ಸಂಚಿ - ಮುನ್ನುಡಿಗಳ ಸಂಕಲನ

ಸಂಚಿ - ಮುನ್ನುಡಿಗಳ ಸಂಕಲನ

ಪುಸ್ತಕದ ಲೇಖಕ/ಕವಿಯ ಹೆಸರು
ಎಂ. ಎಸ್. ಆಶಾದೇವಿ
ಪ್ರಕಾಶಕರು
ಪ್ರಿಸಮ್ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೪೪೫.೦೦, ಮುದ್ರಣ: ೨೦೨೩

ಪ್ರತಿಯೊಂದು ಪುಸ್ತಕಕ್ಕೆ ‘ಮುನ್ನುಡಿ' ಇರಬೇಕು ಎನ್ನುವುದು ಅಘೋಷಿತ ನಿಯಮ. ಆದರೆ ಈ ಮುನ್ನುಡಿಗಳನ್ನೇ ಸಂಗ್ರಹ ಮಾಡಿ ಅದರದ್ದೇ ಆದ ಒಂದು ಸಂಕಲನ ಮಾಡಬಹುದು ಎನ್ನುವ ದಿವ್ಯ ಯೋಚನೆ ಹೊಳೆದದ್ದು ಸಾಹಿತಿ ಎಂ ಎಸ್ ಆಶಾದೇವಿಯವರಿಗೆ. ಮುನ್ನುಡಿ ಬರೆಯುವುದೇ ಒಂದು ಕಲೆ. ಮುನ್ನುಡಿ ಬರೆಯುವ ಒಂದು ಅಪರೂಪದ ಸಾಹಿತಿಗಳ ವರ್ಗವೇ ಇದೆ. ಅವರ ಮುನ್ನುಡಿ ಓದಿದರೆ ಪುಸ್ತಕವನ್ನು ಕೂಡಲೇ ಓದಿ ಮುಗಿಸಬೇಕೆಂಬ ಹೆಬ್ಬಯಕೆ ಆಗುತ್ತದೆ. ಹಾಗಿರುತ್ತದೆ ಅವರ ಮುನ್ನುಡಿಯ ಪ್ರಭಾವ. ಅಂತಹ ಲೇಖಕರಲ್ಲಿ ಆಶಾ ದೇವಿಯವರೂ ಒಬ್ಬರು. ಅವರು ತಾವು ಬರೆದ ಹಲವಾರು ಮುನ್ನುಡಿಗಳನ್ನು ಸಂಗ್ರಹ ಮಾಡಿ ಮತ್ತೆ ಅದಕ್ಕೊಂದು ‘ಮುನ್ನುಡಿ' ಬರೆದಿದ್ದಾರೆ. ಅವರು ತಮ್ಮ ‘ಪ್ರಸ್ತಾವನೆ'ಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ... 

“ಮುನ್ನುಡಿಗಳದ್ದೇ ಪುಸ್ತಕ ಮಾಡಬೇಕೆನ್ನುವಾಗ ಅವುಗಳನ್ನು ಒಟ್ಟು ಹಾಕುತ್ತಾ ಹೋದಂತೆ ಗಾಬರಿಯೇ ಆಗತೊಡಗಿತು. ಈ ಪ್ರಮಾಣದಲ್ಲಿ ನಾನು ಮುನ್ನುಡಿಗಳನ್ನು ಬರೆದಿರಬಹುದು ಎನ್ನುವ ಅಂದಾಜೇ ನನಗಿರಲಿಲ್ಲ! ಅವುಗಳನ್ನು ಓದುತ್ತಾ ಹೋದಂತೆ ಕಾಲಚಕ್ರವನ್ನೊಮ್ಮೆ ಸುತ್ತಿ ಬಂದಂತೆ ಭಾಸವಾಯಿತು. ನಾನು ಮೊದಲು ಮುನ್ನುಡಿ ಬರೆದದ್ದು ೨೦೦೪ರಲ್ಲಿ ನನ್ನ ಪ್ರೀತಿಯ ಲೇಖಕಿ ಬಾನು ಮುಷ್ತಾಕ್ ಅವರಿಗೆ. ನನ್ನಂಥ ಎಳೆಯಳ ಕೈಲಿ ಮುನ್ನುಡಿ ಬರೆಸುವ ಅವರ ಧೈರ್ಯವನ್ನೋ, ನನ್ನ ಮೇಲಿನ ನಂಬಿಕೆಯನ್ನೋ ನೆನೆದರೆ ಈಗಲೂ ಮನಸ್ಸು ಆರ್ದ್ರವಾಗುತ್ತದೆ.

