ಸಂಧ್ಯಾದೀಪ

ಸಂಧ್ಯಾದೀಪ

ಪುಸ್ತಕದ ಲೇಖಕ/ಕವಿಯ ಹೆಸರು
ರಜನಿ ಭಟ್ ಕಲ್ಮಡ್ಕ
ಪ್ರಕಾಶಕರು
ನಿಮ್ಮ ಪುಸ್ತಕ ಪಬ್ಲಿಕೇಶನ್ಸ್, ಮಲ್ಲೇಶಪಾಳ್ಯ, ಬೆಂಗಳೂರು, ದೂ: ೯೯೦೦೩೨೦೮೬೯
ಪುಸ್ತಕದ ಬೆಲೆ
ರೂ. ೧೭೦.೦೦, ಮುದ್ರಣ: ೨೦೨೨

ಉದಯೋನ್ಮುಖ ಲೇಖಕಿ ರಜನಿ ಭಟ್ ಕಲ್ಮಡ್ಕ ಇವರ ಮೊದಲ ಪ್ರಕಟಿತ ಕಾದಂಬರಿಯೇ ಸಂಧ್ಯಾದೀಪ. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿ ಓದಿಸಿಕೊಂಡು ಹೋಗುವ ಈ ಕಾದಂಬರಿ ಮುಗಿದದ್ದೇ ಗೊತ್ತಾಗುವುದಿಲ್ಲ. ಲೇಖಕರೇ ತಮ್ಮ ಮುನ್ನುಡಿಯಲ್ಲಿ ಹೇಳಿದಂತೆ “ ನನಗೆ ಬಹಳಷ್ಟು ಕಾಡಿದ ಮನೆಯೆಂದರೆ ಉಪ್ಪರಿಗೆ ಮನೆ. ಚಿಕ್ಕಂದಿನಲ್ಲಿ ನನ್ನ ಅಜ್ಜನ ಮನೆಯಲ್ಲಿ ಕಣ್ಣಾಮುಚ್ಚಾಲೆ ಆಡುವಾಗ ನಾವು ಅಡಗುತ್ತಿದ್ದುದು ಇದೇ ಉಪ್ಪರಿಗೆಯಲ್ಲಿ. ಅಲ್ಲಿ ಅಡಿಕೆ ಮಿಶ್ರಿತ ವಾತಾವರಣದ ಪರಿಮಳ, ತುಂಬಿದ ಭತ್ತದ ಚೀಲಗಳ ಪರಿಮಳ. ಮಳೆ ಬಂದರೆ ಉಪ್ಪರಿಗೆಯ ಹಂಚಿನ ಮಾಡಿನಲ್ಲಿ ಬೆಳಕಿಗೆಂದು ಇರಿಸಿದ್ದ ಗಾಜಿನಲ್ಲಿ ಹರಿಯುವ ನೀರಿನ ಸುಂದರತೆ ಹೀಗೆ ಹಲವು ನೆನಪುಗಳು ನನ್ನಲ್ಲಿ ಭದ್ರವಾಗಿದ್ದವು. ಹಾಗೆಯೇ ದೊಡ್ದಮನೆ ಎಂಬ ಮನೆಯೂ ಉಪ್ಪರಿಗೆ ಮನೆ. ನನ್ನ ಅತ್ತೆ ಮನೆ ತೆಂಕಬೈಲು ಉಪ್ಪರಿಗೆ ಮನೆ ಇವೆಲ್ಲ ನನ್ನೊಳಗೆ ಅವಿತಿದ್ದವು. ಯಾವುದೋ ಒಂದು ಬಸ್ ನಲ್ಲಿ ಒಮ್ಮೆ ಪಯಣಿಸಿದಾಗ ಯಾರೋ ಚರ್ಚಿಸುತ್ತಿದ್ದರು ಆತ್ಮಗಳ ಬಗ್ಗೆ. ಆಗ ನನಗೆ ಚಿಕ್ಕದಾಗಿ ಕಲ್ಪನೆಗೆ ಸಿಕ್ಕಿದ್ದು ಶ್ರೀನಿವಾಸ ಕಾಮತರು ಹಾಗೂ ಶಾಂಭವಿ ಟೀಚರ್ ಬಗ್ಗೆ. ಹೀಗೆ ಮುಂದುವರಿದ ಕಥೆ ಒಂದು ನಿಗೂಢತೆಯಿಂದ ತುಂಬಿದ ಕಥೆಯಾಗಿ ಹೊರಬಂತು. ಇದರಲ್ಲಿ ನನ್ನ ಸಂಶಯಗಳಿಗೆ ಸಹಾಯ ಮಾಡಿದ ಗೆಳತಿ ಅಕ್ಷತ ಬಾಲ ಅವರಿಗೆ ಹೃತ್ಪೂರ್ವಕ ನಮನಗಳನ್ನು ಸಲ್ಲಿಸುವೆ. ಅವರು ಪ್ರಸಿದ್ಧ ಮನಶಾಸ್ತ್ರಜ್ಞೆ.”

