಸಂಗೀತದ ಗುಂಗು’ ಎಂಬ ಪುಟ್ಟ ಲೇಖನವೊಂದನ್ನು ಓದಬೇಕು.  ಸಂಗೀತ ರಸಾಸ್ವಾದನೆ - ಅನುಭೂತಿಯ ಬಗ್ಗೆ ಸರಳವಾಗಿ ಮನದಟ್ಟು ಮಾಡುವಂತಹ ಸುಂದರ ಬರಹ!  (http://tinyurl.com/oauu5wy). ಈ ಅನುಭೂತಿಯನ್ನು ರಾಮಕುಮಾರ್ ಹೇಳುವಂತೆ ’ಮಾತಿಗೆ ನಿಲುಕದ್ದು’ ಅಥವಾ’ ’ಅನಿರ್ವಚನೀಯ’ ಎಂದು ಬಿಡಬಹುದು. ಇಲ್ಲವೇ ಆ ಲೇಖನಕ್ಕೆ ಗಣೇಶ ಮತ್ತು ಶ್ರೀಕರ್ ರವರು ಪ್ರತಿಕ್ರಿಯಿಸಿದಂತೆ ಸಂಗೀತ ರಸಾಸ್ವಾದನೆಯಲ್ಲಿ ಮೈಮರೆತಾಗ ಕೆಲವೊಮ್ಮೆ ’ಎದ್ದು ಕುಣಿಯುವಂತಾಗ ಬಹುದು’ ಅಥವಾ ರಾಮಮೋಹನರು ಹೇಳಿದಂತೆ ’ಶರೀರದ‌ ನರ‌ ನಾಡಿಗಳಲ್ಲಿ ನಡುಕ‌ ಉಂಟಾಗುವ‌ಂತೆಯೋ’ ಇಲ್ಲವೇ ’ಆನಂದವನ್ನುಂಟು ಮಾಡುವ‌ ನಾಡಿಯನ್ನು ಮಿಡಿಸುವಂತೆಯೋ’ ಆಗಬಹುದು. ಇವೆಲ್ಲವೂ ಮೇಲ್ನೋಟಕ್ಕೆ ಉತ್ಪ್ರೇಕ್ಷೆಯಿಂದ ಕೂಡಿದ ಪ್ರತಿಕ್ರಿಯೆಗಳೆನ್ನಿಸಿದರೂ, ಸಂಗೀತವನ್ನು ಆ ರೀತಿ ಅನುಭವಿಸಿದವರಿಗೇ ಗೊತ್ತು ಅದು  ಉತ್ಪ್ರೇಕ್ಷೆಯಲ್ಲವೆಂದು!

ಇದೆಲ್ಲವೂ ನಿಜವೇ? ಸಂಗೀತವನ್ನು ತನ್ಮಯತೆಯಿಂದ ಆಲಿಸಿದಾಗ ನಿಜಕ್ಕೂ ನಮ್ಮ ದೇಹದಲ್ಲಿ ಕಂಪನಗಳು ಮೂಡಬಹುದೇ / ಮೈ ನವಿರೇಳುವಂತೆ - ರೋಮಾಂಚನವಾಗುವಂತೆ ಆಗಬಹುದೇ? ಒಂದು ವೇಳೆ ಹಾಗಾದಲ್ಲಿ, ಆ ಅನುಭೂತಿಯನ್ನು ಯಾವುದಾದರೂ ಉಪಕರಣ ಮಾಧ್ಯಮಗಳ ಮೂಲಕ ಗ್ರಹಿಸಬಹುದೇ?

ಇವಕ್ಕೆ ಉತ್ತರ ಕಂಡುಕೊಳ್ಳಲು ಕೆನಡಾದ ಮಾಂಟ್ರಿಯಲ್ ನಲ್ಲಿನ ಮ್ಯಾಕ್ ಗಿಲ್ ವಿಶ್ವವಿದ್ಯಾಲಯದಲ್ಲಿ ಕೆಲವು ಪ್ರಯೋಗಗಳನ್ನು ನಡೆಸಲಾಯಿತು. ವೆಲೋರಿ ನಿಲೋಫರ್ ಸಾಲಿಂಪೂರ್ ಎಂಬ ಇರಾನ್ ಮೂಲದ ಯುವತಿಯೊಬ್ಬಳು ತನ್ನ ಸಂಶೋಧನಾ ಪ್ರೌಢ ಪಬಂಧಕ್ಕಾಗಿ ಆರಿಸಿಕೊಂಡ ವಿಷಯವಿದು.