ಮುನ್ನುಡಿಗಳಿಗೆ ಅವುಗಳದ್ದೇ ಆದ ಪಾತ್ರವಿರುವಂತೆಯೇ ಮಿತಿಯೂ ಇದೆ. ಅದರ ಭಿತ್ತಿಯೇ ವಿಲಕ್ಷಣವಾದದ್ದು. ಕೃತಿಯೊಂದರ ಬಾಗಿಲು ತೆರೆಯುವ ಕೆಲಸವೇ ಅಲ್ಲಿ ಮುಖ್ಯ. ಅದನ್ನು ಪರಿಚಯಿಸುವ ಇರಾದೆಯೂ ಮುನ್ನುಡಿಗಳಿಗೆ ಇರುತ್ತದೆಯಾದರೂ ಹಲವು ನೆಲೆಗಳಲ್ಲಿ ಅದನ್ನು ನೋಡಬೇಕಾದ್ದು ಅಗತ್ಯವಾಗಿರುತ್ತದೆ. ಸಮಕಾಲೀನ ಸಾಹಿತ್ಯದ ದಿಕ್ಕು ದೆಸೆಗಳ ಹಿನ್ನೆಲೆ, ಅದೇ ಲೇಖಕರ ಇತರ ಬರಹಗಳು, ಪರಂಪರೆಯ ಜೊತೆಗೆ ಆ ಕೃತಿ ಕಟ್ಟಿಕೊಳ್ಳಲು ಹವಣಿಸುವ ಸಂಬಂಧದ ಪರಿ, ವ್ಯಕ್ತಿ ಪ್ರತಿಭೆಯೊಂದು ತನ್ನ ಏಕಾಂತದ ಜೊತೆ ಜೊತೆಗೇ ಲೋಕಸಂವಾದವನ್ನು ನಡೆಸುವ ವಿನ್ಯಾಸ, ಕೃತಿ ಮತ್ತು ಕೃತಿಕಾರರ ರಾಜಕೀಯ, ಸಾಂಸ್ಕೃತಿಕ ನಿಲುವುಗಳು, ಸಾಮಾಜಿಕ ವಾಸ್ತವಗಳನ್ನು ಕುರಿತಂತೆ ಅವರ ಪೂರ್ವಗ್ರಹಗಳು ಅಥವಾ ತೆರೆದ ಮನಸ್ಸು ಇವುಗಳನ್ನೆಲ್ಲ ಮುನ್ನುಡಿಯೊಂದು ಗಮನಿಸಬೇಕಾಗುತ್ತದೆ. ಆದರೆ ಇಷ್ಟೆಲ್ಲಾ ಮಾಡುತ್ತಿರುವಾಗಲೂ ಅಲ್ಲಿ ತೀರಾ ವಸ್ತುನಿಷ್ಠವಾಗಿರಲು ಸಾಧ್ಯವಿಲ್ಲ. ಎಷ್ಟೋ ಬಾರಿ ಅದು ಔಪಚಾರಿಕವಾಗಿಯೂ, ಸೌಜನ್ಯದ ಎಲ್ಲೆಯೊಳಗೂ ಇರುವುದು ಅನಿವಾರ್ಯವೂ ಆಗಿಬಿಡುತ್ತದೆ (ಇಷ್ಟನ್ನೂ ನಿಭಾಯಿಸಲು ಸಾಧ್ಯವಾಗದ ಹಲವರಿಗೆ ಮುನ್ನುಡಿ ಬರೆಯಲಾಗುವುದಿಲ್ಲ ಎಂದು ಹೇಳುವ ಸಂದಿಗ್ಧತೆಗಳು ಒದಗಿಬಂದಿವೆ).

