ಸಂತಶ್ರೇಷ್ಠ ಕನಕದಾಸರು

ಸಂತಶ್ರೇಷ್ಠ ಕನಕದಾಸರು

ದೆಸೆಗೆಟ್ಟು ನಾಡದೈವಂಗಳಿಗೆ ಹಲುಬಿದರೆ

ನೊಸಲ ಬರಹವ ತೊಡೆದು ತಿದ್ದಲಳವೆ?

ತಲ್ಲಣಿಸದಿರು ಕಂಡ್ಯ ತಾಳು ಮನವೆ

ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ

ವರವ ಕೊಡು ಎನಗೆ ವಾಗ್ದೇವಿ ನಿನ್ನ

ಚರಣ ಕಮಲಗಳ ದಯಮಾಡು ದೇವಿ

ಎಷ್ಟೊಂದು ಸಾರಯುಕ್ತ ಸಾಲುಗಳು.ದಾಸಸಾಹಿತ್ಯದಲ್ಲಿ ಶ್ರೇಷ್ಠ ಸ್ಥಾನವನ್ನು ಪಡೆದವರಲ್ಲಿ ಕನಕದಾಸರು ಓರ್ವರು. ಹಾಲುಮತದ ಕುರುಬ ಜನಾಂಗದ ಬಚ್ಚಮ್ಮ, ಬೀರಪ್ಪ ದಂಪತಿಗಳ ಮಗನೇ ತಿಮ್ಮಪ್ಪ. ಬಾಡ ಎಂಬ ಪ್ರದೇಶದ ೭೮ ಗ್ರಾಮಗಳ ಹೋಬಳಿಯ ಅಧಿಕಾರ ಹೆತ್ತವರಿಗಿದ್ದ ಕಾರಣ ಆಸ್ತಿ, ಹಣ ಯಾವುದಕ್ಕೂ ಕೊರತೆಯಿರಲಿಲ್ಲ. ತಿರುಪತಿ ತಿಮ್ಮಪ್ಪನ ವರಪ್ರಸಾದದಿಂದ ಜನಿಸಿದ ಬಾಲಕ ತಿಮ್ಮಪ್ಪನಿಗೆ ಸಕಲ ವಿದ್ಯೆ, ಸಾಹಿತ್ಯ, ಸಂಗೀತ, ಶಸ್ತ್ರ, ಶಾಸ್ತ್ರಾಭ್ಯಾಸ ಎಲ್ಲವನ್ನೂ ಬೀರಪ್ಪ ಕಲಿಸಿದ್ದ. ತಂದೆಯ ಆಕಸ್ಮಿಕ ಮರಣದಿಂದ ಬಾಲಕ ತಿಮ್ಮಪ್ಪ ತಂದೆಯ ಹೋಬಳಿ ಡಣಾಯಕನ ಜವಾಬ್ದಾರಿ ಕೈಗೆತ್ತಿಕೊಳ್ಳುತ್ತಾನೆ. ಹಾಗೆ ಒಂದು ದಿನ ಯಾವುದಕ್ಕೋ ಭೂಮಿಯನ್ನು ಅಗೆಯುತ್ತಿರುವಾಗ ಹೊನ್ನು. ಸಿಗುತ್ತದೆ. ಈ ಎಲ್ಲಾ ಬಂಗಾರವನ್ನು ಪ್ರಜೆಗಳ ಹಿತರಕ್ಷಣೆ, ಧಾರ್ಮಿಕ ಕಾರ್ಯಗಳಿಗಾಗಿ ಬಳಸಿ, ‘ಕನಕನಾಯಕ’ ಎಂಬ ಹೆಸರಿಗೆ ಪಾತ್ರನಾಗುತ್ತಾನೆ. ಮದುವೆಯಾಗಿ ಒಂದು ಮಗುವಾದರೂ ಆ ಮಗು ಇಹಲೋಕ ತ್ಯಜಿಸಿತು. ಮುಂದೆ ಬಹಳಷ್ಟು ವರ್ಷಗಳ ಕಾಲ ಪತ್ನಿ ಯೊಂದಿಗಿದ್ದು,ಆಕೆಯೂ ಮರಣಿಸಿದಳು. ಸಂಸಾರ ಸುಖವೇ ಬೇಡವೆಂದು ವೈರಾಗ್ಯ ಕಾಡತೊಡಗಿತು ಕನಕನಿಗೆ. ಮೇಲಿಂದ ಮೇಲೆ ಆದ ಬದುಕಿನ ನೋವಿನ ಹೊಡೆತಗಳಿಂದ ಒಂದಷ್ಟು ಸಾಹಿತ್ಯದ ಕೆಲಸಗಳಲ್ಲಿ ತೊಡಗಿಸಿಕೊಂಡು ‘ಹರಿಭಕ್ತಿ ಸಾರ’ ಎಂಬ ಕೃತಿಯನ್ನು ಬರೆದ ಕನಕ, ತನ್ನದೇ ಶೈಲಿಯಲ್ಲಿ ಕಾಗಿನೆಲೆಯ ಆದಿಕೇಶವನನ್ನು ಅಂಕಿತವಾಗಿರಿಸಿ ತನ್ನ ಭಕ್ತಿ ಗೀತೆಗಳನ್ನು, ದಾಸರಪದಗಳನ್ನು ರಚಿಸಿದರು. ಕನಕ ಹೋಗಿ ಕನಕದಾಸರಾದರು. ಯುದ್ಧ, ದೊಂಬಿ, ವೈರ  ಆಸ್ತಿ, ಅಂತಸ್ತು ಎಲ್ಲವನ್ನೂ ತ್ಯಜಿಸಿ  ದಾಸಶ್ರೇಷ್ಠರಾಗಿ ಹಲವಾರು ಅನುಯಾಯಿಗಳಿಗೆ ದಾಸದೀಕ್ಷೆ ನೀಡಿದರು. ತನಗೆ ಅಶರೀರವಾಣಿಯಾದಂತೆ ತಾನು ದಾಸನಾಗಿರುವೆ, ಯಾವ ಮೋಹ, ಸಂಸಾರ ಬಂಧನ ಬೇಡವೆಂದವರು.