ಕಾದಂಬರಿಯು ಓದಲು ಪ್ರಾರಂಭಿಸಿದಾಗ ಬಹಳ ಸರಳವಾದ ಕಥೆ ಎಂದು ಅನಿಸಿದರೂ, ಓದುತ್ತಾ ಹೋದಂತೆ ಒಂದು ರೀತಿಯ ಗೋಜಲು ಗೋಜಲು ಮನಸ್ಥಿತಿ ನಿಮ್ಮದಾಗುತ್ತದೆ. ಒಂದು ರೀತಿಯಲ್ಲಿ ‘ರಂಗಿ ತರಂಗ' ಸಿನೆಮಾದ ಮಧ್ಯಂತರ ಸಮಯದಲ್ಲಿ ನಿಮ್ಮ ಮನಸ್ಸು ಹೇಗಿತ್ತು, ಹಾಗಾಗುತ್ತದೆ. ಕ್ರಮೇಣ ನಿಮ್ಮ ಮನಸ್ಸಿನಲ್ಲಿ ಕಾಡುವ ಒಂದೊಂದೇ ಸಂದೇಹಗಳಿಗೆ ಉತ್ತರಗಳು ಸರಾಗವಾಗಿ ದೊರೆಯುತ್ತಾ ಹೋಗುತ್ತವೆ. 

ಕುತೂಹಲ ಇರುವುದು ಒಂದು ಉಪ್ಪರಿಗೆ ಮನೆಯಲ್ಲಿ ಅಡಗಿರುವ ನಿಗೂಢ ಕೋಣೆಯಲ್ಲಿ ಮತ್ತು ಅಲ್ಲಿ ಸಿಗುವ ಎರಡು ಅಸ್ಥಿಪಂಜರಗಳಲ್ಲಿ. ಕಾದಂಬರಿಯಲ್ಲಿ ರಜನಿ ಭಟ್ ಇವರು ಬರೆದಂತೆ ಪುಟ್ಟದಾಗಿ ನಿಮಗೆ ಪಾತ್ರ ಪರಿಚಯ ಮಾಡಿ ಬಿಡುತ್ತೇನೆ. “ಶ್ರೀನಿವಾಸ ಕಾಮತ್ ಮತ್ತು ಶಾಂಭವಿ ಟೀಚರ್ ದು ಅನುರೂಪ ದಾಂಪತ್ಯ. ಶ್ರೀನಿವಾಸ ಕಾಮತರು ಮೂಲತಃ ಮಂಗಳೂರಿನವರಾದರೆ ಶಾಂಭವಿ ಟೀಚರ್ ಕೇರಳದವರು. ಶ್ರೀನಿವಾಸರನ್ನು ಮದುವೆಯಾಗಿ ಇಪ್ಪತ್ತೈದು ವರುಷಗಳೇ ಸಂದವು. ಆಂಗ್ಲ ಭಾಷೆಯಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿರುವ ಟೀಚರ್ ಕೇರಳದ ಕೊಚ್ಚಿ ಚೋಟಾನಿಕ್ಕರ ಭಗವತಿ ದೇವಸ್ಥಾನದ ಸಮೀಪದವರು. ಹಾಗಾಗಿ ಕೇರಳದ ಸಂಪ್ರದಾಯವಾದ ನಿಲವಿಳಕ್ಕು ಅಥವಾ ಸಂಧ್ಯಾದೀಪವೆಂದರೆ ಶಾಂಭವಿ ಟೀಚರ ರಕ್ತದಲ್ಲೇ ಬಂದಿತ್ತು. ಜ್ವರದಿಂದ ಮಲಗಿದ್ದರೂ ಅವರು ನಿಲವಿಳಕ್ ಅಥವಾ ಸಂಧ್ಯಾದೀಪವನ್ನು ಉರಿಸದೇ ಬಿಡುತ್ತಿರಲಿಲ್ಲ.

