ಸಂಪತ್ತಿನ ಬೀಜ, ಸಸಿ ಮತ್ತು ವೃಕ್ಷಗಳ ಪುರಾಣ ಕಥೆ! (ಆಧುನಿಕ ನೀತಿ ಕಥೆ)

ಸಂಪತ್ತಿನ ಬೀಜ, ಸಸಿ ಮತ್ತು ವೃಕ್ಷಗಳ ಪುರಾಣ ಕಥೆ! (ಆಧುನಿಕ ನೀತಿ ಕಥೆ)

ಅದೊಂದು ಆರಂಭದ ಸಂಧಿಕಾಲದಲ್ಲಿ ದಟ್ಟವಾದ ಕಾಡೊಂದರಲ್ಲಿ ಒಬ್ಬ ಅಮೇರಿಕನ್ನು, ಒಬ್ಬ ಚೀಣಿ ಹಾಗೂ ಒಬ್ಬ ಭಾರತೀಯ ನಾಗರೀಕರು ದೇವನನ್ನೊಲಿಸಲು ತಪಸ್ಸು ಮಾಡಲು ಕುಳಿತರು. ನಿಜ ಹೇಳುವುದಾದರೆ ಅವರನ್ನೆಲ್ಲ ಅವರವರ ಸರಕಾರಗಳೆ ಪ್ರತಿನಿಧಿಯಾಗಿ ಕಳಿಸಿದ್ದುದ್ದು. ಹೇಗಾದರೂ ಮಾಡಿ, ದೇವರನ್ನೊಲಿಸಿ ವರ ಪಡೆದು ಬಂದು ತಂತಮ್ಮ ದೇಶಗಳನ್ನು ಅಸೀಮ ಸಂಪದ್ಭರಿತವಾಗಿಸಬೇಕೆನ್ನುವ ಲೆಕ್ಕಾಚಾರ ಎಲ್ಲರದು. ಆ ಆದಿ ಕಾಲದಲ್ಲಿ ಎಲ್ಲರಿಗೂ 'ದೊಡ್ಡ' ದೇವರು ಒಬ್ಬನೆ ಇದ್ದುದರಿಂದ ಯಾವುದೆ ಬಗೆಯ ಗೊಂದಲವೂ ಇರಲಿಲ್ಲ ; ಒಂದೆ ದೈವ, ಒಂದೆ ಮಂತ್ರ, ಒಂದೆ ಬೀಜಾಕ್ಷರದ ಜಪ, ಒಂದೆ ಭಾಷೆ ಇದ್ದ ಹಾಗೆ. ಹೀಗಾಗಿ ಎಲ್ಲರೂ ಒಂದೆ ಕಾಡಿನಲಿದ್ದ ಪವಿತ್ರವೆನಿಸಿದ್ದ ಗುಡ್ಡವೊಂದನ್ನು ಹತ್ತಿ ಸಮತಟ್ಟಾದ ಜಾಗವೊಂದನ್ನು ಆರಿಸಿಕೊಂಡಿದ್ದರು ಮತ್ತು ದಿನವೂ ನೋಡುವಷ್ಟು ಹತ್ತಿರ ಹತ್ತಿರವೆ ಇದ್ದರು ಕೂಡ

ಅಮೇರಿಕನ್ನನು ತನ್ನ ಧರ್ಮಕ್ಕನುಗುಣವಾಗಿ ಕ್ರಿಸ್ಮಸ್ ಮರವೊಂದನ್ನು ಹುಡುಕಿ ಅದರ ಪಕ್ಕದಲ್ಲೆ ಗುಡಾರ ಹಾಕಿ ಕುಳಿತಿದ್ದ. ಚೀಣಿ ವಾಮನನಿಗೆ ಅಲ್ಲೆ ಹುಲುಸಾಗಿ ಬೆಳೆದು ನಿಂತಿದ್ದ ಬಿದಿರು ಮೆಳೆಯ ಪಕ್ಕವೆ ಕುಟೀರ ಹಾಕಲು ಸೂಕ್ತವಾಗಿ ಕಂಡಿತ್ತು. ಭಾರತಿಯನಿಗೆ ಅಲ್ಲಿದ್ದ ಅಶ್ವತ ವೃಕ್ಷದ ನೆರಳೆ ಆಶ್ರಮದಂತಾಗಿ ಅಲ್ಲೆ ತಡಕಲಿನ ಮರೆ ಮಾಡಿಕೊಂಡು ತಪಸ್ಸಿಗೆ ಇಳಿದಿದ್ದ. ಎಲ್ಲಾ ಪಕ್ಕಪಕ್ಕದ ತಾಣಗಳನ್ನೆ ಆರಿಸಿಕೊಂಡಿದ್ದರಿಂದ ಬೇಕೆಂದಾಗ ಪರಸ್ಪರ ಭೇಟಿಗೆ, ಚರ್ಚೆಗೆ ಅವಕಾಶವಿದ್ದು ಕಾನನದ ಏಕತಾನತೆಯಿಂದ ಬಿಡುಗಡೆಯಾಗಲೊಂದು ದಾರಿ ಹುಟ್ಟಿಸಿದಂತಾಗಿತ್ತು. ಅಲ್ಲದೆ ತಾತ್ವಿಕ ಚರ್ಚೆಗೆ ಮಾತ್ರವಲ್ಲದೆ, ಜಿಜ್ಞಾಸೆಗಳೇನೆ ಹುಟ್ಟಿದರೂ ಪರಸ್ಪರ ಚರ್ಚಿಸಿ ಸಂದೇಹ ಪರಿಹರಿಸಿಕೊಳ್ಳುವ ಅವಕಾಶವೂ ಇತ್ತು. ಆದರೆ ಅವರಾರಿಗೂ ದೇವರನ್ನು ಒಲಿಸಲು ಹೇಗೆ ತಪಸ್ಸು ಮಾಡಬೇಕು, ಯಾವ ಕ್ರಮವನ್ನು ಅನುಸರಿಸಬೇಕು, ಏನು ಮಾಡಬೇಕೆಂಬ ಸ್ಪಷ್ಟ ಜ್ಞಾನವಿರಲಿಲ್ಲ. ಹೇಗಾದರೂ, ತಪ ಮಾಡಿ ದೇವರು ಪ್ರತ್ಯಕ್ಷವಾದರೆ ಸರಿ ಎಂಬುದಷ್ಟೆ ಗುರಿ.  ಪ್ರತ್ಯಕ್ಷವಾದರೂ ಕೇಳುವುದಾದರೂ ಏನೆಂಬ ನಿರ್ದಿಷ್ಟ ಅರಿವೂ ಇರಲಿಲ್ಲ. ಹೀಗೆಲ್ಲಾ ಸಾಕಷ್ಟು ಸಂದೇಹ, ಅಸ್ಪಷ್ಟತೆಗಳಿದ್ದರೂ ತಪಸ್ಸು ಮಾತ್ರ ನಿರಂತರವಾಗಿ ಸಾಗಿತ್ತು, ಅವರವರಿಗೆ ತೋಚಿದ ಮಟ್ಟಿಗೆ.
 
ಅವರಲ್ಲಿ ಭಾರತೀಯ ಪ್ರಜೆ ಮಹಾ ಮೇಧಾವಿ, ಚುರುಕುಮತಿ ಮೆದುಳಿನವನು; ಆದರೆ ಅಷ್ಟೆ ಭೋಳೆ ವ್ಯವಹಾರದಲ್ಲಿ. ಎಲ್ಲೆಲ್ಲಿಂದಲೊ ಹುಡುಕಿ, ಯಾರಾರಿಂದಲೊ ಸಂಪಾದಿಸಿ ತಂದಿತ್ತ ಓಲೆಗರಿ, ತಾಳೆಯೆಲೆ ತರದ ಗ್ರಂಥ ಬರಹಗಳನ್ನು ಹಗಲಿರುಳು ಓದುತ್ತಾ, ಅದರಲ್ಲಿರುವ ರಹಸ್ಯವನ್ನು ಬಿಡಿಸಲು ಯತ್ನಿಸುತ್ತ, ಹಾಗೆ ಅರ್ಥ ಮಾಡಿಕೊಂಡದ್ದನ್ನು ದಿನದಿನದ ತಪಸ್ಸಿನಲ್ಲಿ ಅಳವಡಿಸಿಕೊಂಡು ಮುಂದುವರೆದಿದ್ದ. ಕೆಲವೊಮ್ಮೆ ಅವನ ಎಣಿಕೆ ಸರಿಯಾಗಿರುತ್ತಿತ್ತು, ಕೆಲವೊಮ್ಮೆ ತಪ್ಪಾಗುತ್ತಿತ್ತು. ಹಾಗೆ ತಪ್ಪಾದ ಕಲಿಕೆಯನ್ನು ಮುಂದಿನ ದಿನದಿಂದ ಸರಿಪಡಿಸಿಕೊಂಡು ಮುಂದುವರೆಯುತ್ತಿದ್ದ. ಹೊಸ ಕಲಿಕೆಗಳೊಡನೆ ಈ ಕ್ರಿಯೆ ಸದಾ ಪುನರಾವರ್ತನೆಯಾಗುತ್ತಾ ಸಾಗಿದಂತೆ ಅವನ ಜ್ಞಾನಭಂಡಾರವೂ ಹೆಚ್ಚುತ್ತ ಸಾಗಿತ್ತು. ಅವನ ಅರ್ಥಮಾಡಿಕೊಂಡ ರೀತಿ ಸರಿಯಾಗಿದ್ದಲ್ಲಿ ಅವನ ಮುಖದಲ್ಲಿನ ತೇಜಸ್ಸಿನ ಪ್ರಖರತೆ ಹಾಗೂ ಕಂಡೂ ಕಾಣದಂತಿದ್ದ ಪ್ರಭಾವಳಿಯ ಪ್ರಖರತೆ ಹೆಚ್ಚುತ್ತಿತ್ತು; ತಪ್ಪೆಣಿಕೆಯಾಗಿದ್ದಲ್ಲಿ ಕುಗ್ಗುತ್ತಿತ್ತು. 
 
ಅಮೇರಿಕನ್ನನೊ ಪ್ರಚಂಡ ಬಂಡವಾಳಶಾಹಿ, ವಾಣಿಜ್ಯೋದ್ಯಮಿ ಮೆದುಳಿನ ವಕ್ತಾರ. ಬರಿ ತನ್ನದನ್ನು ಮಾತ್ರವಲ್ಲದೆ ಇತರರ ಮೆದುಳನ್ನು ಬಳಸಿ ವಾಣಿಜ್ಯೀಕರಣಿಸುವ ಮೇಧಾವಿ. ಮಂತ್ರ ತಂತ್ರ ಜಪಗಳಿಂದ ಮಾರು ದೂರವಿದ್ದರೂ ತನಗೆ ತಿಳಿದ ಹಾಗೆ ಮಾಡಿಕೊಂಡಿದ್ದಾನೆ. ಕೆಲವೊಮ್ಮೆ ಸುಮ್ಮನೆ ಭಾರತೀಯ ಮಾಡುವುದನ್ನೆಲ್ಲ ಕಣ್ಣುಮುಚ್ಚಿ ಅನುಕರಿಸುತ್ತಾನೆ; ಇನ್ನು ಕೆಲವೊಮ್ಮೆ ಅಷ್ಟಿಷ್ಟು ಅವನಿಂದಲೆ ಕೇಳುತ್ತಾನೆ, ತಿಳಿದುಕೊಳ್ಳುವ ಆಸಕ್ತಿ ತೋರುತ್ತಾನೆ. 
 
ಚೀನಿಯನದೊಂದು ತರಹ ಮಿಶ್ರ ಪ್ರಕೃತಿ. ತೀರಾ ಮೇಧಾವಿಯೆನ್ನುವಂತಿಲ್ಲ, ತೀರಾ ಮೂರ್ಖನೂ ಅಲ್ಲ. ಪಕ್ಕಾ ವ್ಯಾಪಾರಸ್ತ ಮನೋಭಾವ. ತನಗೇನು ತಿಳಿದಿದೆ, ತಿಳಿದಿಲ್ಲ ಎಂಬ ಬಗ್ಗೆ ತಲೆಯನ್ನೆ ಕೆಡಿಸಿಕೊಳ್ಳದ ಕುಶಾಗ್ರಮತಿ. ಅವನಿಗಾವ ಧರ್ಮ, ಮತದ ಬಲವಾದ ಹಿನ್ನಲೆಯಿಲ್ಲವಾಗಿ ತಪ ಜಪಗಳೆಲ್ಲ ಒಂದು ರೀತಿ ಅಪರಿಚಿತವೆ. ಆದರೆ ಒಂದು ವಿಷಯದಲ್ಲಿ ಮಾತ್ರ ಅವ ಪಕ್ಕಾ ಚತುರ; ತನಗೇನೂ ಗೊತ್ತಿರದಿದ್ದ ವಿಷಯದಲ್ಲಿ ಯಾರಾದರೂ ಏನಾದರೂ ಮಾಡುತ್ತಿದ್ದರೆ ಎಗ್ಗು ಸಿಗ್ಗಿಲ್ಲದೆ ಅವರು ಮಾಡುವುದನ್ನು ನಕಲು ಮಾಡಿಬಿಡುವ ಸಾಮರ್ಥ್ಯ. ಅದಕ್ಕೆ ಬೇಕಾದಂತೆ ದೇಹ ದಂಡನೆ ಮಾಡಿಕೊಳ್ಳುವ ಏಕಾಗ್ರತೆ, ಹಠಮಾರಿತನಗಳ ಜತೆ ಸಹ. ಹೀಗಾಗಿ, ಅವನು ಮಾಡುತ್ತಿದ್ದುದಿಷ್ಟೆ; ಪಕ್ಕದ ಭಾರತೀಯ ಆಶ್ರಮದಲ್ಲೇನಾಗುತ್ತಿದೆಯೆಂದು ದಿನಾ ನೋಡುವುದು ಮತ್ತು ಅದನ್ನೆ ಅಂಧಾನುಕರಣೆ ಮಾಡುವುದು. 
 
