'ಸಂಪದ' ನಗೆಬುಗ್ಗೆ - ಭಾಗ ೧೦೦
ಗೋವಿಂದ ಅಂದರೆ…
ತಾತನ ಹತ್ತಿರ ಸಲುಗೆಯಿಂದ ಬಂದ ಮೊಮ್ಮಗ, ಗೋವಿಂದ “ತಾತ, ನೀನು ಯಾಕೆ ನನ್ನ ಹೆಸರು ಹಿಡಿದು ಕರೆಯದೇ ಮರಿ, ಪುಟ್ಟಾ ಅಂತ ಕರಿತೀ?” ಅಂತ ಕೇಳಿದ.
ತಾತ “ಯಾಕೋ? ಮರಿ ಅಂದರೆ ಏನು ತಪ್ಪು? ನಿನ್ನ ಹೆಸರು ಹಿಡಿದು ಕರೆದರೆ ನಿನಗೆ ಏನು ಪ್ರಯೋಜನ?” ಅಂದರು.
ಮೊಮ್ಮಗ “ ನನಗೇನೂ ಪ್ರಯೋಜನ ಇಲ್ಲ, ಆದರೆ ಅಪ್ಪಾ, ಅಮ್ಮನಿಗೆ ಅದರಿಂದ ಏನೋ ಪ್ರಯೋಜನ ಇದೆ. ನೀನು ಒಂದ್ಸಲ ಗೋವಿಂದ ಅಂದರೆ ಅವರ ದುಡ್ಡಿನ ತಾಪತ್ರಯವೆಲ್ಲ ಕಳೆಯುತ್ತೆ ಅಂತ ಮೊನ್ನೆ ಅಪ್ಪ ಅಮ್ಮಂಗೆ ಹೇಳ್ತಿದ್ದರು.” ಅಂದ.
***
ಆಶ್ವಾಸನೆ
ಗಾಂಪ ಸ್ಕೂಟರ್ ಮೇಲಿಂದ ಬಿದ್ದು ಕೈಗೆ ಪಟ್ಟಿಕಟ್ಟಿಸಿಕೊಂಡ. ಪಟ್ಟಿ ಬಿಚ್ಚಿದ ದಿನ ಡಾಕ್ಟರ್
“ಇನ್ನೇನೂ ಹೆದರಬೇಕಾಗಿಲ್ಲ. ನಿನ್ನ ಕೈ ಸರಿಹೋಯ್ತು.” ಅಂತ ಗಾಂಪನಿಗೆ ಆಶ್ವಾಸನೆ ಕೊಟ್ತರು.
ಗಾಂಪ “ಹಾಗಾದ್ರೆ ನಾನು ವೀಣೆ ಬಾರಿಸಬಹುದಾ?” ಅಂತ ವಿಚಾರಿಸಿದ.
ಡಾಕ್ಟರು “ ಭೇಷಾಗಿ ಬಾರಿಸಬಹುದು. ಅದಕ್ಕೇನಂತೆ !” ಅಂದರು.
ಗಾಂಪ “ ಏನಾಶ್ಚರ್ಯ ಡಾಕ್ಟರೇ ! ಪವಾಡ ಮಾಡಿಬಿಟ್ಟಿರಿ. ಇದಕ್ಕೆ ಮುಂಚೆ ನನಗೆ ವೀಣೆ ಬಾರಿಸೋಕೆ ಬರ್ತಾನೇ ಇರಲಿಲ್ಲ.” ಅಂದ.
***
ಗಣಿತದಲ್ಲೂ ವೀಕು !
ವ್ಯಾಕರಣದಲ್ಲಿ ಗಾಂಪ ಬಹಳ ಕಡಿಮೆ ಅಂಕಗಳನ್ನು ತೆಗೆಯುತ್ತಿದ್ದ. ಮೇಷ್ಟರು ಅವನಿಗೆ ಒಂದು ವಾಕ್ಯ ಕೊಟ್ಟು ಅದನ್ನು ನೂರು ಬಾರಿ ಬರೆಯುವಂತೆ ಅಣತಿಯಿಟ್ಟರು. ಕ್ಲಾಸು ಮುಗಿಯುವ ವೇಳೆಗೆ ಗಾಂಪ ತಾನು ಬರೆದದ್ದನ್ನು ತಂದು ಮೇಷ್ಟರ ಮುಂದಿಟ್ಟ. ಮೇಷ್ಟರು ಅದನ್ನು ನೋಡಿ,
“ಏನೋ ಇದು? ನೂರು ಸಲ ಬರಿ ಅಂತ ಹೇಳಿದರೆ ನಲವತ್ತೇ ಸಲ ಬರೆದಿದ್ದೀ?” ಅಂತ ಕೇಳಿದರು.
