'ಸಂಪದ' ನಗೆ ಬುಗ್ಗೆ - ಭಾಗ ೨೦

'ಸಂಪದ' ನಗೆ ಬುಗ್ಗೆ - ಭಾಗ ೨೦

ಮರಳಿ ಯಾಕೆ ಕೊಡ್ತಾ ಇಲ್ಲ !

ನ್ಯಾಯಾಧೀಶ: ಯಾಕಯ್ಯಾ ನೀನು ನಿನ್ನ ಗೆಳೆಯನಿಂದ ಸಾಲ ತೆಗೆದುಕೊಂಡಿದ್ದನ್ನು ಮರಳಿ ಕೊಡ್ತಾ ಇಲ್ಲ?

ಗಾಂಪ: ಶಾಲೆಯಲ್ಲಿ ನಮ್ಮ ಗಣಿತ ಮೇಷ್ಟ್ರು ಕೈಗಡ ತೆಗೆದುಕೊಳ್ಳಲು ಮಾತ್ರ ಕಲಿಸಿದರು ಸರ್, ತೆಗೆದುಕೊಂಡಿದ್ದನ್ನು ಮರಳಿ ಕೊಡುವುದರ ಬಗ್ಗೆ ತಿಳಿಸಲೇ ಇಲ್ಲ.

ನ್ಯಾಯಾಧೀಶ: ಏನಯ್ಯಾ ಹಾಗೆ ಹೇಳಿದರೆ? ಸಾಲಕ್ಕೂ ಶಾಲೆಯ ಗಣಿತ ಮೇಷ್ಟ್ರು ಕಲಿಸುವುದಕ್ಕೂ ಏನು ಸಂಬಂಧ?

ಗಾಂಪ: ಸರ್, ಗಣಿತ ಪಾಠದಲ್ಲಿ ೨೦ ರಿಂದ ೭ ನ್ನು ಕಳೆಯಲು ಹೇಳಿದರು. ಸೊನ್ನೆಯಿಂದ ೭ನ್ನು ಕಳೆಯಲು ಸಾಧ್ಯವಾಗದೆ ಇದ್ದಾಗ ಪಕ್ಕದ ೨ ರಿಂದ ೧ನ್ನು ಸಾಲವಾಗಿ ತರಲು ಹೇಳಿದ್ದರು. ಹಾಗೆ ಲೆಕ್ಕದ ಸಮಸ್ಯೆ ಪರಿಹಾರವಾಯಿತು. ಆದರೆ ಮತ್ತೆಂದೂ ಆ ೧ನ್ನು ತಿರುಗಿ ಕೊಡುವಂತೆ ಕಲಿಸಲೂ ಇಲ್ಲ. ನಾವು ಕಲಿಯಲೂ ಇಲ್ಲ. ಹಾಗೆ ಕಲಿತ ಸಾಲ ಮಾಡುವ ಗುಣ ಮತ್ತೆ ಬಿಟ್ಟು ಹೋಗಲೂ ಇಲ್ಲ ಸರ್.!

***

ಮೋಡಗಳೇಕೆ ಕಪ್ಪು?

ಟೀಚರ್: ಮೋಡಗಳು ಯಾಕೆ ಕಪ್ಪಗೆ ಇರುತ್ತವೆ? ಗಾಂಪ ನೀನು ಹೇಳು?

ಗಾಂಪ: ಸರ್ ಅವು ಸೂರ್ಯನ ಸಮೀಪ ಇರುವುದರಿಂದ ಕಪ್ಪಗಿರುತ್ತವೆ.

ಟೀಚರ್: ಅದೇಗೆ?

ಗಾಂಪ: ಅಲ್ಲಾ ಸರ್, ಸೂರ್ಯನಿಂದ ನಾವು ಇಷ್ಟು ದೂರ ಇದ್ದರೂ ಅದರ ತಾಪಕ್ಕೆ ನಮ್ಮ ಮುಖ, ಕೈ ಕಪ್ಪಾಗಿ ಹೋಗುತ್ತದೆ. ಇನ್ನು ಅಷ್ಟು ಹತ್ತಿರವಿರುವ ಮೋಡ ಕಪ್ಪಾಗುವುದಿಲ್ಲವೇ ಸರ್?!

***

ಓ ಮೈ ಗಾಡ್..?!

