ಸಂನ್ಯಾಸಿಯೊಂದಿಗೆ ಸಂವಾದ

ಸಂನ್ಯಾಸಿಯೊಂದಿಗೆ ಸಂವಾದ

Comments

ಬರಹ

ಸಂನ್ಯಾಸಿ: ಜಗತ್ತಿನ ಧರ್ಮಗಳು ಮಾನವತೆಗೆ ದೇವರು ನೀಡಿದ ಕೊಡುಗೆ. ಮನುಕುಲದ ರಕ್ಷಣೆಗಾಗಿ ದೇವರು ಹಾಕಿಕೊಟ್ಟ ದಾರಿಗಳನ್ನೇ ಅವು ಪ್ರತಿನಿಧಿಸುತ್ತವೆ. ಅವನ್ನು ಅನುಸರಿಸುವವರಿಗೆ ಅವು ಮುಕ್ತಿತೋರುವ ಮಾರ್ಗಗಳಾಗಿವೆ.
ನಾನು: ಧರ್ಮವನ್ನು ಅನುಸರಿಸುವವರಿಗೆ ಅದು ಮುಕ್ತಿ ತೋರುವ ಸಾಧನವಾಗಬಲ್ಲದೇನೋ ಸರಿಯೇ, ಆದರೆ ಧರ್ಮಗಳೆನ್ನುವುದು ಸಾಂಘಿಕ ಅಥವಾ ಸಾಮುದಾಯಿಕ ಜೀವನಶೈಲಿಯ ಗುಣವುಳ್ಳ ಮಾನವನು ತಾನೇ ಸ್ವಯಂ ರೂಪಿಸಿಕೊಂಡದ್ದಲ್ಲವೇ?

ಸಂ: ಜಗತ್ತಿನ ಧರ್ಮಗಳು ಒಂದೇ ಸಮುದ್ರ ಸೇರುವ ಹಲವು ನದಿಗಳಿದ್ದಂತೆ. ಬೇರೆಬೇರೆ ಧರ್ಮಗಳು ಜನರನ್ನು ಒಬ್ಬನೇ ದೇವರೆಡೆಗೆ ಕರೆದೊಯ್ಯುತ್ತವೆ. ಹಲವು ದಾರಿಗಳಿದ್ದರೂ ಸೇರುವ ಸ್ಥಳ ಒಂದೇ.
ನಾ: ಇದೊಂದು ಹೇಳೀ ಹೇಳೀ ಸವಕಲಾದ ಮಾತು. ಧರ್ಮಗಳು ಮನುಷ್ಯನನ್ನು ದೇವರೆಡೆಗೆ ಒಯ್ಯುತ್ತವೆ ಎನ್ನುವುದಕ್ಕಿಂತ ಧರ್ಮಪಾಲನೆಯಿಂದ ಮನುಷ್ಯ ಮನುಷ್ಯನಾಗುತ್ತಾನೆ ಎನ್ನುವುದೇ ಸೂಕ್ತವಲ್ಲವೇ?

ಸಂ: “ಮತಗಳು ಪರಮಾತ್ಮನೆಡೆಗೆ ಸಾಗಿಸುವ ತುಮುಲದ ಸಾಧನಗಳು” ಎಂಬುದಾಗಿ ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಒಳಿತು ಕೆಡಕುಗಳ ಹೊಯ್ದಾಟದಲ್ಲಿ ಎಲ್ಲ ಮತಗಳೂ ಒಳಿತಿನ ಪರ ವಹಿಸಿ ಮನುಕುಲವನ್ನು ಉನ್ನತಿಗೇರಿಸುವ ಸಾಧನಗಳಾಗಬೇಕು.
ನಾ: ಮತ್ತದೇ ಮಾತು. ಅದರ ತೂಕ ಹೆಚ್ಚಿಸಲು ಸಾಧುವೊಬ್ಬರ ಬೆಂಬಲ ಬೇರೆ. ಎಲ್ಲ ಮತಗಳೂ ಒಳಿತಿನ ಪರ ವಹಿಸಬೇಕು ಎನ್ನುವುದಕ್ಕಿಂತ ಎಲ್ಲ ಮಾನವರೂ ಒಳಿತಿನ ಪರವಾದರೆ ಅದೇ ಅಲ್ಲವೇ ಸ್ವರ್ಗ?

