'ಸಂಪದ' ನಗೆ ಬುಗ್ಗೆ - ಭಾಗ ೨೪
ಪ್ರೀತಿ ಹಂಚುವುದು !
ಅಧ್ಯಾಪಕ: 'ನಮ್ಮ ಭಾರತೀಯ ಪರಿವಾರಗಳಲ್ಲಿ ನಾವು ಪರಸ್ಪರ ಪ್ರೀತಿ ಹಂಚುತ್ತೇವೆ. ಒಬ್ಬರಿಗೊಬ್ಬರು ನೆರವಾಗುತ್ತೇವೆ' ಎನ್ನುವ ಮಾತಿಗೆ ಯಾರಾದರೊಬ್ಬರು ಒಂದು ಉದಾಹರಣೆ ಕೊಡಿ ನೋಡೋಣ.
ಗಾಂಪ: ಪರಿವಾರಗಳಲ್ಲಿ ಒಬ್ಬ ಸದಸ್ಯ ಕಾಯಿಲೆ ಬಿದ್ದರೂ ಆತನನ್ನು ನೋಡಲು ಆಗಮಿಸುವವರು ತಂದಂತಹ ಹಣ್ಣು ಹಂಪಲುಗಳನ್ನು ಆನಂತರ ಮನೆ ಮಂದಿಯೆಲ್ಲರೂ ಸಮನಾಗಿ ಹಂಚಿ ತಿನ್ನುತ್ತಾರೆ. !
***
ಲಾಟರಿ ಟಿಕೇಟು
ಗಾಂಪ: ಲಾಟರಿ ಟಿಕೇಟ್ ಕೊಳ್ಳುವ ಪುರುಷನಿಗೂ, ತನ್ನ ಪತ್ನಿಯ ಜೊತೆ ವಾಗ್ವಾದ ಮಾಡುವ ಪುರುಷನಿಗೂ ಇರುವ ವ್ಯತ್ಯಾಸವೇನು?
ಸೂರಿ: ಲಾಟರಿ ಟಿಕೇಟ್ ಕೊಳ್ಳುವ ಪುರುಷನಿಗೆ ತಾನು ಗೆಲ್ಲುವ ಅವಕಾಶ ತೃಣಮಾತ್ರವಾದರೂ ಇದ್ದೇ ಇರುತ್ತದೆ.
***
ಕಾರಣ
ಎದುರುಗಡೆ ಅಪಾರ್ಟ್ ಮೆಂಟಿನ ಕಿಟಕಿಯಲ್ಲಿ ಮೀನಾ ನಾಲ್ಕೈದು ನಿಮಿಷಗಳಿಂದ ಕೈ ಅಲ್ಲಾಡಿಸುತ್ತಿರುವುದನ್ನು ಗಮನಿಸಿದ ಗಾಂಪ ತಾನೂ ಪ್ರತಿಯಾಗಿ ಕೈ ಅಲ್ಲಾಡಿಸಿದ. ಆಗ ಹಿಂದಿನಿಂದ ಬೆನ್ನ ಮೇಲೊಂದು ಭಾರೀ ಹೊಡೆತ ಬಿತ್ತು. ಹಿಂತಿರುಗಿ ನೋಡಿದರೆ ಅಲ್ಲಿ ಗಾಂಪನ ಶ್ರೀಮತಿ ನಿಂತಿದ್ದಳು. ಈತ ಹಲ್ಲುಗಿಂಜಿದ. ಆಕೆ ಕಣ್ಣರಳಿಸಿ, ದಿಟ್ಟಿಸುತ್ತಾ ಅಂದಳು. 'ಎದುರು ಮನೆಯಾಕೆ ನಿಮಗೆ 'ಹಾಯ್' ಹೇಳುತ್ತಿಲ್ಲ. ಅವಳು ತನ್ನ ಮನೆಯ ಕಿಟಕಿಯ ಕನ್ನಡಿ ಶುಚಿಗೊಳಿಸುತ್ತಿದ್ದಾಳೆ. ಅಷ್ಟೇ. !
***
ಚೆಕ್ ಪುಸ್ತಕ
ಹಾಸ್ಟೆಲ್ ನಲ್ಲಿ ಕಲಿಯುತ್ತಿದ್ದ ಗಾಂಪ: ಒಂದು ಅಚಾತುರ್ಯವಾಯಿತು ಕಣೋ...!
ರೂಮ್ ಮೇಟ್ ಸೂರಿ: ಅಂಥಾದ್ದೇನಾಯಿತೋ?
