ಸಂತ ಬೈಜೀದ್

ಸಂತ ಬೈಜೀದ್

ಇಂದು ಸಂತ ಬೈಜೀದ್ ನ ಬಗ್ಗೆ ತಿಳಿದುಕೊಳ್ಳೋಣ. ಇದು ಒಂದು ನಡೆದ ಘಟನೆ. ಈ ಕಥೆಯನ್ನು ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಒಂದು ಪ್ರವಚನದಲ್ಲಿ ಹೇಳಿದ್ದರು. 

ಬೈಜೀದ್ ಬಾಲಕನಾಗಿದ್ದಾಗ ತಂದೆ ತೀರಿ ಹೋಗಿದ್ದನು. ತಾಯಿ ಇದ್ದಳು. ಈತ ಒಬ್ಬನೇ ಮಗ. ತಾಯಿ ಆತನನ್ನು ತುಂಬಾ ಪ್ರೀತಿಸುತ್ತಿದ್ದಳು. ಆಕೆಗೆ ಬೇರೆ ಯಾರೂ ಇರಲಿಲ್ಲ. ಮಗನಿಗೆ ಸುಮಾರು 20 ವರ್ಷ, ಸದೃಢ ದೇಹ, ಬುದ್ಧಿವಂತ. ಆತನನ್ನು ನೋಡಿ ತಾಯಿ ಆನಂದ ಪಡುತ್ತಿದ್ದಳು. ಆತನಿಗೆ ಒಂದು ಇಚ್ಛೆ ಆಯಿತು. ಆ ಇಚ್ಛೆ ಏನೆಂದರೆ ದೇವನನ್ನು ಕಾಣಬೇಕು ಅಂತ. ಆತ ತಾಯಿಯ ಬಳಿ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದ. ತಾಯಿಗೆ ದಿಕ್ಕೆ ತೋರದಂತಾಯಿತು. ತಾಯಿಗೆ ಆಗ 40 ವರ್ಷ ತನ್ನ ಕಡೆ ಕಾಲದಲ್ಲಿ ನನ್ನನ್ನು ರಕ್ಷಣೆ ಮಾಡಬೇಕಾದ ಮಗ ದೇವರ ಹುಡುಕಿಕೊಂಡು ಹೋಗುತ್ತಾನಲ್ಲ ಅಂತ. ಆಕೆಯ ಮನಸ್ಸು ಹೇಳಿತು ನಾನು ಸ್ವಾರ್ಥಿಯಾಗುವುದು ಬೇಡ. ಏನೇ ಆಗಲಿ ಪ್ರೀತಿಯ ಮಗನಲ್ಲವೇ. ಆತನ ಇಚ್ಛೆ ತಿರಸ್ಕರಿಸಬಾರದು ಅಂತ ಆಕೆ ಇನ್ನೊಂದು ಮನಸ್ಸು ಹೇಳಿತು. ಸಾವಧಾನವಾಗಿ ಸುಧಾರಿಸಿಕೊಂಡು ಒಪ್ಪಿಗೆ ನೀಡಿದಳು. ಆದರೆ ಒಂದು ಷರತ್ತು ಹಾಕಿದಳು. ನೋಡು ಮಗನೇ, ನೀನು ದೇವರ ಹುಡುಕೀ ದರ್ಶನ ಪಡೆ. ದರ್ಶನ ಪಡೆದ ಮೇಲೆ ನೀನು ನನಗೆ ನಿನ್ನ ಮುಖ ತೋರಿಸಬೇಕು. ನಾನಂತೂ ದೇವರ ದರ್ಶನ ಪಡೆಯಲು ಆಗುವುದಿಲ್ಲ. ದೇವರ ದರ್ಶನ ಪಡೆದ ನಿನ್ನ ಮುಖ ನೋಡಿದರೆ ನಾನು ದೇವರನ್ನೇ ಕಂಡಂತೆ ಆಗುತ್ತದೆ. ನನ್ನ ಜೀವನ ಸಾರ್ಥಕ ಆಗುತ್ತದೆ ಅಷ್ಟು ಮಾಡಪ್ಪ ಎಂದಳು. ಅದಕ್ಕೆ ಬೈಜೀದ್ ಒಪ್ಪಿದ. 

