ಸಂತ ಫ್ರಾನ್ಸಿಸ್

ಕ್ರಿಶ್ಚಿಯನ್ ಧರ್ಮದಲ್ಲಿ ಬರುವ ಒಬ್ಬ ಸಂತ ಪ್ರಾನ್ಸಿಸ್. ಈತ ಆಗಿನ ಕಾಲದ ಶ್ರೇಷ್ಠ ಸಂತನಾಗಿದ್ದನು. ಆತನ ಜೀವನದ ಒಂದು ಘಟನೆ ಇದು.
ಒಮ್ಮೆ ಒಂದು ಕಾಡಿನಲ್ಲಿ ಹೋಗುತ್ತಿರುತ್ತಾನೆ, ಆತನ ಜೊತೆ ಯಾರೂ ಇರುವುದಿಲ್ಲ. ಆ ಕಾಡಿನಲ್ಲಿ ದರೋಡೆಕೋರರು ಇದ್ದರು. ಯಾರೇ ಹೋದರು ಅವರನ್ನು ದರೋಡೆ ಮಾಡಿ ಹಲ್ಲೆ ಮಾಡುತ್ತಿದ್ದರು. ಆಗ ಆ ಕಾಡಿನ ಸಮೀಪದಲ್ಲಿ ಒಂದು ಊರಿತ್ತು. ಆ ಊರಿನ ಜನ ನೋಡುತ್ತಿದ್ದರು. ಸಂತ ಫ್ರಾನ್ಸಿಸ್ ಆ ಕಾಡಿನ ಕಡೆ ಹೊರಟಿದ್ದನು. ಆಗ ಊರಿನ ಜನರು ಸಂತ ಪ್ರಾನ್ಸಿಸ್ ನನ್ನು ಕುರಿತು ಹೇಳಿದರು. ತಮಗೆ ಈ ಅರಣ್ಯದ ವಿಷಯ ಗೊತ್ತಿಲ್ಲ. ಈ ಅರಣ್ಯದಲ್ಲಿ ದರೋಡೆಕೋರರು ಇದ್ದಾರೆ. ಯಾರೇ ಹೋದರೂ, ಅವರನ್ನು ದೋಚಿ, ಅವರಿಗೆ ಹಲ್ಲೆ ಮಾಡುತ್ತಾರೆ. ಹಾಗಾಗಿ ತಾವು ಈ ಕಾಡಿನ ದಾರಿಯಲ್ಲಿ ಹೋಗುವುದು ಸರಿಯಲ್ಲ ಅಂದರು. ಆಗ ಸಂತ ಫ್ರಾನ್ಸಿಸ್ ಹೇಳಿದ. ತಾವು ಈ ವಿಚಾರ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು. ಆ ದರೋಡೆಕೋರರು ನನ್ನನ್ನು ದೋಚಬೇಕಾದರೆ ಅವರಿಗೆ ಬೇಕಾದ ವಸ್ತು ನನ್ನಲ್ಲಿರಬೇಕು. ಇಲ್ಲವೇ ಅವರಿಗೆ ಹಲ್ಲೆ ಮಾಡುವಂತೆ ಪ್ರಚೋದಿಸುವ ವಸ್ತು ನನ್ನಲ್ಲಿ ಇರಬೇಕು. ಈ ಎರಡು ವಸ್ತು ನನ್ನಲ್ಲಿ ಇಲ್ಲವಲ್ಲ. ಹಾಗಾಗಿ ನನಗೇನು ಆಗುವುದಿಲ್ಲ. ನೀವು ಚಿಂತಿಸಬೇಡಿ ಎಂದು ಹೇಳಿ ಹೊರಟನು. ಆಗ ಊರಿನ ಜನ ಹೇಳಿದರು, ಈ ಸಂತನಿಗೆ ತಲೆಕೆಟ್ಟಿದೆ. ನಮ್ಮ ಮಾತು ಕೇಳುವುದಿಲ್ಲ. ಹೋಗಲಿ ಬಿಡಿ, ಅವರು ಅನುಭವಿಸಿದಾಗ ಗೊತ್ತಾಗುತ್ತದೆ ಎಂದರು.
