ಸಂಜೀವಿನಿ
‘ಕಡಲ ಸೃಷ್ಟಿ’ ಎಂಬ ಸದಭಿರುಚಿ ಮಾಸಿಕದ ಸಂಪಾದಕರಾದ ಬಿ.ಸಂಜೀವ ಇವರ ಜೀವನದ ಅನುಭವಗಳ ಸಾರವೇ ‘ಸಂಜೀವಿನಿ'. ಇವರು ಈ ಪುಸ್ತಕದಲ್ಲಿ ತಮ್ಮ ಜೀವನದಲ್ಲಿ ಅನುಭವಕ್ಕೆ ಬಂದ ಘಟನಾವಳಿಗಳು, ಸ್ವರಚಿತ ಕವನಗಳು ಎಲ್ಲವನ್ನೂ ಸೇರಿಸಿ ಒಂದು ಮಾಹಿತಿ ಪೂರ್ಣ ಪುಸ್ತಕವನ್ನಾಗಿಸಿದ್ದಾರೆ. ಧ್ಯಾನದ ಬಗ್ಗೆ ಅವರು ಮಾಡಿದ ಅಧ್ಯಯನಗಳ ಬಗ್ಗೆಯೂ ಸವಿವರವಾದ ಮಾಹಿತಿ ನೀಡಿದ್ದಾರೆ.
ಸಂಜೀವ ಅವರು ತಮ್ಮ ‘ಮನದಾಳದ ಮಾತು’ ಎಂಬ ಮುನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ “ಸಂಜೀವಿನಿ ಈ ಪುಸ್ತಕದಲ್ಲಿ ವಚನ-ಕವನ ರೂಪದಲ್ಲಿ ಧ್ಯಾನದ ಬಗ್ಗೆ ಬರೆದು, ನನ್ನ ಜೀವನದ ಧ್ಯಾನ ಸಾಧನೆಯ ಬಗ್ಗೆ ಬರೆದಿದ್ದೇನೆ. ಇದರಲ್ಲಿ ಬರೆದಿರುವ ವಿಷಯ ಸಂಗ್ರಹ ಎಲ್ಲಾ ಕೇಳಿ, ಓದಿ, ಅನುಭವಿಸಿದ ವಿಷಯ ಹೊರತು ಎಲ್ಲಾ ನನ್ನದಲ್ಲಾ...ಯಾರು ಯಾರು ಕಾರಣಕರ್ತರು ಇದಕ್ಕೆ ಅವರನ್ನು ಇಲ್ಲಿ ನಾನು ಕೃತಜ್ಞತೆಯಿಂದ ಸ್ಮರಿಸುತ್ತೇನೆ. ಪುಸ್ತಕದ ಪುಟಗಳು ಅಧಿಕವಾಗಿದ್ದರಿಂದ ನನ್ನ ಜೀವನ ಚರಿತ್ರೆ, ಕೆಲವು ಕವನಗಳು, ಪ್ರೋತ್ಸಾಹಕರ ನೆನಪಿನ ಪುಟಗಳನ್ನು ಪ್ರಕಟಿಸಿಲ್ಲ.” ಎಂದಿದ್ದಾರೆ.
