ಸಂಪದಪ್ರಿಯರು ಶುದ್ಧವಾಗಿ ಬರೆದರೆ ಅದೆಷ್ಟು ಚೆನ್ನ!

ಸಂಪದಪ್ರಿಯರು ಶುದ್ಧವಾಗಿ ಬರೆದರೆ ಅದೆಷ್ಟು ಚೆನ್ನ!

ಬರಹ

ಸಂಪದದಂತಹ ಆನ್‌ಲೈನ್ ವೇದಿಕೆಯನ್ನು ಕನ್ನಡಿಗರು ಸಮರ್ಥವಾಗಿ ಬಳಸುತ್ತಿದ್ದೇವೆ ಎನ್ನುವುದರಲ್ಲಿ ಅನುಮಾನವಿಲ್ಲ.ಇಲ್ಲಿ ಬರುತ್ತಿರುವ ವಿಚಾರಗಳು ಉನ್ನತ ಮಟ್ಟದವಾಗಿ ಖುಷಿಕೊಡುತ್ತವೆ.ಭಾಷೆಯ ಬಗೆಗೆ ಅಭಿಮಾನ, ಸಂಸ್ಕೃತಿ ಬಗ್ಗೆ ಹೆಮ್ಮೆ,ಕಳಕಳಿ ಬರಹಗಳಲ್ಲಿ ಎದ್ದು ಕಾಣುತ್ತವೆ.ತಾವು ಓದಿದ ಉತ್ತಮ ವಿಚಾರಗಳನ್ನು ಇತರರಲ್ಲಿ ಹಂಚುವ,ಒಳ್ಳೆಯ ಅಭಿರುಚಿಯನ್ನು ಹುಟ್ಟುಹಾಕುವ ಉತ್ಸಾಹ ಇಲ್ಲಿ ವ್ಯಕ್ತವಾಗುತ್ತದೆ.ಅಂತರ್ಜಾಲದ ಹೊಸ ಮುನ್ನಡೆಗಳ ಬಗೆಗೆ ಇತರರ ಗಮನ ಸೆಳೆಯುವ ಬಗ್ಗೆ ಮುತುವರ್ಜಿ ತೆಗೆದುಕೊಳ್ಳುವವರು ಸಾಕಷ್ಟು ಇದ್ದಾರೆ.ಕ್ರೀಡೆ-ಅದರಲ್ಲೂ ಕ್ರಿಕೆಟ್ ಬಗ್ಗೆ, ಪ್ರವಾಸ ಅನುಭವಗಳ ಬಗೆಗೆ ಬರೆಯುವವರ ಬಳಗವೇ ಇದೆ.

ಆದರೆ ಕೆಲವರ ಬರವಣಿಗೆಯಲ್ಲಿ ತಪ್ಪು ಕನ್ನಡ ಪದಗಳ ಬಳಕೆ ಕಿರಿಕಿರಿ ಅನ್ನಿಸುವಷ್ಟಿದೆ.ಕನ್ನಡ ಬಳಕೆ ತಪ್ಪಿ ಹೋಗಿ ಹೀಗೆ ಆಗುತ್ತಿರಬಹುದು. ಆದರೆ ಆನ್‌ಲೈನ್ನಲ್ಲಿ ಬರೆಯುವಾಗ ನಿಘಂಟು ಬಳಸುವುದು ನಮಗೆ ಸುಲಭ ತಾನೇ? ಸಂಶಯ ಬಂದಾಗ ನಿಘಂಟು ಬಳಸಿದರೆ ಒಳಿತು.ಯುನಿಕೋಡ್‌ನಲ್ಲಿ ಟೈಪಿಂಗ್ ಮಾಡಲು ಬರದೆ ಹೀಗಾಗುತ್ತಿದೆಯೇನೋ ಎನ್ನುವ ಸಂಶಯ ನನಗಿದೆ. ಹಾಗಿದ್ದರೆ ಅಂತಹ ಕಡೆ ಸಣ್ಣ ಟಿಪ್ಪಣಿ ಹಾಕಿದರೆ,ಇತರರು ಸಹಾಯ ಮಾಡಬಹುದು. ಒಟ್ಟಿನಲ್ಲಿ ನಾವು ಹೆಚ್ಚು ಬರೆಯೋಣ-ಜತೆಗೆ ಶುದ್ಧವಾಗಿ ಬರೆಯೋಣ. ಹಾಗಂದು ತಪ್ಪಾಗುತ್ತದೆ ಎಂದು ಬರೆಯದೆ ಇರುವುದು ಬೇಡ. ತಪ್ಪನ್ನು ತಿದ್ದಿಕೊಳ್ಳುವ ತೆರೆದ ಮನವಿದ್ದರೆ ಸಾಕು.