ಆದರೆ ದಿನೆ ದಿನೆ ನೋಡುತ್ತಿದ್ದಂತೆ ಭಾರತೀಯನ ತಪಸ್ಸು ಪರಿಪಕ್ವತೆ ಮತ್ತು ಪ್ರಬುದ್ಧತೆಯತ್ತ ಸಾಗುತ್ತಿರುವುದು ಅವರ ಅಂತರಾಳದ ಅರಿವಿಗೆ ಬರುತ್ತಿತ್ತು.  ಜತೆಗೆ ಅವರೆಷ್ಟೆ, ಏನೇ ಮಾಡಿದರೂ, ಅವನ ಮೊಗದಲ್ಲಿ ಹುಟ್ಟಿ, ಹೊಮ್ಮಿ ಬರುತ್ತಿದ್ದ ತೇಜಸ್ಸು, ಪ್ರಖರತೆ ಇವರಲ್ಲಿ ಕಾಣುತ್ತಲೂ ಇರಲಿಲ್ಲ, ಅದರ ಅನುಭವವೂ ಕೂಡ ಆಗುತ್ತಿರಲಿಲ್ಲ. ಒಂದು ದಿನ ಜತೆಗೂಡಿದ ಚೀಣಿ ಮತ್ತು ಅಮೇರಿಕನ್ನರಿಬ್ಬರು ಇದರ ಕುರಿತೆ ಚರ್ಚಿಸತೊಡಗಿದರು. ಮೇಲ್ನೋಟಕ್ಕೆ ಒಂದೆ ತರಹ ಕಾಣುತ್ತಿದ್ದರೂ ಅವರು ಮಾಡುತ್ತಿದ್ದ ಜಪತಪದಲ್ಲಿ ಮತ್ತದರ ಫಲಿತಾಂಶಗಳಲ್ಲಿ ಅಗಾಧ ವ್ಯತ್ಯಾಸವಿರುವುದು ಎದ್ದು ಕಾಣುತ್ತಿತ್ತಲ್ಲ? ಸರಿ, ಈ ತಪ ಮಾಡುವುದರ ಕುರಿತು ಅವನನ್ನೆ ಕೇಳಿ ತಿಳಿದುಕೊಳ್ಳುವುದು ಸರಿಯೆಂಬ ನಿರ್ಧಾರಕ್ಕೆ ಬಂದು ಅವನ ಮುಂದೆ ನಿಂತರು. 
 
ಮೊದಲೆ ಈ ಭಾರತೀಯ ಧರ್ಮ ಕರ್ಮ ಸಿದ್ದಾಂತದ ಮುಂದಾಳು. ದಯೆ, ಕರುಣೆ, ನ್ಯಾಯ,ನೀತಿ, ಉಪಕಾರಗಳನ್ನೆ ಧರ್ಮವೆಂದು ತಿಳಿದುಕೊಂಡವನು. ಇವರಿಬ್ಬರೂ ಬಂದಾಗ ನೀರು, ಹಣ್ಣುಗಳನ್ನಿತ್ತು ಆದರಿಸಿ, ಉಪಚರಿಸುತ್ತಾ ವಿಷಯವೇನೆಂದು ಕೇಳಿದನು. ಅವರಿಬ್ಬರೂ ತಮ್ಮ ತಪಸ್ಸಿಗಾಗುತ್ತಿರುವ ಖೇದಕರ ಪರಿಣಾಮ ಮತ್ತು ಪ್ರಗತಿಯಿಲ್ಲದ ಪರಿಸ್ಥಿತಿಯನ್ನು ವಿವರಿಸುತ್ತಾ, ಹಾಗಿಲ್ಲದ ಅವನ ತಪದ ಸುಸ್ಥಿತಿಗೆ ಅವನನ್ನು ಅಭಿನಂದಿಸುತ್ತಾರೆ; ಮತ್ತು ಅದರ ರಹಸ್ಯವೇನಿರಬಹುದೆಂದು ಅಚ್ಚರಿ ವ್ಯಕ್ತಪಡಿಸುತ್ತ ಅವನು ತಮಗಿಬ್ಬರಿಗೂ ಗುರುವಾಗಬಹುದೆ ಎಂದು ವಿನಮ್ರವಾಗಿ ಪ್ರಾರ್ಥಿಸುತ್ತಾರೆ. 
 
ಮೊದಲೆ ಸಂಕೋಚದ ಭಾರತೀಯ ಈ ಹೊಗಳಿಕೆಯಿಂದ ಇನ್ನೂ ಹೆಚ್ಚು ಸಂಕೋಚದ ಮುದ್ದೆಯಾಗಿಬಿಟ್ಟು, ತಾನಿನ್ನೂ ಪರರಿಗೆ ಗುರುವಾಗುವಷ್ಟು ಪರಿಪಕ್ವತೆ ಸಾಧಿಸದಿರುವುದರಿಂದ ಅವರಿಗೆ ಗುರುವಾಗುವ ಆಹ್ವಾನ ಸಲ್ಲದು, ತಕ್ಕದ್ದಲ್ಲ ಎಂದು ನಯವಾಗಿಯೆ ತಿರಸ್ಕರಿಸುತ್ತಾನೆ. ಬದಲಿಗೆ, ತಾನು ಓದಿ ಕಂಡುಹಿಡಿದುಕೊಂಡ ರಹಸ್ಯವನ್ನೆಲ್ಲ ಬರೆದಿಟ್ಟ ಟಿಪ್ಪಣಿಯ ಪುಸ್ತಕವೊಂದು ತನ್ನಲ್ಲೆ ಇದೆ. ತಾನು ಈಗಾಗಲೆ ಎಲ್ಲಾ ಮನನ ಮಾಡಿಕೊಂಡಿರುವುದರಿಂದ ಇನ್ನದರ ಅವಶ್ಯತೆ ತನಗಿಲ್ಲವಾಗಿ, ಅವರಿಗೆ ಬೇಕಿದ್ದರೆ ಪುಕ್ಕಟೆ ಕೊಟ್ಟುಬಿಡುವ ಮಾತಾಡುತ್ತಾನೆ.
 
ಸರಿ, ವೈದ್ಯರು ಹೇಳಿದ್ದು - ರೋಗಿ ಬಯಸಿದ್ದು ಎರಡೂ ಒಂದೆ ಆದ ಮೇಲೆ ಹೇಳಲೇನಿದೆ? ಕುಣಿದಾಡುವಷ್ಟು ಖುಷಿಯಾದರೂ ತೋರಿಸಿಕೊಳ್ಳದೆ ಸಂತೋಷದಿಂದ ಮತ್ತು ಅಷ್ಟೆ ನಿರ್ಭಾವದಿಂದ ಒಪ್ಪಿಕೊಂಡಂತೆ ಆ ಟಿಪ್ಪಣಿಯ ಪುಸ್ತಕ ಪಡೆಯುತ್ತ, ನಮಸ್ಕರಿಸಿ ಹೊರಡುತ್ತಾರೆ. ಇಬ್ಬರಿಗೂ ಬೇಕಲ್ಲಾ? ಹೀಗಾಗಿ ಒಂದು ದಿನ ಚೀಣಿಯೂ ಮತ್ತೊಂದು ದಿನ ಅಮೇರಿಕನ್ನನು ಉಪಯೋಗಿಸುವುದೆಂದು ಒಪ್ಪಂದ ಮಾಡಿಕೊಳ್ಳುತ್ತಾರೆ. ಮೊದಲ ದಿನ ಚೀಣಿಯವನ ಪಾಲು; ಆತುರಾತುರದಲ್ಲಿ ತನ್ನ ಕುಟೀರಕ್ಕೊಯ್ದು ಸರಸರನೆ ಬಿಚ್ಚಿ ನೋಡುತ್ತಾನೆ....ತಟ್ಟನೆ ಕಾದಿದ್ದ ಆತುರದ ಅವಸರವೆಲ್ಲ ನಿರಾಶೆಯಾಗಿ ಮಾರ್ಪಾಡಾಗುತ್ತದೆ - ಅಲ್ಲಿರುವ ಯಾವ ಅಕ್ಷರವೂ ಅವನಿಗೆ ತಿಳಿದ ಭಾಷೆಯಲ್ಲಿಲ್ಲ! ಅಂದರೆ, ಆ ಪುಸ್ತಕವಿದ್ದರೂ, ಯಾರಾದರು ಓದುವವರಿಲ್ಲದಿದ್ದರೆ, ವಿವರಿಸದಿದ್ದರೆ ಅದರಿಂದಾವ ಪ್ರಯೋಜನವೂ ಇಲ್ಲ. ಸರಿ, ಪುಸ್ತಕವನೆತ್ತಿಕೊಂಡು ಅಮೇರಿಕನ್ನನ ಹತ್ತಿರ ಓಡುತ್ತಾನೆ. 
 
ಅಮೇರಿಕನ್ ಮೇಧಾವಿಗೆ ಈ ಭಾರತೀಯ ಭಾಷೆ ಗೊತ್ತು. ಹೀಗಾಗಿ ಮತ್ತೆ ಅವನ ಬಾರಿಯೆ ಮೊದಲಾಗುತ್ತದೆ. ಅಲ್ಲದೆ ಅವನು ಅದನ್ನು ಓದುವ ಹೊತ್ತಲ್ಲೆ ಚೀಣಿಯೂ ಅಲ್ಲಿದ್ದು ಉಚ್ಚರಿಸಲು ಕಲಿತುಕೊಳ್ಳುವ ಒಪ್ಪಂದಕ್ಕೆ ಬರುತ್ತಾರೆ. ಬದಲಾಗಿ ಅಮೇರಿಕನ್ನನ ದಿನದೆಷ್ಟೊ ಕೆಲಸಗಳನ್ನು ಚೀಣಿ ವಿದ್ಯಾರ್ಥಿ ಮಾಡಿಕೊಡತೊಡಗುತ್ತಾನೆ, ಅವನ ಚೇಲನ ಹಾಗೆ. ಹಾಗೆಯೆ ಕಲಿಯುವ ಹೊತ್ತಲ್ಲಿ ಉಚ್ಚಾರಣೆಯನ್ನೆಲ್ಲಾ ಹಾಗೆಯೆ ಚೀಣಿ ಭಾಷೆಯಲ್ಲಿ ಬರೆದುಕೊಳ್ಳುತ್ತ ಹೋಗುತ್ತಾನೆ, ತನ್ನ ನಂತರದ ಅಭ್ಯಾಸಕ್ಕಾಗಿ (ನಿಮಗೊಂದು ವೇಳೆ ಚೀಣಿ ಭಾಷೆ ಬಂದು, ಈ ಪುಸ್ತಕದ ಪ್ರತಿಯೇನಾದರೂ ಸಿಕ್ಕಿ, 'ಅರೆ! ನಮ್ಮ ಮಂತ್ರದ ಹಾಗೆ ಇದೆಯಲ್ಲಾ' ಅನಿಸಿದರೆ , ಅದರ ಮೂಲ ಕಾರಣ ಏನೆಂದು ನಿಮಗೆ ಈಗ ಗೊತ್ತಾಗಿರಬೇಕಲ್ಲಾ?). ಹೀಗಾಗಿ, ಅವನ ದಿನವೆಲ್ಲ ಅಮೇರಿಕನ್ನನ ಸೇವೆ ಹಾಗೂ ಅವನು ಓದುವಾಗ ಕಲಿಯುತ್ತಾ ಬರೆದಿಟ್ಟುಕೊಳ್ಳುವುದರಲ್ಲೆ ಮುಗಿದು ಹೋಗುತ್ತದೆ. ಇನ್ನು ಆಚರಣೆಗಿಡುವ ಹೊತ್ತಾದರೂ ಯಾವಾಗ? ಆದರವನು ಹೇಳಿ ಕೇಳಿ ಚೀಣಿ ಪ್ರಜೆ  - ಬೇರೆ ಏನಿಲ್ಲದಿದ್ದರೂ ಕಷ್ಟದ, ಸೋಮಾರಿತನವಿಲ್ಲದ ಪರಿಶ್ರಮದ ದುಡಿಮೆ ಅವರ ಜನ್ಮಜಾತ ಆಸ್ತಿ; ದಿನವೆಲ್ಲ ಕಳೆದರೂ ರಾತ್ರಿಯಿದ್ದೆ ಇದೆಯಲ್ಲ? ಅರ್ಧಕ್ಕರ್ಧ ನಿದ್ದೆ ಮಾಡುತ್ತ ಉಳಿದರ್ಧ ತಪ, ಜಪ, ಮಂತ್ರೋಚ್ಚಾರ ಸಾಧನೆಯಲ್ಲಿ ಕಳೆಯುತ್ತಾನೆ.
 
