ಸಂಪದ ನಗೆಬುಗ್ಗೆ - ಭಾಗ ೧೧೫

ಎತ್ತರದ ಕೆಲಸ
ಸೂರಿ ಎಂಬ ಶಿಕ್ಷಕ ಬಹು ವರ್ಷಗಳ ಬಳಿಕ ಗಾಂಪ ಎನ್ನುವ ರೈತನನ್ನು ಭೇಟಿಯಾದ. ‘ನಿನಗೆ ನನ್ನ ನೆನಪಿದೆಯೇ? ನಾನು ನಿನ್ನ ಮಗನ ಶಿಕ್ಷಕನಾಗಿದ್ದೆ. ಅವನು ಬಹು ಎತ್ತರದ ಸ್ಥಾನ ಪಡೆಯುತ್ತಾನೆ ಎಂದು ಆಗಾಗ ಹೇಳಿದ್ದೆ. ಗೊತ್ತಾ?’ ಕೇಳಿದ.
ಗಾಂಪನ ಮುಖ ಅರಳಿತು. ‘ದೇವರಾಣೆ ನಿಮ್ಮ ಮಾತು ಸತ್ಯವಾಗಿದೆ.’ ಎಂದ.
‘ಅಂದರೆ ಅವನು ಸರಕಾರದ ಉನ್ನತ ಹುದ್ದೆಯಲ್ಲಿದ್ದಾನೆ ಅಂತಾಯ್ತು.’ ಸೂರಿ ಹೇಳಿದ.
‘ಸರಕಾರಿ ನೌಕರಿ ಅಲ್ಲ. ಸರಕಾರಿ ಕಚೇರಿ ಪಕ್ಕದಲ್ಲಿ ಒಂದು ಬೃಹತ್ ಮೊಬೈಲ್ ಟವರ್ ಕಟ್ಟುತ್ತಾ ಇದ್ದಾರಲ್ಲ, ಅದರ ತುತ್ತ ತುದಿಯಲ್ಲಿ ನನ್ನ ಮಗನೂ ಕೆಲಸ ಮಾಡುತ್ತಿದ್ದಾನೆ.’ ಗಾಂಪ ಹೇಳಿದ.
***
ನಾನೂ ಅಷ್ಟೇ…
ಮದುವೆಯಾದ ಮರುದಿನ ಸೂರಿ ಮತ್ತು ಶ್ರೀಮತಿ ಕಾರಿನಲ್ಲಿ ಪ್ರಯಾಣ ಹೊರಟಿದ್ದರು. ಮಾತುಗಳ ಮಧ್ಯೆ ಶ್ರೀಮತಿಯನ್ನು ಕೇಳಿದ. “ನಿನಗೆ ಅಡುಗೆ ಮಾಡಲು ಬರುತ್ತಾ?”
ಶ್ರೀಮತಿ ಹೇಳಿದಳು “ಬರಲ್ಲ, ಆದರೆ ಯೂ ಟ್ಯೂಬ್ ನೋಡಿಕೊಂಡು ಅಡುಗೆ ಮಾಡುತ್ತೇನೆ”
ಸೂರಿಯೂ ಹೇಳಿದ “ ನಾನೂ ಅಷ್ಟೇ, ನಂಗೂ ಕಾರ್ ಡ್ರೈವಿಂಗ್ ಬರಲ್ಲ, ಆದರೆ ಯೂ ಟ್ಯೂಬ್ ನೋಡಿಕೊಂಡೇ ಡ್ರೈವ್ ಮಾಡ್ತೇನೆ “!
***
ಮದುವೆ ವೆಚ್ಚ
ಸೂರಿ: ಮಗಳ ಮದುವೆಗೆ ಎಷ್ಟು ವೆಚ್ಚ ಆಯ್ತು?
ಗಾಂಪ: ಹದಿನೈದು ಸಾವಿರ
ಸೂರಿ: ಅಷ್ಟೇನಾ? ಹೇಗೆ?
ಗಾಂಪ: ಮಗಳಿಗೆ ಹದಿನೈದು ಸಾವಿರ ರೂಪಾಯಿಯ ಮೊಬೈಲ್ ಕೊಡಿಸಿದೆ. ಆಕೆ ಇಡೀ ದಿನ ಮೊಬೈಲ್ ನಲ್ಲಿ ಚಾಟ್ ಮಾಡಿ ಒಬ್ಬನನ್ನು ಪ್ರೀತಿಸಿ ಓಡಿ ಹೋಗಿ ಲವ್ ಮ್ಯಾರೇಜ್ ಆದಳು !
***
ಯಾರೂ ಮೇಲಲ್ಲ
ಗಾಂಪ: ಅತ್ತೆ -ಸೊಸೆಯರು ತಾನು ಮೇಲು, ತಾನು ಮೇಲು ಅಂತ ಕಿತ್ತಾಡ್ತಿರ್ತಾರೆ ಯಾಕೆ?
ಸೂರಿ: ಅವರಿಬ್ಬರಲ್ಲಿ ಯಾರೂ ಮೇಲಲ್ಲ
ಗಾಂಪ: ಯಾಕೆ?
ಸೂರಿ: ಯಾಕಂದ್ರೆ ಅವರಿಬ್ಬರೂ ಫಿಮೇಲು.
***
ಅಡುಗೆ
ಸೂರಿ: ನಿಮ್ಮನೇಲಿ ಅಡುಗೆ ನಿಮ್ಮ ಅತ್ತೆ ಚೆನ್ನಾಗಿ ಮಾಡ್ತಾರೋ ಅಥವಾ ನಿಮ್ಮ ಹೆಂಡತಿ ಚೆನ್ನಾಗಿ ಮಾಡ್ತಾರೋ?
ಗಾಂಪ: ಅವರಿಬ್ಬರೂ ಅಡುಗೆನೇ ಮಾಡಲ್ಲ.
ಸೂರಿ: ಹಾಗಾದ್ರೆ ಊಟಕ್ಕೆ?
ಗಾಂಪ: ನಾನೇ ಯಾವಾಗಲೂ ಅಡುಗೆ ಮಾಡೋದು !
***
ಭರವಸೆ
ರಾಜಕಾರಣಿ ಸೂರಿ ವೇದಿಕೆಯ ಮೇಲೆ ಭಾವಪರವಶನಾಗಿ ಭಾಷಣ ಮಾಡುತ್ತಾ ಹೀಗಂದ…
ಸೂರಿ: ನಾನು ದೇಶಕ್ಕಾಗಿ ಒಂದು ಹೊತ್ತಿನ ಊಟ ಬಿಟ್ಟಿದ್ದೇನೆ.
ಗಾಂಪ: ದಿನಕ್ಕೆ ಎಷ್ಟು ಬಾರಿ ಊಟ ಮಾಡ್ತೀರಾ?
ಸೂರಿ: ಮೂರು ಬಾರಿ.
ಗಾಂಪ: ಎಲ್ರೂ ಮೂರೇ ಬಾರಿ ಊಟ ಮಾಡೋದು.
ಸೂರಿ: ನಾನು ಮೊದಲು ನಾಲ್ಕು ಬಾರಿ ಊಟ ಮಾಡ್ತಾ ಇದ್ದೆ.
***
ದುಡ್ಡು
ಶ್ರೀಮತಿ: ನಂಗೆ ಅದು ಗೊತ್ತು, ಅವರು ಗೊತ್ತು, ಅಂತಾವ್ರು ಗೊತ್ತು ಅಂತೆಲ್ಲಾ ಅಂತೀರಾ. ಆದ್ರೆ ದುಡ್ಡು ಹೇಗೆ ಮಾಡ್ತಾರೆ ಅಂತ ಗೊತ್ತಾ?
ಸೂರಿ: ಅದೂ ಗೊತ್ತು. ಪೇಪರ್ ನಲ್ಲಿ ಮಾಡ್ತಾರೆ !
***
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