'ಸಂಪದ' ನಗೆ ಬುಗ್ಗೆ - ಭಾಗ ೨೮

'ಸಂಪದ' ನಗೆ ಬುಗ್ಗೆ - ಭಾಗ ೨೮

ಬೆಂಜ್ ಕಾರು !

ಕಾಲೇಜಿಗೆ ಹಳೇ ಬೈಕ್ ತಗೊಂಡು ಹೋಗ್ತಾ ಇದ್ದ ಗಾಂಪ ಅವತ್ತು ಮನೆಗೆ ಬೆಂಜ್ ಕಾರಲ್ಲಿ ಬಂದ. ಅದನ್ನು ನೋಡಿದ ಅವನ ಅಪ್ಪ ಅಮ್ಮ ಗಾಬರಿ ಆದ್ರು. ಗಾಂಪನ ಕೇಳಿದ್ರು, 

ಯಾರ್ದು ಕಾರು?

ನಂದೇ, ಇವತ್ತು ಕೊಂಡುಕೊಂಡೆ.

ಅಷ್ಟು ದುಡ್ಡು ಎಲ್ಲಿತ್ತು?

೨೦೦೦ ರೂಪಾಯಿ ಕೊಟ್ಟೆ ಅಷ್ಟೇ.

೨೦೦೦ ರೂಪಾಯಿಗೆ ನಿಂಗೆ ಬೆಂಜ್ ಕಾರು ಯಾರು ಕೊಡ್ತಾರೆ, ಏನ್ ತಮಾಷೆ ಮಾಡ್ತಾ ಇದ್ದೀಯಾ?

ಇಲ್ಲ, ಎದುರು ಮನೆ ಆಂಟಿ ನನಗೆ ಮಾರಿದ್ರು.

ಗಾಂಪನ ಅಪ್ಪ ಅಮ್ಮ ಈ ಆಂಟಿ ಕಾಲೇಜು ಹುಡುಗ ಸಿಕ್ಕ ಅಂತ ಬುಟ್ಟಿಗೆ ಹಾಕ್ಕೊಳ್ಳೋಕೆ ಟ್ರೈ ಮಾಡ್ತಾ ಇದ್ದಾಳೆ ಅನ್ಸುತ್ತೆ ಅಂತ ಗುಸು ಗುಸು ಮಾತಾಡಿಕೊಳ್ಳೋಕೆ ಶುರು ಮಾಡಿದ್ರು. ನಂತರ ನಡಿ ಅಂತ ಅವನನ್ನು ಕರೆದುಕೊಂಡು ಆಂಟಿ ಮನೆಗೆ ಹೋದ್ರು. ಮೂವರೂ ಎದುರು ಮನೆ ಆಂಟಿ ಮನೆಗೆ ಹೋದಾಗ, ಆಂಟಿ ಆರಾಮವಾಗಿ ಹೂವಿನ ಗಿಡಗಳಿಗೆ ನೀರು ಹಾಕ್ತಾ ಇದ್ರು. ಗಾಂಪನ ಅಪ್ಪ ಕೇಳಿದ ನನ್ನ ಮಗನಿಗೆ ನೀವು ೨೦೦೦ ರೂಪಾಯಿಗೆ ಬೆಂಜ್ ಕಾರು ಮಾರಿದ್ರಂತೆ. ಯಾಕಂತ ಕೇಳಬಹುದಾ?

ಆಂಟಿ ಹೇಳಿದ್ರು ನನ್ನ ಗಂಡ ಒಂದು ವಾರದಿಂದ ಮನೆಯಲ್ಲಿ ಇಲ್ಲ. ಇವತ್ತು ಬೆಳಿಗ್ಗೆ ಕಾಲ್ ಮಾಡಿ, ನಾನು ನನ್ನ ಸೆಕ್ರೆಟರಿ ಜತೆ ಹೋಗಿದ್ದೇನೆ. ಇನ್ಮೇಲೆ ಮನೆಗೆ ಬರಲ್ಲ. ನಾನು ಅವಳ ಜೊತೆಗೇ ಇರ್ತೀನಿ. ನಿನ್ನ ಹೆಸರಿಗೆ ಈಗಾಗಲೇ ಬೇಕಾದಷ್ಟು ದುಡ್ಡು, ಆಸ್ತಿ ಬರೆದಿಟ್ಟಿದ್ದೇನೆ. ಮನೆಯಲ್ಲಿ ಇರೋ ಬೆಂಜ್ ಕಾರು ನನ್ನ ಹೆಸರಿನಲ್ಲಿದೆ. ಅದನ್ನ ಮಾರಿ ಆ ದುಡ್ಡನ್ನ ನನ್ನ ಅಕೌಂಟಿಗೆ ಹಾಕು ಅಂದ. ಅದಕ್ಕೇ ಮಾರಿದೆ!