ಆಧುನಿಕ ಕನ್ನಡ ವಿಮರ್ಶೆಯಲ್ಲಿ ಮುನ್ನುಡಿಗಳು ನಿರ್ಣಾಯಕವಾದ ಪಾತ್ರವನ್ನು ವಹಿಸಿವೆ. ನವೋದಯದ ಸಂದರ್ಭದಲ್ಲಿ ಮುನ್ನುಡಿಗಳು ಹೊಸ ಸಾಹಿತ್ಯ ಪ್ರಕಾರಗಳನ್ನು ಪರಿಚಯಿಸುವ, ಸಮರ್ಥಿಸುವ ಮತ್ತು ಅಭಿರುಚಿ ನಿರ್ಮಾಣದ ಈ ಮೂರೂ ಪಾತ್ರಗಳ ಹೊಣೆಗಾರಿಕೆಯನ್ನು ನಿಭಾಯಿಸಿವೆ. ಆದ್ದರಿಂದಲೇ ಇವುಗಳು ಮುನ್ನುಡಿಯ ಪರಿಕಲ್ಪನೆಯನ್ನೇ ವಿಸ್ತರಿಸಿ ಬೆಳೆಸಿದವು. ಕೃತಿಯೊಂದರ ಪ್ರವೇಶಿಕೆಯ ಸೀಮಿತ ಚೌಕಟ್ಟನ್ನು ದಾಟಿ ಪರಿಸರ, ಹೊಸ ಪ್ರಕಾರದ ಅಗತ್ಯ, ಅದರ ವಸ್ತು, ಶೈಲಿ, ಭಾಷೆ ಇವುಗಳ ಹೊಸತನವನ್ನು ಕುರಿತು ಮಾತನಾಡುವುದು ಅನಿವಾರ್ಯವಾಗಿತ್ತು. ಈ ಎಲ್ಲವುಗಳನ್ನು ನಿಭಾಯಿಸುವಾಗ ಸಾಹಿತ್ಯ ಪ್ರೀತಿಯೊಂದೇ ಸಾಲುತ್ತಿರಲಿಲ್ಲ, ಸಾಹಿತ್ಯ ಪರಂಪರೆಯೊಂದರ ಅರಿವು, ಹೊಸ ಸಾಹಿತ್ಯ ಪ್ರಕಾರಗಳನ್ನು ಪರಂಪರೆಯೊಂದಿಗೆ ಕಸಿಮಾಡುವ, ಆ ಕಸಿಯಿಂದ ಹುಟ್ಟುವ ಹೂವಿಗೆ ನಮ್ಮ ಮಣ್ಣಿನದ್ದೇ ಗುಣವಿದೆ ಎನ್ನುವುದನ್ನು ಒತ್ತಿಹೇಳುವ ಮೂಲಕ ಎಲ್ಲೋ ಅಡಗಿರಬಹುದಾದ ಅಪರಿಚಿತತೆಯ ಅಂಶವನ್ನು ತೊಡೆದುಹಾಕುವ ಈ ಎಲ್ಲ ಎಚ್ಚರಿಕೆಗಳನ್ನೂ ಆ ಮುನ್ನುಡಿಗಳು ಗಮನದಲ್ಲಿಟ್ಟುಕೊಂಡಿರಬೇಕಿತ್ತು.

