ಸಂಪದ ನಗೆಬುಗ್ಗೆ - ಭಾಗ ೧೧೭

ಸಂಪದ ನಗೆಬುಗ್ಗೆ - ಭಾಗ ೧೧೭

ಕುಡಿತದ ಅಮಲು

ಸೂರಿ: ಗಾಂಪ, ರಾತ್ರಿ ಕುಡಿದು ಮನೆಗೆ ಹೋದಾಗ ಹೆಂಡ್ತಿ ಬಾಗಿಲು ತೆಗೆಯಲಿಲ್ಲ ಕಣೋ. ರಸ್ತೆ ಪಕ್ಕದಲ್ಲಿದ್ದ ಮರದಡಿಯಲ್ಲಿ ಮಲಗಿದ್ದೆ.

ಗಾಂಪ: ಬೆಳಿಗ್ಗೆಯಾದಾಗ ಮನೆಗೆ ಹೋದೆ ತಾನೇ?

ಸೂರಿ: ಅಷ್ಟರಲ್ಲಿ ಕುಡಿದಿದ್ದ ಅಮಲು ಇಳಿದಿತ್ತು. ಆಮೇಲೆ ನೆನಪಾಯ್ತು. ಊರಿಗೆ ಹೋಗಿದ್ದ ನನ್ನ ಹೆಂಡತಿ ಇನ್ನೂ ಮನೆಗೆ ಬಂದಿರಲಿಲ್ಲ ಅಂತ!

***

ದಿನ ಭವಿಷ್ಯ

ಬೆಳಗ್ಗೆ ಬೆಳಗ್ಗೆ ಎದ್ದು ಸೂರಿ ದಿನಭವಿಷ್ಯ ನೋಡೋಣ ಅಂತ ಪೇಪರ್ ತೆರೆದ. ಅದರಲ್ಲಿ 'ಭಯಾನಕ ಗಂಡಾಂತರವೊಂದು ಎದುರಾಗಲಿದೆ. ಆದರೆ, ಸಮಯಪ್ರಜ್ಞೆ ಇದ್ದರೆ ಬಚಾವಾಗಬಹುದು' ಎಂದು ಬರೆದಿತ್ತು. ಸೂರಿಗೆ ಪುಲ್ ಗಾಭರಿ ಆಯ್ತು. ಇವತ್ತು ಆಫೀಸಿಗೆ ರಜಾ ಹಾಕೋಣ ಅಂದೊಂಡ. ಆದ್ರೆ ಆಫೀಸಲ್ಲಿ ಸಾಕಷ್ಟು ಕೆಲಸ ಇತ್ತು. ಅಲ್ಲದೆ ಗಂಡಾಂತರ ಅಂದ್ರೆ ಅದು ಮನೆಯಲ್ಲೂ ಎದುರಾಗಬಹುದು, ಯಾರಿಗೊತ್ತು. ಆಗಿದ್ದಾಗ್ಲಿ ನೋಡಿಯೇ ಬಿಡೋಣ ಅಂತ ರೆಡಿ ಆಗಿ ಆಫೀಸಿಗೆ ಹೊರಟ. 'ಯಾಕ್ರೀ ಒಂಥರಾ ಡಲ್ ಇದೀರಾ?' ಅಂತ ಕೇಳಿದ ಹೆಂಡತಿ ಶ್ರೀಮತಿಗೂ ಏನೂ ಹೇಳದೆ ಹೊರಟ ಸೂರಿ. ಗಾಡಿ ಸ್ಟಾರ್ಟ್ ಮಾಡಿಕೊಂಡು ಆಫೀಸ್ ಕಡೆ ಹೊರಟವನು ಎಂದಿಗಿಂತ ಹೆಚ್ಚು ಕೇರ್‌ಪುಲ್‌ ಆಗಿ ಗಾಡಿ ಓಡಿಸತೊಡಗಿದ. ಇನ್ನೇನು ಮನೆಯ ರಸ್ತೆ' ದಾಟಬೇಕು ಎನ್ನುವಷ್ಟರಲ್ಲಿ ಆ ತಿರುವಿನಲ್ಲಿ ಸೂರಿ ಗಾಡಿ ತಿರುಗಿಸುವುದಕ್ಕೂ. ಪಕ್ಕದಲ್ಲೇ ಇದ್ದ ಟ್ರಾನ್ಸ್‌ಫಾರ್ಮ‌ರ್ ಹೈ ವೋಲ್ವೇಜ್ ತಂತಿ ಮೇಲಿನಿಂದ ಇವನ ಮೇಲೆ ಬೀಳುವುದಕ್ಕೂ ಸರಿಹೋಯಿತು. ಗಾಡಿಯಿಂದಲೂ ಕೆಳಗೆ ಬಿದ್ದ ಸೂರಿಯ ಮೈಮೇಲೆಯೇ ಆ ತಂತಿ ಬಿದ್ದಿತ್ತು. ಸೂರಿ 'ಅಯ್ಯೋ, ಕಡೆಗೂ, ದಿನಭವಿಷ್ಯ ನಿಜವೇ ಆಯ್ತಲ್ಲಪ್ಪ ' ಎಂದು ಕೂಗಿಕೊಂಡು ಅಲ್ಲೇ ವಿಲವಿಲನೆ ಒದ್ದಾಡತೊಡಗಿದ. ಆದರೆ ಒಂದೆರಡು ಕ್ಷಣಗಳ ನಂತರ ಇದ್ದಕ್ಕಿದ್ದಂತೆ ಅವನಿಗೆ ಜ್ಞಾಪಕ ಬಂತು, 'ಅರೇ, ನಮ್ ಏರಿಯಾದಲ್ಲಿ ಎರಡು ದಿನದಿಂದ ಕರೆಂಟೇ ಇಲ್ಲವಲ್ಲ' ಅಂತ. ಹಾಗಾಗಿ, ಸಮಾಧಾನವಾಗಿ ಮೇಲೆದ್ದು ನಿಟ್ಟುಸಿರು ಬಿಡುತ್ತಾ ಮನಸ್ಸಿನಲ್ಲೇ ಅಂಡ್ಕೊಂಡ 'ಅಬ್ಬಾ, ಸದ್ಯ, ನಮ್ ಏರಿಯಾದಲ್ಲಿ ಕರೆಂಟ್ ಇಲ್ಲ ಅಂತ ಸರಿಯಾದ ಸಮಯದಲ್ಲಿ ನೆನಪಾಗೇ ಇದ್ದಿದ್ರೆ, ಇವತ್ತು ಸತ್ತೇ ಹೋಗಿಡ್ತಿದ್ದೆ'.