ಮುಸ್ಸಂಜೆ ಸಮಯಕ್ಕೆ ದೀಪ ಹಚ್ಚಿ ಹೊರತಂದು ಇರಿಸಬೇಕು. ಹೊರತಂದಾಗ ದೀಪಂ ಅನ್ನುತ್ತಾ ಹೇಳಿಕೊಂಡು ಬರುವುದು ವಾಡಿಕೆ. ಸಂಜೆ ಸಮಯದಲ್ಲಿ ನೆಗೆಟಿವ್ ಎನರ್ಜಿ ಮನೆಯೊಳಗಿಂದ ದೂರ ಹೋಗಲಿ ಎನ್ನುವುದು ಇದರ ಹಿಂದಿರುವ ಆಶಯ. ಪೂರ್ವ ದಿಕ್ಕಿಗೆ ಹಣತೆ ಉರಿಯುವಂತೆ ಇರಿಸಿ ಅದರ ಬುಡದಲ್ಲಿ ಕುಳಿತು ರಾಮನಾಮ ಉಚ್ಚರಿಸುವುದರಿಂದ ಮನೆಗೆ ಕ್ಷೇಮವಾಗುತ್ತದೆ ಎಂಬುದು ನಂಬಿಕೆ. ಶಾಂಭವಿ ಟೀಚರ್ ಮದುವೆಯಾಗಿ ಮಂಗಳೂರಿಗೆ ಬಂದರೂ ಈ ಪ್ರತೀತಿಯನ್ನು ಮಾತ್ರ ಬಿಡಲಿಲ್ಲ. ಅತ್ತೆಗೂ, ಕಾಮತರಿಗೂ ಇದು ಬಹಳ ಇಷ್ಟವಾಗಿತ್ತು.”

ಶ್ರೀನಿವಾಸ ಕಾಮತ್ ರು ಮದುವೆಯ ಸಂದರ್ಭದಲ್ಲೇ ಶಾಂಭವಿ ಟೀಚರ್ ಬಳಿ ಅವರ ಹಿಂದಿನ ದಿನಗಳ ಬಗ್ಗೆ ಕೇಳಬಾರದು ಮತ್ತು ಉಪ್ಪರಿಗೆಯ ಮೇಲಿರುವ ಕೋಣೆಗೆ ಹೋಗಬಾರದು ಎಂದು ಮಾತು ತೆಗೆದುಕೊಂಡಿದ್ದರು. ಕ್ರಮೇಣ ತಮ್ಮ ಗಮನಕ್ಕೆ ಬಾರದೇ ಮನೆಯಲ್ಲಿ ಏನೇನೋ ನಿಗೂಢ ಸಂಗತಿಗಳು ನಡೆಯುತ್ತಿವೆ ಎಂದು ಟೀಚರ್ ಗೆ ಭಾಸವಾಗತೊಡಗಿತು. ಮನೆಗೆ ಹೋಗುವ ದಾರಿಯಲ್ಲಿ ಸಮಾಧಿ ದೊರೆತದ್ದು, ಅತ್ತೆಗೆ ಕೆಲವೊಮ್ಮೆ ಜಾಸ್ತಿಯಾಗುವ ತುರಿಕೆ, ನಾಣಪ್ಪ ಎಂಬವನ ಪ್ರಸಂಗ ಇವೆಲ್ಲಾ ಗೋಜಲು ಗೋಜಲು ಆಗುತ್ತಿದ್ದಂತೆ ಒಂದು ದಿನ ಶ್ರೀನಿವಾಸ ಕಾಮತರು ಶಾಲಾ ಕೆಲಸದ ಮೇಲೆ ಬೆಂಗಳೂರಿಗೆ ಹೋಗಲಿಕ್ಕಿದೆ ಎಂದು ಹೊರಟು ಹೋದರು. ಇದೇ ಸರಿಯಾದ ಸಮಯ ಎಂದು ಶಾಂಭವಿ ಟೀಚರ್ ತನ್ನ ಮಗ ಮನಶಾಸ್ತ್ರಜ್ಞ ಮನೋಜ್ ನನ್ನು ಬರಲು ಹೇಳುತ್ತಾರೆ. ಶಾಂಭವಿ ಟೀಚರ್ ಅವರ ಅಣ್ಣಂದಿರಲ್ಲಿ ಒಬ್ಬರು ಮನಶಾಸ್ತ್ರದ ವಿಷಯದಲ್ಲಿ ಮನೋಜ್ ಗೆ ತರಭೇತಿ ನೀಡುತ್ತಿರುತ್ತಾರೆ. ಮನೋಜ್ ಬಂದು ಹುಡುಕಾಟ ನಡೆಸುವಾಗ ನಿಗೂಢವಾದ ಹಲವಾರು ಅಂಶಗಳು ಬಯಲಿಗೆ ಬರುತ್ತವೆ, ಈ ನಿಗೂಢತೆಯನ್ನು ಬಿಡಿಸಲು ತಾಯಿ ಮತ್ತು ಮಗ ಮಂಗಳೂರಿನ ರಥಬೀದಿ, ಉಡುಪಿ, ಚಿಕ್ಕಮಗಳೂರಿನ ಶೃಂಗೇರಿಗೆಲ್ಲಾ ಹೋಗ ಬೇಕಾಗಿ ಬರುತ್ತದೆ. 

