ಸಂಪತ್ ದೇವಿಯ- ಗುಲಾಬಿ ಕ್ರಾಂತಿ

ಸಂಪತ್ ದೇವಿಯ- ಗುಲಾಬಿ ಕ್ರಾಂತಿ

ತ್ತೀಚೆಗೆ ನಿಯತಕಾಲಿಕವೊಂದರಲ್ಲಿ ಓದಿದ ಲೇಖನ  ಅಚ್ಚರಿ ಮೂಡಿಸಿತ್ತು. ಅದರ ಬಗ್ಗೆ ಇನ್ನೂ ಹೆಚ್ಚಾಗಿ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಅಂತರ್ಜಾಲದಲ್ಲಿ ಹುಡುಕಿದೆ. ಅದೇ ಗುಲಾಬಿ ಗ್ಯಾಂಗ್ ಎನ್ನುವ ಮಹಿಳಾ ಶಕ್ತಿಯ ಬಗ್ಗೆ. ಹೆಣ್ಣಿನ ಮೇಲೆ ನಡೆಯುತ್ತಿರುವ ದೈಹಿಕ ಹಾಗೂ ಮಾನಸಿಕ ದೌರ್ಜನ್ಯ ಹಾಗೂ ಶೋಷಣೆಯ  ವಿರುದ್ದ ಒಂದು ಪುಟ್ಟ ಹಳ್ಳಿಯಲ್ಲಿ ಮಹಿಳೆಯರು ಸೆಟೆದು ನಿಂತ ಗ್ಯಾಂಗ್.

ಇಂದು ಎಲ್ಲೆಡೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರಗಳು, ಮುಗ್ಧ ಕಂದಮ್ಮಗಳ ಮೇಲಾಗುತ್ತಿರುವ ಅನಾಚಾರಗಳು, ಹೆಣ್ಣಿನ ಮೇಲಾಗುತ್ತಿರುವ ಮಾನಸಿಕ- ದೈಹಿಕ ಕಿರುಕುಳಗಳು, ಕಾನೂನಿನ ಭಯವಿಲ್ಲದೆ ರಾಜಾರೋಷವಾಗಿ ತಿರುಗಾಡುತ್ತಿರುವ ಗೂಂಡಾಗಳು, ಎಲ್ಲೆಂದರಲ್ಲಿ ಮತಿಹೀನರಂತೆ ವರ್ತಿಸುತ್ತಾ ಹೆಣ್ಮಗಳನ್ನು ಪೀಡಿಸುತ್ತಿರುವ ವಿಕೃತ ಕಾಮಿಗಳು, ದಿನನಿತ್ಯವೂ ಇವರ ಕಾಟದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡಬೇಕಾಗುತ್ತದೆ. ಪ್ರತಿನಿತ್ಯ ಇವುಗಳನ್ನು ನೋಡುತ್ತಿರುವಾಗ, ಹೆಣ್ಣಿನ ರಕ್ಷಣೆ ಹೇಗೆ? ಯಾರ ಹೊಣೆ ಎಂಬ ಆಲೋಚನೆ, ಮಾತುಗಳು ಎಲ್ಲರಲ್ಲೂ  ಕೇಳಿ ಬರುತ್ತವೆ. ಮಹಿಳೆಯರು ತಮ್ಮ ರಕ್ಷಣೆಗಾಗಿ ಇತರರನ್ನು ಅವಂಬಿಸಿದರೆ ಯಾವತ್ತೂ ಶೋಷಣೆಯನ್ನನುಭವಿಸಬೇಕಾಗುವ ಸಾಧ್ಯತೆಗಳೇ ಹೆಚ್ಚು. ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾದರೆ ಇಂತಹ ದೌರ್ಜನ್ಯಗಳ ವಿರುದ್ಧ ನಾವೇ ತಿರುಗಿ ನಿಂತು ಎದುರಿಸಬೇಕು ಎಂಬ ನಿಲುವಿನಿಂದ ಈ ಗುಲಾಬಿ ಗ್ಯಾಂಗ್ ನಂತಹ ಗುಂಪುಗಳು ಎಲ್ಲೆಡೆಯೂ ಸ್ಥಾಪನೆಯಾಗಬೇಕು. ಹೆಣ್ಣುಮಕ್ಕಳನ್ನು ಮಾನಸಿಕ ಹಾಗೂ ದೈಹಿಕವಾಗಿ ಸುದೃಢರನ್ನಾಗಿ ಬೆಳೆಸಬೇಕು. ಹೆಚ್ಚಾದ ಆತ್ಮಸ್ಥೈರ್ಯವನ್ನು ತುಂಬಬೇಕು. ಆತ್ಮ ರಕ್ಷಣೆಗೆ ಬೇಕಾಗುವಂತಹ ಆಯುಧಗಳನ್ನು ಸದಾ ಜತೆಯಲ್ಲಿರಿಸಿಕೊಳ್ಳುವಂತೆ ಸೂಚಿಸಬೇಕು.

ಗುಲಾಬಿ ಗ್ಯಾಂಗ್‌ನ ಆರಂಭ:
ಹೆಣ್ಣಿನ ವಿರುದ್ಧ ನಡೆಯುತ್ತಿರುವ ನಡೆಯುತ್ತಿರುವ ಮಾನಸಿಕ ಹಾಗೂ ದೈಹಿಕ ಶೋಷಣೆಯನ್ನು ಸಹಿಸಲಾಗದೆ ಆಕ್ರೋಶಿತಳಾದ ಸಂಪತ್ ದೇವಿ ಎಂಬ ದಿಟ್ಟ ಮಹಿಳೆಯಿಂದ ಆರಂಭವಾದ ಪುಟ್ಟ ಹೋರಾಟ ಇಂದು ಬಹುದೊಡ್ಡ ಗ್ಯಾಂಗ್ ಆಗಿ ಬೆಳೆದಿದೆ. ಉತ್ತರಪ್ರದೇಶದ ಕುಗ್ರಾಮವಾದ ಬುಂದೇಲ್ ಖಂಡ ಎಂಬ ಊರಿನಲ್ಲಿ ರೈತನೊಬ್ಬ ದಿನಾಲು ಕುಡಿದು ಬಂದು ಹೆಂಡತಿಯನ್ನು ಹಿಂಸಿಸುತ್ತಿದ್ದನಂತೆ. ಕೆಲಸ ಮುಗಿಸಿಕೊಂಡು ಅದೇ ರಸ್ತೆಯಾಗಿಯೇ ಹೋಗುವ ಸಂಪತ್ ದೇವಿಗೆ ದಿನಾಲೂ ಅಮಾಯಕ ಹೆಣ್ಣಿನ  ಮೇಲಾಗುವ ಈ ಅನ್ಯಾಯವನ್ನು ಸಹಿಸಲು ಸಾಧ್ಯವಾಗಲಿಲ್ಲ. ಒಂದು ದಿನ ಇದ್ದಕ್ಕಿದ್ದಂತೆ ಆ ರೈತನ ಮನೆಗೆ ನುಗ್ಗಿ ಹೊಡೆಯುತ್ತಿರುವ ರೈತನನ್ನು ತಡೆದು ಬುದ್ದಿ ಹೇಳಿ ಬಂದಳಂತೆ. ಆದರೆ ರೈತ ಅದನ್ನು ಕೇಳೋಕೆ ನೀನ್ಯಾರು ಎಂದು ಆಕೆಯನ್ನು ಬಾಯಿಗೆ ಬಂದಂತೆ ಬಯ್ದನಂತೆ. ಹೇಗಾದರೂ ಮಾಡಿ ಈ ಅನ್ಯಾಯವನ್ನು ಕೊಣೆಗಾಣಿಸಬೇಕೆಂದು ನಿರ್ಧರಿಸಿದ ಸಂಪತ್ ದೇವಿ, ಊರಿನ  ಇತರ ಮೂವರು ಹೆಂಗಸರನ್ನು ಸೇರಿಸಿಕೊಂಡು, ಮರುದಿನ ರೈತನು ಹೆಂಡತಿಗೆ ಹೊಡೆಯುತ್ತಿದ್ದ ಸಂದರ್ಭದಲ್ಲಿ ಪುನಃ ಮನೆಗೆ ನುಗ್ಗಿ ಆತನಿಗೆ ಹಿಗ್ಗಾ ಮುಗ್ಗಾ ಪೊರಕೆ ಸೇವೆ ಮಾಡಿದ್ದರಂತೆ. ಇಂತಹ ಆಕ್ರಮಣವನ್ನು ನಿರೀಕ್ಷಿಸಿರದ ಆತ ಆ ರೈತ ಇನ್ನೆಂದೂ ಹೆಂಡತಿಯನ್ನು ಹಿಂಸಿಸುವುದಿಲ್ಲ ಎಂದು ಸಂಪತ್ ದೇವಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದನಂತೆ. ಆ ಘಟನೆ ಹಳ್ಳಿಯೆಲ್ಲಾ ಸುದ್ದಿಯಾಗಿ ಎಲ್ಲಾ ಗಂಡಸರಿಗೂ ಮೈಚಳಿ ಹಿಡಿಸಿತ್ತಂತೆ. ಹೀಗೆ ಆರಂಭವಾದದ್ದೇ ಗುಲಾಬಿ ಗ್ಯಾಂಗ್.

