'ಸಂಪದ' ನಗೆ ಬುಗ್ಗೆ - ಭಾಗ ೩೧
ಓದದ ಪುಸ್ತಕ !
ಕಾಲೇಜಲ್ಲಿ ಒಂದು ಹುಡುಗಿ ಮೇಲೆ ಒಬ್ಬ ಗಾಂಪನಿಗೆ ಲವ್ ಆಗ್ಬಿಡುತ್ತೆ. ಆತ ತನ್ನ ಪ್ರೀತಿಯನ್ನೆಲ್ಲ ಒಂದು ಹಾಳೆಯಲ್ಲಿ ಬರಿತಾನೆ, ಕೊನೇಲಿ "ನೀನೂ ನನ್ನ ಪ್ರೀತಿಸ್ತಿಯ ಅನ್ನೋದಾದ್ರೆ ನಾಳೆ ಕೆಂಪು ಕಲರ್ ಚೂಡಿದಾರ ಹಾಕೊಂಡ್ ಬಾ" ಅಂತ ಬರಿತಾನೆ ಬರ್ದು ತನ್ನ ಪುಸ್ತಕದಲ್ಲಿ ಇಟ್ಟು ಅವಳಿಗೆ ಕೊಡ್ತಾನೆ.
ಆದ್ರೆ ಮರುದಿನ ಅವಳು ಹಳದಿ ಡ್ರೆಸ್ ಹಾಕೊಂಡ್ ಬರ್ತಾಳೆ ಬಂದು ಆ ಪುಸ್ತಕಾನಾ ಅವನ ಕೈಗೆ ಕೊಡ್ತಾಳೆ. ಗಾಂಪನಿಗೆ ಆಕಾಶಾನೆ ಕಳಚಿ ಬಿದ್ದಂತಾಗುತ್ತೆ ನಿರಾಶೆಯ ಮುಖ ಹೊತ್ತು ಅಲ್ಲಿಂದ ಹೊರಟು ಹೋಗುತ್ತಾನೆ. ಒಂದೆರಡು ವರ್ಷಗಳ ನಂತರ ಅವಳಿಗೆ ಮದುವೆಯಾಗುತ್ತದೆ.
ಗಾಂಪ ಮನೆಯನ್ನ ಸ್ವಚ್ಛ ಮಾಡುವಾಗ ಆ ಪುಸ್ತಕ ಕಪಾಟಿನ ಮೇಲಿಂದ ಕೆಳಗಡೆ ಬೀಳುತ್ತದೆ, ಆ ಪುಸ್ತಕದಿಂದ ಒಂದು ಲೆಟರ್ ಹೊರಗೆ ಬೀಳುತ್ತದೆ, ಗಾಂಪ ಅದನ್ನ ಓದುತ್ತಾನೆ ಅದರಲ್ಲಿ ಹೀಗೆ ಬರೆದಿರುತ್ತದೆ.
"ನಾನು ಕೂಡ ನಿನ್ನನ್ನು ಅಷ್ಟೇ ಪ್ರೀತಿಸುತ್ತೇನೆ ನಿನಾಗ್ಲೇ ಹೇಳಲಿ ಅಂತ ಕಾಯ್ತಿದ್ದೆ , ನಾವು ತುಂಬಾ ಬಡವರು ನನ್ನ ಹತ್ರ ರೆಡ್ ಕಲರ್ ಡ್ರೆಸ್ ಇಲ್ಲ ಅದಕ್ಕೆ ಹಳದಿ ಡ್ರೆಸ್ ಹಾಕೊಂಡ್ ಬಂದಿದೀನಿ ತಪ್ಪು ತಿಳ್ಕೋಬೇಡ. ನಮ್ಮ ತಂದೆಯನ್ನ ಮದುವೆಗೆ ಒಪ್ಪಿಸು. ನಮ್ಮ ತಂದೆ ಒಪ್ಪದಿದ್ರೂ ನಾನು ನಿನ್ನ ಜೊತೆಗೆ ಬರ್ತೀನಿ love you." ಇದನ್ನ ಓದಿದ ಗಾಂಪನಿಗೆ ಅಳು ಬಂತು. ಆದ್ರೆ ಅಷ್ಟೊತ್ತಿಗೆ ಸಮಯ ಮೀರಿ ಹೋಗಿತ್ತು.
ತಾತ್ಪರ್ಯ- ವರ್ಷದಲ್ಲಿ ಒಂದ್ಸಲನಾದ್ರು ಪುಸ್ತಕ ತೆಗೆದ್ನೋಡಿ.
