'ಸಂಪದ' ನಗೆ ಬುಗ್ಗೆ - ಭಾಗ ೩೦

'ಸಂಪದ' ನಗೆ ಬುಗ್ಗೆ - ಭಾಗ ೩೦

ಆರ್ ಯೂ ಓಕೆ?

ಗಾಂಪ ಕುದುರೆ ಗಾಡಿ ಓಡಿಸುತ್ತಾ ಜೀವನ ಸಾಗಿಸುತ್ತಿದ್ದ. ಒಂದು ದಿನ ಅವನು ಹೈವೇ ನಲ್ಲಿ ಹೋಗುತ್ತಿರುವಾಗ ಅವನ ಗಾಡಿಗೆ ದೊಡ್ದದೊಂದು ಕಾರು ಬಂದು ಗುದ್ದಿ, ಗಾಂಪ ಗಂಭೀರವಾಗಿ ಗಾಯಗೊಂಡ. ಅವನ ಜಟಕಾದ ಕುದುರೆ ಸತ್ತು ಹೋಯಿತು. ಗಾಂಪನಿಗೆ ಇದರಿಂದ ತುಂಬಾ ಲಾಸ್ ಆಯ್ತು. ಅದಕ್ಕೆ ಅವನು ಆಸ್ಪತ್ರೆ ಸೇರಿ, ಹುಷಾರದ ಮೇಲೆ ಕೋರ್ಟ್ ಗೆ ಮೊರೆ ಹೋದ. ನನ್ನ ಗಾಡಿಗೆ ಗುದ್ದಿ ಈ ಕಾರಿನವನು ನಂಗೆ ಲಾಸ್ ಮಾಡಿದ್ದಾನೆ, ನನ್ನ ಆಸ್ಪತ್ರೆ ಬಿಲ್ ಸಹಾ ಸಿಕ್ಕಾಪಟ್ಟೆ ಆಗಿದೆ, ಹಾಗಾಗಿ ನಂಗೆ ಪರಿಹಾರ ಕೊಡಿಸಿ ನಂಗೆ ಅಂತ. ಕೋರ್ಟ್ ನಲ್ಲಿ ವಿಚಾರಣೆ ಶುರು ಆಯ್ತು. ಕೇಸಿನಲ್ಲಿ ಇನ್ ವಾಲ್ವ್ ಆಗಿದ್ದ ಪೋಲೀಸ್ ಇನ್ಸ್ ಪೆಕ್ಟರ್ ಕೋರ್ಟಿನಲ್ಲಿ ಬಂದು, ಗಾಂಪ ಸುಳ್ಳು ಹೇಳ್ತಾ ಇದ್ದಾನೆ. ಆಕ್ಸಿಡೆಂಟ್ ಆಗಿ ಬಿದ್ದಿದ್ದಾಗ ನಾನೇ ಅವನ ಬಳಿ ಹೋಗಿ 'ಆರ್ ಯೂ ಓಕೆ?' ಅಂತ ಕೇಳಿದೆ. ಆಗ ಅವನು 'ಐ ಆಮ್ ಫೈನ್' ಅಂತ ಹೇಳಿದ್ದ. ಈಗ ಮಾತ್ರ ಹಣಕ್ಕಾಗಿ ಅವನು ಸುಳ್ಳು ಹೇಳ್ತಾ ಇದ್ದಾನೆ ಅಂತ ವಾದಿಸಿದ. ಅದಕ್ಕೆ ಗಾಂಪ ಅಲ್ಲಾ ಸರ್ ನನ್ನ ಕುದುರೆ... ಅಂತ ಹೇಳೋಕೆ ಹೊರಟ ತಕ್ಷಣ ಆಪೋಸಿಟ್ ಲಾಯರ್ ಅಥವಾ ಇನ್ಸ್ ಪೆಕ್ಟರ್ ಬಾಯ್ ಮುಚ್ಚು ಅಂತ ಬಯ್ತಾ ಇದ್ರು. ಹಾಗಾಗಿ ಗಾಂಪ ಎಷ್ಟೇ ಕಷ್ಟ ಪಟ್ಟರೂ ಹೇಳಬೇಕಾದ್ದನ್ನು ಹೇಳೋಕಾಗಲಿಲ್ಲ. ಆಗ ಅವನ ಪಾಡು ನೋಡಿದ ಜಡ್ಜ್ ಅವನೇನೋ ಹೇಳ್ತಾ ಇದ್ದಾನೆ ಹೇಳೋಕ್ ಬಿಡಿ ಅಂದ್ರು. ಆಗ ಗಾಂಪ ಹೇಳೋಕ್ ಶುರು ಮಾಡಿದ. ಮಹಾಸ್ವಾಮಿ, ನಾನು ಆಕ್ಸಿಡೆಂಟ್ ಆಗಿ ಬಿದ್ದಿದ್ದೆ. ನಾನು ಬದುಕ್ತೀನಿ ಅನ್ನೋ ನಂಬಿಕೆ ನನಗಿರಲಿಲ್ಲ. ಆಗಲೋ ಈಗಲೋ ಸಾಯೋ ಥರ ಇದ್ದೆ. ಆ ಸಮಯದಲ್ಲಿ ಈ ಇನ್ಸ್ ಪೆಕ್ಟರ್ ಅಲ್ಲಿಗೆ ಬಂದ್ರು. ಮೊದಲು ನನ್ನ ಕುದುರೆ ಹತ್ರ ಹೋಗಿ, ಅದನ್ನು ಆರ್ ಯೂ ಓಕೆ? ಎಂದು ಮಾತಾಡಿಸಿದ್ರು. ಅದು ಅಲ್ಲಾಡಲಿಲ್ಲ. ಆದ್ರೆ ಅದು ಉಸಿರಾಡುತ್ತಿತ್ತು. ಮೈ ತುಂಬಾ ಗಾಯ ಆಗಿದ್ದು, ತುಂಬಾ ನರಳಾಡ್ತಾ ಇತ್ತು. ಅದನ್ನು ನೋಡಿದ ಈ ಇನ್ಸ್ ಪೆಕ್ಟರ್, ನೀನು ಬದುಕಿದ್ದು ಕಷ್ಟ ಪಡುವುದಕ್ಕಿಂತ ಸಾಯೋದೇ ಮೇಲು ಅಂತ ಅದಕ್ಕೆ ಗುಂಡು ಹಾರಿಸಿ ಕೊಂದರು. ಆ ನಂತರ ನನ್ನತ್ರ ಬಂದು ಆರ್ ಯೂ ಓಕೆ? ಅಂತ ಕೇಳಿದ್ರು. ನೀವೇ ಹೇಳಿ ಮಹಾ ಸ್ವಾಮಿ ಆ ಸಮಯದಲ್ಲಿ ನನಗೆ ಐ ಆಮ್ ಓಕೆ ಅಂತ ಹೇಳದೆ ಬೇರೆ ದಾರಿ ಇತ್ತಾ?

