ಸಂತೃಪ್ತಿ
ಇಂದು ಸಂತೃಷ್ಟತೆಯ ಬಗ್ಗೆ ತಿಳಿದುಕೊಳ್ಳೋಣ. ಈ ಘಟನೆ ಓದಿ. ಒಬ್ಬ ರೈತ ಚೆನ್ನಾಗಿ ದುಡಿದಿದ್ದಾನೆ. ಮೈಯೆಲ್ಲಾ ಬೆವರು. ಚೆನ್ನಾಗಿ ಹಸಿವಾಗಿತ್ತು. ಮನೆಯಿಂದ ತಂದ ಬುತ್ತಿ ತೆಗೆದು ಊಟ ಮಾಡಿದನು. ಏನು ರುಚಿ?. ಅದ್ಭುತ. ಅಲ್ಲೇ ಮರದ ನೆರಳಿನಲ್ಲಿ ಟವಲ್ ಹಾಸಿ ಮಲಗಿದನು. ಹಾಸಿಗೆ ಇಲ್ಲ. ದಿಂಬು ಇಲ್ಲ. ಗಾಡವಾದ ನಿದ್ರೆ ಬಂದಿತ್ತು. ಇನ್ನೊಬ್ಬ ದೊಡ್ಡ ಮನೆ ಕಟ್ಟಿಸಿದ್ದಾನೆ. ಊಟಕ್ಕಾಗಿ ಆ ಹೋಟೆಲ್, ಈ ಹೋಟೆಲ್ ನಿಂದ ಬಗೆ ಬಗೆಯ ಆಹಾರ ತರಿಸಿದ್ದಾನೆ. ಒಂದು ಆಹಾರವು ರುಚಿ ನೀಡಿಲ್ಲ. ಬೈದು, ಎದ್ದು ಮಲಗಲು ಹೋದನು. ಬೆಡ್ ರೂಮಲ್ಲಿ ವಿದೇಶಿ ಹಾಸಿಗೆ, ಸುಗಂಧ, ಇಂಪಾದ ಹಾಡು ಹಾಕಿಕೊಂಡು ಮಲಗಿದ್ದಾನೆ. ನಿದ್ರೆ ಇಲ್ಲ, ಏಕೆ ? ನಾವೆಲ್ಲ ತಿಳಿದಿರುವುದು ಏನೆಂದರೆ, ಒಳ್ಳೆ ನಿದ್ರೆಗೆ ಒಳ್ಳೆ ಹಾಸಿಗೆ ಬೇಕು ಅಂತ. ಈ ಎರಡು ಘಟನೆ ವಿಶ್ಲೇಷಿಸಿದರೆ ನಿದ್ರೆಗೆ ಬೇಕಾಗಿರುವುದು ಹಾಸಿಗೆಯಲ್ಲ, ದುಡಿಮೆ. ರುಚಿ ಇರುವುದು ಆಹಾರದಲ್ಲಲ್ಲ ಹಸಿವೆಯಲ್ಲಿ. ನಾವು ಆಹಾರಕ್ಕೆ ಆದ್ಯತೆ ನೀಡುತ್ತೇವೆ. ಹಾಸಿಗೆಗೆ ಆದ್ಯತೆ ನೀಡುತ್ತೇವೆ. ಆದರೆ ಆಹಾರದಲ್ಲಿ ರುಚಿ ಇಲ್ಲ. ನಿದ್ರೆ ಇಲ್ಲ. ನಮಗೆ ನಿದ್ರೆ ಮುಖ್ಯನೇ ವಿನಹ ಹಾಸಿಗೆಯಲ್ಲ. ನಿದ್ರೆಗೆ ಬೇಕಾಗಿರುವುದು ದೇಹದ ದಣಿವು. ಹಸಿವು, ನಿದ್ರೆ ಇದ್ದರೆ ಅದೇ ಸಂತೃಪ್ತಿ. ನಿದ್ರೆ ಸರಿಯಾಗಿ ಬರುತ್ತಿತ್ತು ಎಂದರೆ ಹಾಸಿಗೆಯು ತೃಪ್ತಿಯೇ. ಚಾಪೆಯು ತೃಪ್ತಿಯೇ. ಹಸಿವಾಗುತ್ತಿದ್ದರೆ ಬರಿ ರೊಟ್ಟಿಯೂ ತೃಪ್ತಿಯೇ. ದೇಹ ದಣಿಯಬೇಕು, ಹೊಟ್ಟೆ ಹಸಿಯಬೇಕು, ಕಣ್ಣಿಗೆ ನಿದ್ರೆ ಬಂದಿರಬೇಕು ಅದಕ್ಕೆ ಸಂತೃಷ್ಟಿ ಎನ್ನುವರು. ಹಾಗೆ ನಿಸರ್ಗ ನಮಗೆ ಬರೀ ದೇಹ ನೀಡಲಿಲ್ಲ. ಇಂದ್ರಿಯ, ಮನಸ್ಸು ನೀಡಿತು. ಮನಸ್ಸು ಒಂದು ಪಾತ್ರೆ ಇದ್ದಂತೆ. ಅದರಲ್ಲಿ ನಮ್ಮಲ್ಲಿ ಎಷ್ಟು ಇದೆಯೋ ಅಷ್ಟನ್ನೇ ತುಂಬಿರಬೇಕು. ಮನಸ್ಸು ತುಂಬಿದಂತೆ ಇರಬೇಕು. 10 ಎಕರೆ ಹೊಲ ಮನಸ್ಸು ತುಂಬಿರಬೇಕು. ನೂರು ಎಕರೆ ಹೊಲ ಮನಸ್ಸು ತುಂಬಿರಬೇಕು. 10 ಎಕರೆ ಇದ್ದವ 100 ಎಕರೆ ಇಲ್ಲ ಅಂತ ಮನಸ್ಸು ಖಾಲಿಯಾಗಬಾರದು. ನೂರು ಎಕರೆ ಇದ್ದವ ನನ್ನಲ್ಲಿ ಸಾವಿರ ಎಕರೆ ಇಲ್ಲ ಅಂತ ಮನಸ್ಸು ಖಾಲಿ ಮಾಡಿಕೋಬಾರದು. ತುಂಬಿದಂತೆ ಇರಬೇಕು. ಇದಕ್ಕೆ ಸಂತೃಷ್ಟಿ ಎನ್ನುವರು.
ಎಲ್ಲರೂ ಒಂದೇ ರೀತಿ ಇರಲು ಸಾಧ್ಯವೇ?. ಅವರಂತೆ ನಾನಿಲ್ಲ ಅಂದರೆ ಅಸಂತೃಷ್ಟಿ. ಜಗತ್ತು ವೈವಿಧ್ಯ. ಇಲ್ಲಿ ಎಲ್ಲಾ ರೀತಿ ಇದೆ. ಹಾಗಾಗಿ ಅವರಂತೆ ನಾನಾಗಬೇಕು ಅನ್ನುವುದೇ ತಪ್ಪು. ಅವರಷ್ಟಕ್ಕೆ ಅವರು, ನನ್ನಷ್ಟಕ್ಕೆ ನಾನು. ನಾನು ಅವರ ನೋಡಿ ಮರುಗಬಾರದು. ಅವರು ನನ್ನ ನೋಡಿ ಮರುಗಬಾರದು. ಉದಾಹರಣೆಗೆ, ನಾವು ನಡೆದುಕೊಂಡು ಹೋಗುತ್ತಿದ್ದೇವೆ ಎಂದುಕೊಳ್ಳಿ. ಪಕ್ಕದಲ್ಲಿ ಕಾರಿನವ ಕಾರು ಚಲಾಯಿಸಿಕೊಂಡು ಹೋದ. ಅದನ್ನು ನೋಡಿ ನನ್ನ ಹತ್ತಿರ ಕಾರಿಲ್ಲವಲ್ಲ ಎಂದರೆ ನಡೆಯುವ ಸುಖವೇ ಹೋಗುತ್ತದೆ. ನಾವು ಹೇಗೆ ಭಾವಿಸಬೇಕೆಂದರೆ?. ನಾವು ಸ್ವತಂತ್ರ. ನಮ್ಮಷ್ಟಕ್ಕೆ ನಾವು ನಡೆಯುತ್ತೇವೆ. ಈ ಕಾರುಗಳೆಲ್ಲ ಪೆಟ್ರೋಲ್ ಮೇಲೆ ಅವಲಂಬಿಸಿಕೊಂಡಿರುತ್ತದೆ. ಮೆಕಾನಿಕ್ ಮೇಲೆ ಅವಲಂಬಿಸಿಕೊಂಡಿರುತ್ತದೆ. ಈ ಕಾರು ಮನೆ ಹೊರಗೆ ಮಾತ್ರ ನಿಲ್ಲುತ್ತದೆ. ನಾವು ಸ್ವಾತಂತ್ರ್ಯರು. ನಾವು ಮನೆಯೊಳಗೂ ಓಡಾಡುತ್ತೇವೆ. ಕಾರು ಇಲ್ಲದೆ ಇರಬಹುದು ಕಾಲಿಲ್ಲದೆ ಇರೋಕಾಗುತ್ತದೆ ಏನು?.
ಒಂದೂರಲ್ಲಿ ಒಂದು ಕಾಗೆ ಇತ್ತು. ಕರಿ ಬಣ್ಣ. ಕೆಟ್ಟದ್ವನಿ. ಆದರೆ ಕಾಗೆ ಅರಣ್ಯಕ್ಕೆ ಹೋಗುವುದಿಲ್ಲ. ಮನುಷ್ಯ ಇರುವಲ್ಲೇ ಇರುತ್ತದೆ. ಅವನ ಮನೆ ಮೇಲೆ ಕೂತಿರುತ್ತದೆ. ಆದರೆ ಮನುಷ್ಯನಂತೆ ಆಗಿಲ್ಲ. ಅದು ವೈಶಿಷ್ಟ್ಯ. ಅದು ಮನುಷ್ಯನ ಕೈಗೆ ಸಿಕ್ಕಿಲ್ಲ. ಆದರೆ ಎರಡು ಸುಂದರ ಕೆಲಸ ಮಾಡುತ್ತದೆ. ಬೆಳಗಿನ ಹೊತ್ತಿನಲ್ಲಿ ಕೂಗಿ ಕೂಗಿ ಮನುಷ್ಯನನ್ನು ಎಬ್ಬಿಸುತ್ತದೆ. ಮತ್ತು ಜನ ತಿಂದು ಚೆಲ್ಲಿದ್ದನ್ನು ಸ್ವಚ್ಛ ಮಾಡುತ್ತವೆ. ಹೀಗೆ ಕಾಗೆ ತನ್ನ ಬಂಧುಗಳನ್ನು ಕರೆದುಕೊಂಡು ಊರನ್ನೆಲ್ಲಾ ಸ್ವಚ್ಛ ಮಾಡುತ್ತಿದ್ದವು. ಇದರ ಸ್ವಚ್ಛತಾ ಕಾರ್ಯವನ್ನು ಯಾರೂ ಗೌರವಿಸಲಿಲ್ಲ. ಆದರೂ ಮಾಡ್ತಾನೆ ಇದಾವೆ. ಇದರ ಕೆಲಸ ನೋಡಿ ದೇವರಿಗೆ ಸಂತೋಷವಾಯಿತು. ಈ ಕಾಗೆಗಳನ್ನು ಭೇಟಿ ಮಾಡಲು ದೇವರು ಬಂದನು. ಬಂದವನೇ ಕಾಗೆಗೆ ಹೇಳಿದ. ನಿನ್ನ ಕೆಲಸ ನೋಡಿ ಮೆಚ್ಚುಗೆಯಾಗಿದೆ. ನಿನಗೇನು ಬೇಕು ಕೇಳು ಕೊಡುತ್ತೇನೆ ಎಂದು. ಆಗ ಕಾಗೆ ಹೇಳಿದ್ದು, ನಾನು ಕರೆದಿಲ್ಲ, ಬೇಡಿಲ್ಲ, ನೀನ್ ಯಾಕೆ ಬಂದೆ ?. ಈ ಮನುಷ್ಯರು ನಿನ್ನನ್ನು ಕರಿತಾರೆ, ಬೇಡುತ್ತಾರೆ ಅವರನ್ನು ಭೇಟಿಯಾಗು ಅಂದಿತು. ಆಗ ದೇವರು ಹೇಳಿದ ಮನುಷ್ಯರನ್ನು ಭೇಟಿಯಾಗೊ ತಾಕತ್ತು ನನಗಿಲ್ಲ. ಅವರು ಒಂದು ಹೂ ನೀಡಿ ಒಂದು ಕಾಸು ಕೊಟ್ಟು ಲಕ್ಷ, ಕೋಟಿ ಕಾಸು ಬೇಡುತ್ತಾರೆ. ಅವರು ಬೇಡಿದ್ದನ್ನು ಪೂರೈಸಕಾಗೋದಿಲ್ಲ. ಅದಕ್ಕೆ ಅವರ ಬಳಿ ಹೋಗುವುದನ್ನೇ ಬಿಟ್ಟಿದ್ದೇನೆ. ನಿನಗೇನು ಬೇಕು?. ಕೇಳು ಕೊಡುತ್ತೇನೆ ಎಂದನು. ಆಗ ಕಾಗೆ ಹೇಳಿದ್ದು, ನನಗೇನು ಕೊರತೆ ಇದೆ ? ಹೇಳಿತು. ಆಗ ಭಗವಂತ ಹೇಳಿದ. ನೀನು ಬೆಳಿಗ್ಗೆ ಎಲ್ಲರನ್ನೂ ಎಬ್ಬಿಸುತ್ತಿಯೇ, ಆದರೆ ನಿನಗೆ ಮಧುರ ಧ್ವನಿ ಕೊಡಲಿಲ್ಲ. ಊರೆಲ್ಲ ಸ್ವಚ್ಛ ಮಾಡುತ್ತಿ, ನಿನಗೆ ಸುಂದರ ಬಣ್ಣ ಕೊಡಲಿಲ್ಲ. ಅದಕ್ಕೆ ಕೇಳು, ಒಳ್ಳೆ ಬಣ್ಣ, ಧ್ವನಿ ಕೊಡುತ್ತೇನೆ ನಿನಗೆ. ಸುಂದರ ಮನೆ ಕಟ್ಟೋದಿಕ್ಕೆ ಬರೋದಿಲ್ಲ. ಮುಳ್ಳು ಕಡ್ಡಿ ಹಾಕಿಕೊಂಡು ಇರುತ್ತೀಯೆ, ನಿನಗೊಂದು ಸುಂದರ ಮನೆ ಕೊಡುತ್ತೇನೆ. ಕೇಳು ಏನು ಬೇಕು? ಅಂದನು. ಅವಾಗ ಕಾಗೆ ಹೇಳಿತು, ಭಗವಂತನೇ ನೀನೇನು ಕೊಟ್ಟಿದ್ದೀಯೋ?, ಅದು ಬಹಳ ಚೆನ್ನಾಗಿದೆ. ನಾನು ಕಪ್ಪಾಗಿದ್ದೇನೆ. ಧ್ವನಿ ಚೆನ್ನಾಗಿಲ್ಲ. ಅದಕ್ಕೆ ನಾನು ಸ್ವತಂತ್ರವಾಗಿದ್ದೇನೆ. ಮನುಷ್ಯನ ಕೈಯಿಂದ ಪಾರಾಗಿದ್ದೇನೆ. ನಾನು ಚೆನ್ನಾಗಿದ್ದರೆ, ಧ್ವನಿ ಮಧುರವಾಗಿದ್ದರೆ, ಮನುಷ್ಯ ನನ್ನನ್ನು ಬಂಧಿಸುತ್ತಿದ್ದನು. ಈಗ ನಾನು ಸ್ವತಂತ್ರವಾಗಿದ್ದೇನೆ. ಇದಕ್ಕಿಂತ ಹೆಚ್ಚು ನನಗೇನು ಬೇಡ, ಇದೇ ಸಾಕು ಅಂದಿತು. ಇದರಿಂದ ನಾನು ಆರಾಮವಾಗಿದ್ದೇನೆ. ಎಷ್ಟು ಚೆನ್ನಾಗಿ ಬದುಕುತ್ತಾ ಇದ್ದೇನೆ. ನನಗೆ ಯಾರು ವೈರಿ ಇಲ್ಲ. ಚೆನ್ನಾಗಿದ್ದರೆ ವೈರಿ ಇರುತ್ತಾರೆ. ಒಳ್ಳೆ ಧ್ವನಿ ಇದ್ದರೆ ವೈರಿ ಇರುತ್ತಾರೆ. ಬೈಯುತ್ತಾರೆ, ಅಸೂಯೆ ಪಡ್ತಾರೆ. ನನ್ನಲ್ಲಿ ಅದಿಲ್ಲ ಅಂತ ಆರಾಮಾಗಿದ್ದೇನೆ. ಏನು, ನೀನು ನಿನ್ನ ಇಚ್ಛೆಯಂತೆ ಬಣ್ಣ ರೂಪ ಧ್ವನಿ ಕೊಟ್ಟಿದಿಯಲ್ಲ, ಅದೇ ನನಗೆ ಸಂತೃಪ್ತಿ ಇದೆ ಅಂತು. ಆ ಕಾಗೆ ಎಷ್ಟು ಸಂತೃಪ್ತ ?. ಏನಿದೆ ಅದರಲ್ಲೇ ಸ್ವರ್ಗ ಕಂಡಿತ್ತು. ಆಗ ಭಗವಂತ ಹೇಳಿದ. ನಿನಗೆ ಹಿಂದಿನದು ಗೊತ್ತಾಗಲಿ. ಮುಂದಿನದು ಗೊತ್ತಾಗಲಿ. ನೀನು ಕರೆದರೆ ಜನರಿಗೆ ಗೊತ್ತಾಗಲಿ ಏನೋ ಭವಿಷ್ಯ ಇದೆ ಅಂತ ಹೇಳಿ ದೃಷ್ಟಿ ನೀಡಿದ್ದಾನೆ. ಅದಕ್ಕೆ ಸತ್ತ ಕೂಡಲೇ ಕಾಗೆ ಬಂದಿದೆಯೋ ಇಲ್ಲವೋ ಅಂತ ನೋಡುತ್ತಾರೆ. ಸತ್ತವರು ಹೋಗಿದ್ದಾರೋ ಇಲ್ಲವೋ ಅಂತ. ನಾವು ಕಲ್ಲು ಹೊಡೆದರೆ ಅವು ಜಗಳ ಮಾಡುವುದಿಲ್ಲ. ಮುಷ್ಕರ ಮಾಡುವುದಿಲ್ಲ. ಬೇರೆ ಕಡೆ ಹೋಗ್ತೀವಿ ಅಂತ ಹಾರಿಹೋಗುತ್ತವೆ. ಅದು ಬೇಡ ಅಂದರೆ ಇನ್ನೊಂದು ಕಡೆ ಹಾರಿ ಹೋಗುತ್ತವೆ. ಕಾಗೆ ಮನುಷ್ಯನಿಗೆ ಹೇಳುತ್ತದೆ. ನೋಡು ನಿನಗೆ ಎಲ್ಲ ಇದೆ. ಸಮಾಧಾನ ಇಲ್ಲ. ನಾನು ನನಗೇನು ಇದೆಯೋ ಅದರಲ್ಲಿ ಸಂತೃಪ್ತಿ ಪಟ್ಟಿದ್ದೇನೆ ಅಂತು. ಎಷ್ಟಿದೆಯೋ ಅಷ್ಟರಲ್ಲಿ ತೃಪ್ತಿ ಪಡಬೇಕು. ಎಲ್ಲಾ ಉಚಿತ ಬಂದರೆ ತೃಪ್ತಿ ಇಲ್ಲ. ನಾವು ಶ್ರಮ ಮಾಡಿ ಅನುಭವಿಸಿದರೆ ತೃಪ್ತಿ. ಎಷ್ಟು ಅದೇ ಅಷ್ಟರಲ್ಲಿ ತೃಪ್ತಿಯಿಂದ ಇರಬೇಕು.
ನಮ್ಮಲ್ಲಿ ಒಂದು ರುಮಾಲು ಇದೆ. ಅದನ್ನೇ ಚೆನ್ನಾಗಿ ಸುತ್ತಿಕೊಳ್ಳಬೇಕೆ ವಿನಹ ಟೋಪಿ ಇಲ್ಲ ಅನ್ನಬಾರದು. ಬಟ್ಟೆ ಯಾವುದಾದರೇನು ಅದನ್ನೇ ಮಸ್ತ್ ಆಗಿ ಬಳಸುವುದು. ರೇಷ್ಮೆ ದು ಇಲ್ಲವಲ್ಲ ಅನ್ನಬಾರದು. ಅವರನ್ನು, ಇವರನ್ನ ,ಜಾಹೀರಾತು ನೋಡಿ ಅದರಂತೆ ಮಾಡಿಕೊಂಡು ಹೋದರೆ ಗತಿ ಕೆಡುತ್ತದೆ. ಜಾಹೀರಾತಿನವರು ಹೇಳುತ್ತಾರೆ, ಇದನ್ನು ಕುಡಿ ಆಕಾಶದಾಗೆ ತೇಲ್ತಿಯಾ ಅಂತಾರೆ. ಇದನ್ನು ಹಚ್ಚಿಕೊಂಡರೆ ಮುಖ ಅರಳುತ್ತದೆ ಅಂತಾರೆ. ಅವರಿಗೆ ಹಣ ಬಂತು ಮುಖ ಅರಳುತ್ತದೆ. ಈ ವಸ್ತುವಿನಿಂದ ಅಲ್ಲ. ನಮಗೆಷ್ಟು ಬೇಕೋ ಅಷ್ಟು ಬಳಸುವುದು. ನಮ್ಮ ಆನಂದದ ಸೌಧ ನಾವು ಕಟ್ಟೋದು. ಬಟ್ಟೆ ಚೆಂದ ಅಲ್ಲ , ಮುಖ ಚಂದ. ಮುಖ ಚಂದ, ಮಾತು ಚೆಂದ, ನೋಟ ಚಂದ ಅದು ಸೌಂದರ್ಯ. ಹಾಗೆ ನಾವು ಬದುಕಬೇಕು. ಕೊರತೆ ಕಡೆ ಲಕ್ಷ್ಯ ಕೊಡಬಾರದು. ತುಂಬಿದ ಕಡೆ ಲಕ್ಷ್ಯ ಕೊಟ್ಟರೆ ತುಂಬಿ ಬಿಡುತ್ತದೆ.
ನಾವೆಲ್ಲ ಬಲೂನು ನೋಡಿದ್ದೇವೆ. ಅದಕ್ಕೆ ಹಿತಮಿತ ಗಾಳಿ ಹಾಕಿದರೆ, ಹಾರಾಡುತ್ತಾ ಇರುತ್ತದೆ. ಎರಡು ಬಲೂನು ಇತ್ತು. ಒಂದು ದೊಡ್ಡದು, ಇನ್ನೊಂದು ಚಿಕ್ಕದು. ಚಿಕ್ಕ ಬಲೂನು ದೊಡ್ಡದರ ಹತ್ತಿರ ಹೋಗಿ ಹೋಲಿಸಿಕೊಂಡಿತು. ನಾನು ಸಣ್ಣವ ಅಂದುಕೊಂಡು ಒಬ್ಬ ಸಂತನ ಬಳಿ ಬಂತು. ನಾನು ದೊಡ್ಡ ಬಲೂನಿನಂತೆ ಆಗಬೇಕು, ಅದಕ್ಕೆ ನನಗೆ ಗಾಳಿ ತುಂಬು ಅಂತು. ಸಂತ ಹೇಳಿದ, ನಿನ್ನಲ್ಲಿ ಗಾಳಿ ತುಂಬಿದೆಯಲ್ಲ ಮತ್ಯಾಕೆ ಹಾಕುವುದು ಅಂದ. ಆಗ ಚಿಕ್ಕಬಲೂನು ಹೇಳಿತು. ನಾನು ದೊಡ್ಡ ಬಲೂನಿನಂತೆ ಆಗಬೇಕು ಅದಕ್ಕೆ ಗಾಳಿ ಹಾಕು ಅಂದಿತು. ಸ್ವಂತ ಸ್ವಲ್ಪ ಹಾಕಿ, ಸಾಕಲ್ಲ ಅಂದನು. ಇಲ್ಲ ಇನ್ನೂ ಹಾಕು ಅಂತು. ಸಂತ ಹೇಳಿದ ಬೇಡ, ಇಷ್ಟು ಸಾಕು ಅಂದನು. ಆಗ ಬಲೂನ ಹೇಳಿತು ನಾನು ಅವನಂಗೆ ಆಗಬೇಕು ಅದಕ್ಕೆ ಗಾಳಿ ಹಾಕು ಅಂತು. ಆಗ ಸಂತ ಹೇಳಿದ ಅವನು ತುಂಬಿದ್ದಾನೆ. ನೀನು ತುಂಬಿದ್ದೀಯೇ. ಅವನು ತೇಲುತ್ತಾ ಇದ್ದಾನೆ. ನೀನು ತೇಲುತ್ತಾ ಇದ್ದೀಯೆ. ಮತ್ತೆ ಯಾಕೆ ? ಅಂದ. ಆಗ ಬಲೂನು ಹೇಳ್ತು, ಇಲ್ಲ ಹಾಕು. ನನನಗೆ ಅವನ ಹಾಗೆ ಆಗದಿದ್ದರೆ ನನಗೆ ಸಮಾಧಾನ ಇಲ್ಲ ಅಂತು. ಹಾಕುತ್ತಿದ್ದಂತೆ ಹೊಡೆದು ಹೋಯಿತು. ನಮ್ಮ ಜೀವನವೂ ಹಾಗೆ. ಯಾರದರ ಜೀವನ ನೋಡಿ ನಮ್ಮ ಜೀವನ ಕಟ್ಟಿಕೊಳ್ಳಲು ಹೋದರೆ ಗಾಳಿ ತುಂಬಿ ಬಲೂನು ಹೊಡೆದಂತೆ. ಅವರ ಜೀವನ ಅವರದು. ನಮ್ಮ ಜೀವನ ನಮ್ಮದು. ಅವರು ಅವರ ಹಾಗೆ ಇರಬೇಕು. ನಾವು ನಮ್ಮ ಹಾಗೆ ಇರಬೇಕು. ಒಬ್ಬರಂತೆ ಇನ್ನೊಬ್ಬರು ಆಗಲು ಸಾಧ್ಯವಿಲ್ಲ. ನಾವು ಮಕ್ಕಳಿಗೆ ಹೇಳುತ್ತೇವೆ. ನೀನು ಅವನಂತೆ ಆಗು ಅಂತ. ಅದು ತಪ್ಪು. ನಮಗೇನು ಸಾಧ್ಯ ಇದೆ ಅದು ಆಗುವುದು. ಶಿಕ್ಷಕನಾಗಬಹುದು. ಸಂಗೀತಗಾರನಾಗಬಹುದು. ಶಿಲ್ಪಿಯಾಗಬಹುದು. ವ್ಯಾಪಾರಿಯಾಗಬಹುದು. ಇಂಜಿನಿಯರ್ ಆಗಬಹುದು. ಏನಾಗುವ ಸಾಮರ್ಥ್ಯ ನಮ್ಮಲ್ಲಿ ಇದೆಯೋ ಅದಾಗಬೇಕು, ವಿನಃ ಇನ್ನೊಬ್ಬರಂತೆ ಅಲ್ಲ. ಒಬ್ಬ 99 ಅಂಕ ಪಡೆದಿದ್ದಾನೆ. ಇನ್ನೊಬ್ಬ 97 ಅಂಕ ತೆಗೆದುಕೊಂಡಿದ್ದಾನೆ. ಕಡಿಮೆ ಅಂತ ಅನಿಸಿತ್ತು, ಆತ ಕಡಿಮೆ ಅಂತ ಕೊನೆಗೆ ಕಡಿಮೆಯಾಗುತ್ತಾನೆ. ನಂತರ ಅಡ್ಡದಾರಿ ಹಿಡಿಯುತ್ತಾನೆ. 35 ಅಂಕ ಪಡೆದವನಿಗೆ ಪಾಸಾಗಿದೆಯಲ್ಲ, ಸಂತೋಷ. ಮಹಾತ್ಮ ಗಾಂಧಿ 35 ಅಂಕ ಪಡೆದಿದ್ದರು ಮಹಾತ್ಮ ಆದರು. ನೀನು ಮಹಾತ್ಮ ಆಗು ಅಂದರೆ ಸ್ಫೂರ್ತಿ ಪಡೆಯುತ್ತಾನೆ. ಬಹಳ ನಿರೀಕ್ಷೆ ಇಟ್ಟುಕೊಳ್ಳಬಾರದು. ಎಷ್ಟು ಬೇಕು ಅಷ್ಟೇ ನಿರೀಕ್ಷೆ ಇದ್ದರೆ ತೃಪ್ತಿ ಸಿಗುತ್ತದೆ. ಖಾಲಿ ಅನಿಸಬಾರದು. ಕಡಿಮೆ ಅನಿಸಬಾರದು. ಅದು ಸಂತೃಪ್ತಿ. ನನ್ನಷ್ಟಕ್ಕೆ ನಾನು ಪೂರ್ಣ. ಅವರಷ್ಟಕ್ಕೆ ಅವರು ಪೂರ್ಣ. ನಾನು ಕಡಿಮೆ ಅಲ್ಲ. ಅವರು ಕಡಿಮೆಯಲ್ಲ. ನಾನು ಹೆಚ್ಚಲ್ಲ. ಅವರು ಹೆಚ್ಚಲ್ಲ. ಹಾಗೆ ಭಾವಿಸಬೇಕು. ಹಾಗೆ ಜೀವನದ ಪ್ರತಿ ಕ್ಷಣವು ತೃಪ್ತಿ ಇರಬೇಕು. ತುಂಬಿದ ಭಾವ ಇರಬೇಕು. ಅಲ್ಲವೇ?
-ಎಂ.ಪಿ. ಜ್ಞಾನೇಶ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