ಹೀಗೆ ಕಾಲವುರುಳುತ್ತ ವರ್ಷಾಂತರಗಳ ಹಂದರ ದಾಟಿ ಅವರ ತಪಗಳು ಫಲಿತವಾಗುವ ದಿನ ಹತ್ತಿರವಾಗುತ್ತಿವೆ. ಭಾರತೀಯನ ತಪನೆ ಅತ್ಯುಗ್ರ ಮತ್ತು ಅತಿ ಪ್ರಬುದ್ಧ ಸ್ಥಿತ್ಯಂತರತೆಯಲಿ ಸಿಲುಕಿ ಪ್ರಕಾಶಿಸುತ್ತಲಿದೆ - ಲಕಲಕನೆಂದು ಹೊಳೆವ ಮೊಗದ ತೇಜಸ್ಸೆ ಹೇಳುವ ಹಾಗೆ. ಕತ್ತರಿಸದೆ ಬೆಳೆದು ಒಣಗಿ ನಿಂತ ಕೂದಲೆಲ್ಲ ಜಟೆಯಾಗಿ, ಉದ್ದ ಬೆಳೆದ ಗಡ್ಡ ಮೀಸೆಗಳೆಲ್ಲ ದಟ್ಟ ಪೊದೆಗಳಂತಾಗಿ ಅವನಿಗೆ ಋಷಿಯೊಬ್ಬನ ಕಳೆ ತಂದುಕೊಟ್ಟುಬಿಟ್ಟಿವೆ. ಬದಲಿಗೆ ಅಮೇರಿಕನ್ನನು ಮಾತ್ರ ಆಗ್ಗಾಗೆ ಗಡ್ಡ, ಮೀಸೆ ಮಾಡಿಸುತ್ತ ಇರುವುದರಿಂದ ತನ್ನ ಹಳೆ ಅವತಾರವನ್ನು ಹಾಗೆ ಕಾಪಾಡಿಕೊಂಡು ಬಂದಿದ್ದಾನೆ. ಅಲ್ಲದೆ ಒಪ್ಪಂದ ರೀತ್ಯ ಈ ಕೆಲಸವೆಲ್ಲ ಮಾಡಲು ಹೇಗೂ ಚೀನಿ ಶಿಷ್ಯ ಇದ್ದೆ ಇದ್ದಾನಲ್ಲ? ಇನ್ನು ಚೀನಿ ವಾಮನನಿಗೆ ಇದರ ತೊಂದರೆಯೆ ಇಲ್ಲ - ಅವನದೊ ಸದಾ ನುಣ್ಣಗೆ ಬೋಳಿಸಿದ, ಗುಂಡನೆಯ ತಲೆ. ಅದು ಯಾವಾಗಲೂ ಹಾಗೆ ಇರುವುದು ಅಮೆರಿಕನ್ನನಿಗೂ ಅಚ್ಚರಿ - ಎಂದೂ ಬೋಳಿಸಿದ್ದು ಅಥವಾ ಕ್ಷೌರ ಮಾಡಿದ್ದು ನೋಡಿರದ ಇವ ಅದು ಹೇಗೆ ಕೂದಲೆ ಬೆಳೆಯದಂತೆ ಕಾಪಾಡಿಕೊಂಡಿರುವನಲ್ಲಾ, ಎಂದು! ಆದರೆ, ಚೀನಿ ವಾಮನ ಗುಟ್ಟು ಬಿಟ್ಟುಕೊಟ್ಟಿಲ್ಲ. ಅದೇನು ಯಾವುದಾದರು ಚೈನಿ  ತೈಲವೊ, ಸೊಪ್ಪು ಮೂಲಿಕೆ ಹಚ್ಚುತ್ತಾನೊ ಅಥವಾ ಕಾಡಿನಲ್ಲೆ ಏನಾದರೂ ಔಷಧಿ ಕಂಡುಕೊಂಡಿದ್ದಾನೊ ಯಾರಿಗೂ ಗೊತ್ತಿಲ್ಲ. ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಂಡೂ ಇಲ್ಲ; ಅಮೇರಿಕನ್ನನಿಗೆ ತನ್ನ ಕ್ಷೌರವಾದರೆ ಸಾಕು, ಭಾರತಿಯನಿಗೊ ಅದರ ಅಗತ್ಯವೆ ಇಲ್ಲ. ಹೀಗಾಗಿ ಮೂವರ ನಡುವೆ ಒಂದು ರೀತಿಯ ನಿರ್ಲಿಪ್ತ ಸಮತೋಲನವೇರ್ಪಟ್ಟು ಸ್ವನಿಯಂತ್ರಿತ ಯಂತ್ರದ ಹಾಗೆ ನಡೆಯುತ್ತಿದೆ. 
 
ಮೇಲಿಂದ ದೇವರೂ ಗಮನಿಸಹತ್ತಿದ್ದಾನೆ - ಇವರ ತಪಸ್ಸಿನ ಪ್ರಭೆ, ಅದರಲ್ಲೂ ಭಾರತೀಯನ ತಪೋ ತೇಜೊತ್ಪನ್ನ ಜ್ಯೋತಿ ಆಗಲೆ ಎಲ್ಲೆಡೆಗೂ ಹರಡಿ ಮೂರು ಲೋಕಗಳಲ್ಲೂ ಕಾವೇರಿಸಿ, ಬಿಸಿ ಹುಟ್ಟಿಸಲು ಆರಂಭಿಸಿದೆ. ಇನ್ನಿಬ್ಬರು ಆ ಮಟ್ಟ ಮುಟ್ಟಿರದಿದ್ದರೂ, ಒಟ್ಟಾಗಿ ಸೇರಿದ ಮೂರು ಪ್ರಭೆಗಳ ಸಂಯುಕ್ತ ಶಕ್ತಿಯಿಂದಾಗಿ ಆಗಲೆ ತಲ್ಲಣ ಶುರುವಾಗಿದೆ. ಇನ್ನು ತಡಮಾಡುವುದು ಉಚಿತವಲ್ಲವೆಂದು ನಿರ್ಧರಿಸಿ, ಕೆಳಗಿಳಿದು ಬಂದು ವರ ಕೊಟ್ಟೆಬಿಡಲು ಹೊರಡುತ್ತಾನೆ. ಮೂವ್ವರನ್ನು ಒಟ್ಟಾಗಿ ನೋಡಿ ವರವೀಯುವುದೆಂದು ನಿರ್ಧರಿಸಿದ್ದರೂ, ಮೊದಲು ಭಾರತೀಯನಿಗೆ ವರಕೊಟ್ಟ ನಂತರವೆ ಮತ್ತಿಬ್ಬರಿಗೆ ವರ ನೀಡುವುದೆಂದು ತೀರ್ಮಾನಿಸಿ ಹೊರಡುತ್ತಾನೆ. ಎರಡನೆಯವನಾಗಿ ಚೀನಿ ವಾಮನ ಹಾಗೂ ಮೂರನೆಯವನಾಗಿ ಅಮೇರಿಕನ್ ದೈತ್ಯನ ಆದ್ಯತೆಯೆಂದು ಆಗಲೆ ಗುರುತಿಟ್ಟುಕೊಂಡೆ ತಪಸ್ಸು ನಡೆದಿರುವ ಜಾಗಕ್ಕೆ ಬರುತ್ತಾನೆ.
 
ಬಂದವನೆ ನೇರ ಭಾರತೀಯನ ಆಶ್ರಮದ ಮುಂದೆ ಪ್ರತ್ಯಕ್ಷನಾಗಿ ಅವನ ಮೈದಡವುತ್ತ ಮೇಲೆಬ್ಬಿಸುತ್ತಾನೆ ಭಗವಂತ. ನಮ್ಮವ ತಬ್ಬಿಬ್ಬು - ಆಶ್ಚರ್ಯ, ಸಂತೋಷಗಳಿಂದ ಮಾತು ಬರದ ಮೂಕನಂತಾಗಿಬಿಟ್ಟು ಧಾರಾಕಾರವಾಗಿ ಆನಂದ ಭಾಷ್ಪವನ್ನು ಸುರಿಸುತ್ತ ಹರ್ಷಾಂಜಲಿಯಿಂದ ನಮಿಸಿ ಕಾಲಿಗೆ ಬೀಳುತ್ತಾನೆ. ಭಗವಂತನ ದರ್ಶನವೆ ಅವನೆಲ್ಲ ಬಯಕೆಗಳನ್ನು ತೀರಿಸಿದ ಸಂಜೀವಿನಿಯಂತಾಗಿಬಿಟ್ಟು ನಂಬಲಾಗದವನಂತೆ ಅವನನ್ನೆ ನೋಡುತ್ತಾ ಅವನ ಸುತ್ತಲೂ ಸುತ್ತುತ್ತಾನೆ. ನಸುನಕ್ಕ ದೇವನು, ' ಭಕ್ತ, ತಡವಾದರೆ ಒಳಿತಲ್ಲ..ನಿನ್ನ ತಪ ಕೊನೆಗೂ ನನ್ನನ್ನಿಲ್ಲಿ ಸೆಳೆದು ತಂದಿದೆ. ಬೇಕೇನು ವರ ಕೇಳಿಕೊ, ಕೊಟ್ಟು ನಿನ್ನ ತಪದಗ್ನಿಯನ್ನು ಶಮನ ಮಾಡಿ ಲೋಕದುರಿಯನ್ನು ತಗ್ಗಿಸಬೇಕಾಗಿದೆ' ಅನ್ನುತ್ತಾನೆ. 
 
ಅರೆ! ಅಷ್ಟೊತ್ತಿಗೆ, ಅದೆಷ್ಟೊ ವರ್ಷಗಳೆ ಕಳೆದು ಹೋದಂತಾಗಿ ಅವನಿಗೆ ತಾನು ತಪಕ್ಕೆ ಕುಳಿತ ಉದ್ದೇಶವೆ ಮರೆತುಹೋಗಿದೆ. ತಪೋಸಿದ್ದಿಯ ಜ್ಞಾನ ಪ್ರಖರತೆ ದೈಹಿಕ ಮತ್ತು ಐಹಿಕ ಕಾಮನೆಗಳನ್ನೆಲ್ಲಾ ಸುಟ್ಟುಹಾಕಿ ಬರಿಯ ಪಾರಮಾರ್ಥಿಕ ಚಿಂತನೆಯಷ್ಟನ್ನೆ ಉಳಿಸಿ ಆಧ್ಯಾತ್ಮಿಕದತ್ತ ಮಗ್ಗುಲು ಬದಲಿಸುವಂತೆ ಮಾಡಿಬಿಟ್ಟಿದೆ. ಆದರೂ ನಿಧಾನವಾಗಿ ತಾನು ಬಂದ ಮೂಲ ಉದ್ದೇಶದ ನೆನಪಾಗುತ್ತದೆ ಮತ್ತು ತಪದ ಕಾರಣವೂ ನೆನಪಾಗುತ್ತದೆ. ತನ್ನ ನಾಡಿಗೆ, ದೇಶಕ್ಕೆ ತಾನು ಮಾಡಬೇಕಿರುವ ಕರ್ತವ್ಯದ ಕರೆ ಮರೆತ ನೆನಪನ್ನೆಲ್ಲ ಜಾಗೃತಗೊಳಿಸಿದಾಗ, ಭಗವಂತನಲ್ಲಿ ತನ್ನ ದೇಶದ ಬೇಡಿಕೆಯನ್ನು ನಿವೇದಿಸಿಕೊಳ್ಳುತ್ತಾನೆ - ದೇಶ ಸಂಪದ್ಭರಿತವಾಗುವುದು ಹೇಗೆ ಎಂಬ ಪ್ರಶ್ನೆಯೊಂದಿಗೆ. ಉಳಿದಿಬ್ಬರೂ ಅದೆ ಉದ್ದೇಶದೊಂದಿಗೆ ತಪಸ್ಸು ಮಾಡುತ್ತಿದ್ದಾರೆಂದು ಹೇಳುತ್ತಾನೆ ಸಹ. 
 
ದೇವರು ಸ್ವಲ್ಪ ಹೊತ್ತು ಆಲೋಚಿಸಿ, " ಮಗನೆ, ಸಂಪತ್ಭರಿತವಾಗಲೆಂದರೆ ನನ್ನಲ್ಲಿ ಮೂರು ಆಯ್ಕೆಗಳಿವೆ..."
 