ಸಂ: “ಎಲ್ಲ ಧರ್ಮಮೀಮಾಂಸೆಯ ಗುರಿಯೂ ಒಂದೇ. ಧರ್ಮಸಂಚಲನವು ಅಸತ್ಯದಿಂದ ಸತ್ಯದೆಡೆಗೆ ಮಿಗಿಲಾಗಿ ಅಪ್ರಬುದ್ಧತೆಯಿಂದ ಪ್ರಬುದ್ಧತೆಯೆಡೆಗೆ ಒಯ್ಯುತ್ತದೆ. ಅವು ಅನಂತತೆಯನ್ನು ಗ್ರಹಿಸುವ ಸಾಧನಗಳು.” (ಸ್ವಾಮಿ ವಿವೇಕಾನಂದ)
ನಾ: ಹೇಳಿದ್ನಲ್ಲ ಸ್ವಾಮೀ, ನನಗೆ ಧರ್ಮಮೀಮಾಂಸೆ ಬೇಡ, ಧರ್ಮಸಂಚಲನವೂ ಬೇಡ, ಆತ್ಮಸಾಕ್ಷಾತ್ಕಾರದಿಂದಲೇ ಅನಂತತೆ ಮುಟ್ಟಲು ಸಾಧ್ಯ ಅಲ್ಲವೇ?

ಸಂ: ಮಹಾತ್ಮ ಗಾಂಧಿಯವರು ಸ್ವಮತಪಾಲನೆ ಮತ್ತು ಮತಸೌಹಾರ್ದತೆಯನ್ನು ಪ್ರತಿಪಾದಿಸಿದರು. ಆದರೆ ಸರ್ವಮತಗಳ ಸಮಾಗಮ ಹಾಗೂ ಮತ ಆಚರಣೆಯ ಏಕತೆಯನ್ನಲ್ಲ. ಒಬ್ಬನು ತನ್ನ ಧರ್ಮದ ಆಂತರ್ಯವನ್ನು ಹೊಕ್ಕರೆ ಆತ ಮತ್ತೊಬ್ಬನ ಹೃದಯವನ್ನು ಹೊಕ್ಕಂತೆಯೇ ಏಕೆಂದರೆ ದೇವರು ಒಬ್ಬನೇ ಆದರೂ ದಾರಿಗಳು ಹಲವು.
ನಾ: ತಕ್ಕಳಪ್ಪ, ಮಹಾತ್ಮಗಾಂಧಿಯವರ ಹೆಸರು ಹೇಳಿದರೆ ನಾನು ಮೆತ್ತಗಾಗುತ್ತೀನಿ ಅಂತ ಸರಿಯಾಗೇ ಚುಚ್ಚಿದಿರಲ್ಲ. ಸರ್ವಮತಗಳ ಸಮಾಗಮ ಕಟ್ಕೊಂಡು ನನಗೂ ಏನೂ ಆಗಬೇಕಿಲ್ಲ. ಆದರೆ ತನ್ನ ಧರ್ಮದ ಆಂತರ್ಯವನ್ನು ಹೊಗುವುದಕ್ಕಿಂತ ತನ್ನದೇ ಹೃದಯದ ಆಂತರ್ಯವನ್ನು ಹೊಗಬೇಕು. ಸುತ್ತಿ ಬಳಸಿ ದೇವರು ಒಬ್ಬನೇ ದಾರಿಗಳು ಹಲವೆನ್ನುವ ಮಾತು ಬೇಡ.