ಮೊದಲಿಗೆ ಸಂಗೀತವನ್ನು ಕೇಳುವುದರಲ್ಲಿ ಅತೀವ ಆಸಕ್ತಿಯುಳ್ಳ ಮತ್ತು ಹಾಗೆ ಕೇಳುವಾಗ ಅವರೇ ಹೇಳುವಂತೆ ರೋಮಾಂಚನ / ಮೈನವಿರೇಳುವುದು / ದೇಹದಲ್ಲಿ ನವಿರಾದ ಕಂಪನ / ನಡುಕವುಂಟಾಗುವುದು (chill) ಇಂತಹ ಅನುಭವಕ್ಕೊಳಗಾದೆವೆಂದು ಹೇಳಿಕೊಂಡ ವ್ಯಕ್ತಿಗಳನ್ನು ಪ್ರಯೋಗಕ್ಕಾಗಿ ಆರಿಸಿಕೊಳ್ಳಲಾಯಿತು. ಆ ವ್ಯಕ್ತಿಗಳು ತಮ್ಮಲ್ಲಿ ಆ ವಿಧವಾದ ಅನುಭೂತಿಯನ್ನುಂಟುಮಾಡುವ ಸಂಗೀತವನ್ನು ತಾವೇ ಆರಿಸಿಕೊಂಡರು. ಆ ರೀತಿ ಆರಿಸಿಕೊಂಡ ಸಂಗೀತವು ಬರಿಯ ವಾದ್ಯಸಂಗೀತವಾಗಿರಬೇಕೆಂಬುದು (ಏಕೆಂದರೆ ಕೆಲವೊಮ್ಮೆ ಸಂಗೀತದ ಸಾಹಿತ್ಯವು ಕೇಳುಗರಲ್ಲಿ ಉಂಟಾಗುವ ಅನುಭೂತಿಯ ಮೇಲೆ ಅಡ್ಡ ಪರಿಣಾಮ ಬೀರಬಹುದೆಂಬ ಕಾರಣ)  ನಿಯಮವಾಗಿತ್ತು. ಪ್ರಯೋಗದಲ್ಲಿ ಭಾಗವಹಿಸಿದ ವ್ಯಕ್ತಿಗಳು ಅವರಿಗೆ ಇಷ್ಟವಾದ ಸಂಗೀತವನ್ನು ಕೇಳುವಾಗ ಅವರ ದೇಹಕ್ಕೆ ಜೋಡಿಸಲಾದ ತಂತಿಗಳ ಸಹಾಯದಿಂದ ದೇಹದಲ್ಲಿನ ಹಲವಾರು ಕ್ರಿಯೆಗಳನ್ನು ಅಳೆಯಲಾಯಿತು - ಅವೆಂದರೆ - ಉಸಿರಾಟದ ವೇಗ, ದೇಹದ ಉಷ್ಣತೆ, ಹೃದಯ ಮತ್ತು ನಾಡಿ ಮಿಡಿತದ ವೇಗ, ರಕ್ತದೊತ್ತಡ ಮತ್ತು ದೇಹದ ಹೊರ ಆವರಣದವಾದ ಚರ್ಮದ ಮೇಲಿನ ಸ್ಟ್ಯಾಟಿಕ್ ವಿದ್ಯುತ್ ಕ್ರಿಯೆಗಳು (ನವಿರೇಳುವಿಕೆ / ರೋಮಾಂಚನವಾಗಿ ಗುಳ್ಳೆಗಳ / ಛಳಿ ಮುಳ್ಳುಗಳ ಮೂಡುವಿಕೆ). ಇದಲ್ಲದೆ, ಅದೇ ಸಮಯದಲ್ಲಿ ಆ ವ್ಯಕ್ತಿಗಳ ಮೆದುಳಿನ ಪರೀಕ್ಷೆಗಾಗಿ ಅವರನ್ನು ಪೊಸಿಟ್ರಾನ್ ಎಮಿಷನ್ ಟ್ರಾನ್ಸ್ ಮಿಶನ್ ಸ್ಕ್ಯಾನಿಂಗ್ (ಪಿ.ಇ.ಟಿ ಸ್ಕ್ಯಾನಿಂಗ್) ಮತ್ತು ಫಂಕ್ಷನಲ್ ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್ (ಎಫ್.ಎಮ್ ಆರ್ ಐ) ಗೆ ಒಳಪಡಿಸಲಾಯಿತು. ಇದರಿಂದ ಮೆದುಳಿನ ಯಾವ ಭಾಗಗಳಲ್ಲಿ ಉದ್ದೀಪನ ಕಂಡುಬರುವುದೆಂದು ಗಮನಿಸಬಹುದಾಗಿತ್ತು. (ಚಿತ್ರ ೧). ಇದಲ್ಲದೇ ಪಿ.ಇ.ಟಿ ಸ್ಕ್ಯಾನಿಂಗ್ ವೇಳೆಯಲ್ಲಿ ದೇಹಕ್ಕೆ ರಾಕ್ಲೊಪ್ರೈಡ್ ಎಂಬ ವಿಕಿರಣಶೀಲ ದ್ರಾವಣವನ್ನು ಚುಚ್ಚಲಾಯಿತು. ಈ ದ್ರಾವಣವು ಸಂಗೀತವನ್ನು ಆಲಿಸುವಾಗ ಮೆದುಳಿನಲ್ಲಿ ಸ್ರವಿಸಬಹುದಾದ ಡೋಪಮೈನ್ ಎಂಬ ರಾಸಾಯನಿಕದೊಂದಿಗೆ ತಗಲುಹಾಕಿಕೊಳ್ಳುವುದರಿಂದ ಆ ಡೋಪಮೈನ್ ಪ್ರಮಾಣವನ್ನು ಅಳೆಯುವುದು ಅದರ ಉದ್ದೇಶವಾಗಿತ್ತು. ಈ ಡೋಪಮೈನ್ ಸ್ರವಿಕೆಯೇ ಮನಸ್ಸು ಆನಂದದ ಪರಕಾಷ್ಟೆಗೆ ತಲುಪಿದಾಗ ಉಂಟಾಗುವ ಅನುಭೂತಿಗೆ ಕಾರಣವೆಂದು ವಿಜ್ಞಾನಿಗಳು ಬೇರೆ ಸಂಶೋಧನೆಗಳಿಂದ ತಿಳಿದಿದ್ದರು. ಉದಾಹರಣೆಗೆ ಕೊಕೇನ್ ಎಂಬ ಮಾದಕದ್ರವ್ಯ ಸೇವಿಸಿದಾಗ ಮೆದುಳಿನಲ್ಲಿ ಸ್ರವಿಸುವ ಡೋಪಮೈನ್ ಪ್ರಮಾಣ ನಿಮಗೆ ಅತ್ಯಂತ ಇಷ್ಟವಾಗುವ ಆಹಾರ ಪದಾರ್ಥವನ್ನು ಸೇವಿಸಿದಾಗ ಮೆದುಳಿನಲ್ಲಿ ಸ್ರವಿಸುವ ಡೋಪಮೈನ್ ಪ್ರಮಾಣಕ್ಕಿಂತ ಸುಮಾರು ೪ ಪಟ್ಟು ಹೆಚ್ಚು ಎಂದೂ, ಈ ಡೋಪಮೈನ್ ಸ್ರವಿಕೆಯೇ ಮನಸ್ಸಿನ ಉನ್ಮಾದ ಸ್ಥಿತಿಗೆ (ಕಿಕ್ ಅಥವಾ ಹೈ) ಕಾರಣವೆಂದೂ ಹಲವಾರು ಪ್ರಯೋಗಗಳಿಂದ ನಿರೂಪಿಸಲಾಗಿತ್ತು.

ವೆಲೋರಿ ಸಾಲಿಂಪೂರ್ ಳ ಈ ಪ್ರಯೋಗಗಳಿಂದ ಹಲವು ಸಂಗತಿಗಳು ಬೆಳಕಿಗೆ ಬಂದವು:

೧. ಅತೀವ ಆನಂದದ ಅನುಭೂತಿ ನೀಡುತ್ತವೆಂದು ಹೇಳಲಾದ ಸಂಗೀತ ಪ್ರಾಕಾರಗಳಲ್ಲಿ ಹೆಚ್ಚಿನವು ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ಸಿಂಫೋನಿ / ಆರ್ಕೆಸ್ಟ್ರಾಗಳಾಗಿದ್ದವು. ಅತ್ಯಂತ ಹೆಚ್ಚು ಕೇಳಿದ ಸಂಗೀತವೆಂದರೆ ಸ್ಯಾಮ್ಯುಯೆಲ್ ಬಾರ್ಬರ್ ನ ಅಡಾಜಿಯೋ ಫಾರ್ ಸ್ಟ್ರಿಂಗ್ಸ್ ಎಂಬುದಾಗಿತ್ತು (ಅದನ್ನು ಕೇಳಲು ಈ ಕೊಂಡಿಯನ್ನು ಚಿಟುಕಿಸಿ - http://www.youtube.com/watch?v=izQsgE0L450

೨. ಸಂಗೀತದ ಆಲಿಸುವಿಕೆಯ ನಡುವಿನಲ್ಲಿ ಕೆಲವೊಂದು ನಿರ್ದಿಷ್ಟವಾದ ಹಂತಗಳಲ್ಲಿ ತಮ್ಮಲ್ಲಿ ಕಂಪನ ಉಂಟಾಯಿತೆಂದು ಸೂಚಿಸಿದ ಕ್ಷಣಗಳು, ಆ ಸಮಯದಲ್ಲಿ ಅಳೆದಂತಹ ದೇಹದ ಕ್ರಿಯೆಗಳಲ್ಲಿ (ಉಸಿರಾಟ ಇತ್ಯಾದಿ) ಉಂಟಾದ ಗಮನಾರ್ಹ ಬದಲಾವಣೆಗಳು (ಚಿತ್ರ - 'chills' - ಕೆಂಪು ಪಟ್ಟಿಯೊಳಗಿನ ಭಾಗ)  ಹಾಗೂ ಆ ಕ್ಷಣಗಳಲ್ಲಿ ಮೆದುಳಿನಲ್ಲಿ ಸ್ರವಿಸಿದ ಡೋಪಮೈನ್ ಪ್ರಮಾಣ ಇವೆಲ್ಲವೂ ಒಂದಕ್ಕೊಂದು ಪೂರಕವಾಗಿದ್ದವು!

೩. ಅತೀವ ಆನಂದದ ಅನುಭೂತಿ ನೀಡಿದ ಸಂಗೀತವನ್ನು ಕೇಳಿದಾಗ ಮೆದುಳಿನಲ್ಲಿ ಸ್ರವಿಸಿದ ಡೋಪಮೈನ್ ಪ್ರಮಾಣ ಹಲವರಲ್ಲಿ ಕೊಕೇನ್ ಸೇವಿಸಿದಾಗ ಮೆದುಳಿನಲ್ಲಿ ಸ್ರವಿಸುವ ಡೋಪಮೈನ್ ಪ್ರಮಾಣಕ್ಕಿಂತ ತುಸು ಹೆಚ್ಚೇ ಆಗಿತ್ತು!