"ಮೊದಲನೆಯದು 'ಸಂಪತ್ತಿನ ವೃಕ್ಷ ಅಥವಾ ಸಂಪತ್ವೃಕ್ಷ'. ಇದು ಬೆಳೆದು ಫಲಫುಷ್ಪ ಬಿರಿದು ನಿಂತ ತುಂಬಿ ತುಳುಕುವ ಸಂಪತ್ಮರ. ಅಂದರೆ, ಈ ಮರವನ್ನು ಕೊಂಡೊಯ್ದರೆ, ಏನೂ ಮಾಡದಿದ್ದರೂ ಅದರಲ್ಲಿರುವ ಫಲ ಫುಷ್ಪಗಳನ್ನು ಹೆಕ್ಕಿದರೆ ಸಾಕು ಇಡಿ ಭೂ ಮಂಡಲವನ್ನೆ ಶ್ರೀಮಂತವಾಗಿಸುವಷ್ಟು ಐಶ್ವರ್ಯ, ಸಂಪತ್ತನ್ನು ಒದಗಿಸಿಬಿಡುತ್ತದೆ ಈ ಮರ. ಆದರೆ..."
 
"ಆದರೆ...?"
 
"ಇದೊಂದು ಬಂಜೆ ಮರವಿದ್ದ ಹಾಗೆ. ಇದು ಎಲ್ಲಿಯತನಕ ಜೀವಂತವಿರುವುದೊ ಅಲ್ಲಿಯತನಕ ಫಲಾಹಾರ ಕೊಡಬಲ್ಲುದಾದರೂ, ಇದು ಹೊಸ ಬೀಜಗಳನ್ನಾಗಲಿ, ಸಸಿಯನ್ನಾಗಲಿ ಹುಟ್ಟಿಸಲಾಗದು....ಈ ಉತ್ಪತ್ತಿಯಾದ ಸಂಪತ್ತನ್ನು ಇರುವತನಕ ಬಳಸಿ, ಅದರಿಂದ ಬೇರೆ ತರದ ಉತ್ಪತ್ತಿಗೆ ಅವಕಾಶ ಮಾಡಿಕೊಳ್ಳಲಷ್ಟೆ ಸಾಧ್ಯವೇ ಹೊರತು ಇದೇ ಮತ್ತೊಂದು ಮರಕ್ಕೆ ಜನ್ಮವೀಯಲು ಆಗದು..."
 
"ಎರಡನೆಯದು...?"
 
"ಎರಡನೆಯದು..'ಸಂಪತ್ತಿನ ಸಸಿ ಅಥವಾ ಸಂಪತ್ಸಸಿ'....ಇದರಲ್ಲಿ ಎಂಟು ದಿಕ್ಕಿಗಾಗುವಂತೆ ಎಂಟು ಸಸಿಗಳಿವೆ..ದಿಕ್ಕಿಗೊಂದೊಂದು ಗಿಡದಂತೆ. ಇದು ಉಪಯೋಗಕ್ಕೆ ಸಿದ್ದ ಸ್ಥಿತಿಯಲ್ಲಿಲ್ಲವಾದರೂ, ಇದನ್ನು ಒಯ್ದು ನೆಟ್ಟು ಬೆಳೆಸಿದರೆ ಎಂಟು ಸಸಿಗಳು ಎಂಟು ಮರವಾಗುತ್ತವೆ ಮತ್ತು ಮೊದಲಿನದಕ್ಕಿಂತ ಎಂಟರಷ್ಟು ಹೆಚ್ಚು ಉತ್ಪನ್ನವಾಗುತ್ತದೆ. ಆದರೆ, ಇದು ಬೆಳೆದು ಫಲ ಕೊಡುವ ತನಕ ಕಾಯಬೇಕು ; ಅಲ್ಲದೆ, ಇವು ಸಹ ಬಂಜೆ ಮರಗಳು. ಇದರ ಫಲಪುಷ್ಪವನ್ನು ಅನುಭವಿಸಲು ಸಾಧ್ಯವೇ ಹೊರತು, ಇದರಿಂದ ಮುಂದಿನ ಪೀಳಿಗೆ ಹುಟ್ಟಿಸಲಾಗದು. ಬರಿ ಜಾಣತನದಿಂದ ಈ ಸಂಪತ್ತನ್ನು ಬಳಸುತ್ತ ಬೇರೆ ಸಂಪತ್ತನ್ನು ಕ್ರೋಢೀಕರಿಸಿದರೆ ಸಂಪದ್ಭರಿತತೆಯನ್ನು ಮುಂದುವರೆಸಬಹುದಷ್ಟೆ..."
 
" ಇನ್ನು ಮೂರನೆಯದು?"
 
"ಮೂರನೆಯದು 'ಸಂಪತ್ತಿನ ಬೀಜ ಅಥವ ಸಂಪತ್ಬೀಜ'. ಇದು ಬೀಜಾಕ್ಷರ ರೂಪದಲ್ಲಿ  ಅಥವಾ ಭೌತಿಕ ಬೀಜದ ರೂಪದಲ್ಲಿಯಾದರು ಇಟ್ಟುಕೊಳ್ಳುವ ಸಾಧ್ಯತೆಯುಂಟು. ಹೀಗಾಗಿ, ಬಿತ್ತುವ ಬೀಜವಾಗಿ ಬಳಸಿದರೆ ಗಿಡವಾಗಿ, ನಂತರ ಮರವಾಗಿ ಬೆಳೆದು ಸದಾ ಸಂಪತ್ತಿನ ಫಲ ಪುಷ್ಪಗಳನ್ನು ಕೊಡುವುದು ಮಾತ್ರವಲ್ಲದೆ, ಹೊಸ ಬೀಜಗಳನ್ನು ಸಹ ಸೃಷ್ಟಿಸುವುದರಿಂದ ಇದರ ಫಲ ನಿರಂತರ ಚಕ್ರವಾಗಿ ಅನಿಯಂತ್ರಿತವಾಗಿ ಮತ್ತು ಸ್ವಾಭಾವಿಕವಾಗಿಯೆ ಮುಂದುವರೆಯಬಲ್ಲದು."
 
"ಅರ್ಥವಾಯಿತು ದೇವ...ಇದು ಸ್ವಯಂಭು ಸ್ವರೂಪ...ಆದರೆ ಬೀಜಾಕಾರ ಸಸಿಯಿಂದ, ಗಿಡವಾಗಿ, ಮರವಾಗಿ ಫಲದಾಯಿಯಾಗುವ ಹೊತ್ತಿನತನಕ ಕಾಯಬೇಕು..ಅಲ್ಲಿಯತನಕ ಸಂಪತ್ಭರಿತವಾಗಲಿಕ್ಕೆ ಅಸಾಧ್ಯವಾದ ಕಾರಣ ಕಾಯುವ ಸಹನೆಯಿರಬೇಕು...ಅಲ್ಲವೆ?"
 
ದೇವ ತುಸು ಹೊತ್ತು ಮೌನವಾಗಿದ್ದು ನುಡಿದ, " ಹೌದು ಮತ್ತು ಅಲ್ಲ..."
 
"ಅಂದರೆ..?"
 
" ಭೌತಿಕ ಬೀಜಗಳ ವಿಷಯದಲ್ಲಿ ನಿನ್ನ ಮಾತು ಸತ್ಯ...ಆದರೆ ಬೀಜಾಕ್ಷರ ರೂಪದಲ್ಲಿ ಬಳಸಲಿಚ್ಚಿಸಿದರೆ, ತಕ್ಷಣವೆ ಬಳಸಬಹುದು.."
 
"ಅದು ಹೇಗೆ ದೇವಾ?"
 
" ಈ ಬೀಜಾಕ್ಷರಗಳನ್ನು ಮಂತ್ರೋಪದೇಶದ ರೂಪದಲ್ಲಿ ಸೂಕ್ತ ಮಾನವ ಮೆದುಳಿಗೆ ಸ್ಮರಣ ಶಕ್ತಿಯಾಗುವಂತೆ ಸೇರಿಸಿಬಿಟ್ಟರೆ, ಆ ಮೆದುಳು ಮತ್ತದರ ಮುಂದಿನ ಸಂತತಿಗಳು ನಿರಂತರವಾಗಿ ಈ ಬೀಜಾಕ್ಷರ ಸಂಕೇತವನ್ನು ಹೊತ್ತು ಸಾಗಿಸುತ್ತ, ಬುದ್ಧಿಮತ್ತೆಯ ಶ್ರಿಮಂತಿಕೆಯನ್ನು ಹೆಚ್ಚಿಸುತ್ತಾ ಸಾಗುತ್ತದೆ. ಆ ಬುದ್ಧಿಮತ್ತೆಯನ್ನು ನಿರಂತರ ಚಿಲುಮೆಯಂತೆ ಬಳಸುತ್ತ ಐಶ್ವರ್ಯವನಾಗಿ ಬದಲಿಸಿದರೆ, ಸದಾ ಸಂಪದ್ಭರಿತವಾಗಿರಬಹುದು.."
 
ಭಗವಂತನ ಈ ಮಾತುಗಳನ್ನೆ ಕೇಳುತ್ತ ಆಲೋಚನಾಭರಿತನಾಗಿ ಕುಳಿತ ಭಕ್ತನನ್ನು ದಿಟ್ಟಿಸಿದ ದೇವ ನುಡಿದ, "ಮಗನೆ, ನಿನ್ನ ತಪಸ್ಸಿನ ಶಕ್ತಿ ಮತ್ತು ಪರಿಧಿ ಅವರಿಬ್ಬರಿಗಿಂತ ತೀಕ್ಷ್ಣವಾದದ್ದು..ನಿನ್ನೀ ನಿಸ್ವಾರ್ಥಪರತೆ ಮತ್ತು ದೃಢತೆಯನ್ನು ಮೆಚ್ಚಿ, ಈ ಮೂರು ದಾರಿಗಳನ್ನು ಮೂರು ವರಗಳನ್ನಾಗಿಸಿ ನಿನಗೆ ಕೊಟ್ಟುಬಿಡುತ್ತೇನೆ. ..ವೃಕ್ಷದಿಂದ ತಕ್ಷಣದ ಸಂಪತ್ತು ಸಾಧ್ಯವಾಗುತ್ತದೆ, ಸಸಿಗಳನ್ನು ಎಂಟು ಮೂಲೆಗೆ ನೆಟ್ಟರೆ ಅದು ಹಿನ್ನಲೆಯಲ್ಲಿ ಬೆಳೆಯುತ್ತ ಮುಂದಿನ ಭವಿಷ್ಯ ಕಾಯುತ್ತದೆ..ಮತ್ತು ಮೂರನೆ ದಾರಿಯಿಂದ ತೀರಾ ಆಚೆಗಿನ ಕಾಲಾವಧಿಯ ಭವಿಷ್ಯವೂ ಸುರಕ್ಷಿತವಾಗುತ್ತದೆ..."
 
ಈ ಭಕ್ತ ಮತ್ತಷ್ಟು ಹೊತ್ತು ಆಲೋಚಿಸಿದ ನಂತರ ನುಡಿದ, "ಭಗವಂತಾ...ನನಗೆ ಆ ಮೂರನೆಯ ವರ ಮಾತ್ರ ಕೊಡು ಸಾಕು...."
 
" ಯಾಕೆ ಮಗನೆ? ನಾನವರಿಗೆ ಬೇರೆಯದೆ ವರ ಕೊಡಬಲ್ಲೆ...ನೀನು ಮೂರನ್ನು ತೆಗೆದುಕೊ....."
 
"ಇಲ್ಲ ದೇವ...ಅವರು ಇಷ್ಟು ದಿನ ನನ್ನ ಹಾಗೆ ಇದೆ ಉದ್ದೇಶದಿಂದ ತಪಸ್ಸು ಮಾಡಿದವರು...ಒಟ್ಟಾಗಿ ಒಂದೆ ಕಡೆ ಕೂತು ತಪಗೈದಿದ್ದೇವೆ...ನನ್ನ ಸ್ವಾರ್ಥಪರತೆಯಿಂದ ಅವರಿಗೆ ದ್ರೋಹವಾಗುವುದು ಬೇಡ...ನನಗೆ ಮೂರನೆಯ ಶಕ್ತಿಯುತವಾದ ವರವೆ ಸಾಕು....ಅಲ್ಲದೆ ದಿಢೀರ ಐಶ್ವರ್ಯ ಬಂದವರ ಕಾಲು ನೆಲದ ಮೇಲೆ ನಿಲ್ಲುವುದು ಕಷ್ಟ..ಹಂತ ಹಂತವಾಗಿ ಬಂದರೆ ಅದರ ಬೆಲೆಯ ಅರಿವಿರುತ್ತದೆ... "
 
" ಸರಿ..ನಿನ್ನಿಷ್ಟಾ ಮಗನೆ..ನಾನಂತೂ ನಿನಗೆ ಮೊದಲ ಅವಕಾಶ ಮತ್ತು ಸ್ವಾತಂತ್ರ ಕೊಟ್ಟಿದ್ದೇನೆ...."
 
