ಸಂಪದಿಗ- ರಘುರವರ ಚಿತ್ರ - ಪಲ್ಲಟ (ಕಲಾತ್ಮಕ ಚಲನಚಿತ್ರ)

ಸಂಪದಿಗ- ರಘುರವರ ಚಿತ್ರ - ಪಲ್ಲಟ (ಕಲಾತ್ಮಕ ಚಲನಚಿತ್ರ)

ಪಲ್ಲಟ - ಹಳ್ಳಿಚಿತ್ರ ಪ್ರೊಡಕ್ಷನ್ - #PALLATA the movie

 

21 ನೆ ಆಗಷ್ಟ್ 2016 ಬಾನುವಾರ ಪಲ್ಲಟ ಚಿತ್ರದ ಪ್ರೀಮಿಯರ್ ಶೋ ಗೆ ಬರಬೇಕೆಂದು ರಘುರವರ ಪೋನ್ ಕಾಲ್ ಬಂದಾಗ ಎಂತದೋ ಒಂದು ಕುತೂಹಲ.

 

ಕಳೆದ ಒಂದು ವರ್ಷದಿಂದ ರಘುರವರು ಸಿನಿಮಾದ ಕೆಲಸದಲ್ಲಿಯೆ ನಿರತರಾಗಿದ್ದರು ಅನ್ನುವುದು ತಿಳಿದಿತ್ತು. ಪಲ್ಲಟ ಚಿತ್ರದ ಯೆಲ್ಲನ ಕತೆಯನ್ನು ಅವರ ಬಾಯಲ್ಲೆ ಕೇಳಿದ್ದು ನೆನಪಿತ್ತು, ಹಾಗಾಗಿ ಅವರ ಕಲ್ಪನೆಯ ಯೆಲ್ಲ ಸಿನಿಮಾ ಪರದೆಯಲ್ಲಿ ಹೇಗೆ ಕಾಣುವನು! ಎನ್ನುವ ಕಾತುರ, ಹಾಗೆಯೆ ಸಿನಿಮಾ ಒಂದರ ಪ್ರೀಮಿಯರ್ ಶೋ ಹೇಗಿರುವುದು ಎನ್ನುವ ಕುತೂಹಲದೊಂದಿಗೆ ಪಲ್ಲಟ ಚಿತ್ರದ ಪ್ರೀಮಿಯರ್ ಶೋ ಗೆ ಹೋಗಿದ್ದೆ.

 

ನಾಯಕ ಯೆಲ್ಲನ ಸಾವಿನೊಂದಿಗೆ ಪ್ರಾರಂಭವಾಗುವ ಸಿನಿಮಾ, ಗ್ರಾಮೀಣ ಪರಿಸರದ ಪರಿಚಯ ಮಾಡಿಸುತ್ತದೆ, ಕಲ್ಬಾನ ಅನ್ನುವ ಹಳ್ಳಿಯ ಶವಸಂಸ್ಕಾರ ಕುತೂಹಲ ಮೂಡಿಸಿದರು ಸಹ, ಇಂದಿಗೂ ಹಳ್ಳಿಗಳಲ್ಲಿ ಶವಸಂಸ್ಕಾರಕ್ಕು ಸ್ಮಶಾನದ ಅನುಕೂಲವಿಲ್ಲದ ಹಿಂದುಳಿದ ಜನಾಂಗದವರ ವ್ಯಥೆಯ ಕತೆಯನ್ನು ಮನಮುಟ್ಟಿಸುತ್ತದೆ.

 

ಯೆಲ್ಲನ ಮಗಳು ತನ್ನ ಅಪ್ಪನ ಸಾವಿನ ನಂತರ ಸಾವಿಗೆ ಕಾರಣವಾಗುವ ಸನ್ನಿವೇಶಗಳನ್ನು ನೆನೆಪಿಸಿಕೊಳ್ಳುವ ಹಾದಿಯಲ್ಲಿ ಪಲ್ಲಟ ಸಿನಿಮಾ ಸಾಗುತ್ತದೆ. ಹಳ್ಳಿಯೊಂದರಲ್ಲಿ ತಮಟೆ ಬಾರಿಸುತ್ತ ಬದುಕು ಸಾಗಿಸುವ, ಗ್ರಾಮದ ಪಂಚಾಯಿತಿಯ ಸುದ್ದಿಯನ್ನು ಹಳ್ಳಿಯಲ್ಲೆಲ್ಲ ತಮಟೆ ಹೊಡೆಯುತ್ತ ಸಾರುವ ತಳವಾರನೊಬ್ಬನ ಬದುಕಿನ ಕತೆ ಪಲ್ಲಟ.

