ಸಂತೋಷದ ಹುಡುಕಾಟದಲ್ಲಿ…

ಸಂತೋಷದ ಹುಡುಕಾಟದಲ್ಲಿ…

ನಿಜ ಹೇಳಿ ನೀವು ಸಂತೋಷವಾಗಿದ್ದೀರಾ? ಈಗಿನ ಪ್ರಸ್ತುತ ಸನ್ನಿವೇಶದಲ್ಲಿ ಈ ಪ್ರಶ್ನೆ ನಿಮ್ಮನ್ನು ಕೇಳಿದರೆ ನೂರಕ್ಕೆ ನೂರು ಜನ ಇಲ್ಲವೆಂದೇ ಉತ್ತರ ನೀಡಿಯಾರು. ಹಾಗಾದರೆ ಸಂತೋಷದ ವ್ಯಾಖ್ಯಾನ ಏನು? ನಿಮ್ಮಲ್ಲಿ ಲಕ್ಷಾಂತರ ರೂಪಾಯಿ ಹಣವಿದ್ದರೆ ನೀವು ಸುಖಿಗಳೇ? ಹಣ ಇದ್ದು ಆರೋಗ್ಯ ಇಲ್ಲದೇ ಹೋದರೆ? ಸಂತೋಷವಿರುತ್ತಾ? ಸಂತೋಷದಿಂದಿರುವುದು ಒಂದು ರೀತಿಯ ಮನಸ್ಥಿತಿಯಲ್ಲವೇ? ನೀವು ಮನಸ್ಸಿನಲ್ಲಿ ನಾನು ಸಂತೋಷದಿಂದ ಇದ್ದೇನೆ ಎಂದು ಭಾವಿಸಿದರೆ ನೀವು ಸಂತೋಷದಿಂದ ಇರುವಿರಿ. ಇದಕ್ಕೆ ಯಾವುದೇ ಹಣ ಬೇಕಾಗಿಲ್ಲ ಅಲ್ಲವೇ? ಯಾರಿಗೂ ವಂಚನೆ ಮಾಡದೇ, ಬೇರೆಯವರ ಕಷ್ಟ ಸುಖಕ್ಕೆ ಸ್ಪಂದಿಸುವ ವ್ಯಕ್ತಿ ನೀವಾಗಿದ್ದರೆ ಸಂತೋಷವಲ್ಲವೇ? 

ನಿಮಗೊಂದು ಕಥೆ ಹೇಳುವೆ. ಒಂದೂರಿನಲ್ಲಿ ಒಬ್ಬ ರಾಜನಿದ್ದ. ಅವನ ಬಳಿ ಸಾಕಷ್ಟು ಸಂಪತ್ತು ಇದ್ದರೂ ಅವನು ಸಂತೋಷವಾಗಿರಲಿಲ್ಲ. ಅವನಿಗೆ ತನ್ನಲ್ಲಿ, ತನ್ನ ರಾಜಭಾರದಲ್ಲಿ ಏನಾದರೂ ಕೊರತೆ ಕಂಡು ಬರುತ್ತಿತ್ತು. ಮನಸ್ಸಿಗೆ ಸಮಾಧಾನವೇ ಇರುತ್ತಿರಲಿಲ್ಲ. ಒಂದು ದಿನ ಅವನಿಗೆ ಒಂದು ಯೋಚನೆ ಬಂತು. ಕೂಡಲೇ ಅವನು ತನ್ನ ರಾಜಗುರುವನ್ನು ಬರಲು ಹೇಳಿದ. ರಾಜಗುರುಗಳು ಬಂದ ಕೂಡಲೇ ಅವರಲ್ಲಿ ತನ್ನ ಮನದ ದುಗುಡ ಹೇಳಿಕೊಂಡ. ಈ ವಿಷಯ ಕೇಳಿ ರಾಜಗುರುಗಳು ಸ್ವಲ್ಪ ಸಮಯ ಮನಸ್ಸಿನಲ್ಲೇ ಯೋಚನೆ ಮಾಡಿದರು. ರಾಜನಿಗೆ ತನ್ನ ತಪ್ಪನ್ನು ತೋರಿಸಲು ಇದೇ ಸರಿಯಾದ ಸಮಯ ಎಂದು ಅಂದುಕೊಂಡು ಹೇಳಿದರು ‘ಮಹಾರಾಜಾ, ನೀವು ಸದಾ ಕಾಲ ಸಂತೋಷದಿಂದ ಇರಬೇಕಾದರೆ ಒಂದು ಕೆಲಸ ಮಾಡಬೇಕು'