"ಅದಕ್ಕೆ ನಾನು ಚಿರಋಣಿ ಹಾಗೂ ಧನ್ಯ..ದೇವ..."
 
"ಸರಿ..ಇನ್ನು ನಿನ್ನಿಚ್ಚೆ....ತಥಾಸ್ತು ಮಗನೆ" ಎಂದವನೆ, ಅವನ ಕೈಗೊಂದು ಬೀಜವಿದ್ದ ಚೀಲವನ್ನಿಟ್ಟು, ಕಿವಿಯಲ್ಲಿ ಬೀಜಾಕ್ಷರ ಮಂತ್ರವನ್ನು ಉಸುರಿ, ಭೋಧಿಸಿ ಅಂತರ್ಧಾನನಾದ.
 
ಬಯಕೆ ತೀರಿ ವರ ಪಡೆದ ಹರ್ಷದೊಂದಿಗೆ ಭಾರತೀಯ ಭಕ್ತ ಈಗ ಮುನಿಶ್ರೇಷ್ಟನ ಅವತಾರದಲ್ಲಿ ಹೊರಡುವ ಸಿದ್ದತೆ ನಡೆಸಿದ. ಭಾರತಕ್ಕೆ ಹಿಂದಿರುಗಿದವನೆ ಅಲ್ಲೊಂದು ದೊಡ್ಡ ಆಶ್ರಮ ತೆರೆದು ಅಲ್ಲೆ ಈ ಬೀಜಗಳನ್ನೆಲ್ಲಾ ನೆಟ್ಟು ವೃಕ್ಷವಾಗಿಸುವುದರ ಜತೆಗೆ, ಗುರುಕುಲವೊಂದನ್ನು ಆರಂಭಿಸಿ ಯೋಗ್ಯರಿಗೆ ಮತ್ತು ಸೂಕ್ತರಾದವರಿಗೆ ಬೀಜಾಕ್ಷರ ಬೋಧಿಸುವ ಕಾಯಕವು ಅವನ ಮನದಾಲೋಚನೆಯಲ್ಲಿ ಸುಳಿದಾಡುತ್ತಿತ್ತು.
 
ಇತ್ತ ದೇವ ಎರಡನೆ ಭಕ್ತನಾಗಿ ಚೀಣಿ ವಾಮನನತ್ತ ನಡೆದ. ಯಥಾ ರೀತಿ ಉಭಯ ಕುಷಲೋಪರಿ ಸಂಭಾಷಣೆ ಆರಂಭವಾಯ್ತಾದರೂ, ಈ ಭಕ್ತ ನೇರ ವಿಷಯಕ್ಕೆ ಬಂದವನೆ, ತನ್ನ ಬೇಡಿಕೆ ಮುಂದಿಟ್ಟ. ಭಗವಂತ ತನ್ನಲುಳಿದ ಇನ್ನೆರಡು ಆಯ್ಕೆ ತೋರಿಸಿ ಅವುಗಳ ಗುಣಾವಗುಣಗಳನ್ನು ವಿವರಿಸಿ, ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊ ಎಂದ. ಎಂಟು ಸಸಿಯತ್ತ ಮತ್ತು ಒಂದು ಬೃಹತ್ ಮರದತ್ತ ನೋಡಿದ ಚೀಣಿ ಭಕ್ತ, ತನ್ನ ಆಯ್ಕೆ ಆಯ್ದುಕೊಳ್ಳುವ ಮೊದಲು, ಭಾರತೀಯ ಭಕ್ತನ ಆಯ್ಕೆಯ ಕುರಿತು ಕೇಳಿದ. ಪರಮಾತ್ಮ ಭೌತಿಕ ಬೀಜಗಳ ಕುರಿತು ವಿವರಿಸಿದ; ಬೌದ್ದಿಕ ಬೀಜಾಕ್ಷರದ ಕುರಿತು ಅವನ ತಪಶಕ್ತಿಯ ಅಳತೆಗೆ ಅದು ಹೇಗೂ ಮೀರಿದ್ದಾದ್ದರಿಂದ ಅದನ್ನು ವಿವರಿಸಲಿಲ್ಲ. 
 
ಚೀಣಿ ಭಕ್ತ ತುಸು ಚಿಂತಿತನಾದ...ಈಗಿರುವ ಆಯ್ಕೆಯಲ್ಲಿ ಯಾವುದೆ ಆಯ್ದುಕೊಂಡರೂ ಇದು ಅಲ್ಪಾಯುವೆ. ಭಾರತೀಯ ಭಕ್ತನ ವರದ ಹಾಗೆ ಭವಿಷ್ಯಕ್ಕೆ ಕಾಯದು. ಇದು ಏಕೊ ಸರಿ ಬರಲಿಲ್ಲ ಅವನಿಗೆ. ಹಾಗೂ ಹೀಗೂ ತುಸು ಆಲೋಚಿಸಿದ ಮೇಲೆ ಒಂದು ಪ್ರಳಯಾಂತಕ ಉಪಾಯ ಹೊಳೆಯಿತವನಿಗೆ!
 
"ತಿಯೆನ್ನಾ...(ಚೀನಿ ಭಾಷೆಯಲ್ಲಿ 'ಓ..ದೇವರೆ' ಎಂದರ್ಥ, 'ತಿಯನ್' ಮತ್ತು 'ನಾ' ಪದಗಳ ಸಂಯುಕ್ತ ರೂಪ ; ಆಕಾಶ ಎಂಬ ಮತ್ತೊಂದು ಅರ್ಥವೂ ಇದೆ)..ಈಗಿರುವ ಆಯ್ಕೆಯಲ್ಲಿ ಸದ್ಯಕ್ಕೆ ಸಂಪದ್ಭರಿತವಾಗುವ ಸಾಧ್ಯತೆಯಿದ್ದರೂ, ಈ ಬಂಜೆ ಮರ ಮತ್ತು ಸಸಿಗಳು ಭವಿತದ ದೃಷ್ಟಿಯಿಂದ ಯಾವ ಉಪಯೋಗಕ್ಕು ಬರುವುದಿಲ್ಲ....ಅದರಲ್ಲೂ ನಮ್ಮ ಸ್ವಾರ್ಥಜನ ಇರುವುದನ್ನೆಲ್ಲ ಬೇಗನೆ ಚೆನ್ನಾಗಿ ತಿಂದು ಉಂಡು ಮುಗಿಸಿಬಿಟ್ಟರೆ, ನಮ್ಮ ಮುಂದಿನ ಪೀಳಿಗೆಗೆ ಬಡತನವೆ ಗತಿ...."
 
"ಈಗ ಸಿಕ್ಕಿದ್ದನ್ನು ಸರಿಯಾಗಿ ಬಳಸಿಕೊಂಡರೆ ಹಾಗೆ ವೃದ್ಧಿಸಿಕೊಂಡರೆ ಬಡತನ ಬರದ ಹಾಗೆ ಕಾಪಾಡಬಹುದಲ್ಲಾ? ಅದೂ ಅಲ್ಲದೆ ನಿಮಗಿಬ್ಬರಿಗು ತಪಸ್ಸು ಮಾಡಲು ತೋರಿಸಿದ್ದೆ ಅವನೆಂದು ಮರೆಯದಿರಿ...ಅದಕ್ಕಾಗಿ ಅವನಿಗಿತ್ತ ವರ ನಿಮಗಿಂತ ಹೆಚ್ಚಿರಬೇಕಾದದ್ದು ಸಹಜವೆ ತಾನೆ?"
 
"ಅದು ಸರಿ..ತಿಯೆನ್ನಾ...ಆದರೆ, ನಮಗಿರುವ ಆಜ್ಞೆಯೆಂದರೆ, ಸದಾ ಸಂಪದ್ಭರಿತವಾಗುವ ಉತ್ತರ ಕೊಂಡು ತರಬೇಕೆಂದು...."
 
" ಭಕ್ತಾ..ಅದನ್ನು ನಾನರಿಯಬಲ್ಲೆ...ಆದರೆ ಈಗ ನನ್ನಲ್ಲಿರುವುದು ಇವೆರಡೆ ಆಯ್ಕೆ...ನಿನ್ನದೊ ಆ ಮೂರನೆಯವನಿಗಿಂತ ವಾಸಿ...ಅವನಿಗೆ ಒಂದೆ ಆಯ್ಕೆ - ಅದೂ ನೀನು ಬೇಡವೆಂದು ಬಿಟ್ಟಿದ್ದು ಮಾತ್ರ ಅವನಿಗೆ ದಕ್ಕುತ್ತದೆ..."
 
ಚೀನಿ ಭಕ್ತ ಮತ್ತಷ್ಟು ಹೊತ್ತು ಯೋಚಿಸಿದವನೆ ನುಡಿದ, " ಹಾಗಾದರೆ ಹೀಗೆ ವರ ಕೊಡು ತಿಯೆನ್ನಾ..ನನಗೆ ಆ ದೊಡ್ಡ ಒಂಟಿ ಮರ ಬೇಡ...ಈ ಎಂಟು ಸಸಿಯನ್ನೆ ಕೊಡು..ಅದನ್ನೆ ನಮ್ಮ ದೇಶದ ಏಂಟು ದಿಕ್ಕಲ್ಲಿ ನೆಡಿಸಿಬಿಡುತ್ತೇವೆ....ಆದರೆ...."
 
"ಆದರೇನು?..."
 
"ನನಗೆ ಇನ್ನೊಂದು ಈ ಸಸಿಗಳಿಗೆ ಸಂಬಂಧಿಸಿದ ವರವೂ ಬೇಕು....."
 
" ಸಸಿಗೆ ಸಂಬಂಧಿಸಿದ್ದಾದರೆ ಸರಿ, ಕೇಳು ಕೊಡುವೆ..." ಎಂದ ಭಗವಂತ
 
" ಹಾಗಾದರೆ...ಈ ಸಸಿಗಳನ್ನು ಬೆಳೆಯಬಲ್ಲ ಬೀಜಗಳು ನಮ್ಮ ನಾಡಿನಲ್ಲಿ ಬಿಟ್ಟು ಬೇರಾವ ಮಣ್ಣಲ್ಲೂ ಬೆಳೆದು ಸಸಿಯಾಗದಂತೆ ವರವ ಕೊಡು..." ಎಂದುಬಿಟ್ಟ!
 
ಈಗ ಅವಾಕ್ಕಾಗುವ ಸರದಿ ಭಗವಂತನದಾಯ್ತು...! ಅದೇನು ಸಾಮಾನ್ಯ ವರವಾಗಿರಲಿಲ್ಲ...ಇದರಂತೆ ಅಸ್ತು ಎಂದರೆ, ಭಾರತಿಯನ ಹತ್ತಿರ ಬೀಜವಿದ್ದರೂ, ಅದು ಬೇಳೆಯಲು ಸಾಧ್ಯವಾಗುವುದು ಚೀನಾದಲ್ಲಿ ಮಾತ್ರ! ಅಂದರೆ ಬೀಜವಿದ್ದು ಇಲ್ಲದಂತೆ....ಮಾತು ಬೇರೆ ಕೊಟ್ಟಾಗಿದೆ, ಏನು ಮಾಡುವುದೆಂದು ತಿಳಿಯದೆ, ದೇವರು ಹೊರಡುವ ಸಿದ್ದತೆಯಲ್ಲಿದ್ದ ಭಾರತಿಯನನ್ನು ಕರೆದು ಪರಿಸ್ಥಿತಿ ವಿವರಿಸಿದ. ಭಾರತೀಯ ಭಕ್ತ ಎಂದಿನಂತೆ ದಯಾಮಯಿ; ಭಗವಂತನ ಇಕ್ಕಟ್ಟಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡವನೆ ಹೀಗೆಂದ...
 
"ದೇವಾ ಅವನಿಗೆ ಹಾಗೆ ಆಗಲೆಂದು ವರ ಕೊಟ್ಟುಬಿಡು...ನಮಗೆ ಹೇಗೂ ಬೀಜಾಕ್ಷರ ಸಿದ್ದಿಯೂ ಸಿಕ್ಕಿದೆಯಲ್ಲಾ....ಆದರೆ...."
 
"ಆದರೆ...?"
 
"...ನಮಗೆ ಕೊಟ್ಟಿರುವ ..ಈ ಬೀಜದ ಚೀಲವನ್ನು ಅಕ್ಷಯವಾಗಿಸಿಬಿಡು ಮತ್ತು ನಮ್ಮ ನೆಲದಲ್ಲಲ್ಲದೆ ಬೇರೆಲ್ಲೂ ಉತ್ಪಾದಿಸಲಾಗದ ವಿಶೇಷ ಶಕ್ತಿ ಕೊಟ್ಟುಬಿಡು...."
 