ಸಂ: “ವಿವಿಧ ಧರ್ಮಗಳ ಸತ್ಪ್ರೇರಣೆ ಸರ್ವರಿಗೂ ಮೀಸಲು. ಉದಾಹರಣೆಗೆ ಹಿಂದೂ, ಮುಸಲ್ಮಾನ ಅಥವಾ ಕ್ರೈಸ್ತರಿಗೆ ಅರುಹಲಾದ ಸತ್ಯವು ಸರ್ವರಿಗೂ ಅಮೂಲ್ಯವಾದುದು. ಪರಮತವನ್ನು ಅರಿತು ತಮ್ಮ ಅಧ್ಯಾತ್ಮವನ್ನು ವೃದ್ಧಿಸಿಕೊಳ್ಳಲು ಆಸಕ್ತರಾದವರನ್ನು ಯಾರೂ ತಡೆಯಬಾರದು” (ಮಹಾತ್ಮ ಗಾಂಧಿ).
ನಾ: ಇದಕ್ಕೆ ಅಡ್ಡಿಯಾಗಿರುವುದು ಸ್ವತಃ ಧರ್ಮಗಳೇ. ಇರುವಾಸೆಯ ಬಿಡು ಅರಿವಾಸೆಯ ತೊಡು ಎಂದಿದ್ದಾರೆ ನನ್ನ ಗುರು.

ಸಂ: ಯಾವುದೇ ಮತದ ಸಾಧನೆ ಯಶಸ್ಸು ಎಲ್ಲ ಮತಗಳಿಗೂ ಮೀಸಲು. ಆದ್ದರಿಂದ ಸಮಾಜದ ಸಮಸ್ಯೆ ಗೊಂದಲಗಳನ್ನು ಬಗೆಹರಿಸಲು ಸರ್ವ ಮತಗಳ ಸಹಕಾರ ಅತ್ಯಗತ್ಯ.
ನಾ: ಮತದ ಯಶಸ್ಸು ಎನ್ನುವುದಕ್ಕಿಂತ ಮನುಜನ ಯಶಸ್ಸು ಎನ್ನಿ. ಆ ಮೇರು ಮನುಷ್ಯನ ಹೃದಯದೊಂದಿಗೆ ಸಮಾನತ ಹೊಂದುವ ತುಮುಲವಿದ್ದಲ್ಲಿ ಸಹೃದಯತೆ ಸಿದ್ಧಿಸುವುದು.

ಸಂ: ಎಲ್ಲ ಮತಗಳ ವಿಶಾಲ ಭಾವನೆಯ ತತ್ವಗಳು ಸಂಕುಚಿತ ಚೌಕಟ್ಟಿನಿಂದ ಹೊರಬರುವುದಾದರೆ ಮತಗಳ ಉನ್ನತಿ ಹಾಗೂ ಸಮಾಜದ ಐಕ್ಯತೆಯನ್ನು ಸಾಧಿಸುವ ಸಾಧನಗಳಾಗುವುವು.
ನಾ: ಸಂಕುಚಿತ ಚೌಕಟ್ಟು ಇದ್ದರೆ ಅವು ಹೊರಬರುವುದೇ ಬೇಡ, ಅಂಥ ಮತಗಳು ಅಲ್ಲೇ ನಶಿಸಲಿ.

ಸಂ: ಪ್ರತಿ ಧರ್ಮದ ಗುರಿ ’ಅದ್ವೈತ’ ಎಂಬುದೇ ಅಂತಿಮ ಸತ್ಯ. ಅದು ಇಡೀ ವಿಶ್ವ ಮತ್ತು ಎಲ್ಲ ಜೀವರಾಶಿಯನ್ನು ಒಗ್ಗೂಡಿಸುವ ಒಳವಾಹಿನಿಯಾಗಿದೆ. ಆ ಸತ್ಯವು ಹಿಂದೂಗಳಿಗೆ ಮಾತ್ರವಲ್ಲದೆ ಸರ್ವಜನರಿಗೂ ಲಭ್ಯವಿದೆ. ಸಹಜವಾದ ಮನೋವಿಕಾಸದಿಂದ ನಾವು ಅದನ್ನು ಸಾಧಿಸಬಹುದಾಗಿದೆ. ಆದ್ದರಿಂದ ಒಬ್ಬರ ದೃಷ್ಟಿಕೋನವನ್ನು ಮತ್ತೊಬ್ಬರ ಮೇಲೆ ಹೇರುವ ಅಗತ್ಯವಿಲ್ಲ ಮತ್ತು ಅದು ಸಾಧ್ಯವೂ ಇಲ್ಲ (ಸ್ವಾಮಿ ವಿವೇಕಾನಂದ).
ನಾ: ಕ್ರೈಸ್ತ ಬೌದ್ಧ ಮುಸಲ್ಮಾನರೆಲ್ಲರೂ ದ್ವೈತವನ್ನೊಪ್ಪುತ್ತಾರೆ. ಏಕೆಂದರೆ ಅಗೋಚರ ಸರ್ವಶಕ್ತನು ಬೇರೆ ನಾವು ಬೇರೆ ಎನ್ನುತ್ತಾರಲ್ಲ? ದ್ವೈತವಾಗಲೀ ಅದ್ವೈತವಾಗಲೀ ಅದು ನಾವು ಅಳಿದ ಮೇಲೆ, ಅದರಿಂದ ಮನುಷ್ಯಜೀವನಕ್ಕೆ ಬಂದ ಭಾಗ್ಯವೇನು?