ಸೂಚನೆ:- ಹಾಗಂತ ಅಂಕಲ್ ಗಳು ನಿಮ್ಮ ಹಳೆ ಪುಸ್ತಕಗಳನ್ನ ಹುಡುಕೊಕೆ ಹೋಗ್ಬೇಡಿ. ನಿಮ್ಮ ವಯಸ್ಸು ಮುಗಿದೋಗಿದೆ. ಆದಷ್ಟು ನಿಮ್ಮ ಮಕ್ಕಳ ಪುಸ್ತಕದ ಕಡೆ ಗಮನ ಕೊಡಿ ಸಾಕು.
(ವಾಟ್ಸಾಪ್ ಸಂಗ್ರಹ)
***
ಒಂದು ಸರ್ಪ್ರೈಸ್ !
ಗಾಂಪ ಮತ್ತವನ ಸಂಸಾರ ಒಂದು ನಗರದಿಂದ ದೂರದ ಗ್ರಾಮವೊಂದರಲ್ಲಿ ವಾಸವಾಗಿತ್ತು. ಆ ಗ್ರಾಮದ ಪಕ್ಕದಲ್ಲೇ ಅಂಟಿಕೊಂಡಂತೆ ಒಂದು ದಟ್ಟವಾದ ಕಾಡು ಇತ್ತು. ಅಲ್ಲಿ ಗಾಂಪನಿಗೆ ಹಲವಾರು ಗೆಳೆಯರೂ ಇದ್ದರು. ಒಂದು ದಿನ ಗಾಂಪ ಮನೆಯಿಂದ ಹೊರಟ. ದಾರಿಯಲ್ಲಿ ಹೋಗುತ್ತಿರುವಾಗ ಅಲ್ಲಿ ಅವನ ಸ್ನೇಹಿತ ಸೂರಿ, ಬೀಡಿ ಸೇದ್ತಾ ಕೂತಿದ್ದ. ಅವನನ್ನು ನೋಡಿದ ಗಾಂಪ, ಲೋ ಸೂರಿ, ಬೀಡಿ ಸೇದೋದು ಕೆಟ್ಟದು ಕಣೋ, ಅದನ್ನೆಲ್ಲಾ ಬಿಟ್ಟು ನನ್ನ ಜೊತೆ ಬಾ. ಕಾಡಿನ ಒಳಗೆ ನಿನಗೊಂದು ಸರ್ಪ್ರೈಸ್ ಇದೆ. ತೋರಿಸ್ತೀನಿ ಅಂದ. ಸರಿ, ಸೂರಿ ಗಾಂಪನ ಜೊತೆ ಹೊರಟ. ಇಬ್ಬರೂ ಹೋಗ್ತಾ ಇದ್ರು, ಅಲ್ಲಿ ಇನ್ನೊಬ್ಬ ಸ್ನೇಹಿತ ಚೋಮ ಹೆಂಡ ಕುಡೀತಾ ಕೂತಿದ್ದ. ಅವನನ್ನು ನೋಡಿದ ಗಾಂಪ ಲೋ ಚೋಮಾ, ಹೆಂಡ ಕುಡಿಯೋದು ಕೆಟ್ಟದು ಕಣೋ, ಅದನ್ನೆಲ್ಲಾ ಬಿಟ್ಟು ನನ್ನ ಜೊತೆ ಬಾ. ಕಾಡಿನಲ್ಲಿ ನಿನಗೆ ಒಂದು ಸರ್ಪ್ರೈಸ್ ತೋರಿಸ್ತೇನೆ ಅಂದ. ಸರಿ, ಚೋಮ ಕೂಡಾ ಇವರಿಬ್ಬರ ಜೊತೆ ಹೊರಟ. ಮುಂದೆ ಹೋಗುವಾಗ ಅಲ್ಲಿ ಇನ್ನಷ್ಟು ಸ್ನೇಹಿತರು ಇಸ್ಪೀಟ್ ಆಟ ಆಡುತ್ತಾ ಕೂತಿದ್ದರು. ಅವರನ್ನು ನೀಡಿದ ಗಾಂಪ ಲೇ, ಇಸ್ಪೀಟ್ ಆಡೋದು ಕೆಟ್ಟದು ಕಣ್ರೋ, ಅದನ್ನೆಲ್ಲಾ ಬಿಟ್ಟು ನನ್ನ ಜೊತೆ ಕಾಡಿಗೆ ಬನ್ನಿ, ಅಲ್ಲಿ ನಿಮಗೊಂದು ಸರ್ಪ್ರೈಸ್ ತೋರಿಸ್ತೇನೆ. ಅವರೆಲ್ಲಾ ಗುಂಪು