ನಸುನಕ್ಕ ಭಗವಂತ, ಬೀಜದಿಂದಲೆ ಬೀಜ ಸೃಷ್ಟಿಸುವ ಬೀಜ ಮಂತ್ರವನ್ನು ಅವನ ಕಿವಿಯಲ್ಲಿ ಉಪದೇಶಿಸಿ, "ಅಕ್ಷಯವಾಗಲಿ" ಎಂದು ಆಶೀರ್ವದಿಸಿದ (ಈಚಿನ ದಿನಗಳಲ್ಲಿ ಕೇಳಿ ಬರುವ 'ಕ್ಲೋನಿಂಗು ಟೆಕ್ನಾಲಜಿಯ' ಮೂಲ ಇದೆ ಎಂದು ಕೆಲವರಿಗೆ ಗುಮಾನಿಯಿದೆ!). ಈಗ ಸಸಿ ಚೀನಾದಲ್ಲೆ ಬೆಳೆಯಬೇಕಾದರೂ ಬೀಜ ಭಾರತದಿಂದ ಬರಬೇಕು. ಅಂದರೆ ವ್ಯವಸ್ಥೆಯಲ್ಲಿ ತುಸು ನಿಯಂತ್ರಣ, ಅವಲಂಬನೆಯ ಹೊಂದಾಣಿಕೆ ಸಾಧ್ಯವಾಗುತ್ತದೆ.
 
ನಂತರ ಚೀಣಿ ಭಕ್ತನ ಕಡೆ ತಿರುಗಿ ಬಂದವನೆ, 'ತಥಾಸ್ತು' ಎಂದು ಹೇಳುತ್ತ ಎಂಟು ಸಸಿಗಳನ್ನು ಕೈಗಿತ್ತ. ನಂತರ ಅಮೆರಿಕನ್ನನ ಸರದಿ....ಅವನಾಗಲೆ ನಡೆದಿದ್ದೆಲ್ಲಾ ನೋಡುತ್ತಲೆ ಇದ್ದ ಮತ್ತು ಅವನಿಗಿರುವ ಸೀಮಿತ ಆಯ್ಕೆಯ ಅರಿವು ಅವನಿಗಾಗಿತ್ತು. ಆದರೆ, ಅವನದಿವರಿಬ್ಬರಿಗೂ ಮೀರಿದ ಪ್ರಚಂಡ ಬಂಡವಾಳಶಾಹಿ ಬುದ್ಧಿ...
 
"ಓಹ್ ಗಾಡ್! ನನಗೀಗುಳಿದಿರುವುದು ಇದೊಂದೆ ವೃಕ್ಷ.....ಆದರೆ, ಇದರಿಂದ ಸದ್ಯದ ಪರಿಹಾರವಷ್ಟೆ ಆಗುತ್ತದೆ, ದೂರ ಭವಿತದ್ದಲ್ಲ...."
 
"ಸರಿ...ನಿನ್ನದೇನು ಬೇಡಿಕೆಯಿದೆಯಪ್ಪಾ ಹಾಗಾದರೆ? ಹೇಳಿಬಿಡು ಒಂದೆ ಸಲ...."ಎಂದ ಭಗವಂತ.
 
"ಅದು ಬಹಳ ಸುಲಭ..ಗಾಡ್...ಬೀಜ ಭಾರತದಿಂದ ಬರಲಿ, ಸಸಿ ಚೀಣದಿಂದ ಬರಲಿ...ಆದರೆ ವೃಕ್ಷವಿರುವುದು ನಮ್ಮ ನಾಡಲ್ಲಿ ತಾನೆ? ಆದ್ದರಿಂದ ಸಸಿಯನ್ನು ಗಿಡವಾಗಿ, ಮರವಾಗಿ ಬೆಳೆಸುವ ಶಕ್ತಿ ನಮ್ಮ ಮಣ್ಣಿಗೆ ಮಾತ್ರವೆ ಬರಬೇಕು...ಚೀಣಿಯರು ಸಸಿ ಬೆಳೆದ ಮೇಲೆ ಅದನ್ನು ನಮ್ಮ ಮಣ್ಣಿಗೆ ತರಿಸಿ ಮರ ಮಾಡುವಂತಿರಬೇಕು..."
 
ಈಗ ಇನ್ನು ಬೆಕ್ಕಸ ಬೆರಗಾಗುವ ಸರದಿ ಭಗವಂತನದಯ್ತು! 'ಹೀಗೇನಾದರೂ ಆದರೆ, ಮೂವರು ಸದಾ ಪರಸ್ಪರ ಅವಲಂಬಿತ ಸ್ಥಿತಿಯಲ್ಲೆ ಇರಬೇಕೆ ವಿನಃ , ಯಾರೂ ತಮ್ಮದೆ ಆಟ ಆಡುವಂತಿಲ್ಲಾ...ಒಂದು ರೀತಿ ಭಾರತದ ಮೇಲೆ ಚೀಣಾ ಮತ್ತು ಚೀಣಾ ಮೇಲೆ ಅಮೇರಿಕಾ ಅಂಕುಶವಿರುತ್ತದೆ..ಭಾರತವೂ ಎರಡನ್ನು ಬೀಜದಿಂದ ನಿಯಂತ್ರಿಸಬಹುದು...' ಎಂದುಕೊಳ್ಳುತ್ತಲೆ ಭಾರತೀಯ ಭಕ್ತನತ್ತ ನೋಡಿದ ಭಗವಂತ.
 
"ಸರಿ ಸರಿ ..ನಾವು ಚೀಣಾಕ್ಕೆ ಬೀಜ ಮಾರುತ್ತೇವೆ...ಅವರು ಅಮೇರಿಕಾಕ್ಕೆ ಸಸಿ ಮಾರಲಿ....ಅಮೇರಿಕ ನಮ್ಮಿಬ್ಬರಿಗು ಹಣ್ಣು ಮಾರಲಿ..ಮೂವ್ವರೂ ಬದುಕಿಕೊಳ್ಳುತ್ತೇವೆ.." ಎಂದ.
 
ಸರಿ, ಭಗವಂತ ಅಮೇರಿಕನ್ನನಿಗೂ ' ತಥಾಸ್ತು' ಎಂದವನೆ ಮಾಯವಾದ.
 
________________________________________________________________________________________
 
ಅಡಿ ಟಿಪ್ಪಣಿಗಳು: 
___________
ಕಾಲ ಉರುಳಿತು..ಮುವ್ವರೂ ಅವರವರ ದೇಶಗಳಿಗೆ ತೆರಳಿದರು, ಪರಸ್ಪರ ಸಹಕಾರಾವಲಂಬನೆಯ ಒಡಂಬಡಿಕೆಯೊಡನೆ. ಸಹಕಾರವೇನೊ ಮುಂದುವರೆದಿತ್ತು, ಆದರೆ ತುಸು ಬದಲಾದ ಚಿತ್ರದೊಡನೆ :
 
- ಚೀಣ ಭಾರತದಿಂದ ಬೀಜವನ್ನು ಅಗ್ಗದ ದರದಲ್ಲೆ ಖರೀದಿಸಿ, ಸಸಿಯನ್ನು ಬೆಳೆದು ಲಾಭಕ್ಕೆ ಅಮೇರಿಕಾಗೆ ಮಾರತೊಡಗಿತು.  
 
- ಅಮೇರಿಕ ದೊಡ್ಡಮರವನ್ನೊತ್ತುಕೊಂಡು ಹೋಗಿ ಸೂಕ್ತ ಸ್ಥಳದಲ್ಲಿ ನೆಟ್ಟು ರಾತ್ರೋರಾತ್ರಿ ಸಂಪತನ್ನು ವೃದ್ದಿಸಿಕೊಂಡು ಬಲಾಢ್ಯ ಹಾಗು ಶ್ರೀಮಂತ ರಾಷ್ಟ್ರವಾಗಿ ಮೆರೆಯತೊಡಗಿತು. ಹಾಗೆ ಗಳಿಸಿದ ಸಂಪತ್ತಿನಲ್ಲೆ ಭವಿಷ್ಯದ ಸಂಪತ್ತಿಗಾಗಿ ಚೀಣಾದಿಂದ ಸಸಿಗಳನ್ನು ಖರೀದಿಸತೊಡಗಿತು. ಹಾಗೆ ಖರೀದಿಸಿದ ಸಸಿಗಳನ್ನು ಮರುನೆಟ್ಟು ಮರಗಳಾಗಿ ಬೆಳೆಸಿ , ಪಡೆದ ಹಣ್ಣುಗಳನ್ನು ಮತ್ತೆ ಭಾರತ ಮತ್ತು ಚೀಣಾಕ್ಕೆ ಹತ್ತು ಪಟ್ಟು ಹೆಚ್ಚು ದರದಲ್ಲಿ ಮಾರತೊಡಗಿತು.
 
- ಈ ನಡುವೆ ಚೀಣವು ಸಸಿಗಳನ್ನು ಮಾರುವ ಬೆಲೆಯನ್ನು ತೀರಾ ಹೆಚ್ಚಿಸಿದ್ದೆ ಅಲ್ಲದೆ, ಅದರ ಸರಬರಾಜನ್ನು ನಿರ್ಬಂಧಿಸಿ ನಿಯಂತ್ರಿತ ಪ್ರಮಾಣದಲ್ಲಿ ಮಾತ್ರ ಮಾರಲು ತೊಡಗಿತು. ಹೀಗಾಗಿ ಅಮೇರಿಕದಲ್ಲಿ ಬೆಳೆಯುವ ವೃಕ್ಷಗಳ ಸಂಖ್ಯೆ ಪೂರ್ಣವಾಗಿ ಚೀನದ ಕೈಯಾಳಾಗಿ ಚಡಪಡಿಸುವಂತಾಯ್ತು.
 
- ಸರಿ ಸುಮ್ಮನೆ ಬಿಟ್ಟೀತೆ ಶ್ರೀಮಂತ ಬಂಡವಾಳಶಾಹಿ ದೇಶ? ಅಮೇರಿಕವು ಬೀಜಕ್ಕೆ ಚೀಣಕ್ಕಿಂತಲೂ ಹೆಚ್ಚು ಬೆಲೆ ಕೊಡುವುದಾಗಿ ಹೇಳಿ ಭಾರತದಿಂದ ನೇರ ಖರೀದಿಸತೊಡಗಿತು, ಕೆಜಿಗೆ ಒಂದು ರೂ ಸಿಗುತ್ತಿದ್ದ ಬೀಜಕ್ಕೆ, ತಟ್ಟನೆ ನೂರು ರೂ ಸಿಗಲಾರಂಭಿಸಿ ಬೀಜವೆಲ್ಲ ನೇರ ಅಮೇರಿಕಾಕ್ಕೆ ಸರಬರಾಜಾಗತೊಡಗಿತು. ಹೀಗಾಗಿ ಚೀಣಕ್ಕೆ ಬೇಕೆಂದರೂ ಬೀಜ ಸಿಗದೆ ಸಸಿ ಬೆಳೆಯುವ ಉದ್ಯಮಕ್ಕೆ ದೊಡ್ಡ ಏಟು ಬಿದ್ದಂತಾಗಿ ಹೋಯ್ತು. ರೈತರೆಲ್ಲರೂ ಒದ್ದಾಡಿ ಹೋಗುವಂತಾಯ್ತು.
 
- ಚೀನಾದ ಭಕ್ತ ತೆಗೆದುಕೊಂಡು ಹೋಗಿ ನೆಟ್ಟಿದ್ದ ಎಂಟು ಸಸಿಗಳು ಎಂಟು ದಿಕ್ಕಿಗೂ ಒಂದೊಂದರಂತೆ ನೆಡಿಸಿದ್ದರೂ, ಹಲವಾರು ಸಣ್ಣ ಪುಟ್ಟ ರಾಜ್ಯ, ಪ್ರಾಂತ್ಯಗಳಾಗಿ ವಿಭಾಗವಾಗಿ ಹೋಗಿದ್ದ ಆಡಳಿತ ವ್ಯವಸ್ಥೆಯಿಂದಾಗಿ ಮತ್ತು ಅರಾಜಕತೆಯಿಂದಾಗಿ, ಎಲ್ಲಾ ಅಸಮವಾಗಿಯೊ ಅಥವಾ ದುರುಪಯೋಗವಾಗುವಂತೆಯೊ ಹಂಚಲ್ಪಟ್ಟು ಐಶ್ವರ್ಯವೆ ಕಣ್ಣಿಗೆ ಕಾಣದಂತೆ ಮಾಯವಾಗಿಬಿಟ್ಟಿತ್ತು. ಹೀಗಾಗಿ ಹೆಚ್ಚು ಸಂಪತ್ತಿರಬೇಕಾದ ಕಡೆ ಕಡಿಮೆಯಾಗಿ, ಬೇಡದ ಕಡೆ ಹೆಚ್ಚಾಗಿ ಒಂದು ತರಹದ ಅಯೋಮಯ ಸ್ಥಿತಿ ನಿರ್ಮಾಣವಾಗಿ ಹೋಗಿತ್ತು.
 
