'ಸಂಪದ' ನಗೆ ಬುಗ್ಗೆ - ಭಾಗ ೨೫

'ಸಂಪದ' ನಗೆ ಬುಗ್ಗೆ - ಭಾಗ ೨೫

ವಾಕಿಂಗ್

'ನಾನು ಬೆಳಗಿನ ಹೊತ್ತು ವಾಕಿಂಗ್ ಹೋಗುವುದಕ್ಕೆ ಡಾಕ್ಟರೇ ಕಾರಣ' ಅಂದ ಗಾಂಪ.

'ಹೌದು ವಾಕಿಂಗ್ ಹೋಗಿ ಅಂತ ಡಾಕ್ಟರ್ ಹೇಳೇ ಹೇಳ್ತಾರೆ' ಸೂರಿ ವಾದಿಸಿದ.

'ವಿಷಯ ಅದಲ್ಲಯ್ಯ, ಮೊದಲು ಕಾರಿನಲ್ಲಿ ಹೋಗ್ತಿದ್ದೆ. ಟ್ರೀಟ್ ಮೆಂಟ್ ಅಂತ ಡಾಕ್ಟರ್ ಹತ್ತಿರ ಹೋಗಲಾರಂಭಿಸಿದ ಮೇಲೆ ಅದನ್ನು ಮಾರಿ ಅವರ ಫೀಸು ಕೊಡಬೇಕಾಯ್ತು. '!

***

ಪುನರ್ಜನ್ಮ

'ಗುರುಗಳೇ, ಪುನರ್ಜನ್ಮವೇ ಇಲ್ಲದಂತಾಗಲು ಏನು ಮಾಡಬೇಕು?' ಗಾಂಪ ಕೇಳಿದ.

'ಈ ಪ್ರಶ್ನೇನ ಯಾಕೆ ಕೇಳ್ತಿದೀಯಪ್ಪ?' ಗುರುಗಳು ಕೇಳಿದರು.

'ಏಳೇಳು ಜನ್ಮದಲ್ಲೂ ನಾನೇ ತನ್ನ ಗಂಡನಾಗಬೇಕು. ಅಂತ ನನ್ನ ಹೆಂಡತಿ ಹರಕೆ ಹೊತ್ತುಕೊಂಡಿದ್ದಾಳೆ, ಅದಕ್ಕೆ !' ಅಂದ ಗಾಂಪ.

***

ಮೊದಲ ರಾತ್ರಿ

ಗಾಂಪ ಶ್ರೀಮತಿಯನ್ನು ಮದುವೆಯಾದ; ಮೊದಲ ರಾತ್ರಿ, ದೂರವೇ ನಿಂತಿದ್ದ ಹೆಂಡತಿಯನ್ನು ಕೇಳಿದ 'ಯಾಕೆ.. ಅಷ್ಟು ಹೊತ್ತಿನಿಂದ ದೂರವೇ ನಿಂತಿದ್ದೀಯಲ್ಲಾ, ನಿನಗೆ ಯಾರೂ ಏನೂ ಹೇಳಿಕೊಡಲಿಲ್ಲವೇನು?'

ಶ್ರೀಮತಿ ಬಾಯಿ ತೆರೆದಳು 'ಹೇಳಿ ಕೊಟ್ಟರು, ಮೊದಲು ಹತ್ತು ನಿಮಿಷ ನಾಚಿಕೆಯಿಂದ ನಿಂತ ಹಾಗೆ ನಿಲ್ಲಬೇಕು ಅಂತ, ಅದ್ಕೇ ನಿಂತಿದೀನಿ'

***

ಒಂದು ಕೊಂಡರೆ…

ಅಂಗಡಿಯ ಮುಂದೊಂದು ಫಲಕ ನೇತಾಡುತ್ತಿತ್ತು. 'ಒಂದು ಕೊಂಡರೆ ಮತ್ತೊಂದು ಉಚಿತ'

'ಏನು ಮಾರ್ತಿದ್ದೀರಿ ಸ್ವಾಮೀ' ಅಂದ ಗಾಂಪ.

'ಕಾಣೋದಿಲ್ವಾ ಪಾದರಕ್ಷೆಗಳು. ಎಡಗಾಲಿನ ಪಾದರಕ್ಷೆ ಕೊಂಡರೆ ಬಲಗಾಲಿನದು ಫ್ರೀ' ಎಂದ ಅಂಗಡಿಯಾತ.

('ನೂತನ' ಪತ್ರಿಕೆಯಿಂದ)

***

ಗಂಡನ ತಾಳ್ಮೆ

ಡಾಕ್ಟರ್: ನನ್ನನ್ನು ಕ್ಷಮಿಸಿ ಬಿಡಿ ಸರ್, ನಿಮ್ಮ ಹೆಂಡತಿಯ ಕಾಯಿಲೆಯನ್ನು ಗುಣ ಪಡಿಸಲು ತುಂಬಾ ಪ್ರಯತ್ನ ಪಟ್ಟೆ. ಆದ್ರೆ ಪರಿಸ್ಥಿತಿ ತೀರಾ ಕೈ ಮೀರಿ ಹೋಗಿದೆ. ಹಾಗಾಗಿ ನಿಮ್ಮ ಮನೆಯವ್ರು ಹೆಚ್ಚೆಂದರೆ ಇಪ್ಪತ್ತು ನಿಮಿಷ ಬದುಕಿರ್ತಾರೆ ಅಷ್ಟೇ.

