ಸಂಘಟನಾ ಚತುರ ಕೆದಂಬಾಡಿ ರಾಮ ಗೌಡ

ಸಂಘಟನಾ ಚತುರ ಕೆದಂಬಾಡಿ ರಾಮ ಗೌಡ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಪೂವಪ್ಪ ಕಣಿಯೂರು
ಪ್ರಕಾಶಕರು
ಆದಿ ಚುಂಚನಗಿರಿ ವಿಶ್ವವಿದ್ಯಾಲಯ, ಬಿ ಜಿ ನಗರ, ನಾಗಮಂಗಲ, ಮಂಡ್ಯ - ೫೭೧೪೪೮
ಪುಸ್ತಕದ ಬೆಲೆ
ರೂ.೩೦೦.೦೦, ಮುದ್ರಣ : ೨೦೨೨

ಅಮರ ಸುಳ್ಯ ೧೮೩೪-೩೭ರ ಜನತಾ ಬಂಡಾಯದ ಖ್ಯಾತಿಯ ‘ಸಂಘಟನಾ ಚತುರ ಕೆದಂಬಾಡಿ ರಾಮಗೌಡ' ಬಗ್ಗೆ ಡಾ.ಪೂವಪ್ಪ ಕಣಿಯೂರು ಇವರು ಒಂದು ಪುಸ್ತಕವನ್ನು ಬರೆದಿದ್ದಾರೆ. ಈ ಕೃತಿಯನ್ನು ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯವು ಪ್ರಕಾಶಿಸಿದೆ. ಪುಸ್ತಕದ ಬೆನ್ನುಡಿಯಲ್ಲಿ ಕಂಡು ಬಂದ ಬರಹ ಹೀಗಿದೆ-

“ ಅಖಂಡ ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆ ಹುಟ್ಟಿಕೊಳ್ಳುವ ೧೮೮೫ಕ್ಕಿಂತ ಪೂರ್ವದಲ್ಲಿ ವಸಾಹತುಶಾಹಿ ಬ್ರಿಟೀಷರ ವಿರುದ್ಧ ನಡೆದ ಪ್ರತಿರೋಧಗಳು ಪ್ರಾದೇಶಿಕ ಮಿತಿಯಲ್ಲಿ ಮತ್ತು ರಾಜಪ್ರಭುತ್ವದ ಪ್ರತಿನಿಧಿತ್ವದಲ್ಲಿ ನಡೆದವುಗಳಾಗಿವೆ. ಈ ಹಿನ್ನಲೆಯಲ್ಲಿ ಕೆನರಾ, ಕೊಡಗು ೧೮೩೪-೩೭ರ ಜನತಾ ಬಂಡಾಯ ವಿಶಿಷ್ಟವಾದುದು. ಹದಿಮೂರು ದಿನಗಳ ಕಾಲದ ಮಟ್ಟಿಗಾದರೂ ವಸಾಹತುಶಾಹಿ ಆಡಳಿತ ಮತ್ತು ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಕರೆದುಕೊಂಡಿದ್ದ ಇಂಗ್ಲೆಂಡಿಗೆ ಬಿಸಿ ಮುಟ್ಟಿಸಿದ ಈ ಜನತಾ ಬಂಡಾಯ ಇತರ ಬಂಡಾಯಕ್ಕಿಂತ ತೀರಾ ಭಿನ್ನವಾದುದು. ಬ್ರಿಟೀಷ್ ಆಡಳಿತವನ್ನು ಸ್ವಾತಂತ್ರ್ಯದ ಅಭಿಲಾಷೆಯಿಂದ ವಿರೋಧಿಸಿ ನಡೆಸಲಾದ ಈ ಬಂಡಾಯಕ್ಕೆ ಚಾರಿತ್ರಿಕವಾದ ಮಹತ್ವವಿದೆ. ಹಾಗಿದ್ದೂ ಇಲ್ಲಿ ಮುಖ್ಯವಾಗಿ ಗೌಡರು ಪ್ರಧಾನ ಪಾತ್ರವಹಿಸಿದ್ದಾರೆ. ಈ ಜನತಾ ಬಂಡಾಯದ ಪ್ರಧಾನ ನಾಯಕತ್ವ ವಹಿಸಿದ ವ್ಯಕ್ತಿ ಸಂಘಟನಾ ಚತುರ ಕೆದಂಬಾಡಿ ರಾಮಗೌಡ. ಈ ಹೋರಾಟದಲ್ಲಿ ಬಲಿದಾನ ಮಾಡಿದ ಮತ್ತು ಸೋಲುಂಡವರ ಕೆಚ್ಚು ಮುಂದೆ ಬ್ರೀಟೀಷರ ವಿರುದ್ಧ ರಾಷ್ಟ್ರಮಟ್ಟದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಕ್ಕೆ ಕೋಲ್ಮಿಂಚಾಗಿ ಪರಿಣಮಿಸಿತು.

ಡಾ. ಪೂವಪ್ಪ ಕಣಿಯೂರು ಅವರು ಈ ಜನತಾ ಬಂಡಾಯದ ಹಿಂದಿರುವ ರಾಜಕೀಯ, ಆರ್ಥಿಕ ಮತ್ತು ಸಮಾಜೋ-ಧಾರ್ಮಿಕ ಕಾರಣಗಳು ಪರಸ್ಪರ ಅನುಸಂಧಾನಗೊಂಡಿರುವುದನ್ನು ಆಧಾರ ಸಹಿತ ವಸ್ತುನಿಷ್ಟವಾಗಿ ಶೋಧಿಸುವ ಪ್ರಯತ್ನವನ್ನು ಮಾಡಿದ್ದಾರೆ.”