'ಸಂಪದ' ನಗೆ ಬುಗ್ಗೆ - ಭಾಗ ೨೨

ಟಾರ್ಗೆಟ್
ದಟ್ಟ ಅರಣ್ಯದ ನಡುವೆ ಒಂದು ಗುಹೆ. ಅದರ ಬಾಗಿಲಲ್ಲಿ ಒಂದು ಮೊಲ ಕುಳಿತು ಆತುರಾತುರವಾಗಿ ಏನನ್ನೋ ಬರೀತಿತ್ತು. ಆ ಕಡೆ ಹೋಗುತ್ತಿದ್ದ ನರಿಯೊಂದು ಇದನ್ನ ನೋಡಿ ಆಶ್ಚರ್ಯದಿಂದ, "ಏನು ಬರೆಯುತ್ತಿದ್ದಿ?" ಎಂದು ವಿಚಾರಿಸಿತು. ಅದಕ್ಕೆ ಮೊಲ "ಅದಾ? ನರಿಗಳನ್ನು ತಿನ್ನುವ ಮೊಲಗಳ ಬಗ್ಗೆ ಸಂಶೋಧನೆ ಮಾಡಿ ಪ್ರಬಂಧವೊಂದನ್ನು ಬರೆಯುತ್ತಿದ್ದೇನೆ" ಎಂದು ಉತ್ತರ ಕೊಟ್ಟಿತು.
ಇದನ್ನು ನಂಬದ ನರಿ ಅವಹೇಳನದ ನಗೆಯನ್ನು ಬೀರುತ್ತಾ, "ಹಾಗೊಂದು ಇರುವುದು ಸಾಧ್ಯವೇ ಇಲ್ಲ. ಮೊಲ ನರಿಯನ್ನು ತಿನ್ನುವುದು ಅಸಂಭವ !" ಎಂದಿತು. "ನನ್ನ ಜೊತೆ ಈ ಗುಹೆಯೊಳಗೆ ಬಾ. ನಿನಗೆ ನರಿಯನ್ನು ತಿನ್ನುವ ಮೊಲವನ್ನು ತೋರಿಸುವೆ" ಎಂದು ಮೊಲ ಹೇಳಲು ನರಿ ಒಪ್ಪಿಕೊಂಡಿತು.
ನರಿ ಜತೆಗೆ ಒಳಗೆ ಹೋದ ಸ್ವಲ್ಪ ಹೊತ್ತಿನಲ್ಲಿ ಒಂದೇ ಹೊರಗೆ ಬಂದು, ಮತ್ತೆ ಬರೆಯಲು ಶುರು ಮಾಡಿತು. ಆ ದಾರಿಯಲ್ಲಿ ಒಂದು ತೋಳ ಬಂತು. ಆ ತೋಳಾನೂ ಮೊಲವನ್ನು ನೋಡಿ, "ಏನು ಮಾಡುತ್ತಿದ್ದಿ?" ಎಂದು ವಿಚಾರಿಸಿತು. ಮೊಲ ಮತ್ತೆ ಅದೇ ಪ್ರಕಾರ, ತೋಳಗಳನ್ನು ತಿನ್ನುವ ಮೊಲಗಳ ಬಗ್ಗೆ ತಾನು ನಡೆಸುತ್ತಿರುವ ಸಂಶೋಧನೆಯ ಬಗ್ಗೆ ವಿವರಿಸಿತು.
ತೋಳ ಅದನ್ನು ನಂಬಲು ತಯಾರಿರಲಿಲ್ಲ. ನೀನೇ ನೋಡುವಿಯಂತೆ ಎಂದು ಹೇಳಿ ಗುಹೆಯೊಳಗೆ ಕರೆದೊಯ್ಯಿತು. ಮತ್ತೆ ಸ್ವಲ್ಪ ಹೊತ್ತಿನ ನಂತರ ಮೊಲ ಒಂದೇ ಹೊರಗೆ ಬಂದು ಬರವಣಿಗೆಯನ್ನು ಮುಂದುವರೆಸಿತು.
ಸ್ವಲ್ಪ ಹೊತ್ತಿನಲ್ಲಿ ಕಾಡುಕೋಣವೊಂದು ಬಂತು "ಏನು ಮಾಡುತ್ತಿದ್ದಿ?" ಎಂಬ ಕೋಣದ ಪ್ರಶ್ನೆಗೆ ಮೊದಲಿನಂತೆಯೇ ಕೋಣವನ್ನು ತಿನ್ನುವ ಮೊಲದ ಬಗ್ಗೆ ಲೇಖನ ಬರೆಯುತ್ತಿರುವೆ ಎಂದು ಹೇಳಿತು. ಕೋಣಕ್ಕೆ ಮನದಟ್ಟು ಮಾಡಲು ಅದನ್ನೂ ಗುಹೆಯೊಳಗೆ ಕರೆದುಕೊಂಡು ಹೋಯಿತು.
ಅಲ್ಲಿ ಒಂದು ಸಿಂಹ ಭಯಂಕರವಾಗಿ ಗರ್ಜಿಸುತ್ತಿತ್ತು. ಮೊಲ ಅದಕ್ಕೆ ವಂದಿಸಿ, "ನನ್ನ ಇವತ್ತಿನ ಟಾರ್ಗೆಟ್ ಮೂರು. ಅದನ್ನು ಅಚೀವ್ ಮಾಡಿಬಿಟ್ಟೆ ಬಾಸ್!" ಎಂದು ಹೇಳಿ ಹೊರಟುಹೋಯಿತು.