ರಾಜ ತಕ್ಷಣ ಹೇಳಿದ ‘ ಖಂಡಿತವಾಗಿಯೂ ಮಾಡುವೆ ಗುರುಗಳೇ, ತಾವು ಆ ಕೆಲಸ ಯಾವುದೆಂದು ಹೇಳಿ'

ರಾಜಗುರುಗಳು ತುಸು ಯೋಚನೆ ಮಾಡಿ ಹೇಳಿದರು ‘ಮಹಾರಾಜ, ನಮ್ಮ ರಾಜ್ಯದಲ್ಲಿರುವ ಅತ್ಯಂತ ಸಂತೋಷದ ವ್ಯಕ್ತಿಯನ್ನು ಮೊದಲು ಹುಡುಕಬೇಕು. ಅವನು ಧರಿಸಿದ ಅಂಗಿಯನ್ನು ನೀವು ತೊಟ್ಟರೆ ನೀವೂ ಜೀವನ ಪರ್ಯಂತ ಸಂತೋಷದಿಂದ ಇರುವಿರಿ ‘ ಎಂದರು.

ತಕ್ಷಣ ರಾಜ ಸೇನಾಪತಿಯನ್ನು ಕರೆದು ಭಟರನ್ನು ರಾಜ್ಯದ ಮೂಲೆ ಮೂಲೆಗೆ ಹೋಗುವಂತೆ ಅಪ್ಪಣೆ ಮಾಡಿದ ಹಾಗೂ ಅತ್ಯಂತ ಖುಷಿಯಲ್ಲಿರುವ ವ್ಯಕ್ತಿಯನ್ನು ಹುಡುಕಿ ಅವನ ಅಂಗಿಯನ್ನು ತರಲು ಹೇಳಿದ. ರಾಜಾಜ್ಞೆಯಂತೆ ಎಲ್ಲಾ ಭಟರೂ ರಾಜ್ಯಾದ್ಯಂತ ಹುಡುಕಾಡಿದರು. ವಾರಗಟ್ಟಲೆ ಹುಡುಕಾಡಿದರೂ ಅವರ ಕಣ್ಣಿಗೆ ಒಬ್ಬನೇ ಒಬ್ಬ ಸಂತೋಷದಿಂದ ಇರುವ ವ್ಯಕ್ತಿ ಸಿಗಲಿಲ್ಲ. ‘ಯಥಾ ರಾಜ ತಥಾ ಪ್ರಜಾ’ ಅಲ್ಲವೇ ಸಂತೋಷದ ಹುಡುಕಾಟದಲ್ಲಿರುವ ರಾಜನ ಪ್ರಜೆಗಳೂ ಅಸಂತೋಷದಿಂದಲೇ ಇರುತ್ತಾರೆ ಅಲ್ಲವೇ?