(ವಿಶ್ವವಾಣಿ ಪತ್ರಿಕೆಯಿಂದ)

***

ನಾನೊಬ್ಬನೇ ಉತ್ತರಿಸಿದ್ದು…

ಮಗ ಗಾಂಪ ಅವತ್ತು ಸ್ಕೂಲಿನಿಂದ ಬೇಗ ಮನೆಗೆ ಬಂದ. ಅಚ್ಚರಿಗೊಂಡ ಅಮ್ಮ, ಯಾಕೋ ಗಾಂಪ ಇವತ್ತು ಸ್ಕೂಲಿನಿಂದ ಬೇಗ ಬಂದೆ?'

ಗಾಂಪ: ಸ್ಕೂಲಿನಲ್ಲಿ ಕೇಳಿದ ಪ್ರಶ್ನೆಗೆ ನಾನೊಬ್ಬನೇ ಉತ್ತರ ಕೊಟ್ಟೆ. ಅದಕ್ಕೇ ಬೇಗ ಮನೆಗೆ ಕಳಿಸಿದ್ರು.

ಅಮ್ಮ: (ಖುಷಿಯಿಂದ) ವಾವ್ ! ಇಡೀ ಸ್ಕೂಲಿಗೆ ನೀನೊಬ್ಬನೇ ಬುದ್ಧಿವಂತ ಅಂತಾಯ್ತು. ಅದಿರ್ಲಿ, ಏನ್ ಪ್ರಶ್ನೆ ಕೇಳಿದ್ರು, ನೀನೇನು ಉತ್ತರ ಕೊಟ್ಟೆ?

ಗಾಂಪ: ಹೆಡ್ ಮಾಸ್ಟರ್ ತಲೆಗೆ ಡಸ್ಟರ್ ಬಿಸಾಕಿದ್ದು ಯಾರು ಅಂತ ಪ್ರಶ್ನೆ ಕೇಳಿದ್ರು...!

***

ಬೇಜಾರು

ಶ್ರೀಮತಿ: ಏನೇ ನಿನ್ನ ಮದುವೆ ಆಯ್ತಾ?

ತಾರಾ: ಆಯ್ತು ಕಣೇ.

ಶ್ರೀಮತಿ: ಹುಡುಗ ಏನ್ ಮಾಡ್ಕೊಂಡಿದ್ದಾನೆ?

ತಾರಾ: ಬೇಜಾರು ಮಾಡ್ಕೊಂಡಿದ್ದಾನೆ…

***

ಫೀಸ್ ವಸೂಲಿ

ಗಾಂಪ: ಆಪರೇಷನ್ ಮಾಡಿಸಿಕೊಂಡ ನಂತರ ನನ್ನಿಂದ ನಡೆಯೋಕೆ, ಓಡೋಕೆ ಆಗುತ್ತಾ ಡಾಕ್ಟರ್ ?

ಡಾಕ್ಟರ್: ನಿಮ್ಮಿಂದ ಪೂರಾ ಫೀಸ್ ವಸೂಲಿಯಾದ ಮೇಲೆ ಅದರ ಬಗ್ಗೆ ಹೇಳುತ್ತೇನೆ.

***

ಕಾಪಾಡಿದ ಕೂಗು

ಗಾಂಪ ಒಂದು ದಿನ ಬೆಟ್ಟದ ಕೆಳಗಿನ ದಾರಿಯಲ್ಲಿ ನಡೆಯುತ್ತಿದ್ದೆ. ಇದ್ದಕ್ಕಿದ್ದಂತೆ ಧ್ವನಿಯೊಂದು ಕೇಳಿತು, "ನಿಲ್ಲು...!" ಕೂಡಲೇ ನಿಂತ. ಒಂದು ದೊಡ್ದ ಬಂಡೆ ಆತನ ಮುಂದೆಯೇ ಬಿತ್ತು. ಆ ಬಂಡೆಯಡಿ ಸಿಲುಕಿ ಸಾಯುವುದರಿಂದ ಗಾಂಪ ಕೂದಲೆಳೆಯಲ್ಲಿ ಬಚಾವಾಗಿದ್ದ.