('ವಿಶ್ವವಾಣಿ' ಕೃಪೆಯಿಂದ)

***

ಸದ್ದು ಸದ್ದು…

ಗಾಂಪ : ಡ್ಯಾಡಿ, ನಿನಗೆ ಇನ್ನು ಖರ್ಚು ತಪ್ತು.

ತಂದೆ: ಯಾಕೋ?

ಗಾಂಪ: ನಾನು ಶಾಲೆಗೆ ಹೋಗಲ್ಲ !

ತಂದೆ: ಏನಾಯ್ತೋ?

ಗಾಂಪ: ಶಾಲೇಲಿ ನನಗೆ ಓದಕ್ಕೂ ಕಲಿಸಲ್ಲ ಬರೆಯೋಕೂ ಕಲಿಸಲ್ಲ ಮಾತಾಡೋಣಾಂದ್ರೆ ಅದಕ್ಕೂ ಬಿಡಲ್ಲ 'ಸದ್ದು ಸದ್ದು' ಅಂತ ಹೆದರಿಸ್ತಾರೆ!

***

ವಿದೇಶ ಪ್ರವಾಸ

ಮಾನ್ಯ ಮಂತ್ರಿಗಳು ವಿದೇಶ ಪ್ರವಾಸ ಕೈಗೊಂಡಿದ್ದರು. ಮುಂಬೈ ವಿಮಾನ ನಿಲ್ದಾಣದಲ್ಲಿ ಅವರ ಕುಟುಂಬ ಪರಿವಾರ ಬೀಳ್ಕೊಡಲು ಬಂದಿತ್ತು.

ಮಂತ್ರಿವರ್ಯರು ವಿಮಾನ ಹೊರಡುವ ಹೊತ್ತಾದರೂ ಅಲ್ಲಿಯೇ ನಿಂತಿದ್ದರು. ಅವರ ಆಪ್ತ ಸಹಾಯಕ ಗಾಂಪ ಆತುರದಿಂದ ಓಡಿ ಬಂದು 'ಸಾರ್, ವಿಮಾನ ಹೊರಡ್ತಾ ಇದೆ, ಬೇಗ ನಡೀರಿ' ಎಂದು ಆತುರ ಮಾಡಿದ.