ಗಾಂಪ: 'ಪುಸ್ತಕ ಕೊಳ್ಳಲು ಹಣ ಬೇಕು. ನನ್ನ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿ.' ಎಂದು ಅಪ್ಪನಿಗೆ ವಾಟ್ಸಾಪ್ ಮೂಲಕ ತಿಳಿಸಿದ್ದೆ. ಅವರೀಗ 'ಯಾವ ಪುಸ್ತಕ! ನಾನೆ ಕಳಿಸುತ್ತೇನೆ' ಎಂದು ಮರು ಸಂದೇಶ ಕಳುಹಿಸಿದ್ದಾರೆ. ನನಗೀಗ ದುಡ್ಡು ಬೇಕು. ಏನು ಮಾಡಲಿ?
ಸೂರಿ: ಅಷ್ಟೇ ತಾನೇ? ತಮ್ಮ ಸಹಿ ಹಾಕಿ ಚೆಕ್ ಪುಸ್ತಕ ಕಳುಹಿಸಲು ಅವರಿಗೆ ಹೇಳಿಬಿಡು !
***
ಐ ಲವ್ ಯೂ
ಸಮಯ, ಸಂದರ್ಭ ನೋಡಿ ಒಮ್ಮೆ ತಾನು ಪ್ರೀತಿಸುವ ಹುಡುಗಿಗೆ, ಗಾಂಪ 'ಐ ಲವ್ ಯೂ' ಎಂದು ಹೇಳಿಯೇ ಬಿಟ್ಟ.
ಹುಡುಗಿ: ನಾನೂ ನಿಮಗೆ 'ಐ ಲವ್ ಯೂ' ಎಂದು ಹೇಳಿದರೆ ನಿನಗೆ ಹೇಗನ್ನಿಸುತ್ತದೆ?
ಗಾಂಪ: ಡಾರ್ಲಿಂಗ್, ನಾನಂತೂ ಖುಷಿಯಿಂದ ಸತ್ತೇ ಹೋಗುತ್ತೇನೆ.
ಹುಡುಗಿ: (ಕೀಟಲೆಯ ದನಿಯಲ್ಲಿ) ಸರಿ, ಹಾಗಾದರೆ ನಾನು ಹಾಗೆ ಹೇಳುವುದಿಲ್ಲ. ಏಕೆಂದರೆ ನೀವು ಸಾಯುವುದು ನನಗಿಷ್ಟವಿಲ್ಲ.!
***
ಡಬಲ್ ಹಣ!
ಗಾಂಪ: ಮನೆಯಲ್ಲಿ ಕೂತಿರುವಂತೆಯೇ ಕಣ್ಮುಚ್ಚಿ ತೆಗೆಯುವುದರೊಳಗೆ ಹಣವನ್ನು ಡಬಲ್ ಮಾಡಲು ನಿನ್ನಿಂದ ಸಾಧ್ಯವೇ?
ಸೂರಿ: ನನ್ನಿಂದೇನು, ಯಾರಿಂದಲೂ ಸಾಧ್ಯವಿಲ್ಲ. ಹಾಗೆಲ್ಲಾ ಆಗುತ್ತಿದ್ದರೆ ಯಾರೂ ಶ್ರಮವಹಿಸಿ ದುಡಿಯುತ್ತಿರಲಿಲ್ಲ.
ಗಾಂಪ: ಸಾಧ್ಯವಿದೆ ಕಣಯ್ಯಾ, ತುಂಬಾ ಸುಲಭ. ಹಣವನ್ನು ಕನ್ನಡಿಯೆದುರು ಇಟ್ಟು ಬಿಟ್ಟರೆ ಸಾಕು !
***
ಶಾಪಿಂಗ್ !
ಗಾಂಪ: ಕಳೆದ ನಾಲ್ಕು ಗಂಟೆಯಿಂದ ನಾನು ನಿನಗಾಗಿ ಕಾಯುತ್ತಿದ್ದೇನೆ. ಎಲ್ಲಿ ಹೋಗಿದ್ದೆ?
ಶ್ರೀಮತಿ: ಶಾಪಿಂಗ್ ಮಾಡಲು ಮಾಲ್ ಗೆ ಹೋಗಿದ್ದೆ ಕಣ್ರೀ.
ಗಾಂಪ: ಹೌದಾ...ಏನೇನು ತಕೊಂಡೆ?
ಶ್ರೀಮತಿ: ಒಂದು ಪ್ಯಾಕೆಟ್ ಹೇರ್ ಪಿನ್ ಮತ್ತು ಐವತ್ತು ಸೆಲ್ಫಿ !
(ಸಂಗ್ರಹ) ಸುಧಾ ಪತ್ರಿಕೆಯಿಂದ
ಚಿತ್ರ ಕೃಪೆ: ಅಂತರ್ಜಾಲ ತಾಣ