 

ವರ್ಷ ಪೂರ್ತಿ ಊರ ದೇವಾಲಯದ ಜಾತ್ರೆಗು, ಊರವರ ಹಬ್ಬ ಹರಿದಿನಗಳಿಗು, ಸಾವಿಗೂ ಯೆಲ್ಲನ ತಮಟೆಯೆ ಹಿನ್ನಲೆ, ಕಡೆಗೆ ಸುಗ್ಗಿ ಸಮಯದಲ್ಲಿ ಒಂದು ದಿನ ಊರ ಪ್ರತಿಮನೆಗೂ ಹೋಗಿ, " ಆಯಾ '' ಎನ್ನುವ ಹೆಸರಿನಲ್ಲಿ ಅವರು ಕೊಡುವ ಧನ ಧಾನ್ಯಗಳನ್ನು ತಂದರೆ ಅದೆ ಅವನ ಬದುಕಿಗೆ ಆದಾರ, ಅದೆ ಅವನ ವೃತ್ತಿ. ನಿರ್ಲಿಪ್ತ ಜೀವನ ಅವನದು. ಅವನಂತೆಯೆ ಊರಲ್ಲಿ ಕ್ಷೌರಿಕ, ಗಾಣಿಗ, ಪುರೋಹಿತ ಮುಂತಾದವರಿಗು ಆಯಾ ದ ದಿನ ಬಂದರೆ ಸಂಭ್ರಮ.

 

ತಾಂತ್ರಿಕತೆಯ ಹೊಸ ಹೊಸ ಅವಿಷ್ಕಾರಗಳು ಬಂದಂತೆ ಹಲವು ಉದ್ಯೋಗಗಳು ತಮ್ಮ ಆದಾರ ಕಳೆದುಕೊಳ್ಳುವಂತೆ, ಊರಿನಲ್ಲಿಯ ಹೊಸ ಜನಾಂಗ ಇಂತಹ ವೃತ್ತಿಗಳನ್ನು ಅಗತ್ಯವಿಲ್ಲವೆಂದು ನಿರ್ಧರಿಸಿ, ಅವರಿಗೆ ಕೊಡುವ ಆಯಾ ವ್ಯರ್ಥವೆಂದು ಅದನ್ನು ನಿಲ್ಲಿಸಲು ಹೊರಟಾಗ ಹಳೆಯ ಹಾಗು ಹೊಸಜನಾಂಗದ ನಡುವಿನ ಘರ್ಷಣೆ ಪಲ್ಲಟದ ವಸ್ತು. ಊರವರೆಲ್ಲ ತಿರಸ್ಕಾರದ ನಡುವೆಯು ತನ್ನ ಅಸ್ತಿತ್ವಕ್ಕೆ ಹೋರಾಡುವ ಯೆಲ್ಲ, ಊರ ಗೌಡನ ಆದಾರವನ್ನು ನಂಬಿದವನು , ಕಡೆಯಲ್ಲಿ ಊರಗೌಡನೆ ತಿರಸ್ಕಾರ ಮಾಡಿ ತಳ್ಳುವಾಗ ಯೆಲ್ಲನ ಆತ್ಮವಿಶ್ವಾಸ ತಳ ಮುಟ್ಟುತ್ತದೆ.

 

ನಾಟಕಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸುವ ನಿರ್ದೇಶಕ ರಘು ಎಸ್ ಪಿ, ಸಿನಿಮಾದಲ್ಲಿಯೂ ತಮ್ಮ ಹೊಸ ಪ್ರಯೋಗಗಳನ್ನು ಮುಂದುವರೆಸಿದ್ದಾರೆ. ತನ್ನ ಸ್ವಂತ ಮಗಳು ಸಹ ತನ್ನ ವೃತ್ತಿಯನ್ನು , ಆದಾಯವನ್ನು ತಿರಸ್ಕಾರವಾಗಿ ಕಾಣುವಳೆಂಬ ಅರಿವಿನಲ್ಲಿ, ಊರವರ ತಿರಸ್ಕಾರವನ್ನು ಭರಿಸಲಾಗದ ಅವನ ಹೃದಯದ ನೋವನ್ನು ಹುಚ್ಚಿಯೊಬ್ಬಳ ಚಿತ್ಕಾರದ ಮೂಲಕ, ಹುಡುಗನೊಬ್ಬನ ಗಾಳಿಚಕ್ರದ ಮೂಲಕ ತೋರಿಸಿದ್ದಾರೆ. ಹಾಗೆಯೆ ಸಿನಿಮಾದ ಹಿನ್ನಲೆ ಸಂಗೀತ ಸಹ ವಿಭಿನ್ನವಾಗಿ ಉಪಯೋಗಿಸಿದ್ದಾರೆ.