'ತಡೀಯಯ್ಯಾ, ಕಾಲೇಜಿನಿಂದ ನನ್ನ ಮಗಳು ನೇರವಾಗಿ ಇಲ್ಲಿಗೇ ಬರ್ತೀನಿ ಅಂತ ಫೋನ್ ಮಾಡಿದ್ದಾಳೆ. ಅವಳಿಗೊಂದು ಮುತ್ತು ಕೊಟ್ಟು ಹೊರಡ್ತೀನಿ' ಅಂದ್ರು ಮಂತ್ರಿಗಳು. 

'ಅಯ್ಯೋ ಸರ್ ! ನಿಮ್ಮ ಆ ಕೆಲ್ಸಾನೆಲ್ಲಾ ನಾ ನೋಡ್ಕಳ್ತೀನಿ ಸರ್, ನೀವು ಹೊರಡಿ' ಚಾಲಾಕಿ ಆಪ್ತ ಸಹಾಯಕ ಗಾಂಪ ಮತ್ತೆ ಆತುರ ಮಾಡಿದ.

***

ಆರ್ಟ್ ಪ್ರದರ್ಶನ

ಗಾಂಪ ಮತ್ತು ಸೂರಿ ಇಬ್ಬರೂ ಒಮ್ಮೆ ಮಾಡರ್ನ್ ಆರ್ಟ್ ಪ್ರದರ್ಶನ ನೋಡಲು ಹೋದರು. ಅಲ್ಲಿನ ಗೋಡೆ ಮೇಲಿದ್ದ ವರ್ಣ ಚಿತ್ರಗಳನ್ನು ನೋಡಿದ ಗಾಂಪ, ಸೂರಿ ಬಳಿ ಹೇಳಿದ

'ಲೋ ಸೂರಿ, ಬೇಗ ಬಾರೋ ಇಲ್ಲಿಂದ ಓಡೋಣ. ಇಲ್ದಿದ್ರೆ ನಾವೇ ಗೀಚಿದ್ದು ಅಂತ ನಮ್ಮನ್ನು ಪೋಲೀಸ್ ಗೆ ಹಿಡಿದು ಕೊಟ್ಟಾರು !'

***

ಮುತ್ತು !

'ನಾನು ತಡವಾಗಿ ಮನೆಗೆ ಹೋದ ದಿನ ನನ್ನಾಕೆ ಬಾಗಿಲು ತೆಗೆದ ಕೂಡಲೇ ಮುತ್ತು ಹೊಡ್ತಾಳೆ' ಅಂದ ಗಾಂಪ.

'ಅಂದ್ರೆ, ನಾಳೆಯಿಂದಲಾದರೂ ಬೇಗ ಬಾ ಅಂತ ತಾನೇ?'

'ಅಲ್ಲ, ಸುಮ್ಮನೇ ಜಗಳ ಮಾಡೋಕೆ ! ನಾನು ಕುಡಿದಿದ್ದನೋ ಇಲ್ಲವೋ ಅಂತ ಆಕೆ ಮೊದಲು ಖಚಿತ ಪಡಿಸಿಕೊಳ್ಳ ಬೇಕಲ್ಲ ?

***

ಮಾತು

ಹೊಸದಾಗಿ ಮದುವೆಯಾದ ಗಾಂಪ, ತನ್ನ ಹೆಂಡತಿ ಶ್ರೀಮತಿ ಜೊತೆ ಬಾಲ್ಕನಿ ಸೀಟಿನಲ್ಲಿ ಕುಳಿತು ಸಿನೆಮಾ ನೋಡುತ್ತಾ ಪಿಸುಮಾತಿನಲ್ಲಿ ಮಗ್ನನಾಗಿದ್ದ. ಇದರಿಂದ ಹಿಂದಿನ ಆಸನದಲ್ಲಿ ಕುಳಿತವನಿಗೆ ಕಿರಿಕಿರಿಯೆನಿಸಿ, ಆತ ಹೇಳಿದ "ಸರ್, ನನಗೆ ಯಾವ ಮಾತುಗಳೂ ಸರಿಯಾಗಿ ಕೇಳಿಸುತ್ತಿಲ್ಲ !"

"ಏನು? ನಮ್ಮಿಬ್ಬರ ಮಾತುಗಳನ್ನು ಕೇಳಿಸ್ಕೊಳ್ಳಲು ಬಂದಿದೀರೇನು ನೀವು? ಸುಮ್ನೇ ಸಿನೆಮಾ ನೋಡಿ" ಗಾಂಪ ತಕ್ಷಣ ಪ್ರಶ್ನಿಸಿದ.

(ನೂತನ ಪತ್ರಿಕೆಯಿಂದ)

***

ಚಿತ್ರ ಕೃಪೆ: ಇಂಟರ್ನೆಟ್ ತಾಣ