'ಸಂಪದ' ನಗೆ ಬುಗ್ಗೆ - ಭಾಗ ೩೩

'ಸಂಪದ' ನಗೆ ಬುಗ್ಗೆ - ಭಾಗ ೩೩

ದೇವರ ದಯೆ

ಅದೊಂದು ಬೆಳದಿಂಗಳ ರಾತ್ರಿ. ಮುಲ್ಲಾ ನಸ್ರುದ್ದೀನ್ ನಿದ್ದೆ ಹೋಗಿದ್ದ. ಫಕ್ಕನೆ ಅವನಿಗೆ ಎಚ್ಚರವಾಯಿತು. ತೆರೆದ ಕಿಟಕಿಯ ಮೂಲಕ ಅವನು ಹೊರಗೆ ನೋಟ ಹರಿಸಿದ. ಮನೆಯ ತೋಟದಲ್ಲಿ ಒಂದು ಆಕೃತಿ ಅವನಿಗೆ ಗೋಚರಿಸಿತು. ಅದು ನಿಂತಿದ್ದ ಒಂದು ಮಾನವಾಕೃತಿಯಾಗಿತ್ತು. ಅದರ ತೋಳುಗಳು ಹೊರಗೆ ಚಾಚಿ ಕೊಂಡಿದ್ದವು. ನಸ್ರುದ್ದೀನ್ ತಕ್ಷಣ ತನ್ನ ಹೆಂಡತಿಯನ್ನು ಎಬ್ಬಿಸಿದ. 'ಬೇಗ ನನ್ನ ಬಿಲ್ಲು ಬಾಣಗಳನ್ನು ಕೊಡು. ಯಾರೋ ಒಬ್ಬ ಕೇಡಿಗ ನಮ್ಮ ತೋಟದಲ್ಲಿದ್ದಾನೆ. ಅವನನ್ನು ಹಾಗೇ ಬಿಡಬಾರದು' ಎಂದು ಅವಸರಪಡಿಸಿದ.

ಹೆಂಡತಿ ಗಡಬಡಿಸಿ ಎದ್ದಳು. ಗಂಡನಿಗೆ ಬಿಲ್ಲುಬಾಣ ತಂದು ಕೊಟ್ಟಳು. ನಸ್ರುದ್ದೀನ್ ತಡ ಮಾಡಲಿಲ್ಲ. ತೋಟದಲ್ಲಿದ್ದ ಮಾನವಾಕೃತಿಗೆ ಬಾಣ ಹೂಡಿಯೇ ಬಿಟ್ಟ. ಸುಯ್ಯನೆ ಸದ್ದು ಮಾಡುತ್ತಾ ಬಾಣ ಹಾರಿತು. ಮಾನವಾಕೃತಿ ಹೊಟ್ಟೆಗೆ ನಾಟಿತು.

'ನಮ್ಮ ತಂಟೆಗೆ ಬಂದವನಿಗೆ ತಕ್ಕ ಶಾಸ್ತಿಯಾಯಿತು' ನಸ್ರುದ್ದೀನ್ ಹೇಳಿಕೊಂಡ. ಆದರೆ ಅವನು ಮನೆಯಿಂದ ಹೊರ ಬರಲಿಲ್ಲ. ಅವನಿಗೆ ಅಂಥ ಧೈರ್ಯ ಇರಲಿಲ್ಲ. 'ಬೆಳಗಾಗುವ ತನಕ ಆ ಫಟಿಂಗ ಹಾಗೇ ಬಿದ್ದಿರಲಿ' ಎನ್ನುತ ಸುಮ್ಮನೆ ನಿದ್ದೆ ಹೋದ.

ರಾತ್ರಿ ಕಳೆದು ಬೆಳಗಾಯಿತು. ನಸ್ರುದ್ದೀನ್ ತೋಟಕ್ಕೆ ಬಂದು ನೋಡಿದ. ಅಲ್ಲಿ ಯಾರೂ ಇರಲಿಲ್ಲ. ಒಣಗಲು ಹಾಕಿದ್ದ ಅವನ ನಿಲುವಂಗಿ ಅಲ್ಲಿ ನೇತಾಡುತ್ತಿತ್ತು. ಅದರ ಹೊಟ್ಟೆಯ ಭಾಗದಲ್ಲಿ ಬಾಣವೊಂದು ಚುಚ್ಚಿಕೊಂಡಿತ್ತು. ಅದನ್ನು ಕಂಡದ್ದೇ ತಡ, ನಸ್ರುದ್ದೀನ್ ಅಲ್ಲೇ ಕುಸಿದು ಕುಳಿತ. 'ಹೇ ಅಲ್ಲಾಹ್, ನಿನ್ನ ದಯೆ ದೊಡ್ಡದು' ಆತ ಉದ್ಧರಿಸಿದ. ಭಕ್ತಿಯಿಂದ ಅವನು ಪ್ರಾರ್ಥನೆ ಸಲ್ಲಿಸತೊಡಗಿದ.

ಗಂಡನ ವರ್ತನೆ ನೋಡಿ ಹೆಂಡತಿಗೆ ಆಶ್ಚರ್ಯವಾಯಿತು. 'ಇದೇನು ಇಷ್ಟು ಶ್ರದ್ಧೆಯಿಂದ ಪ್ರಾರ್ಥನೆ ಮಾಡುತ್ತಿದ್ದೀರಿ?' ಅವಳು ಗಂಡನನ್ನು ಕೇಳಿದಳು.