 

ಸಾದಾರಣ ನವ್ಯ ಕಲಾತ್ಮಕ ಸಿನಿಮಾಗಳೆಂದರೆ ಒಂದಾದರು ಹಸಿ ಬಿಸಿ ದೃಷ್ಯಗಳನ್ನು ತೋರಿಸಲೇ ಬೇಕೆನ್ನುವ ಸಿದ್ದ ಫಾರ್ಮುಲದಿಂದಲು ರಘು ಹೊರಗಿದ್ದಾರೆ, ಊರಗೌಡನ ಮಗಳು ಹಾಗು ಊರ ಹುಡುಗನೊಬ್ಬನ ಪ್ರಣಯ ಪ್ರಸಂಗದಲ್ಲಿ ಬೀದಿಯಲ್ಲಿ ಗಾಲಿಚಕ್ರ ಓಡಿಸುತ್ತ ಹೋಗುವ ಹುಡುಗನೊಬ್ಬ ಕಿಟಕಿಯಲ್ಲಿ ಬಗ್ಗಿ ನೋಡುವಾಗಲು ಲೋಕೆಶ್ ಮೊಸಳೆಯವರ ಕ್ಯಾಮರ ಕಿಟಕಿಯಲ್ಲಿ ಇಣುಕದೆ ತನ್ನ ಮಡಿವಂತಿಕೆ ತೋರುತ್ತದೆ. ಹಾಗೆಯೆ ಊರಜಾತ್ರೆಗೆ ಸಿದ್ದಳಾಗುವ ಯೆಲ್ಲನ ಮಗಳು ಸ್ನಾನ ಮಾಡುವಾಗಲು ಗಂಭೀರವಾಗಿಯೆ ಹೊರಗೆ ನಿಂತು ಅವಳು ಹೊರಬರುವದನ್ನು ಕಾಯುತ್ತದೆ!

 

ಹಳ್ಳಿಯ ಸಿನಿಮಾವದರು ಎಲ್ಲಿಯೂ ಉತ್ಕರ್ಷವಿಲ್ಲ , ಹಾಗೆ ಯಾವುದೇ ಸಂದೇಶವನ್ನು ಕೊಡಲು ಹೋಗದೆ , ಇದು ಇರುವುದು ಹೀಗೆ ಎಂದು ತೋರಿಸುವ ಸಂಯಮ ನಿರ್ದೇಶನದಲ್ಲಿ ಕಾಣಬಹುದು. ಅನಿಲ್ ಹಾಗು ಅಕ್ಷತರವರ ಅಭಿನಯ ಸಹಜತೆಯನ್ನು ಕಾಯ್ದುಕೊಂಡಿದೆ.

 

ಹಳ್ಳಿಯ ಸಿನಿಮಾವಾದರು ಇತರೆ ಹಳ್ಳಿಯ ಸಿನಿಮಾಗಳ ಸಾಲಿನಲ್ಲಿ ನಿಲ್ಲದೆ ವಿಭಿನ್ನವಾಗಿ ನಿಲ್ಲುವ ಹಳ್ಳಿಚಿತ್ರರವರ ಪಲ್ಲಟ ಯಶಸ್ವಿಯಾಗುವದೆಂದು ಆಶಿಸುತ್ತೇನೆ.

 

ಕಡೆಯದಾಗಿ, ಸಿನಿಮಾ ನೋಡಿ ಒಂದು ತಿಂಗಳ ನಂತರ ಅದರ ವಿಮರ್ಶೆಯೆ ಎನ್ನುವ ಪ್ರಶ್ನೆ ? , ಹೌದು ಬೇಕೆಂದು ಒಂದು ತಿಂಗಳು ಸುಮ್ಮನಿದು ಬರೆದೆ , ಕಾರಣ , ಸಿನಿಮಾ ನೋಡಿದ ತಕ್ಷಣ ಅದರ ಪ್ರಭಾವ ನಮ್ಮ ಮೇಲಿರುತ್ತದೆ, ಆದರೆ ಒಂದು ತಿಂಗಳಾದರು ಅದರ ಪ್ರಭಾವ ಮನದ ಮೇಲಿರುತ್ತ ನೋಡೋಣ ಎನ್ನುವ ಕುತೂಹಲ.

 

ಪಾರ್ಥಸಾರಥಿ ಎನ್