ಸಂತ ರಾಯಪ್ಪರ ಗುರುಮಠ

ಸಂತ ರಾಯಪ್ಪರ ಗುರುಮಠ

ಬರಹ

ಇಂಡಿಯಾದ ಪೂರ್ವ ಕಡಲತೀರವನ್ನು ಫ್ರೆಂಚರು ಕೊರೊಮ್ಯಾಂಡೆಲ್ ತೀರ ಎನ್ನುತ್ತಿದ್ದರು. ಈ ಕೊರೊಮ್ಯಾಂಡೆಲ್ ತೀರ ಪ್ರದೇಶದ ಪಾಂಡಿಚೇರಿ ಅವರ ವಸಾಹತು ಆಗಿತ್ತು. ಈ ಕೇಂದ್ರದಿಂದಲೇ ಅವರು ದಕ್ಷಿಣ ಭಾರತದಾದ್ಯಂತ ತಮ್ಮ ಧರ್ಮ ಪ್ರಚಾರದ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದ್ದರು. ಅದನ್ನು ಅವರು ಕರ್ನಾಟಿಕ್ ಮಿಷನ್ (Carnatic Mission) ಎಂಬುದಾಗಿ ಕರೆಯುತ್ತಿದ್ದರು. ಈ ರೀತಿ ಹೊರ ದೇಶಗಳಲ್ಲಿ ಸುವಾರ್ತಾ ಪ್ರಚಾರ ಕೇಂದ್ರಗಳನ್ನು ಸ್ಥಾಪಿಸಿ ಕ್ರೈಸ್ತಧರ್ಮವನ್ನು ಬೇರೂರಿಸಿದಾಗ ಪೋಪ್ ಜಗದ್ಗುರುಗಳು ಜನಸಂಖ್ಯೆಗನುಗುಣವಾಗಿ ಗುರುಪ್ರಧಾನ ಪ್ರೇಷಿತಯಾಜಕ(Vicar Apostolic)ರನ್ನು ಆಯ್ಕೆ ಮಾಡುತ್ತಿದ್ದರು. ೧೭೭೬ರಲ್ಲಿ ಕರ್ನಾಟಕ ಮಿಷನ್ನಿನ ಗುರುಪ್ರಧಾನರಾಗಿ ಮೋನ್ಸಿಙೊರ್ ಬ್ರಿಗೊ (Brigot) ನೇಮಕಗೊಂಡರು. ೧೭೭೮ ಪಾಂಡಿಚೇರಿಯಲ್ಲಿ ಸಂತ ಜೋಸೆಫರ ಗುರುಮಠ (Seminary) ಪ್ರಾರಂಭವಾಯಿತು. ಕರ್ನಾಟಕ ಮಿಷನ್ನಿನ ಕಾರ್ಯವ್ಯಾಪ್ತಿಗಳ ಬಗ್ಗೆ ಸೂಕ್ಷ್ಮ ವಿವಾದಗಳಿದ್ದುದರಿಂದ ಮೋನ್ಸಿಗ್ನೊರ್ (Mon Signor = ನಮ್ಮ ಸ್ವಾಮಿ) ಬ್ರಿಗೊರವರಿಗೆ ಪ್ರೇಷಿತಯಾಜಕತ್ವ ಪಟ್ಟ ನೀಡಿರಲಿಲ್ಲವದರೂ ಆ ಹುದ್ದೆಯ ಅಧಿಕಾರವನ್ನು ಅವರು ಚಲಾಯಿಸಬಹುದಾಗಿತ್ತು. ಹೀಗಾಗಿ ಸಂತ ಜೋಸೆಫರ ಗುರುಮಠ ಅವರ ಅಧೀನಕ್ಕೆ ಒಳಪಟ್ಟಿತು.