- ಈಗ ಬೀಜ ಬೇಕೆಂದರೆ ಅಮೇರಿಕದಿಂದ ಮಾತ್ರವೆ ಕೊಳ್ಳಬೇಕಾದ ಅನಿವಾರ್ಯ, ಚೀಣಾಕ್ಕೆ. ಆದರೆ ಹತ್ತಿಪ್ಪತ್ತು ಪಟ್ಟು ದುಬಾರಿ ಹಣ ಕೊಟ್ಟು ಖರೀದಿಸಬೇಕಾದ ಅನಿವಾರ್ಯ. ವಿಧಿಯಿಲ್ಲದೆ ಕೊಳ್ಳೋಣವೆಂದರೂ ಈಗ ಬರಿ ಅಮೇರಿಕೆಗೆ ಮಾತ್ರವೆ ಬೆಳೆದ ವೃಕ್ಷಗಳನ್ನು ಮಾರುವುದಾಗಿ ಕರಾರು ಬೇರೆ ಮಾಡಿಕೊಡಬೇಕಿತ್ತು; ಬೇರಾರಿಗೂ ಮಾರುವಂತಿರಲಿಲ್ಲ. ಬೀಜ ಕೊಟ್ಟವರೆ ಅವರಾಗಿ ಬೇರೆ ದಾರಿಯೂ ಇರಲಿಲ್ಲ.
 
- ಇದೆಲ್ಲಾ ಆದ ಮೇಲೆ ಮತ್ತೊಂದು ಸೋಜಿಗವೂ ನಡೆಯಿತು (ಅದು ಭಾರತ ಚೀಣಕ್ಕಷ್ಟೆ ಸೋಜಿಗ, ಅಮೇರಿಕಾಕ್ಕೆ ಆಗಿರಲಿಲ್ಲ). ಮೂಲ ಸಾಮಗ್ರಿ ದರಗಳು ಹೆಚ್ಚಾದ ಹಿನ್ನಲೆಯಲ್ಲಿ ತಾನು ಮಾರಬೇಕಾದ ಹಣ್ಣಿನ ಬೆಳೆ ತುಂಬಾ ಹೆಚ್ಚಾಗಿ ಹೋಗಿದೆಯೆಂಬ ನೆಪವೊಡ್ಡಿ, ಸುಮಾರು ಹತ್ತತ್ತು ಪಟ್ಟು ಬೆಲೆಗಳನ್ನೆಲ್ಲಾ ಏರಿಸಿಬಿಟ್ಟಿತು! ಬೀಜದ ಬೆಲೆ ಹತ್ತು ರೂಪಾಯಿ ಹೆಚ್ಚಾಗಿ ಸಿಕ್ಕಿತೆಂದು ಬೀಗುತ್ತಿದ್ದ ಭಾರತೀಯ, ಅದೆ ಬೀಜದ ಹಣ್ಣಿಗೆ ನೂರು ರೂಪಾಯಿ ಹೆಚ್ಚು ಕೊಟ್ಟು ತಿನ್ನುವ ಪರಿಸ್ಥಿತಿ ಬಂತು. ಅಗ್ಗದ ದರದಲ್ಲಿ ಬೀಜ ಮಾರಿ ಸುಗ್ಗಿ ದರದಲ್ಲಿ ಹಣ್ಣು ತಿನ್ನುವಂತಾಯ್ತು!
 
- ಹೀಗಾಗಿ ಮೊದಲಿನ ಭಾರತ ಚೀಣಕ್ಕೆ ಬೀಜ ಮಾರಿ, ನಂತರ ಚೀಣ ಅಮೇರಿಕಕ್ಕೆ ಸಸಿ ಮಾರುತ್ತಿದ್ದ ಹಾಗೂ ಅಮೇರಿಕ ಇಬ್ಬರಿಗೂ ಹಣ್ಣು ಮಾರುತ್ತಿದ್ದ ಪರಿಸ್ಥಿತಿ ಬದಲಾಗಿ, ಭಾರತ ಅಮೇರಿಕಾಕ್ಕೆ ಬೀಜ ಮಾರಿ, ಅಮೇರಿಕ ಚೈನಾಕ್ಕೆ ಅದೆ ಬೀಜ ಮಾರಿ ನಂತರ ಸಸಿ ಕೊಂಡು ಮರ ಬೆಳೆಸಿ , ಬೆಳೆದ ಹಣ್ಣನ್ನೆ ಮತ್ತೆ ಇಬ್ಬರಿಗೂ ಮಾರತೊಡಗಿತು. ಇದರ ನಡುವೆ ಸಾಗಾಣಿಕೆ ವೆಚ್ಚ ಮತ್ತು ಸಮಯದ ಅನುಕೂಲವೆಂದು ಹೇಳುತ್ತ, ಬೀಜವನ್ನು ಭಾರತದಿಂದ ನೇರ ಚೀಣಕ್ಕೆ ಸರಬರಾಜು ಮಾಡುವಂತೆ ಹೇಳಿತು. ಆದರೆ, ಮಾರಾಟದ ಒಪ್ಪಂದ, ಬೆಲೆಯೆಲ್ಲದರ ನಿರ್ಧಾರ ಇದ್ದದ್ದು ಅಮೇರಿಕಾದೊಂದಿಗೆ ಮಾತ್ರ. ಹೀಗಾಗಿ ಬೀಜ ಮೊದಲಿನ ಹಾಗೆ ನೇರ ಭಾರತದಿಂದ ಚೀಣಾಕ್ಕೆ ಹೋದರೂ ಎಲ್ಲರು ತೆರುವ ಬೆಲೆ ಮಾತ್ರ ರಾಕೆಟ್ಟಿನಂತೆ ಮೇಲೇರಿ ಹೋಯ್ತು.
 
- ಬೀಜಕ್ಕೆ ಬೆಲೆ ಹೆಚ್ಚಿಸಿದ್ದರೂ ಅಮೇರಿಕಾಗೆ ಇದರಿಂದೇನೂ ನಷ್ಟವಾಗಲಿಲ್ಲ. ಅದೆ ಬೆಲೆ ಖರ್ಚೆಲ್ಲ ಹಣ್ಣಿನ ಬೆಲೆಗೆ ಸೇರಿಸಿ ಹಿಂತಿರುಗಿಸಿ ಮಾರಾಟ ಮಾಡಿಸಿದಾಗ ಹತ್ತತ್ತು ಪಾಲಾಗಿ ಭಾರತ, ಚೀನಗಳ ಮೇಲೆ ವಾಪಸ್ಸು ಬಿತ್ತು!
 
- ಈ ನಡುವೆ ಭೌತಿಕ ಬೀಜ ತಂದಿಟ್ಟುಕೊಂಡ ಭಾರತ ಅದನ್ನು ನಿಯಂತ್ರಣಕಿಡದೆ ಮುಕ್ತ ಮಾರುಕಟ್ಟೆಯಾಗಿಸಿ, ಅದರಿಂದ ಗಳಿಸಬಹುದಾಗಿದ್ದ ಅಪಾರ ಐಶ್ವರ್ಯಕ್ಕೆ ಕಲ್ಲು ಹಾಕಿಕೊಂಡು, ಅಮೇರಿಕೆಯ (ಚೀನಾದಲ್ಲಿ ಅಗ್ಗದಲ್ಲಿ ತಯಾರಾದ) ಐಷಾರಾಮಿ ಭೋಗದ ವಸ್ತುಗಳ ಮೇಲೆ ದುಬಾರಿ ಬೆಲೆ ತೆತ್ತು, ಕೊಂಡುಕೊಳ್ಳತೊಡಗಿತು. ಹೀಗಾಗಿ ಅಮೆರಿಕೆ ಶ್ರೀಮಂತಿಕೆ ಇನ್ನು ಹೆಚ್ಚಿತು. ಅದರ 'ಮುಸುಕಿನಡಿ' ತಯಾರಕನ ಗುಪ್ತವೇಷದಲ್ಲಿ ಬಲಿಷ್ಟ ಸರಬರಾಜುಗಾರನಾಗಿ ಬೆಳೆದಿದ್ದ ಚೀನಾದ ಶ್ರೀಮಂತಿಕೆಯು ಹೆಚ್ಚಾಗುತ್ತಾ ಹೋಯ್ತು. ಇವೆರಡರ ನಡುವೆ ಅಬ್ಬೇಪಾರಿ ಅನಿಕೊಂಡು ಮೂರ್ಖನಾಗಿದ್ದು ಭಾರತವೆ! 
 
- ಈ ನಡುವೆ ಪರಂಪರೆಯಿಂದ ಪರಂಪರೆಗೆ ಹರಿದು ಬಂದ ಬೀಜಾಕ್ಷರದ ಮಹಿಮೆಯಿಂದಲೊ ಏನೊ ಬೌದ್ಧಿಕ ಸ್ತರದಲ್ಲಿ ಅಗಾಧ ಬುದ್ದಿಶಕ್ತಿಯ ಭಾರತೀಯರ ಸಮೂಹವೆ ಉಧ್ಭವವಾಗಿ ಪೀಳಿಗೆಯಿಂದ ಪೀಳಿಗೆಗೆ ದಾಟುತ್ತ ಸುಜಲದಂತೆ ಹರಿಯತೊಡಗಿತು. ಈ ಬೌದ್ಧಿಕ ಬೀಜದ ಶಕ್ತಿಯಿಂದಾಗಿ ಆ ಸಾಮರ್ಥ್ಯವುಳ್ಳ ಭಾರತಿಯರು ತಮ್ಮ ದೇಶದಲ್ಲೆ ಅಲ್ಲದೆ , ಹೊರಗಿನ ದೇಶಗಳಿಗೂ ಹೋಗಿ ಸೇವೆ ಸಲ್ಲಿಸುತ್ತ ಹೆಸರು ಮಾಡತೊಡಗಿದರು (ಪ್ರತಿಭಾ ಪಲಾಯನದ ಮೊದಲ ಬೇರು ಇಲ್ಲಿಂದಲೆ ಆರಂಭವಾಯ್ತೆಂಬ ಅನುಮಾನವನ್ನು ಈಗಾಗಲೆ ಸಾಕಷ್ಟು ಜನ ವ್ಯಕ್ತಪಡಿಸಿದ್ದಾರೆ!). ವಿಪರ್ಯಾಸವೆಂದರೆ ಹಳೆ ತರದ ಭೌತಿಕ ಬೀಜಗಳಂತೆ ಈ ಬೌದ್ಧಿಕ ಬೀಜಗಳೂ ಅಗ್ಗದ ದರದಲ್ಲಿ ರಫ್ತಾಗಿ ಹೋಗಿ, ಅಲ್ಲೆಲ್ಲಾ ಅಗಾಧ ಮಟ್ಟದ ಮೌಲ್ಯವರ್ಧನೆ ಮಾಡಿ ಹೆಮ್ಮೆ ಪಡುತ್ತಿದ್ದರೆ, ಅಲ್ಲಿನ ಅದೆ ವಾಣಿಜ್ಯ ಜಗದ ದ್ರೋಣರು, ಹಾಗೆ ಸಿದ್ದ ಪಡಿಸಿದ ಮೌಲ್ಯವರ್ಧಿತ ಸರಕನ್ನು ನಮಗೆ ಮತ್ತೆ ಹತ್ತಾರು, ನೂರಾರು ಪಟ್ಟು ಬೆಲೆಗೆ ಮಾರಿ , ಆ ಹಳೆಯ ಬೀಜ ಮಾರುವ ವ್ಯವಸ್ಥೆಯನ್ನು ಹಾಗೆಯೆ ಜೀವಂತವಾಗಿಟ್ಟಿದ್ದು! ಇದನ್ನು ಬಂಡವಾಳಶಾಹಿಯ ಚಾತುರ್ಯವೆನ್ನಬೇಕೊ ಅಥವಾ ಬಡ ಡೆಮಾಕ್ರಸಿಗಳ ದೌರ್ಬಲ್ಯವೆನ್ನಬೇಕೊ - ಎನ್ನುವ ಜಿಜ್ಞಾಸೆಯಿನ್ನು ಜೀವಂತವಾಗಿಯೆ ಇದೆಯಂತೆ!
 
ಅಂದ ಹಾಗೆ, ಮತ್ತೊಂದು ಗಾಳಿ ಸುದ್ದಿಯೆಂದರೆ ಈ ಬೀಜಾಸುರರಲ್ಲಿ ಅರ್ಧಕ್ಕರ್ಧ ನಮ್ಮ ಐಟಿ ಪಂಡಿತರೂ, ಟೆಕ್ಕಿಗಳು ಅಂತ. ಅರ್ಧ ಅಲ್ಲ ಶೇಕಡಾ ಎಂಬತ್ತಕ್ಕು ಹೆಚ್ಚು ಎಂದು ಐಟಿ ಸಂಘಗಳ ಮಾಹಿತಿ / ಉವಾಚ (ವೆಬ್ಸೈಟುಗಳಲ್ಲಿ). ಒಟ್ಟಾರೆ, ಬೌದ್ಧಿಕ ಬೀಜವೂ ಸ್ವದೇಶಕ್ಕಿಂತ ಹೊರದೇಶದಲ್ಲೆ ಸುತ್ತಾಡುತ್ತಿರುವುದರಿಂದ ಆ ಭಗವಂತನು ಹರಸಿ ಕೊಟ್ಟಿದ್ದ ಸಂಪತ್ತು , ಐಶ್ವರ್ಯಗಳು ಅವರ ಜತೆಯಲ್ಲೆ ಹೊರದೇಶದಲ್ಲೆ ಸುತ್ತುತ್ತಿದೆಯೆಂಬುದು ಇತ್ತೀಚಿನ ಹೊಸ ಗುಮಾನಿ!
 