ಸಂ: ಪ್ರತಿ ಧರ್ಮದ ಅನನ್ಯತೆಯನ್ನು ಸ್ವಾಮಿ ವಿವೇಕಾನಂದರು ಮೆಚ್ಚಿದ್ದಾರಲ್ಲದೆ ಎಲ್ಲ ಧರ್ಮಗಳ ಸಾರವನ್ನು ಗ್ರಹಿಸಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ಮುಕ್ತ ಮನೋಭಾವದಿಂದ ಅನನ್ಯತೆ ಸಫಲವಾಗುವುದು ಎಂದು ಅವರು ನಂಬಿದ್ದರು. ಎಲ್ಲ ಮತಗಳು ಪರಸ್ಪರರಿಂದ ಅರಿಯಲು ಹಾಗೂ ವಿನಿಮಯಿಸಿಕೊಳ್ಳಲು ಸಾಕಷ್ಟಿದೆ ಎಂಬುದು ಅವರ ಆಳ ಅನಿಸಿಕೆಯಾಗಿದ್ದಿತು.
ನಾ: ಪರಸ್ಪರರಿಂದ ಅರಿಯಲು ಆಗದಂತೆ ಧರ್ಮಗಳು ತಮಗೆ ತಾವೇ ಬೇಲಿ ಹಾಕಿಕೊಂಡಿವೆ.

ಸಂ: ಸ್ವಾಮಿ ವಿವೇಕಾನಂದರ ವಿಶ್ವಧರ್ಮದ ಪರಿಕಲ್ಪನೆಯಲ್ಲಿ, ಎಲ್ಲಾ ಮತಗಳು ತಮ್ಮ ವಿಭಿನ್ನತೆಯನ್ನು ಹಾಗೂ ಒಂದೇ ಸತ್ಯದ ವಿವಿಧ ದೃಷ್ಟಿಕೋನಗಳನ್ನು ವ್ಯಕ್ತಪಡಿಸುವ ಸಾಧನಗಳು. ಆದ್ದರಿಂದ ಅಲ್ಲಿ ಪರಸ್ಪರ ಒತ್ತಾಸೆಯಿದೆ ಹೊರತು ಸಂಘರ್ಷವಿಲ್ಲ.
ನಾ: ಬಡ್ಕೊಬೇಕು. ಬೇಲಿ ಇದೆ ಅರ್ಥಾತ್ ಅತಿ ಎತ್ತರದ ಕಾಂಪೌಂಡ್ ಗೋಡೆ ಇದೆ.