***
ಮರದ ಕೋವಿಗಳು
ಒಂದು ದೇಶದ ಸೈನ್ಯದ ತುಕಡಿಯೊಂದು ತಮಗೆ ಅಭ್ಯಾಸ ಮಾಡಲು ಮರದ ಕೋವಿಗಳು ಬೇಕೆಂದು ಗವರ್ನರನಿಗೆ ಅರ್ಜಿ ಹಾಕಿಕೊಂಡಿತು. ನಿಜವಾದ ಕೋವಿಗಳಿಗಿಂತ ಅವು ಅಗ್ಗ ಎಂದು ಕಾರಣ ಕೊಡಲಾಗಿತ್ತು.
ಗವರ್ನರ್ ಹೇಳಿದ : ನಾನು ಮಿತವ್ಯಯದ ಹೆಸರಿನಲ್ಲಿ ದಕ್ಷತೆಯನ್ನು ಬಲಿಕೊಟ್ಟೆ ಎಂದಾಗಬಾರದು. ನಿಮಗೆ ನಿಜವಾದ ಕೋವಿಗಳನ್ನೇ ಒದಗಿಸಲಾಗುವುದು.
'ಕೃತಜ್ಞತೆಗಳು, ಕೃತಜ್ಞತೆಗಳು' ಎಂದು ಯೋಧರು ಭಾವಾತಿರೇಕದಿಂದ ಕೂಗಿದರು. ನಾವು ಅವುಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಯುದ್ಧ ಶುರುವಾದರೆ ಅದನ್ನು ಶಸ್ತ್ರಾಗಾರಕ್ಕೆ ಹಿಂದಿರುಗಿಸುತ್ತೇವೆ.
***
ನಿಸ್ವಾರ್ಥಿ
ಒಂದು ಮೂಳೆಗಾಗಿ ಎರಡು ನಾಯಿಗಳು ತುಂಬ ಹೊತ್ತಿನಿಂದ ಕಚ್ಚಾಡುತ್ತಿದ್ದವು. ಯಾವ ನಾಯಿಯೂ ಮೇಲುಗೈಯಾಗದೆ ಕೊನೆಗೆ ನ್ಯಾಯ ನಿರ್ಣಯಕ್ಕಾಗಿ ಕುರಿಯೊಂದನ್ನು ಕೇಳಿಕೊಂಡವು. ಎರಡು ನಾಯಿಗಳ ಹೇಳಿಕೆಗಳನ್ನು ಶಾಂತಚಿತ್ತದಿಂದ ಆಲಿಸಿದ ಕುರಿ, ಮೂಳೆಯನ್ನು ಒಂದು ಕೊಳಕ್ಕೆ ಎಸೆದು ಬಿಟ್ಟಿತು.
'ಹೀಗೇಕೆ ಮಾಡಿದಿ?' ನಾಯಿಗಳು ಕೇಳಿದವು.
ಕುರಿ ಹೇಳಿತು "ನಾನು ಸಸ್ಯಾಹಾರಿ".
(ತುಷಾರ ಹಳೆಯ ಸಂಚಿಕೆಗಳಿಂದ)
***
೩೩ ರೂಮ್ ಗಳು
ಹೆಂಡತಿ ಮಾತು ಕೇಳಿ ಬೇರೆ ಮನೆ ಮಾಡಿದ ಗಾಂಪನಿಗೆ ಮನೆ ಚಿಕ್ಕದೆನಿಸಿತು. ತಿಂಗಳ ಬಾಡಿಗೆ ಆರು ಸಾವಿರ ಹೊರೆ ಎನಿಸತೊಡಗಿತು. ಪ್ರೀತಿಸಿ ಮದುವೆಯಾದ ಕಾರಣ ಆಡಲಾರ, ಆಡಿ ಅನುಭವಿಸಲಾರ ಅಂತಾಯಿತು ಅವನ ಪರಿಸ್ಥಿತಿ. ಒಮ್ಮೆ ಅಸಹನೆ ಮೇರೆ ಮೀರಿ 'ನಾವು ಎಂತ ದೊಡ್ಡ ಮನೇಲಿ ಇದ್ವಿ. ನಿನ್ ನಂಬಿ ಬೆಂಕಿ ಪಟ್ಟಣದಂತ ಮನೇಲಿ ಒದ್ದಾಡೋ ಅಂಗಾಯ್ತು' ಎಂದ. ಅದಕ್ಕೆ ಉತ್ತರಿಸಿದ ಹೆಂಡತಿ 'ನಾನ್ ಬೆಳೆದದ್ದು ಎರಡಂತಸ್ತಿನ ೩೩ ರೂಮ್ ಗಳಿದ್ದ ದೊಡ್ಡ ಕಟ್ಟಡದಲ್ಲಿ ಗೊತ್ತಾ? ನಿನಗೋಸ್ಕರ ಇಲ್ಲಿ ಕಾಲ ಹಾಕ್ತಾ ಇದೀನಿ. ಸುಮ್ನೆ ಜಾಸ್ತಿ ಮಾತನಾಡ್ಬೇಡ.' ಅಂದಳು. ಸಿಟ್ಟಿಗೆದ್ದ ಗಾಂಪ, 'ಅದ್ಯಾವುದೇ ನಾನ್ ಕಾಣದ್ದು, ಎರಡಂತಸ್ತಿನ ೩೩ ರೂಮ್ ಗಳ ಮನೆ" ಎಂದು ಪ್ರಶ್ನಿಸಿದ. ಅದಕ್ಕೆ ಹೆಂಡತಿ "ಅದೇ ... ನಾನು ಓದಿ, ಬೆಳೆದ ಸರ್ಕಾರಿ ಹಾಸ್ಟೆಲ್" ಎಂದಳು.
(ಸುಧಾ ಪತ್ರಿಕೆಯಿಂದ)
***
ಚಿತ್ರ ಕೃಪೆ: ಅಂತರ್ಜಾಲ ತಾಣ