- ಅದೂ ಸಾಲದೆಂಬಂತೆ, ನಮ್ಮ ಬೌದ್ದಿಕ ಬೀಜಾಸುರ ಟೆಕ್ಕಿಗಳಿಂದ ಬರೆಸಿದ ತಂತ್ರಾಂಶಗಳೆಲ್ಲ ಚೀನಾದಂತ 'ಜಗತ್ತಿನ ಸರಕು ತಯಾರಿಕ ಕಾರ್ಖಾನೆ'ಯಂತಹ ಕಡೆ ಬಳಕೆಯಾಗಿ, ಸಿದ್ದ ಸರಕಿನ ಭಾಗವಾಗಿ ಸೇರಲ್ಪಟ್ಟು, ಹೊಸ ಮಾರಾಟದ ಸರಕಾಗಿ ನಮ್ಮ ಮಾರುಕಟ್ಟೆಗೆ ಬರುತ್ತಿದೆಯಂತೆ. ಅಲ್ಲಿಗೆ ಭೌತಿಕ ಬೀಜ ಮತ್ತು ಬೌದ್ಧಿಕ ಬೀಜ ಹೆಚ್ಚು ಕಡಿಮೆ ಒಂದೆ ಹಾದಿ ತುಳಿದು ಬಂದಂತಾಯ್ತು. ಭೌತಿಕವೊ , ಬೌದ್ದಿಕವೊ ನಮ್ಮವರ ಕಥೆ ಮಾತ್ರ ಅದೆ - ಎಲ್ಲಿ ಹಾಸಿದ್ದು ಅಲ್ಲೆ ಬಿದ್ದಿದೆ.. ಅದನ್ನು ಜಾಡಿಸಲು ಯಾರಾದರು ಮತ್ತೆ ತಪಸ್ಸಿಗಿಳಿಯುವ ಸಾಧ್ಯತೆಗಳಿದೆಯೆ ಎಂಬ ಕುರಿತು ತನಿಖೆ ನಡೆಸಲಿದ್ದರೆಂಬುದು ಈಚೆಗಿನ ಸುದ್ದಿ!
 
ಕೊನೆಯ ಮಾತು: ಇಲ್ಲಿ ಹೇಳಿರುವ ಅಮೇರಿಕ, ಚೀಣ ಮತ್ತು ಭಾರತದ ಹೆಸರುಗಳು, ಇಂತಹ ಯಾವುದೆ ಮೂರು ದೇಶಗಳೂ ಆಗಿರಬಹುದು (ಕೆಲವೊಮ್ಮೆ ಹೆಚ್ಚೆ ಇದ್ದರು, ಒಟ್ಟಾರೆ ಈ ಕೆಳಗಿನ ಮೂರು ಗುಂಪಿಗೆ ಸೇರಿದವು). ಒಂದು ಪ್ರಗತಿ ಹೊಂದಿದ ದೇಶ, ಮತ್ತೊಂದು ಅದೆ ಹಾದಿಯತ್ತ ನಾಗಾಲೋಟದಲ್ಲೊ ಅಥವಾ ಸೀಮಿತ ವೇಗದಲ್ಲೊ ಧಾವಿಸಿದ ದೇಶ ಮತ್ತು ಮತ್ತೊಂದು ಅಭಿವೃದ್ಧಿ ಹೊಂದುತ್ತಿರುವ ದೇಶಗಳೆಂಬ ಹಣೆ ಪಟ್ಟಿಯನ್ನು ಹೊತ್ತು ನಡೆದಿರುವುದು ಪ್ರಗತಿಯತ್ತಲೊ ಅಥವಾ ಅವನತಿಯತ್ತಲೊ, ಎಂಬ ಅನುಮಾನವನ್ನು ಸದಾ ಹೊತ್ತುಕೊಂಡೆ ಸಾಗುವ ದೇಶಗಳು. ಹಾಗಾಗಿ ಈ ಕಥೆ ಸಾರ್ವತ್ರಿಕ ಮತ್ತು ಸರ್ವ ಕಾಲಿಕ. ಆಗ್ಗಾಗೆ ದೇಶ, ಸ್ಥಳಗಳ ಹೆಸರು , ರಂಗಮಂಚಗಳು ಬದಲಾಗುತ್ತವಷ್ಟೆ!
 
- ನಾಗೇಶ ಮೈಸೂರು, ಸಿಂಗಪುರದಿಂದ
 

Comments

Submitted by spr03bt Tue, 06/25/2013 - 11:47

ನಾಗೇಶರೆ, ಈಗಿನ ಪ್ರಪ೦ಚದ ಪರಿಸ್ಥಿತಿಗೆ ಅನುಗುಣವಾಗಿ ಅದ್ಬುತವಾದ ಕಥೆ ಬರೆದಿರುವಿರಿ. ಅಭಿನ೦ದನೆಗಳು.
Submitted by nageshamysore Tue, 06/25/2013 - 17:58

In reply to by spr03bt

ಶಿವಪ್ರಕಾಶರೆ ನಮಸ್ಕಾರ, ಮೆಚ್ಚುಗೆಗೆ ಧನ್ಯವಾದಗಳು. ನೀವು ಗಮನಿಸಿದ ಹಾಗೆ ನಮ್ಮ ಆಧುನಿಕ ಜಗ ಜೀವನದ, ರೀತಿ-ನೀತಿಗಳ ಪರಿಯೆ ಈ ಕಥೆಗೆ ಪ್ರೇರಣೆ. ಕಥೆಯಲ್ಲಿ ಅಸಂಗತವಾಗಿ ಕಾಣುವ ಕೆಲವು ಸಂಗತಿಗಳು ವಾಸ್ತವದಲ್ಲಿ ಅದಕ್ಕಿಂತಲೂ ಆಳವಾದ ವ್ಯಂಗದಲ್ಲಿ ಹುದುಗಿರುವ ಪರಿಗೆ ಅಚ್ಚರಿಗೊಂಡು ದಾಖಲಿಸಿದ ಕಲ್ಪನಾತ್ಮಕ (ನೈಜ್ಯ?) ಚಿತ್ರಣ :-) - ನಾಗೇಶ ಮೈಸೂರು
Submitted by kavinagaraj Tue, 06/25/2013 - 22:15

ಎಷ್ಟೇ ಆಗಲಿ ಭಾರತೀಯರಲ್ಲವೇ, ನಿಮ್ಮ ವಿಶ್ಲೇಷಣೆ ಹಿರಿದಾಗಿದೆ. ಅರ್ಥವಾದರೂ ಏನೂ ಮಾಡದವರಂತಿರುವ, ಮಾಡಲಾಗದಿರುವ ಅಸಹಾಯಕತೆಯ ಚಿತ್ರಣ ವಾಸ್ತವತೆಗೆ ಹತ್ತಿರವಿದೆ. ಧನ್ಯವಾದ, ನಾಗೇಶರೆ.
Submitted by nageshamysore Wed, 06/26/2013 - 12:15

In reply to by kavinagaraj

ಧನ್ಯವಾದಗಳು ಕವಿ ನಾಗರಾಜರವರೆ, ಕೆಲವೊಮ್ಮೆ ಉದಾರತೆ, ಔದಾರ್ಯಗಳೆ ನಮ್ಮನ್ನು ಅಸಹಾಯಕತೆಯ ಉರುಳಿಗೆ ಸಿಲುಕಿಸಿ ನಾವೆ ಅದರ ಬಲಿಪಶುವಾದರೂ ಏನೂ ಮಾಡಲಾಗದ ಸ್ಥಿತಿಯೆ ಇದು - ನಾಗೇಶ ಮೈಸೂರು
Submitted by makara Tue, 06/25/2013 - 23:03

ಕೇವಲ ಕಾವ್ಯಗಳಲ್ಲಷ್ಟೇ ಅಲ್ಲದೇ ನಿಮ್ಮ ಸ್ವತಂತ್ರ ಚಿಂತನೆಯುಳ್ಳ ಲೇಖನಗಳ ಪರಿ ಅತ್ಯಾದ್ಭುತ. ಇದು ಖಂಡಿತಾ ಉತ್ಪ್ರೇಕ್ಷೆಯಲ್ಲ! ಅಂದ ಹಾಗೆ, ಈ ಬೀಜಾಕ್ಷರದ ಬೀಜ ಯಾವಾಗ ಮೊಳೆಯಿತು ನಿಮ್ಮ ತಲೆಯಲ್ಲಿ? :))
Submitted by ಗಣೇಶ Wed, 06/26/2013 - 00:12

In reply to by makara

>>ಕೇವಲ ಕಾವ್ಯಗಳಲ್ಲಷ್ಟೇ ಅಲ್ಲದೇ ನಿಮ್ಮ ಸ್ವತಂತ್ರ ಚಿಂತನೆಯುಳ್ಳ ಲೇಖನಗಳ ಪರಿ ಅತ್ಯಾದ್ಭುತ. ಇದು ಖಂಡಿತಾ ಉತ್ಪ್ರೇಕ್ಷೆಯಲ್ಲ. +೧. ಸಾವಿರಾರು ಕವನಗಳನ್ನು ಬರೆದರೂ, ಒಂದೇ ಒಂದು ಕವನ ಬರೆಯದ ನನ್ನಂತಹವನ ಸಲಹೆಯನ್ನೂ ಸ್ವೀಕರಿಸುವ ದೊಡ್ಡಗುಣವೂ ಇದೆ.
Submitted by nageshamysore Wed, 06/26/2013 - 12:43

In reply to by ಗಣೇಶ

ಶ್ರೀಧರಜಿ, ಗಣೇಶ್ ಜಿ, ಸ್ವತಂತ್ರಾಲೋಚನೆಯ ಬರಹಗಳ ವಸ್ತು ಆಗಾಗ್ಗೆ ಬಂದು ಕಾಡುತ್ತಲೆ ಇರುತ್ತವೆ - ಎಲ್ಲಕ್ಕೂ ಬರಹದ ರೂಪ ಕೊಡುವಷ್ಟು ಸಮಯವಿರುವುದಿಲ್ಲ. ಸಿಕ್ಕಾಗ ಹೀಗೆ ಒಂದೆರಡು ಬರೆಯಲೆತ್ನಿಸುತ್ತೇನೆ. 'ಇರುವೆ ಮತ್ತು ರೊಟ್ಟಿ.....' ವಿಡಂಬನೆಗೂ ಮೊದಲೆ ಈ ವಸ್ತು ತಲೆಯಲಿದ್ದರೂ, ಸಂಪದದಲ್ಲಿ ಅದೆ ಮೊದಲು ಪ್ರಕಟವಾಯ್ತು:-) ಬೀಜಾಕ್ಷರಕ್ಕೆ ಮೂಲ ಸ್ಪೂರ್ತಿ ಮಾತ್ರ ಒಂದು ರೀತಿ ನಮ್ಮ 'ಪ್ರತಿಭಾ ಪಲಾಯನ' ; ಸೃಷ್ಟಿರಹಸ್ಯ' ಕವನ ಬರೆದಾಗ ಬೀಜಾಕ್ಷರದ ಕಲ್ಪನೆ ಇನ್ನು ಬಲವಾಯ್ತು. ಶ್ರೀಲಲಿತೆಯ ಬೀಜಾಕ್ಷರ ಕುರಿತು ಓದುತ್ತಾ ಅದು ಸಮಷ್ಟಿ ಪ್ರಜ್ಞೆಯ ರೂಪ ತಾಳಿತು. ಆದರೆ, ಬರೆಯುವಾಗ ಹೀಗೆಲ್ಲ ಬರೆಯಬೇಕೆಂಬ ಹಂದರ, ವಿವರ ಇರಲಿಲ್ಲ. ಬರಹ ಸಾಗಿದಂತೆ ತಟ್ಟನೆ ಹೊಳೆದ ಐಡಿಯಾಗಳವು :-) @ಗಣೇಶ್ ಜಿ: ದೊಡ್ಡ ಗುಣ ಅಂತೆನಿಲ್ಲ - ನನಗೆ ನಿಜಕ್ಕೂ ಆ ವಿಷಯದ ಕುರಿತು ನಿಮ್ಮಗಳಷ್ಟು ಮಾಹಿತಿ, ಪರಿಣಿತಿಯಿಲ್ಲ. ಇಬ್ಬರು ಶ್ರೀಧರರು ಬರೆದುದರ ಟೈಪುರೈಟಿಂಗಷ್ಟೆ ನಾನು ಮಾಡಿತ್ತಿರುವುದು :-) - ನಾಗೇಶ ಮೈಸೂರು