ಸಂತ ಆ ಕಾಡಿನ ದಾರಿಯಲ್ಲಿ ನಡೆಯುತ್ತಿದ್ದನು. ಆಗ ದರೋಡೆಕೋರರು ಎದುರಾದರು. ಅವರಲ್ಲಿ ಒಬ್ಬ ಪ್ರಶ್ನಿಸಿದ, ಏ ಮನುಷ್ಯನೇ, ಏನಿದೆ ನಿನ್ನಲ್ಲಿ ಅಂದನು. ಆಗ ಸಂತ ಫ್ರಾನ್ಸಿಸ್ ಹೇಳಿದ, "ನನ್ನಲ್ಲಿ ಅಮೂಲ್ಯ ಸಂಪತ್ತಿದೆ" ಅಂದನು. ಆಗ ದರೋಡೆಕೋರರ ಮುಖಂಡ ಹೇಳಿದ, "ಎಲ್ಲಿದೆ? ತೋರಿಸು" ಎಂದನು. ಆಗ ಸಂತ ಹೇಳಿದ. "ಅದು ಒಳಗಿದೆ. ಅದನ್ನು ತೋರಿಸುವುದಕ್ಕೆ ಆಗುವುದಿಲ್ಲ" ಅಂದನು. ಆಗ ದರೋಡೆಕೋರರ ಮುಖಂಡ ಹೇಳಿದ, "ಈತನಲ್ಲಿ ಏನೋ ಇದೆ ಹುಡುಕಾಡಿ" ಅಂದನು. ಆಗ ಸಂತ ಫ್ರಾನ್ಸಿಸ್ ಹೇಳಿದ, "ನನ್ನಲ್ಲಿ ಪ್ರೀತಿ ಅನ್ನುವ ಸಂಪತ್ತು, ನನ್ನ ಹೃದಯದ ತುಂಬಾ ತುಂಬಿದೆ. ಅದನ್ನು ನೀವು ನೋಡುವುದಕ್ಕೆ ಆಗುವುದಿಲ್ಲ. ಹಾಗಾಗಿ ನನ್ನ ಕಣ್ಣು, ಮುಖ, ನೋಡಿ ಗೊತ್ತಾಗುತ್ತೆ. ನಾನು ನಿಮ್ಮನ್ನು ಎಷ್ಟು ಪ್ರೀತಿಸುತ್ತಾ ಇದ್ದೇನೆ ಅನ್ನುವುದು ತಿಳಿಯುತ್ತದೆ" ಅಂದನು. ಎಲ್ಲರೂ ಸಂತನ ಮುಖ ನೋಡಿದರು. ಹೊಳೆಯುವ ಕಣ್ಣು. ಪ್ರಶಾಂತ ಮುಖ. ನಗುಮುಖ. ಆ ಮುಖ ನೋಡುತ್ತಲೇ ದರಡೆಕೋರರ ಮನಸ್ಸಿನಲ್ಲಿ ತುಂಬಿದ್ದ ದರೋಡೆತನ ಕರಗಿ ಹೋಗಿತ್ತು. ಸಂತನ ಕಾಲಿಗೆ ಬಿದ್ದು ಸಂತನ ಶಿಷ್ಯರಾದರು.
ಎಲ್ಲಿ ಆಸೆರಹಿತ, ಉದ್ದೇಶ ರಹಿತ, ಪ್ರೀತಿ ಇರುತ್ತದೆ ಅದಕ್ಕೆ ರಸಭಾವ, ಪ್ರೇಮ ಎನ್ನುವರು. ಆ ಪ್ರೇಮ ತುಂಬಿದಾಗ, ಜಗತ್ತಿನ ಎಲ್ಲೆಡೆ ಸೌಂದರ್ಯ, ಮಾಧುರ್ಯ ಕಾಣುತ್ತದೆ ವಿನಃ, ಕುರೂಪವಲ್ಲ. ದ್ವೇಷ, ಮತ್ಸರ, ಕೋಪ ತುಂಬಿದ ಮನಸ್ಸಿಗೆ ಕಾಣುವುದು ಕುರೂಪವೇ, ಕೊರತೆಯ ವಿನಃ, ಬೇರೆ ಕಾಣುವುದಿಲ್ಲ. ಶಾಂತಿ, ಸಮಾಧಾನ, ಪ್ರೇಮ ಇರುವಲ್ಲಿ ದೇವರು ಇರುತ್ತಾನೆ. ದೇವರು ಹೇಗೆ ಕಾಣುತ್ತಾನೆ ಎಂದರೆ, ಸೌಂದರ್ಯ ರೂಪದಲ್ಲಿ, ಮಾಧುರ್ಯ ರೂಪದಲ್ಲಿ, ಶಾಂತಿ ಸಮಾಧಾನ ರೂಪದಲ್ಲಿ. ಅದನ್ನು ಕಾಣಬೇಕಾದರೆ ಆಸೆರಹಿತ ಪ್ರೇಮ ಇರಬೇಕು. ಆಸೆರಹಿತ ಪ್ರೇಮವೇ ದೇವರು ಅಲ್ಲವೇ?
-ಎಂ.ಪಿ. ಜ್ಞಾನೇಶ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