ಈ ಫಲಿತಾಂಶಗಳನ್ನು ೨೦೧೧ರಲ್ಲಿ ನೇಚರ್ ನ್ಯೂರೋಸೈನ್ಸ್ ಎಂಬ ವೈಜ್ಞಾನಿಕ ನಿಯತಕಾಲಿಕದಲ್ಲಿ ಪ್ರಕಟಿಸಲಾಯಿತು. ಈ ಬಗ್ಗೆ ಹೆಚ್ಚಿನ್ ಮಾಹಿತಿಗಾಗಿ ಕೆಳಗಿನ ಕೊಂಡಿಗಳನ್ನು ಚಿಟುಕಿಸಿ:

https://sites.google.com/site/valoriesalimpoor/links

http://www.nature.com/neuro/journal/v14/n2/full/nn.2726.html

http://www.plosone.org/article/info%3Adoi%2F10.1371%2Fjournal.pone.0007487

http://www.pnas.org/content/110/Supplement_2/10430.full

 

ನನ್ನ ಈ ಹುಡುಕಾಟ / ತಡಕಾಟಗಳಿಂದ ನಾನು ಅರಿತಿದ್ದೇನೆಂದರೆ:

೧. ರಾಮಮೋಹನರು ಹೇಳಿದಂತೆ - ".......ಹಿಂದೋಳ‌ ರಾಗವೇ ಹಾಗೆ. ಸಾಧಾರಣ‌ `ಗಾಂದಾರ‌` ಸ್ವರ ದಿಂದ‌ ಶುದ್ಧ‌ ` ಮದ್ಯಮ` ಕ್ಕೆ ಜಾರುವಾಗ‌ ಶರೀರದ‌ ನರ‌ ನಾಡಿಗಳಲ್ಲಿ ಉಂಟಾಗುವ‌ ನಡುಕ‌ ಆನಂದವನ್ನು ನೀಡುತ್ತವೆ..."  ಇದು ನನ್ನ ಮಟ್ಟಿಗಂತೂ ಅಕ್ಷರಶಃ ನಿಜ. ಹಲವರಿಗೆ ಹಲವು ಬಗೆಯ ಸಂಗೀತ ಪ್ರಾಕಾರಗಳು ಈ ಬಗೆಯ ಅನುಭೂತಿಯನ್ನು ನೀಡಬಲ್ಲವು.

೨. ಸಂಗೀತದ ನಶೆ ಅತಿಯಾದಾಗ / ಮೇರೆ ಮೀರಿದಾಗ ಅದು ಮಾದಕ ದ್ರವ್ಯಗಳ ಸೇವನೆ ಉಂಟುಮಾಡುವಂತಹ ಸ್ಥಿತಿಯೇ ಬರಬಹುದು. ಹಾಗಾಗಿ ಶ್ರೀಕರ್ ರ ರಾಮಕುಮಾರ್ ಲೇಖನದಲ್ಲಿನ ಪ್ರತಿಕ್ರಿಯೆ "....ಎಚ್ಚರಿಕೆಯ ಮಾತು: ಹುಚ್ಚು ಹೆಚ್ಚುವುದು ಒಳ್ಳೆಯದಲ್ಲ. ಮೊಗಲಸಂತತಿಯ ಕೊನೆಕೊನೆಯ ರಾಜರುಗಳು ನಾಚ್ ಗಾಣೆಯ ಹುಚ್ಚಿಗೆ ಬಿದ್ದು ಸಾಮ್ರಾಜ್ಯ ಕಳೆದುಕೊಂಡು ನಿರ್ಗತಿಕರಾದ ಉದಾಹರಣೆ ಇದೆ..." ಇಲ್ಲಿ ಹೆಚ್ಚು ಪ್ರಸ್ತುತ! ಅತಿಯಾದರೆ ಅಮೃತವೂ ವಿಷವೆಂಬಂತೆ!

(ಲೇಖನದ ಜೊತೆಯಿರುವ ಚಿತ್ರಗಳು ವೆಲೋರಿ ಸಾಲಿಂಪೂರ್ ಳ ಪ್ರಕಟಿತ ಸಂಶೋಧನಾ ಬರಹಗಳಿಂದ ಪಡೆದದ್ದು)

ಮುಂದಿನ ಭಾಗ - "ಸಂಗೀತವನ್ನು ಕೇಳುವಾಗ ಮೆದುಳಿನಲ್ಲಿ ನಡೆಯುವ ಪ್ರಕ್ರಿಯೆಗಳು".