ಸಂಪತ್ ದೇವಿ:
ಈಕೆ ಹುಟ್ಟಿದ್ದು ಉತ್ತರ ಪ್ರದೇಶದ ಬುಂದೇಲ್ ಖಂಡ ಎಂಬ ಪ್ರಾಂತ್ಯದಲ್ಲಿ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ತಂದೆ ಕುರಿ ಮೇಯಿಸುವ ಕೆಲಸ ಮಾಡಿಕೊಂಡಿದ್ದ. ಗಂಡು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದ. ಈಕೆಯನ್ನು ಹೊಲದಲ್ಲಿ ದುಡಿಸುತ್ತಿದ್ದನಂತೆ. ಶಾಲೆಗೆ ಹೋಗಬೇಕೆಂಬ ಆಕೆಯ ಆಸೆ, ಕನಸು ನನಸಾಗಲೇ ಇಲ್ಲ. 12 ವರ್ಷದವಳಾಗಿರುವಾಗಲೇ  ಐಸ್‌ಕ್ರೀಮ್ ಮಾಡುವ 20ವರ್ಷದ ಹುಡುಗನೊಂದಿಗೆ ಆಕೆಯ ಮದುವೆಯಾಯಿತಂತೆ. ಎಲ್ಲರಂತೆ ಆಕೆಯೂ ಗಂಡನ ಮನೆಯ ಸೇವೆ ಮಾಡುವಂತಾಯಿತು. ಆದರೆ ಇನ್ನೂ ಹುಡುಗಾಟದ ಸಂಪತ್ ಅಲ್ಲಿಯ ನಿಯಮಗಳು ಯಾವುದಕ್ಕೂ ಹೆದರುತ್ತಿರಲಿಲ್ಲ. ತನ್ನ ಪಾಡಿಗೆ ತಾನು ಸ್ವೇಚ್ಚೆಯಾಗಿ ತಿರುಗಾಡುತ್ತಿದ್ದಳು. ಇದಕ್ಕಾಗಿ ಹೊಡೆತವನ್ನೂ ತಿನ್ನುತ್ತಿದ್ದಳು. ಇವುಗಳ ನಡುವೆಯೇ ಹದಿನೈದು ವರ್ಷ ಪ್ರಾಯದವಳಿರುವಾಗಲೇ ಒಂದು ಮಗುವಿನ ತಾಯಿಯೂ ಆದಳು. ಆದರೂ ಅತ್ತೆ ಮನೆಯವರ ದರ್ಬಾರು ನಿಲ್ಲದಿದ್ದಾಗ ಒಂದು ದಿನ ತನ್ನ ಮಗುವನ್ನೆತ್ತಿಕೊಂಡು ಗಂಡನ ಮನೆ ಬಿಟ್ಟು ಬಂದಳು. ಆಕೆಗೆ ಬೆಂಗಾವಲಿದ್ದ ಪತಿಯೂ ಅವಳ ಜತೆ ಬಂದ. ಗಂಡನ ಮನೆಯ ಪಕ್ಕದ ಅಟ್ಟಾರ ಎಂಬ ಹಳ್ಳಿಯಲ್ಲಿ ನೆಲೆಸಿ ಛಾಯ್ ಅಂಗಡಿ ಇಟ್ಟುಕೊಂಡು ತನ್ನ ಸಂಸಾರವನ್ನು ಸಾಗಿಸುತ್ತಿದ್ದರು. ಮಕ್ಕಳು ಹೆಚ್ಚಾದಾಗ ತನ್ನ ಗಂಡನ ಆದಾಯದಲ್ಲಿ ಸಂಸಾರ ನಡೆಸುವುದು ಕಷ್ಟವಾಗಿ ಸಂಪತ್ ದೇವಿಯೂ ಆಸ್ಪತ್ರೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದಳು.