ಗಾಂಪನಿಗೆ ವಿಮಾನದಲ್ಲಿ ಪ್ರಯಾಣ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ಹಾಗಾಗಿ ಗಾಂಪ ತನ್ನ ಮೊದಲ ವಿಮಾನ ಪ್ರಯಾಣಕ್ಕೆ ಸಿದ್ಧನಾದ. ಮನೆಯಲ್ಲಿ ಹೆಂಡತಿ ಅವನಿಗೆ ಸಾಕಷ್ಟು ಧೈರ್ಯ ತುಂಬಿ ಕಳಿಸಿದಳು. ಚಿಕ್ಕಮಕ್ಕಳೆಲ್ಲಾ ಹೋಗ್ತಾರೆ, ನೀವ್ಯಾಕ್ರೀ ಹೆದರ್ತೀರಾ ಅಂತ ಗಂಡನಿಗೆ ಬುದ್ಧಿ ಹೇಳಿದಳು. ಸರಿ ಗಾಂಪ ಪ್ರಯಾಣದ ದಿನ ಧೈರ್ಯ ಮಾಡಿ ವಿಮಾನ ನಿಲ್ದಾಣಕ್ಕೆ ಹೋಗಿ, ಬೋರ್ಡಿಂಗ್ ಪಾಸ್ ತಕೊಂಡು ಹೋಗಿ ತನ್ನ ಸೀಟಿನಲ್ಲಿ ಕೂತು ಬೆಲ್ಟ್ ಹಾಕಿಕೊಂಡು ದೇವರನ್ನು ಸ್ಮರಿಸುತ್ತಾ ಕುಳಿತ. ಪ್ರಯಾಣ ಶುರು ಆಯಿತು. ಪೈಲೆಟ್ ಪ್ಲೇನ್ ಚಾಲೂ ಮಾಡಿದ. ನಾವು ಈಗ ಟೇಕಾಫ್ ಆಗುತ್ತಿದ್ದೇವೆ. ಅಂತ ಅನೌನ್ಸಮೆಂಟ್ ಆಯ್ತು. ಪ್ರಯಾಣ ಮುಗೀತಾ ಬಂತು. ಗಾಂಪ ಅಯ್ಯೋ ಇಷ್ಟಕ್ಕೆಲ್ಲಾ ಎಷ್ಟೊಂದು ಹೆದರಿಕೊಂಡಿದ್ದೆ ಎಂದುಕೊಂಡು ತನ್ನಷ್ಟಕ್ಕೇ ತಾನೇ ನಗುತ್ತಿದ್ದ. ಅಷ್ಟರಲ್ಲಿ ಪೈಲೆಟ್ ಕಡೆಯಿಂದ ಅನೌನ್ಸಮೆಂಟ್ ಬಂತು. ಈಗ ನಾವು ಲ್ಯಾಂಡ್ ಆಗ್ತಾ ಇದ್ದೀವಿ. ರಿಲಾಕ್ಸ್...ಎನ್ನುತ್ತಿದ್ದಂತೆಯೇ ಅದರ ಜತೆಯಲ್ಲೇ, ಪೈಲೆಟ್ 'ಓ ಮೈ ಗಾಡ್, ಓ ಮೈ ಗಾಡ್' ಅಂತ ಕೂಗಿದ್ದು ಕೇಳಿಸಿತು. ಪ್ಲೇನಿನಲ್ಲಿ ಇದ್ದವರೆಲ್ಲಾ ಗಾಬರಿಯಾದರು. ಆದರೆ ಸ್ವಲ್ಪ ಹೊತ್ತಿನಲ್ಲಿ ಪ್ಲೇನ್ ಸೇಫ್ ಆಗಿ ಲ್ಯಾಂಡ್ ಆಯ್ತು. ಕಾಕ್ ಪಿಟ್ ನಿಂದ ಹೊರಬಂದ ಪೈಲೆಟ್ ನಿಮ್ಮನ್ನೆಲ್ಲಾ ಹೆದರಿಸಿದ್ದಕ್ಕೆ ಸಾರಿ, ಅದೇನಾಯ್ತು ಅಂದ್ರೆ ಏರ್ ಹೋಸ್ಟೆಸ್ ನನ್ನ ಪ್ಯಾಂಟ್ ಮೇಲೆ ಕಾಫಿ ಚೆಲ್ಲಿಬಿಟ್ಟಳು. ಅದಕ್ಕೆ ಕೂಗಿಕೊಂಡೆ. ನನ್ನ ಪ್ಯಾಂಟ್ ನ ಮುಂಭಾಗ ನೋಡಬೇಕಿತ್ತು, ನೀವು ಎಂದ. ಅದಕ್ಕೆ ಗಾಂಪ ಹೇಳಿದ ಅದೇನು ಮಹಾ, ನಿಮ್ಮ ಅನೌನ್ಸಮೆಂಟ್ ಬಂದಕೂಡ್ಲೇ, ನೀವು ನನ್ನ ಪ್ಯಾಂಟ್ ನ ಹಿಂಭಾಗ ನೋಡಬೇಕಿತ್ತು. !

