'ಸಂಪದ' ನಗೆ ಬುಗ್ಗೆ - ಭಾಗ ೨೬

'ಸಂಪದ' ನಗೆ ಬುಗ್ಗೆ - ಭಾಗ ೨೬

ಫೋನ್ ಬಿಲ್ !

ಈ ತಿಂಗಳೂ ಮನೆಯ ಫೋನ್ ಬಿಲ್ ತುಂಬಾ ಜಾಸ್ತಿ ಬಂದಿತ್ತು. ಪ್ರತೀ ತಿಂಗಳೂ ಜಾಸ್ತಿ ಬರುತ್ತಿದ್ದರೂ ಈ ಬಾರಿ ಹಿಂದಿನ ತಿಂಗಳಿಗಿಂತ ತುಂಬಾ ಜಾಸ್ತಿ ಬಂದಿತ್ತು. ಶಾಕ್ ಆಗಿ ಮನೆಯ ಯಜಮಾನ ಮನೆಯಲ್ಲಿದ್ದವರನ್ನೆಲ್ಲಾ ಕೂಗಿ ಕರೆದ.

ಯಜಮಾನ: ನಾನು ಮನೆ ಫೋನ್ ಯೂಸ್ ಮಾಡೋದೇ ಇಲ್ಲ. ಎಲ್ಲಾ ಕಾಲ್ ಗಳನ್ನೂ ನಾನು ಆಫೀಸ್ ಫೋನಿನಲ್ಲೇ ಮಾಡೋದು. ಮನೆಯ ಫೋನಿನಲ್ಲಿ ಯಾರು ಅಷ್ಟೊಂದು ಕಾಲ್ ಮಾಡಿದ್ದು?!

ಹೆಂಡತಿ: ನಾನೂ ಆಫೀಸ್ ಫೋನ್ ನಲ್ಲೇ ಮಾತಾಡ್ತೀನಿ. ಫ್ರೆಂಡ್ಸು, ರಿಲೇಟಿವ್ಸ್ ಗೆಲ್ಲ ಮನೆ ಫೋನಿನಿಂದ ಕಾಲ್ ಮಾಡಿದ್ರೆ ಹೇಗೆ ನಡೆಯುತ್ತೆ ?!

ಮಗ: ಅಮ್ಮಾ... ನಿಂಗ್ ಗೊತ್ತೇ ಇದೆ. ನಾನು ಏಳು ಗಂಟೆಗೆ ಮನೆ ಬಿಟ್ರೆ ಆಫೀಸ್ ನಿಂದ ಬರೋದೇ ರಾತ್ರಿ ಎಂಟಕ್ಕೆ. ನಾನೂ ಆಫೀಸ್ ಫೋನಿನಲ್ಲೇ ಮಾಡಬೇಕಾದ ಕಾಲ್ ಗಳನ್ನೆಲ್ಲಾ ಮಾಡಿಬಿಡ್ತೀನಿ.

ಮಗಳು: ಕಂಪೆನಿ ನನಗಾಗಿ ಫೋನ್ ಕೊಟ್ಟಿದೆ, ನಾನು ಅದನ್ನೇ ಯೂಸ್ ಮಾಡೋದು ಅಂತ ನಿಮಗೆಲ್ಲರಿಗೂ ಗೊತ್ತಿದೆ... ಅಂದ ಹಾಗೆ, ಮನೆಯ ನಾವ್ಯಾರೂ ಕಾಲ್ ಮಾಡಿಲ್ಲ ಅಂದ್ರೂ ಇಷ್ಟೊಂದು ಫೋನ್ ಬಿಲ್ ಬಂದಿದ್ದಾದರೂ ಹೇಗೆ ?!

ಇವರೆಲ್ಲರ ಮಾತನ್ನು ಮನೆಕೆಲಸದ ನಿಂಗಿ ಕಳ್ಳಿ ರೀತಿ ಕೇಳುತ್ತಾ ತನ್ನ ಕೆಲಸ ಮಾಡುತ್ತಿದ್ದಳು. ಏನೋ ಹೊಳೆದಂತೆ ಎಲ್ಲರ ದೃಷ್ಟಿಯೂ ಆಕೆಯತ್ತ ಹೊರಳಿತು.