ಸಮಾಜ ಸೇವೆಯ ನಂಟು:

ಆಸ್ಪತ್ರೆಯಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ, ಅವಳಿಗೆ ಸಮಾಜ ಸೇವೆಯ ನಂಟು ಅಂಟಿಕೊಂಡಿತು. ಗಂಡನ ಆವೇಶ, ದೌರ್ಜನ್ಯಕ್ಕೆ ಒಳಗಾಗಿ ಆಸ್ಪತ್ರೆ ಸೇರುತ್ತಿದ್ದ ಬಡ ಮಹಿಳೆಯರನ್ನು ನೋಡಿದಾಗ ಆಕೆಯ ಆಕ್ರೋಶ ಹೆಚ್ಚುತ್ತಿತ್ತು. ಹೇಗಾದರೂ ಮಾಡಿ ಇಂತಹ ಅನ್ಯಾಯಗಳನ್ನು ತಡೆಯಬೇಕೆಂದು ನಿರ್ಧರಿಸಿ ಹೋರಾಟಕ್ಕಿಳಿದೇ ಬಿಟ್ಟಳು.

ಇಂದು ಉತ್ತರ ಪ್ರದೇಶದ ಮೂಲೆ ಮೂಲೆಗಳಲ್ಲಿಯೂ ಗುಲಾಬಿ ಕ್ರಾಂತಿ ಹರಡಿದೆ. ಗಂಡಸರ ವಿರೋಧದ ನಡುವೆಯೂ ಅಲ್ಲಿನ ಮಹಿಳೆಯರು ಈ ಗ್ಯಾಂಗ್ ನ ಸದಸ್ಯರಾಗಿದ್ದಾರೆ. ಪೊರಕೆ ಹಿಡಿಯುತ್ತಿದ್ದ ಕೈಗಳು ತನ್ನ ಆತ್ಮ ರಕ್ಷಣೆಗಾಗಿ ಇಂದು ದೊಣ್ಣೆ ಹಿಡಿಯುತ್ತಿವೆ. ಹುಡುಗಿಯರನ್ನು ಚುಡಾಯಿಸುವವರು, ಮಡದಿಯನ್ನು ಹಿಂಸಿಸುವವರ ಮೇಲಷ್ಟೆ ಅಲ್ಲ ಈ ಗ್ಯಾಂಗ್ ನ ಆಕ್ರೋಶ, ಮನೆಯೊಳಗಿನ ಅತ್ಯಾಚಾರದ ವಿರುದ್ದ ದೂರು ಕೊಡಲು ಹೋದಾಗ ತಿರಸ್ಕರಿಸಿದ ಸರಕಾರಿ ಪೊಲೀಸ್ ಅಧಿಕಾರಿಗಳನ್ನೇ ಹಿಡಿದು ಥಳಿಸಿದ್ದಾರಂತೆ.