೧೭೩೬ರಲ್ಲಿ ಕೊರೊಮ್ಯಾಂಡಲ್ ತೀರವನ್ನು ಪ್ರೇಷಿತ ಯಾಜಕತ್ವ (Vicar Apostolic) ಮಟ್ಟಕ್ಕೇರಿಸಿದರೂ ಗುರುಮಠದ ಸ್ಥಾನಮಾನದಲ್ಲೇನೂ ಬದಲಾವಣೆಯುಂಟಾಗಲಿಲ್ಲ. ೧೮೪೧ರಲ್ಲಿ ಸಮಾವೇಶಗೊಂಡ ಪಾಂಡಿಚೇರಿ ಸಿನೋಡ್(Synod)ನ ಕಲಾಪಗಳಲ್ಲಿ ಈ ಗುರುಮಠದ ಪ್ರಸ್ತಾವದ ಅನೇಕ ಗೊತ್ತುವಳಿಗಳನ್ನು ಸ್ವೀಕರಿಸಲಾಯಿತಾದರೂ ಅವು ಜಾರಿಗೆ ಬರಲಿಲ್ಲ. ಹೀಗಾಗಿ ಸಂತ ಜೋಸೆಫರ ಸೆಮಿನರಿಯು ಇತರ ಧರ್ಮಪ್ರಾಂತ್ಯಗಳಂತೆ ಸ್ಥಳೀಯ ಬಿಷಪರ ಒಡೆತನದಲ್ಲೇ ಮುಂದುವರಿಯಿತು.
೧೯೪೫ರಲ್ಲಿ ಕೊರೊಮ್ಯಾಂಡಲ್ ತೀರದ ಪ್ರೇಷಿತಯಾಜಕಪೀಠವು ಮೂರು ಭಾಗವಾಗಿ ವಿಭಾಗಿಸಲ್ಪಟ್ಟತು. ಪಾಂಡಿಚೇರಿ, ಮೈಸೂರು ಮತ್ತು ಕೊಯಮತ್ತೂರು ಎಂಬುದಾಗಿ ಮೂರು ಭಾಗವೂ ಪ್ರತ್ಯೇಕ ಪ್ರೇಷಿತಯಾಜಕಪೀಠವನ್ನು ಪಡೆದವು. ಮೂರು ಭಾಗಗಳೂ ಕೆಲ ವರ್ಷಗಳ ಕಾಲ ಪ್ರತ್ಯೇಕ ಸೆಮಿನರಿಗಳನ್ನು ನಡೆಸಲು ಪ್ರಯತ್ನಿಸಿದವು.
ಆದರೆ ೨೦ನೇ ಶತಮಾನದ ಪ್ರಾರಂಭದ ವೇಳೆಗೆ ಸಂತ ಜೋಸೆಫರ ಗುರುಮಠವನ್ನು ಮೂರು ಪ್ರಾಂತ್ಯಗಳಿಗೂ ಏಕೀಭವಿಸಿಲಾಯಿತು. ಹಾಗೂ ಮೂರು ಪ್ರಾಂತ್ಯಗಳಿಂದಲೂ ಒಬ್ಬೊಬ್ಬ ಪ್ರತಿನಿಧಿ ಬಂದು ಈ ಗುರುಮಠದ ಆಡಳಿತ ನಡೆಸುತ್ತಿದ್ದರು. ಈ ಮೂರು ಮಂದಿಯೂ ಪ್ಯಾರಿಸ್ ಫಾರಿನ್ ಮಿಷನ್ (MEP)ನವರೇ ಆಗಿರುತ್ತಿದ್ದರು. ಆಗಿನ್ನೂ ಎಂಇಪಿ ಒಂದು ವ್ಯವಸ್ಥಿತ ಧರ್ಮಪ್ರಚಾರಸಂಸ್ಥೆ ಎನಿಸಿರಲಿಲ್ಲ. ಇದರಿಂದ ಇಂಡಿಯಾದಲ್ಲಿದ್ದ ಎಂಇಪಿಯವರು ಬೋಧಕವರ್ಗ ಮತ್ತು ಅವಶ್ಯಕ ಹಣದ ಬರುವಿಕೆಗಾಗಿ ಪ್ಯಾರಿಸ್ಸಿನತ್ತ ಕೈಚಾಚಬೇಕಿತ್ತು. ಆದರೆ ಸೆಮಿನರಿಯ ನೇರ ಆಡಳಿತ ಇವರ ಕೈಯಲ್ಲಿಯೇ ಇತ್ತು. ಹಲವು ವರ್ಷಗಳ ಕಾಲ ಇದು ಹೀಗೇ ನಡೆದಿತ್ತು .
೧೯೧೯ರಲ್ಲಿ ಕ್ರೈಸ್ತ ಧರ್ಮಸಂಹಿತೆ (Canon Law) ರೂಪುಗೊಂಡಿತು. ಪ್ರಪಂಚದಾದ್ಯಂತ ಹಬ್ಬಿರುವ ಕ್ರೈಸ್ತ ಧರ್ಮಸಭೆಗೆ ಏಕಪ್ರಕಾರದ ಆಡಳಿತವ್ಯವಸ್ಥೆ ನೀಡುವಲ್ಲಿ ಈ ಸಂಹಿತೆ ಯಶಸ್ವಿಯಾಯಿತು. ಗುರುಮಠಗಳಿಗೂ ಈ ಕಾಯಿದೆ ಅನ್ವಯವಾಯಿತಾದರೂ ಸಂತ ಜೋಸೆಫರ ಗುರುಮಠ ಅದನ್ನು ಅಂಗೀಕರಿಸಿದ್ದು ೧೯೩೪ದಲ್ಲಿ. ಆಗ ಆ ಗುರುಮಠವನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಯೋಜನೆ ನಡೆದಿತ್ತು. ಎಂಇಪಿ ಮುಖ್ಯಸ್ಥರಾಗಿದ್ದ ಬಿಷಪ್ ಗೆಬ್ರಿಯಾನ್ (Bishop de Guebriant) ರವರು ಗುರುಮಠಕ್ಕೆ ಹೊಸ ಕಾಯಿದೆಗಳನ್ನು ರೂಪಿಸುವ ಅವಶ್ಯಕತೆಯನ್ನು ಮನಗಂಡು ಬೆಂಗಳೂರಿನಲ್ಲಿ ಸಂಬಂಧಪಟ್ಟ ಬಿಷಪರನ್ನೆಲ್ಲಾ ಒಟ್ಟುಗೂಡಿಸಿದರು. ಹೀಗೆ ಬೆಂಗಳೂರಿನಲ್ಲಿ ೧೯೩೪ರ ಜೂನ್ನಲ್ಲಿ "ಸಂತ ರಾಯಪ್ಪರ ಗುರುಮಠ" ಅಸ್ತಿತ್ವಕ್ಕೆ ಬಂದು ಹೊಸ ನಿಯಮಾವಳಿಗಳು ಅಂಗೀಕೃತವಾದವು.
ಆದರೆ ಅದೇ ಸಮಯದಲ್ಲಿ ಪೋಪ್ ಜಗದ್ಗುರುಗಳು "ಈ ಗುರುಮಠವು ಮಿಷನ್ ಸಂಸ್ಥೆಯ ಆಡಳಿತದಿಂದ ತಪ್ಪಿ ಪ್ರಾಂತೀಯ ಗುರುಮಠವಾಗಿ ಪರಿವರ್ತನೆಗೊಂಡು ರೋಮಿನ ನೇರ ಆಡಳಿತಕ್ಕೆ ಒಳಪಡಬೇಕು" ಎಂದು ಅದೇಶ ವಿಧಿಸಿದರು. ಹೊಸದಾಗಿ ರೂಪುಗೊಂಡಿದ್ದ ಗುರುಮಠದ ನಿಯಮಾವಳಿಗಳು ಪ್ರಾಂತೀಯ ಗುರುಮಠದ ನಿಯಮಾವಳಿಗಳಿಗಿಂತ ಭಿನ್ನವಿರಲಿಲ್ಲವಾದರೂ ಠರಾವುಗಳನ್ನು ಆಗಿಂದಾಗ್ಗೆ ರೋಮಿನ ವರಿಷ್ಠರ ಅವಗಾಹನೆಗೆ ತರಬೇಕೆನ್ನುವ ಪೋಪರ ಆಜ್ಞೆ ಇಲ್ಲಿನ ಬಿಷಪರಿಗೆ ಇರಿಸು ಮುರಿಸು ಉಂಟುಮಾಡಿತು.
ಇದನ್ನು ತೀವ್ರವಾಗಿ ವಿರೋಧಿಸಿದ ಬಿಷಪ್ ದೆ ಗೆಬ್ರಿಯಾನ್ ಬೆಂಗಳೂರಿನ ಗುರುಮಠವನ್ನು ಪಾಂಡಿಚೇರಿಯ ಗುರುಮಠದಂತೆಯೇ ಸಾಮಾನ್ಯ ಗುರುಮಠವಾಗಿ ಉಳಿಸಬೇಕೆಂದು ಮನವಿ ಸಲ್ಲಿಸಿದರು. ಆದರೆ ರೋಮಿನ ವರಿಷ್ಠರು ಅದಕ್ಕೆ ಸ್ಪಂದಿಸದೆ ಮೌನವಾಗಿ ಉಳಿದರು. ಗೆಬ್ರಿಯಾನ್ ನಿಧನದ ನಂತರ ಅವರ ಉತ್ತರಾಧಿಕಾರಿ ಫಾದರ್ ರಾಬರ್ಟ್ ೧೯೩೫ರಲ್ಲಿ "ಸಂತ ರಾಯಪ್ಪರ ಗುರುಮಠವನ್ನು ಪ್ರಾಂತೀಯ ಗುರುಮಠವೆಂದು ವೃಥಾ ಭಾವಿಸುವಿರೇಕೆ... " ಎಂದು ಅಭಿಪ್ರಾಯಪಟ್ಟಾಗ ಬಿಷಪರೂ ಇತರರೂ ಅದು ಪ್ರಾಂತೀಯ ಗುರುಮಠವಲ್ಲ ಎಂದು ತಿದ್ದಿಕೊಂಡರು.
ಆದರೆ ೧೯೪೨ರಲ್ಲಿ "ಈ ಗುರುಮಠದ ಕಟ್ಟಡ ಸೇನೆಯ ತುರ್ತು ಅಗತ್ಯಕ್ಯಾಗಿ ಬೇಕಾಗಿದೆಯಂತೆ, ಏನು ಮಾಡಬೇಕು?" ಎಂದು ರೋಮ್ ವರಿಷ್ಠರಿಗೆ ಪತ್ರ ಬರೆದಾಗ ಅವರು ಮಾರುತ್ತರದಲ್ಲಿ ಪ್ರಾಂತೀಯ ಗುರುಮಠ ಎಂಬುದಾಗಿ ಸಂಬೋಧಿಸಿದ್ದರು. ಇದು ತಪ್ಪಿರಬಹುದೇ ಎಂದು ಇಲ್ಲಿಂದ ಮತ್ತೆ ರೋಮಿಗೆ ಪತ್ರ ಬರೆದಾಗ ಅವರು "ಇದು ತಪ್ಪಲ್ಲ, ಇದರಲ್ಲಿ ಸಂದೇಹವೇನೂ ಇಲ್ಲ, ನಮ್ಮ ಪ್ರಜ್ಞೆಯಲ್ಲಿ ಸಂತ ರಾಯಪ್ಪರ ಗುರುಮಠವು ೧೯೩೧ರಿಂದಲೂ ಪ್ರಾಂತೀಯ ಗುರುಮಠ (Regional Seminary) ಎಂದೇ ಪರಿಗಣಿತವಾಗಿದೆ. ಗುರುಮಠದ ಕಾಯಿದೆ ನಿಯಮಗಳನ್ನು ನಮ್ಮ ಅನುಮೋದನೆಗಾಗಿ ಕಳುಹಿಸುತ್ತೀರೆಂದು ಆಗಿನಿಂದಲೂ ನಾವಿಲ್ಲಿ ನಿರೀಕ್ಷಿಸುತ್ತಿದ್ದೇವೆ. ವಿದ್ವಾಂಸರ-ಬೋಧಕರ ಪಟ್ಟಿ, ವಾರ್ಷಿಕವರದಿ ಎಲ್ಲವನ್ನೂ ಕೂಡಲೇ ಕಳುಹಿಸಿ" ಎಂದು ಮರುಪತ್ರ ಬರೆದರು. ಆದರೆ ಈ ಸಂಗತಿಯನ್ನು ಮರೆಮಾಚಿದ ಫ್ರೆಂಚ್ ಪಾದ್ರಿಗಳು ಕನ್ನಡನಾಡಿನ ಒಳಿತಿಗಾಗಿ ಈ ಸೆಮಿನರಿಯನ್ನು ಬಿಟ್ಟಿಕೊಡುವ ಬದಲು ತಮಿಳು ಪಾದ್ರಿಗಳನ್ನು ಕನ್ನಡಿಗರ ವಿರುದ್ಧ ಎತ್ತಿಕಟ್ಟಿದರು. ಏಕೆಂದರೆ ಈ ಫ್ರೆಂಚ್ ಪಾದ್ರಿಗಳ ಅನಾರೋಗ್ಯಕ್ಕೆ ಉತ್ತಮ ಹವಾಗುಣದ ಬೆಂಗಳೂರು ಪ್ರಶಸ್ತವಾಗಿದ್ದರಿಂದ ಅವರಿಗೆ ಈ ಗುರುಮಠವು ಒಳ್ಳೇ ವಿಶ್ರಾಂತಿಗೃಹವಾಗಿತ್ತು. ಆದರೆ ಅನಾರೋಗ್ಯ ಪೀಡಿತರಾಗಿದ್ದ ಕನ್ನಡಿಗ ಬಿಷಪ್ ತೋಮಾಸ್ ಪೋತಕಮರಿಯವರು ಈ ನಿಟ್ಟಿನಲ್ಲಿ ತಮ್ಮ ಹಕ್ಕನ್ನು ಬಲವಾಗಿ ಪ್ರತಿಪಾದಿಸುವಲ್ಲಿ ಸೋತರು.
೧೯೬೨ರಲ್ಲಿ ಸಂತ ರಾಯಪ್ಪರ ಗುರುಮಠವನ್ನು ವಿಶ್ವವಿದ್ಯಾಲಯ ಮಟ್ಟಕ್ಕೆ ಏರಿಸಲಾಯಿತು. ವ್ಯಾಟಿಕನ್ ಸಮಾವೇಶದ ತೀರ್ಮಾನದಂತೆ ಸೆಮಿನರಿಯ ಆಡಳಿತವನ್ನು ಸಂಬಂಧಪಟ್ಟ ಬಿಷಪರಿಗೆ ಬಿಟ್ಟುಕೊಟ್ಟು ಅಂತಿಮ ಅನುಮೋದನೆಯನ್ನು ವ್ಯಾಟಿಕನ್ ವರಿಷ್ಠರಿಂದ ಪಡೆದುಕೊಳ್ಳುವಂತೆ ಆದೇಶವೂ ಬಂದಿತು.
ಆಗ ಸೆಮಿನರಿಯಲ್ಲಿ ತಮ್ಮ ಪ್ರತಿಭೆಯನ್ನು ನಿರೂಪಿಸಿದ್ದ ಕನ್ನಡದ ಮಣ್ಣಿನ ಮಗ ಸ್ವಾಮಿ ಅಂತಪ್ಪ ಅವರನ್ನು ಪೋತಕಮರಿಯವರು ರೋಮಿನ ಗ್ರೆಗರಿಯನ್ ವಿವಿಗೆ ಉನ್ನತ ವ್ಯಾಸಂಗಕ್ಕಾಗಿ ಕಳುಹಿಸಿದ್ದರು. ಆ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದ ಮೊದಲ ಕನ್ನಡಿಗರು ಸ್ವಾಮಿ ಅಂತಪ್ಪ. ತಮಗೆ ನೀಡಿದ್ದ ಒಂದು ವರ್ಷದ ಗಡುವಿನಲ್ಲಿ ಅವರು ಪವಿತ್ರ ಧರ್ಮಶಾಸ್ತ್ರದಲ್ಲಿ ಡಾಕ್ಟರೆಟ್ ಪಡೆದು ಇಂಡಿಯಾಕ್ಕೆ ಹಿಂದಿರುಗಿದರು. ಡಾಕ್ಟರೆಟ್ ಪಡೆದು ಬೆಂಗಳೂರಿಗೆ ಹಿಂದಿರುಗುವ ವೇಳೆಗಾಗಲೇ ಪೋತಕಮರಿಯವರು ತೀರಿಕೊಂಡಿದ್ದರು. ಇನ್ನು ಅಂತಪ್ಪ ಬಂದರೆ ಅವರನ್ನೇ ಬಿಷಪ್ ಪಟ್ಟಕ್ಕೆ ಏರಿಸಬೇಕಾಗುತ್ತದೆ ಎಂಬ ಆತಂಕದಿಂದ ಇಲ್ಲಿದ್ದ ಪಾಂಡಿಚೇರಿ ಮೂಲದ ಪಾದ್ರಿಗಳು ಲೂರ್ದುಸಾಮಿಯೆಂಬ ತಮಿಳರನ್ನು ಬಿಷಪರಾಗಿ ಕೂರಿಸಿದರು.