‘ಸಂಜೀವಿನಿ' ಪುಸ್ತಕಕ್ಕೆ ಹಲವಾರು ಗಣ್ಯರು ತನ್ನ ಶುಭಾಶಯಗಳನ್ನು ತಿಳಿಸಿದ್ದಾರೆ. ಕೃತಿಕಾರರು ತಮ್ಮ ವಿದ್ಯಾರ್ಥಿ ಜೀವನದ ಸಮಯದಲ್ಲಿ ಮುಂಬೈನಲ್ಲಿ ಕಳೆದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ವಜ್ರೇಶ್ವರಿಯ ಗಣೇಶಪುರಿಯಲ್ಲಿ ಅವದೂತ ನಿತ್ಯಾನಂದರ ಶಿಷ್ಯರಾದ ಮುಕ್ತಾನಂದ ಗುರೂಜಿಯವರ ಆಶ್ರಮದಲ್ಲಿ ಕಳೆದ ನಾಲ್ಕು ತಿಂಗಳ ಬಗ್ಗೆ ಬರೆದಿದ್ದಾರೆ. ಅಲ್ಲಿ ಕಲಿತ ಧ್ಯಾನ ಮುದ್ರೆಗಳು, ಆಲಿಸಿದ ಪ್ರವಚನಗಳ ಬಗ್ಗೆ, ಅವುಗಳು ತಮ್ಮ ಮನಸ್ಸಿನಲ್ಲಿ ಬೀರಿದ ಪರಿಣಾಮಗಳ ಬಗ್ಗೆ ಸೊಗಸಾಗಿ ವರ್ಣಿಸಿದ್ದಾರೆ. ಆಧ್ಯಾತ್ಮಿಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡದ್ದರಿಂದ ಅವರಿಗೆ ಆದ ಪ್ರಯೋಜನಗಳನ್ನು ‘ಆಧ್ಯಾತ್ಮಿಕ ಧ್ಯಾನಫಲಗಳು' ಎಂಬ ಅಧ್ಯಾಯದಲ್ಲಿ ದಾಖಲಿಸಿದ್ದಾರೆ.
ಪುಸ್ತಕದಲ್ಲಿ ‘ಸಮಾಜಸೇವಕ, ಗಾಂಧೀವಾದಿ ಕೊಪ್ಪಳ ಅಯ್ಯಪ್ಪ ಶ್ಯಾನುಭಾಗರು' ಇವರ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಇದೇ ರೀತಿ ‘ನೆಲ್ಲಿಕ್ಕತೀಯಾ ತರವಾಡು', ಅಡ್ಕ ಭಗವತೀ ಕ್ಷೇತ್ರದ ಪುರಾಣ, ಶ್ರೀ ಚೀರುಂಬಾ ಭಗವತೀ ಕ್ಷೇತ್ರ, ಉಳ್ಳಾಲ, ಗೋಪಾಲ ಬಂದ್ಯೋಡು ಹಾಗೂ ಶ್ರೀಕೃಷ್ಣ ಕಾರ್ನವರ ಇವರ ವ್ಯಕ್ತಿ ಪರಿಚಯ ಮೊದಲಾದ ಅಪರೂಪದ ಮಾಹಿತಿ ಇದರಲ್ಲಿ ಅಡಕವಾಗಿದೆ.
ಈ ಕೃತಿಯಲ್ಲಿ ಕಂಡು ಬರುವ ದೊಡ್ದ ಲೋಪವೆಂದರೆ ಪುಟಗಳ ನಡುವೆ ಸಿಗುವ ಜಾಹೀರಾತುಗಳು. ಈ ಜಾಹೀರಾತುಗಳಿಂದ ಪುಸ್ತಕವು ಉತ್ತಮ ಕೃತಿಯಾಗುವ ಅವಕಾಶ ಕಳೆದುಕೊಂಡಿದೆ ಎಂದು ಹೇಳಬಹುದಾಗಿದೆ. ಇದರಿಂದಾಗಿ ಇದು ಜೀವನ ಚರಿತ್ರೆಯ ಪುಸ್ತಕವಾಗದೇ ಕೇವಲ ಸ್ಮರಣ ಸಂಚಿಕೆಯಾಗಿ ಉಳಿದಿದೆ. ಆದರೂ ಸುಮಾರು ೧೦೦ ಪುಟಗಳಲ್ಲಿ (ಜಾಹೀರಾತು ಸೇರಿ) ಕೆಲವು ಅಪರೂಪದ ಮಾಹಿತಿ ಹೊಂದಿರುವ ಪುಟಗಳನ್ನೂ ನೀಡಿರುವುದಕ್ಕೆ ಬಿ. ಸಂಜೀವ ಅವರು ಅಭಿನಂದನಾರ್ಹರು. ತಮ್ಮ ಈ ಕೃತಿಯನ್ನು ಹರಿಕೃಷ್ಣ ಪುನರೂರು ಅವರಿಗೆ ಅರ್ಪಣೆ ಮಾಡಿದ್ದಾರೆ.