ಕೆಲವೊಂದು ಘಟನೆಗಳು ಸ್ವಲ್ಪ ನಾಟಕೀಯವೆಂದು ಅನಿಸಿದರೂ ಕಾದಂಬರಿಗೆ ಅದು ಪೂರಕವಾಗಿಯೇ ಇರುವುದು ಓದುತ್ತಾ ಓದುತ್ತಾ ಗಮನಕ್ಕೆ ಬರುತ್ತದೆ. ಅಮ್ಮ ಮತ್ತು ಮಗ ಸೇರಿ ಮಲಯಾಳಂ ಭಾಷೆಯಲ್ಲಿ ಪರಸ್ಪರರನ್ನು ಕರೆಯುವುದು, ತಮಾಷೆ ಮಾಡುವುದು ಬಹಳ ಚೆನ್ನಾಗಿದೆ. ಇವರಿಗೆ ಈ ಉಪ್ಪರಿಗೆ ಮನೆಯ ನಿಗೂಢತೆಯನ್ನು ಭೇಧಿಸಲು ಸಾಧ್ಯವಾಯಿತೇ? ಟೀಚರ್ ಅವರ ಅಣ್ಣ ಶಾಂತಾರಾಮನವರ ಪ್ರವೇಶದಿಂದ ಉಪ್ಪರಿಗೆ ಮನೆಯಲ್ಲಿ ಒಳಿತಾಯಿತೇ? ಇದನ್ನೆಲ್ಲಾ ತಿಳಿದುಕೊಳ್ಳಲು ಈ ಕಾದಂಬರಿಯನ್ನು ಓದಲೇ ಬೇಕು. 

ಸರಳ, ಸೊಗಸಾದ ಭಾಷೆಯು ಕಾದಂಬರಿಯನ್ನು ಕುತೂಹಲ ಕೆರಳಿಸುತ್ತಾ ಓದಿಸಿಕೊಂಡು ಹೋಗುತ್ತದೆ. ಕೆಲವೆಡೆ ಕಥೆಯ ಮೇಲಿನ ಬಿಗಿತ ಮತ್ತು ಹಿಡಿತ ಕಡಿಮೆಯಾದಂತೆ ಕಾಣಿಸುತ್ತದೆ. ಆದರೂ ಲೇಖಕಿಯ ಚೊಚ್ಚಲ ಕಾದಂಬರಿಯೆಂಬ ಕಾರಣಕ್ಕೆ ಆ ವಿಷಯಗಳು ಗೌಣವಾಗುತ್ತವೆ. ೧೮೫ ಪುಟಗಳ ಈ ಕಾದಂಬರಿಯನ್ನು ಲೇಖಕಿ ತಮ್ಮ ‘ರಾಮ'ನಿಗೆ ಅರ್ಪಿಸಿದ್ದಾರೆ.