ಸಂ: ಆತ್ಮೋದ್ಧಾರದ ಮಾರ್ಗದಲ್ಲಿ ಇತರ ಆಧ್ಯಾತ್ಮಿಕ ನೋಟಗಳನ್ನು ಪರಿಗಣಿಸದೆ ಸಂಕುಚಿತವಾಗಿ ನಡೆಯುವುದರಿಂದ ಧಾರ್ಮಿಕ ಅಶಾಂತಿ ಅನೈಕ್ಯತೆಗೆ ಕಾರಣವಾಗುತ್ತದೆ. (ಸ್ವಾಮಿ ವಿವೇಕಾನಂದ)
ನಾ: ನನಗೇನೂ ಹಾಗೆನಿಸುವುದಿಲ್ಲ. ಆತ್ಮೋದ್ಧಾರಕ್ಕೆ ಹಂಬಲಿಸುವವನು ಅಶಾಂತಿ ಹುಟ್ಟುಹಾಕುವುದಿಲ್ಲ. ಉದ್ಧರಿಸುವೆನು ಜಗವನೆನ್ನುತಿಹ ಸಖನೆ ನಿನ್ನುದ್ಧಾರವೆಷ್ಟಾಯ್ತೊ ಮಂಕುತಿಮ್ಮ.

ಸಂ: ವಿಶಾಲ ಮನೋದೃಷ್ಟಿ ಇಲ್ಲದೆ ಸಂಕುಚಿತ ಮನೋಭಾವನೆಯನ್ನೇ ಪ್ರತಿಪಾದಿಸುವ ಮತ ಅಪಾಯಕಾರಿ. ಪರಧರ್ಮ ಸಹಿಷ್ಣುತೆಯಿಂದ ಪರಮತಗಳನ್ನು ಮುಕ್ತಭಾವದಿಂದ ಅರಿಯುವುದು ವೈಯಕ್ತಿಕ ಹಾಗೂ ಸಾಮೂಹಿಕ ಆತ್ಮೋದ್ಧಾರಕ್ಕೆ ಇಂಬುಕೊಡುತ್ತದೆ.
ನಾ: ಅಂಥ ಮತ ಮತವೇ ಅಲ್ಲ ಬಿಡಿ. ಇನ್ನು ಆತ್ಮೋದ್ಧಾರಕ್ಕೆ ಹಲವು ದಾರಿಗಳುಂಟು.

ಸಂ: ವಿವಿಧ ಮತಗಳು ಮಾನವಕೋಟಿಯ ಉನ್ನತಿಗಾಗಿ ಶ್ರಮಿಸುವ ದೈವೀ ಸಾಧನಗಳು. ಅಂತರ ಮತಗಳ ಸಂವಾದ ಮಾತುಕತೆಯಿಂದ ಆಯಾ ಮತಗಳ ನಿರ್ಲಕ್ಷಿತ ದೃಷ್ಟಿ ಅಥವಾ ಆಯಾಮವನ್ನು ಸರಿದೂಗಿಸಬಹುದು.
ನಾ: ಬೇಕಾಗಿಲ್ಲ. ಏಕೆಂದರೆ ಕೊನೆಗೆ ಮತಗಳು ಉಳಿಯುವುದಿಲ್ಲ. ಮನುಷ್ಯತ್ವವೇ ಉಳಿಯುವುದು. ನೀವು ಎಂದಾದರೂ ಗಾಯಾಳುವಾಗಿ ಆಸ್ಪತ್ರೆಯಲ್ಲಿ ಮಲಗಿದ್ದೀರಾ?