ಮನೆಯಿಂದ ದೇವರ ದರ್ಶನ ಮಾಡಲು ಹೊರಟನು. ಊರೂರು, ಬೆಟ್ಟ, ಗಿರಿ, ಶಿಖರ, ನದಿ, ಸಾಗರ, ಕಾಡು ಎಲ್ಲಾ ಕಡೆ ಹುಡುಕಾಡಿದ. ಹೀಗೆ ಹುಡುಕಾಟ ಮಾಡುತ್ತಾ ಸುಮಾರು 20 ವರ್ಷಗಳೆ ಕಳೆದು ಹೋದವು. ದೇವರ ದರ್ಶನವಾಗಲಿಲ್ಲ. ಒಂದು ದಿನ ತುಂಬಾ ಬೇಸರವಾಗಿತ್ತು. ಎಲ್ಲೆಲ್ಲಿ ಹುಡುಕಿದರೂ ದೇವರು ಕಾಣಲಿಲ್ಲವಲ್ಲ ಅಂತ. ಒಂದು ದಿನ ಸಂಜೆ ಕತ್ತಲಾಗಿತ್ತು. ಒಂದು ಬೆಟ್ಟದ ಮೇಲೆ ಮರದ ಕೆಳಗೆ ಕುಳಿತಿದ್ದನು. ಆಗ ಆತನಿಗೆ ನಿದ್ರೆ ಮಂಪರು ಬಂದಿತ್ತು. ನಿದ್ರೆಯಲ್ಲಿ ಒಂದು ಧ್ವನಿ ಕೇಳಿಸಿತು. ನೀನು ದೇವರನ್ನ ಅಲ್ಲಿ ಇಲ್ಲಿ ಏಕೆ ಹುಡುಕುತ್ತೀಯಾ?. ನಾನು ನಿನ್ನ ಮನೆಯಲ್ಲೇ ಇದ್ದೇನೆ. ನೀನು ಅಲ್ಲಿ ಬಿಟ್ಟು, ಎಲ್ಲೆಲ್ಲೋ ಹುಡುಕಿದರೂ ನಾನು ಸಿಗುವುದಿಲ್ಲ ಅಂದಿತು. ಆ ಶಬ್ದ ಮನಸ್ಸು ಆತನ ಮನ ಹೊಕ್ಕಿತು. 20 ವರ್ಷ ದೇವರ ದರ್ಶನಕ್ಕಾಗಿ ತನ್ಮಯನಾಗಿ ಹುಡುಕಾಡಿದ್ದನು. ನಿದ್ರೆಯಿಂದ ಎದ್ದ. ತೀರ್ಮಾನಿಸಿದ. ಇನ್ನು ಹುಡುಕುವುದು ಬೇಡ ಎಂದು ಯೋಚಿಸುತ್ತಾ ಕುಳಿತಿರುವಾಗ ತಾಯಿ ನೆನಪಾಯಿತು. ನಾನು ಸುಮಾರು 20 ವರ್ಷವಾಯಿತು ತಾಯಿ ಬಿಟ್ಟು ಬಂದು. ಈಗ ಆಕೆ ಹೇಗಿದ್ದಾಳೋ?. ಜೀವನೋಪಾಯಕ್ಕೆ ಏನು ಮಾಡುತ್ತಾ ಇದ್ದಾಳೋ?. ಅನ್ನುವ ಚಿಂತೆ ಮೂಡಿತು. ಇನ್ನು ದೇವರಂತು ಸಿಗಲಿಲ್ಲ , ಹೋಗಿ ತಾಯಿಯನ್ನಾದರೂ ನೋಡಿ, ಆಕೆಯ ಜೀವನಕ್ಕೆ ಸಹಾಯ ಮಾಡೋಣ ಎಂದು ಚಿಂತಿಸಿ, ಊರಿಗೆ ಹೊರಟನು. 

ಸುಮಾರು ದಿನಗಳ ಕಳೆದವು. ಒಂದು ದಿನ ರಾತ್ರಿ 10:00 ಸಮಯ ಊರಿಗೆ ಬಂದನು. ಆಗಿನ ಕಾಲದಲ್ಲಿ ಈಗಿನಂತೆ ವಿದ್ಯುತ್ ಇರಲಿಲ್ಲ. ಸೀಮೆಎಣ್ಣೆ ದೀಪ ಇತ್ತು. ಎಲ್ಲರೂ ಎಂಟು ಗಂಟೆಗೆ ಊಟ ಮಾಡಿ ಮಲಗುತ್ತಿದ್ದ ಕಾಲ. ಎಲ್ಲರೂ ಮಲಗಿದ್ದಾರೆ, ತಾಯಿಯು ಮಲಗಿರುತ್ತಾಳೆ ಎಂದು ಚಿಂತಿಸುತ್ತಾ ಮನೆ ಸಮೀಪಕ್ಕೆ ಬಂದನು. ದೀಪ ಉರಿಯುತ್ತಿತ್ತು. ದೀಪ ಉರಿಯುತ್ತಿದೆಯಲ್ಲ ಒಳಗೆ ಏನು ನಡೆಯುತ್ತಿದೆ?. ಎಂದು ಬಾಗಿಲ ಸಂಧಿಯಿಂದ ಇಣುಕಿ ಹಾಕಿ ನೋಡಿದ. ತಾಯಿ ದೀಪದ ಮುಂದೆ ಕುಳಿತು, ದೇವರನ್ನು ಪ್ರಾರ್ಥಿಸುತ್ತಿದ್ದಳು. ಏನೆಂದರೆ ಪರಮಾತ್ಮ , ನನ್ನ ಮಗ ನಿನ್ನ ದರ್ಶನಕ್ಕಾಗಿ ಹೋಗಿದ್ದಾನೆ, 20 ವರ್ಷ ಕಳೆದಿದೆ, ದೇವರೇ ಆದಷ್ಟು ಬೇಗ ನನ್ನ ಮಗನಿಗೆ ನಿನ್ನ ದರ್ಶನ ನೀಡು. ಭಗವಂತ ನನ್ನ ಮಗನಿಗೆ ದರ್ಶನ ನೀಡು. ಎಂದು ಹೇಳಿಕೊಳ್ಳುತ್ತಾ ಇದ್ದಳು. ಈ ಧ್ವನಿ ಮಗನ ಕಿವಿಗೆ ಬಿದ್ದಿತು. ನಾನು 20 ವರ್ಷ ತಾಯಿ ನೆನೆದಿಲ್ಲ. ಆದರೆ ತಾಯಿ 20 ವರ್ಷ ನನಗೆ ಒಳ್ಳೆಯದಾಗಲಿ ಅಂತ ಪ್ರಾರ್ಥನೆ ಮಾಡುತ್ತಾ ಇದ್ದಾಳಲ್ಲ , ಎಂತಹ ಅದ್ಭುತ ಹೃದಯ!. ಕಣ್ಣಿನಲ್ಲಿ ನೀರು ಬಂತು. ತಾಯಿ ಮನಸ್ಸಿನಲ್ಲಿ ತಾನು ಅನ್ನೋದೆ ಇರಲಿಲ್ಲ. ಬರಿ ಮಗನೇ ತುಂಬಿದ್ದ. ಬಾಗಿಲು ಗುದ್ದಿದ. ತಾಯಿಗೆ ತನ್ನ ಮಗನೇ ಬಾಗಿಲು ತಟ್ಟಿತಿದ್ದಾನೆ ಎಂದು ಗೊತ್ತಾಯಿತು. ಆಕೆ ಮನಸ್ಸು ಸರಿಯಾಗಿ ಗುರುತಿಸಿತ್ತು. ವಯಸ್ಸಾಗಿತ್ತು. ಎದ್ದು ಸರ ಸರನೆ ಓಡಿ ಬಂದು, ಬಾಗಿಲು ತೆರೆದಳು. ಹೊರಗಡೆ ನಿಂತಿದ್ದ ಮಗನನ್ನು ನೋಡಿ ಆಕೆಯ ಆನಂದಕ್ಕೆ ಪಾರವೇ ಇಲ್ಲ.