ನಿಂಗಿ: ಮತ್ತಿನ್ನೇನು, ನೀವೆಲ್ಲರೂ ನೀವ್ ನೀವ್ ಕೆಲಸ ಮಾಡೋ ಜಾಗದಲ್ಲಿರೋ ಫೋನ್ ತಾನೇ ಯೂಸ್ ಮಾಡೋದು, ನಾನೂ ಅದ್ನೇ ಮಾಡಿದೆ ಅಷ್ಟೇ. ತಪ್ಪಾ !?

***

ನಿನ್ನ ಗಂಡ ಕಣೇ…

ಶ್ರೀಮತಿಗೆ ತಿಳಿಸದೆ ಅವಳ ಆಫೀಸಿಗೆ ಹೋದ ಅವಳ ಗಂಡ ಗಾಂಪ ಹಿಂದಿನಿಂದ ಮೆಲ್ಲಗೆ ಅವಳ ಕಣ್ಣು ಮುಚ್ಚಿದ. ಆಗ ಅವಳು ಹಿಂದಿನಿಂದ ತನ್ನ ಕಣ್ಣು ಮುಚ್ಚಿದ್ದು ಯಾರಿರಬಹುದೆಂದು ಯೋಚಿಸುತ್ತಾ, 'ರಾಮೂ...' ಎಂದಳು. 

ಆಗ ಗಾಂಪ 'ಲೇ ನಾನು ನಿನ್ನ ಗಂಡ ಕಣೇ...' ಎಂದ. 

ಆಗ ಶ್ರೀಮತಿ 'ರೀ ಹಾಗಲ್ಲರೀ... ನಾ ಇನ್ನೂ ಕೂಗ್ತಾ ಇದ್ದೆ ರಾಮೂ... ಕುಡಿಯೋದಕ್ಕೆ ಜ್ಯೂಸ್ ತಕೊಂಡು ಬಾ, ನಮ್ಮನೆಯವರು ಬಂದಿದ್ದಾರೆ ಅಂತ. ಅಷ್ಟರಲ್ಲಿ ನೀವು 'ನಾನು ನಿನ್ನ ಗಂಡ ಕಣೇ' ಅಂದ್ರಿ.. ಹಿಹಿಹ್ಹೀ…

***

ಸ್ವಲ್ಪ ಕುಡಿದಿದ್ದೆ !

ಶ್ರೀಮತಿ: ನಿನ್ನೆ ನೀವು ತುಂಬಾ ಕುಡಿದಿದ್ದೀರಿ…

ಗಾಂಪ: ಹಾಗೇನು ಇಲ್ಲ, ಸ್ವಲ್ಪವಷ್ಟೇ ಕುಡಿದಿದ್ದೆ.

ಶ್ರೀಮತಿ: ಮತ್ತೇಕೆ ನೀವು ಬಾತ್ ರೂಮಿನ ತೊಟ್ಟಿಕ್ಕುತ್ತಿರುವ ನಲ್ಲಿಯ ಬಳಿ ಕುಳಿತು, ಅಳಬೇಡ ಕಣೆ, ನಾನಿದ್ದೇನೆ ಹೆದರಬೇಡ ಎಂದು ಸಂತೈಸುತ್ತಿದ್ದೀರಿ…

***

ಏನು ಫ್ರೀ...?

ಗಾಂಪ ಅಗ್ನಿಶಾಮಕ ದಳದಲ್ಲಿ ಕೆಲಸಕ್ಕೆ ಸೇರಿಕೊಂಡ. ತನ್ನ ಹಿರಿಯ ಅಧಿಕಾರಿಗಳಿಗೆ 'ಸರ್, ಕೆ ಎಸ್ ಆರ್ ಟಿ ಸಿ ಯವರಿಗೆ ಬಸ್ಸು ಫ್ರೀ... ಮೆಸ್ಕಾಂ ಅವರಿಗೆ ಕರೆಂಟು ಫ್ರೀ ಅದರಂತೆ ಅಗ್ನಿಶಾಮಕ ದಳದವರಿಗೆ ಏನು ಫ್ರೀ...?