- ಕೇಶವ ಮೈಸೂರು

Comments

Submitted by keshavmysore Fri, 10/25/2013 - 17:37

In reply to by RAMAMOHANA

ಧನ್ಯವಾದಗಳು ರಾಮಮೋಹನ್! ನೀವು ಹಿಂದೆ ಹೇಳಿದಂತೆ ಶಿವರಂಜನಿ ರಾಗದ ಕಡೆಗೆ ಗಮನ ನೀಡುತ್ತಿದ್ದೇನೆ. ನಿಜಕ್ಕೂ ಇದೂ ಕೂಡ ತೀವ್ರವಾದ ಅನುಭೂತಿಯನ್ನು ನೀಡುವಂತಹ ರಾಗ. ಇನ್ನೊಂದು ವಿಷಯವೆಂದರೆ ನನ್ನಿಷ್ಟದ ಹಾಡುಗಳ ಪಟ್ಟಿಯಲ್ಲಿ ’ಜಾನೆ ಕಹಾ ಗಯೇ ಓ ದಿನ್’, ’ಓ ಮೇರೆ ಸನಮ್ ಓ ಮೇರೆ ಸನಮ್’, ”ಆವಾಝ್ ದೇಕೆ ಹಮೇ ತುಮ್ ಬುಲಾವೋ’, ”ಕಹಿ ದೀಪ್ ಜಲೇ ಕಹಿ ದಿಲ್’, ಮೇರೇ ರೈನಾ ಸಾವನ್ ಬಾಧೋ’ ನಂತಹ ಶಿವರಂಜನಿ ಆಧಾರಿತ ಹಲವು ಹಾಡುಗಳಿದ್ದವು. ಆದರೆ ಹಿಂದೋಳದ ಮೇಲಿನ (ಅತೀ?) ವ್ಯಾಮೋಹದಿಂದ ಈ ರಾಗದ ಕಡೆಗೆ ಕಣ್ಣು ಹಾಯಿಸಿರಲಿಲ್ಲ! ಸಕಾಲದ ಸಲಹೆಗೆ ಮತ್ತೊಮ್ಮೆ ಧನ್ಯವಾದಗಳು. ಅದಕ್ಕಾಗಿ ನಾನೀಗ ಕೇಳುತ್ತಿರುವ ಶಿವರಂಜನಿಯ ಅಭಂಗ್ ಒಂದರ ಕೊಂಡಿ: http://www.dhingana.com/visaru-nako-abhang-shivaranjani-eka-song-devi-ne...

Submitted by Shreekar Fri, 10/25/2013 - 17:55

In reply to by RAMAMOHANA

ಡಾ। ಕೇಶವ್ ಅವರೇ,

ನಮಸ್ಕಾರಗಳು. ಸಂಗೀತಶ್ರವಣದ ಅನುಭವವನ್ನು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸುವ ಪ್ರಯತ್ನವನ್ನು ಮಾಡಿರುವುದು ನಿಜಕ್ಕೂ ಅದ್ಭುತ!

ನಿಮ್ಮ ಪಾಂಡಿತ್ಯಪೂರ್ಣ ಲೇಖನ ಓದುವ ಸ್ವಲ್ಪ ಮೊದಲಷ್ಟೇ ಡೋಪಾಮೈನ್ ಮತ್ತು ಪಾರ್ಕಿನ್ ಸನ್ ಕಾಯಿಲೆಯ ಬಗ್ಗೆಯೇ ಓದುತ್ತಿದ್ದೆ !

ಎಂತಹ ಕಾಕತಾಳೀಯ ಸಂಗತಿ ನೋಡಿ.

ನಿಮ್ಮ ಲೇಖನ ಪಾರ್ಕಿನ್ ಸನ್ ರೋಗಿಗಳಿಗೆ ಉಪಯುಕ್ತವಾಗಬಹುದೇನೋ ನೋಡುತ್ತೇನೆ.

ಸಂಗೀತವು ಸಸ್ಯಗಳಿಗೆ, ಹಾಲು ಕರೆಯುವ ಗೋವುಗಳಿಗೆ ಪರಿಣಾಮಕಾರಿ ಎಂಬ ಕುರಿತಾಗಿ ಈ ಮೊದಲು ಪ್ರಯೋಗಗಳು ನಡೆದಿವೆ ಎಂದು ಕೇಳಿದ್ದೇನೆ.

Submitted by ಗಣೇಶ Wed, 10/30/2013 - 00:18

In reply to by Shreekar

-"ನಿಮ್ಮ ಲೇಖನ ಪಾರ್ಕಿನ್ ಸನ್ ರೋಗಿಗಳಿಗೆ ಉಪಯುಕ್ತವಾಗಬಹುದೇನೋ ನೋಡುತ್ತೇನೆ."
ಕೇಶವರು ಡಾಕ್ಟ್ರೆಂದು ಗೊತ್ತಾಯಿತು. ಈಗ ಶ್ರೀಕರ್‌ಜಿ ಸಹ ಡಾಕ್ಟ್ರಾ ಅಂತ ಸಂಶಯ?
************
ಕೇಶವರೆ, ಅವರು ಪರೀಕ್ಷಿಸಲು ಉಪಯೋಗಿಸಿದ ಮ್ಯೂಸಿಕ್ ಕೇಳಿದೆ(ನೀವು ಕೊಟ್ಟಕೊಂಡಿಯಿಂದ). ಇದೇ ಪರೀಕ್ಷೆಯನ್ನು ನಮ್ಮ ಹೆಸರಾಂತ ವಾದಕರ ವೀಣೆ,ಶಹನಾಯ್, ಸಂತೂರ್ ಇತ್ಯಾದಿಗಳಿಗೆ ಮಾಡಿರುತ್ತಿದ್ದರೆ ಆ ಗೆರೆಗಳು ಇಲ್ಲಿಂದ ಎಲ್ಲಿಗೋ ತಲುಪಿ ಇಳಿದು ಬರುತ್ತಿದ್ದವು. :) ಈಗ ನಿಮ್ಮ ಸಂಶೋಧನೆ ಬಗ್ಗೆ ಇನ್ನಷ್ಟೂ ಆಸಕ್ತಿ ಮೂಡಿದೆ.