ನವೋದಯ ವಿಮರ್ಶೆಯನ್ನು 'ಆಶಯ ವಿಮರ್ಶೆ' ಎಂದು ಗುರುತಿಸಲಾಗುತ್ತದೆ. 'ಆಶಯ ವಿಮರ್ಶೆ' ಎನ್ನುವ ಹೆಸರು ಬರಲು ಕಾರಣವಾದದ್ದರಲ್ಲಿ ಮುನ್ನುಡಿಗಳ ಪಾಲೂ ಇದೆ. ಮಾಸ್ತಿ, ಬೇಂದ್ರೆ, ಟಿ. ಎಸ್. ವೆಂಕಣಯ್ಯ, ಎ. ಆರ್. ಕೃಷ್ಣಶಾಸ್ತ್ರಿ, ಕುವೆಂಪು, ಪುತಿನ ಮೊದಲಾದವರು ಬರೆದ ಮುನ್ನುಡಿಗಳು ಆಯಾ ಕೃತಿಗಳನ್ನು ಓದಿ ಆಸ್ವಾದಿಸುವ ನೆಲೆಗಳನ್ನು ಪರಿಚಯಿಸುತ್ತವೆ. ನಂತರದ ನವ್ಯದ ಮುನ್ನುಡಿಗಳು ಕೃತಿಗಳನ್ನು ಸ್ವತಂತ್ರ ಅಸ್ತಿತ್ವದಲ್ಲಿ ಗುರುತಿಸುವುದೇ ಹೆಚ್ಚು. ಮುಂದಿನ ದಲಿತ - ಬಂಡಾಯ ಸಂದರ್ಭದ ಮುನ್ನುಡಿಗಳು ಕೃತಿಗಳನ್ನು ಅವುಗಳ ಸಾಮಾಜಿಕ, ರಾಜಕೀಯ ಅಗತ್ಯದ ಹಿನ್ನೆಲೆಯಲ್ಲಿ ಗುರುತಿಸಲು ಹವಣಿಸುತ್ತವೆ. ಎಂದರೆ ಮುನ್ನುಡಿಗಳ ಸ್ವರೂಪವು ಕಾಲದ ಅಗತ್ಯಕ್ಕೆ ತಕ್ಕಹಾಗೆ ಬದಲಾಗುತ್ತಾ ಹೋಗಿದೆ. ಮುನ್ನುಡಿಗಳ ಮಹತ್ವವಾಗಲಿ, ಪಾತ್ರವಾಗಲಿ ಕಡಿಮೆಯಾದದ್ದಿಲ್ಲ. ಮುನ್ನುಡಿಗಳು ಓದುಗರು ಮತ್ತು ಕೃತಿಯ ನಡುವೆ ಕಟ್ಟುವ 'ಸೇತುಬಂಧ' ಅಂದಿನಿಂದ ಇಂದಿನ ತನಕ ಹಾಗೆಯೇ ಉಳಿದು ಬಂದಿದೆ. ಇಷ್ಟಾಗಿ ಮುನ್ನುಡಿ ಬರೆಯುವುದು ಒಂದು ಸ್ವಾರಸ್ಯಕರ ಅನುಭವವೂ ಹೌದು. ಒಪ್ಪಿಕೊಂಡಾದ ಮೇಲೆ, ಅದು ಹೇಗಿದೆಯೋ ಎನ್ನುವ ಕುತೂಹಲ. ಆ ಕೃತಿ ಚೆನ್ನಾಗಿದ್ದರೆ, ಆಹಾ, ನಾನು ಇದರ ಮೊದಲ ಓದುಗಳಾದೆ ಎನ್ನುವ ಸಹಜ ಸಂತೋಷ, ಅದು ಮಹತ್ವದ ಕೃತಿಯೇ ಆದರೆ, ನಾವೂ ಅದರ ಭಾಗವಾಗುವ ಪುಳಕ, ಒಳ್ಳೆಯ ಲೇಖಕರ ಸಾಧಾರಣ ಕೃತಿಯಾದರೆ ನಿರಾಸೆ. ಕೆಲವು ಕೃತಿಗಳು ಏಳು ತಿಂಗಳಿಗೆ ಹುಟ್ಟಿದ ಮಕ್ಕಳಂತೆ ಭಾಸವಾಗುತ್ತವೆ. ಕೆಲವೊಮ್ಮೆ ತಡೆಯಲಾರದೆ, ಇನ್ನೂ ಸ್ವಲ್ಪ ದಿನ ಕಾಯಬಹುದೇನೋ ಎನ್ನುವ ಸಲಹೆಯನ್ನೂ ನಾನು ಕೊಟ್ಟದ್ದಿದೆ. ಕೆಲವರು ಒಪ್ಪಿದರೆ, ಮತ್ತೆ ಕೆಲವರು, “ಅಯ್ಯೋ, ಇನ್ನು ಸಾಧ್ಯವಿಲ್ಲ,' ಎಂದದ್ದೂ ಇದೆ. ಕೆಲವರ ಕೃತಿಗಳಿಗೆ ಕೊಟ್ಟ ಮಾತಿಗೆ ತಪ್ಪಬಾರದೆನ್ನುವ ಕರ್ತವ್ಯಪ್ರಜ್ಞೆಯಲ್ಲಿ ಬರೆದದ್ದೂ ಇದೆ. ಆದರೆ ಇಂಥ ಕೃತಿಗಳ ಸಂಖ್ಯೆ ತೀರ ಎಂದರೆ ತೀರಾ ಕಡಿಮೆ.

ಒಂದು ತಪ್ರೊಪ್ಪಿಗೆಯನ್ನೂ ಇಲ್ಲಿಯೇ ಸೇರಿಸಿಬಿಡಬೇಕು. ವಾಯಿದೆಯ ಒಳಗೆ ನಾನು ಮುನ್ನುಡಿ ಬರೆದದ್ದು ಅಪರೂಪ. ಇದಕ್ಕೆ ನನ್ನ ಸೋಮಾರಿತನ, ಕೆಲಸದ ಒತ್ತಡ ಎರಡೂ ಕಾರಣ. ಕೆಲವರ ತಾಳ್ಮೆಯನ್ನೇ ನಾನು ಪರೀಕ್ಷಿಸಿಬಿಟ್ಟಿದ್ದೇನೇನೋ! ಆದರೆ ಮುನ್ನುಡಿ ಬರೆಯುವ, ಬರೆಯಿಸಿಕೊಳ್ಳುವ ಪ್ರಕ್ರಿಯೆ ಮಾತ್ರ ಒಂದೇ ಧಾಟಿಯದು. ನಾನು ಒಪ್ಪುವಾಗಲೇ ಬಹುತೇಕ ಬಾರಿ, 'ನನಗೆ ಹೆಚ್ಚು ಸಮಯಬೇಕಾಗಬಹುದು, ಬೇರೆಯವರ ಕೈಲಿ ಬರೆಯಿಸಿಕೊಳ್ಳಿ,' ಎನ್ನುವ ಮಾತನ್ನೂ ಹೇಳುತ್ತೇನೆ. 'ಪರವಾಗಿಲ್ಲ ಮೇಡಂ, ಆದಾಗ ಬರೆದು ಕೊಡಿ,' ಎಂದು ಉದಾರವಾಗಿ ಹೇಳುತ್ತಾರೆ. ನಾನೋ ಅದೇ ಸಾಕು ಎನ್ನುವಂತೆ ನಿರಾಳವಾಗಿ ಬಿಡುತ್ತೇನೆ. ಆದರೆ ಅವರೇ ಅಂದುಕೊಂಡ ಅವಧಿಗೂ ನನಗೆ ನಾನೇ ಹಾಕಿಕೊಳ್ಳುವ ಡೆಡ್ ಲೈನ್‌ಗೂ ಹೊಂದಾಣಿಕೆಯೇ ಆಗುವುದಿಲ್ಲ. ಕೊನೆಗೆ ನೆನಪೋಲೆಗಳು ಶುರುವಾಗುತ್ತವೆ, ಆಮೇಲಾಮೇಲೆ ಹಕ್ಕೊತ್ತಾಯಗಳು. ಇದೆಲ್ಲ ಏನೇ ಇರಲಿ ಇಲ್ಲಿನ ಮುನ್ನುಡಿಗಳನ್ನು ಸಾಹಿತ್ಯದ ಪ್ರೀತಿಯಿಂದಲೂ, ವಿಮರ್ಶೆಯ ಹೊಣೆಗಾರಿಕೆಯಿಂದಲೂ ಬರೆಯುವ ಪ್ರಯತ್ನ ಮಾಡಿದ್ದೇನೆ. ಬರೆಯುವಾಗ ನಾನು ಪಟ್ಟ ಸಂತೋಷವನ್ನು ಇಲ್ಲಿ ಹಂಚಿಕೊಳ್ಳಲೇಬೇಕು.