ಕಡೆಗೂ ರಾಜಭಟರು ಒಂದು ಪುಟ್ಟ ಗ್ರಾಮದ ಮರದ ಕೆಳಗೆ ಮಲಗಿಕೊಂಡು, ಸಂತೋಷದಿಂದ ಹಾಡು ಹಾಡುವ ವ್ಯಕ್ತಿಯನ್ನು ಕಂಡರು. ಅವನ ಸೊಂಟಕ್ಕೆ ಸುತ್ತಿದ ಒಂದು ಸಣ್ಣ ಬಟ್ಟೆಯ ತುಂಡು ಬಿಟ್ಟು ಅವನ ಮೈಮೇಲೆ ಯಾವುದೇ ಬಟ್ಟೆಯಿರಲಿಲ್ಲ. ತಲೆಯ ಮೇಲೆ ಸೂರು ಇರಲಿಲ್ಲ. ಆದರೆ ಆನಂದವಾಗಿದ್ದ. ಅವನ ಮುಖದಲ್ಲಿ ತೇಜಸ್ಸು ಕಂಡು ಬರುತ್ತಿತ್ತು. ಮೈಮೇಲೆ ಬಟ್ಟೆಯೇ ಇಲ್ಲದ ಅವನ ಅಂಗಿಯನ್ನು ಎಲ್ಲಿಂದ ತರುವುದು? ಎಂಬ ಗೊಂದಲದಲ್ಲಿ ರಾಜಭಟರು  ಅವನನ್ನು ರಾಜನ ಮುಂದೆ ಹಾಜರು ಪಡಿಸಿದರು. ರಾಜ ಕೇಳಿದ ‘ನೀನು ಸಂತೋಷವಾಗಿರುವೆಯಾ?’ 

‘ಹೌದು ಮಹಾಪ್ರಭು' ಎಂದ ಆ ವ್ಯಕ್ತಿ.

‘ಹಾಗಾದರೆ ನಿನ್ನ ಅಂಗಿಯನ್ನು ನನಗೆ ಕೊಡುವಿಯಾ? ‘ ಎಂದು ರಾಜ ಕೇಳಿದ.

‘ನಾನು ಯಾವತ್ತೂ ಅಂಗಿಯನ್ನು ಹಾಕಿಕೊಂಡೇ ಇಲ್ಲ. ಮತ್ತೆ ನಿಮಗೆ ಹೇಗೆ ಕೊಡುವುದು?’' ಎಂದು ಉತ್ತರಿಸಿದ ಆ ವ್ಯಕ್ತಿ. 

ರಾಜನಿಗೆ ಅಚ್ಚರಿಯಾಯಿತು. ಅತ್ಯಂತ ಸಂತೋಷದಿಂದಿರುವ ವ್ಯಕ್ತಿಯ ಬಳಿ ತನ್ನದು ಎಂದು ಹೇಳಿಕೊಳ್ಳಲು ಒಂದು ಬಟ್ಟೆಯ ತುಂಡೂ ಇಲ್ಲ. ಆದರೂ ಅವನು ಸಂತೋಷದಿಂದ ಇದ್ದಾನಲ್ಲ. 

‘ನೀನು ಹೇಗೆ ಸಂತೋಷದಿಂದ ಇರುವೆ? ನಿನ್ನ ಬಳಿ ಏನೇನೂ ಇಲ್ಲವಲ್ಲ' ಎಂದು ರಾಜ ಪ್ರಶ್ನೆ ಮಾಡಿದ.