***

ಸೇತುವೆ ಎಲ್ಲಿ?

ಒಂದು ರಾಜ್ಯದ ಶಾಸಕರೊಬ್ಬರು ಉತ್ತರದ ರಾಜ್ಯದ ಹಳೆಯ ಶಾಸಕ ಮಿತ್ರರನ್ನು ನೋಡಲು ಹೋದರು. ಆ ವೇಳೆಗೆ ಆ ಶಾಸಕರು ಮಂತ್ರಿಯಾಗಿಬಿಟ್ಟಿದ್ದರು. ಅವರ ಮನೆಗೆ ಹೋದಾಗ ಈ ಶಾಸಕ ದಂಗಾದ. ಅದು ಮನೆಯಲ್ಲ, ವೈಭವೋಪೇತ ಅರಮನೆಯಾಗಿತ್ತು.

'ಅಲ್ಲ, ನಿನ್ನ ಹತ್ತಿರ ಏನೂ ಇರಲಿಲ್ಲ. ಇಷ್ಟು ಸಂಪತ್ತು ಹೇಗೆ ಬಂತು?' ಎಂದು ಕೇಳಿದುದಕ್ಕೆ ಆ ಮಂತ್ರಿ ಆತನನ್ನು ಕರೆದುಕೊಂಡು ಹೋಗಿ ಒಂದು ಸೇತುವೆ ತೋರಿಸಿದ. ಆ ಸೇತುವೆ ಪೂರ್ತಿ ನಿರ್ಮಾಣವಾಗದೇ ಅರ್ಧಕ್ಕೇ ಅದರ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. 'ಇದೇನು?' ಎಂದಾಗ ಉಳಿದ ಅರ್ಧ ಸೇತುವೆ ನನ್ನ ಜೇಬಿನಲ್ಲಿದೆ' ಎಂದು ಹೇಳಿ ನಕ್ಕ.

ವರುಷಗಳು ಕಳೆದ ಮೇಲೆ ಇಲ್ಲಿಯ ಶಾಸಕನನ್ನು ನೋಡಲು ಆ ಮಂತ್ರಿ ಬಂದ. ಇಷ್ಟು ಹೊತ್ತಿಗೆ ಈ ಶಾಸಕನೂ ಮಂತ್ರಿಯಾಗಿದ್ದ. ಈ ಮಂತ್ರಿಯ ಮನೆಗೆ ಆ ಮಂತ್ರಿ ಬಂದಾಗ ಇವನದೂ ಮಹಾ ಅರಮನೆ. ಆ ಮಂತ್ರಿ ಆಶ್ಚರ್ಯ ಚಕಿತನಾಗಿ ಪ್ರಶ್ನೆ ಮಾಡಿದಾಗ ಅವನು ಮಂತ್ರಿಯನ್ನು ಕರೆದುಕೊಂಡು ಹೋಗಿ 'ಆ ಸೇತುವೆಯನ್ನು ನೋಡು' ಅಂದ. ಅಲ್ಲಿ ಯಾವ ಸೇತುವೆಯೂ ಇರಲಿಲ್ಲ. 'ಎಲ್ಲಿ ಸೇತುವೆ?' ಎಂದು ಕೇಳಿದಾಗ ಈ ಮಂತ್ರಿ ಹೇಳಿದ 'ಪೂರ್ತಿ ಸೇತುವೆ ನನ್ನ ಜೇಬಿನಲ್ಲೇ ಇದೆ."

***

(ಕೃಪೆ: ಗುಬ್ಬಚ್ಚಿ ಗೂಡು ಪತ್ರಿಕೆ, ವಿಶ್ವವಾಣಿ ಪತ್ರಿಕೆ ಮತ್ತು ವೈಯೆನ್ಕೆ ಅವರ ಕೊನೆ ಸಿಡಿ ಪುಸ್ತಕ)

ಚಿತ್ರ ಕೃಪೆ: ಅಂತರ್ಜಾಲ ತಾಣ