ಗಾಂಪ: ಅಯ್ಯೋ... ಬಿಡಿ ಡಾಕ್ಟರ್, ನೀವು ಏಕೆ ಕ್ಷಮೆ ಕೇಳ್ತೀರಾ, ಮೂವತ್ತು ವರ್ಷ ಅವಳನ್ನು ಸಹಿಸಿಕೊಂಡೇ ಜೀವನ ಸಾಗಿಸ್ತಿದ್ದೀನಿ. ಅಂಥದ್ರಲ್ಲಿ ಇಪ್ಪತ್ತು ನಿಮಿಷ ಸಹಿಸಿಕೊಳ್ಳಲಾರೆನೇ?

***

ಅಪರಾಧ ತಡೆ

ಪೋಲೀಸ್ ಅಧಿಕಾರಿ: 'ಅಪರಾಧ ತಡೆ ಆಚರಣಾ ದಿನ' ಕಾರ್ಯಕ್ರಮಕ್ಕೆ ನೀವೇ ಮುಖ್ಯ ಭಾಷಣಕಾರರು. ಹೀಗಿರುವಾಗ ನೀವೇ ಇಷ್ಟು ತಡವಾಗಿ ಬಂದರೆ ಹೇಗೆ? ಬರುವಾಗ ದಾರಿಯಲ್ಲಿ ಏನಾದ್ರೂ ತೊಂದರೆ ಆಯ್ತಾ?

ಗಾಂಪ: ಯಾಕ್ ಕೇಳ್ತೀರಾ ನನ್ ಕಥೆನಾ, ಕಾರ್ಯಕ್ರಮಕ್ಕೆ ಬೇಗ ಬರಬೇಕೆಂದು ಸಿಟಿ ಬಸ್ ಹತ್ತಿದೆ. ಬಸ್ ನಲ್ಲಿ ಯಾರೋ ಕಳ್ಳರು ನನ್ನ ಜೇಬಿಗೆ ಕತ್ತರಿ ಹಾಕಿ ಬಿಟ್ರು ಸ್ವಾಮಿ ! ಸಮೀಪದ ಪೋಲೀಸ್ ಸ್ಟೇಷನ್ ಗೆ ಹೋಗಿ ದೂರು ಕೊಟ್ಟು ಬಂದೆ. !

***

ಚಿನ್ನದ ಸರ

ಶ್ರೀಮತಿ: ಸರ್, ಬೈಕ್ ನಲ್ಲಿ ಬಂದ ಇಬ್ಬರು ಕಳ್ಳರು ನನ್ನ ಕೆನ್ನೆಗೆ ಹೊಡೆದು ಹಲ್ಲೆ ಮಾಡಿದ್ದಾರೆ.

ಪೋಲೀಸ್: ಹಲ್ಲೆಗೆ ಕಾರಣ ಏನು?

ಶ್ರೀಮತಿ: ನಿನ್ನೆ ಬೆಳಿಗ್ಗೆ ಮನೆಯ ಮುಂದೆ ರಂಗೋಲಿ ಹಾಕುವಾಗ ಕತ್ತಲ್ಲಿದ್ದ ನನ್ನ ಸರವನ್ನು ಕಿತ್ತುಕೊಂಡು ಹೋಗಿದ್ದರು. ಇವತ್ತು ಬೆಳಿಗ್ಗೆ ವಾಪಾಸ್ ಬಂದ ಅವರು ನನ್ನ ಕೆನ್ನೆಗೆ ಹೊಡೆದು ಸರವನ್ನು ನನ್ನ ಮುಖದ ಮೇಲೆ ಬಿಸಾಕಿ ಹೋಗಿದ್ದಾರೆ.

ಪೋಲೀಸ್: ವಾಪಾಸ್ ಕೊಟ್ರಾ... ಹಾಗಾದರೆ ಅವ್ರು ತುಂಬಾ ಒಳ್ಳೆಯ ಕಳ್ಳರು ಇರಬೇಕು ನೋಡಮ್ಮ.

ಶ್ರೀಮತಿ: ಅದು ಹಾಗಲ್ಲ ಸರ್, ನಿನ್ನೆ ಅವರು ಕಿತ್ತುಕೊಂಡು ಹೋದ ಸರ ಚಿನ್ನದ್ದಲ್ಲ, ನಕಲಿ...!

(ಸುಧಾ ಪತ್ರಿಕೆಯಿಂದ)

ಚಿತ್ರ ಕೃಪೆ: ಅಂತರ್ಜಾಲ ತಾಣ