ಕಟ್ಟಿಕೊಂಡು ಗಾಂಪನ ಜೊತೆ ಹೊರಟರು. ಸ್ವಲ್ಪ ಮುಂದೆ ಹೋಗುವಾಗ ಇನ್ನೊಬ್ಬ ಗೆಳೆಯ ತೋತ ಹೊಗೆಸೊಪ್ಪು ಅಗಿಯುತ್ತಾ ಕೂತಿದ್ದ. ಅವನನ್ನು ನೋಡಿದ ಗಾಂಪ, ಲೋ ತೋತ, ಹೊಗೆಸೊಪ್ಪು ತಿನ್ನೋದು ಕೆಟ್ಟದು ಕಣೋ, ಅದನ್ನೆಲ್ಲಾ ಬಿಟ್ಟು ನನ್ನ ಜೊತೆ ಬಾ , ನಿನಗೊಂದು ಸರ್ಪ್ರೈಸ್ ತೋರಿಸ್ತೇನೆ. ಅಂದ. ಅದಕ್ಕೆ ತೋತ ಇದ್ದಕ್ಕಿದ್ದಂತೆ ಎದ್ದು ಬಂದು ಗಾಂಪನಿಗೆ ಹಿಗ್ಗಾಮುಗ್ಗಾ ಥಳಿಸ ತೊಡಗಿದ. ಎಲ್ಲರೂ ಸೇರಿ ಅವನನ್ನು ಬಿಡಿಸಿ, ಅಲ್ಲಾ ತೋತ, ಪಾಪ ಅವನು ಒಳ್ಳೇದು ಹೇಳಿದ್ರೆ, ನೀನು ಹಿಂಗಾ ಹೊಡೆಯೋದು ಅಂತ ಕೇಳಿದಾಗ ತೋತ ಹೇಳಿದ, ನಿನಗೆ ಗೊತ್ತಿಲ್ಲ, ಈ ಬಡ್ಡೀ ಮಗ ಗಾಂಪ, ಹೋದ್ ವಾರ ಕೂಡಾ ಹೀಗೇ ಗಾಂಜಾ ಹೊಡ್ಕೊಂಡು ಬಂದು ಏನೋ ತೋರಿಸ್ತೇನೆ ಅಂತ ಇಡೀ ಕಾಡೆಲ್ಲಾ ಸುತ್ತಾಡಿಸಿದ್ದ,
(ವಿಶ್ವವಾಣಿ ಕೃಪೆ)
***
ಈಗ ಬೇಡ !
ಡಾಕ್ಟರ್ : ಶುಗರ್ ಇದೆಯಾ?
ಗಾಂಪ: ಮನೆಯಲ್ಲಿದೆ.
ಡಾಕ್ಟರ್: ಗ್ಯಾಸ್ ಸಮಸ್ಯೆ ಇದೆಯಾ?
ಗಾಂಪ: ಬುಕ್ ಮಾಡಿದ್ದೀನಿ. ಇನ್ನೂ ತಂದು ಕೊಟ್ಟಿಲ್ಲ!
ಡಾಕ್ಟರ್: ಕುಡೀತೀರಾ?
ಗಾಂಪ: ಕುಡಿತೀನಿ. ಆದರೆ ಈಗ ಬೇಡ. ಹೊರಗಡೆ ನನ್ನ ಹೆಂಡ್ತಿ ಇದಾಳೆ. ಮತ್ತೆ ಯಾವಾಗಲಾದರೂ ತರಿಸುವಿರಂತೆ. ಇಬ್ರೂ ಸೇರಿ ಹಾಕೋಣ !
***
ಕಾರಣ!
ನರ್ಸ್: ರೋಗಿ ಗಾಂಪನನ್ನು ತಟ್ಟಿ ಎಬ್ಬಿಸಿದಳು. ಗಾಢ ನಿದ್ರೆಯಲ್ಲಿದ್ದ ಗಾಂಪ ತಡಬಡಾಯಿಸಿ ಎದ್ದು ಕುಳಿತ.
ಗಾಂಪ: ಯಾಕೆ ನನ್ನನ್ನು ಎಬ್ಬಿಸಿದ್ದು?
ನರ್ಸ್: ನಿಮಗೆ ನಿದ್ದೆ ಮಾತ್ರೆ ಕೊಡಲು ಮರೆತಿದ್ದೆ. ಅದನ್ನು ಕೊಡಲು ಎಬ್ಬಿಸಿದ್ದು!
(ಸುಧಾ ಸಂಗ್ರಹ)
***
ಚಿತ್ರ ಕೃಪೆ: ಅಂತರ್ಜಾಲ ತಾಣ