ಆ 'ಧ್ವನಿ'ಗೆ ಧನ್ಯವಾದ ಹೇಳುತ್ತಾ ಮುಂದುವರೆದ. ಸ್ವಲ್ಪ ಸಮಯದ ನಂತರ ಮತ್ತೆ ಅದೇ ಧ್ವನಿ.. 'ನಿಲ್ಲು !' ಮತ್ತೆ ನಿಂತ. ಒಂದು ಕಾರು ವೇಗವಾಗಿ ನನ್ನ ಹತ್ತಿರದಲ್ಲೇ ಹಾದುಹೋಯಿತು. ಅಬ್ಬಾ! ಸ್ವಲ್ಪದರಲ್ಲೇ ಬದುಕುಳಿದೆ ಅಂದುಕೊಂಡ ಗಾಂಪ. ಆ ಧ್ವನಿಗೆ ಇನ್ನೊಮ್ಮೆ ಧನ್ಯವಾದ ಹೇಳುತ್ತಾ ಕೇಳಿದ 'ಅಪ್ಪಾ ಪರಮಾತ್ಮಾ, ಯಾರು ನೀನು? ನನ್ನ ಜೀವನವನ್ನು ಮತ್ತೆ ಮತ್ತೆ ಅಪಾಯದಿಂದ ಕಾಪಾಡುತ್ತಿದ್ದೀಯಾ?' ಧ್ವನಿ ಉತ್ತರಿಸಿತು. 'ನಿನ್ನ ಜೀವ ರಕ್ಷಿಸುವ ಅಂತರಾತ್ಮ..!' ಮತ್ತೊಮ್ಮೆ ಆ ಅಂತರಾತ್ಮಕ್ಕೆ ಧನ್ಯವಾದ ಹೇಳುತ್ತಾ ಗಾಂಪ ಕೇಳಿದ 'ನೀವು ನನ್ನ ಮದುವೆಯ ಸಂದರ್ಭದಲ್ಲಿ ಎಲ್ಲಿದ್ದೀರಿ?! ಆಗ ಯಾಕೆ ಹೀಗೆ ಕೂಗಿ ನನ್ನನ್ನು ಎಚ್ಚರಿಸಲಿಲ್ಲ? ' ಆ ಅದೃಶ್ಯ ಧ್ವನಿ ಉತ್ತರಿಸಿತು, 'ಆಗಲೂ ಕೂಗಿ ಕೂಗಿ ಹೇಳಿದೆ, ಆದರೆ ನಿನ್ನ ಮದುವೆಯ ವಾಲಗದ ವಾದ್ಯಗಳ ಸದ್ದಿನಲ್ಲಿ ನಾನು ಕೂಗಿದ್ದು ನಿನಗೆ ಕೇಳಿಸದೇ ಹೋಯಿತು !'

(ಮಾನಸ ಪತ್ರಿಕೆಯಿಂದ)

***

ಡಾಕ್ಟರ್ ಆಗ್ಬೇಕು !

ಶಿಕ್ಷಕಿ: ಗಾಂಪ, ಜೀವನದಲ್ಲಿ ಏನು ಆಗಬೇಕು ಅಂದ್ಕೊಂಡಿದೀಯ?

ಗಾಂಪ: ನಾನು, ನನ್ನ ತಂದೆಯಂತೆ ಡಾಕ್ಟರ್ ಆಗಬೇಕು ಅಂದ್ಕೊಂಡಿದ್ದೇನೆ.

ಶಿಕ್ಷಕಿ: ಹಾಗಾದರೆ ನಿನ್ನ ತಂದೆ ಡಾಕ್ಟರಾ?

ಗಾಂಪ: ಇಲ್ಲ ಮೇಡಂ, ಅವರು ಕೂಡ ಡಾಕ್ಟರ್ ಆಗಬೇಕು ಅಂದ್ಕೊಂಡಿದ್ರಂತೆ !

***

ದಟ್ಟ ತಲೆ ಕೂದಲು !

ಶ್ರೀಮತಿ: ಅಲ್ಲ ತಾರಾ, ನಿನ್ನ ತಲೆ ಕೂದಲು ಯಾವಾಗಲೂ ದಟ್ಟವಾಗಿಯೇ ಇರುತ್ತದಲ್ಲಾ ಏನು ಮಾಡ್ತೀಯೆ?

ತಾರಾ: ಏನೂ ಇಲ್ಲ, ಬೆಳಿಗ್ಗೆ ಶಾಂಪೂ ಹಾಕಿ ಸ್ನಾನ ಮಾಡಿದ ಮೇಲೆ ಸಂಜೆ ಹೇರ್ ಆಯಿಲ್ ಹಚ್ಚುತ್ತೇನೆ.

ಶ್ರೀಮತಿ: ರಾತ್ರಿ?

ತಾರಾ: ತಲೆಯಿಂದ ಕಳಚಿ ಒಂದು ಕಡೆ ಇಡುತ್ತೇನೆ!

(ಸುಧಾ ಪತ್ರಿಕೆಯಿಂದ)

***

ಚಿತ್ರ ಕೃಪೆ: ಅಂತರ್ಜಾಲ ತಾಣ