ಸಂ: “ಸತ್ಯವು ಒಂದೇ, ಋಷಿಗಳು ಅದನ್ನು ಬೇರೆಬೇರೆ ಹೆಸರುಗಳಿಂದ ಕರೆದಿದ್ದಾರೆ.”(ಋಗ್ವೇದ). ಸತ್ಯದ ಕುರಿತು ಅಪಾರ ಆಸ್ತೆ ಹೊಂದಿದ್ದ ಮಹಾತ್ಮ ಗಾಂಧಿಯವರು ವಿವಿಧ ಧರ್ಮಗಳಿಂದ ಬರುವ ಸತ್ಯದ ಪ್ರವಾಹವನ್ನು ಸ್ವೀಕರಿಸಬಲ್ಲವರಾಗಿದ್ದರು. ಆದ್ದರಿಂದಲೇ ಅವರು “ಯಾವುದೇ ಧರ್ಮವನ್ನು ನಿರ್ಲಕ್ಷಿಸುವುದೆಂದರೆ ದೇವರ ಅಪಾರ ಕೊಡುಗೆಗಳನ್ನು ನಿರ್ಲಕ್ಷಿಸಿದಂತೆ ಮಾತ್ರವಲ್ಲ ಮಾನವಕುಲದ ಆಧ್ಯಾತ್ಮಿಕತೆಯನ್ನು ದುರ್ಬಲಗೊಳಿಸಿದಂತೆಯೇ ಸರಿ” ಎಂದಿದ್ದಾರೆ.
ನಾ: ಮತ್ತೆ ಗಾಂಧಿ ಬಂದರು. ನಾಡೊಳೆನಿತೋ ರಾಮಾಯಣಂಗಳೊಳವು. ಅವನ್ನೆಲ್ಲ ನೆಕ್ಕಬೇಕೇನು?
ಸಂ: “ದೇವರನ್ನು ಪ್ರೀತಿಸುವುದು ಮತ್ತು ಪರರನ್ನು ಪ್ರೀತಿಸುವುದು ಎರಡೂ ಒಂದೇ ನಾಣ್ಯದ ಎರಡು ಬದಿಗಳಿದ್ದಂತೆ. ತನ್ನಂತೆಯೇ ಪರರ ಬಗೆಯದೆ ದೇವರನ್ನು ಅರಿತೆನೆಂದವನು ಸುಳ್ಳುಗಾರನಾಗುತ್ತಾನೆ” (ಪವಿತ್ರಬೈಬಲ್)
ನಾ: ಇದಂತೂ ಸತ್ಯವಾದ ಮಾತು.

ಸಂ: “ದೇವರೇ ಸತ್ಯ ಹಾಗೂ ಸತ್ಯವೇ ದೇವರು. ಎಲ್ಲ ಜನರೂ ಈ ಸಮಗ್ರ ಸತ್ಯವನ್ನು ಅರಿಯಬೇಕು. ಅಹಿಂಸೆಯೊಂದರಿಂದಲೇ ಸತ್ಯವನ್ನು ಅರಿಯಲು ಸಾಧ್ಯ, ಅರ್ಥಾತ್ ವಿಶ್ವದ ಕನಿಷ್ಠ ಜೀವಿಯನ್ನು ತನ್ನಂತೆಯೇ ಪರಿಭಾವಿಸುವ ಮೂಲಕ.” (ಮಹಾತ್ಮ ಗಾಂಧಿ)
ನಾ: ಅಲ್ಲವೇ ಮತ್ತೆ.

ಸಂ: ಐಹಿಕ ವಸ್ತುಗಳ ಸಂಬಂಧಕ್ಕಿಂತ ಮನುಷ್ಯ ಮನುಷ್ಯ ಸಂಬಂಧ ಶ್ರೇಷ್ಠವಾದುದು. ಆದ್ದರಿಂದ ಸಮಾಜದ ದೀನರು, ರೋಗಿ, ಅಸಹಾಯಕ ಮತ್ತು ಶೋಷಿತರ ಸೇವೆಯೇ ದೇವರ ಸೇವೆ. “ಕನಿಷ್ಠನಾದ ನಿನ್ನ ಸಹೋದರ ಸಹೋದರಿಗೆ ನೀನು ಏನು ಮಾಡುವಿಯೋ ಅದನ್ನು ನನಗೇ ಮಾಡಿದಂತೆ” (ಯೇಸುಕ್ರಿಸ್ತ). ಯೇಸುಕ್ರಿಸ್ತ ಕೊಟ್ಟಕೊನೆಯ, ಲೆಕ್ಕಕ್ಕೆ ಸಿಗದ ಹಾಗೂ ಕಳೆದುಹೋದ ಮಾನವ ಸಂಕುಲದೊಂದಿಗೆ ತನ್ನನ್ನು ಗುರುತಿಸಿಕೊಂಡನು ಮಾತ್ರವಲ್ಲ ಮಾನವನ ಮೌಲ್ಯ, ಮತ್ತು ಘನತೆಗೌರವಗಳನ್ನು ಎತ್ತಿಹಿಡಿದನು.
ನಾ: ಯೇಸುಕ್ರಿಸ್ತನ ಬಗ್ಗೆ ಎರಡು ಮಾತಿಲ್ಲ ಬಿಡಿ. ಮಾರ್ಟಿನ್ ಲೂಥರ್ ಕಿಂಗ್, ಅಬ್ರಹಾಂ ಲಿಂಕನ್, ಮಹಾತ್ಮಗಾಂಧಿ . . ಇ. ಈ ಪಟ್ಟಿ ಇನ್ನೂ ಬೆಳೆಯುತ್ತಾ ಹೋಗುತ್ತೆ.