ಅದಕ್ಕೆ ಆ ವ್ಯಕ್ತಿ ಹೇಳಿದ'ಮಹಾರಾಜ, ಸಂತೋಷದಿಂದ ಇರಲು ಹಣ, ಬಟ್ಟೆ, ಆಸ್ತಿ ಬೇಕೆಂದು ಇಲ್ಲ. ನನ್ನ ಕಥೆ ಕೇಳಿ. ನಾನೊಬ್ಬ ಅನಾಥ. ಅಪ್ಪ ಅಮ್ಮ ಯಾರು ಎಂದು ನನಗೆ ತಿಳಿದಿಲ್ಲ. ಯಾರೋ ಸಾಕಿದರು. ಸಿಕ್ಕಿದ್ದು ತಿಂದುಕೊಂಡು ನಾನು ಬೆಳೆದೆ. ನಾನು ದಿನಾ ಬೆಳಿಗ್ಗೆ ಎದ್ದು ಕಾಡಿಗೆ ತೆರಳಿ ಒಣಗಿದ ಕಟ್ಟಿಗೆಯನ್ನು ಸಂಗ್ರಹಿಸುತ್ತೇವೆ. ಕೆಲವೊಮ್ಮೆ ಒಣಗಿದ ಮರವನ್ನು ಒಡೆದು ಕಟ್ಟಿಗೆ ಮಾಡುತ್ತೇನೆ.  ಅದನ್ನು ಮಾರಿ ಸಿಕ್ಕಿದ ಹಣದಲ್ಲಿ ನನ್ನ ಊರಿನ ಮಂದಿರದ ಎದುರು ಕುಳಿತಿರುವ ಅನಾಥರು, ರೋಗಿಗಳು ಮುಂತಾದವರಿಗೆ ಆಹಾರ ನೀಡುತ್ತೇನೆ. ಅವರು ಆಹಾರ ಸೇವಿಸಿ ತೃಪ್ತಿಯಿಂದ ನನಗೆ ಆಶೀರ್ವಾದ ಮಾಡುತ್ತಾರೆ. ಸ್ವಲ್ಪ ಹಣದಿಂದ  ಪ್ರಾಣಿಗಳಿಗೆ ಆಹಾರ ಹಾಗೂ ಪಕ್ಷಿಗಳಿಗೆ ಧಾನ್ಯಗಳನ್ನು ಖರೀದಿಸುತ್ತೇನೆ. ಕೊನೆಗೆ ಉಳಿದ ಹಣದಿಂದ ನನಗೆ ಬೇಕಾದ ಆಹಾರವನ್ನು ಹೊಂದಿಸಿಕೊಳ್ಳುತ್ತೇನೆ. ಇದರಿಂದ ನನಗೆ ನೆಮ್ಮದಿ ಸಿಗುತ್ತದೆ. ಕೆಲಸ ಮಾಡುವುದರಿಂದ ವ್ಯಾಯಾಮ ಸಿಗುತ್ತದೆ. ಹೀಗಾಗಿ ಆರೋಗ್ಯ ಮತ್ತು ಸಂತೋಷ ಎರಡೂ ನನ್ನ ಹತ್ತಿರ ಇದೆ. 

ನನ್ನ ಬಳಿ ಯಾವ ಹಣ, ಆಸ್ತಿ ಇಲ್ಲ ಆದುದರಿಂದ ನನಗೆ ಯಾವುದನ್ನೂ ಕಳೆದುಕೊಳ್ಳುವೆ ಎಂಬ ಭಯವಿಲ್ಲ. ಏನೂ ಇಲ್ಲದವನಿಗೆ ಇನ್ನು ಕಳೆದುಕೊಳ್ಳಲೂ ಏನೂ ಇರುವುದಿಲ್ಲ ಹಾಗಾಗಿ ಕಳ್ಳಕಾಕರು, ದರೋಡೆಕೋರರ ಭಯವಿಲ್ಲ. ನನ್ನದೆಂಬ ಮನೆಯಿಲ್ಲ. ಯಾವ ಮರದ ಕೆಳಗೋ, ಮಂದಿರದ ಎದುರು ಮಲಗಿದಾಗ ಸುಖವಾದ ನಿದ್ರೆ ಬರುತ್ತದೆ. ಯಾರಿಗೂ ಅನ್ಯಾಯ ಮಾಡಿಲ್ಲ ಆದುದರಿಂದ ಯಾವುದೇ ಪಾಪ ಪ್ರಜ್ಞೆ ಕಾಡುವುದಿಲ್ಲ. ಹೀಗಾಗಿ ನಾನು ಸುಖಿ.” ಎಂದ.

