ಸಂಚಾರ ಜಾಗೃತಿ ಅಗತ್ಯ
೨೦೨೨ರ ಮೊದಲ ಐದು ತಿಂಗಳಲ್ಲೇ ದೇಶಾದ್ಯಂತ ಅಪಘಾತದಿಂದ ೨,೩೫೭ ಜನರು ಮೃತಪಟ್ಟಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸಿವೆ. ರಸ್ತೆ ಅಪಘಾತಗಳು ಹಾಗೂ ಸಾವಿನ ಪ್ರಮಾಣವು ಭಾರತದಲ್ಲಿಯೇ ಹೆಚ್ಚು ಎನ್ನಲಾಗಿದ್ದು, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಮಾಹಿತಿ ಪ್ರಕಾರ, ೨೦೨೧ರಲ್ಲಿ ರಸ್ತೆ ಅಪಘಾತಗಳಲ್ಲಿ ೧,೫೫,೪೨೨ ಜನ ಮೃತ ಪಟ್ಟಿದ್ದಾರೆ. ೨೦೧೪ರದ ನಂತರದಲ್ಲಿ ಇಷ್ಟೊಂದು ಜನ ಮೃತಪಟ್ಟಿರುವುದು ೨೦೨೧ರಲ್ಲಿಯೇ ಎನ್ನಲಾಗಿದೆ. ಸಂಚಾರ ನಿಯಮಗಳ ಪಾಲನೆ ಕಡಿಮೆ ಪ್ರಮಾಣದಲ್ಲಿರುವುದು, ನಿಯಮಗಳ ಅನುಷ್ಟಾನ ತೃಪ್ತಿಕರ ಆಗಿಲ್ಲದಿರುವುದು ಮಾತ್ರವಲ್ಲದೆ ರಸ್ತೆ ಅಪಘಾತಗಳಿಗೆ ಇನ್ನೂ ಹಲವು ಕಾರಣಗಳಿವೆ. ರಸ್ತೆಗಳ ವಿನ್ಯಾಸ ವೈಜ್ಞಾನಿಕವಾಗಿ ಇಲ್ಲದಿರುವುದು ನಿರ್ವಹಣೆ ಸರಿಯಾಗಿಲ್ಲದಿರುವುದು, ಅತಿಯಾದ ವೇಗದಲ್ಲಿ ವಾಹನ ಚಾಲನೆ ಮಾಡುವುದು ಮತ್ತು ವಾಹನಗಳ ಸಂಖ್ಯೆ ಹೆಚ್ಚಳಕ್ಕೆ ಸರಿಯಾಗಿ ರಸ್ತೆ ವಿಸ್ತರಣೆ ಆಗದಿರುವುದು ಅಪಘಾತಗಳಿಗೆ ಕಾರಣ ಎನ್ನಲಾಗಿದೆ. ಅಪಘಾತಗಳಲ್ಲಿ ಮೃತಪಟ್ಟ ಬಹುತೇಕರು ಸೀಟ್ ಬೆಲ್ಟ್ ಹಾಕಿರುವುದಿಲ್ಲ ಎನ್ನಲಾಗಿದೆ. ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದ್ದರೂ ಈ ನಿಯಮವನ್ನು ಉಲ್ಲಂಘಿಸುವುದು ಬಹಳ ಸಹಜ ಎಂಬಂತಾಗಿದೆ. ಸೀಟ್ ಬೆಲ್ಟ್ ಹಾಗೂ ಏರ್ ಬ್ಯಾಗ್ ಗಳು ಪ್ರಯಾಣಿಕ ವಾಹನಗಳಲ್ಲಿ ತೀರಾ ಅಗತ್ಯವಾದವು. ಇವೆರಡೂ ಒಟ್ಟಾಗಿ ಪ್ರಯಾಣಿಕರನ್ನು ರಕ್ಷಿಸುವ ಕೆಲಸ ಮಾಡುತ್ತದೆ. ವಾಹನವು ಅಪಘಾತಕ್ಕೆ ಈಡಾದ ಸಂದರ್ಭದಲ್ಲಿ ಪ್ರಯಾಣಿಕರು ಆಸನದಿಂದ ಎಗರಿ ಬೀಳುವುದನ್ನು ಸೀಟ್ ಬೆಲ್ಟ್ ತಡೆಯುತ್ತದೆ. ಪ್ರಯಾಣಿಕರ ದೇಹವು ಕಾರಿನೊಳಗಿನ ಗಟ್ಟಿಯಾದ ವಸ್ತುಗಳಿಗೆ ಬಡಿಯುವುದರಿಂದ ಏರ್ ಬ್ಯಾಗ್ ರಕ್ಷಣೆ ನೀಡುತ್ತದೆ. ಮುಂದಿನ ಸಾಲಿನ ಆಸನಗಳಲ್ಲಿ ಕುಳಿತವರು ಸೀಟ್ ಬೆಲ್ಟ್ ಧರಿಸದಿದ್ದರೆ, ಎಚ್ಚರಿಕೆಯ ಸಂದೇಶ ನೀಡುವ ವ್ಯವಸ್ಥೆಯು ಹಲವು ವಾಹನಗಳಲ್ಲಿ ಇದೆ. ಇದರಿಂದಾಗಿ ಆ ಆಸನಗಳಲ್ಲಿ ಕುಳಿತವರು ಸೀಟ್ ಬೆಲ್ಟ್ ಧರಿಸುವ ಮನಸ್ಸು ಮಾಡಬಹುದು. ಆದರೆ ಹಿಂಬದಿ ಸವಾರರಿಗೆ ಆ ತರಹ ಯಾವುದೇ ಸೂಚನೆಗಳು ಇಲ್ಲ. ಆದ್ದರಿಂದ ವಾಹನಗಳಲ್ಲಿ ಸಂರಕ್ಷಣಾ ಕ್ರಮಗಳ ಅಳವಡಿಕೆ ಹೆಚ್ಚಿನ ಆದ್ಯತೆ ಪಡೆದುಕೊಳ್ಳಬೇಕಿದೆ. ಅಲ್ಲದೆ, ಸಂಚಾರ ನಿಯಮಗಳ ಪಾಲನೆಯ ಕುರಿತು ಹೆಚ್ಚಿನ ಜಾಗೃತಿ ಆಗಬೇಕಿದೆ.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೧೬-೦೯-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