ಮಗನನ್ನು ನೋಡಿದವಳೇ, ಕೇಳಿದಳು, "ಏನಪ್ಪಾ ದೇವರ ದರ್ಶನವಾಯಿತೆ?." ಎಂದಳು. ಹೌದು ಎಂದನು ಮಗ. ಯಾವಾಗ ? ಎಂದು ತಾಯಿ ಕೇಳಿದಳು. ಆಗ ಮಗ ಹೇಳಿದ. ಈಗ, ಅತ್ಯಂತ ಪವಿತ್ರವಾದ ಹೃದಯದಲ್ಲಿ, ಎಂದು ಹೇಳಿದ. ಯಾರ ಮನಸ್ಸು ಪ್ರೀತಿಯಿಂದ ತುಂಬಿರುತ್ತೋ, ಅಲ್ಲೇ ದೇವರು ವಾಸ ಮಾಡೋದು. ತಿಳಿಯದೆ ಹೊರಗೆ ಹೋದೆ ಎಂದನು. ಆ ತಾಯಿ ಪ್ರೀತಿಯ ಆನಂದದಲ್ಲಿ ದೇವರನ್ನು ಕಂಡಿದ್ದ. ತಾಯಿಯ ಪ್ರೀತಿ ನೋಡುತ್ತಲೇ ಆತನ ಮನಸ್ಸು ಪ್ರೀತಿಯಿಂದ ತುಂಬಿ ಹೋಗಿತ್ತು. ಮಗನ ಪ್ರೀತಿಯ ಹೃದಯದಲ್ಲಿ ತಾಯಿ ದೇವರನ್ನು ಕಂಡಿದ್ದಳು. ಮುಂದೆ ಸಂತನಾದ. 

ತಾನು ಹೋದಲ್ಲೆಲ್ಲ ದೇವರು ಪ್ರೀತಿಯ ಹೃದಯದಲ್ಲಿ ವಾಸವಾಗಿದ್ದಾನೆ. ಆತನನ್ನು ಕಾಣಬೇಕಾದರೆ ಪ್ರೀತಿ ತುಂಬಿ ಕೊಳ್ಳಿ. ನಿಮ್ಮ ಸುತ್ತಮುತ್ತ ಇರುವ ಪ್ರಾಣಿ, ಪಕ್ಷಿ, ಗಿಡ, ಮರ, ನಿಸರ್ಗ, ಜನರನ್ನು ಮನ ತುಂಬಾ ಪ್ರೀತಿಸಿ. ಆ ಪ್ರೀತಿಯಲ್ಲಿ ದೇವರು, ಆನಂದ ರೂಪದಲ್ಲಿ ವ್ಯಕ್ತವಾಗುತ್ತಾನೆ ಎಂದು ಹೇಳುತ್ತಿದ್ದನು. ದೇವರು ಇರುವುದು ಪ್ರೀತಿಯ ಹೃದಯದಲ್ಲಿ ಅಲ್ಲವೇ?

-ಎಂ.ಪಿ. ಜ್ಞಾನೇಶ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