ಸಂ: ಅನ್ಯ ಧರ್ಮವನ್ನು ತೆಗಳುವುದು, ತಪ್ಪುಮಾಹಿತಿ ನೀಡುವುದು, ಮುಗ್ದರನ್ನು ಹಿಂಸಿಸುವುದು, ದೇವಮಂದಿರವನ್ನು ಅಪವಿತ್ರಗೊಳಿಸುವುದು ಇವೆಲ್ಲ ನಿಜಧರ್ಮ ಪಾಲನೆಯಲ್ಲ. ಶಾಂತಿ ಪ್ರೀತಿ ಕ್ಷಮೆಯ ಸಾಕ್ಷಾತ್ಕಾರವಾಗಿರುವ ದೇವರನ್ನೇ ತ್ಯಜಿಸಿದಂತೆ. ಸ್ವಧರ್ಮ ಹಾಗೂ ಪರಧರ್ಮಗಳ ಕುರಿತ ಅಜ್ಞಾನವೇ ಎಲ್ಲ ಅನಾಹುತಗಳಿಗೆ ಕಾರಣ. (ಮಹಾತ್ಮಗಾಂಧಿ)
ನಾ: ಸ್ವಧರ್ಮ ಪರಧರ್ಮವೆಂಬುದಿಲ್ಲ. ಇರುವುದೊಂದೇ, ಅದು ಮಾನವಧರ್ಮ.

ಸಂ: “ಜೀವಾತ್ಮನೊಬ್ಬನೇ, ಋಷಿಗಳು ಬೇರೆಬೇರೆ ಹೆಸರಿನಿಂದ ಕರೆದಿದ್ದಾರೆ” (ಋಗ್ವೇದ ೧, ೧೬೪,೪೬) ಜೀವಾತ್ಮನು ಸದಾ ದೇವರ ಹಾಗೂ ಪಾರಮಾರ್ಥಿಕತೆಯ ಪರವಾಗಿರುತ್ತಾನೆ. ಇತಿಹಾಸದಲ್ಲಿ ಎಲ್ಲ ಮತಗಳೂ ಜೀವಾತ್ಮನ ಪ್ರಸನ್ನತೆ ಹಾಗೂ ರಕ್ಷಣೆಯ ಸಾಧನಗಳು. ಯಾವೊಂದು ಮತವು ದೇವರನ್ನು ಪರಿಪೂರ್ಣವಾಗಿ ಅರಿತಿಲ್ಲ ಹಾಗೂ ಅರಿಯಲು ಸಾಧ್ಯವಿಲ್ಲ. ಆದರೂ ನಮ್ಮ ಜೀವನದ ಅಂತಿಮ ಗುರಿ ದೇವರು. ಆದ್ದರಿಂದ ನಾವು ಎಲ್ಲ ಮತಗಳನ್ನು ಸಮಾನ ದೃಷ್ಟಿಯಿಂದ ಕಾಣಬೇಕು.
ನಾ: ನಾನೇ ಜೀವಾತ್ಮ. ಜೀವಂತಿಕೆಯತ್ತಲೇ ನನ್ನ ಮನ ತುಡಿಯುವುದು. ಜೀವನದ ಗುರಿಯೆಂದರೆ ಮನುಷ್ಯ ಮನುಷ್ಯನಾಗಿ ಬಾಳುವುದು ಹಾಗೂ ಇನ್ನೊಬ್ಬ ಮನುಷ್ಯನನ್ನು ಮನುಷ್ಯನಂತೆಯೇ ಕಾಣುವುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet