ಸಂತ ರೈದಾಸರ ಮಹಿಮೆ
ಸಂತ ಗುರು ರೈದಾಸ ಅಥವಾ ರವಿದಾಸರು ಹದಿನೈದನೇ ಶತಮಾನದ ಅಂತ್ಯದಲ್ಲಿ ಉತ್ತರಪ್ರದೇಶ ರಾಜ್ಯದಲ್ಲಿ ಜನಿಸಿದರು. ಇವರ ಮೂಲ ಹೆಸರು ರವಿದಾಸ ಎಂದಾಗಿತ್ತು. ಇವರು ಹುಟ್ಟಿದ್ದು ವಾರಣಾಸಿ (ಪುರಾತನ ಕಾಶೀನಗರ) ಬಳಿಯ ಸಿರಿಗೋವರ್ಧನಪುರ ಎಂಬ ಗ್ರಾಮದಲ್ಲಿ. ಆಗ ಅತ್ಯಂತ ಕೀಳು ಜಾತಿ ಎಂದು ಪರಿಗಣಿಸಲ್ಪಟ್ಟಿದ್ದ ಚಮ್ಮಾರ ಜಾತಿಗೆ ಸೇರಿದ ಇವರು ಅತ್ಯಂತ ಪ್ರತಿಭಾವಂತರು ಹಾಗೂ ಪವಾಡ ಪುರುಷರು. ಇವರು ಉತ್ತಮ ಕವಿಗಳಾಗಿದ್ದರು. ಸಂತ ಕಬೀರರ ಗುರುಗಳಾದ ಗುರು ರಮಾನಂದರು ಇವರ ಗುರುಗಳಾಗಿದ್ದರು. ಮೀರಾಬಾಯಿ ಇವರ ಶಿಷ್ಯೆಯಾಗಿದ್ದರು. ಸಂತ ರೈದಾಸರು ಸಮಾಜದಲ್ಲಿ ಬೇರೂರಿದ್ದ ಜಾತಿ ಎಂಬ ಹೆಮ್ಮಾರಿಯನ್ನು ಹೊಡೆದೋಡಿಸಲು ಬಹಳ ಶ್ರಮಿಸಿದರು.
ರೈದಾಸರ ತಂದೆ ಸಂಟೋಕ್ ದಾಸ್ ಹಾಗೂ ತಾಯಿ ಕಲ್ಸಾ. ಇವರ ಕುಲ ಕಸುಬು ಚಮ್ಮಾರಿಕೆಯಾಗಿದ್ದರೂ ರೈದಾಸರು ತಮ್ಮ ಜೀವನದ ಬಹುಭಾಗವನ್ನು ಗಂಗಾ ನದಿಯ ದಡದಲ್ಲಿ ಆಧ್ಯಾತ್ಮಿಕ ಧ್ಯಾನ ಮಾಡುವುದರಲ್ಲಿ ಹಾಗೂ ಕವನಗಳನ್ನು ರಚಿಸುವುದರಲ್ಲಿ ಕಳೆದರು. ರೈದಾಸರು ತಮ್ಮ ಕುಲ ಕಸುಬಾದ ಚಮ್ಮಾರಿಕೆಯನ್ನೂ ನಡೆಸುತ್ತಿದ್ದರು. ಸೂಫಿ ಸಂತರು ಹಾಗೂ ಸಾಧುಗಳ ಸಂಗ ಇವರಿಗೆ ಬಹಳ ಇಷ್ಟವಾಗುತ್ತಿತ್ತು. ಇವರ ಹಲವಾರು ದೋಹಾಗಳನ್ನು (ಕವಿತೆ) ಸಿಖ್ಖರ ಧರ್ಮಗ್ರಂಥವಾದ ‘ಗುರು ಗ್ರಂಥ ಸಾಹೇಬ್' ನಲ್ಲಿ ಸೇರಿಸಿಕೊಳ್ಳಲಾಗಿದೆ.
ಇವರ ಜೀವನದಲ್ಲಿ ನಡೆದ ಒಂದು ಘಟನೆ ಇಲ್ಲಿದೆ.
ಸಂತ ರೈದಾಸರು ತನ್ನ ಕುಲವೃತ್ತಿಯಾದ ಪಾದರಕ್ಷೆಗಳನ್ನು ಹೊಲಿಯುವ ಕೆಲಸ ಮಾಡುತ್ತಿದ್ದರು. ಒಂದು ದಿನ ಬೆಳಿಗ್ಗೆನೇ ಬಂದು ಕೂತುಕೊಂಡರೂ ಯಾವೊಬ್ಬ ಗ್ರಾಹಕನೂ ಅವನ ಬಳಿ ಬಂದಿರಲಿಲ್ಲ. ಅಪರಾಹ್ನದ ವೇಳೆಗೆ ಒಬ್ಬ ಬ್ರಾಹ್ಮಣ ಆ ದಾರಿಯಲ್ಲಿ ಬಂದು, ಕಿತ್ತುಹೋಗಿದ್ದ ಅವನ ಚಪ್ಪಲಿಗಳ ಜೊತೆಯನ್ನು ಅವನೆದುರಿಗೆ ಇಟ್ಟು, ಅವುಗಳನ್ನು ಹೊಲಿದು ಕೊಡು ಎಂದ.
ರೈದಾಸ ಚಪ್ಪಲಿಗಳನ್ನು ಹೊಲಿಯುತ್ತಾ ಎಂದಿನಂತೆ, ‘ಯಾವೂರು ಸ್ವಾಮೀ ನಿಮ್ಮದು? ಯಾವ ಕೆಲಸದ ಮೇಲೆ ಬಂದಿರುವಿರಿ?’ ಎಂದು ಕೇಳಿದ. ಆ ಬ್ರಾಹ್ಮಣ ಹೆಮ್ಮೆಯಿಂದ ‘ನಮ್ಮದು ಕಾವೇರಿ ತೀರ. ಗಂಗೆಯಲ್ಲಿ ಸ್ನಾನ ಮಾಡಿ ಪವಿತ್ರನಾಗಲು ಬಂದಿರುವೆ’ ಎಂದ.
ಅದಕ್ಕೆ ರೈದಾಸ, ‘ನಿಮ್ಮ ಕಾವೇರಿಯಲ್ಲಿ ನೀರಿಲ್ಲವೇನು ಸ್ವಾಮೀ? ಸ್ನಾನಕ್ಕಾಗಿ ಇಷ್ಟು ದೂರ ಕಷ್ಟಪಟ್ಟು ನಡೆದು ಬರಬೇಕಿತ್ತೇನು?’ ಎಂದು ಸಹಜವಾಗಿಯೇ ಕೇಳಿದರು.
ಆ ಮಾತಿಗೆ ಬ್ರಾಹ್ಮಣ ಆಘಾತಗೊಂಡು, ‘ಅದೇನು? ಸಾಕ್ಷಾತ್ ಗಂಗೆಯ ದಡದಲ್ಲಿರುವ ಕಾಶೀನಗರದಲ್ಲಿ ವಾಸಿಸುತ್ತಾ ಇಂತಹ ಮಾತು ಹೇಳಿದೆ? ನಿನಗೆ ಗಂಗೆಯ ಮಹತ್ವ ಗೊತ್ತಿಲ್ಲದಂತಿದೆಯಲ್ಲಾ? ನೀನು ಯಾವಾಗಲಾದರೂ ಗಂಗೆಯಲ್ಲಿ ಸ್ನಾನ ಮಾಡಿರುವೆಯಾ?’ ಎಂದು ಕೇಳಿದ.
‘ಇಲ್ಲಿಯವರೆಗೂ ಎಂದೂ ಮಾಡಿಲ್ಲ ಸ್ವಾಮೀ’ ಎಂದ ರೈದಾಸ.
ಅದನ್ನು ಕೇಳಿದ ಬ್ರಾಹ್ಮಣ ರೈದಾಸನ ಬಗ್ಗೆ ಬಹಳವೇ ಅನುಕಂಪಗೊಂಡು, ಅವನಿಗೆ ಗಂಗೆಯ ಶ್ರೇಷ್ಠತೆಯ ಬಗ್ಗೆ ವಿವರಿಸಿ ಹೇಳಿ, ಅಷ್ಟು ಹತ್ತಿರದಲ್ಲಿದ್ದು ಕೂಡ ಗಂಗಾಸ್ನಾನ ಮಾಡದೇ ಇರುವುದು ದುರದೃಷ್ಟವೆಂದೂ, ರೈದಾಸನ ಜೀವನ ವ್ಯರ್ಥವೆಂದೂ ಹೇಳಿದ.
ಅದಕ್ಕೆ ರೈದಾಸ ‘ಮನ್ ಹೈ ತೋ ಚಂಗಾ, ಕಠೌತಿ ಮೇ ಗಂಗಾ’ ಎಂದ. (ಮನಸ್ಸು ನಿರ್ಮಲವಾದರೆ ಮರದ ತೊಟ್ಟಿಯಲ್ಲಿಯೂ ಗಂಗೆ ಇದೆ ಎಂಬುದು ಆ ಮಾತಿನ ಅರ್ಥ) ಹೀಗೆ ಹೇಳುತ್ತಾ ರೈದಾಸ ಪಾದರಕ್ಷೆಗಳನ್ನು ಹೊಲಿಯುವ ಕೆಲಸ ಪೂರ್ತಿ ಮಾಡಿ, “ಸ್ವಾಮೀ, ನನಗೊಂದು ಚಿಕ್ಕ ಸಹಾಯ ಮಾಡಿಕೊಡುವಿರಾ?” ಎಂದು ಕೇಳಿದರು.
‘ನನ್ನ ಕೈಲಾದರೆ ಖಂಡಿತಾ ಮಾಡುವೆ’ ಎಂದ ಬ್ರಾಹ್ಮಣ. ‘ನನ್ನ ಜೀವನದಲ್ಲಿ ಮುಕ್ಕಾಲು ಭಾಗ ಇಲ್ಲಿಯೇ ಕಳೆದುಹೋಯಿತು. ನನಗೆ ಗಂಗಾದರ್ಶನ ಮಾಡುವ ಯೋಗವಿದೆಯೋ ಇಲ್ಲವೋ. ನೀವು ಸ್ನಾನ ಮಾಡುವಾಗ ನನ್ನ ಹೆಸರು ಹೇಳಿ ಈ ಅಡಿಕೆ ಚೂರನ್ನು ನನ್ನ ಪರವಾಗಿ ಗಂಗೆಗೆ ಸಮರ್ಪಿಸಿ’ ಎಂದ ರೈದಾಸ ತನ್ನ ಚೀಲದಿಂದ ಒಂದು ಅಡಿಕೆ ಚೂರು ತೆಗೆದು ಬ್ರಾಹ್ಮಣನ ಕೈಯಲ್ಲಿಟ್ಟ.
ಆ ಬ್ರಾಹ್ಮಣ ಅದನ್ನು ತೆಗೆದುಕೊಂಡು ಹೊರಟುಹೋದ. ನಂತರ ಅವನು ಗಂಗಾಸ್ನಾನ ಮಾಡುತ್ತಾ ‘ತಾಯೀ ಗಂಗಾ ಮಾತೆ, ಇದೋ ರೈದಾಸ ನಿನಗೆ ಕೊಟ್ಟ ಕಾಣಿಕೆ’ ಎಂದು ಅಡಿಕೆ ಚೂರನ್ನು ಪ್ರವಾಹದಲ್ಲಿ ಬಿಟ್ಟ. ಆಗ ಹಠಾತ್ತನೆ ಒಂದು ಅಂದವಾದ ಕೈ ಪ್ರವಾಹದಿಂದ ಮೇಲೆದ್ದಿತು. ಆ ಕೈಯಲ್ಲಿ ನವರತ್ನ ಖಚಿತವಾದ ಚಿನ್ನದ ಕಡಗ (ಬಳೆ)ವು ಫಳಫಳನೆ ಹೊಳೆಯುತ್ತಿತ್ತು.
‘ಇದನ್ನು ರೈದಾಸನಿಗೆ ನನ್ನ ಕಾಣಿಕೆಯಾಗಿ ಕೊಡು’ ಎನ್ನುವ ಮಾತುಗಳು ಅಶರೀರವಾಣಿಯಾಗಿ ಕೇಳಿಸಿದವು. ಈ ಘಟನೆಗೆ ಬ್ರಾಹ್ಮಣ ದಿಗ್ಭ್ರಾಂತನಾಗಿ, ಆ ಕಡಗವನ್ನು ತೆಗೆದುಕೊಂಡು ಗಂಗಾ ನದಿಯ ದಡಕ್ಕೆ ಬಂದ. ಆ ಬಂಗಾರದ ಕಡಗವನ್ನು ನೋಡಿದ ಬ್ರಾಹ್ಮಣನ ಮನಸ್ಸು ಚಂಚಲವಾಗಿ ದುರಾಸೆ ಉಂಟಾಯಿತು.
‘ತನ್ನ ಅಡಿಕೆ ಚೂರಿಗೆ ಪ್ರತಿಫಲವಾಗಿ ಗಂಗೆಯು ಈ ರತ್ನ ಖಚಿತ ಕಡಗ ನೀಡಿದ ವಿಷಯ ಆ ಚಪ್ಪಲಿ ಹೊಲಿಯುವವನಿಗೆ ಹೇಗೆ ತಿಳಿಯುತ್ತದೆ? ಅದರಿಂದ ಅವನನ್ನು ಹುಡುಕಿಕೊಂಡು ಹೋಗಿ ಈ ಕಡಗ ಅವನಿಗೆ ಕೊಡುವುದು ಬುದ್ಧಿಹೀನ ಕೆಲಸ. ಹೋಗಲಿ, ಇದನ್ನು ಎಲ್ಲಿಯಾದರೂ ಮಾರೋಣವೆಂದರೆ ರಾಜಭಟರ ಕೈಗೆ ಸಿಕ್ಕಿಕೊಳ್ಳಬಹುದು. ಅದಕ್ಕೇ ಇದನ್ನು ನೇರವಾಗಿ ತೆಗೆದುಕೊಂಡು ಹೋಗಿ ಮಹಾರಾಜರಿಗೇ ಕಾಣಿಕೆಯಾಗಿ ನೀಡಿದರೆ ಅವರಿಂದ ಉತ್ತಮ ಸತ್ಕಾರ ಸಿಗಬಹುದು, ಗಂಗಾಮಾತೆಯ ಕರುಣೆಯಿಂದ ನನ್ನ ದಾರಿದ್ರ್ಯ ತೀರಬಹುದು’
ಹೀಗೆ ಯೋಚಿಸಿ ಆ ಬ್ರಾಹ್ಮಣ ನೇರವಾಗಿ ಕಾಶೀರಾಜನ ಅರಮನೆಗೆ ಹೋಗಿ, ರಾಜನನ್ನು ಆಶೀರ್ವದಿಸಿ, ಕಡಗವನ್ನು ಕಾಣಿಕೆಯಾಗಿ ನೀಡಿದ. ಆ ಕಡಗವನ್ನು ನೋಡಿ ರಾಜನೊಂದಿಗೆ ರಾಜಸಭೆಯಲ್ಲಿದ್ದವರೆಲ್ಲರೂ ಆಶ್ಚರ್ಯಪಟ್ಟರು. ರಾಜನ ಆಸ್ಥಾನದಲ್ಲಿದ್ದ ರತ್ನ ನಿಪುಣರು ಅದನ್ನು ಪರೀಕ್ಷಿಸಿ, ಅದು ದೇವಲೋಕಕ್ಕೆ ಸೇರಿದ್ದೇ ಆಗಿರಬೇಕೇ ಹೊರತು, ಮಾನವ ಲೋಕಕ್ಕೆ ಸೇರಿದ್ದಲ್ಲವೆಂದರು.
ಆ ಮಾತಿಗೆ ಪರಮಾನಂದಭರಿತನಾದ ರಾಜ, ಆ ಬ್ರಾಹ್ಮಣನನ್ನು ಘನವಾಗಿ ಸತ್ಕರಿಸಿಲು ನಿರ್ಧರಿಸಿ, ಆ ಕಡಗವನ್ನು ಅಂತಃಪುರದಲ್ಲಿದ್ದ ತನ್ನ ರಾಣಿಗೆ ಕಳಿಸಿದ. ಅವಳು ಅದನ್ನು ನೋಡಿ ಬಹಳ ಸಂತೋಷ ಪಟ್ಟು, ಅದನ್ನು ತನ್ನ ಬಲಗೈಗೆ ತೊಟ್ಟುಕೊಂಡು, ನೇರವಾಗಿ ರಾಜಸಭೆಗೆ ಬಂದು, ‘ಇದು ನನ್ನ ಕೈಯಲ್ಲಿ ಇನ್ನಷ್ಟು ಸುಂದರವಾಗಿ ಕಾಣಬೇಕಾದರೆ ಇದರ ಮತ್ತೊಂದು ಜೊತೆ ಕೂಡ ಬೇಕು. ಇದರ ಜೊತೆಯದನ್ನು ಸಂಪಾದಿಸಿ ನನಗೆ ಕೊಟ್ಟರೆ ನಾನು ಮತ್ತೊಂದು ಕೈಯಲ್ಲಿ ತೊಡುವೆ” ಎಂದು ಬ್ರಾಹ್ಮಣನನ್ನು ವಿನಂತಿಸಿದಳು.
ಈ ಮಾತುಗಳನ್ನು ಕೇಳಿದ ಬ್ರಾಹ್ಮಣ ಕಂಗಾಲಾಗಿ ಹೋದ. ತನ್ನ ದುರಾಸೆಯ ವ್ಯವಹಾರವು ಹೀಗೆ ತಿರುವು ಪಡೆಯುತ್ತದೆಂದು ಅವನು ಕನಸು ಮನಸಿನಲ್ಲೂ ಆಲೋಚಿಸಿರಲಿಲ್ಲ. ಅದರಿಂದ ಅವನು, ಆ ಕಡಗದ ಜೊತೆಯನ್ನು ಸಂಪಾದಿಸುವುದು ತನಗೆ ಅಸಾಧ್ಯವೆಂದು ರಾಣಿಯಲ್ಲಿ ಮನವಿ ಮಾಡಿಕೊಂಡ.
ರಾಜ ಬ್ರಾಹ್ಮಣನ ಮಾತುಗಳನ್ನು ಗಮನಕ್ಕೆ ತೆಗೆದುಕೊಳ್ಳದೇ, ‘ಸಂಜೆಯ ಒಳಗೆ ಇದರ ಜೊತೆಯ ಕಡಗ ಸಂಪಾದಿಸಿ ತರದಿದ್ದರೆ ನೀನು ಇದನ್ನು ಕದ್ದು ತಂದೆಯೆಂದು ಭಾವಿಸಬೇಕಾಗಿ ಬರುತ್ತದೆ. ನಿನಗೆ ಶಿಕ್ಷೆ ವಿಧಿಸಬೇಕಾಗುತ್ತದೆ” ಎಂದ.
ಬ್ರಾಹ್ಮಣನ ಹೃದಯ ಬಾಯಿಗೆ ಬಂದಂತಾಗಿತ್ತು. ತಾನು ಮಾಡಿದ್ದು ನಿಜಕ್ಕೂ ಒಂದು ಬಗೆಯ ಕಳ್ಳತನವೇ. ಅದಕ್ಕೆ ಶಿಕ್ಷೆ ಮರಣದಂಡನೆ. ಅದರ ಜೊತೆಯ ಕಡಗವನ್ನು ಸಾಯಂಕಾಲದ ಒಳಗೆ ತೆಗೆದುಕೊಂಡು ಬರಲು ಪ್ರಯತ್ನಿಸುವೆನೆಂದು ಮಾತು ಕೊಟ್ಟು ಅವನು ರಾಜನಿಂದ ಬೀಳ್ಕೊಂಡು ಹೊರಟ. ಅವನು ಓಡಿಹೋಗದಂತೆ ನೋಡಿಕೊಳ್ಳಿರೆಂದು ಮಹಾರಾಜ ಕೆಲವು ಭಟರನ್ನು ಬ್ರಾಹ್ಮಣನ ಹಿಂದೆ ಕಳುಹಿಸಿದ.
ಬ್ರಾಹ್ಮಣ ನೇರವಾಗಿ ರೈದಾಸನ ಬಳಿಗೆ ಹೋಗಿ ತನ್ನ ಪ್ರಾಣವನ್ನು ಕಾಪಾಡೆಂದು ಅವನ ಕಾಲುಗಳ ಮೇಲೆ ಬಿದ್ದ. ರಾಜನ ಆಸ್ಥಾನದಲ್ಲಿ ನಡೆದ ಘಟನೆಯನ್ನು ಹೇಳಿದ.
ರೈದಾಸ ಕಣ್ಣು ಮುಚ್ಚಿಕೊಂಡು ಗಂಗೆಯನ್ನು ಧ್ಯಾನಿಸಿ, ಬ್ರಾಹ್ಮಣನನ್ನು ರಕ್ಷಿಸೆಂದು ಬೇಡಿ, ತಾನು ಚರ್ಮದ ಚೂರುಗಳನ್ನು ನೆನೆಸಿಡುವ ತೊಟ್ಟಿಯಲ್ಲಿ ಕೈಹಾಕಿ ಮತ್ತೊಂದು ಕಡಗವನ್ನು ಹೊರ ತೆಗೆದ. ಈ ವಿಚಿತ್ರ ಪವಾಡವನ್ನು ಅಲ್ಲಿ ಗುಂಪು ಸೇರಿದ್ದ ಜನರು ಹಾಗೂ ರಾಜ ಭಟರು ನೋಡಿ ಅಚ್ಚರಿಗೊಂಡರು. ಬ್ರಾಹ್ಮಣ ರೈದಾಸನಿಗೆ ಕೃತಜ್ಞತೆ ಅರ್ಪಿಸಿ, ಆ ಕಡಗವನ್ನು ತೆಗೆದುಕೊಂಡು ರಾಜನ ಬಳಿಗೆ ಹೋಗಿ ಆ ಕಡಗವನ್ನು ಆತನಿಗೆ ಸಮರ್ಪಿಸಿದ.
ತನ್ನ ಭಟರಿಂದ ನಡೆದಿದ್ದನ್ನೆಲ್ಲಾ ಕೇಳಿದ ಕಾಶೀರಾಜ ಕೂಡಲೇ ರೈದಾಸನ ಬಳಿಗೆ ಬಂದು ಅವರಿಗೆ ನಮಿಸಿ, ಅವರ ಸುಖಜೀವನಕ್ಕೆ ಬೇಕಾದ ಸೂಕ್ತ ವ್ಯವಸ್ಥೆಯನ್ನು ಅರಮನೆಯಲ್ಲಿ ಏರ್ಪಡಿಸುವೆನೆಂದೂ, ಚಪ್ಪಲಿ ಹೊಲಿಯುವ ಕೆಲಸ ಬಿಡಬೇಕೆಂದೂ ಹೇಳಿದ. ಆದರೆ ರೈದಾಸ ಅದಕ್ಕೆ ಒಪ್ಪಲಿಲ್ಲ. ಈ ಗಂಗಾ ನದಿಯ ದಡದಲ್ಲಿ ನಾನು ನನ್ನ ಕುಲಕಸುಬು ಮಾಡಿಕೊಂಡಿರಲು ನನಗೆ ಸಂತೋಷವಿದೆ. ನನಗೆ ಹೀಗೇ ಬದುಕುವುದಕ್ಕೆ ಅವಕಾಶ ಮಾಡಿಕೊಡಿ ಎಂದು ರಾಜನಲ್ಲಿ ವಿನಯಪೂರ್ವಕವಾಗಿ ಹೇಳಲು, ರಾಜ ಅವರ ಮಾತಿಗೆ ಒಪ್ಪಿ ತನ್ನ ಅರಮನೆಗೆ ಮರಳಿದ.
ಇದು ಸಂತ ರೈದಾಸರ ಮಹಿಮೆಯನ್ನು ಸಾರುವ ಕಥೆ. ಈ ಕಥೆಯ ಸುಳಿವು ನನಗೆ ಅಂತರ್ಜಾಲ ತಾಣದಲ್ಲಿ ದೊರೆಯಿತು. ಸುಳಿವು ನೀಡಿದ ಅಜ್ಞಾತ ಲೇಖಕರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.
ಚಿತ್ರ ಕೃಪೆ: ಅಂತರ್ಜಾಲ ತಾಣ