ಕನ್ನಡದ ಹಲವು ಹಿರಿಯ ಲೇಖಕರು ನನ್ನಿಂದ ಮುನ್ನುಡಿ ಬಯಸಿದಾಗ ಆದ ಸಂತೋಷ, ತುಸು ಹೆಮ್ಮೆಯನ್ನು ಇಲ್ಲಿ ಮುಚ್ಚಿಟ್ಟುಕೊಳ್ಳುವ ಅವಶ್ಯಕತೆಯಿಲ್ಲ. ಹಾಗೆಯೇ ವಿಮರ್ಶೆಯ ವೃತ್ತಿಪರತೆಯನ್ನು ಮರೆಯದೆ ಮುನ್ನುಡಿ ಬರೆದಾಗ, ಬರೆಯಿಸಿಕೊಂಡ ಲೇಖಕರು ಕೃತಿಯ ಒಂದು ಪ್ರತಿಯನ್ನೂ ನನಗೆ ಕಳುಹಿಸದೇ ಇರುವುದೂ ಇದೆ. ತಮಾಷೆಯೆಂದರೆ ಅವರು ಆ ಮುನ್ನುಡಿಯನ್ನು ಹಾಕಿಕೊಂಡಿದ್ದಾರೋ ಇಲ್ಲವೋ ಅದೂ ನನಗೆ ಗೊತ್ತಿಲ್ಲ!
ಕಳೆದ ಎರಡು ದಶಕಗಳಲ್ಲಿ ನಾನು ಬರೆದ ಮುನ್ನುಡಿಗಳು ಇಲ್ಲಿವೆ. ಸಿಗದೇ ಇರುವ ಕೆಲವನ್ನು ಹೊರತು ಪಡಿಸಿ ಮಿಕ್ಕ ಎಲ್ಲವನ್ನೂ ಇಲ್ಲಿ ಸಂಕಲಿಸಲಾಗಿದೆ. ಇಂಗ್ಲಿಷ್ ಮುನ್ನುಡಿಗಳನ್ನು ಇಲ್ಲಿ ಸೇರಿಸಲಾಗಿಲ್ಲ. ಸಾಹಿತ್ಯದ ಹಲವು ಪ್ರಕಾರಗಳ ಕೃತಿಗಳಿಗೆ ಬರೆದ ಮುನ್ನುಡಿಗಳನ್ನು ನಾನೇ ಸಂಪಾದಿಸಿದ ಕೃತಿಗಳಿಗೆ ಬರೆದ ಪ್ರಸ್ತಾವನೆಗಳನ್ನೂ ಇಲ್ಲಿ ಸೇರಿಸಿಕೊಳ್ಳಲಾಗಿದೆ.

ಈ ಮುನ್ನುಡಿಗಳನ್ನು ಬರೆಯುವಾಗ, ಕನ್ನಡ ಜಗತ್ತಿನ ಸಮೃದ್ಧತೆಯ ಬಗ್ಗೆ ಸಕಾರಣವಾದ ಹೆಮ್ಮೆಯನ್ನು, ಪ್ರೀತಿಯನ್ನು ಅನುಭವಿಸಿದ್ದೇನೆ. ಕನ್ನಡದ ಕ್ರಿಯಾಶೀಲತೆ ಯಾವೆಲ್ಲ ರೂಪಗಳಲ್ಲಿ, ಅದೆಷ್ಟು ಸೂಕ್ಷ್ಮವಾಗಿ ಅಭಿವ್ಯಕ್ತಗೊಂಡಿದೆ ಎನ್ನುವುದರ ಅರಿವು ವಿಮರ್ಶೆಯ ವಿನಯ ಮತ್ತು ಎಚ್ಚರವನ್ನು ಜಾಗೃತಗೊಳಿಸಿದೆ.”  ಸುಮಾರು ೪೦೦ ಪುಟಗಳ ಈ ಮುನ್ನುಡಿಗಳ ಸಂಕಲನವನ್ನು ಓದಿದಾಗ ಮತ್ತೊಂದು ಅದ್ಭುತ ಲೋಕದ ಅನಾವರಣವಾಗಲಿದೆ ಎನ್ನುವುದು ಬಹುತೇಕ ಓದುಗರ ಅಭಿಮತ.