Submitted by Shreekar Wed, 10/30/2013 - 12:04

In reply to by ಗಣೇಶ

"......ಈಗ ಶ್ರೀಕರ್‌ಜಿ ಸಹ ಡಾಕ್ಟ್ರಾ ಅಂತ ಸಂಶಯ?......"

ಸಂಶಯವೇಕೆ, ಗಣೇಶಣ್ಣಾ?

ಸಂಶಯಾತ್ಮಾ ವಿನಶ್ಯತಿ !

::‍‍))))

Submitted by ಗಣೇಶ Fri, 11/01/2013 - 00:32

In reply to by Shreekar

:) ತ್ರೇತಾಯುಗದಿಂದಲೇ ಸಂಶಯಾತ್ಮಗಳು ಇವೆ. ವಿನಶ್ಯತಿ ಅಲ್ಲ ಅವಿನಾಶಿ ಆಗಬೇಕು.
ಸಂ.ಗ.ಸೂ.೧೨.೩೦ರ ಶ್ಲೋಕ -
"ನೈನಂ ಛಿಂದ್ಯತಿ ಬಾಂಬು: ನೈನಂ ದಹತಿ ಫಯರ್
ಸಂಶಯಾತ್ಮಾ ನಮಸ್ತುಭ್ಯಂ ಪರಮಾತ್ಮ ಸಹೋದರ್"
ಈ ಶೋಕವನ್ನು ೨೧ ಬಾರಿ ಹೇಳಿ "ಸಂಶಯಾತ್ಮಾ ಗಣೇಶ"ನಿಗೆ ನಮಸ್ಕರಿಸಿದರೆ, ಬಾಂಬ್ ಬೆಂಕಿ ಭಯವಿರುವುದಿಲ್ಲ. :)

Submitted by Shreekar Fri, 11/01/2013 - 15:49

In reply to by ಗಣೇಶ

@ ಗಣೇಶಣ್ಣಾ

".......ಬಾಂಬ್ ಬೆಂಕಿ ಭಯವಿರುವುದಿಲ್ಲ....."

ಬಾಂಬ್, ಬೆಂಕಿಗಳ‌ ಭಯವಿಲ್ಲ
ಹುಲಿ ಸಿಂಹಗಳ‌ ಅಂಜಿಕೆಯಿಲ್ಲ.
ನಾನು ಹೆದರುವುದು ನನ್ನ ಮಗುವಿನ‌ ತಾಯಿಗೆ ಮಾತ್ರ !

:‍))))

Submitted by keshavmysore Wed, 10/30/2013 - 17:32

ಗಣೇಶರೆ,
ನೀವು ಹೇಳಿದ ದಿಕ್ಕಿನಲ್ಲಿ - ಅಂದರೆ ನಮ್ಮ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಈ ರೀತಿಯ ಪ್ರಯೋಗಗಳಿಗೆ ಉಪಯೋಗಿಸುವಲ್ಲಿ - ಸಂಶೋಧನೆ ಭಾರತದಲ್ಲಿ ಸಹ ಶುರುವಾಗಿದೆ. ಅದರಲ್ಲಿ ಇಷ್ಟ ಪಟ್ಟರೆ ನಾವು ನೀವು ಎಲ್ಲರೂ ಭಾಗವಹಿಸಬಹುದು. ಅದರ ಬಗ್ಗೆ ಮುಂದಿನ ಲೇಖನದಲ್ಲಿ ಚರ್ಚೆ.

Submitted by Shreekar Wed, 10/30/2013 - 20:52

In reply to by keshavmysore

ಡೊಪಾಮೈನ್ ಸ್ರವಿಕೆ ಹೆಚ್ಚುವುದು ಕೂಡಾ ಒಳ್ಳೆಯದಲ್ಲ.

ಸ್ಕಿಜೋಫ್ರೇನಿಯಾ ಎಂಬ ಮಾನಸಿಕ ಕಾಯಿಲೆ ಇದೆ. ನೂರರಲ್ಲಿ ಒಬ್ಬರಿಗೆ ಬರುವ ಇದರ ಘೋರತೆಯಿಂದಾಗಿ ಇದನ್ನು ಮೆದುಳಿನ ಕ್ಯಾನ್ಸರ್ ತರಹ ಎಂದು ಬಣ್ಣಿಸಿದ್ದಾರೆ. ಈ ರೋಗಕ್ಕೆ ಸದ್ಯದ ಮಟ್ಟಿಗೆ ಇರುವ ಔಷಧಿಗಳೆಲ್ಲವೂ ಡೊಪಾಮೈನ್ ನ ಪರಿಣಾಮಗಳನ್ನು / activity ಯನ್ನು ನಿಯಂತ್ರಿಸುವ ಮೂಲಕ ರೋಗವನ್ನು ಹತೋಟಿಯಲ್ಲಿ ಇರಿಸುವ ಪ್ರಯತ್ನ ಮಾಡುತ್ತವೆ.