ಗಾಂಪ ತಲೆ ಕೆರೆದುಕೊಳ್ಳುತ್ತಾ “ ಹಾಗೇನು ಸರ್? ಇದ್ದರೂ ಇದ್ದೀತು. ನಾನು ಗಣಿತದಲ್ಲೂ ವೀಕು" ಅಂತ ಸಮಜಾಯಿಸಿ ಹೇಳಿದ.!
***
ಕಾಗದ
“ಇವತ್ತು ಈ ಕಾಗದಾನ ಪೋಸ್ಟ್ ಮಾಡಿದರೆ ನಾಳೆ ಮೈಸೂರಿಗೆ ಹೋಗಿ ಸೇರುತ್ತಾ ಹೇಳು?”
“ಯಾಕಾಗಬಾರದು? ಸೇರೇ ಸೇರುತ್ತೆ"
“ಖಂಡಿತ?”
“ಖಂಡಿತ.”
“ಹೋಗಿ ಸೇರೊಲ್ಲ ಅಂತ ನಾನು ಬೆಟ್ ಕಟ್ತೇನೆ !”\
“ಯಾಕೆ ಹಾಗೆ ಹೇಳ್ತಿ?”
“ಯಾಕಂದ್ರೆ ಈ ಕಾಗದದ ಮೇಲೆ ನಾನು ಬರೆದಿರೋದು ಧಾರವಾಡದ ಅಡ್ರೆಸ್"!
***
ಸತ್ತದ್ದು ಯಾರು?
ಸೈನ್ಯಕ್ಕೆ ಸೇರಿದ್ದ ಗ್ರಾಮದ ಯುವಕನೊಬ್ಬ ಕೆಲವು ವರ್ಷಗಳು ಕಳೆದ ಮೇಲೆ ತನ್ನ ಗ್ರಾಮಕ್ಕೆ ಹೋದ. ಅಲ್ಲಿನ ಪಂಚಾಯತಿ ಚೇರ್ಮೆನ್ ಗಾಂಪನಿಗೆ ಮರ್ಯಾದೆ ಸಲ್ಲಿಸಲು ಅವರ ಮನೆಗೆ ಹೋದ.
ಸುಮಾರು ವಯಸ್ಸಾದ ಗಾಂಪನಿಗೆ ಆತನನ್ನು ಗುರುತಿಸಲು ಪ್ರಯತ್ನಿಸುತ್ತಾ,” ನೀನು ಪುಟ್ಟಯ್ಯನ ಮಗ ಅಂತ ಗೊತ್ತು. ಅಣ್ಣ ತಮ್ಮಂದಿರು ಒಟ್ಟಿಗೆ ಸೈನ್ಯಕ್ಕೆ ಸೇರಿದಿರಿ ಅಂತಾನೂ ಗೊತ್ತು. ಕಳೆದ ಮಹಾಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದವನು ನಿನ್ನಣ್ಣನೋ, ನೀನೋ?” ಅಂತ ಪ್ರಶ್ನಿಸಿದರು.
***
ದೂರದೃಷ್ಟಿ !
“ಹದ್ದುಗಳಿಗೆ ದೂರದೃಷ್ಟಿಯಿದೆ ಅಂತ ವಿಜ್ಞಾನಿಗಳು ಹೇಳ್ತಾರೆ. ನಿಜವೇ?
“ನಿಜ, ಅದರಲ್ಲೇನು ಸಂದೇಹ?”
“ಅದು ಹ್ಯಾಗೆ ನಿಶ್ಚಯವಾಗಿ ಹೇಳ್ತಿ?’
“ಮತ್ತೆ ! ಹದ್ದುಗಳು ಕನ್ನಡಕ ಹಾಕೋದನ್ನು ಎಲ್ಲಾದರೂ ನೋಡಿದ್ದೀಯಾ?”
***
ಸ್ನಾನ ಮಾಡಬಹುದೇ?
ಒಬ್ಬಾತ ಡಾ. ಗಾಂಪನ ಶಾಪಿಗೆ ಬಂದ. ಆತ ಒಳಗೆ ಬರುತ್ತಲೇ ಡಾಕ್ಟರು ತಮ್ಮ ಮೂಗಿಗೆ ಕರವಸ್ತ್ರ ಒತ್ತಿ ಹಿಡಿದು “ಏನಾಗಬೇಕಿದೆ?” ಅಂತ ಕೇಳಿದರು.
ಆತ “ಡಾಕ್ಟರೇ ಹೋದ ವರ್ಷ ನನಗೆ ಕೊರೋನಾ ಬಂದಾಗ ನಿಮ್ಮತ್ರ ಚಿಕಿತ್ಸೆ ಮಾಡಿಸಿಕೊಂಡದ್ದು ನಿನಗೆ ಜ್ಞಾಪಕ ಇರಬಹುದು" ಅಂದ.
“ಹೌದು, ನಿಮಗೆ ಕೊರೋನಾ ಜೊತೆ ಜ್ವರವೂ ಇದ್ದು. ನಾನೇ ಮನೆಗೆ ಬಂದು ಚಿಕಿತ್ಸೆ ನೀಡಿದ್ದೆ. ಸರಿಯಾಗಿ ನೆನಪಿದೆ. “
“ಸ್ನಾನ ಮಾಡಬೇಡ ಅಂತ ಆಗ ನೀವು ಎಚ್ಚರಿಕೆ ಕೊಟ್ಟಿದ್ದಿರಿ. ಈಗ ನಾನು ಸ್ನಾನ ಮಾಡಬಹುದೇ?”
***
ಅಡ್ವಾನ್ಸ್ ಟಿಕೇಟ್
ಗಾಂಪ: ಇತ್ತೀಚೆಗೆ ಮೊಬೈಲ್ ನಲ್ಲಿ ಸಿನೆಮಾಗಳು ಬರೋದ್ರಿಂದ ಜನರು ಸಿನೆಮಾ ಟಾಕೀಸ್ ಗೆ ಹೋಗೋದನ್ನೇ ಬಿಟ್ಟು ಬಿಟ್ಟಿದ್ದಾರೆ ಅಂತ ಕಾಣುತ್ತೆ. ಕೆಲವು ಸಿನೆಮಾ ಮಂದಿರಗಳಲ್ಲಿ ನೊಣ ಹೊಡೆಯುವುದಕ್ಕೂ ಜನ ಇರೋದಿಲ್ಲ.”
ಸೂರಿ: “ಹೌದು, ಮೊನ್ನೆ ಒಂದು ಸಿನೆಮಾಗೆ ಅಡ್ವಾನ್ಸ್ ಟಿಕೆಟ್ ತಗೋಬೇಕೂಂತ ಹೋದೆ. ‘ಅದೇನು ಬೇಡ, ಬೇಕಾದಷ್ಟು ಜಾಗ ಖಾಲಿ ಇರುತ್ತೆ, ಬನ್ನಿ’ ಅಂದರು. ಸರಿ, ಸಿನೆಮಾ ಎಷ್ಟೊತ್ತಿಗೆ ಶುರು ? ಅಂತ ಕೇಳಿದ್ದಕ್ಕೆ ಅವರೇನೆಂದರು ಗೊತ್ತೇ?”
“ನಿಮಗೆ ಎಷ್ಟೊತ್ತಿಗೆ ಬರೋಕೆ ಅನುಕೂಲ? ಎಂದು ಕೇಳಿದರು.
***
(ಸಂಗ್ರಹ) ಚಿತ್ರ ಕೃಪೆ: ಹರಿಣಿಯವರ ವ್ಯಂಗ್ಯಚಿತ್ರದಿಂದ
***
ಆತ್ಮೀಯ ಓದುಗರಲ್ಲಿ: ಕಳೆದ ನೂರು ವಾರಗಳಿಂದ ನಾನು ಸಂಗ್ರಹಿಸಿದ ಹಾಸ್ಯ ತುಣುಕುಗಳನ್ನು ಓದಿ ಹೊಟ್ಟೆ ತುಂಬಾ ನಕ್ಕಿರುವಿರಿ ಎಂದು ನಂಬಿರುವೆ. ಈ ನಗೆಬುಗ್ಗೆಯ ಸರಣಿ ಈ ವಾರಕ್ಕೆ ತಾತ್ಕಾಲಿಕವಾಗಿ ಅಂತ್ಯಗೊಳ್ಳಲಿದೆ. ನಂತರ ಮುಂದಿನ ವಾರದಿಂದ ಹಳೆಯ ‘ಮಯೂರ' ಮಾಸ ಪತ್ರಿಕೆಯಲ್ಲಿ ಪ್ರಕಟವಾದ ನಿಜ ಜೀವನದ ಹಾಸ್ಯ ‘ಮಯೂರ ಹಾಸ್ಯ' ಎನ್ನುವ ಹೆಸರಿನಲ್ಲಿ ಪ್ರಕಟವಾಗಲಿದೆ.