ಹಿರಿಯ ಅಧಿಕಾರಿಗಳು ಕೂಡಲೇ 'ಸುಟ್ಟ ಬೂದಿ ಫ್ರೀ...' ಎಂದರು.

***

ಕೆಂಪು ಸಮುದ್ರ !

ಶಾಲಾ ಇನ್ಸ್ ಪೆಕ್ಟರ್ : ಮಕ್ಕಳೇ ಕೆಂಪು ಸಮುದ್ರ ಎಲ್ಲಿದೆ ಗೊತ್ತೇ?

ವಿದ್ಯಾರ್ಥಿ ಗಾಂಪ: ಅಲ್ಲಿ ತೂಗು ಹಾಕಿರೋ ನಕ್ಷೆ ಹಿಂದುಗಡೆ ಸರ್ !

ಶಾಲಾ ಇನ್ಸ್ ಪೆಕ್ಟರ್ : ನಕ್ಷೇಲಿ ಇದೆ ಅನ್ನೋದು ಬಿಟ್ಟು ಅದರ ಹಿಂದೆ ಅಂತಿಯಲ್ಲೋ, ಬಾ ಇಲ್ಲಿ ತೋರಿಸು ನೋಡೋಣ.

ಗಾಂಪ: ಬಂದವನೇ ನಕ್ಷೆಯನ್ನು ಎತ್ತಿ ಗೋಡೆ ಮೇಲೆ ಎಲೆ ಅಡಿಕೆ ತಿಂದು ಉಗುಳಿದ ಶಾಲಾ ಶಿಕ್ಷಕರ ಕೆಂಪು ಕಲೆಗಳನ್ನು ತೋರಿಸಿದ. 

***

ಕೊಲೆ!

ನ್ಯಾಯಾಧೀಶ: ಒಬ್ಬ ಜವಾಬ್ದಾರಿಯುತ ಕಾದಂಬರಿಕಾರನಾಗಿ ನಿಮ್ಮ ಸ್ನೇಹಿತನನ್ನೇ ನೀವು ಯಾಕೆ ಕೊಲೆ ಮಾಡಿದ್ದೀರಿ?

ಆರೋಪಿ ಗಾಂಪ: ಯಾವಾಗಲೂ ಆತ ಬರೆಯುವುದನ್ನು ಅನುಭವಿಸಿ ಬರೆಯಬೇಕು ಅಂತಿದ್ದ. ಅದಕ್ಕಾಗಿಯೇ ಆತನನ್ನು ಕೊಂದು 'ಕೊಲೆಗಾರ ಯಾರು?' ಅನ್ನೋ ಕಾದಂಬರಿ ಬರೆದಿರುವೆ !

***

ಅನುಭವ

ಕೆಲಸದಾಕೆ: ಅಮ್ಮಾವ್ರೇ, ನಾಳೆಯಿಂದ ನಿಮ್ಮನೆ ಕೆಲಸಕ್ಕೆ ಬರೋಲ್ಲ, ನನಗೆ ಹುಚ್ಚಾಸ್ಪತ್ರೆಲಿ ಕೆಲಸ ಸಿಕ್ಕಿದೆ.

ಯಜಮಾನಿ: ಹೌದೇನೆ ನಿಂಗಿ, ಹುಚ್ಚಾಸ್ಪತ್ರೇಲಿ ಕೆಲಸ ಅಂತಿ ನಿಂಗೇನು ಅನುಭವ ಇದೆ ಅಲ್ಲಿ ಕೆಲಸ ಮಾಡಾಕೆ?

ಕೆಲಸದಾಕೆ: ಅಯ್, ಬಿಡಿ ಅಮ್ಮಾವ್ರೇ, ನಿಮ್ಮನೇಲಿ ಹತ್ತು ವರ್ಷ ಬೇಕಾದಷ್ಟು ಅನುಭವ ಆಗಿದೆ. 

***

(ನೂತನ ಹಾಗೂ ಮಾನಸ ಪತ್ರಿಕೆಗಳ ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