Submitted by ಗಣೇಶ Fri, 11/01/2013 - 00:38

ಕೇಶವರೆಮತ್ತು ಶ್ರೀಕರ್‌ಜಿ,
>>ಸಂಗೀತದ ನಶೆ ಅತಿಯಾದಾಗ / ಮೇರೆ ಮೀರಿದಾಗ ಅದು ಮಾದಕ ದ್ರವ್ಯಗಳ ಸೇವನೆ ಉಂಟುಮಾಡುವಂತಹ ಸ್ಥಿತಿಯೇ ಬರಬಹುದು.
ನಮ್ಮ ಸಂಗತಿ ಬಿಡಿ. ಸಂಗೀತಗಾರರು ಹಗಲು ರಾತ್ರಿ ಸಂಗೀತದಲ್ಲೇ ಮುಳುಗಿರುವವರು. ಅವರಲ್ಲಿ ಯಾರಾದರೂ ಈ ತೊಂದರೆಗೊಳಗಾದ ಉದಾಹರಣೆ ನೋಡಿದ್ದೀರಾ, ಕೇಳಿದ್ದೀರಾ?

Submitted by Shreekar Fri, 11/01/2013 - 16:21

In reply to by ಗಣೇಶ

@ ಗಣೇಶಣ್ಣಾ

"ಸಂಗೀತಗಾರರು ಹಗಲು ರಾತ್ರಿ ಸಂಗೀತದಲ್ಲೇ ಮುಳುಗಿರುವವರು. ಅವರಲ್ಲಿ ಯಾರಾದರೂ ಈ ತೊಂದರೆಗೊಳಗಾದ ಉದಾಹರಣೆ ನೋಡಿದ್ದೀರಾ, ಕೇಳಿದ್ದೀರಾ?"

ಹೌದು, ಕೇಳಿದ್ದೇನೆ.

ಪಂ| ಭೀಮಸೇನ‌ ಜೋಷಿಯವರು ಮಾದಕ‌ ಪೇಯಗಳ‌ ದಾಸರಾಗಿದ್ದರು. ಅನೇಕ‌ ಬೈಠಕ್ ಗಳ‌ ಮೊದಲು ಕುಡಿದು ಬಂದು ಅಂದಗೆಡಿಸುತ್ತಿದ್ದರು. ಇದರ‌ ಬಗ್ಗೆ ಭೈರಪ್ಪನವರ‌ ಆತ್ಮಕಥನ‌ ಭಿತ್ತಿಯಲ್ಲಿ ಉಲ್ಲೇಖವಿದೆ. ಒಂದು ಸಲ‌ ಅವರ‌ ಗುರುಬೆಹನ್ ಗಂಗೂಬಾಯಿ ಹಾನಗಲ್ ಅವರು ಅತಿಯಾಗಿ ಪರಮಾತ್ಮನನ್ನು ಸೇವಿಸಿದ‌ ಪಂಡಿತ್ ಜೀಯವರನ್ನು ಕೈ ಹಿಡಿದು ವೇದಿಕೆಗೆ ತರಬೇಕಾಯಿತಂತೆ !

ಅವರ ಕುಡಿತದ‌ ವರ್ಷಗಳಲ್ಲಿ ಕಟ್ ಮಾಡಿದ‌ ಎಲ್ ಪಿ ರೆಕಾರ್ಡ್ ಗಳು ಮತ್ತು ಕುಡಿತ ಬಿಟ್ಟ ಮೇಲೆ ಮಾಡಿದ‌ ಧ್ವನಿಮುದ್ರಣಗಳು ಲಭ್ಯವಿವೆ.
ಕುಡಿತದ‌ ದಿನಗಳಲ್ಲಿನ‌ ಅವರ‌ ಸಂಗೀತ‌ ಅದ್ಭುತವಾಗಿತ್ತು ಎಂದು ಮಾತ್ರ ಹೇಳಬಲ್ಲೆ. :‍)))))

ಧ್ವನಿಯನ್ನು ಪೂರ್ತಿ ಕಳೆದುಕೊಂಡ‌ ಮೇಲೆ ಅವರು ಕುಡಿತವನ್ನು ಬಿಟ್ಟು ಮಂತ್ರಾಲಯಕ್ಕೆ ಹೋಗಿ ಗುರುರಾಯರ‌ ಶರಣಾಗಿ ತುಂಗಭದ್ರೆಯ‌ ಕಲ್ಲುಬಂಡೆಗಳ‌ ಮೇಲೆ ಕುಳಿತಿದ್ದಾಗ‌ ಹಾಡುವ‌ ಹುಕೀ ಬಂದು ಧ್ವನಿ ಮರಳಿತಂತೆ ! ಅವರು ಆಗ‌ ಹಾಡಿದಷ್ಟು ಸಮಯವೂ ಅಲ್ಲಿ ಒಂದು ನಾಯಿ ( ಗುರುರಾಯರೇ ಸ್ವತಹ‌ ಆ ರೂಪದಲ್ಲಿ ಬಂದರಂತೆ) ಬಂದು ಕೇಳುತ್ತಿತ್ತಂತೆ.