'ಅಯ್ಯೋ ಮೂರ್ಖ ಹೆಣ್ಣೇ, ನಿನಗೆ ಅಷ್ಟೂ ಗೊತ್ತಾಗುವುದಿಲ್ಲವೇ? ನಾನು ಬಿಟ್ಟ ಬಾಣ ನನ್ನ ನಿಲುವಂಗಿಯ ನಟ್ಟ ನಡುವೆ ನಾಟಿಕೊಂಡಿದೆ. ಒಂದು ವೇಳೆ ನಾನು ಆ ಸಂದರ್ಭದಲ್ಲಿ ಆ ಅಂಗಿಯನ್ನೇ ಧರಿಸಿಕೊಂಡಿದ್ದರೆ ಎಂಥ ಅನಾಹುತ ಆಗಿ ಬಿಡುತ್ತಿತ್ತು ! ದೇವರ ದಯೆ ದೊಡ್ಡದು. ಆಗ ನಾನು ಇದನ್ನು ಧರಿಸಿರಲಿಲ್ಲ. ಹಾಗಾಗಿ ಬದುಕಿ ಉಳಿದೆ' ನಸ್ರುದ್ದೀನ್ ವಿವರಣೆ ನೀಡಿದ.

***

ಮಕ್ಕಳ ಆಟ

ಶ್ರೀಮತಿ: ಈ ಮಕ್ಕಳು ಅದೆಷ್ಟು ಕೆಸರಲ್ಲಿ ಆಟ ಆಡುತ್ತಿದ್ದಾರೆ ನೋಡಿ 

ತಾರಾ: ಹೌದು, ನಿನ್ನೆ ದಿನ ನನ್ನ ಮಗನನ್ನು ಪತ್ತೆ ಮಾಡಲು ನಾನು ಎಂಟು ಮಂದಿ ಮಕ್ಕಳಿಗೆ ಸ್ನಾನ ಮಾಡಿಸಬೇಕಾಯಿತು !

***

ಬುದ್ಧಿ

ಗಾಂಪ ಆ ದಿನದ ಇಸ್ಪೀಟ್ ಆಟದಲ್ಲಿ ಸಂಪೂರ್ಣ ಸಂಬಳವನ್ನು ಸೋತು ಜೋಲು ಮುಖ ಹಾಕಿಕೊಂಡು ಮನೆಗೆ ಬಂದ.

"ಈಗಲಾದರೂ ಬುದ್ಧಿ ಬಂತಲ್ಲ!" ಎಂದು ಕೋಪದಿಂದ ಹೇಳಿದಳು ಶ್ರೀಮತಿ.

"ಹೂಂ... ಜೋಕರ್ ಇಲ್ಲದಿದ್ದಾಗ ಆಟ ಆಡಬಾರದು ಅಂತ!" ಎಂದು ಗಾಂಪ ಉತ್ತರಿಸಿದಾಗ ಶ್ರೀಮತಿ ಸುಸ್ತು.

***

ಸಕ್ಕರೆ ಮತ್ತು ಮಣ್ಣು

ಕೆಲಸದಾಳು ಗಾಂಪಾ ಅಂಗಡಿಗೆ ಹೋಗಿ ಸಕ್ಕರೆ ತೆಗೆದುಕೊಂಡು ಬಂದ. ಆ ಸಕ್ಕರೆಯನ್ನು ಅದೇ ಅಂಗಡಿಗೆ ಮರಳಿಸುವಂತೆ ಅವನ ಮಾಲೀಕ ಸೂರಿ ಹೇಳಿ, ಒಂದು ಚೀಟಿಯನ್ನು ಬರೆದುಕೊಟ್ಟ. ಚೀಟಿಯಲ್ಲಿ ಹೀಗೆ ಬರೆಯಲಾಗಿತ್ತು-

" ಈ ಸಕ್ಕರೆ ಯಾವುದಕ್ಕೂ ಉಪಯೋಗಕ್ಕೆ ಬರುವುದಿಲ್ಲ. ಇದರಲ್ಲಿ ಎಷ್ಟು ಮಣ್ಣು ಸೇರಿಕೊಂಡಿದೆಯೆಂದರೆ ಸಕ್ಕರೆಯನ್ನು ಚಹಾಕ್ಕೆ ಉಪಯೋಗಿಸಲಾಗುವುದಿಲ್ಲ, ಬೆರೆತಿರುವ ಮಣ್ಣನ್ನು ತೆಗೆದು ಗಿಡವನ್ನು ನೆಡಲೂ ಆಗುವುದಿಲ್ಲ. ಆದುದರಿಂದ ಸಕ್ಕರೆಯನ್ನು ಹಿಂದಿರುಗಿಸುತ್ತಿದ್ದೇನೆ"

***

ನನಸಾದ ಕನಸು

ವಕೀಲ ಗಾಂಪ: ನಾನು ಚಿಕ್ಕವನಾಗಿದ್ದಾಗ ದೊಡ್ಡವನಾದ ಮೇಲೆ ಸುಪ್ರಸಿದ್ಧ ಸುಳ್ಳುಗಾರ, ದಗಾಕೋರನಾಗಬೇಕೇಂದು ಆಸೆಯಿತ್ತು. ಯಾವಾಗಲೂ ಅದೇ ಕನಸನ್ನು ನಾನು ಕಾಣುತ್ತಿದ್ದೆ.

ಕಕ್ಷಿದಾರ ಸೂರಿ: ಹೌದೇ? ನೀವೇ ಅದೃಷ್ಟವಂತರು ಮಹಾ ಸ್ವಾಮಿ, ಎಲ್ಲರ ಬಾಲ್ಯದ ಆಸೆಗಳು ಎಲ್ಲಿ ಈಡೇರುತ್ತವೆ..?!

***

(ಕೃಪೆ: 'ನೂತನ' ಪತ್ರಿಕೆಯಿಂದ ಸಂಗ್ರಹಿತ)