ಇವರ ರಚನೆಗಳು ಹರಿಭಕ್ತಿ ಸಾರ ಮೊದಲಕೃತಿ, ಮೋಹನ ತರಂಗಿಣಿ, ನಳಚರಿತ್ರೆ, ಕಾವ್ಯಗಳನ್ನು, ಸುಮಾರು ೩೧೬ ಕೀರ್ತನೆಗಳನ್ನು ರಚಿಸಿದ್ದಾರೆಂದು ತಿಳಿದು ಬರುತ್ತದೆ. ಮುಂಡಿಗೆ, ಉಗಾಭೋಗಗಳನ್ನು ಸಹ ರಚಿಸಿದ್ದಾರೆ. ಮೋಹನ ತರಂಗಿಣಿಯುದ್ದಕ್ಕೂ ಭಗವಾನ್ ಶ್ರೀಕೃಷ್ಣನ ಕುರಿತಾಗಿ ರಚಿಸಿ ಹಾಡಿದ್ದಾರೆ. ಶ್ರೀಕೃಷ್ಣದೇವರಾಯನನ್ನೇ ಕೃಷ್ಣನಾಗಿ ನೋಡಿದ್ದಾರಂತೆ. ಸಾಂಗತ್ಯ ಶೈಲಿಯಾಗಿದ್ದು ಅಂದಾಜು ೨೭೯೭ ಪದ್ಯಗಳಿವೆಯಂತೆ. 

ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ

ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ

ಇಂತಹ ನೂರಾರು ಕೀರ್ತನೆಗಳನ್ನು ಭಕ್ತರಿಗೆ ಉಣಬಡಿಸಿದ್ದಾರೆ. ಉಡುಪಿಯ ಕನಕನ ಕಿಂಡಿ ಜಗತ್ಪ್ರಸಿದ್ಧ. ೧೫-೧೬ ನೇ ಶತಮಾನದಲ್ಲಿ ಜನಪ್ರಿಯರಾದ ಭಕ್ತಿಪಂಥದ ದಾಸರಲ್ಲಿ ಶ್ರೇಷ್ಠರಾದವರು. ದಾಸ ಪರಂಪರೆಯ ಕನ್ನಡ ಭಾಷೆಯ ಕೀರ್ತನೆಕಾರರಾಗಿ ಮೆರೆದವರು. ಜಾತಿ ವ್ಯವಸ್ಥೆಯ ಬಗ್ಗೆ ಸಮರವನ್ನೇ ಸಾರಿದವರು,ನಿಷ್ಠುರ ಕಟ್ಟಿಕೊಂಡವರು. ಇದರ ಮೇಲೆಯೇ ಒಂದಷ್ಟು ತತ್ವಪದಗಳನ್ನು ಬರೆದು ಹಾಡಿದ್ದಾರೆ. ಕನಕದಾಸರದ್ದು ೯೮ ವರುಷಗಳ ತುಂಬು ಜೀವನವೆಂಬ ಅಭಿಪ್ರಾಯವಿದೆ. ಆಧ್ಯಾತ್ಮಿಕ ಸಂದೇಶವನ್ನು ಸಾರಿದ ಹರಿದಾಸ ಶ್ರೇಷ್ಠ, ಕವಿ, ಸಮಾಜ ಸೇವಕರಾದ ಭಕ್ತ ಕನಕದಾಸರು ನಮ್ಮ ಕನ್ನಡ ನಾಡಿನ ಅನರ್ಘ್ಯರತ್ನ. ಇಂದು ಅವರ ಜಯಂತಿಯಂದು ನಾವೆಲ್ಲರೂ ನಾಲ್ಕು ನುಡಿಗಳ ಮೂಲಕ ನೆನಪಿಸಿಕೊಳ್ಳೋಣ.

ಚುಟುಕು--ಹರಿದಾಸ

ಹರಿದಾಸ ಸಾಹಿತ್ಯದ ಶ್ರೇಷ್ಠನೀತ

ಬಾಡದ ಊರಿನಲಿ ಜನಿಸಿದಾತ

ಕಾವ್ಯ ಪ್ರಪಂಚದ ಕಣ್ಮಣಿ ಈತ

ಸಾರಯುತ ಕೀರ್ತನೆಗಳ ರಚಿಸಿದಾತ

(ಆಕರ ಪುಸ್ತಕ : ಧಾರ್ಮಿಕ ಪುರುಷರ ಚರಿತ್ರೆ)

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ : ಶ್ರೇಯಸ್ ಕಾಮತ್, ಬೆಂಗಳೂರು