Submitted by keshavmysore Fri, 11/01/2013 - 19:10

In reply to by ಗಣೇಶ

ಗಣೇಶರೆ,
ಸಂಗೀತವನ್ನು ತನ್ಮಯತೆಯಿಂದ ಕೇಳುವಾಗ ಇರುವ ಮನೋಸ್ಥಿತಿಗೂ, ಸಂಗೀತವನ್ನು ಹಾಡುವಾಗ ಇರುವ ಮನೋಸ್ಥಿತಿಗೂ ವ್ಯತ್ಯಾಸವಿದೆ. ಸರಳವಾಗಿ ಹೇಳಬೇಕೆಂದರೆ ಅಡುಗೆ ಮಾಡುವಾಗಿನ / ಮಾಡುವವರ ಮನೋಸ್ಥಿತಿಗೂ ಅದನ್ನು ತಿನ್ನುವಾಗಿನ / ತಿನ್ನುವವರ ಮನೋಸ್ಥಿತಿಗೂ ಇರುವ ವ್ಯತ್ಯಾಸದಂತೆ.
ಈ ಎರಡು ಕ್ರಿಯೆಗಳು ನಡೆಯುವಾಗ ಮೆದುಳಿನ ಬೇರೆ ಬೇರೆ ಕೇಂದ್ರಗಳು ಕೆಅಲಸ ಮಾಡುತ್ತವೆ! ಹಾಗಾಗಿ ಸಂಗೀತವನ್ನು ಕೇಳುವ ಹುಚ್ಚಿನಿಂದ ವ್ಯಕ್ತಿಯು ಹಣವನ್ನು / ಸಂಪನ್ಮೂಲಗಳನ್ನು ಮನಸ್ಸಿಗೆ ಬಂದಂತೆ ವ್ಯಯಿಸಲು ತೊಡಗಬಹುದು - ಇದೂ ಕೂಡ ವೆಲೊರಿ ಸಾಲಿಂಪೂರ್ ಳ ಸಂಶೋಧನೆಯ ಫಲಿತಾಂಶಗಳಲ್ಲಿ ಒಂದು. ಮಾದಕದ್ರವ್ಯಗಳ ಚಟಕ್ಕೆ ಬಿದ್ದವರು ಅದರ ಪೂರೈಕೆಗಾಗಿ ಏನು ಮಾಡಲೂ ಸಿದ್ಧರಿರುವಂತೆ!
ಆದರೆ ಸಂಗೀತವನ್ನು ಹಾಡುವುದು ಒಂದು ಸೃಜನಾತ್ಮಕ ಕ್ರಿಯೆ. ಆಗ ಸ್ರವಿಸುವ ರಾಸಾಯನಿಕಗಳು ಬೇರೆಯವೇ ಇರಬಹುದು - creative juices - ಎನ್ನುತ್ತಾರಲ್ಲ ಹಾಗೆ! ಸೃಜನಾತ್ಮಕ ಕ್ರಿಯೆಯಲ್ಲಿ ಸಂಪನ್ಮೂಲಗಳ optimum ಬಳಕೆಯಾದರೆ, ಸ್ವಸಂತೋಷಕ್ಕಾಗಿ ಮಾಡುವ ಕ್ರಿಯೆಗಳಲ್ಲಿ ಸಂಪನ್ಮೂಲಗಳ ವ್ಯಯವೇ ಪ್ರಧಾನವಾಗಿರುತ್ತದೆ. ಸೃಜನಾತ್ಮಕ ಕ್ರಿಯೆಯೇ ಸಂತೊಷವನ್ನು ಕೊಡುವ ಕ್ರಿಯೆಯಾದಾಗ ಮಾತ್ರ ಯಾರೇ ಆದರೂ ಆಯಾ ಕ್ಷೇತ್ರಗಳಲ್ಲಿ ಅತ್ಯುನ್ನತ ಮಟ್ಟಕ್ಕೇರಬಹುದು.

Submitted by Shreekar Fri, 11/01/2013 - 19:21

In reply to by keshavmysore

"..... ಸೃಜನಾತ್ಮಕ ಕ್ರಿಯೆಯಲ್ಲಿ ಸಂಪನ್ಮೂಲಗಳ optimum ಬಳಕೆಯಾದರೆ, ಸ್ವಸಂತೋಷಕ್ಕಾಗಿ ಮಾಡುವ ಕ್ರಿಯೆಗಳಲ್ಲಿ ಸಂಪನ್ಮೂಲಗಳ ವ್ಯಯವೇ ಪ್ರಧಾನವಾಗಿರುತ್ತದೆ. ಸೃಜನಾತ್ಮಕ ಕ್ರಿಯೆಯೇ ಸಂತೊಷವನ್ನು ಕೊಡುವ ಕ್ರಿಯೆಯಾದಾಗ ಮಾತ್ರ ಯಾರೇ ಆದರೂ ಆಯಾ ಕ್ಷೇತ್ರಗಳಲ್ಲಿ ಅತ್ಯುನ್ನತ ಮಟ್ಟಕ್ಕೇರಬಹುದು....."

ಡಾ। ಕೇಶವ ಸರ್,

ಮುತ್ತಿನಂಥ ಮಾತುಗಳು !

ನನ್ನ ಸ್ವಂತ ಅನುಭವ !

ಧನ್ಯವಾದಗಳು