***

ಸಮಯ

ವೈದ್ಯ: ಏನಯ್ಯಾ ದಿನಾ ಹತ್ತು ಗಂಟೆಗೆ ಸರಿಯಾಗಿ ನಮ್ಮ ಕ್ಲಿನಿಕ್ ಹತ್ತಿರ ಬರುತ್ತೀಯಲ್ಲ ಏಕೆ?

ಸೂರಿ: ನೀವೇ ಬೋರ್ಡ್ ಹಾಕಿದ್ದೀರಲ್ಲಾ ಡಾಕ್ಟ್ರೇ, ಹೆಂಗಸರನ್ನು ನೋಡುವ ಸಮಯ ಬೆಳಿಗ್ಗೆ ೧೦ ಗಂಟೆಯಿಂದ ಮದ್ಯಾಹ್ನ ೧ ಗಂಟೆಯ ತನಕ ಅಂತ.

***

ಡಬಲ್ ಪದಗಳು

ಶ್ರೀಮತಿ: ಅಲ್ಲ ತಾರಾ, ಗಂಡಸರು ದಿನಕ್ಕೆ ಸುಮಾರು ೨೦೦೦ ಪದಗಳನ್ನು ಬಳಸುತ್ತಾರೆ. ಆದರೆ ನಾವು ಅದರ ಡಬಲ್ ಪದಗಳನ್ನು ಬಳಸುತ್ತೇವಲ್ಲ ಎಕೆ?

ತಾರಾ: ಹೌದು, ಗಂಡಸರಿಗೆ ಒಂದು ಸಾರಿ ಹೇಳಿದ ಮಾತು ಅರ್ಥ ಆಗುವುದಿಲ್ಲವಲ್ಲ ಅದಕ್ಕೆ.

***

ಮದುವೆ

ಸೂರಿ: ಗಾಂಪಾ, ಕುಡಿತ, ಸಿಗರೇಟು, ಜೂಜು, ರೇಸು ಎಲ್ಲವನ್ನೂ ಅವಳಿಗಾಗಿ ಬಿಟ್ಟು ಬಿಟ್ಟೆಯಲ್ಲಾ ಇನ್ನಾದರೂ ಅವಳನ್ನು ಮದುವೆಯಾಗು.

ಗಾಂಪ: ಇಷ್ಟೆಲ್ಲಾ ಬಿಟ್ಟ ಮೇಲೆ ಅವಳನ್ನು ಯಾಕೆ ಮದುವೆಯಾಗಲಿ. ಇನ್ನೂ ಒಳ್ಳೆಯ ಹುಡುಗಿಯನ್ನು ಮದುವೆಯಾಗೋಣ ಅಂತ ಸುಮ್ಮನಿದ್ದೀನಿ.

***

ಸುಖ- ದುಃಖ

ಸೂರಿ: ಗಾಂಪ, ಕಷ್ಟ ಯಾವತ್ತಿದ್ರೂ ಜೊತೆಗಿರುತ್ತೆ. ಆದರೆ ಸುಖ ಬಂದು ಹೋಗುತ್ತಿರುತ್ತದೆ. ಇದಕ್ಕೆ ಯಾವುದಾದರೂ ಒಂದು ಒಳ್ಳೆಯ ಉದಾಹರಣೆ ಕೊಡು.

ಗಾಂಪ: ಹೆಂಡತಿ ಯಾವಾಗಲೂ ಜೊತೆಗಿರುತ್ತಾಳೆ. ಆದರೆ ಅವಳ ಗೆಳತಿಯರು ಆಗಾಗ ಬಂದು ಹೋಗುತ್ತಿರುತ್ತಾರೆ.

***

ಊಟ

ಸೂರಿ: ನಿನಗೆ ಎಷ್ಟು ಸಲ ಹೇಳಿದ್ದೀನಿ. ಅಡುಗೆ ಮಾಡುವಾಗ ಮೊಬೈಲ್ ನೋಡಬೇಡ ಅಂತ. ನೀನು ಮಾಡಿರುವ ಸಾರಿಗೆ ಉಪ್ಪಿಲ್ಲ, ಹುಳಿ ಇಲ್ಲ.

ಶ್ರೀಮತಿ: ನಾನು ನಿಮಗೆ ಎಷ್ಟು ಸಲ ಹೇಳಿದ್ದೇನೆ. ಊಟ ಮಾಡುವಾಗ ನೀವು ಮೊಬೈಲ್ ನೋಡ್ಬೇಡಿ ಅಂತ. ನೀವು ಅನ್ನಕ್ಕೆ ನೀರು ಹಾಕಿಕೊಂಡಿದ್ದೀರಿ.

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