ತಮಿಳರು ಬಿಷಪರಾದ ಮೇಲೆ ಬೆಂಗಳೂರನ್ನು ತಮಿಳುನಾಡಿನ ಭಾಗ ಎಂಬಂತೆ ರೋಮ್ ವರಿಷ್ಠರಿಗೆ ಬಿಂಬಿಸಲಾಯಿತು. ಧರ್ಮಾಧಿಕಾರಿಗಳ ನಿವಾಸದಲ್ಲಿನ ಹಳೆಯಪಳೆಯ ದಾಖಲೆಗಳಿದ್ದ ಪತ್ರಾಗಾರವನ್ನು ಹೇಳಹೆಸರಿಲ್ಲದಂತೆ ನಾಶಪಡಿಸಲಾಯಿತು. ಬೈಬಲ್ಲಿನ ಕನ್ನಡ ಅನುವಾದದ ಹಸ್ತಪ್ರತಿಗೆ ಬೆಂಕಿ ಹಚ್ಚಲಾಯಿತು. ನಮ್ಮ ಆಸ್ಪತ್ರೆಗಳಲ್ಲಿ ಶಾಲೆಗಳಲ್ಲಿ ಧಾರ್ಮಿಕ ಸಂಸ್ಥೆಗಳೆಲ್ಲದರಲ್ಲಿ ತಮಿಳುನಾಡಿನಿಂದ ಆಮದಾದವರೇ ತುಂಬಿಕೊಂಡರು. ಆಮೇಲೆ ನಡೆದ ಸ್ಥಳೀಯ ಸಂಸ್ಕೃತಿಯ ಉಳಿವಿನ ಚಳವಳಿಗೆಲ್ಲ ಅಂತಪ್ಪರೇ ಕಾರಣಕರ್ತರು ಎಂಬ ಗೂಬೆ ಕೂರಿಸಲಾಯಿತು.
ಲೂರ್ದುಸ್ವಾಮಿಯವರ ನೇತೃತ್ವದಲ್ಲಿ ತಮಿಳುನಾಡಿನ ಹಲವಾರು ಧರ್ಮಪ್ರಾಂತ್ಯಗಳ ಬಿಷಪರನ್ನೊಳಗೊಂಡ ಆಡಳಿತಮಂಡಳಿ ಈ ಸೆಮಿನರಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಇದರಲ್ಲಿ ಕನ್ನಡಿಗರ ಪಾಲು ಅತ್ಯಲ್ಪ. ಕಂದಾಯ, ನೀರು, ವಿದ್ಯುತ್, ದಿನಸಿ ಖರೀದಿ ಇತ್ಯಾದಿಗಳ ಕುರಿತಂತೆ ಕರ್ನಾಟಕ ಸರ್ಕಾರದೊಂದಿಗೆ ವ್ಯವಹರಿಸಲು ಇವರ ಬಳಕೆಯಾಗುತ್ತದೆ. ಆದರೆ ಸಭೆಗಳಲ್ಲಿ ಇವರ ಮಾತಿಗೆ ಏನೇನೂ ಬೆಲೆಯಿಲ್ಲ. ಗುರುಮಠದ ಆಚಾರ್ಯ (Rector) ರಾಗಿ ಕನ್ನಡಿಗರನ್ನೇ ನೇಮಿಸಲಾಗುತ್ತದಾದರೂ ಅವರ ಕೈ ಕಟ್ಟಿರುತ್ತದೆ ಎಂಬುದು ಕಟುಸತ್ಯ.