ಈ ಮಾತುಗಳನ್ನು ಕೇಳಿ ರಾಜನ ಕಣ್ಣು ತೆರೆಯಿತು. ಸಂತೋಷ ಇರುವುದು ನಮ್ಮ ಸಂಪಾದನೆ, ಆಸ್ತಿಗಳಲ್ಲಿ ಅಲ್ಲ. ಬೇರೆಯವರ ಸಂತೋಷ, ನೆಮ್ಮದಿಯಲ್ಲಿ. ನನ್ನ ಪ್ರಜೆಗಳು ಸಂತೋಷದಿಂದ ಇರುವಂತೆ ನಾನು ರಾಜ್ಯಭಾರ ಮಾಡಿದರೆ ಅವರ ಜೊತೆ ನಾನೂ ಸಂತೋಷವಾಗಿರುವೆ. ಆ ವ್ಯಕ್ತಿಗೆ ಧನ್ಯವಾದ ಹೇಳಿದ ರಾಜ. ಅಂದಿನಿಂದಲೇ ತನ್ನ ರಾಜ್ಯಭಾರದ ಶೈಲಿಯನ್ನು ಬದಲಿಸಿದ. ಅವನ ರಾಜ್ಯ ಸುಭಿಕ್ಷವಾಯಿತು. ಜನರೂ ಸುಖದಿಂದ ಬದುಕಲು ಪ್ರಾರಂಭಿಸಿದರು. ಅದನ್ನು ಕಂಡ ರಾಜನೂ ಸಂತೋಷದಿಂದ ಇರಲು ಪ್ರಾರಂಭಿಸಿದ. ಬೇರೆಯವರ ಸಂತೋಷದಲ್ಲಿ ತನ್ನ ಸಂತೋಷವನ್ನು ಕಂಡ ರಾಜ.

ಮೇಲಿನದ್ದು ಕೇವಲ ಒಂದು ಕಥೆ. ಅದರೆ ಇಂದು ನಮ್ಮೆಲ್ಲರಿಗೂ ಇದೇ ಸಂತೋಷದ ಅಗತ್ಯವಿದೆ. ಕೊರೋನಾದ ಕಷ್ಟ ಕಾಲದಲ್ಲಿ ನಮ್ಮನ್ನು ಆಳುವ ಸರಕಾರಗಳಿಗೆ ಸಾಮಾನ್ಯ ಜನರ ಕಾಳಜಿ ಕಮ್ಮಿಯಾಗಿದೆ. ವಿರೋಧಕ್ಕಾಗಿಯೇ ವಿರೋಧ ಮಾಡುವ ಪಕ್ಷಗಳು. ರಾಜಕಾರಣಿಗಳನ್ನು ನಂಬುವ ಕಾಲ ನಿಧಾನವಾಗಿ ಹೊರಟುಹೋಗುತ್ತಿದೆ ಎಂದು ಅನಿಸುತ್ತಿದೆ. ಆದರೆ ಸಾಮಾನ್ಯ ಜನರಾದ ನಾವು ನಮ್ಮ ಸುತ್ತಮುತ್ತಲಿನವರ ಬಗ್ಗೆ ಗಮನ ನೀಡಿ, ಅವರ ಸುಖ ದುಃಖಗಳಲ್ಲಿ ಭಾಗಿಯಾಗುವ ಅವಶ್ಯಕತೆ ಮೊದಲಿಗಿಂತ ಹೆಚ್ಚಿದೆ. ಕೊರೋನಾ ಕಾರಣದಿಂದ ಬಹಳಷ್ಟು ಮಂದಿ ತಮ್ಮ ಕೆಲಸ ಕಳೆದುಕೊಂಡು ಮನೆಯಲ್ಲಿದ್ದಾರೆ. ಅವರಿಗೆ ಆಹಾರ ಅಥವಾ ದಿನಸಿ ವಸ್ತುಗಳ ಅಗತ್ಯ ಇದ್ದರೆ ಸಾಧ್ಯವಾದಷ್ಟು ಸಹಾಯ ಮಾಡಿ. ಕೆಟ್ಟ ಸಮಯದ ಕಾರ್ಮೋಡ ಸರಿಯಲಿ. ಸಂತೋಷದ ದಿನಗಳು ಮತ್ತೆ ಮರಳಿ ಬರಲಿ....

ಚಿತ್ರ ಕೃಪೆ: ಅಂತರ್ಜಾಲ ತಾಣ