 ಗುಲಾಬಿ ಸೀರೆ, ಕೈಯಲ್ಲಿ ಒಂದು ದೊಣ್ಣೆ:
ಚಿತ್ರದಲ್ಲಿ ಕಾಣುತ್ತಿರುವಂತೆ ಈ ಗ್ಯಾಂಗ್ ನ ಸದಸ್ಯತ್ವದ ಮಹಿಳೆಯರಿಗೆ ಗುಲಾಬಿ ಬಣ್ಣದ ಸೀರೆ ಹಾಗೂ ಕೈಯಲ್ಲಿ ಒಂದು ದೊಣ್ಣೆ ಕೊಟ್ಟು ತರಬೇತಿ ನೀಡಲಾಗುತ್ತದಂತೆ. ಗುಲಾಬಿ ಬಣ್ಣವೇ ಯಾಕೆ? ಸಂಪತ್ ದೇವಿಗೆ ರಾಜಕೀಯ ಪಕ್ಷಗಳಲ್ಲಿ ನಂಬಿಕೆ ಇಲ್ಲ. ರಾಜಕೀಯದೊಡನೆ ಒಲವು ತೋರಿಸುವುದು ತಮ್ಮ ಮೂಲಭೂತ ಧೋರಣೆಗೆ ತಿಲಾಂಜಲಿ ಇಟ್ಟಂತೆ ಎಂಬುದು ಆಕೆಯ ನಂಬಿಕೆಯಂತೆ. ಅದಕ್ಕಾಗಿಯೇ ಆಕೆ ತನ್ನ ಗ್ಯಾಂಗ್ ಗೆ ಆರಿಸಿದ್ದು ಗುಲಾಬಿ ಬಣ್ಣ. ಗುಲಾಬಿ ಯಾವುದೇ ರಾಜಕೀಯ ಅಥವಾ ಧಾರ್ಮಿಕ ಪಂಥದ ಬಣ್ಣವಾಗಿಲ್ಲ. ನಾವು ಎಲ್ಲರಂತಲ್ಲ ಎಂದು ತನ್ನ ಸಮವಸ್ತ್ರದಿಂದಲೇ ಸಾರಿ ಹೇಳುತ್ತದೆ. ಇಂದು ಉತ್ತರಪ್ರದೇಶದಲ್ಲೇ ಎರಡು ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ ಈ ಗ್ಯಾಂಗ್ ವಿಶ್ವವ್ಯಾಪಿ ಸುದ್ದಿಯಾಗಿದೆ. "ಗಂಡಸರೇ ಆಳುವ ಈ ದೇಶದಲ್ಲಿ ನಾವು ಸಹಾಯ ಕೇಳುವುದು ವ್ಯರ್ಥ, ಮಹಿಳೆಯರು ನಮ್ಮನ್ನು ನಾವು ರಕ್ಷಿಸಿಕೊಳ್ಳಲು ನಾವೇ ಹೋರಾಡಬೇಕು" ಎಂಬದು ಸಂಪತ್ ದೇವಿಯ ಮಾತಂತೆ. ಆದರೆ ಈ ಗ್ಯಾಂಗ್ ನವರು ಯಾರೂ ಪುರುಷದ್ವೇಷಿಗಳಲ್ಲ. ಪ್ರತಿಯೊಬ್ಬ ಹೆಣ್ಣಿಗೂ ಒಂದು ಗಂಡಿನ ಹಾಗೂ ಪ್ರತಿಯೊಂದು ಹೆಣ್ಣಿಗೂ ಒಬ್ಬ ಗಂಡಿನ ಅವಶ್ಯಕತೆ ಸೃಷ್ಟಿ ನಿಯಮ. ಆದರೆ ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ಮಾತ್ರ ನಮ್ಮ ಆಕ್ರೋಶ ಎಂಬುದು ಸಂಪತ್ ದೇವಿಯ ಹೋರಾಟದ ಮಾತಂತೆ.
 
 ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ, ಪುಟ್ಟ ಮಕ್ಕಳ ಮೇಲೆ ನಡೆಯುವ ಮಾನಸಿಕ, ದೈಹಿಕ ದೌರ್ಜನ್ಯಗಳನ್ನು, ಅತ್ಯಾಚಾರ ಅನಾಚಾರಗಳನ್ನು ತಡೆಗಟ್ಟಲು ಎಲ್ಲ ಕಡೆಯೂ ಇಂತಹ ಗ್ಯಾಂಗ್ ಗಳು ಹುಟ್ಟಿಕೊಂಡರೆ, ನಮ್ಮಲ್ಲೂ ಮಹಿಳೆಯರು ನಿರ್ಭಯದಿಂದ ಓಡಾಡುವಂತಾಗಬಹುದಲ್ಲವೇ? ಮಹಿಳೆಯರ ಸ್ವಯಂ ರಕ್ಷಣೆಯನ್ನು ತಾವೇ ಮಾಡಿಕೊಳ್ಳುವಂತಾದರೆ, ಈ ಅನ್ಯಾಯಗಳು ಕೊನೆಯಾಗಬಹುದಲ್ಲವೇ? ಎಲ್ಲಾ ಸಂದರ್ಭಗಳಲ್ಲೂ ಕಾನೂನು ನಮ್ಮನ್ನು ರಕ್ಷಿಸುತ್ತದೆ ಎಂದು ನಾವಂದುಕೊಂಡರೆ ನಮ್ಮ ಮೂರ್ಖತನವೇ ಸರಿ. ಪುಟ್ಟ ಹಳ್ಳಿಯಲ್ಲಿ ದಿಟ್ಟ ಹೆಜ್ಜೆ ಇಟ್ಟಂತಹ ಸಂಪತ್ ದೇವಿಯಂತೆ ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಲು ಸಿದ್ಧರಾಗಿರೋಣ.

ಚಿತ್ರ ಕೃಪೆ: http://www.norwayemb.org.in/News_and_events/Culture/Film/Gulabi-Gang---World-Premier-in-Norway-/

http://blog.ounodesign.com/2013/01/08/gulabi-gang/